ಆನೆ ಮೇಲೆ ಯಾರೂ ಮಣ್ಣು ಹಾಕುವುದಿಲ್ಲ. ಎಷ್ಟು ಬೇಕೋ ಅಷ್ಟನ್ನು ಅದೇ ಎತ್ತಿ ತನ್ನ ಮೇಲೆ ಸುರಿದುಕೊಳ್ಳುತ್ತದೆ. ಕಾಂಗ್ರೆಸ್ ಪಕ್ಷವನ್ನು ಅಂಥ ಆನೆಗೆ ಹೋಲಿಸಬಹುದು. ಆ ಪಕ್ಷದಲ್ಲಿ ಕೆಲಸ ಮಾಡೋರು ಕಮ್ಮಿ, ಮಾತನಾಡುವವರು ಜಾಸ್ತಿ. ಇದು ನಿನ್ನೆಮೊನ್ನೆಯ ಸಮಸ್ಯೆಯಲ್ಲ, ಆದಿಯಿಂದಲೂ ಅಂಟಿದ ಜಾಢ್ಯ. ಇದೀಗ ಹಿರಿಯ ನಾಯಕರ ಪೇಪರ್ ಬಂಡಾಯ ಅದಕ್ಕಿಡಿದ ಒಂದು ಕನ್ನಡಿಯಷ್ಟೇ. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಆ ಪಕ್ಷದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ.
***
ಹಾಳೂರಿಗೆ ಉಳಿದವನೇ ಗೌಡ ಎಂಬುದು ಕನ್ನಡದ ಒಂದು ಸವಕಲು ಗಾದೆ. ಆ ಗಾದೆ ಈಗ ಸವಕಲು ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುವಂತಾಗಿದೆ. 135 ಪಕ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಒಬ್ಬ ಸೂಕ್ತ ಅಧ್ಯಕ್ಷರೇ ಇಲ್ಲದಂತಾಗಿರುವುದು ನಮ್ಮ ರಾಜಕೀಯ ಇತಿಹಾಸದ ಒಂದು ಕ್ರೂರ ವಿಡಂಬನೆ. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಾ ಲೋಕಸಭಾ ಸ್ಥಾನಗಳನ್ನು ಎರಡಂಕಿಗೆ ತಂದು ನಿಲ್ಲಿಸಿದಾಗ ಕಾಂಗ್ರೆಸ್‌ನ ಹಿರಿಯ ಮುಖಂಡರೇ ಅವರ ಬಗ್ಗೆ ಅಸಮಾಧಾನಪಟ್ಟುಕೊಂಡಿದ್ದರು. ಇದನ್ನರಿತ ರಾಹುಲ್ ಮತ್ತೆ ತಾನು ಅಧ್ಯಕ್ಷನಾಗಲಾರೆನೆಂದು ಹಠ ಹಿಡಿದಿದ್ದರು. ಪರಿಣಾಮ ಸೋನಿಯಾ ಗಾಂಧಿಯವರೇ ಮತ್ತೆ ತಾತ್ಕಾಲಿಕವಾಗಿ ಪಕ್ಷದ ಸಾರಥ್ಯ ವಹಿಸಿದ್ದರು. ಪಕ್ಷಕ್ಕೆ ಕಾಯಂ ಅಧ್ಯಕ್ಷರೊಬ್ಬರನ್ನು ನೇಮಿಸಲೆಂದು ಈಚೆಗೆ ಎಐಸಿಸಿ ವರ್ಚುಯಲ್ ಸಭೆ ಸೇರಿದ್ದಾಗ ದೊಡ್ಡ ನಾಟಕವೇ ನಡೆದು ಹೋಯ್ತು. ಕಾಂಗ್ರೆಸ್‌ಗೆ ಗಾಂಧಿ ಕುಟುಂಬ ಹೊರತುಪಡಿಸಿದ, ಹೊರಗಿನ ಸಮರ್ಥ ವ್ಯಕ್ತಿಯೊಬ್ಬರು ಅಧ್ಯಕ್ಷರಾಗುವುದು ಅಗತ್ಯವೆಂದು ಕಪಿಲ್ ಸಿಬಲ್, ಗುಲಾಂನಬಿ ಆಜಾದ್, ಮುಕುಲ್ ವಾಸ್ನಿಕ್, ವೀರಪ್ಪ ಮೊಯ್ಲಿ ಸೇರಿದಂತೆ 23 ಮಂದಿ ಹಿರಿಯ ಮುಖಂಡರು ಪತ್ರ ಬರೆದು ಆಗ್ರಹಿಸಿದ್ದರು.
ಈ ಪತ್ರದ ವಿಚಾರವೇ ಆ ಸಭೆಯಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಪತ್ರ ಬರೆದವರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆಂದು ಸಭೆಯಲ್ಲಿ ರಾಹುಲ್ ಕೂಗಾಡಿದರಂತೆ. ಸಿಬಲ್, ಆಜಾದ್ ಟ್ವೀಟ್ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದೂ ಆಯ್ತು. ಆದರೆ ಕೊನೆಗೆ ಎಲ್ಲ ಭಿನ್ನಮತಕ್ಕೂ ತೇಪೆ ಹಚ್ಚಿ ಸದ್ಯಕ್ಕೆ ಸೋನಿಯಾ ಅವರೇ ಇನ್ನಾರು ತಿಂಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಎಲ್ಲರೂ ಸಹಮತ ವ್ಯಕ್ತಪಡಿಸಿದರು ಎಂಬಲ್ಲಿಗೆ ಈ ಪ್ರಹಸನ ಸುಖಾಂತ್ಯಗೊಂಡಿತ್ತು.
ವಿವೇಕ ಚಿಕಿತ್ಸಕ ಬುದ್ಧಿ ನಾಶ
ಪತ್ರ ಬರೆದ ಅಖಂಡ ಮುಖಂಡರೆನಿಸಿದ ಬೆನ್ನುಮೂಳೆ ಗಟ್ಟಿಯಿರದ ನಾಯಕರೆಲ್ಲ ಈಗ ಒಬ್ಬೊಬ್ಬರಾಗಿ “ನಾವು ಪತ್ರದಲ್ಲಿ ನಾಯಕತ್ವ ಪ್ರಶ್ನಿಸಿರಲಿಲ್ಲ. ನಮ್ಮದು ಬಂಡಾಯವಲ್ಲ. ಬಿಜೆಪಿಗಾಗಲೀ ಮೋದಿಯವರಿಗಾಗಲೀ ನಾವು ಕನಸು ಮನಸಿನಲ್ಲೂ ಬೆಂಬಲ ಕೊಟ್ಟಿಲ್ಲ. ಕೇವಲ ಪಕ್ಷದ ಹಿತದೃಷ್ಟಿಯಿಂದ ಪತ್ರ ಬರೆದಿದ್ದೆವು. ನಾವು ಬಯಸಿದ್ದ ಪಕ್ಷದ ಪುನಶ್ಚೇತನವನ್ನು ಮಾತ್ರ” ಎಂದು ಪರಿಪರಿಯಾಗಿ ಬಿನ್ನವಿಸಿಕೊಳ್ಳತೊಡಗಿದ್ದಾರೆ. ಈ ನಡುವೆ ನಮ್ಮ ಕೆ.ಹೆಚ್. ಮುನಿಯಪ್ಪನವರು “ಪ್ರಧಾನಿ ಮೋದಿಯ ವಿರುದ್ಧ ಹೋರಾಡಲು ಯುವನಾಯಕ ರಾಹುಲ್ ಗಾಂಧಿಯೇ ಸೂಕ್ತ ಮತ್ತು ಸಮರ್ಥ ವ್ಯಕ್ತಿ” ಎಂದೂ ಅಪ್ಪಣೆ ಕೊಡಿಸಿದ್ದಾರೆ. ಇನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಸೋನಿಯಾ ಗಾಂಧಿ ಕುಟುಂಬವೊಂದೇ ಕಾಂಗ್ರೆಸ್ ಮುನ್ನಡೆಸಲು ಅರ್ಹ ಎಂದೆನಿಸಿಬಿಟ್ಟಿದೆ. ಎರಡು ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗಿಳಿದು, ಪ್ರತಿಪಕ್ಷವಾಗುವಷ್ಟು ಸ್ಥಾನಗಳನ್ನೂ ಗಳಿಸಲು ವಿಫಲವಾದಾಗ್ಯೂ ರಾಹುಲ್ ಮೇಲೆ ಈ ಪರಿಯ ನಿಷ್ಠೆ ಇಟ್ಟಿರುವುದು ನೋಡಿದರೆ ವಿವೇಕ ಚಿಕಿತ್ಸಕ ಬುದ್ಧಿ ಈ ಮಂದಿಯಲ್ಲಿ ಸಂಪೂರ್ಣ ನಶಿಸಿಹೋಗಿದೆ ಎಂಬ ಅನುಮಾನ ಕಾಡದೇ ಇರದು.
ಕಾಂಗ್ರೆಸ್‌ಗೆ ಕಾಯಂ ಅಧ್ಯಕ್ಷರೊಬ್ಬರನ್ನು ನೇಮಿಸುವ ಕುರಿತು ನಡೆದ ಸಭೆ ವಿಫಲವಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಂತೂ ಕಾಮಿಡಿ ಶೋ ಭರ್ಜರಿಯಾಗಿ ಸಾಗಿದೆ. ಕಾಂಗ್ರೆಸ್‌ಗೆ ಅಧ್ಯಕ್ಷರೊಬ್ಬರನ್ನು ಆಯ್ಕೆ ಮಾಡಲು ಸಾಕಷ್ಟು ಚರ್ಚೆ ನಡೆಯಿತು. ಕೆಲವರು ರಾಹುಲ್ ಗಾಂಧಿಯವರ ತಾಯಿ ಅಧ್ಯಕ್ಷೆಯಾಗಲೆಂದು ಇಚ್ಛಿಸಿದರು. ಇನ್ನು ಕೆಲವರು ಪ್ರಿಯಾಂಕಾ ಗಾಂಧಿಯವರ ತಾಯಿಗೂ ಈ ಸಾರಿ ಒಂದು ಚಾನ್ಸ್ ಕೊಡಬೇಕೆಂದು ವಾದಿಸಿದರು. ಆದಾಗ್ಯೂ ಹೆಚ್ಚಿನವರು, ಇಂದಿರಾಗಾಂಧಿಯವರ ಸೊಸೆಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಪ್ರತಿಪಾದಿಸಿದರು. ಇವೆಲ್ಲ ಚರ್ಚೆಯ ಬಳಿಕ, ಪ್ರತಿಯೊಬ್ಬರ ಸಮ್ಮತಿಯೊಂದಿಗೆ ರಾಬರ್ಟ್ ವಾಧ್ರಾ ಅವರ ಅತ್ತೆಯನ್ನು ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆ ಮಾಡುವ ಮೂಲಕ ಕುಟುಂಬ ರಾಜಕಾರಣದ ಅಪಪ್ರಚಾರಕ್ಕೆ ಬ್ರೇಕ್ ಹಾಕಿದೆ!’
ಇನ್ನೊಬ್ಬರು ಎರಡು ಕಥೆ ಹೇಳಿದ್ದಾರೆ. ಒಂದು ಬಡ ಕುಟುಂಬವೊಂದರಲ್ಲಿ ತಾಯಿ ಮಗ ಇದ್ದರು. ಅವರ ಮನೇಲಿ ಒಂದೇ ಕುರ್ಚಿ ಇತ್ತು. ಆ ಕುರ್ಚಿಯಲ್ಲಿ ಒಮ್ಮೆ ತಾಯಿ ಕೂತರೆ, ಒಮ್ಮೆ ಮಗ ಕೂರುತ್ತಿದ್ದ.
ಎರಡನೇ ಸಣ್ಣಕಥೆ: ಮಮ್ಮಿ ಔಟ್ ಆದಾಗ ಮಗನ ಬ್ಯಾಟಿಂಗ್. ಗುಲಾಮರು ಯಾವಾಗಲೂ ಫೀಲ್ಡಿಂಗ್ ಮಾಡುತ್ತಿರಬೇಕು, ಅಷ್ಟೆ! ಹೀಗೆ ಥರಾವರಿ ಹಾಸ್ಯ ಪ್ರಸಂಗಗಳ ಭರಪೂರ ಪ್ರವಾಹವೇ ಹರಿದಿದೆ.
ಆದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತ್ರ ಗುಲಾಂನಬಿ ಆಜಾದ್‌ರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. “ಗುಲಾಂ ಅವರ 45 ವರ್ಷಗಳ ಗುಲಾಮಗಿರಿ ಈ ರೀತಿ ಫಲ ನೀಡಿರುವುದು ವಿಪರ್ಯಾಸ. ಕುಟುಂಬ ನಾಯಕತ್ವ, ವಿರೋಧಿಸುವವರಿಗೆ ಆ ಪಕ್ಷದಲ್ಲಿ ಬಿ ಟೀಂ ಪಟ್ಟ ಕಟ್ಟಿ ದೂರ ಇರಿಸಲಾಗುತ್ತದೆ. ಕಾಂಗ್ರೆಸ್ ಅನ್ನು ತಲೆಯ ಮೇಲೆ ಹೊತ್ತ ಮುಸ್ಲಿಮರು ಎಚ್ಚೆತ್ತುಕೊಳ್ಳಲಿ” ಎಂದು ಎಚ್ಚರಿಕೆ ನೀಡಿದ್ದಾರೆ.
ನೆಹರೂ-ಇಂದಿರಾ-ಸೋನಿಯಾ ಪರಿವಾರಕ್ಕೆ ತಮ್ಮ ಕುಟುಂಬದವರನ್ನು ಬಿಟ್ಟು ಹೊರಗಿನ ಯಾರನ್ನೂ ಅಧ್ಯಕ್ಷರನ್ನಾಗಿ ಮಾಡಲು ಸುತರಾಂ ಇಷ್ಟವಿಲ್ಲ ಎಂಬುದು ಇತಿಹಾಸದುದ್ದಕ್ಕೂ ಸಾಬೀತಾಗಿರುವ ಸಂಗತಿ. ನೀಲಂ ಸಂಜೀವರೆಡ್ಡಿ, ಕೆ.ಕಾಮರಾಜ್, ಜಗಜ್ಜೀವನರಾಂ, ಕಾಸುಲ ಬ್ರಹ್ಮಾನಂದರೆಡ್ಡಿ, ಡಿ.ಕೆ.ಬರುವಾ, ಪಿ.ವಿ. ನರಸಿಂಹರಾವ್, ಸೀತಾರಾಂ ಕೇಸರಿ… ಹೀಗೆ ಬೆರಳೆಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿದರೆ, 1998ರಿಂದ ಹೊರಗಿನ ಯಾರೊಬ್ಬರನ್ನೂ ಕಾಂಗ್ರೆಸ್ ಅಧ್ಯಕ್ಷ ಗಾದಿಯ ಮೇಲೆ ಕೂರಿಸಿಲ್ಲ. ಪಕ್ಷ ಈಗ ದಯನೀಯ ಸ್ಥಿತಿಗೆ ತಲುಪಿದಾಗಲೂ ಹೊರಗಿನ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷಗಿರಿಗೆ ನೇಮಿಸಲು ಆಸಕ್ತಿ ಇಲ್ಲವೆಂದರೆ ಕಾಂಗ್ರೆಸ್ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುವ ಸ್ಥಿತಿಗೆ ತಲುಪಿದೆ ಎಂದಲ್ಲದೆ ಮತ್ತೇನು?
ಸೋನಿಯಾ ಅವರ ನಾಯಕತ್ವದ ಎರಡು ಅವಧಿಯಲ್ಲಿ ಪಕ್ಷವನ್ನವರು ಎರಡು ಮಹಾ ಚುನಾವಣೆಗಳಲ್ಲಿ ಗೆಲುವಿನ ದಡ ಸೇರಿಸಿದ್ದೇನೋ ಹೌದು. ಆದರೆ ಈಗ ಅವರಿಂದ ನಾಯಕತ್ವ ಸಾಧ್ಯವಾಗುತ್ತಿಲ್ಲ ಎಂಬುದು ಗುಟ್ಟಲ್ಲ. ಒಂದೊಂದೇ ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಾ ಸಾಗಿರುವುದೇ ಸಾಕಲ್ಲವೇ?
ಆ ಪಕ್ಷಕ್ಕೆ ಸಮರ್ಥ ನಾಯಕ ಬೇಕು
ಆದರೆ ಕಾಂಗ್ರೆಸ್‌ಗೊಬ್ಬ ಸಮರ್ಥ ನಾಯಕನ ಅಗತ್ಯ ಗಣರಾಜ್ಯ ವ್ಯವಸ್ಥೆಯ ದೃಷ್ಟಿಯಿಂದ ಮಹತ್ವದ್ದು. ದೇಶಕ್ಕೊಂದು ಬಹುಮತವಿರುವ ಆಡಳಿತ ಪಕ್ಷ ಇರುವಂತೆ ಸಾಕಷ್ಟು ಬಲಿಷ್ಠವಾದ, ಆಡಳಿತ ಪಕ್ಷವನ್ನು ಸಕಾರಾತ್ಮಕವಾಗಿ ಟೀಕೆ ಮಾಡಬಲ್ಲಷ್ಟು ಸಶಕ್ತವಾಗಿರುವ ಪ್ರತಿಪಕ್ಷವೂ ಅಗತ್ಯ. ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರವಾಗಿ ಸಾಗಬಲ್ಲದು. ಪ್ರತಿಪಕ್ಷ ಸಕಾರಣವಾಗಿ ಚುಚ್ಚುತ್ತಾ ಇದ್ದರೆ ಮಾತ್ರ ಆಡಳಿತ ಪಕ್ಷ ಎಚ್ಚರಿಕೆಯ ಹೆಜ್ಜೆಗಳನ್ನಿಡಬಲ್ಲದು. ಹೀಗಾಗಿ ಆಡಳಿತ ಪಕ್ಷಕ್ಕೆ ಪರ್ಯಾಯ ನಾಯಕತ್ವವನ್ನೂ ದೂರದೃಷ್ಟಿಯನ್ನೂ ನೀಡಬಲ್ಲ ನಾಯಕರನ್ನು ಕಾಂಗ್ರೆಸ್ ಹುಡುಕಿಕೊಳ್ಳಲೇಬೇಕು. ಗಾಂಧಿ ಕುಟುಂಬದವರೇ ಪಕ್ಷ ಮುನ್ನಡೆಸಬೇಕೆಂದು ದುಂಬಾಲು ಬೀಳುವುದು ಗುಲಾಮಗಿರಿಯ ಸಂಕೇತವಾಗುತ್ತದೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಲಾಭ ತರುವುದಿಲ್ಲ.
ವಾಜಪೇಯಿ : WIKIPEDIA
ವಾಜಪೇಯಿ ಪ್ರಧಾನಿಯಾಗಿದ್ದಾಗ, ಆಡಳಿತ ಪಕ್ಷದ ಲೋಪದೋಷಗಳನ್ನು ಗುರುತಿಸಿ, ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ನಾಯಕಿ ಸೋನಿಯಾ ಅವರಿಗೆ, ವಾಜಪೇಯಿಯವರೇ ಒಮ್ಮೆ ಕೆಲವು ಟಿಪ್ಸ್ʼಗಳನ್ನು ಬರೆದುಕೊಟ್ಟಿದ್ದರಂತೆ. ಆಡಳಿತ ಪಕ್ಷ ಎಚ್ಚರದಿಂದ ಸಾಗಲಿ ಎಂಬ ಸದುದ್ದೇಶದಿಂದ ವಾಜಪೇಯಿ ಹೀಗೆ ಮಾಡಿದ್ದಿರಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವಾಜಪೇಯಿಯವರಿಗಿದ್ದ ಬದ್ಧತೆ ಅಂತಹುದು.
ಈಗಲೂ ಪ್ರಧಾನಿ ಮೋದಿಯವರೇ ಕಾಂಗ್ರೆಸ್‌ಗೆ ಒಬ್ಬ ಸಮರ್ಥ ಅಧ್ಯಕ್ಷರನ್ನು ಹುಡುಕಿಕೊಟ್ಟರೆ, ಆಡಳಿತ ಪಕ್ಷವಾದ ಬಿಜೆಪಿ ಆರೋಗ್ಯಕರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಪಕ್ಷವೂ ಸಮರ್ಥವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ನನ್ನ ಈ ಮಾತನ್ನು ಕೆಲವರಾದರೂ ಬೆಂಬಲಿಸಬಹುದೇನೋ!
***
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ‘ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.