Obituary
ಮಾರ್ಚ್‌ನಲ್ಲಿ ರಾಜ್ಯಕ್ಕೆ ಕೋವಿಡ್ ಕಾಲಿಟ್ಟು ಕಲ್ಬುರ್ಗಿಯಲ್ಲಿ ಒಂದು ಸಾವಾಗುತ್ತಿದ್ದಂತೆಯೇ ಮರಣ ಮೃದಂಗ ಶುರುವಾಯಿತಾ? ದೇಶದ ಉದ್ದಗಲಕ್ಕೂ ವೈರಸ್ ಸದ್ದು ಮಾಡಿದಷ್ಟು ತೀವ್ರವಾಗಿ ಆಗುತ್ತಿದ್ದ ಸಾವುಗಳೂ ಸದ್ದು ಮಾಡಿದವು. ಮೀಡಿಯಾದಲ್ಲಿ ಸೋಂಕಿತರ ಸಂಖ್ಯಾಬಲದ ಮುಂದೆ ಸೂತಕದ ಸುದ್ದಿಗಳು ಜೋರೇ ಇದ್ದವಾದರೂ ಸಾವಿನ ಭಯ ಆಗಿಗಿಂತಲೂ ಈಗ ಹೆಚ್ಚೇ ಆಗಿಬಿಟ್ಟಿದೆ.
ಕಾರಣವಿಷ್ಟೇ, ಈಗ ಸಾವಿಗೂ ಧಾವಂತವೂ ಹೆಚ್ಚಾಗಿದೆ. ಹಿಂದೆಂದಿಗಿಂತ ಆತುರ ಜಾಸ್ತಿಯಾಗಿದೆ. ಮೊನ್ನೆ ಅಶೋಕ್ ಗಸ್ತಿ, ಇವತ್ತು ಸುರೇಶ್ ಅಂಗಡಿ. ನಡುವೆ ಎಷ್ಟೋ ಜನರು, ನಾಯಕರು ಆಗಿಹೋದರು. ಗಣ್ಯರ ಯಾದಿ ನೆನಪಿನಲ್ಲಿದ್ದರೆ, ಸಾವಿನ ಸೆಳೆತಕ್ಕೆ ಸಿಲುಕಿ ಹೊರಟುಹೋದ ಅಜ್ಞಾತಿಗಳ ಸಂಖ್ಯೆ ಅದೆಷ್ಟೋ.. ಸದಾ ಹಸನ್ಮುಖದ ಸುರೇಶ್ ಅಂಗಡಿಯವರ ಅಗಲಿಕೆಯೊಂದಿಗೆ ಅದು ತಾರಕಸ್ಥಾಯಿಗೆ ಬಂದು ನಿಂತಿದೆ. ಇದೆಂಥಾ ಸಾವು ಎಂದು ಎಲ್ಲರೂ ದಿಗ್ಭ್ರಮೆಯಿಂದ ನೋಡುವಂತಾಗಿದೆ.
ಗಸ್ತಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದ ಅಂಗಡಿ.
ಇನ್ನು, ಬಿಜೆಪಿಗೇ ಏಕೆ ಹೀಗೆ ಆಗುತ್ತಿದೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಸಾವುಗಳ ಪೆಟ್ಟು ಅದಕ್ಕೆ ಇನ್ನಿಲ್ಲದ ಆಘಾತವನ್ನೇ ನೀಡುತ್ತಿದೆ. ಕೋವಿಡ್ ಬರುವ ಮುನ್ನವೇ ಅನಂತ ಕುಮಾರ್ ಹೋಗಿಬಿಟ್ಟರು. ಮೊನ್ನೆ, ಅಂದರೆ ಸೆಪ್ಟೆಂಬರ್ 17ಕ್ಕೆ ಅಶೋಕ್ ಗಸ್ತಿ ತೀರಿಕೊಂಡಾಗಲೇ ಆತುರಗೆಟ್ಟ ಸಾವಿನ ಬಗ್ಗೆ ಎಲ್ಲರೂ ಮಾತನಾಡಿದ್ದುಂಟು. ಜೂನ್ 26ರಂದು ಹೊಸ ಕನಸುಗಳೊಂದಿಗೆ ತಮ್ಮ ರಾಜಕೀಯ ಬದುಕಿನ ಸವೆತದಲ್ಲಿ ಕಾರ್ಯಕರ್ತನ ಮಟ್ಟದಿಂದ ಲೀಡರ್ ಲೆವೆಲ್‌ಗೆ ಬಡ್ತಿ ಪಡೆದಿದ್ದ ಗಸ್ತಿ ಅವರ ಸಾವು ಅನಿರೀಕ್ಷಿತ ಹಾಗೂ ಅನಪೇಕ್ಷಿತ. ಈಗ ಸುರೇಶ್ ಅಂಗಡಿ ನಿಧನವು ಹೀಗೆಯೇ ಎಲ್ಲರನ್ನೂ ಅತೀವವಾಗಿ ಕಾಡುತ್ತಿದೆ. ಕೊವಿಡ್ ವೈರಸ್‌ಗೆ ಸಿಕ್ಕಿ ದಿಲ್ಲಿಯ ಏಮ್ಸ್ ಸೇರಿಕೊಂಡ ಅವರು ಗುಣವಾಗಿ ಮನೆಗೆ ಬರುತ್ತಾರೆಂದೇ ನಂಬಿಕೊಂಡಿದ್ದ ಎಲ್ಲರಿಗೂ ನಿರಾಶೆ ಮೂಡಿಸಿ ತಮ್ಮ ಬದುಕಿನ ಅಂಗಡಿಗೆ ಶಾಶ್ವತ ಕದ ಎಳೆದುಬಿಟ್ಟಿದ್ದಾರೆ ಅಂಗಡಿ. ಗಸ್ತಿ ನಿಧನಕ್ಕೆ ಆಘಾತೊಂಡಿದ್ದ ಅಂಗಡಿ ತಾವೇ ದೊಡ್ಡ ಆಘಾತ ಕೊಟ್ಟುಹೋಗಿದ್ದಾರೆ.
2019, ಮೇ ತಿಂಗಳಲ್ಲಿ ನರೇಂದ್ರ ಮೋದಿ ಅವರ ಸಂಪುಟದ ಪ್ರಮಾಣ ಸ್ವೀಕಾರ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ಖುಷಿ ಕೊಟ್ಟಿತ್ತು. ಕ್ಯಾಬಿನೆಟ್‌ನಲ್ಲಿ ಪರವಾಗಿಲ್ಲ ಎನ್ನುವಷ್ಟು ಪಾಲೂ ಸಿಕ್ಕಿತ್ತು. ಪ್ರಹ್ಲಾದ ಜೋಶಿ ಮತ್ತು ಸದಾನಂದ ಗೌಡರ ಜತೆಯಲ್ಲೇ ಅಂಗಡಿಯವರು ಪ್ರಮಾಣ ಸ್ವೀಕಾರ ಮಾಡಿದಾಗ ಕರ್ನಾಟಕಕ್ಕೆ ಆಗಿದ್ದ ಸಂತೋಷ ಕಮ್ಮಿಯೇನಲ್ಲ. ಅದರಲ್ಲೂ ಹುಬ್ಬಳ್ಳಿಗೊಂದು, ಬೆಳಗಾವಿಗೊಂದು ಮಂತ್ರಿಗಿರಿ ಸಿಕ್ಕಿದಾಗ ನಮ್ಮ ಭರವಸೆಗಳೂ ಗರಿಗೆದರಿದ್ದವು. ಅಂಗಡಿಯವರಿಗೆ ರೈಲ್ವೆ ರಾಜ್ಯ ಖಾತೆ ಸಿಕ್ಕಿದಾಗ ಉತ್ತರ ಕರ್ನಾಟಕದ ನಿರೀಕ್ಷೆಗಳಿಗೆ ರೆಕ್ಕೆ ಬಂದಿತ್ತಲ್ಲದೆ, ಆ ನಿರೀಕ್ಷೆಯನ್ನು ಸುರೇಶ್ ಹುಸಿ ಮಾಡಲಿಲ್ಲ. ಅನುಭವದಲ್ಲಿ ಪ್ರಹ್ಲಾದ ಜೋಶಿ ಅವರಿಗೆ ಸಮಾನರಾದರೂ ಕ್ಯಾಬಿನೆಟ್ ದರ್ಜೆ ಸಿಗದ್ದಕ್ಕೆ ಚಕಾರ ಎತ್ತಿದವರಲ್ಲ. ಬದಲಿಗೆ ಕೆಲಸಕ್ಕೆ ಒತ್ತು ನೀಡಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಮರುಜೀವ ನೀಡಿದರು. ಹೀಗಾಗಿ ಬೆಂಗಳೂರು-ಬೆಳಗಾವಿ ನಡುವೆ ಸೂಪರ್‌ಫಾಸ್ಟ್ ರೈಲು ಬಂತು. ಕಿಸಾನ್ ರೈಲು ಹಳಿಗೆ ಹತ್ತಿತು. ಐತಿಹಾಸಿಕ ನಗರ ವಿಜಯಪುರ ಮತ್ತು ಕರಾವಳಿ ನಗರ ಮಂಗಳೂರಿಗೆ ನೇರ ರೇಲೂ ಬಂತು. ಜತೆಗೆ ಉತ್ತರ ಕರ್ನಾಟಕದಲ್ಲಿ ಮಕಾಡೆಬಿದ್ದು ಧೂಳು ತಿನ್ನುತ್ತಿದ್ದ ಅಷ್ಟೂ ರೈಲ್ವೆ ಯೋಜನೆಗಳ ಫೈಲುಗಳ ಜಡತ್ವ ಬಿಡಿಸಿ ಅವೆಲ್ಲಕ್ಕೂ ಜೀವ ತುಂಬಿದ್ದರು ಅಂಗಡಿ.
ನಾಲ್ಕು ಸಲ ಗೆದ್ದಿತ್ತು ಸಂಸ್ಕಾರ
ನಿಜ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಗಟ್ಟಿ ತಳಪಾಯವಿದೆ. ಅದಕ್ಕೆ ಅನೇಕರು ಕಾರಣ, ಸುರೇಶ್ ಅಂಗಡಿಯೂ ಸೇರಿ. ಒಂದು ಕಾಲದಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ಅಬೇಧ್ಯ ಕೋಟೆಯಾಗಿದ್ದ ಗಡಿ ಜಿಲ್ಲೆಯಲ್ಲಿ ಇತ್ತ ಸಾಹುಕಾರ ಮನೆತನದ ಆಕ್ರಮಣಕಾರಿ ಪಾಲಿಟಿಕ್ಸ್, ಸಕ್ಕರೆ ಕಾರ್ಖಾನೆಗಳ ಮಾಲೀಕರ ಒಳಪ್ರಭಾವ, ಸಹಕಾರಿಗಳ ಅಸಹಕಾರ, ಇದರ ಜತೆಗೆ ಮರಾಠಿಗಳ ಕಿರಿಕಿರಿ ರಾಜಕೀಯದ ನಡುವೆ ಅಂಗಡಿ ನಾಲ್ಕು ಅವಧಿಗೆ ಲೋಕಸಭೆಗೆ ಗೆದ್ದುಹೋಗಿದ್ದರು. ಅವರ ಪಕ್ಷ ಗೆದ್ದು ಬೀಗಿತು ಎನ್ನುವುದಕ್ಕಿಂತ ಅಂಗಡಿ ಸಂಸ್ಕಾರಕ್ಕೇ ಗೆಲುವಾಗಿತ್ತು ಎನ್ನುವುದೇ ಸರಿ. ಅವರ ಒಳ್ಳೆಯತನಕ್ಕೆ ಬೆಳಗಾವಿಯಲ್ಲಿ ಪಕ್ಷಗಳಿಗೆ ಮೀರಿದ ಸೆಳೆತವಿತ್ತು. ಇಷ್ಟೇ ಸಾಕಿತ್ತು ಅವರ ಏಳಿಗೆಗೆ. ರಾಜಕೀಯದ ಗಂಧವೂ ಇಲ್ಲದೆ ತಮ್ಮ ಪಾಡಿಗೆ ವ್ಯಾಪಾರ ಮಾಡಿಕೊಂಡಿದ್ದ ಅವರ ಸತತ ಗೆಲುವನ ರಹಸ್ಯ ಅಂತ ಏನೂ ಇರಲಿಲ್ಲ. ಯಾವುದೇ ವ್ಯಸನವಿಲ್ಲದ ಬಿಳಿಹಾಳೆಯಂಥ ಜೀವನ, ರಾಜಕೀಯದಲ್ಲೂ ಸಣ್ಣ ಕಪ್ಪುಚುಕ್ಕೆ ಇಲ್ಲದ ಕರಿಯರ್ ಅವರದ್ದು ಮಾತ್ರವಾಗಿತ್ತು.
ಈ ಕಾರಣಕ್ಕೆ ಅಂಗಡಿಯರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಗರಿಗೆದರಿ ಕೂತಿದ್ದವು. ಕೇಂದ್ರದಲ್ಲಿ ಅವರು ಕ್ಯಾಬಿನೆಟ್ ದರ್ಜೆಗೇರುವ ದಿನವೂ ದೂರವಿರಲಿಲ್ಲ ಎನಿಸುತ್ತದೆ. ಅಂಗಡಿಯವರ ಕೆಲಸಗಾರಿಕೆ ಮೋದಿ ಅವರಿಗೂ ಹಿಡಿಸಿತ್ತು ಎಂಬುದು ಬಿಜೆಪಿಯಲ್ಲಿ ಎಲ್ಲರೂ ಮಾತನಾಡುವ ಸಂಗತಿಯೇ ಆಗಿತ್ತು. ಯಡಿಯೂರಪ್ಪ ಅವರ ನಂತರ ಯಾರು ಎನ್ನುವ ಯಾದಿಯಲ್ಲೂ ಅವರ ಹೆಸರಿತ್ತು. ಅಗಲಿದ ನಾಯಕನನ್ನು ನೆನಪು ಮಾಡಿಕೊಂಡು ರಾಜ್ಯ ರಾಜಕಾರಣ ಭಾರದ ಹೆಜ್ಜೆಗಳನ್ನಿಡುತ್ತಿದೆ, ಅಂಗಡಿಯವರು ಇಟ್ಟುಹೋದ ಅಚ್ಚಳಿಯದ ಹೆಜ್ಜೆಗಳನ್ನು ನೋಡುತ್ತಿದೆ. ಈಗ ಆ ಹೆಜ್ಜೆಗಳಷ್ಟೇ ಮಾತನಾಡುತ್ತಿವೆ.
ದಿಲ್ಲಿಯಲ್ಲಿ ಕೆಲವರಷ್ಟೇ ಇದ್ದರು. ನಿಮಗೆ ಕೆಲಸ ಆಗೇಕಿದ್ದರೆ ದಿಲ್ಲಿಗೇ ಬನ್ನಿ ಎಂದು ಟಾಕುಠೀಕಾಗಿ ಹೇಳುವ ನಾಯಕರು, ಮತ್ತೂ ನೀವು ಇಲ್ಲಿವರೆಗೂ ಬರುವುದೇ ಬೇಡ. ನಿಮ್ಮ ಕೆಲಸ ಆಗುತ್ತದೆ. ನೆಮ್ಮದಿಯಾಗಿದ್ದುಬಿಡಿ ಎನ್ನುವವರು… ಅಂಗಡಿ ಎರಡನೇ ವರ್ಗಕ್ಕೆ ಸೇರಿದವರು. ರಾಜ್ಯದ ಕೆಲಸ, ಜನರ ಕೆಲಸ ಎಂದಾಗ ಕಂಕುಳಲ್ಲಿ ಫೈಲು ಸಿಕ್ಕಿಸಿಕೊಂಡು ದಿಲ್ಲಿ ಮಂತ್ರಿಗಳ ಅಂಗಳದಲ್ಲಿ ಅಲೆದಾಡಿದ್ದ ಅಂಗಡಿಯವರನ್ನು ಅನೇಕರು ನೋಡಿದ್ದಾರೆ. ಬೆಂಗಳೂರಿಗೆ ಬಂದಾಗಲೂ ರಾಜಕೀಯದಲ್ಲಿ ತಮಗಿಂತ ಅತಿ ಕಿರಿಯರಲ್ಲೂ ಬದ್ಧತೆ ತೋರಿ ಅವರಲ್ಲೂ ಕಾಯಕದ ದೀವಿಗೆ ಹಚ್ಚುತ್ತಿದ್ದರು ಅವರು.
ಅಂಗಡಿಯವರು ನಿಧನರಾದ ನಂತರ ಸಚಿವ ಸಿ.ಟಿ. ರವಿ ಹೀಗೆ ಟ್ವೀಟ್ ಮಾಡಿದ್ದರು.
“‘ಹಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ.”
ಸರಿ. ಹಾಗೆಂದು ಯಾರಲ್ಲಿ ದೂರುವುದು?
ಅಗಲಿದ ಅಂಗಡಿಯವರಿಗೆ ಪ್ರಣಾಮಗಳು.
Comments 1