lead Photo: wikipedia
ಕೋಲಾರದಿಂದ ಕಾರವಾರದವರೆಗೆ, ಚಾಮರಾಜನಗರದಿಂದ ಬೀದರ್‌ವರೆಗೆ ಜಿಲ್ಲೆ ಜಿಲ್ಲೆಗಳಲ್ಲಿ ಭಿನ್ನ-ವಿಭಿನ್ನ ಬೆಳೆಗಳನ್ನು ಬೆಳೆಯುವ ಕರ್ನಾಟಕದ ಪಾರಂಪರಿಕ ಕೃಷಿಯನ್ನು ಬುಡಮೇಲು ಮಾಡಲು ಸರಕಾರ ಹೊರಟಿದೆಯಾ? ಪರಸ್ಪರ ಸಹಕಾರ ತತ್ತ್ವದ ಮೇಲೆ ನಡೆಯುತ್ತಿದ್ದ #ಕೃಷಿಯನ್ನು ಈಗ ಬಂಡವಾಳಶಾಹಿಗಳ ಕಾರ್ಪೊರೇಟ್ ಕಾಂಪೌಂಡುಗಳೊಳಕ್ಕೆ ಸಿಕ್ಕಿಸಿ ವ್ಯವಸ್ಥಿತವಾಗಿ ಕೃಷಿ ಭೂಮಿಯನ್ನು ಉಳ್ಳವರಿಗೆ ಒಪ್ಪಿಸುವ ಷಡ್ಯಂತ್ರ ನಡೆಯುತ್ತಿದೆಯಾ? ಮಸೂದೆಗಳ ವಿರುದ್ಧ ಕರ್ನಾಟಕ ಬಂದ್ ನಡೆದ ಬೆನ್ನಲ್ಲೇ ಪ್ರಗತಿಪರ ಕೃಷಿಕ, ನೀರಾವರಿ ಹೋರಾಟಗಾರ ಆರ್.ಆಂಜನೇಯ ರೆಡ್ಡಿ ಸರಕಾರದ ಕಣ್ತೆರೆಸುವಂಥ ಲೇಖನ ಬರೆದಿದ್ದಾರೆ.
ಕೃಷಿ ಉದ್ಯಮವಾಗಬೇಕೇ ಹೊರತು, ಕೃಷಿ ಉದ್ಯಮಿಗಳ ಪಾಲಾಗಬಾರದು, ಕೃಷಿಭೂಮಿ ವ್ಯವಸಾಯಕ್ಕೆ ಮೀಸಲಾಗಬೇಕೇ ಹೊರತು, ಅನ್ಯರ ಪಾಲಾಗಬಾರದು. ನಮ್ಮ ರೈತರಿಗೆ ಬೇಕಿರುವುದು ಕೋ-ಆಪರೇಟಿವ್ ಕೃಷಿಯೇ ಹೊರತು ಕಾರ್ಪೊರೇಟ್ ಕೃಷಿಯಲ್ಲ..
ದಶಕಗಳ ಇತಿಹಾಸವಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಂದ ರೈತರು ಉದ್ಧಾರವಾದರಾ? ಈ ಕಾಯ್ದೆಗಳಿಂದ ರೈತರಿಗಾದ ಶೋಷಣೆಯ ಬಗ್ಗೆ, ಕಾಯ್ದೆಗಳಲ್ಲಿರುವ ನ್ಯೂನತೆಗಳ ಬಗ್ಗೆ ರಾಜಕೀಯ ಪಕ್ಷಗಳು ಎಂದಾದರೂ ದನಿ ಎತ್ತಿದ್ದವಾ? ಹೋಗಲಿ ಈಗಲಾದ್ರೂ ಕೃಷಿಕರ ಹಿತ ಕಾಯಲೆಂದೇ ತಂದ ಇಂಥ ಕಾಯ್ದೆಗಳ ಸಾಧಕ-ಭಾದಕಗಳ ಕುರಿತು ಔಚಿತ್ಯಪೂರ್ಣ ಆರೋಗ್ಯಪೂರ್ಣ ಚರ್ಚೆಗಳಾದವಾ? ರೈತರ ಹಿತವೇ ಮುಖ್ಯವಾದರೆ ಹಠಮಾರಿ ಧೋರಣೆಯೇಕೆ? ಯಾರಾದರೂ ಭೂಮಿ ಕೊಳ್ಳಬಹುದು, ಎಲ್ಲಾದರೂ ಕೃಷಿ ಉತ್ಪನ್ನ ಮಾರಿಕೊಳ್ಳಬಹುದು ಎಂಬ ವಿತಂಡವಾದದಿಂದ ಸಣ್ಣ ರೈತರಿಗೇನಾದರೂ ಲಾಭವಿದೆಯೇ? ಹೀಗೆ ಕಾಡುವ ಹತ್ತು ಹಲವು ಪ್ರಶ್ನೆಗಳೊಂದಿಗೆ ಈ ಲೇಖನ ಬರೆದಿದ್ದೇನೆ.
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾಗಬಹುದಾದ ಕೆಲ ಮಸೂದೆಗಳನ್ನು ʼಸುಗ್ರೀವಾಜ್ಞೆʼ ಎಂಬ ಜಾಣ ಅಸ್ತ್ರದೊಂದಿಗೆ ಜಾರಿಗೆ ಮಾಡಲೊರಟ ಸರಕಾರದ ವಿರುದ್ಧ ಕರ್ನಾಟಕ ಬಂದ್ ನಡೆದಿದೆ. ಅದು ಯಶಸ್ವಿಯೂ ಆಗಿದೆ, ಆದರೆ, ಇಂಥ ಮಹತ್ತ್ವದ ಕಾಯ್ದೆಗಳ ಜಾರಿ ಹೇಗಿರಬೇಕು? ಅದಕ್ಕೆಷ್ಟು ಪ್ರಾಮಾಣಿಕತೆ ಇರಬೇಕು? ಪೂರ್ವಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಹಾಗೂ ಜನಸಾಮಾನ್ಯರಿಗೆ ಸಮಗ್ರ ಮಾಹಿತಿ, ತಿಳುವಳಿಕೆ ನೀಡಬೇಡವೇ? ಹಾಗೆ ಯಾವುದೂ ಆಗಲಿಲ್ಲ. ಸರಕಾರ ನಮ್ಮದಿದೆ, ಸದನದಲ್ಲಿ ನಮಗೆ ಬಹುಮತವಿದೆ ಎಂಬ ಏಕೈಕ ಕಾರಣಕ್ಕೆ ತರಾತುರಿಯಲ್ಲಿ ಏಕಪಕ್ಷೀಯವಾಗಿ ಕಾಯ್ದೆಗಳನ್ನು ಹೇರುವ ಧಾವಂತ ನೋಡಿದರೆ, ಇವೆಲ್ಲಾ ತಿದ್ದುಪಡಿ, ಮಸೂದೆ ಹಿಂದೆ ಸರಕಾರವೊಂದೇ ಇಲ್ಲ, ಯಾವುದೋ ಅಗೋಚರ ಶಕ್ತಿಗಳು ಇವೆ ಎಂಬುದು ನನ್ನ ಬಲವಾದ ನಂಬಿಕೆ.
ಇಡೀ ಜಗತ್ತು ಕೋವಿಡ್‌ನಿಂದ ಹೈರಾಣಾಗಿದೆ. ಭಾರತಕ್ಕೂ ಅದರ ತೀವ್ರತೆ ತಟ್ಟಿದೆ. ಕರ್ನಾಟಕದ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಸಾವಿರ ಲೆಕ್ಕದಲ್ಲಿದ್ದ ಸೋಂಕಿತರು ಇದೀಗ ಲಕ್ಷೋಪಲಕ್ಷವಾಗಿದ್ದಾರೆ. ರಾಜ್ಯದ ಜನರೆಲ್ಲರೂ ಭಯಾನಕ ಕೊರೋನಾ ವೈರಸ್‌ನಿಂದ ಜೀವ ಉಳಿದರೆ ಸಾಕಪ್ಪ ಎಂಬ ಆತಂಕದ ಸ್ಥಿತಿಯಲ್ಲಿರುವಾಗ, ಸರಕಾರ ರೈತರ ಕತ್ತುಕುಯ್ಯುವ ಸುಗ್ರೀವಾಜ್ಞೆಗಳ ಆಟವಾಡುತ್ತಿದೆ. ಕೋವಿಡ್‌ಗಿಂತ ಕಾಯ್ದೆ ಮುಖ್ಯವೇ? ಯುದ್ಧದಂಥ ಪರಿಸ್ಥಿತಿ ಇದ್ದಾಗ ಸರಕಾರದ ಆದ್ಯತೆ ಏನಾಗಿರಬೇಕು? ಅದರ ಉತ್ತರದಾಯಿತ್ವ ಹೇಗಿರಬೇಕು?
ಈಗ ಹೇಗಾಗಿದೆ ಎಂದರೆ, ವಾದ ವಿವಾದವಷ್ಟೇ ನಡೆಯುತ್ತಿದೆ. ತಿದ್ದುಪಡಿ ಮಸೂದೆ ಪರ-ವಿರೋಧವಾಗಿ ಏರುದನಿಯಲ್ಲಿ ಮಾತನಾಡುತ್ತಿರುವವರಿಗೇನೂ ಕೊರತೆ ಇಲ್ಲ. ದೇಶದ ಶೇ.70ರಷ್ಟು ಜನ ಕೃಷಿ ಅವಲಂಭಿತ ರೈತರ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು, ಒಂದೇ ವೇದಿಕೆಯಲ್ಲಿ ಕೂತು ಅದಕ್ಕೊಂದು ಸರ್ವಸಮ್ಮತ ಸೂತ್ರ ಕಂಡುಕೊಳ್ಳಬೇಕಲ್ಲವೆ? ದೇಶದಲ್ಲಿ ಕೃಷಿ ಕ್ಷೇತ್ರವನ್ನು ಉದ್ಧಾರ ಮಾಡಬೇಕಾದರೆ ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ರೈತರು ಇವರ ಕಣ್ಣಿಗೆ ಕಾಣಲಿಲ್ಲವೇ ಅಥವಾ ಜಾಣಕುರುಡು ಪ್ರದರ್ಶನವಾಗುತ್ತಿದೆಯೇ? ಜನರಿಗೆ ಎಲ್ಲವೂ ಗೊತ್ತಾಗುತ್ತಿದೆ. ಇಲ್ಲಿ ಏನಾಗಿದೆ ಎಂದರೆ, ಕಾಯ್ದೆಯನ್ನು ಬೆಂಬಲಿಸುವವರೆಲ್ಲ ಆಡಳಿತ ಪಕ್ಷದ ಪರ, ಪ್ರತಿಭಟಿಸುತ್ತಿರುವವರೆಲ್ಲಾ ವಿರೋಧ ಪಕ್ಷದ ಪರ ಎಂದು ರೈತರಲ್ಲೇ ಗೊಂದಲ ಮೂಡಿಸಿ ಭಿನ್ನಭಾಪ್ರಾಯ ತಂದು ಅವರನ್ನು ಇಬ್ಭಾಗಿಸುವ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಕಾಯ್ದೆಗಳ ಪರ ವಿರೋಧವಾಗಿ ಅಬ್ಬರಿಸುತ್ತಿರುವ ಮಹಾನುಭಾವರಿಗೆ ಇದೆಲ್ಲ ಗೊತ್ತಾಗಬೇಡವೇ? ಆಡಳಿತ ಪಕ್ಷ- ಪ್ತತಿಪಕ್ಷಗಳ ಈ ಕತ್ತಿವರಸೆಯಲ್ಲಿ ಬೀದಿಗೆ ಬಂದ ಮುಗ್ದ ರೈತರ ಪರಿಸ್ಥಿತಿ ಏನಾಗಿದೆ ಎಂಬ ಕಾಳಜಿ ಬೇಡವೇ?
ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಕೈಗಾರಿಕೆ ಸ್ಥಾಪನೆಗೆ ನಿಯಮಗಳ ಸರಳೀಕರಣ, ಸುಲಭವಾಗಿ ಭೂ ಪರಿವರ್ತನೆ ಎಂದೆಲ್ಲ ʼಸುಧಾರಣೆʼಗಳೆಂಬ ಎಂಬ ಹೆಸರಿನಲ್ಲಿ ನಡೆಯುತ್ತಿರುವ ರೈತವಿರೋಧಿ ಕೆಲಸಗಳ ಹಿಂದೆ ಯಾರದೋ ಹಿತಾಸಕ್ತಿ ಅಡಗಿದೆ. ಅದು ಕಪ್ಪುಹಣ ಹೊಂದಿರುವ ರಾಜಕಾರಣಿಗಳದಾ, ಉದ್ಯಮಿಗಳದಾ, ನೆರೆಯ ಆಂಧ್ರದ ಕುಳಗಳದಾ, ಪಕ್ಕದ ಮಹಾರಾಷ್ಟ್ರ, ದೂರದ ಗುಜರಾತಿನದೋ ಅಥವಾ ಕಣ್ಣಿಗೇ ಕಾಣದ ಅಧಿಕಾರಶಾಹಿಗಳ ಹುನ್ನಾರವೋ ಎಂಬುದು ನಮ್ಮ ರೈತರಿಗೆ ಗೊತ್ತಾಗಬೇಕಿದೆ.
ಆಡಳಿತ ನಡೆಸುತ್ತಿರುವ ಈಗಿನ ಸರಕಾರಕ್ಕೆ ಒಂದು ಮಾಹಿತಿ ಇರಬೇಕಿತ್ತು. ಈಗಿದ್ದ ಭೂ ಸುಧಾರಣಾ ಕಾಯ್ದೆಯಿಂದ ರೈತರ ಶೋಷಣೆ ನಡೆಯಲಿಲ್ಲವೇ? ಅಧಿಕಾರಿಗಳು 79AB ಹೆಸರಲ್ಲಿ ರೈತರ ರಕ್ತ ಹಿರಲಿಲ್ಲವೇ, ಎಪಿಎಂಸಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ದರ್ಪ, ರೈತ ಅನುಭವಿಸಿದ ಸಂಕಟ ಯಾರಿಗೆ ಗೊತ್ತಿದೆ? ವಿಧಾನಸೌಧದಲ್ಲಿ ಕೂತು ಮಸೂದೆಗಳು ಜಾರಿ ಮಾಡಿಯೇ ಸಿದ್ದ ಎಂದು ತೊಡೆತಟ್ಟುತ್ತಿರುವ ʼದೊಡ್ಡʼವರು ಎಲ್ಲಿ ಕೃಷಿ ಮಾಡಿದ್ದಾರೆ? ಏನು ಬೆಳೆದಿದ್ದಾರೆ? ಎಲ್ಲಿ ಮಾರಿದ್ದಾರೆ ? ಅವರ ಪಕ್ಕದ ರೈತರು ಯಾರು? ಈ ಪ್ರಶ್ನೆಗಳಿಗೆ ಉತ್ತರಿಸುವ ಎದೆಗಾರಿಕೆ ಯಾರಿಗಿದೆ?
ಕೃಷಿ ಎಂಬ ವೈವಿಧ್ಯ ಜಗತ್ತು
ಚಿಕ್ಕಬಳ್ಳಾಪುರದ ತಮ್ಮ ತೋಟದಲ್ಲಿ ದ್ರಾಕ್ಷಿ ಕೃಷಿಯಲ್ಲಿ ನಿರತ ಆಂಜನೇಯ ರೆಡ್ಡಿ.
ಈಗ ರಾಜ್ಯದಲ್ಲಿ 30 ಜಿಲ್ಲೆಗಳಿವೆ. ವಿಜಯನಗರವೂ ಬಂದರೆ ಈ ಸಂಖ್ಯೆ 31ಕ್ಕೆ ಏರುತ್ತದೆ. ಸೂಕ್ಷ್ಮವಾಗಿ ಗಮನಿಸುತ್ತಾ ಹೋಗೋಣ. ಜಿಲ್ಲೆ-ಜಿಲ್ಲೆಗೂ ಕೃಷಿಯೂ, ಅದರ ಸ್ವರೂಪವೂ ಬೇರೆಯದ್ದೇ ಆಗುತ್ತಾ ಹೋಗುತ್ತದೆ. ಸಣ್ಣ ಹಿಡುವಳಿಗಳಲ್ಲಿ ಹೂವು ಹಾಲು ಹಣ್ಣು ತರಕಾರಿ ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುವ ಚಿಕ್ಕಬಳ್ಳಾಪುರ, ಮಾವು ಟೊಮ್ಯಾಟೋ ಬೆಳೆಯುವ ಕೋಲಾರ, ಅದೇ ರೀತಿ ರಾಜ್ಯದ ವಿವಿದ ಜಿಲ್ಲೆಗಳನ್ನು ಸುತ್ತು ಹಾಕಿದರೆ ಒಂದು ಕಡೆ ಕಬ್ಬು, ಮತ್ತೊಂದು ಕಡೆ ಭತ್ತ, ಮಗದೊಂದು ಕಡೆ ತೊಗರಿ, ಜೋಳ ಹೀಗೇ ವಿಭಿನ್ನತೆ ಮತ್ತಷ್ಟು ಗಾಢವಾಗಿ ಕಾಣುತ್ತದೆ. ಕೆಲ ಕೃಷಿ ಪದಾರ್ಥಗಳನ್ನು ಆರು ತಿಂಗಳು, ಒಂದು ವರ್ಷದವರೆಗೂ ದಾಸ್ತಾನಿಟ್ಟು ಮಾರಬಹುದು. ಇನ್ನು ಕೆಲ ಕೃಷಿ ಉತ್ಪನ್ನಗಳನ್ನು ಕೊಯ್ಲು ಮಾಡಿದ ತಕ್ಷಣ ಮಾರಲೇಬೇಕು. ಅಂದರೆ, ಆ ಕ್ಷಣಕ್ಕೇ ಮಾರುಕಟ್ಟೆ ಮತ್ತು ಖರೀದಿದಾರ ಸಿಗಲೇಬೇಕು. ಇದು ಒಂದೆಡೆಯಾದರೆ, ದೊಡ್ಡದೊಡ್ಡ ಕಂಪನಿಗಳು ಕೃಷಿ ಉತ್ಪನ್ನಗಳನ್ನೂ ಇತರೆ ವಾಣಿಜ್ಯ ಉತ್ಪನ್ನಗಳಂತೆಯೇ ನೋಡುತ್ತವೆ. ಗ್ರೇಡಿಂಗ್ ಮಾನದಂಡದ ಮೂಲಕ ಅವು ಖರೀದಿ ಮಾಡುತ್ತವೆ. ಆ ಗ್ರೇಡಿಂಗ್ ಬಗ್ಗೆ ಕೃಷಿ ಇಲಾಖೆ ಆಗಲಿ, ಸರಕಾರವಾಗಲಿ ರೈತರಿಗೆ ತಿಳಿವಳಿಕೆ ನೀಡಿದೆಯೇ? ಇಲ್ಲ.
ಕಾರ್ಪೊರೇಟ್ ಕೃಷಿ ಹೇಗಿರುತ್ತದೆ?
ಉದ್ಯಮಿಯೊಬ್ಬ ಬಂದು ನೂರಾರು ಎಕರೆ ಖರೀದಿ ಮಾಡಿ ಅಷ್ಟೂ ಜಾಗಕ್ಕೆ ಬೇಲಿ ಹಾಕಿಕೊಳ್ಳುತ್ತಾನೆ. ಆ ಜಾಗದಲ್ಲಿ ಅವನು ಏನು ಬೆಳೆಯುತ್ತಾನೆ? ಯಾವ ಗೊಬ್ಬರ ಬಳಸುತ್ತಾನೆ, ಯಾವ ಕ್ರಿಮಿನಾಶಕ ಬಳಸುತ್ತಾನೆ? ಎಂಬುದು ಬಾಹ್ಯ ಜಗತ್ತಿಗಿರಲಿ, ಕೊನೆಪಕ್ಷ ಪಕ್ಕದ ರೈತನಿಗೂ ಗೊತ್ತಾಗುವುದಿಲ್ಲ. ಅಂತರ್ಜಲ ಶೋಷಣೆ, ಜಲಮೂಲಗಳ ನಾಶ, ಪರಿಸರ ಮಾಲಿನ್ಯ ನಮ್ಮ ಹಳ್ಳಿಜನರ ಅರಿವಿಗೇ ಬರುವುದಿಲ್ಲ. ಮುಖ್ಯವಾಗಿ ಕಾರ್ಪೊರೇಟ್ ಕಂಪನಿಗಳೆಲ್ಲವೂ ರಸ್ತೆ ಸಂಪರ್ಕ ಇರುವ ಪ್ರದೇಶಗಳಲ್ಲಿಯೇ ಭೂಮಿ ಖರೀದಿ ಮಾಡುತ್ತವೆ. ಆದರೆ, ಬದುಗಳಲ್ಲಿ ಓಡಾಡಿಕೊಂಡು ಪರಸ್ಪರ ಸಹಕಾರ ತತ್ತ್ವದ ಅಡಿಯಲ್ಲಿ ಕೈಕೈ ಹಿಡಿದುಕೊಂಡೇ ಕೃಷಿ ಮಾಡಿದ್ದ ರೈತರು, ಕಾರ್ಪೊರೇಟುಗಳ ಎಂಟ್ರಿಯೊಂದಿಗೆ ಕಂಗೆಡುವುದರಲ್ಲಿ ಸಂಶಯವೇ ಇಲ್ಲ. ಅವರಿಗೆ ನಮ್ಮ ಭೂಮಿಯನ್ನು ಇಂಥ ಕಾರ್ಪೊರೇಟ್ ಕಬಂದ ಬಾಹುಗಳಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗುತ್ತದೆ. ಕ್ರಮೇಣ ನಮ್ಮ ಮೂಲ ಬೇಸಾಯ ಸಂಸ್ಕೃತಿಯೇ ನಾಶವಾಗಿ ಕಾಂಟ್ರಾಕ್ಟ್ ಬೇಸಾಯ ಬರುತ್ತದೆ ಮಾತ್ರವಲ್ಲದೆ, ಹೊಸ ತಲೆಮಾರಿನ ಊಳಿಗಮಾನ್ಯ ಪದ್ಧತಿಯ ಉಗಮಕ್ಕೂ ಅದು ನಾಂದಿಯಾಗುತ್ತದೆ. ಈಗಾಗಲೇ ಹಳ್ಳಿಗಳಲ್ಲಿ ಇದನ್ನೇ ಗಾಢವಾಗಿ ಕಾಣಬಹುದು. ಅದರ ಫಲಿತಾಂಶ ಎಂದರೆ, ಭವಿಷ್ಯದ ದಿನಗಳಲ್ಲಿ ಜನಾಂಗೀಯ ಕಲಹ, ವರ್ಗ ಸಂಘರ್ಷಕ್ಕೆ ಕರ್ನಾಟಕ ಮುಖ್ಯ ಭೂಮಿಕೆಯಾಗಲಿದೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ನಮಗೆ ಬೇಕಿರುವುದು ಸಹಕಾರಿ ತತ್ತ್ವದ ಮೇಲೆ ನಡೆಯುವ, ಪರಸ್ಪರ ಅರಿತು ನಡೆಯುವ ಕೃಷಿ ಬೇಕೆ ಹೊರತು, ತನ್ನದೇ ಅಧಿಪತ್ಯವನ್ನು ಸ್ಥಾಪಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕಾರ್ಪೊರೇಟ್ ಕೃಷಿ ಬದಲಿಗೆ ಪರಸ್ಪರ ಕೂಡಿ ದುಡಿಯುವ ʼಕೋ ಆಪರೇಟಿವ್ ಕೃಷಿʼಯನ್ನು ಸರಕಾರ ಉತ್ತೇಜಿಸಬೇಕಿದೆ. ರೈತರ ಕೃಷಿ ಭೂಮಿಗೆ ಹೆಚ್ಚಿನ ದರ ಸಿಗುವಂತೆ ಮಾಡುವುದಾಗಿ ಜಪಿಸುತ್ತಿರುವ ಸರಕಾರ ರೈತನಿಗೆ ನೀರಾವರಿ ಭದ್ರತೆ ಒದಗಿಸಲಾಗಲಿಲ್ಲ. ಸರ್ಕಾರವೇ ರೈತ ಮತ್ತು ಗ್ರಾಹಕಸ್ನೇಹಿ ಮಾರುಕಟ್ಟೆ ತೆರೆಯಲಾಗಲಿಲ್ಲ. ಇನ್ನು ಭೂಮಿ ಕಳೆದುಕೊಂಡ ರೈತರು ಮುಂದೇನು ಮಾಡಬೇಕು ಎಂದು ಏನಾದರೂ ಹೇಳಿದೆಯೇ? ತಿದ್ದುಪಡಿ ಕಾಯ್ದೆಯಲ್ಲಿ ಅಂಥ ಯಾವುದಾದರೂ ಅಂಶವನ್ನು ಸೇರ್ಪಡೆ ಮಾಡಿದೆಯೇ? ಇದಕ್ಕೆ ಉತ್ತರ.. ಇಲ್ಲ.
ಉದ್ಯೋಗ ಸೃಷ್ಟಿ ಹೇಗಾಗುತ್ತದೆ?
ಕಾರ್ಪೊರೇಟ್ ಕೃಷಿ ಬಂದರೆ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಸರಕಾರ ಕೊಚ್ಚಿಕೊಳ್ಳುತ್ತಿದೆ. ಉದ್ಯೋಗ ಸೃಷ್ಟಿ ಎಂದರೆ ಹೇಗೆ? ಕಾರ್ಪೊರೇಟ್ ಕಬಂಧಬಾಹುಗಳಿಗೆ ಸಿಕ್ಕಿ ಭೂಮಿಯನ್ನು ಕಳೆದುಕೊಂಡು, ಆ ಕಳೆದುಕೊಂಡ ಭೂಮಿಗಳಲ್ಲಿ ಜೀತ ಮಾಡುವ ಹೊಸ ತಲೆಮಾರಿನ ʼಜೀತಜೀವಿʼಗಳನ್ನು ಸೃಷ್ಟಿ ಮಾಡುವುದಾ? ಬಹುಶಃ ಅದೂ ಆಗಲಿಕ್ಕಿಲ್ಲ! 100 ಅಥವಾ 200 ಎಕರೆ ಖರೀದಿ ಮಾಡಿ ಬೇಸಾಯ ಮಾಡುವ ಕಾರ್ಪೊರೇಟ್ ಕುಳಕೃಷಿ ಕಾರ್ಮಿಕರನ್ನು ನಂಬಿ ಕೃಷಿ ಮಾಡುವುದಿಲ್ಲ. ಬದಲಿಗೆ ಯಂತ್ರಗಳನ್ನು ನಂಬುತ್ತಾನೆ, ವಿನಾಶಕಾರಿ ಕ್ರಿಮಿನಾಶಕಗಳನ್ನು ನಂಬುತ್ತಾನೆ, ಭೂಮಿಯನ್ನು ಎಷ್ಟು ಸಾಧ್ಯವೋ ರಾಸಾಯನಿಕಳಿಂದ ತುಂಬಿಸುತ್ತಾನೆ. ಮುಂದಿನ ದಿನಗಳಲ್ಲಿ ಬರಡು ಬೀಳುವ ಭೂಮಿಯಲ್ಲಿ ಅವನೇನು ಮಾಡುತ್ತಾನೆ? ಕೃಷಿಯೇತರ ಚಟುವಟಿಕೆ ಮಾಡುವುದಿಲ್ಲವೇ, ಕೃಷಿಭೂಮಿ ವ್ಯವಸಾಯಕ್ಕೆ ಮೀಸಲು ಎಂದು, ಸರಕಾರ ತನ್ನ ತಿದ್ದುಪಡಿಯಲ್ಲಿ ಎಲ್ಲೂ ಹೇಳಿಲ್ಲವಾದ್ದರಿಂದ ಖಂಡಿತಾ ನಡೆಯೋದು ಅದೇ. ಕೊನೆಗೆ ದಿಕ್ಕೆಟ್ಟು ಬೀದಿಗೆ ಬರುವುದು ಮಾತ್ರ ಭೂಮಿ ಕಳೆದುಕೊಂಡ ನಮ್ಮ ರೈತರೇ? ಅಂತಿಮವಾಗಿ ಅವರು ಜೀತಕ್ಕೂ ಬೇಕಿರುವುದಿಲ್ಲ.
2014ರಲ್ಲಿ ತಮಿಳಿನಲ್ಲಿ #ವಿಜಯ್ ನಟನೆಯ #ಮುರುಗದಾಸ್ ನಿರ್ದೇಶನದ ʼಕತ್ತಿʼ ಅಂತ ಒಂದು ಸಿನಿಮಾ ಬಂತು. ಹಳ್ಳಿಯೊಂದರಲ್ಲಿ ಭೂ ಆಕ್ರಮಣಕ್ಕೆ ಇಳಿಯುವ ಕಾರ್ಪೊರೇಟ್ ಕಂಪನಿಯ ವಿರುದ್ಧ ಆ ಹಳ್ಳಿ ರೈತರು ಹೋರಾಟಕ್ಕಿಳಿಯುವ ಕಥೆ ಅದರಲ್ಲಿದೆ. ಸುದ್ದಿಚಾನೆಲ್‌ಗಳ ಲೈವ್‌ನಲ್ಲಿಯೇ ರೈತರು ತಮ್ಮ ಕುತ್ತಿಗೆಗಳನ್ನು ಕುಯ್ದುಕೊಳ್ಳುವ ದೃಶ್ಯ ಅದರಲ್ಲಿದೆ. ಈ ಸಿನಿಮಾ ನೋಡಿದರೆ ಸಾಕು, ಈ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳ ಹಿಂದಿನ ಹಕೀಕತ್ತು ಏನೆಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಕೊನೆಗೆ ರೈತರೆಲ್ಲ ಒಟ್ಟಾಗಿ ಸಂಘಟನಾತ್ಮಕ ಹೋರಾಟಕ್ಕಿಳಿದು ಸರಕಾರ ಪ್ರೇರಿತ, ಸರಕಾರ ರಕ್ಷಿತ ಕಾರ್ಪೊರೇಟ್ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ. ಅಲ್ಲಿಗೆ ಆ ಸಿನಿಮಾ ಮುಗಿಯುತ್ತದೆ.
ಸರಕಾರ ಸೀರಿಯಸ್ ಆಗಿ ರೈತರ ಬಗ್ಗೆ ಯೋಚಿಸಬೇಕು, ಅರ್ಥ ಮಾಡಿಕೊಳ್ಳಬೇಕು. ರೈತರಿಗೇ ಬೇಕಾದ ನೀರು, ಗುಣಮಟ್ಟದ ಬೀಜ, ಗೊಬ್ಬರ, ಉತ್ತಮ ಕ್ರಿಮಿ ಕೀಟ ನಾಶಕ, ಶೈತ್ಯಾಗಾರಗಳು, ಮಾರುಕಟ್ಟೆ ನೀಡಿ ಶಕ್ತಿತುಂಬಿ ಕೃಷಿಯನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಬೇಕೆ ವಿನಾ ಅದರ ಆತ್ಮವನ್ನೇ ಕೊಲ್ಲಬಾರದು. ಒಂದು ವೇಳೆ ಸರಕಾರ ಅದನ್ನೇ ಮಾಡಿದರೆ, ಹಳ್ಳಿಹಳ್ಳಿಯಲ್ಲೂ ʼಕತ್ತಿʼಯಂಥ ರೈತರಿದ್ದಾರೆ. ಈ ರಾಜ್ಯದಲ್ಲಿ ಕಾರ್ಪೊರೇಟ್ ಕುಳಗಳ ಹಿತಾಸಕ್ತಿಗಾಗಿ ಭೂಮಿಯನ್ನು ತಾಯಿಯಂತೆ ನಂಬಿ ದುಡಿಯುವ ರೈತರ ತಾಳ್ಮೆ ಪರೀಕ್ಷಿಸುವುದು ಬೇಡ. ಇದು ಸರಕಾರಕ್ಕೆ ನೆನಪಿದ್ದರೆ ಒಳ್ಳೆಯದು.
ಈ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಮುಂದಿನ ಕಂತು..
ಬೆಂಗಳೂರು ಏರ್‌ಪೋರ್ಟ್ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಮೇಲೆ ಸರಕಾರಿ ಪ್ರೇರಿತ ಕಾರ್ಪೊರೇಟ್ ಕುಳಗಳಿಂದ ಭೂ ಆಕ್ರಮಣ
ಆರ್. ಆಂಜನೇಯ ರೆಡ್ಡಿ
- ಬಯಲುಸೀಮೆಗೆ ಶಾಶ್ವತ ನೀರಾವರಿ ಒದಗಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ʼಶಾಶ್ವತ ನೀರಾವರಿ ಹೋರಾಟ ಸಮಿತಿʼ ಅಧ್ಯಕ್ಷರು. ನಾಡಿನ ನೀರಾವರಿ, ರೈತ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲವರು. ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಗತಿಪರ ಕೃಷಿಕರು ಕೂಡ. ಇದರ ಜತೆಗೆ, ಬಯಲುಸೀಮೆ ಅದರಲ್ಲೂ ಮುಖ್ಯವಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ನೀರಾವರಿ ಅನ್ಯಾಯಗಳ ವಿರುದ್ಧ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ವಿಶೇಷ ವರದಿ ಅರ್ಥಪೂರ್ಣವಾಗಿ ಮೂಡಿಬಂದಿದೆ ದನ್ಯವಾದಗಳು.. *ಪ್ಯೂರ್ ಜನರಲೀಸಂ* ಶಿರ್ಶಿಕೆ ನೀಡಿರುವದು ನನಗಿಷ್ಟವಾಯಿತು..