ಬೆಂಗಳೂರು: ಕೋವಿಡ್ ಅಬ್ಬರಕ್ಕೆ ಹೆದರಿ ಮಾರ್ಚ್ 22ರಂದು, ಅಂದರೆ ಐದು ತಿಂಗಳಿಂದ ಹಳಿಗಳಿಂದ ದೂರವುಳಿದಿದ್ದ ನಮ್ಮ ಮೆಟ್ರೋ ಮತ್ತೆ ಹಳಿಹತ್ತಿದೆ. ಸೋಮವಾರ (ಸೆಪ್ಟೆಂಬರ್ 7) ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಎಲ್ಲ ನಗರಗಳಲ್ಲೂ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಮಾರ್ಚ್‌ನಲ್ಲಿ ಇದ್ದ ವೈರಾಣುವನ ಅಬ್ಬರವನ್ನು ಕಂಡು ಇಡೀ ವರ್ಷ ನಮ್ಮ ಮೆಟ್ರೋ ಪ್ರಯಾಣ ಅನುಮಾನ ಎಂದೇ ಭಾವಿಸಿದ್ದ ಬೆಂಗಳೂರಿಗರು, ಯಾವ ಆತಂಕವೂ ಇಲ್ಲದೆ ಬಿಎಂಆರ್‌ಸಿಎಲ್ ನಿಗದಿಪಡಿಸಿದ್ದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ರೈಲಿನಲ್ಲಿ ಬಿಂದಾಸ್ ಆಗಿ ಪ್ರಯಾಣ ಮಾಡಿದರು. ಇವತ್ತು ನೇರಳೆ ಮಾರ್ಗವಾದ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಮಾತ್ರ ರೈಲುಗಳು ಸಂಚಾರ ಮಾಡಿದವು.
ಹೆಚ್ಚೂಕಮ್ಮಿ 150 ದಿನದಿಂದ ಜನರ ಸೇವೆಯಿಂದ ದೂರವಿದ್ದ ಮೆಟ್ರೋ ಸಿಬ್ಬಂದಿ ಕೂಡ ರೈಲು ಸಂಚಾರ ಆರಂಭವಾದ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದರು. “ಕೋವಿಡ್ ಇಡೀ ವರ್ಷ ಇದ್ದು ಜನರನ್ನು ಕಾಡಿಸುತ್ತದೆ ಎಂಬ ಭಯವಿತ್ತು. ಆದರೆ, ವೈರಾಣು ಬಗ್ಗೆ ಜನರಲ್ಲಿ ಭಯ ದೂರವಾಗಿ ಜಾಗೃತಿ ಬಂದಿದೆ. ಹೀಗಾಗಿ ಇವತ್ತು ಮೇಟ್ರೋಗೆ ಬಂದ ಪ್ರಯಾಣಿಕರು ಧೈರ್ಯವಾಗಿ ಬಂದು ಪ್ರಯಾಣಿಸಿದರು. ಅವರ ಉತ್ಸಾಹ ಕಂಡು ನಮ್ಮಲ್ಲೂ ಆತ್ಮಸ್ಥೈರ್ಯ ಹೆಚ್ಚಾಗಿದೆ” ಎನ್ನುತ್ತಾರೆ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಹಳಿಗೆ ಬಂದ ಕೂಡಲೇ ಸಂಭ್ರಮ
ಬೆಳಗ್ಗೆ 8 ಗಂಟೆಗೆ ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆಗೆ ಹೊರಟ ರೈಲಿನಲ್ಲಿ ಪ್ರಯಾಣಿಕರು ಖುಷಿಯಾಗಿ ತೆರಳಿದರು. ಅವರ ಮೊಗದಲ್ಲಿ ಕಚೇರಿಗೆ ಸಮಯಕ್ಕೆ ಸರಿಯಾಗಿ ಹೋಗುತ್ತಿರುವ ಸಂತಸದ ಜತೆಗೆ, ಐದು ತಿಂಗಳ ನಂತರ ಮತ್ತೆ ರೈಲು ಹತ್ತಿದ್ದು ಹರ್ಷ ಉಂಟು ಮಾಡಿದೆ. ಅದರ ಜತೆಗೆ, ಕೋರೊನ ಬಗ್ಗೆ ಜನರಲ್ಲಿ ಆತಂಕವೂ ಕಡಿಮೆಯಾಗಿರುವುದಕ್ಕೆ ಇದು ನಿದರ್ಶನ. ಹೀಗೆಯೇ ಎಲ್ಲ ರೀತಿಯಲ್ಲೂ ಜನಜೀವನ ಸಹಜ ಸ್ಥಿತಿಗೆ ಬರಲಿ ಎಂದು ಮೆಟ್ರೋ ಪ್ರಯಾಣಿಕ ಪ್ರತಾಪ್ ರೆಡ್ಡಿ ಹೇಳಿದರು. ಇವರು ನಿತ್ಯವೂ ಬೈಯ್ಯಪ್ಪನಹಳ್ಳಿಯಿಂದ ವಿಜಯನಗರಕ್ಕೆ ಪ್ರಯಾಣಿಸುತ್ತಾರೆ.
ಎಲ್ಲ ರೈಲುಗಳು ಪೀಕ್ ಅವರ್‌ನಲ್ಲಿ ಮಾತ್ರ ಸಂಚರಿಸಿದವು. ಅಂದರೆ, ಬೆಳಗ್ಗೆ 8ರಿಂದ 11 ಹಾಗೂ ಅಪರಾಹ್ನ 4.30ರಿಂದ 7.30ರವರೆಗೂ ಸಂಚರಿಸಿದವು. ಐದು ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸಿದವು. ಒಟ್ಟು 91 ಟ್ರಿಪ್‌ಗಳು ಆಗಿವೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಬುಧವಾರದಿಂದ ಹಸಿರು ಮಾರ್ಗದಲ್ಲಿಯೂ ರೈಲು ಸಂಚಾರ ಪುನಾರಂಭ ಆಗಲಿದೆ. ಹಾಗೆಯೆ, ಬೈಯ್ಯಪ್ಪನಹಳ್ಳಿಯಿಂದ ವಿಧಾನಸೌಧದ ತನಕ ಪ್ರಯಾಣಿಸಿದಾಗ ಹಲವಾರು ದೃಶ್ಯಗಳು ಕಂಡವು. ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡುಗಳ ಕಾಲ ರೈಲುಗಳು ನಿಲ್ಲುತ್ತಿದ್ದವು.
ಟೋಕನ್ ಇರಲಿಲ್ಲ
ಮೊದಲೇ ಹೇಳಿದಂತೆ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ಕೌಂಟರ್‌ಗಳನ್ನು ಮುಚ್ಚಲಾಗಿತ್ತು. ಮಾಹಿತಿ ಕೇಂದ್ರಗಳು ಮಾತ್ರ ತೆರೆದಿದ್ದವು. ಸ್ಮಾರ್ಟ್‌ಕಾರ್ಡ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಯಿತು. ಆರು ಬೋಗಿಗಳ ಪ್ರತೀ ರೈಲಿನಲ್ಲಿ ಒಮ್ಮೆಲೆ 400 ಪ್ರಯಾಣಿಕರಿಗಷ್ಟೇ ಪ್ರವೇಶಿಸಲು ಅವಕಾಶ ನೀಡಲಾಯಿತು. ಇದೇ ವೇಳೆ ಕೋಲಾರ, ಚಿಂತಾಮಣಿ, ಹೊಸಕೋಟೆ ಮತ್ತಿತರೆ ಭಾಗಗಳಿಂದ ಬಂದ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ಗಳಿಲ್ಲದೆ ವಾಪಸ್ ಹೋಗಿ ಬಿಎಂಟಿಸಿ ಬಸ್ಸಿನಲ್ಲಿಯೇ ಸಿಟಿಯತ್ತ ಪ್ರಯಾಣ ಬೆಳೆಸಿದ ದೃಶ್ಯಗಳೂ ಕಂಡುಬಂದವು.
ನಿಲ್ದಾಣಗಳಲ್ಲೂ ಕಟ್ಟುನಿಟ್ಟು
ಮೆಟ್ರೋ ಸಿಬ್ಬಂದಿ ಎಲ್ಲ ನಿಲ್ದಾಣಗಳಲ್ಲೂ ಕಟ್ಟುನಿಟ್ಟಾಗಿ ನಿಯಮ ಪಾಲನೆಯತ್ತ ಗಮನ ಹರಿಸಿದ್ದರು. ಯಾರೊಬ್ಬರೂ ನಿಯಮ ತಪ್ಪದಂತೆ ನೋಡಿಕೊಳ್ಳುತ್ತಿದ್ದರು. ಒಮ್ಮೆಲೆ 50 ಮಂದಿಗಷ್ಟೇ ಫ್ಲಾಟ್ ಫಾರಂಗೆ ಬಿಡಲಾಗುತ್ತಿತ್ತು. ಅವರಲ್ಲಿ ದೈಹಿಕ ಅಂತರ ಇರುವಂತೆ ನೋಡಿಕೊಳ್ಳುತ್ತಿದ್ದರು. ಎಸ್ಕಲೇಟರ್ ಮೇಲೆ ಸಾಗುವಾಗಲೂ ಮುಂದಿನ ಮೆಟ್ಟಿಲು ಅಂತರ ಬಿಟ್ಟು ಕಡ್ಡಾಯವಾಗಿ ನಿಲ್ಲಬೇಕಾಗಿತ್ತು. ಲಿಫ್ಟಿಗೂ ನಿಯಮಗಳಿದ್ದವು. 4ಕ್ಕಿಂತ ಹೆಚ್ಚು ಜನರಿಗೆ ಎಂಟ್ರಿ ಇರಲೇ ಇಲ್ಲ.
ಪಿಪಿಎ ಕಿಟ್
ಪ್ರಯಾಣಿಕರನ್ನು ತಪಾಸಣೆ ಮಾಡಿ ನಿಲ್ದಾಣದೊಳಕ್ಕೆ ಬಿಡುವ ಸಿಬ್ಬಂದಿ ಪಿಪಿಎ ಕಿಟ್ ಧರಿಸಿದ್ದರು. ಪ್ರಯಾಣಿಕರು ಬಂದ ಹಾಗೆಲ್ಲ ಅವರು ತಾಳ್ಮೆಯಿಂದ ತಪಾಸಣೆ ನಡೆಸುತ್ತಿದ್ದರು. ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್ ಮತ್ತೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.
ಧೈರ್ಯ ತುಂಬಿದ ಶ್ರೀರಾಮುಲು
ಇದೆಲ್ಲ ಒಂದೆಡೆ ಇದ್ದರೆ, ಮತ್ತೊಂದೆಡೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿ, ವೈರಸ್‌ಗೆ ಹೆದರದೆ ಧೈರ್ಯವಾಗಿ ಮೆಟ್ರೋದಲ್ಲ ಸಂಚರಿಸಿ ಎಂದು ಬೆಂಗಳೂರು ವಾಸಿಗಳಿಗೆ ಕರೆ ನೀಡಿದ್ದು ವಿಶೇಷವಾಗಿತ್ತು. ಅಧಿಕಾರಿಗಳ ಜತೆ ರೈಲಿನಲ್ಲಿ ಪ್ರಯಾಣಿಸಿದ ಸಚಿವರು, ಬೋಗಿಯಲ್ಲಿದ್ದ ಪ್ರಯಾಣಕರನ್ನು ಮಾತನಾಡಿಸಿದರು. ಬಳಿಕ ವಿಧಾನಸೌಧ ನಿಲ್ದಾಣದಲ್ಲಿ ಮಾಡಲಾಗಿದ್ದ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಮೆಟ್ರೋ ಆ್ಯಪ್
ಪ್ರಯಾಣಿಕರಿರಲ್ಲಿ ಸ್ಮಾರ್ಟ್‌ಕಾರ್ಡ್ ಅವಲಂಬನೆಯನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ಅಭಿವೃದ್ಧಿಪಡಿಸಿರುವ ನಮ್ಮ ಮೆಟ್ರೋ ಆ್ಯಪ್ ಇದೀಗ ಲಭ್ಯವಿದೆ. ಅಂಡ್ರಾಯ್ಡ್ ಪ್ಲೇಸ್ಟೋರ್‌ನಲ್ಲಿ ಇದೆ. ಇದರ ಮೂಲಕವೇ ಸ್ಮಾರ್ಟ್‌ಕಾರ್ಡ್ ಟಾಪ್‌ಅಪ್ ಮಾಡಿಸಿಕೊಳ್ಳಬಹದು.