top photo curtassy: Nagaland Tourism facebook page / apen.small_villageboy
ಈ ಯುದ್ಧದ ಕಥೆ ಓದುತ್ತಿದ್ದರೆ ಮೈಜುಂ ಎನ್ನುತ್ತದೆ. ನೆತ್ತಿ ಮೇಲೆ ದೊಡ್ಡದೊಡ್ಡ ಕಿರೀಟಗಳನ್ನಿಟ್ಟುಕೊಂಡ ಅರಸರೆಲ್ಲ ಆಂಗ್ಲರಿಗೆ ಜೈಹೋ ಎಂದ ಕಾಲಲ್ಲೇ ನಾಗಾ ವೀರರು ನಿಜ ಸಿಂಹಗಳಂತೆ ಘರ್ಜಿಸಿದ್ದರು. ಕೇವಲ ಬಿಲ್ಲುಬಾಣಗಳಿಂದಲೇ ಅವರ ಎದೆ ಸೀಳಿದ್ದರು. ಜಗತ್ತು ಗೆದ್ದು ಜಗದೇಕವೀರರಂತೆ ಮರೆಯುತ್ತಿದ್ದ ಬ್ರಿಟಿಷರು, ನಾಗಾ ಕಣಿವೆಗಳಲ್ಲಿ ಚಿತ್ತಾಗಿದ್ದರು. ಸ್ವತಃ ಯದ್ಧದಲ್ಲಿ ಆಂಗ್ಲರನ್ನು ಮುನ್ನಡೆಸಿದ ಜಾನ್ಸ್ಟೋನ್ ಬರೆದ ಯುದ್ಧದ ಕಥೆಯನ್ನು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗಾಗಲೇ 4 ಭಾಗಗಳಲ್ಲಿ ಪ್ರಕಟವಾದ ಈ ರೋಚಕ ಕಥನಕ್ಕೆ ಓದುಗರು ಮಾರುಹೋಗಿದ್ದಾರೆ.
ಭಾಗ 5
ಕೆಲವು ನಿಮಿಷಗಳಾದ ಮೇಲೆ ಒಮ್ಮಲೆ ಗುಂಡುಗಳನ್ನು ಸಿಡಿಸಿದೆವು. ಇನ್ನೊಂದು ಕಡೆಯಿಂದ ಲೆ.ರಾಬನ್ ರಾಕೆಟ್‌ಗಳನ್ನು ಸ್ಫೋಟಿಸಿದರು. ಅವುಗಳಲ್ಲಿ ಬಹಳಷ್ಟು ನಮ್ಮ ಕೆಳಗಿನ ತಪ್ಪಲಲ್ಲಿದ್ದ ರಿಡ್ಜ್’ವೇ ಸೈನಿಕರ ಹಿಂದೆ ಸ್ಫೋಟಗೊಂಡವು. ಕೆಲವು ಮಾತ್ರ ಖೋನೊಮಾ ಮೇಲೆ ಸಿಡಿದವು. ನಾವು ನೀಡಿದ ಸಂಜ್ಞೆಯಿಂದ ಲೆ.ರಾಬನ್ ತಮ್ಮ ಸ್ಥಳವನ್ನು ಬಿಟ್ಟು ಬಂದು ನಮ್ಮ ಜೊತೆಗೆ ಸೇರಿಕೊಂಡರು. ನಮ್ಮ ಬಂದೂಕುಗಳ ಆಕ್ರಮಣ ಹಳ್ಳಿಯ ಮೇಲೆ ಯಾವ ಪರಿಣಾಮವು ಬೀರಲಿಲ್ಲ. ಖೋನೊಮಾ ಕಲ್ಲುಕೋಟೆಯ ಮೇಲೆ ಒಬ್ಬರೂ ಕಾಣಿಸಿಕೊಳ್ಳಲಿಲ್ಲ. ಆದರೆ 44ನೇ ರೆಜಿಮೆಂಟಿನ ಸೈನಿಕರು ಕಡಿದಾದ ಬೆಟ್ಟದ ಮೇಲೆ ಕೋಟೆಯ ಕಡೆಗೆ ವೀರಾವೇಶವಾಗಿ ತೆವಳುತ್ತಿದ್ದರು.
CURTASSY: NORTHEASTTOURISM.GOV.IN
ಮಧ್ಯಾಹ್ನ 2.30 ಗಂಟೆಗೆ ಸ್ಥಳ ಬದಲಿಸಿ ನಾವು ಈಗ ಹಳ್ಳಿಯಿಂದ 800 ಗಜಗಳ ದೂರದಲ್ಲಿದ್ದೆವು. ಹಳ್ಳಿಯ ಒಳಗಿಂದ ಹಾರಿಬಂದ ಒಂದು ಗುಂಡು ನಮ್ಮ ಕೂಲಿಯೊಬ್ಬನಿಗೆ ಬಡಿದು ಗಾಯಗೊಂಡ. ಲೆ.ಹೆಂಡರ್‌ಸನ್ ಸೈನ್ಯವನ್ನು ಶತ್ರುಗಳು ಖಾಲಿ ಮಾಡಲು ಕಾದಾಟ ನಡೆಸುತ್ತಿದ್ದರು. ಈ ಸಮಯದಲ್ಲಿ ಬೆಟ್ಟದ ಒಂದು ಸ್ಥಳದಲ್ಲಿರುವ ಒಂದು ಗುಂಪಿನ ಮೇಲೆ ಬಂದೂಕು ಮತ್ತು ರಾಕೆಟ್‌ಗಳನ್ನು ಸ್ಫೋಟಿಸಿದೆವು. ಆದರೆ 43ನೇ ರೆಜಿಮೆಂಟಿನ ಸೈನಿಕರು ನಿಲ್ಲಿಸುವಂತೆ ಕೂಗಿಕೊಂಡರು. ಅಷ್ಟರಲ್ಲಿ ನಾವು ಬೈನಾಕ್ಯುಲರ್‌ಗಳಲ್ಲಿ ವೀಕ್ಷಿಸಿದರೆ ಅದು ಶತ್ರುಗಳ ಪಡೆಯಲ್ಲ ಕ್ಯಾ.ವಿಲಿಯಂಸನ್ ಕಂಪನಿ. ಆಗಲೇ ಅವರು ಕೋಟೆಯ ಹತ್ತಿರತ್ತಿರ ತಲುಪಿದ್ದರು. ಸುತ್ತಲಿನ ಪ್ರದೇಶವನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಕ್ಯಾ.ನುಟ್ಟಲ್ ಅವರು ಖೋನೊಮಾ ಬೆಟ್ಟವನ್ನು ಪೂರ್ಣವಾಗಿ ಸುತ್ತುವರಿದಿದ್ದಾರೆ ಎಂದುಕೊಂಡು ನಾವು ಬಂದೂಕುಗಳನ್ನು ಸಿಡಿಸುತ್ತ ಡಾಮೆಂಟರು ಸಾಗಿದ್ದ ದಾರಿಯಲ್ಲಿ ಹಳ್ಳಿಯ ಕಡೆಗೆ ಹೋದೆವು. ಈಗ ನಾವು ಡಾಮೆಂಟ್‌ರ ಪ್ರಾಣ ತೆಗೆದುಕೊಂಡಿದ್ದ ಬಾಗಿಲು ಹತ್ತಿರ ತಲುಪಿದ್ದೆವು. ಅಷ್ಟು ಹೊತ್ತಿಗೆ ಕ್ಯಾ.ನುಟ್ಟಲ್ ಸೈನ್ಯ ನಮ್ಮಿಂದ ದೂರವಾಗಿತ್ತು. ಸುತ್ತಲು ನೋಡುತ್ತೇವೆ. ನಮ್ಮ ಕಣ್ಣುಗಳ ಮುಂದೆ ಅಪಶಕುನದ ಸೂಚನೆಗಳು ಕಾಣಿಸುತ್ತಿವೆ. ಎಲ್ಲೆಲ್ಲೂ ಹರಿದು ಬಿದ್ದಿರುವ ದೇಹಗಳು… ಗಂಭೀರವಾಗಿ ಗಾಯಗೊಂಡಿರುವ ಸೈನಿಕರು… ‘ಕೋಟೆಯ ಮೇಲೆ ಇನ್ನೂ ನಾಗಾಗಳೆ ನಿಂತಿದ್ದಾರೆ?’ ಎಂಬುದಾಗಿ ಮುಂದಿದ್ದ ಸೈನಿಕರು ಕೂಗಿ ಹೇಳುತ್ತಿದ್ದರು.
ಅವರನ್ನು ದಾಟಿ ಸ್ವಲ್ಪ ಮುಂದೆ ಹೋದಾಗ ನಾವು ನೆಲದ ಮೇಲೆ ಗಟ್ಟಿಯಾಗಿ ನಾಟಿದ್ದ ಬಿದಿರು ಮೆಳೆಗಳ ಮೇಲೆ ಹತ್ತಿ ಹೋಗಬೇಕಾಗಿತ್ತು. ಅವುಗಳಿಗೆ ಹೇರಳ ಮುಳ್ಳುಕಂಪೆಗಳು ಮತ್ತು ಬಿದಿರು ಮೆಳೆಗಳನ್ನು ದಬ್ಬೆಗಳಲ್ಲಿ ಗಟ್ಟಿಯಾಗಿ ಕಟ್ಟಲಾಗಿತ್ತು. ಅದರ ಮೇಲೆ ಕಷ್ಟಪಟ್ಟು ಹತ್ತಿಹೋದರೆ ಅಲ್ಲೆಲ್ಲ ಹೆಣಗಳು. ಹೆಣಗಳನ್ನೇ ಮೆಟ್ಟಿಲು ಮಾಡಿಕೊಂಡು ಹತ್ತಿಹೋದೆವು, ಬೆಂಕಿ ಬೇರೆ ಉರಿಯುತ್ತಿದೆ. ಮುಂದೆ ಉದ್ದವಾದ ಕಲ್ಲುಕೂಸುಗಳ ಮೂಲಕ ಹತ್ತಿಹೋದರೆ ಅಲ್ಲೊಂದು ಗೋಪುರ. 44ನೇ ರೆಜಿಮೆಂಟಿನ ಕೆಲವು ಸೈನಿಕರು ಅಲ್ಲಿ ಸುತ್ತಲೂ ನಿಂತಿದ್ದಾರೆ. ಕ್ಯಾ.ನುಟ್ಟಲ್ ಅವರನ್ನು ‘ನಿಮ್ಮ ಸೈನಿಕರೆಲ್ಲ ಎಲ್ಲಿ?’ ಕೇಳಿದೆ. ಅವರು ಸುತ್ತಲಿದ್ದವರನ್ನು ತೋರಿಸಿ ‘ಇವರೆ ಅವರೆಲ್ಲ’ ಎಂದರು. ಪರಿಸ್ಥಿತಿ ತೀರ ಗಂಭೀರವಾಗಿತ್ತು. ಈಗ ತುರ್ತಾಗಿ ಏನಾದರೂ ಉಪಾಯ ಯೋಚಿಸದಿದ್ದರೆ ನಾಗಾ ಪರ್ವತಗಳಲ್ಲಿ ನಮ್ಮ ಪರಿಸ್ಥಿತಿ ತೀರ ನಾಚಿಕೆಗೇಡಾಗುತ್ತದೆ ಎಂದುಕೊಂಡೆ.
ಈಗ ನಮ್ಮ ಕೈಕೆಳಗೆ ಇನ್ನಷ್ಟು ಹೆಚ್ಚು ಶ್ರಮತೆಯ ಬಂದೂಕುಗಳು ಬಂದಿದ್ದವು. 80ರಿಂದ 100 ಗಜಗಳ ದೂರದಲ್ಲಿದ್ದ ಕೋಟೆಯ ಮೇಲೆ ಬೆಂಕಿಯನ್ನು ಉಗುಳತೊಡಗಿದೆವು. ಲೆ.ಮನ್ಸೆಲ್ ಮತ್ತು ಮೂವರು ಯುರೋಪಿಯನ್ ಅಧಿಕಾರಿಗಳು ಶತ್ರುಗಳ ಮೇಲೆ ಸಿಡಿಮದ್ದಿನ ಮಳೆಗೆರೆದರು. ಮನ್ಸೆಲ್ ಅವರನ್ನು ಕತ್ತಲಾಗುವುದರೊಳಗೆ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಕರೆಸುವಂತೆ ಜನರಲ್ ಅವರಿಗೆ ಒತ್ತಾಯಿಸಿದೆ. ಆಗ ಮನ್ಸೆಲ್ ತನ್ನ ಸೈನ್ಯದೊಂದಿಗೆ ಮತ್ತೊಂದು ಸ್ಥಳದಿಂದ ಆಕ್ರಮಣ ನಡೆಸುವುದರಲ್ಲಿದ್ದರು. ಅಷ್ಟು ದೊಡ್ಡ ಪ್ರಮಾಣದ ಮನ್ಸೆಲ್ ಸೈನ್ಯದ ದಾಳಿ ಪ್ರತಿಸಲವೂ ನಾಗಾಗಳಿಂದ ಹಿಂದಕ್ಕೆ ಬರುತ್ತಿತ್ತು. ನಾವು ಒಂಬತ್ತು ಅಧಿಕಾರಿಗಳು ಎರಡು ಗುಂಪುಗಳನ್ನು ಮಾಡಿ ಮುನ್ನುಗ್ಗಿದೆವು. ಜನರಲ್, ನುಟ್ಟಲ್, ಕುಕ್ ಇದ್ದ ನಮ್ಮ ಸೈನ್ಯ ಪಡೆ ಕೋಟೆಯ ಮುಂಭಾಗದಿಂದ ಹತ್ತಲು ಪ್ರಯತ್ನಿಸತೊಡಗಿತು. ಇನ್ನೊಂದು ಸೈನ್ಯ ಪಡೆ ನಮ್ಮ ಬಲಗಡೆ ಅದೇ ಪ್ರಯತ್ನ ನಡೆಸುತ್ತಿತ್ತು. ಇದರಲ್ಲಿ ರಿಡ್ಜ್’ವೇ ಮತ್ತು ಪೋರ್ಬ್ಸ್ ಇದ್ದರು. ರಿಡ್ಜ್,ವೇ ಅವರು ತಮ್ಮ ಸೈನ್ಯವನ್ನು ‘ಚಲೆಹಾವ್…ಚಲೆಹಾವ್…’ ಎಂದು ಕೂಗಿ ಹೇಳುತ್ತ ಕೋಟೆಯ ಮೇಲೆಕ್ಕೆ ಹತ್ತುತ್ತಿದ್ದರು.
ಈಗಿನ ಖೋನೊಮಾ ಗ್ರಾಮ ಮತ್ತು ಕಲ್ಲಿನಕೋಟೆ.
CURTASSY: NORTHEASTTOURISM.GOV.IN
ಬೆನ್ನಟ್ಟಿ ಬಂದ ಮೃತ್ಯು
ಈಗ ನಾಗಾಗಳು ಮೈಮರೆತಂತೆ ನಮ್ಮ ಮೇಲೆ ಭರ್ಚಿಗಳು ಮತ್ತು ಗುಂಡು ಕಲ್ಲುಗಳನ್ನು ಸುರಿಯತೊಡಗಿದರು. ಒಂದು ಭರ್ಚಿ ಪೋರ್ಬ್ಸ್’ರನ್ನು ತಿವಿದರೆ, ಮತ್ತೊಂದು ಭರ್ಚಿ ರಿಡ್ಜ್’ಡೇ ಎಡತೊಳನ್ನು ಗಂಭೀರವಾಗಿ ಗಾಯಮಾಡಿತ್ತು. ಧೀರ ಸುಬೇದಾರ್ ನಿರ್‌ಬೀರ್ ಬಂದೂಕಿನ ಗುಂಡಿಗೆ ಬಲಿಯಾದರು. ನನ್ನ ವಿಶ್ವಸನೀಯ ಸಿಪಾಯಿ ನಾರಾಯಣ್ ಸಿಂಗ್ ಕೂಡ ಸಾವನ್ನಪ್ಪಿದ್ದರು. ದುರಾದೃಷ್ಟವೆಂದರೆ ನಾಗಾಗಳ ದಾಳಿಯನ್ನು ತಡೆಯಲಾಗದೆ ನಮ್ಮ ಸೈನಿಕರು ನಮ್ಮ ಎದುರುಗಡೆಯೇ ಪ್ರಾಣ ಬಿಡುತ್ತಿದ್ದರು. ನಮ್ಮ ಪಕ್ಕದಲ್ಲಿ ಇನ್ನೊಂದು ಕಡೆಯಿಂದ ಸೈನಿಕರು ಕೋಟೆಯ ಗೋಡೆಗಳನ್ನು ಹತ್ತುತ್ತಿದ್ದರು. ಅವರ ಮೇಲೆ ನಾಗಾಗಳು ದೊಡ್ಡದೊಡ್ಡ ಕಲ್ಲುಗಳನ್ನು ಎಸೆಯುತ್ತಿದ್ದರು. ಗಂಭೀರವಾಗಿ ಗಾಯಗೊಂಡವರು, ಒಂದೇ ಏಟಿಗೆ ಸತ್ತವರು ಕೆಳಕ್ಕೆ ಬೀಳುತ್ತಿದ್ದರೆ, ಉಳಿದವರು ಹತ್ತಲು ನಿರಂತರವಾಗಿ ಸಾಹಸ ಮಾಡುತ್ತಲೆ ಇದ್ದರು. ನಾವು ಕೆಲವರು ಕೆಳಗಿನ ಒಂದು ಹಂತದಲ್ಲಿ ಇಳಿದುಕೊಂಡೆವು. ಅಲ್ಲಿ ಗಾಯಗೊಂಡವರು ಕೆಲವರು ಸುಧಾರಿಸಿಕೊಳ್ಳುತ್ತಿದ್ದರು. ಅವರು ನನಗೆ ಹೊಸ ಮುಖಗಳಾಗಿದ್ದು ಅವರನ್ನು ನಾನು ಒಟ್ಟುಗೂಡಿಸಲು ಪ್ರಯತ್ನಪಟ್ಟು, ಪ್ರಯೋಜನವಾಗಲಿಲ್ಲ. ರಾಬನ್ ಪ್ರಯತ್ನಪಟ್ಟರೂ ಆಗಲಿಲ್ಲ. ಉಳಿದಿದ್ದ ನಮ್ಮ ಸಣ್ಣ ಪಡೆ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಆಗ ನಾಗಾಗಳು ಯುರೋಪಿಯನ್ ಅಧಿಕಾರಿಗಳ ಮೇಲೆ ದಾಳಿ ಮಾಡತೊಡಗಿದರು.
ಮಧ್ಯದಲ್ಲಿದ್ದ ಮೇ.ಕುಕ್ ತಲೆಮರೆಸಿಕೊಳ್ಳಲು ನಿಧಾನವಾಗಿ ಹಿಂದಕ್ಕೆ ಬರುತ್ತಿದ್ದಂತೆ ಅವರಿಗೆ ಒಂದು ಗುಂಡು ಬಡಿಯಿತು. ಅದರ ಹಿಂದೆಯೇ ಇನ್ನೊಂದು ಹೊಡೆತದಿಂದ ಅವರು ಸಾವನ್ನಪ್ಪಿದರು. ಮನ್ಸೆಲ್ ಕಡೆಗೆ ಜೋರಾಗಿ ಕೂಗಿದ್ದೆ, ಮನ್ಸೆಲ್ ನಮ್ಮ ಮೇಲಿದ್ದವರ ಕಡೆಗೆ ಪಿರಂಗಿ ದಾಳಿ ನಡೆಸಿದಾಗ ನಾವು ಹಿಂದಕ್ಕೆ ಓಡಿ ಬಂದು ಪ್ರಾಣ ಉಳಿಸಿಕೊಂಡೆವು. ಮುಂದಿನ ಒಂದು ನಿಮಿಷದಲ್ಲಿ ಜನರಲ್, ಕ್ಯಾ.ನುಟ್ಟಲ್ ನಾನು ಮತ್ತು ನಮ್ಮ ಜೊತೆಗೆ ಐವರು ಸಿಪಾಯಿಗಳು ಮಾತ್ರ ಉಳಿದುಕೊಂಡಿದ್ದೆವು. ಜನರಲ್‌ಗೆ ‘ನಾವು ಹಿಂದಿರುಗೋಣ’ ಎಂದೆ. ಉರಿಯುತ್ತಿದ್ದ ಕೋಟೆಯಿಂದ ಹಿಂದಕ್ಕೆ ಬರುತ್ತಿದ್ದಂತೆ ಕುಕ್ ಮಾರಕವಾಗಿ ಗಾಯಗೊಂಡು ಒಂದು ಮರೆಯಲ್ಲಿ ಕುಳಿತು ನರಳುತ್ತಿದ್ದರು. ಸ್ವಲ್ಪ ದೂರದಲ್ಲಿ ಭೀಕರವಾಗಿ ಬಂದೂಕು ಮತ್ತು ಸಿಡಿಮದ್ದುಗಳ ದಾಳಿ ನಡೆಯುತ್ತಿತ್ತು. ಲೆ.ಬೈಲೇ, ಕುಕ್‌ಗಾಗಿ ಸ್ಟ್ರೆಚರ್ ಹಿಡಿದುಕೊಂಡು ಧಾವಿಸಿ ಬಂದರು. ಕುಕ್‌ರನ್ನು ಸ್ಟೆçಚರ್ ಮೇಲೆ ಹೊತ್ತೊಯ್ಯುತ್ತಿದ್ದವನೊಬ್ಬನಿಗೆ ಗುಂಡು ಬಡಿದಿದ್ದೆ ಕಾಂಪ್‌ಬೆಲ್ ಸ್ಟ್ರೆಚರ್ ಹಿಡಿದುಕೊಂಡು ನಾವು ಸ್ಥಾಪಿಸಿದ್ದ ತುರ್ತು ಆಸ್ಪತ್ರೆಗೆ ತಂದರು.
ನಾವು ಸ್ಥಾಪಿಸಿದ್ದ ಆಸ್ಪತ್ರೆ ಸುರಕ್ಷಿತ ಸ್ಥಳದಲ್ಲಿದ್ದು, ದೌರ್ಭಾಗ್ಯವೆಂದರೆ ನಾವು ಆಸ್ಪತ್ರೆ ತಲುಪುವ ಮುಂಚೆಯೆ ಅಲ್ಲಿ ನೂರಾರು ಸೈನಿಕರು ಗಾಯಗೊಂಡು ನರಳುತ್ತಿದ್ದರು. ಯುವಕರಾದ ಫೋರ್ಬ್ಸ್ ಹಿಂದಕ್ಕೆ ಒರಗಿಕೊಂಡಿದ್ದು, ಕಾಗದದಂತೆ ಬಿಳಿಚಿಕೊಂಡಿದ್ದರೂ ಮುಖದಲ್ಲಿ ಉಲ್ಲಾಸ ತುಂಬಿಕೊಂಡಿದ್ದರು. ರಿಡ್ಜ್’ಡೇ ದೇಹ ಛಿದ್ರಗೊಂಡಿತ್ತು. ‘ತುಂಬಾ ಗಾಯ ಆಗಿಲ್ಲ ತಾನೇ’ ಕೇಳಿದೆ. ‘ನನ್ನ ಭುಜ ಜಜ್ಜಿಹೋಗಿದೆ ಅಷ್ಟೇ’ ಎಂದರು. ನುಟ್ಟಲ್ ಮಾತ್ರ ಹೆಚ್ಚು ಗಾಯಗೊಂಡಿರಲಿಲ್ಲ. ಒಂಬತ್ತು ಯುರೋಪಿಯನ್ ಅಧಿಕಾರಿಗಳಲ್ಲಿ ನಾಲ್ಕು ಜನರು ಗಾಯಗೊಂಡಿದ್ದರು. ಅದಲ್ಲದೆ 44ನೇ ರೆಜಿಮೆಂಟಿನ ಎಲ್ಲಾ ರಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಬಹಳಷ್ಟು ಸೈನಿಕರು ಪ್ರಜ್ಞೆ ಇಲ್ಲದೆ ಬಿದ್ದಿದ್ದರೆ, ಕೆಲವರು ನರಳುತ್ತಿದ್ದರು. ಕೆಲವರು ಶಾಂತವಾಗಿದ್ದರೆ ಇನ್ನೂ ಕೆಲವರು ಖಿನ್ನಗೊಂಡಿದ್ದರು. ಆಸ್ಪತ್ರೆಯ ಹೊರಗೆ ಸೈನಿಕರ ಹೆಣಗಳ ರಾಶಿಯೇ ಬಿದ್ದಿತ್ತು. ಸ್ಥಳೀಯರಲ್ಲಿ ಶೇಕಡ 25ರಷ್ಟು ಸೈನಿಕರು ಪೂರ್ಣವಾಗಿ ಗಾಯಗೊಂಡಿದ್ದರು, ಇಲ್ಲ ಸತ್ತುಹೋಗಿದ್ದರು.
ಗಾಯಗೊಂಡು ಕುಕಿನಾಗಾ ಒಬ್ಬ ತಾನೇ ನಡೆಯಲಾಗದೆ ಪ್ರಾಣ ಸಂಕಟಪಡುತ್ತ ಸತ್ತುಹೋಗಿದ್ದ ನಾಗಾ ಒಬ್ಬನನ್ನು ತಟ್ಟಾಡುತ್ತ ಹೊತ್ತು ತಂದಿದ್ದ. ಹೊರೆ ಆಳುಗಳ ರಕ್ಷಕರಿಗೆ ಆ ನಾಗಾ, ನಾಗಾ ಅಕ್ಕಿಯಲ್ಲಿ ಬೀರು ಮಾಡಿ ಕುಡಿಸುತ್ತಿದ್ದ. ಕುಕಿನಾಗಾ ತನ್ನ ಕೈಯಲ್ಲಿ ದಾವು ಹಿಡಿದುಕೊಂಡಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಪದೇ ಪದೇ ಅದನ್ನು ಶತ್ರುಗಳ ಕಡೆಗೆ ತೋರಿಸಿ ಗಾಳಿಯಲ್ಲಿ ಬೀಸುತ್ತಾ ಬಂದಿದ್ದ. ಉಳಿದಿದ್ದ ನಾವು ಆ ಕೋಟೆಯನ್ನು ವಶಕ್ಕೆ ತೆಗೆದುಕೊಳ್ಳುವುದು ಸಾಧ್ಯವಾಗದ ಕೆಲಸವಾಗಿತ್ತು. ಜೊತೆಗೆ ಕತ್ತಲು ಕವಿಯುತ್ತಿದ್ದು ನಮ್ಮಿಂದ ಬೇರ್ಪಟ್ಟಿದ್ದ ಇವಾನ್ಸ್, ಮೆಕ್ರೆಗರ್ ಮತ್ತು ಹೆಂಪರ್‌ಸನ್ ನೇತೃತ್ವ ಪಡೆಗಳ ಸುರಕ್ಷತೆಯ ಬಗ್ಗೆ ಚಿಂತೆಯಾಗತೊಡಗಿತ್ತು. ನಾವು ಆ ರಾತ್ರಿ ಆಸ್ಪತ್ರೆಯಲ್ಲೆ ಉಳಿದುಕೊಳ್ಳಲು ತೀರ್ಮಾನಿಸಿದೆವು. ಜನರಲ್‌ರ ಉಸ್ತುವಾರಿಯನ್ನು ಲೆ.ರಾಬನ್ ವಹಿಸಿಕೊಂಡರು. ಮನ್ಸೆಲ್ ಮತ್ತು ನಾನು ಜೊತೆಗಿದ್ದೆವು. ಕುಕಿನಾಗಾ ಕೂಲಿಗಳನ್ನು ಕರೆಸಿ ಉಳಿದ ಕೆಲಸಗಳನ್ನು ನೋಡಿಕೊಳ್ಳಲು ಆಜ್ಞಾಪಿಸಿದೆ.
ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್
***
ಹೀಗೆ ಹೆಜ್ಜೆಹೆಜ್ಜೆಗೂ ಬ್ರಿಟಿಷರು ತತ್ತರಿಸುವಂತೆ ಮಾಡಿದ್ದ ನಾಗಾಗಳು ಅಂತಿಮ ಮಾಡಿದ್ದೇನು? ಅಸಲಿಗೆ ಯುದ್ಧದಲ್ಲಿ ಗೆದ್ದವರಾದರೂ ಯಾರು?
ನಿರೀಕ್ಷಿಸಿ.. ಮುಂದಿನ ಭಾಗದಲ್ಲಿ…
***
ಬ್ರಿಟಿಷ್-ನಾಗಾ ಯುದ್ಧದ ಹಿಂದಿನ ಅಧ್ಯಾಯ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.