ಮೇಲಿನ ಚಿತ್ರ: ನಾಗಾಲ್ಯಾಂಡ್‌ನ ವಿಶ್ವೇಮಾ ಗ್ರಾಮದ ನೋಟ..
ಇಡೀ ಈಶಾನ್ಯ ಭಾರತದಲ್ಲಿ ನಾಗಾಬುಡಕಟ್ಟು ಜನಾಂಗಗಳು ಚತುರ, ಶಕ್ತಿಶಾಲಿ ಮತ್ತು ಸಿಂಹ ಹೃದಯ ಉಳ್ಳವರು. ಅಂತಹ ನಾಗಾಗಳು ಇಂದಿಗೆ ಸರಿಯಾಗಿ 130 ವರ್ಷಗಳ ಹಿಂದೆ ಪೂರ್ವ ಹಿಮಾಲಯ ಪರ್ವತಗಳಲ್ಲಿ ಬ್ರಿಟಿಷ್ ಸೈನ್ಯದ ಬ್ಯಾರಕ್’ಗಳಿಗೆ ನುಗ್ಗಿ ರುಂಡಗಳನ್ನು ಚೆಂಡಾಡಿದ ಒಂದು ಭೀಕರ ಯುದ್ಧವನ್ನು ಇಲ್ಲಿ ವಿವರಿಸಲಾಗಿದೆ. ಇಡೀ ಭಾರತದಲ್ಲಿ ಬ್ರಿಟಿಷರು ಬಾರತೀಯರಿಗೆ ಸಿಂಹಸ್ವಪ್ನರಾಗಿದ್ದರೆ, ಇಲ್ಲಿ ನಾಗಾಗಳು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಇಡೀ ಯುದ್ಧ ಕಥನವನ್ನು ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್ ಮಾತುಗಳಲ್ಲೇ ಓದೋಣ…
ಈ ಬರಹವನ್ನು ಈಶಾನ್ಯ ಭಾರತದಲ್ಲಿ ಅನೇಕ ವರ್ಷ ಕೆಲಸ ಮಾಡಿದ್ದ ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. 12,000 ವರ್ಷಗಳ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಲು ಕೇಂದ್ರ ಸರಕಾರ ಉನ್ನತ ಸಮಿತಿ ನೇಮಿಸಿರುವ ಈ ಹೊತ್ತಿನಲ್ಲಿ ಇತಿಹಾಸಕಾರರ ಅವಕೃಪೆಗೆ ಈಡಾಗಿರುವ ಈ ಯುದ್ಧಕ್ಕೆ ಮತ್ತೆ ಮಹತ್ವ ಬಂದಿದೆ. ಬ್ರಿಟಿಷರ ವಿರುದ್ಧ ಇಂಥ ಹಲವು ಯುದ್ಧಗಳನ್ನು ಕಂಡಿದ್ದ ನಮ್ಮ ರಾಜ್ಯಕ್ಕೂ, ನಮ್ಮ ಇತಿಹಾಸಕ್ತರಿಗೂ ಮೈಜುಂ ಎನಿಸುವ ಕಥನವಿದು.
courtesy: Graham Photo, Leamington Spa
*ಭಾಗ 2*
ನವ್ ಓವರ್ ಟು ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್…
ನವೆಂಬರ್ 1878ರ ಚಳಿಗಾಲದಲ್ಲಿ ಮಿ.ಡಾಮೆಂಟ್ ನಾಗಾ ಪರ್ವತಗಳ ಕೇಂದ್ರವನ್ನು ಸಮಗುಡ್ಟಿಂಗ್‌ನಿಂದ ಕೊಹಿಮಾಗೆ ಬದಲಿಸಿ ತನ್ನ ಸಿಬ್ಬಂದಿಯ ಜೊತೆಗೆ ಎರಡು ಬಿಡಾರಗಳನ್ನು ಹೂಡಿ ನೆಲೆ ನಿಂತರು. ಡಾಮೆಂಟ್ ಹತ್ತಿರ ಕಡಿಮೆ ಸಿಬ್ಬಂದಿ ಇದ್ದ ಕಾರಣ ಸುತ್ತಮುತ್ತಲಿನ ಹಳ್ಳಿಗಳ ಉಗ್ರ ನಾಗಾಗಳನ್ನು ಹತೋಟಿಯಲ್ಲಿಡುವಷ್ಟು ಶಕ್ತಿಯುತವಾಗಿರಲಿಲ್ಲ. ಇಲ್ಲಿಗೆ ಬರುವುದಕ್ಕಿಂತ ಮುಂಚೆ ಡಾಮೆಂಟ್ ಒಳ್ಳೆಯ ಬಲಶಾಲಿ ವ್ಯಕ್ತಿಯಾಗಿದ್ದು ಮಣಿಪುರದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಡಾ.ಬ್ರೌನ್ ಸತ್ತ ನಂತರ ಕೆಲ ತಿಂಗಳ ಕಾಲ ಅಲ್ಲಿಯೇ ರಾಜಕೀಯ ಏಜಂಟ್ ಆಗಿ ಕೆಲಸ ನಿರ್ವಹಿಸಿದ್ದರು. ಬ್ರೌನ್ ದೂಡ್ಡ ಮೇಧಾವಿಯಾಗಿದ್ದು ಅಸ್ಸಾಂನ ಪೂರ್ವ ಸರಿಹದ್ದಿನ ಬುಡಕಟ್ಟು ಭಾಷೆಗಳ ಬಗ್ಗೆ ಅಧ್ಯಯನ ನಡೆಸುಬಲ್ಲ ಏಕೈಕ ಪಂಡಿತರಾಗಿದ್ದರು. ಅದಕ್ಕಾಗಿ ಸಾಕಷ್ಟು ಅಧ್ಯಯನವನ್ನೂ ನಡೆಸಿದ್ದರು. ಆದರೆ ಅವರ ಆಕಾಲ ಮೃತ್ಯುವಿನಿಂದ ಭಾಷಾ ಅಧ್ಯಯನಕ್ಕೆ ದೂಡ್ಡ ನಷ್ಟ ಉಂಟಾಗಿತ್ತು.
ಆದರೆ, ಬ್ರೌನ್ ಬುಡಕಟ್ಟು ನಾಗಾಗಳ ತೊಂದರೆಗಳನ್ನು ನಿವಾರಿಸುವಲ್ಲಿ ಅಸಫಲರಾಗಿ ತೊಂದರೆಗಳನ್ನು ಅನುಭವಿಸುತ್ತಲೇ ಬಂದಿದ್ದರು. ಬ್ರೌನ್ ಸಿಬ್ಬಂದಿಗೆ ಸರಾಬರಾಜಾಗುತ್ತಿದ್ದ ಆಹಾರ ಧಾನ್ಯಗಳನ್ನು ನಾಗಾಗಳು ದಾರಿಯ ಮಧ್ಯದಲ್ಲಿಯೇ ದೋಚುತ್ತಿದ್ದರು. ಸಮಗುಡ್ಟಿಂಗ್‌ನಿಂದ ನಾಗಾ ಪರ್ವತಗಳ ಕೇಂದ್ರವನ್ನು ಸ್ಥಾಪಿಸುವಾಗಲೇ ನಾಗಾಗಳ ಜೊತೆಗೆ ಒಳ್ಳೆಯ ಸಂಬಂಧ ಬೆಳೆಸಿಕೊಂಡಿರಬೇಕಿತ್ತು. ಪಲಿತಾಂಶ, ನಾಗಾ ಜನರ ಕಾಡು ಕಾನೂನುಗಳ ನಡುವೆ ಬ್ರೌನ್ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದರು. ಡಾಮೆಂಟ್ ಮೊದಲಿಗೆ ಆಹಾರ ಧಾನ್ಯಗಳ ಸರಬರಾಜಿನ ಬಗ್ಗೆ ಚಿಂತೆಗೊಳಗಾದರು. ಮಣಿಪುರದ ಜನರು ಅಕ್ಕಿ ಹೊರಹೋಗುವುದನ್ನು ಮಣಿಪುರ ರಾಜರ ಎದುರಿಗೆ ವಿರೋಧಿಸಿದ್ದರು. ಕಾರಣ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕ್ಷಾಮ ಬಂದರೆ ಏನು ಮಾಡುವುದು ಎನ್ನುವ ಭೀತಿ ಅವರದ್ದಾಗಿತ್ತು. ಅದು ಸಹಜವಾಗಿಯೇ ಅವರ ಪದ್ಧತಿಯೂ ಆಗಿತ್ತು. ಇದರ ಬಗ್ಗೆ ಹೆಚ್ಚಾಗಿ ಒತ್ತಡ ಹೇರಲು ನಾನು ಇಷ್ಟಪಡಲಿಲ್ಲ. ಮಣಿಪುರ ರಾಜರು ನಮ್ಮ ಮೂಲಕ ಜನರ ವಿರೋಧವನ್ನು ಕಟ್ಟಿಕೊಳ್ಳುವುದು ಸರಿ ಇಲ್ಲ ಎನಿಸಿ ಸುಮ್ಮನಾಗಿದ್ದೆ. 1879 ಸೆಪ್ಟೆಂಬರ್‌ನಲ್ಲಿ ಡಾಮೆಂಟ್ ಸಿಬ್ಬಂದಿಗೆ ಆಹಾರವಸ್ತುಗಳ ಪೂರ್ಣ ಕೊರತೆ ಉಂಟಾಗಿರುವುದಾಗಿ ಊಹೆಗಳು ಹುಟ್ಟಿಕೊಂಡವು.
ಡಾಮೆಂಟ್ ಅವರಿಗೆ ಒಂದು ಪತ್ರ ಬರೆದು ಆಹಾರವಸ್ತುಗಳ ಕೊರೆತ ಇದ್ದರೆ ತಿಳಿಸಿ, ಸಾಧ್ಯವಾದಷ್ಟು ಕಳುಹಿಸುತ್ತೇನೆ ಎಂದು ಪತ್ರ ಬರೆದೆ. ಆದರೆ ಅದಕ್ಕೆ ಯಾವುದೇ ಉತ್ತರ ಬರಲಿಲ್ಲ. ಆ ಪತ್ರ ಅವರಿಗೆ ತಲುಪಲೇ ಇಲ್ಲ ಎಂದು ಆ ನಂತರ ತಿಳಿಯಿತು. ನಾಗಾಗಳ ಒಂದು ಬಲಶಾಲಿ ಬುಡಕಟ್ಟಾದ ಅಂಗಾಮಿಗಳು ಭಾರಿ ಚಾಕಚಕ್ಯತೆ ಉಳ್ಳವರಾಗಿದ್ದು ಅವರು ಏನಾದರೂ ತೊಂದರೆ ಮಾಡುವರು ಎನ್ನುವ ಸಂದೇಹ ನನ್ನನ್ನು ಕಾಡುತ್ತಲೇ ಇತ್ತು. ನಾಗಾಗಳಲ್ಲಿ ಹಲವು ಉಪ ಬುಡಕಟ್ಟುಗಳಿವೆ. ಇದೆ ಸಮಯದಲ್ಲಿ ದೂರದಲ್ಲಿದ್ದ ನನ್ನ ಪತ್ನಿಯ ಆರೋಗ್ಯ ತೀರ ಹದಗೆಟ್ಟಿತ್ತು. ಎರಡು ಮೂರು ಸಲ ಜ್ವರದಿಂದ ಬಹಳವಾಗಿ ಬಳಲಿ ಶಕ್ತಿಗುಂದಿದ್ದಳು. ಯಾವುದೇ ವೈದ್ಯಕೀಯ ಸವಲತ್ತುಗಳು ಇಲ್ಲದ ದೂರದ ಪರ್ವತ ಪ್ರದೇಶಗಳಲ್ಲಿ ಇದ್ದುಕೊಂಡು ಇನ್ನಾವುದೋ ಪ್ರದೇಶದಲ್ಲಿ ಪತ್ನಿ ಮಕ್ಕಳು ಆರೋಗ್ಯವಿಲ್ಲದೆ ನರಳುವುದು ಎಂತಹವರನ್ನು ಧೃತಿಗೆಡಸಿಬಿಡುತ್ತದೆ.
ಅಕ್ಟೋಬರ್ 21ರಂದು ಬೆಳಗ್ಗೆ ಮಣಿಪುರದ ಗಡಿಕಾವಲು ಮಾವೋತನ್ಹಾದಿಂದ ಒಂದು ಗಾಳಿ ಸುದ್ದಿ ಬಂದಿತ್ತು. ನಾಗಾ ಪರ್ವತಗಳ ಗಡಿಯಲ್ಲಿನ ಮೆಜುಮಾ ನಾಗಾಗಳು, ಕೊಹಿಮಾದಲ್ಲಿರುವ ಬ್ರಿಟಿಷರು ಅಥವಾ ಇನ್ನೆಲ್ಲೊ ಇರುವ 100 ಜನರನ್ನು ಕೊಂದಿರುವುದಾಗಿ ಮಾವೋತನ್ಹಾದಲ್ಲಿದ್ದ ಅಧಿಕಾರಿಗೆ ಸುದ್ದಿ ತಲುಪಿತ್ತು. ಕೊಹಿಮಾದಲ್ಲಿರುವ ಡಾಮೆಂಟರ ಪರಿಸ್ಥಿತಿ ಏನಾಗಿದೆಯೋ ಎನ್ನುವ ಕುತೂಹಲ ನನ್ನನ್ನು ಕಾಡತೊಡಗಿತ್ತು. ಒಟ್ಟಿನಲ್ಲಿ ಏನೋ ಅನಾಹುತ ನಡೆದಿರುವುದಾಗಿ ನನ್ನ ಮನಸ್ಸು ಹೇಳುತ್ತಿತ್ತು. ಮಣಿಪುರ ರಾಜರ ಸೈನ್ಯದ ಮೇಜರ್ ತಂಕಲ್ ಜೊತೆಗೆ ‘ಶೇಕಡ 50ರಷ್ಟು ಗಾಳಿ ಸುದ್ದಿಯನ್ನು ತೆಗೆದು ಹಾಕಿದರೂ ಕೊಹಿಮಾದಲ್ಲಿರುವ ಬಲಹೀನ ಗ್ಯಾರಿಸನ್ ಮೇಲೆ ನಾಗಾಗಳು ನಿಜವಾಗಿಯೆ ದಾಳಿ ಮಾಡಿರಬಹುದು ಎಂದುಕೊಂಡೆ.
ಸಂಖ್ಯೆ 34 ಬಿ.ಐ.ಬಟಾಲಿಯನ್ ಸೈನಿಕರ ಜೊತೆಗೆ ಕಛಾರ್ (ಅಸ್ಸಾಂ ರಾಜ್ಯದ ಒಂದು ಪಟ್ಟಣ) ಕಡೆಗೆ ಹೋಗುತ್ತಿದ್ದ ಫ್ರಾಂಟಿಯರ್ ಪೊಲೀಸ್‌ರ ಒಂದು ತುಕಡಿಯನ್ನು ನನ್ನ ಜೊತೆಗೆ ಸೇರಿಸಿಕೊಂಡೆ. ಮಣಿಪುರದ ಮಹಾರಾಜರಿಗೆ 900 ಮಣಿಪುರಿಗಳನ್ನು ಮತ್ತು ನಮ್ಮ ಸಾಮಾನುಗಳನ್ನು ಒಯ್ಯಲು ಕೂಲಿಯಾಳುಗಳನ್ನು ಕಳುಹಿಸಿಕೊಡುವಂತೆ ಹೇಳಿ, ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು ಅವರು ಬರುವುದನ್ನೇ ಕಾಯುತ್ತಿದ್ದೆ. ಅವರು ದೂರ ದೂರದ ಹಳ್ಳಿಗಳಿಂದ ಇಂಫಾಲ್’ಗೆ ಬಂದು ಅಲ್ಲಿಂದ ಬರಬೇಕಾಗಿದ್ದರಿಂದ ಬೇಗನೆ ಬರಲಿಲ್ಲ. ಮರುದಿನ ಬೆಳಗ್ಗೆ ತಂಕಲ್ ಮೇಜರ್ ಬಂದು ಎರಡು ಪತ್ರಗಳನ್ನು ನೀಡಿದರು. ಒಂದು ಪತ್ರ ಕವ್ವಲೆ, ನಾಗಾ ಪರ್ವತಗಳ ರಾಜಕೀಯ ಏಜಂಟ್‌ರದ್ದು, ಮತ್ತೊಂದು ಜಿಲ್ಲಾ ಸೂಪರಿಂಡೆಂಟ್ ಅವರದ್ದಾಗಿತ್ತು. ಎರಡೂ ಪತ್ರಗಳಲ್ಲಿ ಖೋನೊಮಾ (ಹಳ್ಳಿಯ ಹೆಸರೂ ಕೂಡ) ನಾಗಾಗಳು ಡಾಮೆಂಟರನ್ನು ಹತ್ಯೆ ಮಾಡಿದ ವಿಷಯವಿತ್ತು. ಡಾಮೆಂಟ್ ಮತ್ತು ಅವರ ಬ್ರಿಟಿಷ್ ಸೈನ್ಯವನ್ನು ಹಲವು ನಾಗಾ ಹಳ್ಳಿಗಳ ಉಗ್ರರು ಒಟ್ಟುಗೂಡಿ ಮುತ್ತಿಗೆ ಹಾಕಿ ಭಯಂಕರವಾಗಿ ರುಂಡಗಳನ್ನು ಚೆಂಡಾಡಿದ್ದರು.
ಈ ಘಟನೆ ನಡೆದ ಕೂಡಲೆ ಮಣಿಪುರದ ಮಹಾರಾಜರು ಬಂದು ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ತಿಳಿಸಿ ’ನಿಮ್ಮಲ್ಲಿ ಏನೇನಿದೆ?’ ಎಂದರು. ನನ್ನ ಹತ್ತಿರ 2000 ಸೈನಿಕರು ಇರುವುದಾಗಿ ತಿಳಿಸಿದೆ. ’ಅಷ್ಟು ಜನ ಬೇಕಾಗಿದೆ’ ಎಂದ ಅವರು ಮಾಮೂಲಿಯಂತೆ ಬಂದೂಕುಗಳಲ್ಲಿ 5 ಸುತ್ತು ಗುಂಡು ಸಿಡಿಸುವಂತೆ ಸೈನಿಕರಿಗೆ ಹೇಳಿದರು. ಅದು ಸುತ್ತಮುತ್ತಲಿನ ಹಳ್ಳಿಗಳ ಮುಖ್ಯಸ್ಥರು ರಾಜರ ಅರಮನೆ ಕಡೆಗೆ ತುರ್ತಾಗಿ ಬರುವ ಸಂದೇಶವಾಗಿತ್ತು. ಎಲ್ಲವನ್ನು ನಿರ್ಣಯಿಸಿದ ಮೇಲೆ ಕೊಹಿಮಾ ಕಡೆಗೆ ಹೊರಡಲು ತೀರ್ಮಾನ ತೆಗೆದುಕೊಳ್ಳಲಾಯಿತು. ಸಾಮಾನುಗಳನ್ನು ಹೊತ್ತುಕೊಂಡು ಹೋಗಲು ಕೂಲಿ ಆಳುಗಳು ದೊರಕುವುದೇ ದೊಡ್ಡ ಕೆಲಸವಾಗಿದ್ದು ಅಂತಹವರನ್ನು ಹುಡುಕಿ ಪರ್ವತ ಪ್ರದೇಶಗಳಿಂದ ಕರೆಸಿಕೊಳ್ಳಬೇಕಾಗಿತ್ತು. ಒಬ್ಬ ವಿಶೇಷ ದೂತನನ್ನು ಕಛಾರ್‌ಗೆ ಕಳುಹಿಸಿ ಅಲ್ಲಿಂದ ಹೆಚ್ಚು ಸೈನಿಕರು ಮತ್ತು ವೈದ್ಯರನ್ನು ಕಳುಹಿಸುವಂತೆ ವಿನಂತಿಸಿಕೊಂಡೆ. ರಸ್ತೆಯ ಉದ್ದಕ್ಕೂ ಬೇಕಾದ ಅನುಕೂಲಗಳನ್ನು ಮಾಡುವಂತೆ ಮತ್ತು 200 ಮಣಿಪುರಿಗಳನ್ನು ಕಳುಹಿಸಿ ಕೊಹಿಮಾಗೆ ಹೋಗುವ ಅರಣ್ಯ ದಾರಿಯಯಲ್ಲಿನ ಗಿಡಮರಗಳನ್ನು ಕಡಿದು ದಾರಿಯನ್ನು ಮಾಡುವಂತೆ ಕಳುಹಿಸಿದೆ. ಮೆಜುಮಾ ಹಳ್ಳಿಯ ಜನರು ಡಾಮೆಂಟರ ಹತ್ಯೆಯಲ್ಲಿ ಪಾಲ್ಗೊಳ್ಳಲಿಲ್ಲವೆಂದು ತಿಳಿದಿದ್ದರೂ ಹಳ್ಳಿಗೆ ದೂರದಿಂದಲೇ ಹೋಗಲು ಯೋಚಿಸಿದ್ದೆ.
ಒಳಗೊಳಗೆ ಮನಸ್ತಾಪ ಸೃಷ್ಟಿ
ನಂಬಿಕೆಯ ಒಬ್ಬ ದೂತನನ್ನು ಕಳುಹಿಸಿ ಮೊಜುಮಾ ಹಳ್ಳಿಗರನ್ನು ಯಾವುದರಲ್ಲೂ ತಲೆಯಾಕದೆ ತಟಸ್ಥರಾಗಿ ಇರುವಂತೆ ತಿಳಿಸಿದೆ. ನಾಗಾ ದ್ವಿಭಾಷಿ ದೂತ ಪಠಾಕಿಯನ್ನು ಕೊಹಿಮಾಗೆ ಕಳುಹಿಸಿ ಅಲ್ಲಿನ ಏಳು ನಾಗಾ ಬುಡಕಟ್ಟು ಜನಾಂಗಗಳ ನಡುವೆ ಒಳಗೊಳಗೆ ಮನಸ್ತಾಪಗಳನ್ನು ಸೃಷ್ಟಿಸಿ ನಮ್ಮ ಮೇಲೆ ಒಟ್ಟಾಗಿ ತಿರುಗಿಬೀಳದಂತೆ ಏರ್ಪಾಟು ಮಾಡಿದೆ. ಈ ವಿಷಯವನ್ನು ಬಹಳ ಗುಪ್ತವಾಗಿ ನಡೆಸಿದ್ದೆ. ಪಠಾಕಿ ಕೊಹಿಮಾಗೆ ಹೋಗಲು ಒಂದು ಸಣ್ಣ ಕುದುರೆ (ಪೋನಿ)ಯನ್ನು ಕೊಟ್ಟು ಕೈಯಲ್ಲಿ ಕವ್ವಲೆಗೆ ಒಂದು ಪತ್ರವನ್ನು ಕೊಟ್ಟೆ. ಕುದುರೆ ಹೋಗುವವರೆಗೆ ಅದರ ಮೇಲೆ ಸವಾರಿ ಮಾಡಿ ಆ ನಂತರ ಕಾಲು ನಡುಗೆಯಲ್ಲಿ ಜಾಗರೂಕತೆಯಿಂದ ಹೋಗುವಂತೆ ಹೇಳಿದೆ.
ಪಠಾಕಿಗೆ ಎರಡು ಕಾರ್ಯಗಳನ್ನು ಗುಪ್ತವಾಗಿ ನಡೆಸಿದರೆ 200 ರೂ. ಬಹುಮಾನ ನೀಡುವುದಾಗಿ ಪ್ರಮಾಣ ಮಾಡಿದೆ. ಪತ್ರದಲ್ಲಿ ಕವ್ವಲೆಗೆ ನಾನು ಸೈನ್ಯದೊಂದಿಗೆ ಬರುವುವರೆಗೂ ಹೇಗಾದರು ಮಾಡಿ ತಡೆದುಕೊಳ್ಳುವಂತೆ ವಿನಂತಿಸಿಕೊಂಡಿದ್ದೆ. ಒಂದು ವರ್ಷದ ಹಿಂದೆ 1000 ಮನೆಗಳಿರುವ ವಿಶ್ವೇಮಾ ಹಳ್ಳಿಯಂದ ಒಬ್ಬ ದೃಢಕಾಯ ಯುವಕ ಕೆಲಸ ಕೇಳಿಕೊಂಡು ನನ್ನಲ್ಲಿಗೆ ಬಂದಿದ್ದ. ಈ ಯುವಕ ಯಾವತ್ತಾದರೂ ಒಂದು ದಿನ ಕೆಲಸಕ್ಕೆ ಬರುವನೆಂದು ನನ್ನ ಹತ್ತಿರ ಸೇರಿಸಿಕೊಂಡಿದ್ದೆ. ಕೊಹಿಮಾಗೆ ಹೋಗುವ ದಾರಿಯಲ್ಲಿದ್ದ ವಿಶ್ವೇಮಾ ಹಳ್ಳಿಗೆ ಆತನನ್ನು ಕಳುಹಿಸಿ ಅವರನ್ನು ತಟಸ್ಥರಾಗಿರುವಂತೆ ಮತ್ತು ತಲೆಯಾಕಿದರೆ ತೊಂದರೆ ಅನುಭವಿಸುವುದಾಗಿ ಎಚ್ಚರಿಕೆ ನೀಡಿದೆ.
ಒತ್ತಡ ಮತ್ತು ಸವಾಲುಗಳು
ನಮ್ಮ ಸೈನ್ಯಕ್ಕೆ ನಾಯಕ್ ಶ್ರೇಣಿಯ ಬಲ್‌ದೇವ್ ಆಸ್ಪತ್ರೆಯಿಂದ ಆಗ ತಾನೇ ಬಂದಿದ್ದರೆ, ನಾರಾಯಣ್ ಸಿಂಗ್ ಎಂಬ ಜಾಟ್ ಯೋಧನೂ ಇದ್ದ. ಆತ 35ನೇ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸಿದ್ದು, ಮಿಲಿಟರಿ ಕಾನೂನು ಉಲ್ಲಂಘಿಸಿದ ಕಾರಣದಿಂದ ಅವನನ್ನು ತೆಗೆದು ಹಾಕಲಾಗಿತ್ತು. ನಾರಾಯಣ್ ಸಿಂಗ್ 120 ಸುತ್ತಿನ ಸಿಡಿಮದ್ದನ್ನು ಒಬ್ಬನೇ ಹೊರುತ್ತಿದ್ದು ಅದು ಅವನ ಸಹಸೈನಿಕರು ಹೊರುತ್ತಿದ್ದ ತೂಕಕ್ಕಿಂತ ಮೂರು ಪಟ್ಟು ಹೆಚ್ಚಾಗಿರುತ್ತಿತ್ತು. ನನ್ನ ಅಂಗರಕ್ಷರ ಪಡೆಯ ಜೊತೆಗೆ ಮಣಿಪುರದ ಜನರನ್ನು ತಂಕಲ್ ಮೇಜರ್ ಅವರೊಂದಿಗೆ ಕಳುಹಿಸಿ ಉಳಿದ ಎಲ್ಲಾ ಸೌಕರ್ಯಗಳ ಜೊತೆಗೆ ಆಹಾರ ಧಾನ್ಯಗಳನ್ನು ಅವಣಿಸತೊಡಗಿದೆ. ನನ್ನ ಜೊತೆಗೆ ಬರಲು ಇಚ್ಚಿಸುವ ಯಾರನ್ನೂ ಬಿಡದೆ ಎಲ್ಲರನ್ನೂ ಜೊತೆಗೆ ಕರೆದುಕೊಂಡೆ.
ನನ್ನ ಜೊತೆಗೆ ಬರಬೇಕಾಗಿರುವ ಇನ್ನೂ 40 ಜನರು ಮೈಯಾಂಗ್ ಖಾಂಗ್ ತಲುಪಿದ ವಿಷಯ ನನಗೆ ತಲುಪಲಿಲ್ಲ. ಜನರಲ್ ಸ್ಟೂವಟ್’ಬೈಲಿಗೆ ಟೆಲಿಗ್ರಾಮ್ ಕಳುಹಿಸಿ ಅವರು ಬಂದರೆ ಆಹಾರ ಮತ್ತು ತಂಗಲು ವ್ಯವಸ್ಥೆ ಮಾಡುವಂತೆ ತಿಳಿಸಿದ್ದೆ. ರಾತ್ರಿ 11 ಗಂಟೆಗೆ ನಾನು ಹಾಸಿಗೆಗೆ ಹೋಗುವವರೆಗೂ 34ನೇ ಪಡೆ ಬಂದಿರಲಿಲ್ಲ. ನನ್ನ ಪತ್ನಿ ಇನ್ನಷ್ಟು ನಿಶ್ಯಕ್ತಳಾಗಿದ್ದಳು. ಒಂದು ಸಮಾಧಾನದ ವಿಷಯವೆಂದರೆ ಆಕೆಯ ಸಹೋದರಿ ಇಂಗ್ಲೆಂಡಿನಿಂದ ಬಂದಿದ್ದಳು. ನಾನು ಮನೆ ಬಿಡುವಾಗ ನನ್ನ ಕೊನೆ ಮಗ ಆರ್ಥರ್ ನನ್ನ ಕಡೆಗೆ ಎರಡು ಕೈಗಳನ್ನು ಚಾಚಿದ್ದ. ನನ್ನ ಆಲೋಚನೆಗಳನ್ನೆಲ್ಲ ಕ್ಷಣ ಕಾಲ ಮರೆತು ಅವನನ್ನು ನನ್ನ ಎದೆಗೆ ಅವಿಚಿಕೊಂಡಿದ್ದೆ. ಅದೇ ಕೊನೆ ಅವನನ್ನು ನೋಡಿದ್ದು. ದುಃಖದಿಂದ ಅವನಿಂದ ಬೇರ್ಪಟ್ಟಿದ್ದೆ. ಆದರೆ ಮರುಕ್ಷಣದಲ್ಲಿಯೇ ಎಲ್ಲವನ್ನೂ ಮರೆತು ಮತ್ತಷ್ಟು ಧೈರ್ಯದಿಂದ ದೇಶಕ್ಕಾಗಿ ತ್ಯಾಗ ಮಾಡಲು ಹೊರಟಿದ್ದೆ. ಮತ್ತೆ ತಿರುಗಿಬರುವಾಗ ಎಲ್ಲವೂ ಸರಿ ಇರುತ್ತದೆ ಎನ್ನುವ ಆಶಾಭಾವನೆ ಕ್ಷಣಕಾಲ ನನ್ನ ಮನಸ್ಸಿನಲ್ಲಿ ಮೂಡಿ ಮಾಯವಾಗಿತ್ತು.
photos COURTESY: Wikipedia
**
ಭಾಗ 3: ನಿರೀಕ್ಷಿಸಿ
***
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.