Ground Report
ದುಷ್ಟ ಚೀನಾ ಮತ್ತೊಮ್ಮೆ ಗಡಿ ಮುಂದೆ ನಿಂತಿದೆ. ಗಾಲ್ವಾನ್‌ನಲ್ಲಿ ಗಲಾಟೆ ಮಾಡಿದ್ದೂ ಆಗಿದೆ. ಜಗತ್ತಿನ ಮುಂದೆಯೂ ಬೆತ್ತಲೂ ಆಗಿದೆ. ಆದರೆ, 58 ವರ್ಷಗಳ ಹಿಂದೆ ತವಾಂಗ್ ಸುತ್ತ ಅದು ನಡೆಸಿದ ಘೋರ ಪಾತಕದ ರಕ್ತದ ಕಲೆಗಳು ಇನ್ನೂ ಆರಿಲ್ಲ. ಆ ಹಿಮಚ್ಛಾದಿತ ಪರ್ವತಗಳ ಕಣಿವೆಗಳಲ್ಲಿ ಹರಿದ ನೆತ್ತರು, ಅಳಿದುಳಿದ ಬಂಕರುಗಳು, ಶತ್ರುದೇಶಕ್ಕೆ ಬಲಿಯಾದ ವೀರಯೋಧರ ಸಮಾಧಿಗಳೂ, ಛಿದ್ರವಾಗಿ ಬಿದ್ದಿರುವ ಯುದ್ಧ ಸಲಕರಣೆಗಳನ್ನು ಕಂಡರೆ ಆ ಪಾತಕ ದುಃಸ್ವಪ್ನ ಮತ್ತೆ ಕಣ್ಮುಂದೆ ಹಾದುಹೋದಂತೆ ಆಗುತ್ತದೆ. ಕೆಂಪು ಕಿರಾತಕರ ವಿರುದ್ಧ ವೀರೋಚಿತವಾಗಿ ಸೆಣಸಿ ಅವರಿಗೆ ಮರಣದ ರುಚಿ ತೋರಿಸಿದ ಮೂವರು ಯೋಧರ ವೀರಕಥೆಯೂ ಇಲ್ಲಿದೆ.
ಅಂದಹಾಗೆ, ಆ ಯುದ್ಧಭೂಮಿ ಈಗ ಹೇಗಿದೆ? ಏನೆಲ್ಲ ನೆನಪುಗಳು, ನೋವುಗಳು ಅಲ್ಲಿ ಮಡುಗಟ್ಟಿವೆ? ಅರುಣಾಚಲ ಪ್ರದೇಶವೂ ಸೇರಿ ಈಶಾನ್ಯ ಭಾರತದ ಉದ್ದಗಲಕ್ಕೂ ಭೂವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದ ಡಾ.ಎಂ.ವೆಂಕಟಸ್ವಾಮಿ, 1962ರ ಭಾರತ-ಚೀನಿ ಯುದ್ಧಭೂಮಿಯಲ್ಲಿ ಅಲೆದಾಡಿದ್ದಾರೆ. ಅಲ್ಲಿನ ದೃಶ್ಯಗಳನ್ನು ಕಂಡಿದ್ದಾರೆ, ಭಾವುಕರಾಗಿದ್ದಾರೆ ಮತ್ತು ಮರುಗಿದ್ದಾರೆ. ಸಿಕೆನ್ಯೂಸ್ ನೌ ಓದುಗರಿಗಾಗಿ ಅವರು ಬರೆದ ವಿಶೇಷ ಲೇಖನ ಇದು. ತಪ್ಪದೇ ಓದಿ, ಆ ಯುದ್ಧಭೂಮಿಯಲ್ಲಿ ನಮ್ಮ ದೇಶಕ್ಕಾಗಿ ಜೀವತೆತ್ತ ನಮ್ಮ ಯೋಧರಿಗೆ ಒಂದು ಸೆಲ್ಯೂಟ್ ಮಾಡಿ…
ಜೈಹಿಂದ್…
1967ರಲ್ಲಿ ಚೀನಾ-ಭಾರತ ಯುದ್ಧ ನಡೆದ ಮೇಲೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಚೀನಾ ಯಾಕಾದರೂ ಕಾಲು ಕೆದರಿಕೊಂಡು ಭಾರತದ ಮೇಲೆ ಬಿದ್ದು ಯುದ್ಧ ಮಾಡಿತು? ಅಸ್ಸಾಂನ ತೇಜ್‌ಪುರದವರೆಗೂ ಬಂದ ಚೀನಿ ಯೋಧರು ಮತ್ತೆ ತಾವಾಗಿಯೇ ಹಿಂದಕ್ಕೆ ಹೊರಟುಹೋದ ಕಾರಣವೇನು? ಪಶ್ಚಿಮದಲ್ಲಿ ಭಾರತದಿಂದ ವಶಪಡಿಸಿಕೊಂಡ ಪ್ರದೇಶವನ್ನು ಪಾಕಿಸ್ತಾನಕ್ಕೆ ಯಾಕಾದರೂ ಹಸ್ತಾಂತರಿಸಿತು? ಇದಕ್ಕೆಲ್ಲ ಕಾರಣ ನೆಹರು ಸರಕಾರ ದಲೈಲಾಮಾಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯ ನೀಡಿದ್ದೇ? ಅಥವಾ ಟೆಬೆಟ್ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಭಾರತ ಮೂಗು ತೂರಿಸಿದ್ದೆ? ಹೌದು ಎನ್ನುತ್ತಾರೆ ಕೆಲ ವಿದ್ವಾಂಸರು.
ಏನು ಆ ಚಾರಿತ್ರಿಕ ಹಿನ್ನಲೆ?
ಯುದ್ಧಭೂಮಿಯ ಈಗಿನ ವಿವಿಧ ದೃಶ್ಯಗಳು.
1940ರ ನಂತರ ಏಷಿಯಾದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದ್ದವು. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕ ದೇಶಗಳಾದವು. ಅನಂತರ 1949ರಲ್ಲಿ ಚೀನಾ ʼಪೀಪಲ್ಸ್ ರಿಪಬ್ಲಿಕ್ ಚೀನಾ’ ಆಯಿತು. ಅದೇ ವರ್ಷ ಚೀನಾ ದೇಶವು ಟೆಬೆಟನ್ನು ವಶಪಡಿಸಿಕೊಳ್ಳುವುದಾಗಿ ಹೇಳಿಕೆ ನೀಡಿದಾಗ ಭಾರತ ಪ್ರತಿರೋಧ ತೋರಿಸಿತು. 1950ರಲ್ಲಿ ನೆಹರು ಮೆಕ್‌ಮೋಹನ್ ಲೈನ್ ನಮ್ಮ ಸರಹದ್ದು, ಅದು ಎಂದೆಂದಿಗೂ ನಮ್ಮದು ಎಂದು ಘೋಷಿಸಿದ್ದರು. ಅದೇ ವೇಳೆಯಲ್ಲಿ ಭಾರತೀಯ ಯೋಧರು ಪಾಕಿಸ್ತಾನಿಗಳನ್ನು ಲಡಾಕ್ ಪ್ರದೇಶದಲ್ಲಿ ತಡೆದು ನಿಲ್ಲಿಸುವ ಕಾರ್ಯದಲ್ಲಿ ತೊಡಗಿದ್ದರೆ, ಚೀನಾ ಅಕ್ಷಯ್ ಚಿನ್ ಪ್ರದೇಶದಲ್ಲಿ ತನ್ನ ಯೋಧರನ್ನು ನೆಲೆಗೊಳಿಸಿತು. ಆದರೆ ಭಾರತ ಮಾತ್ರ ವಿಶ್ವಸಂಸ್ಥೆಯಲ್ಲಿ ಚೀನಾ ಬಗ್ಗೆ ಒಲವು ತೋರುತ್ತಲೆ ಬಂದಿತ್ತು. 1950-51ರಲ್ಲಿ ಚೀನಾ ಟಿಬೆಟ್‌ನ ಪ್ರತಿರೋಧವನ್ನು ಮುಗಿಸಿ ಲಾಸಾವರೆಗೂ ಬಂದು ನಿಂತಿತ್ತು. ಚೀನಾ ಅದುವರೆಗೂ ಭಾರತದ ಬಗ್ಗೆ ಯಾವುದೇ ಪ್ರತಿರೋಧ ತೋರದೆ, ನೆಹರು ’ಚೀನಾ ಇಂಡಿಯಾ ಭಾಯ್ ಭಾಯ್’ ಸ್ಲೋಗನ್ ಹೇಳುತ್ತಿದ್ದರು.
1958ರಲ್ಲಿ ಚೀನಾದ ಝಂಗ್‌ಜಿಯಾಂಗ್‌ನಿಂದ ಲಾಸಾವರೆಗೂ ಭಾರತಕ್ಕೆ ಸೇರಿದ ಅಕ್ಷಯ್‌ಚಿನ್ ಮೂಲಕ ರಸ್ತೆ ಮಾಡುವುದನ್ನು ಭಾರತ ವಿರೋಧಿಸಿತು. 1956ರಲ್ಲಿ ನೆಹರು ಭಾರತಕ್ಕೆ ಸೇರಿದ 1,20,000 ಚದರ ಕಿಲೋಮೀಟರ್ ಪ್ರದೇಶ ಚೀನಾ ನಕ್ಷೆಯಲ್ಲಿ ತೋರಿಸಿದೆ ಎಂದು ಕಳವಳ ವ್ಯಕ್ತಪಡಿಸಿದಾಗ ಚೀನಿ ಪ್ರಧಾನಿ ಚೌ ಎನ್ ಲಾಯ್ ಆ ನಕ್ಷೆಗಳಲ್ಲಿ ತಪ್ಪಿರಬೇಕು, ಸರಿಪಡಿಸೋಣ ಎಂದಿದ್ದರು, ಟಿಬೆಟ್‌ನ್ನು ಚೀನಾ ಪೂರ್ಣವಾಗಿ ನುಂಗಲು ಹವಣಿಸಿದಾಗ ಭಾರತ ಪೂರ್ಣ ವಿರೋಧ ತೋರಿಸಿದಾಗ ಚೀನಾಗೆ ಪ್ರಪಂಚದ ಎದುರು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಕಾರಣದಿಂದ ಚೀನಾ ಒಳಗೊಳಗೆ ಕುದಿಯುತ್ತಿದ್ದರೂ ಮೇಲೆ ತೋರಿಸಿಕೊಳ್ಳಲಿಲ್ಲ. 1959ರಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನೆಹರು ಸರಕಾರ ದಲೈಲಾಮಾರನ್ನು ಭಾರತದ ಒಳಕ್ಕೆ ಬಿಟ್ಟುಕೊಂಡು ಧರ್ಮಶಾಲಾದಲ್ಲಿ ಆಶ್ರಯ ನೀಡಿದರು. ಬೌದ್ಧಧರ್ಮ ಮತ್ತು ಭಾರತದ ನಂಟಿನಿಂದ ಇದೆಲ್ಲ ಸಾಧ್ಯವಾದರೂ, ಮಾವೋ ಇದನ್ನು ತೀವ್ರವಾಗಿ ಖಂಡಿಸಿದರು. 1956ರಿಂದಲೇ ಸಿಐಎ ಭಾರತದ ಗಡಿಯಲ್ಲಿ (ಕಲಿಮ್‌ಪಾಂಗ್ ಹತ್ತಿರ) ಟೆಬೆಟ್ ಗೆರಿಲ್ಲಾಗಳನ್ನು ನೇಮಿಸಿ ಚೀನಾದೊಂದಿಗೆ ಹೋರಾಟದಲ್ಲಿ ತೊಡಗಿಸಿತು. ನೆಹರು ಸರಕಾರ, ಟೆಬೆಟ್ ಗೆರಿಲ್ಲಾಗಳನ್ನು ಚೀನಾ ಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಎಂದು ನಂಬಿಕೊಂಡಿತ್ತು. ಆದರೆ ದೈತ್ಯ ಚೀನಾ ಎಲ್ಲರ ಊಹೆಗಳನ್ನು ನುಂಗಿ ನೀರು ಕುಡಿದು, ನೆಹರು ಅವರ ಊಹೆ ತಲೆಕೆಳಗಾಗಿಸಿತ್ತು.
ಚೀನಾ ಮುಖ್ಯವಾಗಿ ಎರಡು ಪ್ರದೇಶಗಳನ್ನು ಕಬಳಿಸಲು ಹವಣಿಸುತ್ತಿತ್ತು. ಪಶ್ಚಿಮದಲ್ಲಿ ಅಕ್ಷಯ್ ಚಿನ್ ಮತ್ತು ಈಶಾನ್ಯದಲ್ಲಿ ನೇಫಾ (ನಾರ್ಥ ಈಸ್ಟರ್ನ್ ಫ್ರಾಂಟಿಯರ್). ಈ ಪ್ರದೇಶವನ್ನು ಭಾರತ, ಸ್ವಾತಂತ್ರ್ಯದ ನಂತರ ಅರುಣಾಚಲ ಪ್ರದೇಶವೆಂದು ಕರೆದು ಒಂದು ರಾಜ್ಯವನ್ನಾಗಿ ಘೋಷಿಸಿತ್ತು. 1947ರ ನಂತರ ಬ್ರಿಟಿಷರು ತಮ್ಮ ಹಿಡಿತದಲ್ಲಿಟ್ಟಿದ್ದ ಪ್ರದೇಶದ ಉತ್ತರದಲ್ಲಿ ಮುಂದೆ ಸಾಗಿ ಚೀನಾದ 90,000 ಚದರ ಕಿಲೋಮೀಟರ್ ಪ್ರದೇಶವನ್ನು ಭಾರತ ಸುತ್ತುವರಿದಿದೆ ಎಂದು ಚೀನಾ ಹೇಳಿಕೊಂಡಿತು.
1959ರಲ್ಲಿ ಚೀನಾ, ಲಾಂಗ್ಜು ಪೋಸ್ಟ್ನಲ್ಲಿದ್ದ ಭಾರತೀಯ ಯೋಧರನ್ನು ಅಪಹರಿಸಿಬಿಟ್ಟಿತು. ಈ ಪ್ರದೇಶ ಶಿಮ್ಲಾ ಒಪ್ಪಂದದಂತೆ ಭಾರತಕ್ಕೆ ಸೇರಿದ ನೆಲ. ಅದೇ ಅಕ್ಟೋಬರ್‌ನಲ್ಲಿ ಕೊಂಗ್ಸು ಪಾಸ್ (ಅಕ್ಷಯ್ ಚಿನ್) ನಲ್ಲಿ ಕಾವಲು ಕಾಯುತ್ತಿದ್ದ ಭಾರತದ 9 ಯೋಧರನ್ನು ಚೀನಾ ಗುಂಡಿಕ್ಕಿ ಸಾಯಿಸಿದ ಮೇಲೆ ಅಲ್ಲಿ ಉಳಿದಿದ್ದ ಯೋಧರನ್ನು ಭಾರತ ಹಿಂದಕ್ಕೆ ಕರೆಸಿಕೊಂಡುಬಿಟ್ಟಿತು. ಅದಕ್ಕೆ ಮುಂಚೆ ಒಂದು ಸಭೆಯಲ್ಲಿ ರಷ್ಯಾದ ನಿಕಿತಾ ಕ್ರುಶ್ಚೊವ್ ನೆಹರು ಪರವಾಗಿ ಮಾವೋ ಜೊತೆಗೆ ವಾದ ಮಾಡಿದ್ದರು. ಭಾರತದ ಜೊತೆಗೆ ಅಮೆರಿಕ ಸೇರಿಕೊಂಡಿದ್ದನ್ನು ತಿಳಿದ ಚೀನಾಗೆ ಸುತ್ತಲೂ ಶತ್ರುಗಳೆ ತುಂಬಿಕೊಂಡಿದ್ದಾರೆ ಎನ್ನುವ ಭ್ರಮೆ ಉಂಟಾಗಿತ್ತು. ಅಕ್ಟೋಬರ್ 16ರಂದು ಚೀನಾದ ಜನರಲ್ ಲೀ ಯಂಗ್‌ಪು ಭಾರತದ ಸೈನ್ಯ ತಗ್ಲ ಪರ್ವತ ಗಡಿ ದಾಟಿ ಮುಂದಕ್ಕೆ ಬಂದಿದೆ ಎಂದು ದೂರಿದರು. ಎರಡು ದಿನಗಳ ನಂತರ ಚೀನಾ ಸರಕಾರ ಭಾರತ ಟಿಬೆಟ್ ಒಳಗೆ ನಡೆಸುತ್ತಿರುವ ಮಸಲತ್ತನ್ನು ಅಡಗಿಸಬೇಕಾದರೆ ಪ್ರತಿರೋಧ ತೋರಲೇಬೇಕೆಂದು ನಿರ್ಣಯಿಸಿತು. ಅದೇ ಸಮಯದಲ್ಲಿ ಚೀನಾದಿಂದ ಓಡಿಹೋಗಿ ತಾಯ್‌ವಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಚೀನಾ ರಾಷ್ಟ್ರೀಯವಾದಿಗಳು ಚೀನಾ ಮೇಲೆ ದಾಳಿ ಮಾಡುವ ಭೀತಿಯೂ ಇತ್ತು.
1962 ಅಕ್ಟೋಬರ್‌ನಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಚೀನಾ-ಭಾರತದ 3,225 ಕಿಲೊಮೀಟರುಗಳ ಗಡಿಯ ಉದ್ದಕ್ಕೂ ಭಾರತದ ಕೇವಲ 9 ಡಿವಿಸನ್‌ಗಳು ಮಾತ್ರ ಇದ್ದು ಅವರಲ್ಲಿ ಯಾವ ಆಧುನಿಕ ಮಿಲಿಟರಿ ಸಲಕರಣೆಗಳೂ ಇರಲಿಲ್ಲ. ಚಳಿಯನ್ನು ತಡೆದುಕೊಳ್ಳಲು ಸರಿಯಾದ ಬಟ್ಟೆ ಮತ್ತು ಬೂಟುಗಳು ಇರಲಿಲ್ಲ. ಅಕ್ಟೋಬರ್ 21, ಅರುಣಾಚಲ ಪ್ರದೇಶದ ನಮ್ಚೂಟ್ಸಂಗ್‌ಲಿ, ಖಿನ್‌ಝಿಮನೆ ಮತ್ತು ದೋಲಾ ಪೋಸ್ಟ್ಗಳಲ್ಲಿ ಭಾರತದ ಯೋಧರನ್ನು ಮುಗಿಸಿದ ಚೀನಿಯರು ಎರಡನೇ ದಿನ ಟ್ಸಂಗ್‌ದರ್, ಮೂರನೇ ದಿನ ಬುಮ್ಲಾ ಮತ್ತು 7ನೇ ಇನ್‌ಫ್ಯಾಂಟ್ರಿ ಹೆಡ್‌ಕ್ವಾಟ್ರಸ್ ತವಾಂಗ್‌ನ್ನು 24ರಂದು ವಶಪಡಿಸಿಕೊಂಡ ಚೀನಿಯರು ಭಾರತದ ಜೊತೆಗೆ ಮಾತುಕತೆ ನಡೆಸಲು ಇಚ್ಛಿಸಿದರು, ಆದರೆ ಭಾರತ ನಿರಾಕರಿಸಿತು. ಭಾರತ ಸರಕಾರ ಈಗಿನ ಕೋಲ್ಕತಾ, ನಾಗಾಲ್ಯಾಂಡ್, ಬಿಹಾರ, ಪಂಜಾಬ್ ಕಡೆಯಿಂದ ಯೋಧರನ್ನು ಧಾವಿಸಿ ಬರಲು ಆಜ್ಞೆ ನೀಡಿತು. ಕೆಲವು ಯೋಧರು ಸಿಕ್ಕಿಂ ಮತ್ತು ಭೂಥಾನ್ ಕಡೆಗೆ ಧಾವಿಸಿದರು.
1962ರ ಬೇಸಿಗೆ ಕಾಲದಲ್ಲಿ ಚೀನಾ-ಭಾರತ ಗಡಿಯಲ್ಲಿ ಅನೇಕ ವಲಯಗಳಲ್ಲಿ ಸಣ್ಣಪುಟ್ಟ ದಾಳಿಗಳು ನಡೆಯತೊಡಗಿದವು. ಒಂದು ಕಾಳಗದಲ್ಲಿ ಅನೇಕ ಚೀನಿ ಯೋಧರು ಪ್ರಾಣ ಕಳೆದುಕೊಂಡರು. ಜೂನ್ ತಿಂಗಳಲ್ಲೆ ಐಐಬಿ ಚೀನಾ ಯುದ್ಧ ತಯಾರಿಯಲ್ಲಿದೆ ಎಂದು ವರದಿ ಮಾಡಿತ್ತು. ಪಾಕಿಸ್ತಾನವು ಅದೇ ರೀತಿ ಪಶ್ಚಿಮದಲ್ಲಿ ತಯಾರಿ ನಡೆಸಿತ್ತು. ಭಾರತ ವಾಯುಸೇನೆಗೆ ತಯಾರಾಗಿರುವಂತೆ ಸೂಚನೆ ನೀಡಲಾಯಿತು. ಯುಮ್‌ಟ್ಸೋ ಕಣಿವೆಯಲ್ಲಿ 1,000 ಚೀನಾ ಯೋಧರನ್ನು ಎದರ‍್ಗೊಂಡ ಭಾರತದ 50 ಯೋಧರು ಹೋರಾಡಿ ಹತರಾದರು. ಆಗಸ್ಟ್ ವೇಳೆಗೆ ಈಶಾನ್ಯ ಭಾರತದ ಗಡಿಯ ಉದ್ದಕ್ಕೂ ಚೀನಾ ಹೇರಳ ಮದ್ದುಗುಂಡನ್ನು ಪೇರಿಸುತ್ತಿದ್ದರೂ, ನೆಹರು ಸರಕಾರ ಕಣ್ಣುಮುಚ್ಚಿಯೇ ಕುಳಿತಿತ್ತು. ಅದೇ ತಿಂಗಳಲ್ಲಿ ಟೆಬೆಟ್‌ನ ತಗ್ಲಾ ಪರ್ವತ ದೋಲಾದಲ್ಲಿ ಭಾರತ ಪೋಸ್ಟ್ ಸ್ಥಾಪಿಸಿದ ತಕ್ಷಣ ಚೀನಾ ಯೋಧರು ಎದುರಿಗೆ ಬಂದು ನಿಂತುಕೊಂಡರು. ಸೆಪ್ಟೆಂಬರ್‌ನಲ್ಲಿ ಮತ್ತೆ 600 ಚೀನಿ ಯೋಧರು ಅಲ್ಲಿಗೆ ತಲುಪಿದರು. ಚೀನಾ-ಭಾರತ ಯೋಧರ ಮಧ್ಯೆ 12 ದಿನಗಳು ಕಾಲ ಗುಂಡಿನ ಚಕಮಕಿ ನಡೆಯಿತು. ಸೆಪ್ಟೆಂಬರ್ 9ರಂದು ಭಾರತ ಸರಕಾರ ತಗ್ಲಾದಲ್ಲಿದ್ದ ಚೀನಿಯರನ್ನು ಎದುರಿಸಲು ಪಂಜಾಬ್‌ನಿಂದ 400 ಯೋಧರನ್ನು ಕರೆಸಿತು. ಭಾರತ ಯೋಧರು ಅಲ್ಲಿಗೆ ತಲಪುವುದರೊಳಗೆ ನಮ್ಕಚು ನದಿಯ ಎರಡೂ ದಡಗಳಲ್ಲಿ ಚೀನಿ ಯೋಧರು ತುಂಬಿಹೋಗಿದ್ದರು. 20ರಂದು ಸೇತುವೆಯ ಮೇಲೆ ನಡೆದ ಕಾಳಗದಲ್ಲಿ ಎರಡೂ ಕಡೆ ಹಲವು ಯೋಧರು ಪ್ರಾಣ ಕಳೆದುಕೊಂಡರು. ಅಕ್ಟೋಬರ್ 3ರಂದು ಭಾರತಕ್ಕೆ ಚೌಎನ್‌ಲಾಯ್ ಬಂದು ನೆಹರು ಅವರನ್ನು ಸಂಧಿಸಿ ಯುದ್ಧ ಬೇಡ ಶಾಂತಿಯಿಂದ ಇರೋಣ ಎಂದು ಪ್ರಮಾಣ ಮಾಡಿದ್ದರು. ಅದರೆ, ಹಿಂದೆಯೇ ಚೀನಾ ದಾಳಿ ಮಾಡಿತ್ತು.
ಅದೇ ವೇಳೆಯಲ್ಲಿ ಹಲವು ಬೆಟಾಲಿಯನ್‌ಗಳು ಲಡಾಕ್ ಕಡೆಗೆ ಧಾವಿಸಿದವು. 25 ಪೌಂಡ್‌ರ್ ಗನ್ಸ್, ಎಎಂಎಕ್ಸ್ ಮಿನಿ ಟ್ಯಾಂಕರ್‌ಗಳನ್ನು ಯುದ್ಧ ವಿಮಾನಗಳಲ್ಲಿ ಸಾಗಿಸಿ ಚುಸಲ್ ಪ್ರದೇಶಕ್ಕೆ ತರಲಾಯಿತು. 5,300 ಮೀಟರ್ ಎತ್ತರದ ದೌಲತ್‌ಬಾಗ್‌ನಿಂದ ಯೋಧರನ್ನು ಹಿಂದಕ್ಕೆ ಕರೆಸಲಾಯಿತು. ಅದಕ್ಕೂ ಆಚೆಯಿದ್ದ ಭಾರತದ ಗಡಿಯನ್ನು ಚೀನಿಯರು ಆಗಲೇ ವಶಪಡಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಲೋಹಿತ್ ಕಣಿವೆಯ ಹತ್ತಿರ ವಾಲೊಂಗ್ ಹಳ್ಳಿಯ ಹಿಂದಿನ ಪರ್ವತವನ್ನು ಭಾರತೀಯ ಯೋಧರು ಚೀನಿ ಯೋಧರ ಎದುರಿಗೆ ಹೋರಾಡಿ ವಶಪಡಿಸಿಕೊಂಡಿದ್ದರು. ಅದೇ ತಿಂಗಳು 17ರಂದು ಚೀನಿಯರ 6 ಬ್ರಿಗೇರ‍್ಸ್ ಜಂಗ್ ಹತ್ತಿರ (ತವಾಂಗ್ ಹತ್ತಿರ) 16 ಕಿಲೋಮೀಟರ್ ಒಳಕ್ಕೆ ಬಂದುಬಿಟ್ಟಿದ್ದರು. 15,000 ಅಡಿ ಎತ್ತರದ ಶಿಲಾ ಪಾಸ್‌ನಲ್ಲಿ ಭಾರತೀಯ ಯೋಧರು ಒಟ್ಟುಗೂಡುವ ಮುಂಚೆಯೇ ಚೀನಿ ಯೋಧರು ಎಲ್ಲರನ್ನೂ ಮುಗಿಸಿ ಮುಂದೆ ಬಂದಿದ್ದರು. 18ರಂದು ಅಸ್ಸಾಂ ಬಯಲು ಪಟ್ಟಣ ತೇಜ್‌ಪುರದವರೆಗೂ ಧಾವಿಸಿ ಬಂದಿದ್ದರು. ತವಾಂಗ್ ಮತ್ತು ತೇಜ್‌ಪುರದ ನಡುವಿನ ಬೆಟ್ಟಗುಡ್ಡಗಳ ಕಾಡು ದಾರಿ ಸುಮಾರು 300 ಕಿಲೊಮೀಟರು. 21ರಂದು ಚೀನಿಯ ಯೋಧರು ತಾವಾಗಿಯೇ ಹಿಂದಕ್ಕೆ ಹೋಗಿ 1959ರ ಭಾರತ-ಚೀನಾ ಒಪ್ಪಂದದ ಗಡಿ ರೇಖೆಯಲ್ಲಿ ನಿಂತುಬಿಟ್ಟರು. ಈ ಯುದ್ಧದಲ್ಲಿ ಭಾರತದ ಸಾವಿರಾರು ಅಧಿಕಾರಿಗಳು ಮತ್ತು ಯೋಧರು ಪ್ರಾಣ ಕಳೆದುಕೊಂಡಿದ್ದರು.
ಜಂಘೀಗರ್ ಹತ್ತಿರದ ಜಸ್ವಂತ್ ಸಿಂಗ್ ರಾವತ್ ಸ್ಮಾರಕ.
ಯೋಧರ ಇನ್ನೊಂದು ಸ್ಮಾರಕ.
ವೀರಯೋಧ ಜಸ್ವಂತ್ ಸಿಂಗ್ ರಾವತ್
ತವಾಂಗ್ ಸುತ್ತಮುತ್ತಲು ತೀವ್ರ ಯುದ್ಧ ನಡೆದು ಸಾವಿರಾರು ಚೀನಿಯರು ಪರ್ವತಗಳಿಂದ ಮೋಟರ್ಸ್, ಮಷಿನ್ ಗನ್’ಗಳು, ಸ್ಟೆನ್‌ಗನ್’ಗಳು, ಗ್ರನೇಡ್’ಗಳು, ಹೆವಿ ಆರ್ಟಿಲರಿ, ಸೆಲ್‌ಗಳಿಂದ ದಾಳಿ ಮಾಡಿ ನೂರಾರು ಭಾರತೀಯ ಯೋಧರನ್ನು ಮುಗಿಸುತ್ತ ಚೀನಿ ಸೈನ್ಯ ಮುಂದುವರಿದಿತ್ತು. ಭಾರತೀಯ ಯೋಧರನ್ನು ತವಾಂಗ್‌ನಿಂದ ಹಿಂದಕ್ಕೆ ಕರೆಸಿ, ಶಿಲಾಪಾಸ್ ಕೆಳಗಿನ ತಪ್ಪಲಲ್ಲಿ 4ನೇ ಬೆಟಾಲಿಯನ್‌ಗೆ ಸೇರಿದ ಘರ್‌ವಾಲ್ ರೈಫಲ್ಸ್ ಜೊತೆಗೆ ಸೇರಿಕೊಂಡು ಚೀನಿ ಯೋಧರನ್ನು ಎದುರಿಸುವಂತೆ ಆಜ್ಞೆ ನೀಡಲಾಯಿತು.
ಚೀನಿಯರು ಸ್ಥಳೀಯ ಮೋನ್ಫಾಗಳ ವೇಷದಲ್ಲಿ ಭಾರತೀಯ ಸೈನಿಕರನ್ನು ಭೇದಿಸಿ ಒಳಗೆ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ಅರಿತು ಅವರನ್ನು ಹಿಮ್ಮೆಟ್ಟಿಸಲಾಯಿತು. ಅದೂ ಕೂಡ ಬೆಳಗಿನ ಜಾವ ಕತ್ತಲಲ್ಲಿ ಒಮ್ಮೆಲೆ ನೂರಾರು ಚೀನಿ ಯೋಧರು ಧಾವಿಸಿ ಬರುತ್ತಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಭಾರತೀಯ ಯೋಧರು ಚೀನಿ ಯೋಧರನ್ನು ತಡೆಯಲಾಗಲಿಲ್ಲ. ಹಿಂದಿನ ಪರ್ವತಗಳ ಜಾಡಿನಲ್ಲಿ ಕಣಿವೆಯ ಕೆಳಗೆ 40 ಮೀಟರ್ ಹತ್ತಿರದವರೆಗೂ ಸಾವಿರಾರು ಚೀನಿ ಯೋಧರು ಬಂದುಬಿಟ್ಟಿದ್ದರು. ಜೊತೆಗೆ ಚೀನಿಯರಲ್ಲಿ ಹಲವು ಆಧುನಿಕ ಯುದ್ಧ ಶಸ್ತ್ರಗಳೂ ಇದ್ದವು. ಕಣಿವೆಯ ಮೇಲೆ ಬಂಕರ್‌ಗಳಲ್ಲಿ ಉಳಿದುಕೊಂಡಿದ್ದ ತ್ರಿಲೋಕ್ ಸಿಂಗ್, ಜಸ್ವಂತ್ ಸಿಂಗ್ ಮತ್ತು ಗೋಪಾಲ್‌ಸಿಂಗ್ ಮೂವರು ಉಸಿರು ಬಿಡದೆ ಸುಮ್ಮನೆ ಕುಳಿತುಕೊಂಡರು. ಸಾವಿರಾರು ಚೀನಿ ಯೋಧರ ಮುಂದೆ ಉಳಿದುಕೊಂಡಿದ್ದ ಈ ಮೂವರು ಯೋಧರ ಹತ್ತಿರ ಕೇವಲ 1 ಮಷಿನ್‌ಗನ್ ಜೊತೆಗೆ ನೂರಾರು ಗ್ರನೇಡುಗಳು ಮಾತ್ರ ಇದ್ದವು. ಚೀನಿಯರು ಇವರ ಮೇಲೆ ಒಂದೇ ಸಮನೆ ಫೈರ್ ಮಾಡುತ್ತಿದ್ದರು. ಅದರ ನಡುವೆಯೇ ಜಸ್ವಂತ್ ಸಿಂಗ್ ಮತ್ತು ತ್ರಿಲೋಕ್ ಸಿಂಗ್ ಕಣಿವೆಯ ಮರಗಿಡಗಳ ಮಧ್ಯೆ ತೆವಳಿಕೊಂಡು ಹೋಗುತ್ತಿದ್ದರೆ, ಹಿಂದೆ ಬಂಕರ್ ಹತ್ತಿರ ನಿಂತಿದ್ದ ಗೋಪಾಲ್ ಸಿಂಗ್ ಮಷಿನ್‌ಗನ್‌ನಿಂದ ಚೀನೀ ಯೋಧರ ಮೇಲೆ ಒಂದೇ ಸಮನೆ ಫೈರ್ ಮಾಡತೊಡಗಿದರು. ಎದುರಿಗೆ ಗಾಯಗೊಂಡು ಬಿದ್ದಿದ್ದ ಒಬ್ಬ ಚೀನಿ ಯೋಧನ ಕೈಯಿಂದ ಗೋಪಾಲ್ ಸಿಂಗ್ ಒಂದು ಲೈಟ್ ಎಮ್‌ಎಮ್‌ಜಿ ಕಸಿದುಕೊಂಡು ಹಿಂದಕ್ಕೆ ಬಂಕರ್ ಕಡೆಗೆ ಓಡಿ ಬರತೊಡಗಿದರು. ಅಷ್ಟರಲ್ಲಿ ಒಂದು ಬುಲೆಟ್ ಅವರ ತಲೆಗೆ ಬಡಿಯಿತು. ತ್ರಿಲೋಕ್ ಸಿಂಗ್ ಆ ಚೀನಿಯೋಧನ ಮೇಲೆ ಗ್ರನೇಡ್ ಎಸೆದು ಸಾಯಿಸಿದ್ದರು. ಆ ವೇಳೆಗೆ ಗೋಪಾಲ್ ಸಿಂಗ್, ಜಸ್ವಂತ್ ಸಿಂಗ್‌ರನ್ನು ಬಂಕರ್ ಒಳಕ್ಕೆ ಎಳೆದುಕೊಂಡಿದ್ದರು. ಇದೆಲ್ಲ ಕೇವಲ ಕೆಲವೇ ನಿಮಿಷಗಳಲ್ಲಿ ನಡೆದುಹೋಗಿತ್ತು. ಆದರೆ ಈ ಮೂವರು ಯೋಧರು ಇರುವೆ ಸಾಲಿನಂತೆ ಬರುತ್ತಿದ್ದ ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿ ಯೋಧರು ಒಂದೇ ಸಮನೆ ಕಣಿವೆಯ ಇಳಿಜಾರಿನಲ್ಲಿ ಜಾರಿ ಬೀಳುತ್ತಿದ್ದರೂ, ಅಲೆಅಲೆಯಾಗಿ ಬರುತ್ತಲೇ ಇದ್ದರು. 300 ಚೀನಿಯರು ಸತ್ತು ನೂರಾರು ಯೋಧರು ಗಾಯಗೊಂಡು ಹಿಂದಕ್ಕೆ ಸರಿದಿದ್ದರು.
ಈ ಮೂವರು ಯೋಧರು ಮೂರು ರಾತ್ರಿ , ಮೂರು ಹಗಲುಗಳ ಕಾಲ ಈ ಇಕ್ಕಟ್ಟಾದ ಪ್ರದೇಶದಲ್ಲಿ ಸಾವಿರಾರು ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿಯರು ಕಣಿವೆ ಮೇಲಿನ ಬಂಕರ್‌ಗಳಲ್ಲಿ ನೂರಾರು ಭಾರತೀಯ ಯೋಧರು ಅಡಗಿ ಕುಳಿತು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ನಂಬಿದ್ದರು. ವೀರಯೋಧ ಜಸ್ವಂತ್ ಸಿಂಗ್ ರಾವತ್ ಜೊತೆಗೆ ಇದೇ ಸ್ಥಳದಲ್ಲಿ 3 ಅಧಿಕಾರಿಗಳು, 4 ಜೆಸಿಎಮ್‌ಗಳು, 147 ಯೋಧರು ಮತ್ತು 7 ಲ್ಯಾನ್ಸ್ ನಾಯಕ್ಸ್ ವೀರಮರಣ ಹೊಂದಿದರು. ಇವರೆಲ್ಲ ಘರ್‌ವಾಲ್ ರೈಫಲ್ಸ್ 4ನೇ ಬಟಾಲಿಯನ್‌ಗೆ ಸೇರಿದವರು. ಈ ಸ್ಥಳ ಈಗ ಜಸ್ವಂತ್ ಜಂಘೀಗರ್ ಎಂದೇ ಪ್ರಖ್ಯಾತಿ. ವೀರಮರಣ ಹೊಂದಿದ ಜಸ್ವಂತ್ ಸಿಂಗ್ ರಾವತ್‌ಗೆ ಮಹಾ ವೀರಚಕ್ರ, ತ್ರಿಲೋಕ್ ಸಿಂಗ್‌ಗೆ ವೀರಚಕ್ರ ಮತ್ತು ಬದುಕಿ ಉಳಿದುಕೊಂಡಿದ್ದ ಗೋಪಾಲ್ ಸಿಂಗ್‌ಗೆ ಭಾರತ ಸರಕಾರ ವೀರಚಕ್ರ ನೀಡಿ ಗೌರವಿಸಿತ್ತು.
ಯುದ್ಧಭೂಮಿಯಲ್ಲಿ ಅನಾಥವಾಗಿ ಬಿದ್ದಿರುವ ಆವತ್ತಿನ ಯುದ್ಧೋಪಕರಣಗಳು.
ಆ ಸ್ಥಳದಲ್ಲಿದ್ದ ಹಳೆ ಬಂಕರ್‌ಗಳನ್ನು, ಯೋಧರ ಸಮಾಧಿಗಳನ್ನು, ಅಲ್ಲೆಲ್ಲ ಬಿದ್ದಿದ್ದ ಇನ್ನಿತೆರ ಯುದ್ಧ ಸಲಕರಣೆಗಳನ್ನು ನೋಡಿದಾಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ನಾಲ್ಕಾರು ಸಲ ಅಲ್ಲೆಲ್ಲ ಸುತ್ತಾಡಿ ಸುತ್ತಲಿನ ಪರ್ವತ ಶ್ರೇಣಿಗಳು, ಕಾಡು ಕಣಿವೆಗಳನ್ನು ನೋಡುತ್ತಾ ಅಲ್ಲೇ ಸುಮಾರು ಹೊತ್ತು ನಿಂತುಬಿಟ್ಟೆ. ಜೊತೆಗಿದ್ದ ರೆಡ್ಡಿ ಮತ್ತು ಚಾಲಕ ಸುತ್ತಲು ನೋಡುತ್ತ ಮೂಕರಾಗಿದ್ದರು. ನಮ್ಮ ರಾಜಕಾರಣಿಗಳು, ಭ್ರಷ್ಟ ಅಧಿüಕಾರಿಗಳು, ಪೊಲೀಸ್ ಅಧಿಕಾರಿಗಳ ಬಗ್ಗೆ ಅನೇಕ ಆಲೋಚನೆಗಳು ಬಂದುಹೋದವು. ಇವರನ್ನೆಲ್ಲ ಕನಿಷ್ಠ ಒಂದು ಸಲವಾದರೂ ಈ ಪ್ರದೇಶಗಳಲ್ಲಿ ಓಡಾಡಿಸಿದರೆ ಒಳಿತೇನೋ ಎನ್ನುವ ಆಲೋಚನೆ ಬಂದಿತ್ತು.
ಶಿಲಾಪಾಸ್ ಕೆಳಗೆ ನ್ಯೂಕ್ಮಡೊಂಗ್ ಯುದ್ಧ ಸ್ಮಾರಕದಲ್ಲಿ ವೀರಮರಣ ಹೊಂದಿದ ಒಟ್ಟು 280 ವೀರಯೋಧರ ಪಟ್ಟಿ ಸಿಕ್ಕಿತು. ಅಸ್ಸಾಂನ ತೇಜ್‌ಪುರ-ಬೊಮ್‌ಡಿಲಾ-ಜಂಗಿಘರ್-ಶಿಲಾಪಾಸ್-ದೀರಂಘ್-ತವಾಂಗ್’ವರೆಗೂ ಮತ್ತು ತವಾಂಗ್-ಬುಮ್ಲಾ-ಶಾಂಗ್ಷಟಿಯರ್ ಸುತ್ತಮುತ್ತಲೂ ಎಲ್ಲಿ ನೋಡಿದರು ಯುದ್ಧ ನಡೆದ ರಣರಂಗ ಪ್ರದೇಶಗಳು ಮತ್ತು ಯುದ್ಧ ಸ್ಮಾರಕಗಳು. ಇನ್ನು ಯುದ್ಧದಲ್ಲಿ ಮಡಿದವರ ಹೆಸರಿನ ಪಟ್ಟಿಗಳನ್ನು ನೋಡಿದಾಗ ತಲೆಸುತ್ತಿ ಬರುತ್ತದೆ. ಹೀಗೆ ಈ ಪ್ರದೇಶದಲ್ಲಿ ಹತ್ತಾರು ಯುದ್ಧಸ್ಮಾರಕಗಳಿದ್ದು ನೂರಾರು ಯೋಧರ ಸಮಾಧಿಗಳಿವೆ.
ತವಾಂಗ್‌ನಿಂದ-ಬುಮ್ಲಾ-ಶಾಂಗ್ಷಟಿಯರ್ ಸರೋವರದ ರಸ್ತೆಯಲ್ಲಿ ನಮ್ಮ ಜೀಪು ಹೊರಟಿದ್ದು ರಸ್ತೆಯ ಉದ್ದಕ್ಕೂ ಯುದ್ಧದ ಕುರುಹುಗಳು ಕಾಣಿಸತೊಡಗಿದವು. ಬೆಟ್ಟ ಗುಡ್ಡ ಕಣಿವೆ ಶಿಖರ ಎಲ್ಲೆಲ್ಲೂ ಬಂಕರ್‌ಗಳು, ಬಂಕರುಗಳ ಸುತ್ತಮುತ್ತಲೂ ಮತ್ತು ಒಳಗೆ ರಾಶಿ ರಾಶಿ ಸಿಡಿಮದ್ದುಗಳ ಹಳೆ ಕವಚಗಳು ಬಿದ್ದಿದ್ದವು. ಅವುಗಳ ಮೇಲೆ ಕೆಂಪು ಬಣ್ಣದಲ್ಲಿ ಬರೆದಿರುವ ’ಪಾಯಿಷನ್’ ಎಂಬ ಪದಗಳು 48 ವರ್ಷಗಳಾದರೂ ಇನ್ನೂ ಹಾಗೆ ಉಳಿದುಕೊಂಡಿದ್ದವು. ಬಂಕರುಗಳ ಮಧ್ಯೆ ಆಳವಾದ ಟ್ರಂಚುಗಳು, ಗೋಡೆಗಳು ಮತ್ತು ಹಲವು ಆಕಾರಗಳ ಬಂಕರುಗಳ ಮೇಲೆ ಹುಲ್ಲು ಬೆಳೆದು, ಹಿಮದ ಧೂಳು ಬಿದ್ದು, ಹಸಿರು ಬಿಳುಪಿನ ಹೊದಿಕೆಯ ಗೂಡುಗಳಂತೆ ಕಾಣಿಸುತ್ತಿದ್ದವು.
ಶಿಲೆಗಳ ಮಧ್ಯೆ ಇರುವ ಬಿರುಕು ಸಂದುಗಳು ಮತ್ತು ಗವಿಗಳನ್ನೇ ಬಂಕರುಗಳಾಗಿ ಉಪಯೋಗಿಸಲಾಗಿತ್ತು. ಅವುಗಳ ಮಧ್ಯೆಯೇ ಜಿಂಕ್ ಶೀಟುಗಳಲ್ಲಿ ನಿರ್ಮಿಸಿದ ಹೊಸ ಬಂಕರುಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಯೋಧರು ಒಳಗೆ ಹೊರಗೆ ನಿಂತು ಎಲ್ಲಾ ದಿಕ್ಕುಗಳಲ್ಲೂ ಗಮನವಿಟ್ಟು ನೋಡುತ್ತಿದ್ದರು. ಅವರ ಮೇಲೆ ಹಿಮಧೂಳಿನ ಹೂಮಳೆ ಸುರಿಯುತ್ತಿತ್ತಲ್ಲದೆ, ಯಾವ ಕಡೆ ನೋಡಿದರೂ ಹಿಮರಾಶಿಯೇ. ಎಲ್ಲಿ ಹುಟ್ಟಿ ಎಲ್ಲಿ ಬೆಳೆದ ಯೋಧರೋ, ಯಾವ ತಾಯಿ ಹೆತ್ತ ಮಕ್ಕಳೋ, ತಂದೆತಾಯಿ ಪತ್ನಿ ಮಕ್ಕಳನ್ನು ಬಿಟ್ಟು ಈ ನೀರವ ರೌದ್ರ ಹಿಮರಾಶಿಯ ನಡುವೆ ಮರಗಟ್ಟುವ ಚಳಿಯಲ್ಲಿ ದೇಶದ ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಿರುವ ಪರಿಯನ್ನು ನೋಡಿದರೆ ನಿಜವಾಗಿಯೂ ಮನಸ್ಸಿಗೆ ನೋವಾಗುತ್ತದೆ. ಈ ವೀರಯೋಧರ ಬಗ್ಗೆ ನಾವು ನಾಗರಿಕರು ಯಾವಾಗಲಾದರೂ ಯೋಚಿಸುತ್ತೇವೆಯೇ? ಕೇವಲ ನಾಲ್ಕು ಒಳ್ಳೆ ಮಾತುಗಳನ್ನಾದರೂ ಆಡುತ್ತೇವೆಯೇ? ದೇವರು ದಿಂಡರು ಗುಡಿ ಗೊಪುರಗಳನ್ನು ನೋಡಿ ಬರುವ, ಜಾತ್ರೆಗಳಲ್ಲಿ ಮುಳುಗಿ ತೇಲಾಡುವ ಜನರು ಗಡಿಗಳಲ್ಲಿ ನಿಂತಿರುವ ಈ ಯೋಧರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿ ಬರಬೇಕಾಗಿದೆ.
ಯುದ್ಧಭೂಮಿಯಲ್ಲಿ ಅಳಿದುಳಿದ ಕುರುಹುಗಳ ಮುಂದೆ ಡಾ.ಎಂ.ವೆಂಕಟಸ್ವಾಮಿ.