ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಉಪನ್ಯಾಸಕರ ವರ್ಗಾವಣೆಯ ನಿಯಮಗಳನ್ನು ಬದಲಿಸಲು ಸರಕಾರ ನಿರ್ಧರಿಸಿದೆ. ಜತೆಗೆ, ರಿಜಿಸ್ಟ್ರಾರ್ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳು, ಉಪ ಕುಲಪತಿಗಳ ನೇಮಕದಲ್ಲಿ ಕ್ವಾಲಿಟಿ, ವಿವಿಗಳಿಗೆ ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಎಂಟ್ರಿ ಕೊಡದಿರುವುದು.. ಇವೆಲ್ಲ ಸರಕಾರದ ತಲೆಯಲ್ಲಿರುವ ಮಹತ್ತ್ವದ ಯೋಚನೆಗಳು.
ಈಗಿರುವ 2016ರ ವರ್ಗಾವಣೆ ಕಾಯ್ದೆಯನ್ನು ವಾಪಸ್ ಪಡೆದು ಅದಕ್ಕೆ ಸೂಕ್ತ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು. ಕಳೆದ ಅಧಿವೇಶನದಲ್ಲಿಯೇ ಇದರಲ್ಲಿ ಕೆಲ ತಿದ್ದುಪಡಿಗಳನ್ನು ಮಾಡುವ ಉದ್ದೇಶವಿತ್ತಾದರೂ ಆ ಕಾಯ್ದೆಯಲ್ಲಿ ಕೆಲ ದೋಷಗಳಿದ್ದ ಕಾರಣ ಇಡೀ ಕಾಯ್ದೆಯನ್ನೇ ವಾಪಸ್ ಪಡೆದು ಹೊಸ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಹೀಗೆ ಮಾಡುವುದರಿಂದ ವರ್ಗಾವಣೆ ನಿಯಮಗಳು ಸರಳವಾಗಿರುತ್ತವೆ ಮತ್ತೂ ಗೊಂದಲಗಳು ಇರುವುದೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದ್ದಾರೆ.
ಈಗಾಗಲೇ ಈ ಕಾಯ್ದೆಯ ಬಗ್ಗೆ ಸಂಬಂಧಪಟ್ಟ ಎಲ್ಲರಿಂದಲೂ ಸರಕಾರ ಸಲಹೆ ಪಡೆದಿದೆ. ಉಪನ್ಯಾಸಕರ ಸಂಘದಿಂದಲೂ ಸಲಹೆಗಳನ್ನು ಕೇಳಿ ಪಡೆದಿದೆ. ಈ ಮಸೂದೆಯನ್ನು ಮುಂದಿನ ಅಧಿವೇಶನದಲ್ಲೇ ಮಂಡಿಸಲಾಗುವುದು. ಬಳಿಕ ಅದಕ್ಕೆ ಬರುವ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆ ರೂಪದಲ್ಲಿ ಜಾರಿಗೆ ತರಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ಸೋಮವಾರದಿಂದ ವಿಧಾನಮಂಡಲ ಕಲಾಪ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ಎಲ್ಲ ಪಕ್ಷಗಳ ಸದಸ್ಯರ ಜತೆ ಮಹತ್ವದ ಮಾತುಕತೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಜಾರಿಗೆ ತಂದ ವಿವಿಧ ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಇಲಾಖೆಯಲ್ಲಿ ಮುಂದೆ ತರಲಿರುವ ಸುಧಾರಣೆಗಳತ್ತ ಬೆಳಕು ಚೆಲ್ಲಿದರು.
ವಿವಿಗಳಿಗೆ ಐಪಿಎಸ್, ಐಎಫ್ಎಸ್ ಅಧಿಕಾರಿಗಳು ಬೇಡ
ವಿಶ್ವವಿದ್ಯಾಲಯಗಳಲ್ಲಿನ ಆಡಳಿತಕ್ಕೆ ಮತ್ತಷ್ಟು ಚುರುಕು ನೀಡುವ ಉದ್ದೇಶದಿಂದ ಎಲ್ಲ ವಿವಿಗಳ ರಿಜಿಸ್ಟ್ರಾರ್ ಹುದ್ದೆಗಳಿಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಸುಗ್ರೀವಾಜ್ಣೆ ತರಲಾಗಿದೆ. ಅದಕ್ಕೆ ಈ ಅಧಿವೇಶನದಲ್ಲಿಯೇ ಒಪ್ಪಿಗೆ ಪಡೆಯಲಾಗುವುದು ಎಂದರು ಡಿಸಿಎಂ. ಹಾಗೆ ನೋಡಿದರೆ ವಿವಿಗಳಿಗೆ ದೊಡ್ಡ ಮಟ್ಟದ ಸರ್ಜರಿಗೇ ಸರಕಾರ ಕೈಹಾಕಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ರಿಜಿಸ್ಟ್ರಾರ್ ಹುದ್ದೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ತರುವುದು ಉತ್ತಮ ಯೋಚನೆ. ಆದರೆ, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳನ್ನು ದಯವಿಟ್ಟು ನೇಮಕ ಮಾಡಬೇಡಿ. ಹಾಗೆಯೇ, ವಿವಿಗಳಲ್ಲಿ ಅಧ್ಯಾಪಕರಿಂದ ಮೊದಲಗೊಂಡು ಎಲ್ಲ ಹಂತಗಳ ನೇಮಕಾತಿಗಾಗಿ ಒಂದು ಕೇಂದ್ರೀಕೃತ ಸೆಲ್ ಮಾಡಿ. ಅದು ಬಿಟ್ಟು ವಿವಿ ಮಟ್ಟದಲ್ಲಿಯೇ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಬೇಡಿ. ಹೀಗೆ ಮಾಡುವುದರಿಂದ ಎಲ್ಲ ವಿವಿಗಳಲ್ಲೂ ರಾಜಕಾರಣಿಗಳ ಹಸ್ತಕ್ಷೇಹ ಬಹುತೇಕ ನಿಲ್ಲುತ್ತದೆ. ಜತೆಗೆ ಬಡ್ತಿ ನೀಡುವಾಗ ಸೇವಾ ಹಿರಿತನಕ್ಕಿಂತ ಕಾರ್ಯನಿರ್ವಹಣೆಯ ದಕ್ಷತೆಯನ್ನು ಪರಿಗಣಿಸಿ ಕೊಡಬೇಕು ಹಾಗೂ ವಿವಿಗಳಲ್ಲಿ ಮೂಲಭೂತ ಸೌಕರ್ಯ, ಕಟ್ಟಡಗಳ ನಿರ್ಮಾಣದ ಕೆಲಸವನ್ನು ವಿವಿಗಳ ಆಡಳಿತದಿಂದ ಹೊರಗೆ ತರಬೇಕು ಎಂದೂ ಅವರು ಸಲಹೆ ನೀಡಿದರು. ಈ ಬಗ್ಗೆ ಗಂಭೀರ ಪರಿಶೀಲನೆ ನಡೆಸುವುದಾಗಿ ಡಿಸಿಎಂ ಭರವಸೆ ನೀಡಿದರು.
ಇದೇ ವೇಳೆ, ವಿವಿಗಳಲ್ಲಿ ಅನಗತ್ಯ ಖರೀದಿಗಳಿಗೆ ಕಡಿವಾಣ ಹಾಕಬೇಕು. ಅಗತ್ಯವಿಲ್ಲದ ಸಾಫ್ಟ್ ವೇರ್ ಖರೀದಿ, ಕಂಪ್ಯೂಟರುಗಳ ಖರೀದಿ ಇತ್ಯಾದಿಗಳ ಮೇಲೆ ತೀವ್ರ ನಿಗಾ ನಿಡಬೇಕು. ಇದರಿಂದ ವಿವಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದ ಅಂಶವನ್ನು ಕೆಲ ಸದಸ್ಯರು ಉಪ ಮುಖ್ಯಮಂತ್ರಿಯ ಗಮನಕ್ಕೆ ತಂದರು.
ವಿಸಿ ನೇಮಕದಲ್ಲಿ ಕ್ವಾಲಿಟಿ
ಉಪ ಕುಲಪತಿ ನೇಮಕದಲ್ಲಿ ಗುಣಮಟ್ಟವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಅದಕ್ಕೆ ಉತ್ತಮವಾದ ಮಾನದಂಡವನ್ನು ರೂಪಿಸಿ. ಅದಕ್ಕೆ ಅಗತ್ಯಬಿದ್ದರೆ ತಜ್ಞರ ಸಮಿತಿಯನ್ನು ರಚಿಸಿ. ವೈಸ್ ಚಾನ್ಸಲರ್ ಆಗಲು ಅರ್ಜಿ ಹಿಡಿದುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುವ ವ್ಯಕ್ತಿಗಳಿಗೆ ಮಣೆ ಹಾಕಬೇಡಿ ಎಂದು ಪರಿಷತ್ ಸದಸ್ಯರು ಡಿಸಿಎಂಗೆ ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ್ ಹೊರಟ್ಟಿ, ಅರುಣ್ ಶಹಾಪುರ, ಅ. ದೇವೇಗೌಡ, ತಾರಾ ಅನುರಾಧ, ಹನುಮಂತ್ ನಿರಾಣಿ, ಮರಿತಿಬ್ಬೆ ಗೌಡ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.