top photo courtesy: LK Advani’s my country my life
ಇವತ್ತು ಬಿಜೆಪಿ ಈ ಪರಿಯಾಗಿ ಬೆಳಗುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣರು ಮೂವರು. ಒಬ್ಬರು ಆಡ್ವಾಣಿ; ಇನ್ನೊಬ್ಬರು ಡಾ.ಮುರಳಿ ಮನೋಹರ ಜೋಷಿ. ಮತ್ತೊಬ್ಬರು ವಾಜಪೇಯಿ. ಕಳೆದ 30 ವರ್ಷಗಳಲ್ಲಿ ಕಾಂಗ್ರೆಸ್ ಮಾಡುತ್ತಲೇ ಬಂದ ತಪ್ಪುಗಳು ಹೇಗೆ ಕಮಲದ ಕೈ ಹಿಡಿದವು ಎಂಬುದನ್ನು ಹೆಸರಾಂತ ಬರಹಗಾರ, ಪತ್ರಕರ್ತ ಬಿ.ಎಸ್.ಜಯಪ್ರಕಾಶ ನಾರಾಯಣ (ಜೇಪಿ) ಸಮರ್ಥವಾಗಿ ವಿಶ್ಲೇಷಿಸಿದ್ದಾರೆ.
***
courtesy: Wikipedia
ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಆಗ್ರಹಿಸಿ, ಬಾಬರಿ ಮಸೀದಿ ಧ್ವಂಸಗೊಂಡ ಘಟನೆಗೆ ಇನ್ನೇನು 28 ವರ್ಷಗಳಾಗುತ್ತಿವೆ. ಈಗ, ಆ ಕರಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಎಲ್.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಸಾಧ್ವಿ ಋತಂಭರಾ, ಸಾಕ್ಷಿ ಮಹಾರಾಜ್, ನೃತ್ಯಗೋಪಾಲ್ ದಾಸ್ ಸೇರಿದಂತೆ 32 ಆರೋಪಿಗಳು ‘ಮಸೀದಿಯನ್ನು ಕೆಡವಿದವರು’ ಎಂಬ ಆರೋಪದಿಂದ ಖುಲಾಸೆಗೊಂಡಿದ್ದಾರೆ. ನಿಜ ಹೇಳಬೇಕೆಂದರೆ, ಇಷ್ಟೊಂದು ತಡವಾಗಿ ಹೊರಬರುತ್ತಿರುವ ಈ ತೀರ್ಪು ನಿರೀಕ್ಷಿತವೇ. ಆದರೆ, ರಾಮಮಂದಿರಕ್ಕಾಗಿ ಆಗ್ರಹಿಸುವ ಮೂಲಕ ಮೂರು ದಶಕಗಳ ಹಿಂದೆ ಸಣ್ಣಗೆ ಆರಂಭವಾದ ಈ ವಿದ್ಯಮಾನವು, ಸಮಕಾಲೀನ ಭಾರತದ ರಾಜಕಾರಣವು ಕಂಡಿರುವ ಹಲವು ಪಲ್ಲಟಗಳಿಗೆ ಮೂಲಕಾರಣವಾಗಿದೆ; ಏಕಮುಖೀ ರಾಜಕಾರಣವನ್ನು ಭಗ್ನಗೊಳಿಸಿದೆ; ಮುಸ್ಲಿಮರ ಎದುರು ಅನಗತ್ಯವಾಗಿ ಬೆದರುಬೊಂಬೆಗಳನ್ನು ನಿಲ್ಲಿಸುತ್ತ ಅವರನ್ನು ದಿಕ್ಕು ತಪ್ಪಿಸುತ್ತಿದ್ದ ರಾಜಕೀಯ ಸಮೀಕರಣಗಳನ್ನು ಛಿದ್ರಗೊಳಿಸಿದೆ. ಹಾಗೆಯೇ, ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಈ ದೇಶದಲ್ಲಿ ಒಂದು ರಾಜಕೀಯ ಶಕ್ತಿಯಾಗಿ ಬೆಳೆದು ನಿಲ್ಲುವುದು ಅಸಂಭವವೆನ್ನುವುದನ್ನು ಇದು ಸುಳ್ಳಾಗಿಸಿ, ಇವತ್ತು ಬಿಜೆಪಿಗೆ ಇಡೀ ದೇಶದಲ್ಲಿ ಒಂದು ಭದ್ರನೆಲೆಯನ್ನು ಇದು ತಂದುಕೊಟ್ಟಿದೆ. ಪ್ರಾಯಶಃ, ಈ ವಿಷಯದಲ್ಲಿ ಮೇಲಿಂದ ಮೇಲೆ ತಪ್ಪು ಹೆಜ್ಜೆಗಳನ್ನಿಡುತ್ತ ಬಂದ ಕಾಂಗ್ರೆಸ್ ಈಗ ಕೈಕೈ ಹಿಸುಕಿಕೊಳ್ಳುತ್ತಿರಬಹುದು. ಇವೆಲ್ಲದರ ನಡುವೆ, ಮಂದಿರ-ಮಸೀದಿ ವಿವಾದವನ್ನು ಬಗೆಹರಿಸುವ ಬದಲು ಅದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ನೋಡಿದ ತೃತೀಯ ರಂಗದ ಶಕ್ತಿಗಳು ಇಂದು ಭಾರತದ ರಾಜಕಾರಣದಲ್ಲಿ ಹೇಳಹೆಸರಿಲ್ಲದಂತಾಗಿ ಹೋಗಿವೆ.
ಬಿಜೆಪಿ ಯಾರಿಗೂ ಗೊತ್ತಿಲ್ಲದ ಕಾಲವದು
ಅದು 1980ರ ದಶಕದ ಉತ್ತರಾರ್ಧದ ಕಾಲ. ಆಗಿನ್ನೂ ನಮ್ಮ ತಲೆಮಾರಿನವರಿಗೆ ಬಿಜೆಪಿಯ ಹೆಸರೂ ಅಷ್ಟಾಗಿ ಗೊತ್ತಿರಲಿಲ್ಲ. ಆರೆಸ್ಸೆಸ್ʼಗೆ ಅಂತಹ ಭದ್ರ ನೆಲೆಯೇನೂ ಇಲ್ಲದ ಹಾಸನ ಜಿಲ್ಲೆಯಲ್ಲಿರುವ ನಮ್ಮ ಹಳ್ಳಿಗಳಿಗೆ ಬಂದ ಕೆಲವರು, ರಾಮಮಂದಿರದ ಸಲುವಾಗಿ ಎಲ್ಲರಿಂದಲೂ ಪ್ರಾಯಶಃ ತಲಾ ಒಂದು ಅಥವಾ ಎರಡು ರೂಪಾಯಿಗಳನ್ನು ದೇಣಿಗೆಯಾಗಿ ಕೊಡುವಂತೆ ನಮ್ಮೂರಿನ ಗ್ರಾಮದೇವತೆಯ ತೋಪಿನಲ್ಲಿ ಒಂದಿಷ್ಟು ಜನರನ್ನು ಸೇರಿಸಿ, ಮನವಿ ಮಾಡಿಕೊಂಡರು. ಇದಾದ ಒಂದೆರಡು ವರ್ಷಗಳಾದ ಮೇಲೆ ನಮ್ಮೂರಿನ ಗೋಡೆಗಳ ಮೇಲೆ ರಾಮಮಂದಿರದ ಪರವಾದ ಭಿತ್ತಿಪತ್ರಗಳು ಕಾಣಿಸಿಕೊಂಡವು. ಇದಕ್ಕಿಂತ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸೀಟುಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ, 1989ರ ಚುನಾವಣೆಯಲ್ಲಿ 80ಕ್ಕಿಂತ ಹೆಚ್ಚು ಸೀಟುಗಳಲ್ಲಿ ವಿಜಯೋತ್ಸವ ಆಚರಿಸಿತ್ತು. ಅದರ ಈ ಗೆಲುವು, ಭಾರತದ ರಾಜಕಾರಣವು ಸಾಗಲಿರುವ ಭವಿಷ್ಯದ ಹಾದಿಯ ಮುನ್ಸೂಚನೆ ಆಗಿತ್ತು. ಆದರೆ, ಈ ಸತ್ಯವು ತೀರಾ ತಡವಾಗಿ ಹಂತಹಂತಗಳಲ್ಲಿ ಗೊತ್ತಾಗುತ್ತ ಬಂತು. ಅಂದರೆ, ಮೊದಲಿಗೆ ವಾಜಪೇಯಿ ಯವರ ನೇತೃತ್ವದ ಎನ್ಡಿಎ ಸರಕಾರ ಅಸ್ತಿತ್ವಕ್ಕೆ ಬಂದಾಗ ಭಾಗಶಃ ಗೊತ್ತಾದ ಈ ಸತ್ಯವು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತೀರಾ ಕೆಟ್ಟದಾಗಿ ಸೋತಾಗ ಇನ್ನಷ್ಟು ನಿಚ್ಚಳವಾಯಿತು. ಬಳಿಕ, 2019ರಲ್ಲಿ ನಡೆದ ಮಹಾಚುನಾವಣೆಯು ದೇಶದ ರಾಜಕಾರಣವು ತನ್ನದಾಗಿಸಿಕೊಂಡಿರುವ ಈ ಚಹರೆಗಳನ್ನು ಇನ್ನಷ್ಟು ಸ್ಫುಟವಾಗಿ ಪ್ರದರ್ಶಿಸಿತು. ಇದಕ್ಕೆ ಕಾಂಗ್ರೆಸ್ಸಿನ ‘ಮಹಾಪರಾಧಗಳ’ ಕೊಡುಗೆಯೂ ಸಾಕಷ್ಟಿದೆ ಎನ್ನುವುದನ್ನು ಇವತ್ತು ಬಿಜೆಪಿ ಕೂಡ ಒಳಗೊಳಗೇ ಸ್ಮರಿಸಿಕೊಳ್ಳುತ್ತಿರಬಹುದು.
ಭಾರತವು 1947ರಲ್ಲಿ ಬ್ರಿಟಿಷರ ದಾಸ್ಯದಿಂದ ವಿಮೋಚನೆಗೊಂಡು, ಸ್ವತಂತ್ರವಾದ ರಾಷ್ಟ್ರವಾಯಿತಷ್ಟೆ. ಇದಾದ ಮೇಲೆ, 1977ರವರೆಗೂ ದೇಶದಲ್ಲಿ ಕಾಂಗ್ರೆಸ್ಸಿನದೇ ದರ್ಬಾರು! ಅಂದರೆ, ಸತತವಾಗಿ ಮುವ್ವತ್ತು ವರ್ಷಗಳ ಕಾಲ ಒಂದೇ ಪಕ್ಷದ, ಒಂದೇ ಕುಟುಂಬದ ಆಡಳಿತ; ಮಧ್ಯೆ ಲಾಲ್ಬಹದ್ದೂರ್ ಶಾಸ್ತ್ರಿಯವರು ಬಂದು ಹೋಗಿದ್ದನ್ನು ಬಿಟ್ಟರೆ ಜವಾರಲಾಲ್ ನೆಹರು, ಇಂದಿರಾ ಗಾಂಧಿಯವರದೇ ಯಜಮಾನಿಕೆ. ಮತ್ತೆ 1980ರಿಂದ 1989ರವರೆಗೆ ಇಂದಿರಾ ಗಾಂಧಿ, ಅವರ ಸುಪುತ್ರ ರಾಜೀವ್ ಗಾಂಧಿಯ ಪಾರುಪತ್ಯ. ಮತ್ತೆ 1991ರಿಂದ 1996 ಹಾಗೂ 2004ರಿಂದ 2014ರವರೆಗೆ ಕ್ರಮವಾಗಿ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ಸಿನದೇ ಅಧಿಕಾರ. ಅಂದರೆ, ಸ್ವತಂತ್ರ ಭಾರತದ ಇಷ್ಟು ವರ್ಷಗಳ ಇತಿಹಾಸದಲ್ಲಿ ಭರ್ತಿ ಐವತ್ತನಾಲ್ಕು ವರ್ಷಗಳ ಕಾಲ ಕಾಂಗ್ರೆಸ್ಸೇ ಈ ದೇಶದ ಚುಕ್ಕಾಣಿ ಹಿಡಿದಿತ್ತು. ದೇಶದ ರಾಜಕೀಯದಲ್ಲಿ ಹೊಸಗಾಳಿ ಬೀಸಿರುವುದು ಆಗೊಮ್ಮೆ ಈಗೊಮ್ಮೆಯಷ್ಟೆ. ಅಂದರೆ, ಮೊರಾರ್ಜಿ ದೇಸಾಯಿ, ವಿ.ಪಿ.ಸಿಂಗ್, ವಾಜಪೇಯಿ ಇಂಥವರ ಕಾಲದಲ್ಲಿ. ಆದರೆ, 2014ರಿಂದ ಈ ‘ಹೊಸಗಾಳಿ’ ಪಡೆದುಕೊಂಡಿರುವ ಸ್ವರೂಪ ಖಂಡಿತವಾಗಿಯೂ ಬೇರೆ. ಆದರೆ, ಮುಖ್ಯವಾಗಿ ಕಾಂಗ್ರೆಸ್ ಈ ‘ನಾಡಿಮಿಡಿತ’ವನ್ನು ಅರಿಯುವಲ್ಲಿ ಸೋತಿದೆ.
ಆಡ್ವಾಣಿ, ಜೋಷಿ ಮತ್ತು ಕಾಂಗ್ರೆಸ್ಸಿನ ಅವಸಾನ
ಕಾಂಗ್ರೆಸ್ ಈಗ ದೇಶದಲ್ಲಿ ಮುಖ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ ಎನ್ನುವುದು ಆ ಪಕ್ಷದ ಅಭಿಮಾನಿಗಳೂ ಒಪ್ಪಿಕೊಳ್ಳಬೇಕಾದಂತಹ ಕಠೋರ ವಾಸ್ತವ. ಆದರೆ, ಇದು ಇಂದು-ನಿನ್ನೆಯ ಬೆಳವಣಿಗೆಯಲ್ಲ. ನಿಜ ಹೇಳಬೇಕೆಂದರೆ, ಬಿಜೆಪಿಯಲ್ಲಿನ ನಿಜವಾದ ಅರ್ಥದ ಅಗ್ರೇಸರ ಲಾಲಕೃಷ್ಣ ಆಡ್ವಾಣಿಯವರು ರಾಮಮಂದಿರಕ್ಕಾಗಿ ಆಗ್ರಹಿಸಿ ದೇಶದಲ್ಲಿ ರಥಯಾತ್ರೆಯನ್ನು ಆರಂಭಿಸಿದ ದಿನವೇ ಕಾಂಗ್ರೆಸ್ಸಿನ ಈ ಅವಸಾನ ಆರಂಭವಾಯಿತು. ಏಕೆಂದರೆ, ಶಾಬಾನು ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿಹಾಕಿಕೊಂಡಿದ್ದ ರಾಜೀವ್ ಗಾಂಧಿಯವರ ನೇತೃತ್ವದ ಅಂದಿನ ಕಾಂಗ್ರೆಸ್ ಸರಕಾರ, ಅದರಿಂದ ಪಾರಾಗಲು ಹೋಗಿ ಹಿಂದೂ ಮತಗಳನ್ನು ಸೆಳೆಯುವ ಉದ್ದೇಶದಿಂದ ಅಯೋಧ್ಯೆಯ ರಾಮಮಂದಿರ ವಿಚಾರಕ್ಕೆ ಕೈಹಾಕಿತು. ಆದರೆ, ಎಂದಿನಂತೆ ಅದು ಇಲ್ಲಿ ‘ಡಬಲ್ ಗೇಮ್’ ಮಾಡಿತು. ಹಾಗೆ ನೋಡಿದರೆ, ಚಾರಿತ್ರಿಕವಾದ ಬಹುಮತವನ್ನು ಹೊಂದಿದ್ದ ಅಂದಿನ ಕಾಂಗ್ರೆಸ್ ಸರಕಾರವು ಈ ಮಂದಿರ-ಮಸೀದಿ ವಿವಾದವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ, ಅಂತಹ ಸದವಕಾಶವನ್ನು ಅದು ತಾನಾಗಿಯೇ ಕೈಚೆಲ್ಲಿತು. ಈ ಸ್ವಯಂಕೃತಾಪರಾಧಕ್ಕೆ ಅದು ರಾಜಕೀಯವಾಗಿ ದೊಡ್ಡ ಬೆಲೆಯನ್ನೇ ತೆರಬೇಕಾಗಿ ಬಂತೆನ್ನುವುದು ಸುಳ್ಳಲ್ಲ.
ಇದೆಲ್ಲ ಏನೇ ಇರಲಿ, ಒಮ್ಮುಖವಾಗಿ ಸಾಗಿದ್ದ ದೇಶದ ರಾಜಕಾರಣವನ್ನು ಎರಡು ವಿದ್ಯಮಾನಗಳು ಆಮೂಲಾಗ್ರವಾಗಿ ಬದಲಿಸಿದವು. ಅವೆಂದರೆ- ಒಂದು, ಸೋಮನಾಥದಿಂದ ಅಯೋಧ್ಯೆಯವರೆಗೆ ರೂಪಿಸಿದ್ದ ಆಡ್ವಾಣಿಯವರ ‘ರಥಯಾತ್ರೆ’; ಇನ್ನೊಂದು, ನಂತರ ಬಿಜೆಪಿ ಚುಕ್ಕಾಣಿ ಹಿಡಿದ ಮುರಳಿ ಮನೋಹರ ಜೋಷಿಯವರು ದಕ್ಷಿಣದ ಕನ್ಯಾಕುಮಾರಿಯಿಂದ ಆರಂಭಿಸಿ ಉತ್ತರದ ತುದಿಯಲ್ಲಿರುವ ಶ್ರೀನಗರದವರೆಗೂ ಯಶಸ್ವಿಯಾಗಿ ನಡೆಸಿದ ‘ಏಕತಾ ಯಾತ್ರೆ’. ಈ ಇಬ್ಬರು ಮುತ್ಸದ್ದಿಗಳ ಯೋಗದಾನ, ಧೈರ್ಯ, ದೂರದೃಷ್ಟಿಗಳ ಸಿಹಿಫಲಗಳನ್ನು ಮೋದಿ-ಶಾ-ನಡ್ಡಾ ನೇತೃತ್ವದ ಬಿಜೆಪಿ ಆಸ್ವಾದಿಸುತ್ತಿದೆ.
ವಾಸ್ತವವಾಗಿ, ಬಿಜೆಪಿಯು ಇನ್ನೂ ಜನಸಂಘವಾಗಿದ್ದಾಗ ಅದು ಗಾಂಧೀಪ್ರಣೀತ ವಿಚಾರಗಳಿಗೆ ಮಣೆ ಹಾಕುತ್ತಿತ್ತು. ಅಷ್ಟೇ ಏಕೆ, ನೆಹರುಪ್ರಣೀತ ಸಮಾಜವಾದಿ ಚಹರೆಯ ಮಿಶ್ರ ಆರ್ಥಿಕತೆಗೆ ಬದಲಾಗಿ ಅದು ಆ ದಿನಗಳಲ್ಲಿ ಗಾಂಧಿ ಪ್ರತಿಪಾದಿತ ಆರ್ಥಿಕತೆಯನ್ನೇ ಮುಂಚೂಣಿಗೆ ತರಲು ನೋಡುತ್ತಿತ್ತು. ಇಷ್ಟರ ಮಧ್ಯೆ ಅದು ದೀನದಯಾಳ್ ಉಪಾಧ್ಯಾಯರ ‘ಏಕಾತ್ಮ ಮಾನವವಾದ’ವನ್ನು ಕೂಡ ನೆಚ್ಚಿಕೊಂಡಿದ್ದ ದಿನಗಳಿದ್ದವು. ಆದರೆ, ಬಿಜೆಪಿಗೆ ನಿಜವಾಗಿಯೂ ಲಾಭ ತಂದುಕೊಟ್ಟಿದ್ದು ರಾಮಮಂದಿರದ ವಿಚಾರವೇ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕಾಂಗ್ರೆಸ್ ಮಾಡುತ್ತಿದ್ದ ಎಡವಟ್ಟುಗಳು ಮತ್ತು ನಂತರ ಬಂದ ಕಾಂಗ್ರೆಸ್ಸೇತರ ಪ್ರಧಾನಿ ವಿ.ಪಿ.ಸಿಂಗ್ ಎಸಗಿದ ‘ಮಹಾಪರಾಧ’ ಎರಡರ ಆಳದಲ್ಲೂ ಇದ್ದ ‘ಅಪೀಸ್ಮೆಂಟ್ ಪಾಲಿಟಿಕ್ಸ್’ ಅನ್ನು ಬೆತ್ತಲುಗೊಳಿಸಿ, ಬಿಜೆಪಿಗೆ ಶಕ್ತಿ ತುಂಬಿದ್ದೆಂದರೆ ಆಡ್ವಾಣಿ-ಜೋಷಿ ಜೋಡಿ. ಇದಾದ ಮೇಲೆ, ಕಾಂಗ್ರೆಸ್ಸಿನ ಶಕ್ತಿ ಕಳೆಗುಂದುತ್ತ ಬಂದಿತು. ಇದು ಎಷ್ಟರ ಮಟ್ಟಿಗೆ ಸಂಭವಿಸಿತೆಂದರೆ, ಅದು ಬಹುತೇಕ ಎಲ್ಲ ಕಡೆಗಳಲ್ಲೂ ಪ್ರಾದೇಶಿಕ ಪಕ್ಷಗಳನ್ನು ಅವಲಂಭಿಸಬೇಕಾಗಿ ಬಂತು. ಇದಕ್ಕೆ ಕಾರಣಗಳೇನೆಂದು ಇಲ್ಲಿ ಸ್ಥೂಲವಾಗಿ ನೋಡಬಹುದು.
ಕಾಂಗ್ರೆಸ್ ತಪ್ಪುಗಳು; ಬಿಜೆಪಿಯ ಹೆಜ್ಜೆಗಳು
ಅದೇನೆಂದರೆ, ಭಾರತದಲ್ಲಿ ರಾಜಕಾರಣವು ಕೆಲವು ಸಾಂಪ್ರದಾಯಿಕ ನಂಬಿಕೆಗಳ ಮೇಲೆ ನಡೆದುಕೊಂಡು ಬಂದಿದೆ. ಅಂದರೆ, ಬಹುಸಂಖ್ಯಾತರಾಗಿರುವ ಹಿಂದೂ ಸಮುದಾಯಕ್ಕೆ ಕೂಡ ದೇವರು, ಧರ್ಮ, ಅವತಾರ, ಪುರಾಣ, ಭಕ್ತಿ, ಆಸ್ತಿಕತೆ ಮುಂತಾದ ನಂಬಿಕೆಗಳಿವೆ. ಅಲ್ಪಸಂಖ್ಯಾತ ಮುಸ್ಲಿಮರ ಧಾರ್ಮಿಕ ಭಾವನೆ/ವಿಚಾರ/ಬೇಡಿಕೆ/ಆಗ್ರಹಗಳಿಗೆ ಮಾತ್ರ ಮಣೆ ಹಾಕುತ್ತ ಬಂದ ಕಾಂಗ್ರೆಸ್, ಬಹುಸಂಖ್ಯಾತ ಹಿಂದೂಗಳ ಇಂತಹ ತುಡಿತ-ಮಿಡಿತಗಳನ್ನು ತಿರಸ್ಕರಿಸುತ್ತ ಬಂತು. ಅಂದರೆ, ಹಿಂದೂಗಳ ವಿಚಾರಕ್ಕೆ ಬಂದಾಗ ಮಾತ್ರ ಅದು ‘ಸೋಕಾಲ್ಡ್’ ಬೌದ್ಧಿಕ ಅಥವಾ ನಿಷ್ಠುರ ವೈಚಾರಿಕೆಯ ಅಸ್ತ್ರಗಳನ್ನು ಜಳಪಿಸತೊಡಗಿತು. ಇಷ್ಟರ ಮಧ್ಯೆ ನೆಹರು-ಇಂದಿರಾ ಗಾಂಧಿ ಕಾಲದ ‘ಹಿಂದೂ ಕಾಂಗ್ರೆಸ್ ನಿಷ್ಠರು’ ಕಾಲಗರ್ಭಕ್ಕೆ ಸೇರಿ, ‘ಹೊಸ ಹಿಂದೂ ತಲೆಮಾರುಗಳು’ ಅಸ್ತಿತ್ವಕ್ಕೆ ಬಂದಿರುವುದನ್ನು ಈ ಪಕ್ಷ ಪರಿಗಣಿಸಲಿಲ್ಲ. ಹೀಗಾಗಿ, ಹೆಚ್ಚಿನ ಹಿಂದೂಗಳಿಗೆ ಕಾಂಗ್ರೆಸ್ಸೆಂದರೆ ಅದೊಂದು ‘ಹಿಂದೂ ವಿರೋಧಿ ಪಕ್ಷ’ವೆನ್ನುವ ಬಲವಾದ ಅಭಿಪ್ರಾಯ ಬಂತು. ಇದು, ಹೆಚ್ಚಿನ ಹಿಂದೂಗಳು ಬಿಜೆಪಿಯತ್ತ ವಾಲಲು ಪ್ರಮುಖ ಕಾರಣವಾಯಿತು. ಕಾಂಗ್ರೆಸ್ಸಿನ ವಿರುದ್ಧ ಈ ದೇಶದ ಬಹುಸಂಖ್ಯಾತರಲ್ಲಿ ಈ ಭಾವನೆ ದಿನದಿಂದ ದಿನಕ್ಕೆ ಮತ್ತಷ್ಟು ಬಲಗೊಳ್ಳುತ್ತಿದೆ. ಹೀಗಾಗಿಯೇ, ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ‘ಮೃದು ಹಿಂದುತ್ವ’ದತ್ತ ವಾಲುತ್ತಿದೆ. ಆದರೆ, ಇದು ಆ ಪಕ್ಷವನ್ನು ಮೇಲಕ್ಕೆತ್ತುವುದು ಅನುಮಾನದ ಸಂಗತಿಯಾಗಿದೆ.
ಎರಡನೆಯದಾಗಿ, ಕಾಂಗ್ರೆಸ್ ಈ ದೇಶದ ನೈಜ ಇತಿಹಾಸ ನಿರೂಪಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ಬದಲಿಗೆ, ಅದು ಎಡಪಂಥೀಯರನ್ನು ನೇಪಥ್ಯದಲ್ಲಿ ಸಲಹುತ್ತ ತನಗೆ ಬೇಕಾದಂತಹ ಅನುಕೂಲಸಿಂಧು ಚರಿತ್ರೆಯನ್ನು ಕಟ್ಟಿಕೊಡತೊಡಗಿತು. ಆದರೆ, ಇಂದಿರಾ ಗಾಂಧಿಯವರ ಕಾಲದಲ್ಲಿ ನಡೆಯುತ್ತಿದ್ದ ಈ ಆಟವನ್ನು 1990ರ ಹೊತ್ತಿಗೆ ಮೂಸುವವರು ಕೂಡ ಇರಲಿಲ್ಲ. ಆದರೆ, ಕಾಂಗ್ರೆಸ್ ದೇಶದ ಶಾಲಾ-ಕಾಲೇಜು ಮತ್ತು ಯೂನಿವರ್ಸಿಟಿಯ ಪಠ್ಯಗಳಲ್ಲಿ ತೇಲಿಬಿಡತೊಡಗಿದ ಈ ಚರಿತ್ರೆಯು ಬಹುಸಂಖ್ಯಾತ ಸಮುದಾಯಗಳಿಗೆ ‘ಉದ್ದೇಶಪೂರ್ವಕ’ವಾಗಿ ತಿರುಚಲ್ಪಟ್ಟ ಮತ್ತು ತಮ್ಮ ಪಾಲಿಗೆ ‘ಪ್ರತಿಕೂಲಸಿಂಧು ಚರಿತ್ರೆ’ಯಾಗಿ ಕಾಣತೊಡಗಿತು. ಹೀಗಾಗಿ, ನೆಹರು-ಇಂದಿರಾ ಪೊರೆಗಳನ್ನು ಕಿತ್ತೆಸೆದ ಯುವ ತಲೆಮಾರಿಗೆ ಬಿಜೆಪಿ ಆಕರ್ಷಕವಾಗಿ ಕಾಣತೊಡಗಿತು.
ಮೂರನೆಯದಾಗಿ, ಕಾಂಗ್ರೆಸ್ ಭಯೋತ್ಪಾದನೆಯ ವಿಚಾರದಲ್ಲಿ ಕೂಡ ‘ವೋಟ್ ಬ್ಯಾಂಕ್’ ರಾಜಕಾರಣದ ಸೂತ್ರಗಳನ್ನು ಅನುಸರಿಸಿಕೊಂಡು ಬಂತು. ಅಂದರೆ, ಬಹುಸಂಖ್ಯಾತರು ತನ್ನನ್ನು ತಿರಸ್ಕರಿಸಿದರೂ ಪರವಾಗಿಲ್ಲ, ತನಗೆ ಅಲ್ಪಸಂಖ್ಯಾತರ ವೋಟುಗಳು ತನ್ನ ಕೈಹಿಡಿದರೆ ಸಾಕು ಎನ್ನುವ ತಪ್ಪು ಕಲ್ಪನೆ ಅಥವಾ ಅತಿಯಾದ ಆತ್ಮವಿಶ್ವಾಸ ಅದನ್ನು ದಾರಿ ತಪ್ಪಿಸಿತು. ಜೊತೆಗೆ, ನಾಲ್ಕನೆಯದಾಗಿ, ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಸ್ವತಃ ಜನರೇ ಹೆಚ್ಚಿನ ಅರಿವನ್ನು ಹೊಂದಿರುತ್ತಾರೆ ಎನ್ನುವ ಆಧುನಿಕ ಸತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅದು ಸಂಪೂರ್ಣವಾಗಿ ಸೋತಿತು. ಬಿಜೆಪಿಗೆ ರಾಮ ರಥಯಾತ್ರೆ ಮತ್ತು ಏಕತಾ ಯಾತ್ರೆ ಎರಡೂ ಲಾಭ ತಂದುಕೊಟ್ಟವು ಎನ್ನುವುದು ನಿಜ. ಆದರೆ, ಅವು ಅಂತಹ ಅಭೂತಪೂರ್ವ ಯಶಸ್ಸನ್ನು ಗಳಿಸಲು ಕಾಂಗ್ರೆಸ್ಸಿನ ಈ ತಪ್ಪುಗಳೂ ತಮ್ಮದೇ ಆದ ಗಣನೀಯ ‘ಕೊಡುಗೆ’ಯನ್ನು ಕೊಟ್ಟಿವೆ ಎನ್ನುವುದೂ ಅಷ್ಟೇ ಸತ್ಯ!
ಈಗಾಗಲೇ ಹೇಳಿರುವಂತೆ, ಆಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯವರೆಗೆ 10 ಸಾವಿರ ಕಿಲೋಮೀಟರ್ ಉದ್ದದ ರಥಯಾತ್ರೆಯನ್ನು ನಡೆಸಲು ಆಯೋಜಿಸಿದ್ದರಷ್ಟೆ. ಅವರು ತಮ್ಮ ಪಾಡಿಗೆ ತಾವು ರಥಯಾತ್ರೆ ಮಾಡಿಕೊಳ್ಳಲಿ ಎಂದು ಅಂದಿನ ವಿ.ಪಿ.ಸಿಂಗ್ ಸರಕಾರ ಬಿಟ್ಟಿದ್ದರೆ ಏನೂ ಆಗುತ್ತಿರಲಿಲ್ಲವೇನೋ! ಆದರೆ, ಅವರು ಬಿಹಾರವನ್ನು ಆಗ ಆಳುತ್ತಿದ್ದ ಲಾಲುಪ್ರಸಾದ್ ಮೂಲಕ ಆಡ್ವಾಣಿಯವರನ್ನು ಧನಬಾದ್’ನಲ್ಲಿ ಬಂಧಿಸುವಂತೆ ಮಾಡಿದರು. ಇದು ಬಿಜೆಪಿಯ ಬೆಳವಣಿಗೆಗೆ ದೊಡ್ಡ ವರಪ್ರಸಾದದಂತೆ ಸಿಕ್ಕಿತು. ಹಾಗೆಯೇ, ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮಿತಿಮೀರಿ ಅಲ್ಲಿ ಭಾರತದ ಧ್ವಜದ ಹಾರಾಟವೇ ನಿಂತುಹೋಗಿತ್ತು. ಆದರೆ, ಏಕತಾ ಯಾತ್ರೆಯನ್ನು ಕೈಗೊಂಡ ಮುರಳಿ ಮನೋಹರ ಜೋಷಿಯವರು ಶ್ರೀನಗರದ ಲಾಲ್ ಚೌಕದಲ್ಲಿ ಉಗ್ರರ ಬೆದರಿಕೆಗಳಿಗೆ ಮಣಿಯದೆ ರಾಷ್ಟ್ರಧ್ವಜಾರೋಹಣ ಮಾಡಿದರು. ಇದು ಕಾಂಗ್ರೆಸ್-ವಿರೋಧಿಗಳಿಗೂ ಬಹುಸಂಖ್ಯಾತರಿಗೂ ಈ ದೇಶದ ಪಾಲಿಗಿರುವ ಭರವಸೆಯೆಂದರೆ ಅದು ಬಿಜೆಪಿ ಮಾತ್ರ ಎನ್ನುವ ಆಸೆಯನ್ನು ಹುಟ್ಟಿಸಿತು. 1990ರ ನಂತರದ ದೇಶದ ರಾಜಕಾರಣ ಮತ್ತು ಬಿಜೆಪಿ (ಮತ್ತು ಅದರ ಮಿತ್ರಪಕ್ಷಗಳು) ಗಳಿಸಿಕೊಂಡು ಬಂದಿರುವ ಶಕ್ತಿಯನ್ನು ಗಮನಿಸಿದರೆ ಸುಲಭವಾಗಿ ತಿಳಿಯುತ್ತದೆ.
ಪಟೇಲ್-ಬೋಸ್-ಅಂಬೇಡ್ಕರ್
ಇದರ ಜೊತೆಗೆ ಕಾಂಗ್ರೆಸ್ ಎಷ್ಟೊಂದು ‘ಕುಟುಂಬ ಕೇಂದ್ರಿತ’ವಾಯಿತೆಂದರೆ, ಅದು ಸ್ವತಃ ಅಗ್ರ ನಾಯಕಮಣಿಗಳಾಗಿದ್ದವರನ್ನೆಲ್ಲ ವಿಸ್ಮೃತಿಗೆ ಸರಿಸಿತು. ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ಚಂದ್ರ ಬೋಸ್, ತೀರಾ ಇತ್ತೀಚಿನ ಪಿ.ವಿ.ನರಸಿಂಹರಾವ್ ಇವರನ್ನೆಲ್ಲ ಅಂಚಿಗೆ ತಳ್ಳಿ, ‘ನೆಹರು ಕೇಂದ್ರಿತ’ವಾಗಿ, ಅದರಲ್ಲಿ ‘ಇಂದಿರಾ-ರಾಜೀವ್-ಸೋನಿಯಾ’ ಎಂಬ ಟಿಸಿಲುಗಳನ್ನು ಮಾತ್ರ ಕಾಣತೊಡಗಿತು. ಈಗ ಇದು ‘ರಾಹುಲ್-ಪ್ರಿಯಾಂಕಾ ಭಜನೆ’ ಎಂಬ ಸಮೂಹಸನ್ನಿಯ ಮಟ್ಟಕ್ಕೆ ಹೋಗಿದೆ. ಇನ್ನೊಂದೆಡೆಯಲ್ಲಿ, ಅಂಬೇಡ್ಕರ್ ಅವರಂಥವರಿಗೆ ಕಾಂಗ್ರೆಸ್ ಪಕ್ಷವು ಮಾಡಿದ ವಿದ್ರೋಹವು ಹಿಂದೂ ಸಮುದಾಯದ ದಮನಿತ ಜಾತಿಗಳಿಗೆ ಸಿಟ್ಟು ತರಿಸಿತು. ಅಲ್ಲದೆ, ಅಂಬೇಡ್ಕರ್ ಅವರ ಕಾಂಗ್ರೆಸ್ ವಿರೋಧಿ ರಾಜಕಾರಣ, ಅವರು ದೇಶ ವಿಭಜನೆಯ ವಿರುದ್ಧ ತಾಳಿದ್ದರೆನ್ನಲಾಗುವ ನಿಲುವುಗಳು ಕಳೆದ ಮೂರು ದಶಕಗಳಲ್ಲಿ ವ್ಯಾಪಕವಾಗಿ ಪ್ರಚುರಗೊಂಡವು. ಇದನ್ನೆಲ್ಲ ಗಮನಿಸಿದ ಬಿಜೆಪಿ, ಪಟೇಲ್-ಬೋಸ್-ಅಂಬೇಡ್ಕರ್ ಅವರನ್ನೆಲ್ಲ ಚಾತರ್ಯದಿಂದ ‘ಹೈಜಾಕ್’ ಮಾಡಿತು; ಅಲ್ಪಸಂಖ್ಯಾತ ಧರ್ಮಕ್ಕೆ ಸೇರಿದ ಅಬ್ದುಲ್ ಕಲಾಂ ಮತ್ತು ದಲಿತರಾದ ರಾಮನಾಥ್ ಕೋವಿಂದ್ ಅವರಂಥವರನ್ನು ರಾಷ್ಟ್ರಪತಿ ಹುದ್ದೆಗೇರಿಸಿತು. ಈ ಮೂಲಕ ‘ಹಿಂದುತ್ವ’ ಎಂಬ ದೊಡ್ಡ ಕ್ಯಾನ್ವಾಸಿನಲ್ಲಿ ಬಹುಸಂಖ್ಯಾತರಿಗೂ ಈ ಬಹುಸಂಖ್ಯಾತರೊಳಗಿನ ಶೋಷಿತರಿಗೂ ಆಪ್ತವಾಗುವಂತಹ ಹಲವು ಹಿತಕರವಾದ ಬಣ್ಣಗಳನ್ನು ಕಾಣಿಸತೊಡಗಿತು. ಹೀಗಾಗಿ, ಕಾಂಗ್ರೆಸ್ಸಿನ ಭದ್ರಕೋಟೆಗಳು ಒಂದೊಂದಾಗಿ ಮಣ್ಣುಪಾಲಾಗುತ್ತ ಬಂದವು.
ಇದರ ಜೊತೆಗೆ ಇನ್ನೊಂದು ಅಂಶವನ್ನಿಲ್ಲಿ ಪ್ರಸ್ತಾಪಿಸಬೇಕು. ಅದೇನೆಂದರೆ, ನಮ್ಮ ಕಾಲದ ‘ಲೋಹ ಪುರುಷ’ ಆಡ್ವಾಣಿಯವರು ಶುರು ಮಾಡಿದ ‘ಅಗ್ರೆಸೀವ್ ಪಾಲಿಟಿಕ್ಸ್’! ಇವತ್ತು ಮೋದಿ-ಶಾ ನಡೆಸುತ್ತಿರುವ ‘ಅಗ್ರೆಸೀವ್ ಪಾಲಿಟಿಕ್ಸ್’ಗೆ ಹೋಲಿಸಿದರೆ ಆಡ್ವಾಣಿಯವರದು ‘ಸಾಫ್ಟ್ ಪಾಲಿಟಿಕ್ಸ್’ ಎನಿಸುವುದು ನಿಜ. ಆದರೆ, ಸ್ಥಗಿತಗೊಂಡಿದ್ದ ರಾಷ್ಟ್ರ ರಾಜಕಾರಣದಲ್ಲಿ ಸಂವಾದದ ಅಲೆಗಳನ್ನು ಎಬ್ಬಿಸಿದ್ದು ಅವರ ದೊಡ್ಡ ಶಕ್ತಿಯಾಗಿದೆ. ಇದಕ್ಕೆ ಇಂಬಾಗಿ ಜೋಷಿಯವರು ನಂತರದ ದಿನಗಳಲ್ಲಿ ಕೆಲಸ ಮಾಡಿದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಇದರ ಜೊತೆಗೆ, ವಾಜಪೇಯಿಯವರ ‘ವಿಶಾಲ ಹೃದಯ’ದ ಮತ್ತು ಕಾವ್ಯಾತ್ಮಕ ವ್ಯಕ್ತಿತ್ವದ ‘ಚುಂಬಕ ಶಕ್ತಿ’ ಬಿಜೆಪಿಯ ನೆಲೆಯನ್ನು ವಿಸ್ತರಿಸಿತು.
PHOTO COURTESY: LK ADVANI’S MY COUNTRY MY LIFE
ಅಂದಮಾತ್ರಕ್ಕೆ, ಕಳೆದ ಮುವ್ವತ್ತು ವರ್ಷಗಳಲ್ಲಿ ಬಿಜೆಪಿ ಮುಗ್ಗರಿಸಿಯೇ ಇಲ್ಲವೆಂದಲ್ಲ. ಅದು ‘ಇಂಡಿಯಾ ಶೈನಿಂಗ್’ ಎಂದುಕೊಂಡು ಹೊರಟಾಗ ಚುನಾವಣೆಯಲ್ಲಿ ಸೋತಿದೆ. ಇದೇ ಆಡ್ವಾಣಿಯವರ ನೇತೃತ್ವದಲ್ಲಿ 2009ರ ಚುನಾವಣೆಯನ್ನು ಎದುರಿಸಿದಾಗಲೂ ಅದು ಗೆಲುವಿನ ದಡವನ್ನು ಮುಟ್ಟಲಿಲ್ಲ. ಆದರೆ, ದೇಶವನ್ನು ಹಲವು ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಗಳ ಬಗ್ಗೆ ಒಂದು ದೃಢ ನಿಲುವಿಗೆ ಅಂಟಿಕೊಂಡಿತ್ತು. ಈ ಅಂಶವು ಅದು ಜನರ ಮನವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿರುವುದರಲ್ಲಿ ಎರಡು ಮಾತಿಲ್ಲ. ಅದು ರಾಮಮಂದಿರ ಇರಬಹುದು; ಕಾಶ್ಮೀರವಿರಬಹುದು; ತ್ರಿವಳಿ ತಲಾಖ್’ನಂಥ ವಿಚಾರವೇ ಆಗಿರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ, ಅದು ಜನರಿಗೆ ಸರಿಯಾಗಿ ತಲುಪುವ ಮತ್ತು ಅವರೊಂದಿಗೆ ಮಾತುಕತೆ ನಡೆಸುವ ಕಲೆಯನ್ನು ಅರಗಿಸಿಕೊಂಡಿದೆ. ಇನ್ನೊಂದೆಡೆಯಲ್ಲಿ, ಯಾರು ಏನೇ ಹೇಳಲಿ, ಅದು ಕಾಂಗ್ರೆಸ್ಸಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಇವೆಲ್ಲವೂ ಸೇರಿ ಇಂದು ಬಿಜೆಪಿಯನ್ನು ಪ್ರಬಲವಾದ ರಾಜಕೀಯ ಶಕ್ತಿಯಾಗಿ ಪ್ರತಿಷ್ಠಾಪಿಸಿವೆ ಎನ್ನುವುದು ಒಪ್ಪಿಕೊಳ್ಳಬೇಕಾದ ತರ್ಕವಾಗಿದೆ.
ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಬಿಜೆಪಿ ಪರವಾಗಿ ಅಭಿಪ್ರಾಯವನ್ನು ರೂಪಿಸತೊಡಗಿದಂತಹ ವಿದ್ಯಮಾನಗಳ ಕೊಡುಗೆ, ಸೋಷಿಯಲ್ ಮೀಡಿಯಾಗಳ ಪರಿಣಾಮಕಾರಿ ಬಳಕೆ, ಜಾಗತಿಕ ಮಟ್ಟದಲ್ಲಿ ಮುನ್ನೆಲೆಗೆ ಬರತೊಡಗಿದ ಬಲಪಂಥೀಯ ರಾಜಕಾರಣ ಇತ್ಯಾದಿ ಅಂಶಗಳು ಕೂಡ ಬಿಜೆಪಿಯ ಇಂದಿನ ಬೆಳವಣಿಗೆಗೆ ನೀರೆರೆದಿರುವುದು ನಿಜ. ಆದರೆ, ಇವುಗಳನ್ನು ಇನ್ನೊಂದು ಸಂದರ್ಭದಲ್ಲಿ ಪ್ರತ್ಯೇಕವಾಗಿ ನೋಡಬಹುದಾಗಿದೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆಡ್ವಾಣಿ ಸೇರಿದಂತೆ ಎಲ್ಲರೂ ನಿರ್ದೋಷಿಗಳಾಗಿರುವ ಈ ಹೊತ್ತಿನಲ್ಲಿ ಇವೆಲ್ಲ ಹಾಗೆಯೇ ನೆನಪಾಯಿತು. ಅಂದಂತೆ, ಬಿಜೆಪಿ ಇದರಿಂದ ಮೈಮರೆಯಬಾರದು; ಹಾಗೆಯೇ, ಅತಿಯಾದ ಬೌದ್ಧಿಕತೆಯನ್ನು ನೆಚ್ಚಿಕೊಂಡು ಮೂಲೆಗುಂಪಾಗಿರುವ ಕಾಂಗ್ರೆಸ್, ಇದರಿಂದ ಪಾಠಗಳನ್ನು ಕಲಿಯದೆ ಇರಬಾರದು. ಅಲ್ಲವೇ?
***
ಈ ಕೆಳಗಿನ ಸುದ್ದಿಯನ್ನು ಓದಲು ಲಿಂಕ್ ಕ್ಲಿಕ್ ಮಾಡಿ…
Nice information….