ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ʼಪೋಲಂಪಲ್ಲಿʼ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.
photo: ckphotography
ಕನ್ನಡ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳ ಭೂಪಟದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಇವೆಯಾ?
ಹಿಂದಿ ದಿವಸದ ಸದ್ದು ಇನ್ನೂ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ. ಈ ಹಿಂದಿ ಗುಮ್ಮನ ಕಥೆ ಇರಲಿ, ಕರ್ನಾಟಕದಲ್ಲಿ ಕನ್ನಡಮ್ಮ ಸುಖವಾಗಿದ್ದಾಳಾ? ಬೆಂಗಳೂರಿಗೆ ಬರೀ ನೂರೇ ಕಿ.ಮೀ ದೂರದ ಆಂಧ್ರದ ಗಡಿಯಲ್ಲಿ ನಮ್ಮ ಭಾಷೆಯ ಪರಿಸ್ಥಿತಿ ಹೇಗಿದೆ? ಅಲ್ಲಿ ಕನ್ನಡದ ಕೆಲಸಗಳು ಏನಾಗಿವೆ? ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಲೆಕ್ಕದಲ್ಲಿ ಹತ್ತಿರದ ಗಡಿನಾಡಿನ ಪಾಡೇನು? ಗಡಿಯಲ್ಲಿ ಧುತ್ತೆಂದು ಎದ್ದುಕೂತಿರುವ ಹೊಸ ವೋಟ್ ಬ್ಯಾಂಕ್ ಬೀರುವ ಪರಿಣಾಮಗಳೇನು? ಒಂದು ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ. ಹಿಂದಿ ಹೇರಿಕೆ ಮಾತು ಹಾಗಿರಲಿ, ಚಿಕ್ಕಬಳ್ಳಾಪುರ, ಕೋಲಾರ ಗಡಿಯಲ್ಲಿ ಕನ್ನಡ ಹುಡುಕೋಣ ಬನ್ನಿ!!
***
#ದೃಶ್ಯ 1
“ಯಂಗ್ ಅಂಡ್ ಎನರ್ಜಿಟಿಕ್ ಕ್ಯಾಂಡಿಡೇಟ್ ಸುಧಾಕರ್‌ಗಾರು.. ಸುಧಾಕರ್‌ಗಾರು ನಾಕು ಮಂಚಿ ಫ್ರೆಂಡು. ಕಾಬಟ್ಟಿ, ಆಯನಕಿ ಈ ನಿಯೋಜಕ ವರ್ಗಂನುಂಚಿ ಎಮ್ಮೆಲ್ಯೆ ಅಭ್ಯರ್ಥಿಗಾ ಮೀರಂದರೂ ಗೆಲಿಪಿಂಚಾಲನಿ ಮನಸ್ಫೂರ್ತಿಗಾ ನೇನು ಕೋರುಕುಂಟು.. ಅತನಿ ಮಂಚಿತನಂ, ಸಿನ್ಸಿಯಾರಿಟಿ, ಚದುವುಕುನ್ನವಾಡು ಕಾಬಟ್ಟಿ ಮನಂದರಿಕಿ ಉಯಯೋಗಪಡತಾಡು, ಮರಿಯು ಮನಂದರಿಕಿ ಕಾವಲಸಿನ ಪನುಲನ್ನಿ ಸಕ್ರಮಂಗಾ ನೆರವೇರುಸ್ತಾಡು.. ಕಾಬಟ್ಟಿ ಅಟುವಂಟಿವಾಳ್ಳನು ಮನಮು ಗೆಲಿಪಿಂಚುಕುಂಟೆ ಮನಕಿ ಕಾವಲಸಿನ ಅವಸರಾಲನ್ನಿಟಿನಿ ಸಕ್ಕಗಾ ಆಯನ ತೀರುಸ್ತಾಡನೆ ಅಭಿಪ್ರಾಯಂತೋಟಿ ನೇನು ಆಯನ ಪರಂಗ ಮಿಮ್ಮುಲ್ನಿ ವೋಟ್ಲು ಅಡುಗುತುನ್ನ..
ಸೋದರ ಸೋದರಿಮಣುಲಾರ.. ಮೀಕಂದರಿಕಿ ನೇನು ವಿಜ್ಞಪ್ತಿ ಚೇಸೇದಿ ಏಮಿಟಂಟೆ.. ಮೀ ಪವಿತ್ರಮೈನ ವೋಟುನು ಮನ ಸುಧಾಕರ್‌ಗಾರಿಕಿ ವೇಸಿ ಗೆಲಿಪಿಂಚಿ, ತರುವಾತ.. ಆಯನ ಗೆಲಿಚಿನ ತರುವಾತ ಮಳ್ಳಿ ಇಕ್ಕಡಿಕಿ ವಚ್ಚಿ ಆಯನ ವಿಜಯಯಾತ್ರಲೋ ಪಾಲ್ಗೊಂಟಾನನಿ ಚಬುತುನ್ನಾ..”
(ಯಂಗ್ ಅಂಡ್ ಎನರ್ಜಿಟಿಕ್ ಕ್ಯಾಂಡಿಡೇಟ್ ಸುಧಾಕರ್ ಅವರು.. ಸುಧಾಕರ್ ಅವರು ನನಗೆ ಒಳ್ಳೆಯ ಸ್ನೇಹಿತರು. ಆದ್ದರಿಂದ, ಅವರಿಗೆ ಈ ಕ್ಷೇತ್ರದಿಂದ ಎಮ್ಮೆಲ್ಯೆ ಅಭ್ಯರ್ಥಿಯಾಗಿ ನೀವೆಲ್ಲರೂ ಗೆಲ್ಲಿಸಬೇಕು ಎಂದು ಮನಃಸ್ಫೂರ್ತಿಯಾಗಿ ನಾನು ಕೋರುತ್ತಿದ್ದು,,, ಅವರ ಒಳ್ಳೆಯತನ, ಪ್ರಾಮಾಣಿಕತೆ, ವಿದ್ಯಾವಂತರೂ ಆದ್ದರಿಂದ ನಮ್ಮೆಲ್ಲರಿಗೂ ಉಪಯೋಗಕ್ಕೆ ಬರುತ್ತಾರೆ. ಮತ್ತೆ ನಮ್ಮೆಲ್ಲರಿಗೂ ಬೇಕಾದ ಕೆಲಸಗಳನ್ನು ಸಕ್ರಮವಾಗಿ ಮಾಡಿಕೊಡುತ್ತಾರೆ. ಆದ್ದರಿಂದ ಅಂಥವರನ್ನು ನಾವೆಲ್ಲರೂ ಗೆಲ್ಲಿಸಿಕೊಂಡರೆ ನಮಗೆ ಬೇಕಾದ ಅಗತ್ಯಗಳೆಲ್ಲವನ್ನು ಅವರು ಸರಿಯಾಗಿ ಈಡೇರಿಸುತ್ತಾರೆ ಎಂಬ ಅಭಿಪ್ರಾಯದಿಂದ ನಾನು ಅವರ ಪರವಾಗಿ ನಿಮ್ಮೆಲ್ಲರ ವೋಟುಗಳನ್ನು ಕೇಳುತ್ತಿದ್ದೇನೆ..
ಸಹೋದರ, ಸಹೋದರಿಯರೇ.. ನಿಮಗೆಲ್ಲರಿಗೂ ನಾನು ಮನವಿ ಮಾಡುವುದು ಏನೆಂದರೆ, ನಿಮ್ಮ ಪವಿತ್ರವಾದ ವೋಟನ್ನು ನಮ್ಮ ಸುಧಾಕರ್ ಅವರಿಗೆ ಹಾಕಿ ಗೆಲ್ಲಿಸಿ. ನೀವು ಅವರನ್ನು ಗೆಲ್ಲಿಸಿದ ನಂತರ ಮತ್ತೆ ಇಲ್ಲಿಗೆ ಬಂದು ಅವರ ವಿಜಯಯಾತ್ರೆಯಲ್ಲಿ ಪಾಲ್ಗೊಳ್ಳುವೆ ಎಂದು ಹೇಳುತ್ತಿದ್ದೇನೆ….)
ಹೀಗೆ ಅಪ್ಪಟ ಕನ್ನಡ ನೆಲದಲ್ಲಿ ನಿಂತು ಅಪ್ಪಟ ತೆಲುಗಿನಲ್ಲಿ ಭಾಷಣ ಮಾಡಿದವರು ಟಾಲಿವುಡ್ ಸ್ಟಾರ್ ಕಮೆಡಿಯನ್ ಬ್ರಹ್ಮಾನಂದಂ. ಇದು ನಡೆದಿದ್ದು 2019 ನವೆಂಬರ್ 30. ಸ್ಥಳ; ಡಾ.ಸುಧಾಕರ್ ಅವರ ಹುಟ್ಟೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಪೇರೇಸಂದ್ರ ಎಂಬ ಪುಟ್ಟ ಪಟ್ಟಣ.
ಇದೇ ಮೊದಲ..!! ಅಲ್ಲ. ಸುಧಾಕರ್ ಅವರಿಗಿಂತ ಮೊದಲೇ ಪರಭಾಷೆ ನಟರನ್ನು ಕರೆತಂದು ಪ್ರಚಾರ ಮಾಡಿಸಿಕೊಂಡವರು ಬೇರೆ ಸಾಕಷ್ಟು ನಾಯಕರು ಇದ್ದಾರೆ. ಆ ಪೈಕಿ ಕೋಲಾರ ಲೋಕಸಭಾ ಕ್ಷೇತ್ರವನ್ನು 7 ಸಲ ಪ್ರತಿನಿಧಿಸಿದ್ದ ಕೆ.ಎಚ್. ಮುನಿಯಪ್ಪ, ಬಾಗೇಪಲ್ಲಿ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸಂಪಂಗಿ ಹಾಗೂ ಗೌರಿಬಿದನೂರು ಕ್ಷೇತ್ರವನ್ನು ಕೆಲ ಅವಧಿಗಳಿಂದ ಪ್ರತಿನಿಧಿಸುತ್ತಿರುವ ಶಿವಶಂಕರ ರೆಡ್ಡಿ.
2013ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಪರ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ಬಿರುಗಾಳಿಯಂತೆ ಪ್ರಚಾರ ಮಾಡಿದ್ದರು. ಅದೇ ದಿನ ಅಂದರೆ, 2013 ಏಪ್ರಿಲ್ 29ರಂದು ಚಿರಂಜೀವಿ ಅವರು ಬಾಗೇಪಲ್ಲಿ ಕ್ಷೇತ್ರದಲ್ಲಿ ಸಂಪಂಗಿ ಪರ ಪ್ರಚಾರ ಮಾಡಿದ್ದರು. ಅದೇ ವೇದಿಕೆಯಲ್ಲಿ ಕನ್ನಡ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೂಡ ಇದ್ದರು. ಹಾಗೆಯೇ ಆಂಧ್ರ ಪ್ರದೇಶದ ಪ್ರದೇಶ ಕಾಂಗ್ರೆಸ್ ರಾಜ್ಯ ಸಮಿತಿಯ ಮಾಜಿ ಅಧ್ಯಕ್ಷ ರಘುವೀರಾ ರೆಡ್ಡಿ ಸೇರಿ ಇನ್ನೂ ಅನೇಕ ಆಂಧ್ರ ನಾಯಕರು ಇದ್ದರು. ಆವತ್ತೇ ಪಕ್ಕದ ಗೌರಿವಿದನೂರಿನಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಎಚ್.ಎನ್. ಶಿವಶಂಕರ ರೆಡ್ಡಿ ಅವರ ಪರ ಬಿರುಸಿನ ಪ್ರಚಾರ ನಡೆಸಿದ್ದರು. ಆವತ್ತು ಗೌರಿಬಿದನೂರಿನಲ್ಲಿ ಸ್ಥಿತಿ ಹೇಗಿತ್ತು ಎಂದರೆ ಚಿರಂಜೀವಿ ಅವರನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಜನರಂತೂ ಜಾತ್ರೆಯಂತೆ ಪಟ್ಟಣಕ್ಕೆ ನುಗ್ಗಿದ್ದರು. ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಲಾಠಿಗಳನ್ನೂ ಬೀಸಿದ್ದರು.
ಆ ಕಾರ್ಯಕ್ರಮದಲ್ಲಿ ತೆಲುಗುನಲ್ಲೇ ಭಾಷಣ ಮಾಡಿದ್ದ ಚಿರು, ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಸರಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರಲ್ಲದೆ, ಬಳ್ಳಾರಿ ಗಣಿಧಣಿಗಳನ್ನು ಕಟುವಾಗಿ ಟೀಕಿಸಿದ್ದರು. ಜನರು ಹುಚ್ಚೆದ್ದು ಕೇಕೆ ಹಾಕಿದ್ದರು.
***
ಈ ಕೆಳಗಿನ ಸಾಲುಗಳನ್ನು ಓದಿ. ಇನ್ನೂ ಶಾಕ್ ಆಗುತ್ತದೆ. ಏಪ್ರಿಲ್ 21, 2018. ತೆಲುಗು ಚಾನೆಲ್ ಎನ್‌ಟಿವಿ ವರದಿ ಹೀಗಿತ್ತು.
“ಕರ್ನಾಟಕದ ಚುನಾವಣೆಯಲ್ಲಿ ತೆಲುಗು ಭಾಷಿಕರೆ ನಿರ್ಣಾಯಕವಾಗುತ್ತಿದ್ದಾರಾ? ಮತಗಳ ಕೊಳ್ಳೆ ಹೊಡೆಯಲು ಟಾಲಿವುಡ್ ಟಾಪ್ ಸ್ಟಾರ್‌ಗಳನ್ನೇ ಪ್ರಚಾರದ ಕಣಕ್ಕಿಳಿಸಲಾಗುತ್ತಿದೆಯಾ? ಈ ವಿಷಯದಲ್ಲಿ ಕಾಂಗ್ರೆಸ್ ಮುಂದಿದೆಯಾ? ಸ್ಟಾರ್ ಕ್ಯಾಂಪೇನರ್ ಆಗಿ ಚಿರಂಜೀವಿ ಅವರನ್ನು ಪ್ರಚಾರಕ್ಕೆ ಇಳಿಸುತ್ತಿದೆಯಾ? ೩೫ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ತೆಲುಗು ಭಾಷಿಗರ ಮನಗೆಲ್ಲಲು ಟಾಲಿವುಡ್ ಸ್ಟಾರ್‌ಗಳೇ ಬೆಸ್ಟ್ ಅನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ಬಂದಿದೆ.”
courtesy: ntv
ಇದಪ್ಪ ವರಸೆ. ಕರ್ನಾಟಕದಲ್ಲಿ ತೆಲುಗು ಭಾಷಿಕರು ಚುನಾವಣೆಯಲ್ಲಿ ನಿರ್ಣಾಯಕ ಆಗುತ್ತಿದ್ದಾರೆ ಎಂಬ ತೆಲುಗು ಮಾಧ್ಯಮದ ವರದಿಗಳು ಆಘಾತ ಉಂಟು ಮಾಡುವ ರೀತಿಯಲ್ಲಿವೆ. ಗಡಿಯಲ್ಲಿ ತೆಲುಗು ಮಾತನಾಡುವವರನ್ನು ಮೋಡಿ ಮಾಡಿ ಮತ ಪಡೆಯಲು ಆಯಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಗಡಿಭಾಗದ ಜನರು ತೆಲುಗು ಮಾತನಾಡುತ್ತಾರೆ ಎಂಬ ಕಾರಣಕ್ಕೆ ತೆಲುಗು ನಟರನ್ನೇ ಕರೆಸಿ ಪ್ರಚಾರ ಮಾಡಲಾಗುತ್ತಿದೆ.
#ದೃಶ್ಯ 2
ಕೆಜಿಎಫ್‌ನಲ್ಲಿ ಚುನಾವಣೆ ಪ್ರಚಾರ ಎಂದರೆ ಕನ್ನಡಕ್ಕಿಂತ ತಮಿಳೇ ಹೆಚ್ಚು ಮಾತನಾಡಬೇಕಾದ ಅಗತ್ಯವಿತ್ತು. ಹಿಂದೆ ಭಕ್ತವತ್ಸಲಂ, ರಾಜೇಂದ್ರನ್ ಕಾಲದಲ್ಲಿ ಓಣಿ, ಕೇರಿಗಳಲ್ಲಿ ತಮಿಳು ಮಾತನಾಡಿದರೆ ಮಾತ್ರ ಮತಗಳು ಬೀಳುತ್ತಿದ್ದ ಪರಿಸ್ಥಿತಿಯಿತ್ತು. “ಅಮ್ಮಾ, ಪಾಟ್ಟಿ ಎನಕ್ಕು ಮಟ್ಟುಂದಾ ವೋಟು ಪೋಡುಂಗು”. (ತಾಯಿ, ಅಜ್ಜಿ ನನಗೆ ಮಾತ್ರ ಮತ ಹಾಕಿ) ಎಂದು ಕೇಳುತ್ತಿದ್ದ ಕಾಲದಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ. ಬಿಜೆಪಿಯಿಂದ ಎನ್.ಸಂಪಂಗಿ, ನಂತರದ ಚುನಾವಣೆಯಲ್ಲಿ ಅವರ ತಾಯಿ ರಾಮಕ್ಕ, ಕಳೆದ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಎಂಟ್ರಿ ಕೊಟ್ಟ ಮೇಲೆ ಗಣನೀಯ ಬದಲಾವಣೆ ಕಂಡುಬಂದರೂ ಆಳದಲ್ಲಿ ಯಾವ ಬದಲಾವಣೆಯೂ ಆಗಿಲ್ಲ.
ಇಂಥ ಪರಿಸ್ಥಿಯಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡುತ್ತಿರುವ ವಿವಿಧ ಪಕ್ಷಗಳ ನಾಯಕರು ಮತ್ತು ಕನ್ನಡಪರ ಹೋರಾಟಗಾರರು ರಾಜಧಾನಿಗೆ ಕೇವಲ 100 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪತನದ ಅಂಚಿಗೆ ಸಾಗುತ್ತಿರುವ ಕನ್ನಡದ ದುಃಸ್ಥಿತಿಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಷ್ಟೇ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ತಿನ ಪಟ್ಟಿಯಲ್ಲಿ, ಕನ್ನಡ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳ ಭೂಪಟದಲ್ಲಿ ಈ ಜಿಲ್ಲೆಗಳು ಇವೆಯೋ ಇಲ್ಲವೋ ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಚಿಕ್ಕಬಳ್ಳಾಪುರದವರೇ ಆದ ನೀರಾವರಿ ಹೋರಾಟಗಾರ ಆರ್. ಆಂಜನೇಯ ರೆಡ್ಡಿ.
ಭೂಮಿಯ ಮೇಲೆ ಪ್ರೀತಿ, ಭಾಷೆ ಮೇಲೆ ಅಸಡ್ಡೆ
ಬೆಳಗಾವಿಯಲ್ಲಿ ಕನ್ನಡ ಉದ್ಧಾರ ಮಾಡಲಿ, ಕಾಸರಗೂಡಿನಲ್ಲಿ ಕನ್ನಡ ಶಾಲೆ ನಡೆಸಲಿ. ನಮ್ಮದೇನೂ ತಕರಾರಿಲ್ಲ. ದೂರದ ಬೆಳಗಾವಿ ಗಡಿ ಕನ್ನಡಿಗರ ಬಗ್ಗೆ ಇರುವ ಅಕ್ಕರೆ ಬೆಂಗಳೂರಿಗೆ ಕೇವಲ ನೂರೇ ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕನ್ನಡಿಗರ ಬಗ್ಗೆ ಸರಕಾರಗಳಿಗೆ ಇರುವ ತಾತ್ಸಾರ ಅರ್ಥವಾಗುತ್ತಿಲ್ಲ. ಸರಕಾರಕ್ಕೆ ಇಲ್ಲಿನ ಭೂಮಿಯ ಮೇಲೆ ಇರುವ ಅಕ್ಕರೆ, ಇಲ್ಲಿನ ಭಾಷೆಯ ದುಃಸ್ಥಿತಿ ಮತ್ತು ನೀರಿನ ಅಭಾವದ ಬಗ್ಗೆ ಬೇಕೆಂದೇ ಇಲ್ಲ. ಬೇಕೆಂದೇ ನಿರ್ಲಕ್ಷ್ಯ ವಹಿಸಿವೆಯಾ ಎಂದೆನಿಸುತ್ತಿದೆ. ಇತ್ತ ಆಂಧ್ರ, ಅತ್ತ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಇವೆರಡೂ ಜಿಲ್ಲೆಗಳಲ್ಲಿ ಕನ್ನಡಕ್ಕೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಕರ್ತವ್ಯ ಸರಕಾರದ್ದು. ಆಡಳಿತ ನಡೆಸಿದವರೆಲ್ಲರೂ ಅದನ್ನು ಮರೆತಿದ್ದಾರೆ ಎನ್ನುತ್ತಾರೆ ಆಂಜನೇಯ ರೆಡ್ಡಿ.
ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದರೆ ಗೌರಿಬಿದನೂರು ಇರಬಹುದು, ಗುಡಿಬಂಡೆ ಇರಬಹುದು ಇಲ್ಲವೇ ಬಾಗೇಪಲ್ಲಿ ಇರಬಹುದು.. ಯಾವುದೇ ತಾಲ್ಲೂಕಿಗೆ ಭೇಟಿ ಕೊಟ್ಟರೂ ತೆಲುಗು ವಿಜೃಂಭಿಸುತ್ತಿರುತ್ತದೆ. ಪೊಲೀಸ್ ಠಾಣೆ, ತಾಲ್ಲೂಕು ಕಚೇರಿ ಸೇರಿ ನೀವು ಎಲ್ಲೇ ಭೇಟಿ ಕೊಟ್ಟರೂ ಮೊದಲು ತೆಲುಗು ಆಮೇಲೆ ಕನ್ನಡ ಎನ್ನುವಂಥ ಪರಿಸ್ಥಿತಿ. ಇದಕ್ಕಿಂತ ಧಾರುಣ ಸಂಗತಿ ಎಂದರೆ, ಗಡಿಯಲ್ಲಿ ಕನ್ನಡಾಭಿವೃದ್ಧಿಗೆ ಶ್ರಮಿಸಬೇಕಾದ ನಾಯಕರೇ ಚುನಾವಣೆಯಲ್ಲಿ ಗೆಲ್ಲಲು ತೆಲುಗು ನಟರನ್ನು ಕರೆಸಿ ಪ್ರಚಾರ ಮಾಡಿಸಿ ವೋಟುಗಳನ್ನು ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೆಡ್ಡಿ.
ಕನ್ನಡದ ಮೇಲೆ ಪ್ರತಿ ಇದೆ
ನಿಜಕ್ಕಾದರೆ ಗಡಿ ಪ್ರದೇಶದ ಜನರಿಗೆ ಕನ್ನಡದ ಮೇಲೆ ಪ್ರೀತಿ ಇದೆ. ಹಾಗೆಯೇ ತೆಲುಗಿನ ಮೇಲೆ ಇಷ್ಟವಿದೆ. ಇದನ್ನು ಗ್ರಹಿಕೆ ಮಾಡುವಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳು ಸೋತಿವೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ವಿಷಯದಲ್ಲಿ ಈ ಎಲ್ಲ ಸಂಸ್ಥೆಗಳು ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿವೆ. ಕೇವಲ ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಕಾಲಹರಣ ಮಾಡುತ್ತಿವೆಯೇ ವಿನಾ ಗಡಿಯಲ್ಲಿ ಕನ್ನಡ ಉದ್ಧಾರಕ್ಕೆ ನಯಾಪೈಸೆ ಕೆಲಸ ಮಾಡಿಲ್ಲ. ಹಿಂದಿನ ತಲೆಮಾರಿನ ಜನಕ್ಕೆ ಕನ್ನಡ ಬರುತ್ತಿಲ್ಲ. ವರ್ತಮಾನದ ತಲೆಮಾರಿನ ಯುವಜನರು ಕನ್ನಡ ಕಲಿತಿದ್ದಾರಾದರೂ ಮನೆಭಾಷೆ, ವ್ಯಾವಹಾರಿಕ ಭಾಷೆಯಾಗಿ ತೆಲುಗನ್ನೇ ಬಳಸುತ್ತಿದ್ದಾರೆ. ಕಾನ್ವೆಂಟ್ ಶಿಕ್ಷಣದ ಪರಿಣಾಮ ಹೊಸ ತಲೆಮಾರಿನ ಮಕ್ಕಳು ಕನ್ನಡವನ್ನೇ ಕಲಿಯುತ್ತಿಲ್ಲ. ಅವರು ಇಂಗ್ಲಿಷ್‌ನತ್ತ ಹೊರಳುತ್ತಿದ್ದಾರೆ. ಇವೆಲ್ಲ ಪಲ್ಲಟಗಳಿಂದ ಗಡಿಭಾಗದಲ್ಲಿ ಕನ್ನಡ ಅಳಿವಿನಂಚಿಗೆ ಬರುತ್ತಿದೆಯಾ ಎಂಬ ಭೀತಿ ಉಂಟಾಗಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ವರ್ಷಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಭಾಷಾ ಸಮಸ್ಯೆಯೇ ರಾಜ್ಯಕ್ಕೆ ಬಿಕ್ಕಟ್ಟಾಗಲಿದೆ. ತೆಲುಗು ಮಾತನಾಡುವ ಜನರನ್ನು ಮತಬ್ಯಾಂಕ್ ಮಾಡಿಕೊಳ್ಳುವ ಪರಿಪಾಠ ಕೊನೆಯಾಗಬೇಕಿದೆ ಎನ್ನುತ್ತಾರೆ ಆಂಜನೇಯ ರೆಡ್ಡಿ.
ಜ್ಞಾನ ಸಂಪತ್ತಿನ ಜಿಲ್ಲೆ
ಶಿಕ್ಷಣ ಮತ್ತು ಜ್ಞಾನದ ವಿಷಯಕ್ಕೆ ಬಂದರೆ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಪ್ರತ್ಯೇಕ ಸ್ಥಾನವಿದೆ. ಭಾರತರತ್ನರಾದ ಸರ್‌ಎಂ.ವಿಶ್ವೇಶ್ವರಯ್ಯ, ಪ್ರೊ. ಸಿಎನ್‌ಆರ್ ರಾವ್ ಇದೇ ನೆಲದವರು. ಡಿವಿಜಿ ಅವರೂ ಇಲ್ಲಿನವರೇ. ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯನವರು ನಮ್ಮವರೇ. ಅತಿ ಹೆಚ್ಚು ಐಎಎಸ್, ಕೆಎಎಸ್ ಅಧಿಕಾರಿಗಳು ಈ ಎರಡು ಜಿಲ್ಲೆಗಳಿಂದ ಬಂದಿದ್ದಾರೆ. ನ್ಯಾಯಾಂಗ ಇಲಾಖೆಯಲ್ಲಿ ಅನೇಕ ಸಾಧಕರಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೆಜಿಎಫ್‌ನಲ್ಲಿ ಕನ್ನಡಕ್ಕಾಗಿ ಆಗಿರುವ ಕೆಲಸವನ್ನು, ಕನ್ನಡದ ಮಾತನ್ನುಹುಡುಕಬೇಕು. 30 ವರ್ಷಗಳಿಂದ ನಾನು ಬಾಗೇಪಲ್ಲಿಯಲ್ಲಿ ಇದ್ದೇನೆ. ಪರಿಸ್ಥಿತಿ ಅಷ್ಟು ಆಶಾದಾಯಕವಾಗಿಲ್ಲ. ಇತ್ತೀಚೆಗೆ ಪೋಷಕರಲ್ಲಿ ತಮ್ಮ ಮಕ್ಕಳು ಇಂಗ್ಲಿಷ್‌ನಲ್ಲೇ ಕಲಿಯೇಕೆಂಬ ಉತ್ಕಟತೆ ಹೆಚ್ಚಾಗುತ್ತಿದೆ. ಇದು ನೋವಿನ ವಿಚಾರ. ನಮ್ಮದೇ ನೆಲದಲ್ಲಿ ನಮ್ಮ ತಾಯಿಭಾಷೆ ಸೊರಗುತ್ತಿರುವುದು ಸರಕಾರಕ್ಕೆ ಕಾಣುತ್ತಿಲ್ಲ. ಈ ತಾಲ್ಲೂಕುಗಳ ಗಡಿಹಳ್ಳಿಗಳಿಗೆ ಭೇಟಿ ಕೊಟ್ಟರೆ ಅಲ್ಲೊಂದು ಇಲ್ಲೊಂದು ಕನ್ನಡ ಫಲಕ ಕಾಣುತ್ತದೆಯೇ ಹೊರತು ಒಂದು ಕನ್ನಡ ಶಬ್ದವೂ ಕಿವಿಗೆ ಬೀಳುವುದಿಲ್ಲ. ಇದು ಗಡಿಭಾಗದಲ್ಲಿನ ಕನ್ನಡದ ದುಃಸ್ಥಿತಿ. ಈ ಭಾಗಗಳಲ್ಲಿ ಚುನಾವಣೆ ಬಂದರೆ ನಾಯಕರು ತೆಲುಗಿನಲ್ಲಿಯೇ ಪ್ರಚಾರ ಮಾಡುವುದನ್ನು ನಾನು ನೋಡಿದ್ದೇನೆ. ಈ ಪರಿಸ್ಥಿತಿ ಬದಲಾಗಬೇಕಿದೆ ಎನ್ನುತ್ತಾರೆ. ಗಡಿ ಪಟ್ಟಣಗಳಲ್ಲಿ ನಾವು ಕನ್ನಡವನ್ನು ಉಳಿಸಿಕೊಳ್ಳಲೇಬೇಕಿದೆ ಎನ್ನುತ್ತಾರೆ ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನ ಕನ್ನಡದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ನಿಂಗಪ್ಪ.
ಕನ್ನಡಕ್ಕಾಗಿ ತೆಲುಗಿನಲ್ಲಿ ಹೋರಾಟ
ಬಾಲ್ಯದಿಂದಲೂ ಈ ಪ್ರದೇಶವನ್ನು ಗಮನಿಸುತ್ತಲೇ ಬಂದಿರುವ ಹಿರಿಯ ಪತ್ರಕರ್ತ ಡಿ.ಎನ್. ಕೃಷ್ಣಾರೆಡ್ಡಿ ಹೀಗೆ ಹೇಳುತ್ತಾರೆ..
“ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಗಡಿ ಭಾಗದ ಬಗ್ಗೆ ಒಂದು ವಿಷೇಷವಿದೆ. ರಾಜ್ಯದ ಅನ್ಯಗಡಿ ಭಾಗಗಳಲ್ಲಿದ್ದ ಹಾಗೆ ಇಲ್ಲಿ ಕನ್ನಡಕ್ಕೆ ಧಕ್ಕೆ ಅಥವಾ ಹಾನಿ ಎಂಬುದು ಆಗಿಲ್ಲ. ಇದು ಬಹಳ ಮಹತ್ತ್ವದ ಸಂಗತಿ. ಮಾತು ತೆಲುಗೇ ಆದರೂ ಕನ್ನಡಕ್ಕಾಗಿ ಆ ತೆಲುಗಿನಲ್ಲಿಯೇ ಹೋರಾಟ ಮಾಡಿದ ಜನ ಇಲ್ಲಿನವರು. ಕನ್ನಡಂಲೋ ಮಾಟ್ಲಾಡಯ್ಯಾ (ಕನ್ನಡದಲ್ಲಿ ಮಾತನಾಡಯ್ಯಾ) ಎಂದು ಅಧಿಕಾರಿಗಳಿಗೆ ತಾಕೀತು ಮಾಡುವ ಜನರಿದ್ದಾರೆ ಇಲ್ಲಿ. ಬೆಂಗಳೂರಿಗೆ ಹತ್ತಿರದ ಗಡಿ ಆದರೂ ತೆಲುಗು ಇಲ್ಲಿ ಸ್ವಾಭಾವಿಕವಾಗಿ ಬಂದುಬಿಟ್ಟಿದೆ. ಆದರೆ ಆಯ್ಕೆ ಪ್ರಶ್ನೆ ಬಂದಾಗ ಕನ್ನಡವೇ ಮುಖ್ಯವಾಗುತ್ತದೆ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರಿಗಳ ಪಾಲಿಗೆ ನಮ್ಮೆರಡೂ ಜಿಲ್ಲೆಗಳು ಲೆಕ್ಕದಲ್ಲಿ ಇವೆಯೇ ಎಂಬ ಅನುಮಾನ ನನಗೆ ಕಾಡುತ್ತಿದೆ. ಇನ್ನು ತೆಲುಗು ಸ್ಟಾರ್‌ಗಳು ಇಲ್ಲಿ ಬಂದು ಪ್ರಚಾರ ಮಾಡುತ್ತಿದ್ದಾರೆ ಸರಿ. ಆದರೆ ಕಲೆಗೆ, ಕಲಾವಿದರಿಗೆ ಭಾಷೆಯ ಗಡಿ ಇರಬಾರದು. ಹಾಗೆ ನೋಡಿದರೆ ಇದೇ ಬಾಗೇಪಲ್ಲಿಯಲ್ಲಿ ಸಿನಿಮಾ ಹೀರೋಗಳು ಮಾತ್ರವಲ್ಲ, ಪಿ.ವಿ.ನರಸಿಂಹರಾವ್, ವೈ.ಎಸ್.ರಾಜಶೇಖರ ರೆಡ್ಡಿ ಕೂಡ ಬಂದು ಪ್ರಚಾರ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ ಕೂಡ ಪ್ರಚಾರ ಮಾಡಿದ್ದಾರೆ. ಆದರೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಕರೆತಂದಿದ್ದ ಅಭ್ಯರ್ಥಿಗಳಿಗೆ ಠೇವಣಿಯೇ ನಷ್ಟವಾಗಿದೆ! ಜನರು ಬುದ್ಧಿವಂತರು ಎಂಬುದನ್ನು ಇದರಿಂದ ತಿಳಿಯಬಹುದು. ಇನ್ನು, ಬಿಜೆಪಿಯಂತೂ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ನಟ ಸಾಯಿಕುಮಾರ್ ಅವರನ್ನು ಕರೆತಂದು ಹೇರಿತು. ಅವರು ತೆಲುಗಿನಲ್ಲೇ ಭಾಷಣ ಮಾಡಿದರು. ಜನ ತಿರಸ್ಕರಿಸಿದರು. ಭಾಷೆಯಾಧರಿತ ಮತಬ್ಯಾಂಕ್ ಮಾಡಿಕೊಳ್ಳುವ ಹುನ್ನಾರ ಮೊದಲಿನಿಂದಲೂ ನಡೆದಿದೆ. ಇತ್ತೀಚೆಗೆ ಅದು ಹೆಚ್ಚಿದೆ. ಸರಕಾರ ಇದಕ್ಕೆ ಕಡಿವಾಣ ಹಾಕಿ ಕನ್ನಡ ವಾತಾವರಣವನ್ನು ಸೃಷ್ಟಿಸಬೇಕು” ಎನ್ನುವುದು ಅವರ ಅಭಿಪ್ರಾಯ.
ಮಿನಿ ತಮಿಳುನಾಡು ಆಗಿತ್ತು, ಈಗ ಪರವಾಗಿಲ್ಲ…
ಕೆಜಿಎಫ್‌ನಲ್ಲಿ ಚಿನ್ನದ ಗಣಿಗಳು ನಡೆಯುತ್ತಿದ್ದಾಗ ಆ ಪಟ್ಟಣವನ್ನು ಮಿನಿ ತಮಿಳುನಾಡು ಎಂದು ಕರೆಯಲಾಗುತ್ತಿತ್ತು. ಈಗ ಸ್ವಲ್ಪ ಪರಿಸ್ಥಿತಿ ಬದಲಾಗಿದೆ. 2013ರಲ್ಲಿ ವೈ.ಸಂಪಂಗಿ, 2018ರಲ್ಲಿ ರಾಮಕ್ಕ, ಕಳೆದ ಚುನಾವಣೆಯಲ್ಲಿ ರೂಪಾ ಶಶಿಧರ್ ವಿಧಾನಸಭೆಗೆ ಆಯ್ಕೆ ಆಗುವುದರೊಂದಿಗೆ ಕನ್ನಡ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ. ಹಿಂದೆ ಭಕ್ತವತ್ಸಲಂ, ರಾಜೇಂದ್ರನ್ ಶಾಸಕರಾಗಿದ್ದಾಗ ಅವರು ತಮಿಳಿನಲ್ಲಿಯೇ ಪ್ರಚಾರ ಮಾಡಿರುವುದನ್ನು ನಾನು ನೋಡಿದ್ದೇನೆ. ಕೆಜಿಎಫ್‌ನ ಕೆಲ ಕಾಲೋನಿಗಳಲ್ಲಿ ತಮಿಳು ಮಾತನಾಡದಿದ್ದರೆ ಮತ ಬೀಳದಂಥ ಸ್ಥಿತಿ ಹಿಂದೆ ಇತ್ತು. ಒಮ್ಮೆ ಭಕ್ತವತ್ಸಲಂ ಪ್ರಚಾರಕ್ಕಾಗಿ ತಮಿಳಿನ ಹೀರೋ ವಿಜಯಕಾಂತ್ ಅವರನ್ನು ಕರೆಸಿದ್ದರು. ಕೆಜಿಎಫ್‌ನಲ್ಲಿ ವಿಜಯಕಾಂತ್‌ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದರು. ಆವತ್ತಿನ ಸಭೆ ಸಂಪೂರ್ಣ ತಮಿಳುಮಯವಾಗಿತ್ತು ಎಂದು ಕೇಳಿದ್ದೇನೆ ಎಂದು ಹೇಳುತ್ತಾರೆ ಬಂಗಾರಪೇಟೆಯ ವಕೀಲ ರಾಜಗೋಪಾಲ್.
ಕೋಲಾರ ಜಿಲ್ಲೆಯ ಗಡಿ ಕನ್ನಡಿಗರ ಪರಿಸ್ಥಿತಿಯನ್ನು ಕೂಲಂಕಶವಾಗಿ ಅವಲೋಕನ ಮಾಡಿರುವ ರಾಜಗೋಪಾಲ್ ಮುಂದುವರಿದು ಹೇಳಿದ್ದಿಷ್ಟು.., “ಬೆಳಗಾವಿ ಗಡಿಯಲ್ಲಿರುವಂತೆ ಅಥವಾ ಬೆಂಗಳೂರು-ಹೊಸೂರು ಗಡಿಯಲ್ಲಿ ಇರುವಂತೆ ಚಿಕ್ಕಬಳ್ಳಾಪುರ-ಕೋಲಾರ ಗಡಿಭಾಗದಲ್ಲಿ ಆಂಧ್ರದ ಜತೆ ಯಾವುದೇ ಸಮಸ್ಯೆ ಇಲ್ಲ. ಸಾಮರಸ್ಯ ಇದೆ. ಅದು ಎಷ್ಟರಮಟ್ಟಿಗೆ ಎಂದರೆ, ಹೆಣ್ಣು ಕೊಟ್ಟು, ಹೆಣ್ಣು ತರುವವರೆಗೂ ಇದೆ. ಗಡಿ ವಿವಾದವೂ ಇಲ್ಲ. ಕಾನೂನಾತ್ಮಕ ತಕರಾರು ಇಲ್ಲ. ಮಾತೃಭಾಷೆ ಕನ್ನಡವಾದರೂ ಮನೆ ಭಾಷೆ ತೆಲುಗೇ ಆಗಿದೆ. ಇದನ್ನು ಯಾರೂ ಅಲ್ಲಗಳೆಯಲಾಗದು. ಕೆಲ ಭಾಗಗಳಲ್ಲಿ ಶೇ.100ಕ್ಕೆ 100 ತೆಲುಗು ಭಾಷೆಯಲ್ಲೇ ಮಾತನಾಡುವ ಜನ ಇದ್ದಾರೆ. ಸಿನಿಮಾ, ವ್ಯವಹಾರದಲ್ಲಿ ತೆಲುಗಿನ ಪ್ರಭಾವವೇ ಜಾಸ್ತಿ. ಅದಕ್ಕಿಂತ ಕನ್ನಡ ಪತ್ರಿಕೆಗಳಿಗಿಂತ ತೆಲುಗು ಪತ್ರಿಕೆಗಳ ಪ್ರಸಾರವೇ ಹೆಚ್ಚಿದೆ ಎಂದರೆ ಕೆಲವರು ನಂಬಲಿಕ್ಕಿಲ್ಲ. ಹೀಗೆ ಯಾರ ಕಣ್ಣಿಗೂ ಕಾಣದೇ ಕನ್ನಡ ಗಡಿಭಾಗದಲ್ಲಿ ಕಣ್ಮರೆಯಾಗುತ್ತಿದೆ. ಇಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳ ಕಾಣಿಕೆ ಶೂನ್ಯ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.”
ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಿದೆ: ಮನು ಬಳಿಗಾರ್
ಚಿಕ್ಕಬಳ್ಳಾಪುರ, ಕೋಲಾರ ಗಡಿ ಪ್ರದೇಶಗಳಲ್ಲಿ ನಮ್ಮ ಕನ್ನಡದ ಸ್ಥಿತಿ ಹೇಗಿದೆ ಎಂಬ ನನ್ನ ಮಾಹಿತಿ ನನಗಿದೆ. ಆ ಭಾಗದಲ್ಲಿ ಕನ್ನಡಾವೃದ್ಧಿಗೆ ಸರ್ವ ಪ್ರಯತ್ನಗಳನ್ನೂ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಕನ್ನಡ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸರಕಾರದ ಗಮನ ಸೆಳೆದಿದೆ. ಕನ್ನಡ ಬೋಧಿಸುವ ಶಿಕ್ಷಕರಿಲ್ಲ ಎಂದು ಜನ ಹೇಳುತ್ತಿದ್ದಾರೆ. ಶಾಲೆಗೆ ಮಕ್ಕಳೇ ಬರುತ್ತಿಲ್ಲ ಎಂದು ಸರಕಾರ ಹೇಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿಗೆ ಜನರು ಕೈಜೋಡಿಸಿದರೆ ಕನ್ನಡದ ಕೆಲಸ ಸುಲಭವಾಗುತ್ತದೆ ಎನ್ನುತ್ತಾರೆ. ನಿಸ್ಸಂಶಯವಾಗಿ ಎರಡೂ ಜಿಲ್ಲೆಗಳ ಪರಿಷತ್‌ಘಟಕಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದಷ್ಟೇ ನಾನು ಹೇಳಬಲ್ಲೆ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್.
ಒಟ್ಟಾರೆಯಾಗಿ ಗಡಿಯಲ್ಲಿ ಯಾವುದೇ ತಿಕ್ಕಾಟವಿಲ್ಲದ ಕಾರಣಕ್ಕೆ ಕನ್ನಡ ನೆಮ್ಮದಿಯಾಗಿದೆ. ಇಲ್ಲದಿದ್ದರೆ, ಸರಕಾರಕ್ಕೆ ಅದರ ಬಿಸಿ ತಟ್ಟುತ್ತಿತ್ತು. ಇದು ಕೂಡ ಅವಳಿ ಜಿಲ್ಲೆಗಳ ದೌರ್ಬಲ್ಯವಿರಬಹುದೇನೋ. ಸರಕಾರ, ನಾಯಕರು, ಹೋರಾಟಗಾರರು ಹಿಂದಿ ವಿರುದ್ಧ ದನಿಯೆತ್ತಲಿ. ಆದರೆ ಈ ಪ್ರದೇಶಗಳಲ್ಲಿ ಕನ್ನಡ ಉಳಿಸಲು ಪ್ರಯತ್ನಿಸಲಿ ಎಂದು ಅನೇಕರು ಹೇಳುವ ಮಾತು.
ಉತ್ತಮವಾದ ಲೇಖನ…ಗಡಿ ಜಿಲ್ಲೆಗಳು ಭಾಷೆಯ ವಿಷಯದಲ್ಲಿ ಹಳಿ ತಪ್ಪುತ್ತಿರುವ ಬಗ್ಗೆ ಎಚ್ಚರಿಸಿದ್ದೀರಾ…ಕನ್ನಡಭಾಷೆಗೆ ಸಂಬಂದಿಸಿದ ಸಂಸ್ಥೆಗಳು ಸೂಕ್ತಕ್ರಮವಹಿಸಿಬೇಕು….