CURTASSY: NORTHEASTTOURISM.GOV.IN
130 ವರ್ಷಗಳ ಹಿಂದೆ ಈಶಾನ್ಯ ಭಾರತದ ಕಣಿವೆಗಳಲ್ಲಿ ನಡೆದ ನಾಗಾ-ಬ್ರಿಟಿಷ್ ಯುದ್ಧಕ್ಕೆ ಆದ ಐತಿಹಾಸಿಕ ಅನ್ಯಾಯ ಅಷ್ಟಿಷ್ಟಲ್ಲ. ಆ ಯುದ್ಧಕ್ಕೆ ಮೊದಲು ದ್ರೋಹ ಬಗೆದವರೇ ಆಂಗ್ಲರು. ಬಳಿಕ ಇತಿಹಾಸಕಾರರೂ ಅಸಡ್ಡೆ ತೋರಿದರು. ಆದರೆ, ಸತ್ಯ ಸಾಯುವುದಿಲ್ಲ. ಅದು ಈಗ ಮಾತನಾಡುತ್ತಿದೆ. ಆ ಕಗ್ಗತ್ತಲ ಕಣಿವಗಳಲ್ಲಿ ಬ್ರಿಟಿಷರ ಪರ ಹೋರಾಡಿದ ಭಾರತೀಯ ಯೋಧರು ಮತ್ತು ನಾಗಾ ವೀರರ ತ್ಯಾಗ-ಬಲಿದಾನ ಒಂದೂಕಾಲು ಶತಮಾನದ ನಂತರವೂ ಅವಿಚ್ಛಿನ್ನವಾಗಿದೆ. ಸ್ವತಃ ಯದ್ಧದಲ್ಲಿ ಆಂಗ್ಲರನ್ನು ಮುನ್ನಡೆಸಿದ ಜಾನ್ಸ್ಟೋನ್ ಬರೆದ ಯುದ್ಧದ ಕಥೆಯನ್ನು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈಗಾಗಲೇ 5 ಭಾಗಗಳಲ್ಲಿ ಪ್ರಕಟವಾದ ಈ ರೋಚಕ ಕಥನಕ್ಕೆ ಸಿಕೆನ್ಯೂಸ್ ನೌ ಓದುಗರು ಮಾರುಹೋಗಿದ್ದಾರೆ. ಇದು ಕೊನೆಯ ಅಧ್ಯಾಯ..
ಭಾಗ 6
ಇದಕ್ಕೆ ಮುಂಚೆ ಜನರಲ್ ನೇಶನ್ ಜೊತೆಗೆ ಒಂದು ದಿನ ಖೋನೊಮಾ ಹಳ್ಳಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಚೇಮಾದಿಂದ ಪ್ರಯತ್ನಿಸಿ ನಾಗಾಗಳು ನೀಡಿದ ಪ್ರಬಲ ಪ್ರತಿರೋಧದಿಂದ ಹಿಂದಕ್ಕೆ ಬಂದಿದ್ದೆವು. ಆಗ ೬೦೦೦ ಅಡಿಗಳ ಎತ್ತರದ ಪರ್ವತಗಳಲ್ಲಿ ಆಹಾರ ನೀರಿಲ್ಲದೆ, ಹೊದ್ದುಕೊಳ್ಳಲು ಬಟ್ಟೆಗಳಿಲ್ಲದೆ ಮರಗಟ್ಟುವ ಚಳಿಯಲ್ಲಿ ರಾತ್ರಿಗಳನ್ನು ಕಳೆದಿದ್ದೆವು. ಕೆಲವು ನಾಗಾ ಗೂಡಾಚಾರರ ಮೂಲಕ ಮೆಜುಮಾ ಹಳ್ಳಿಯ ಜನರನ್ನು ಸಚೇಮಾಗೆ ಕಳುಹಿಸಿ ಗಾಯಗೊಂಡವರಿಗೆ ಆಹಾರ ಮತ್ತು ಬಟ್ಟೆಗಳನ್ನು ತರಿಸಲಾಗಿತ್ತು. ಬಹಳ ತೊಂದರೆ ಪಟ್ಟು ಕುಡಿಯುವ ನೀರನ್ನು ಸಂಗ್ರಹಿಸಲಾಗಿತ್ತು. ಪಾತ್ರೆಗಳನ್ನು ತೊಳೆಯುವುದಕ್ಕೆ ನೀರಿಲ್ಲದೆ ನೆಲದಲ್ಲಿ ಕುಳಿತು ಗಂಜಿ ನೀರು ಕುಡಿದಿದ್ದೆವು. ವೈದ್ಯರು ತಮ್ಮ ರಕ್ತಸಿಕ್ತ ಕೈಗಳಿಂದಲೆ ಗಂಜಿ ಕುಡಿದಿದ್ದರು.
ಈಗ ನಮ್ಮಿಂದ ಬೇರ್ಪಟಿದ್ದ ಸೈನ್ಯ ಪಡೆಗಳು ಒಂದೊಂದಾಗಿ ನಾವಿದ್ದಲ್ಲಿಗೆ ಹಿಂದಿರುಗುತ್ತಿದ್ದವು. ಧೀರ ಅಧಿಕಾರಿಯಾಗಿದ್ದ ಕ.ಮೆಕ್ರೆಗರ್ ಕೇವಲ 15 ಸೈನಿಕರ ಪಡೆಯೊಂದಿಗೆ ದಿನವೆಲ್ಲ ನಾಗಾಗಳ ಜೊತೆಗೆ ಹೋರಾಡಿ ಬಂದಿದ್ದರು. ಮರು ದಿನ ಮತ್ತೆ ಹೋರಾಟ ನಡೆಸಬೇಕಾದರೆ ನಮ್ಮಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಇಲ್ಲದ ಕಾರಣ ವಿಲಿಯಂಸನ್ ಮತ್ತು ನಾನು ಸಚೇಮಾಗೆ ಹೋಗಿ ಬರಲು ನಿಶ್ಚೆಯಿಸಿದೆವು. ರಾತ್ರಿ ಆಗಾಧವಾದ ಚಳಿಯಿಂದ ನಮ್ಮ ದೇಹಗಳೆಲ್ಲ ಮರಗಟ್ಟಿಹೋಗಿದ್ದವು. ವಿಧಿಯಿಲ್ಲದೆ ಎಲ್ಲರೂ ಅಡ್ಡಾದಿಡ್ಡಿಯಾಗಿ ರಾಶಿರಾಶಿಯಾಗಿ ಮಲಗಿ ನಿದ್ದೆ ಮಾಡಿದ್ದೆವು. ನಮ್ಮ ಸುತ್ತಮುತ್ತಲು ಕತ್ತಲಲ್ಲಿ ಸತ್ತವರ ದೇಹಗಳು ಸೇರಿಕೊಂಡಿದ್ದವು.
ಮರು ದಿನ ವಿಲಿಯಂಸನ್ ಮತ್ತು ನಾನು 50 ಅಂಗರಕ್ಷಕರ ಜೊತೆಗೆ ಕೂಲಿಯಾಳುಗಳನ್ನು ಕರೆದುಕೊಂಡು ಹೊರಟೆವು. ಶತ್ರುಗಳು ಯಾರೂ ಕಾಣಿಸದಿದ್ದರೂ 43ನೇ ರೆಜಿಮೆಂಟಿನ ಹಲವಾರು ಸೈನಿಕರು ರಾತ್ರಿ ತಮ್ಮ ಪಡೆಗಳಿಂದ ಬೇರ್ಪಟ್ಟು ಅರಣ್ಯಗಳಲ್ಲಿ ಕಾಲ ಕಳೆದು ಹಿಂದಿರುಗುತ್ತಿದ್ದರು. ಸಚೇಮಾ ತಲುಪಿದಾಗ ಎಲ್ಲವೂ ವ್ಯವಸ್ಥಿತವಾಗಿದ್ದು ಖೋನೊಮಾ ಕೋಟೆಯ ಮೇಲೆ ನಮ್ಮ ದ್ವಜ ಹಾರಾಡುವುದು ಕಾಣಿಸಿತು. ಅಳಿದುಳಿದ ನಾಗಾಗಳನ್ನು ರಾತ್ರಿಯೇ ನಮ್ಮ ಪಡೆಗಳು ಹಿಮ್ಮೆಟ್ಟಿ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಮೆಜುಮಾ ಹಳ್ಳಿಯ ಜನರು ನಮಗೆ ಆದರದ ಸ್ವಾಗತ ನೀಡಿ ಆಹಾರ ಧಾನ್ಯಗಳನ್ನು ಕೊಟ್ಟರು. ಖೋನೊಮಾ ಹಳ್ಳಿಯ ಜನ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಮೆಜುಮಾ ಹಳ್ಳಿಯವರಿಗೆ ತಿಳಿಸಿದ್ದರಂತೆ. ಖೋನೊಮಾ ಕೋಟೆಯಲ್ಲಿ ಸಂಗ್ರಹಿಸಿದ್ದ 2000 ಬತ್ತದ ಚೀಲಗಳು ನಮ್ಮ ಕೈಸೇರಿದ್ದವು.
ಖೋನೊಮಾ ನಾಗಾಗಳು ಅತಿ ಎತ್ತರದ ದುರ್ಗಮ ಪರ್ವತ ಚುಕ್ಕ ಎಂಬ ಸ್ಥಳಕ್ಕೆ ಓಡಿಹೋಗಿದ್ದರು. ಅದಕ್ಕೂ ಮುಂಚೆ ಮಕ್ಕಳು ಮತ್ತು ಮಹಿಳೆಯರನ್ನು ಅಲ್ಲಿಂದ ದೂರ ಸಾಗಿಸಿದ್ದರು. ಮುಂದಾಲೋಚನೆಯಿಂದಲೇ ಅಲ್ಲೊಂದು ಹಳ್ಳಿಯನ್ನೇ ಸ್ಥಾಪಿಸಿದ್ದರು ಎಂದು ತಿಳಿಯಿತು. ನಮ್ಮ ಸೈನಿಕರು ಯಾರೂ ಅಲ್ಲಿಗೆ ತಲುಪಿ ದಾಳಿ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಸಾಕಷ್ಟು ಸೈನಿಕರನ್ನು ಅಧಿಕಾರಿಗಳನ್ನು ಕಳೆದುಕೊಂಡಿದ್ದ ನಾವು ಮತ್ತೆ ಅಷ್ಟು ಬೇಗನೆ ಸುಧಾರಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಖೋನೊಮಾದಲ್ಲಿ ಒಂದು ತುಕಡಿಯನ್ನು ಬಿಟ್ಟು ಗಾಯಗೊಂಡವರ ಜೊತೆಗೆ ಸಚೇಮಾ ಕಡೆಗೆ ಧಾವಿಸಿದೆವು. ಗಾಯಗೊಂಡ ರಿಡ್ಜ್ವೇಯನ್ನು ನಿಧಾನವಾಗಿ ನಡೆಸಿಕೊಂಡು ಹೊರಟೆವು. ನವೆಂಬರ್ 27ರಂದು ಜೋಟ್ಸೋಮಾ ಹಳ್ಳಿಯನ್ನು ನಾಶ ಮಾಡಿದ್ದ ಪಡೆಯ ಜೊತೆಗೆ ಸೇರಿಕೊಂಡೆವೆ. ಅದೇ ತಿಂಗಳು 29ರಂದು ರಾಬನ್ ಜೊತೆಗೆ ಮಣಿಪುರಕ್ಕೆ ಹೋಗಿ ಮತ್ತೆ ಡಿಸೆಂಬರ್ 4ರಂದು ಹಿಂದಿರುಗಿದೆ.
ಡಿಸೆಂಬರ್ 6ರಂದು ನಾನು ಮತ್ತು ವಿಲಿಯಂಸನ್ ಬೈಲಿಯವರನ್ನು ಭೇಟಿಯಾಗಲು ಹೊರಟೆವು. ದಾರಿಯಲ್ಲಿ ಸಮಗುಡ್ಟಿಂಗ್‌ನಲ್ಲಿ ನಮಗೆ ಅಭೂತಪೂರ್ವವಾದ ಸ್ವಾಗತ ದೊರಕಿತು. ಸುತ್ತಮುತ್ತಲಿನ ಹಳ್ಳಿಯ ಜನ ನನ್ನನ್ನು ನೋಡಲು ಅಲ್ಲಿ ಜಮಾಯಿಸಿದ್ದರು. ದುರ್ದೈವವೆಂದರೆ ಆ ಜನರು ‘ನಾಗಾ ಸೋರ್ಸ್’ (ಡೊಡ್ಡ ಸಿಡುಬು ರೀತಿ) ಎಂಬ ರೋಗದಿಂದ ನರಳುತ್ತಿರುವುದಾಗಿ ಮತ್ತು ಹಲವರು ಸತ್ತಿರುವುದಾಗಿ ತಿಳಿಯಿತು. ಸುಂದರವಾದ ಆ ಸುತ್ತಮುತ್ತಲಿನ ಚಿತ್ರಣ ನಿರ್ಜೀವವಾಗಿ ಕಾಣಿಸುತ್ತಿತ್ತು. ನನ್ನ ಕೆಳಗಿನ ಅಧಿಕಾರಿ, ನಾಗಾಗಳು ಗಿಡಮರಗಳ ಮರೆಯಲ್ಲಿ ಅಡಗಿಕೊಂಡು ದಾಳಿ ಮಾಡುವರೆಂಬ ಭೀತಿಯಿಂದ ಎಲ್ಲಾ ಪೈನ್ ಮರಗಳನ್ನು ನಿರ್ಧಾಕ್ಷಣ್ಯವಾಗಿ ಕಡಿದು ಉರುಳಿಸಿದ್ದರು. ಆ ದೃಶ್ಯವನ್ನು ನೋಡಿ ನನಗೆ ಎಷ್ಟು ಬೇಜಾರಾಯಿತೆಂದರೆ ಅಲ್ಲಿ ಒಂದು ದಿನ ಕಳೆಯಲು ಹೋದವನು ತಕ್ಷಣವೆ ಹಿಂದಿರುಗಿಬಿಟ್ಟೆ. ಡಿಸೆಂಬರ್ 9ರಂದು ಗೋಲಾಘಾಟ್ ತಲುಪಿದೆವು. ಮುಖ್ಯ ಕಮಿಷನರ್ ಜೊತೆಗ ಎರಡು ದಿನ ಕಾಲ ಕಳೆದು ಅಲ್ಲಿಂದ 12ರಂದು 55 ಮೈಲಿ ದೂರದ ದಿಮಾಪುರಕ್ಕೆ ಕಾಲು ನಡುಗೆಯಲ್ಲೆ ಹೊರಟುಬಂದಿದ್ದೆವು.
ಜಾನ್ಸ್ಟೋನ್ ಅನಾರೋಗ್ಯ
ಸರಿಯಾಗಿ ಊಟವಿಲ್ಲದೆ ಹೆಚ್ಚು ಕೆಲಸದಿಂದ ನನ್ನ ಆರೋಗ್ಯ ಕೆಟ್ಟುಹೋಗಿತ್ತು. ಡಿಸೆಂಬರ್ 14ರಂದು ಸಚೇಮಾ ತಲುಪಿದೆವು. ನನ್ನ ಆರೋಗ್ಯ ಇನ್ನಷ್ಟು ಕೆಟ್ಟು ವೈದ್ಯರು ಮಣಿಪುರಕ್ಕೆ ಹೋಗಿ ಸುಧಾರಿಸಿಕೊಳ್ಳುವಂತೆ ಒತ್ತಾಯ ಮಾಡಿದರು. ಡಿಸೆಂಬರ್ 22ರಂದು ಮಣಿಪುರ ತಲುಪಿ ಆರೋಗ್ಯ ಸುಧಾರಿಸಿಕೊಂಡು ಮತ್ತೆ 27ರಂದು ಮೈತುಫೆಯುಮ್ ಕಡೆಗೆ ಹೊರಟೆ. 60 ಮೈಲಿ ದೂರದ ದಾರಿಯಲ್ಲಿ ಕೊನೆಯ 20 ಮೈಲಿ ತೀರ ಸಂಕಟ ಮತ್ತು ನೋವಿನಿಂದ ನಡೆದುಬಂದೆ. ಮರುದಿನ ನನ್ನ ಸ್ಥಿತಿ ತೀರಾ ಉಲ್ಬಣಗೊಂಡು ಮಣಿಪುರಕ್ಕೆ ವಿಷಯ ತಲುಪಿಸಿ ಅಲ್ಲಿರುವ ವೈದ್ಯರನ್ನು ಮತ್ತು ಒಂದು ದೋಲಿಯನ್ನು (ನಾಲ್ಕು ಜನರು ಹೊತ್ತು ಸಾಗುವ ಸಣ್ಣ ಪಲ್ಲಕ್ಕಿ) ಕಳುಹಿಸುವಂತೆ ತಿಳಿಸಿದೆ. ನಾನು ಅಲ್ಲಿಂದ ಪೋನಿ ಮೇಲೆ ಮೈಯಾಂಗ್ ಖಾಂಗ್‌ವರೆಗೆ ನೋವು ಅನುಭವಿಸುತ್ತ ಸವಾರಿ ಮಾಡುತ್ತ ಬಂದಿದ್ದೆ. ರಾತ್ರಿ ಅಲ್ಲಿ ನಿದ್ರೆ ಇಲ್ಲದೆ ತಂಗಿದ್ದು ಬೆಳಗ್ಗೆ ಮತ್ತೆ ಪ್ರಯಾಣ ಮಾಡಿದೆ. ದೋಲಿಯ ಉಯ್ಯಾಲೆಯಿಂದ ಇನ್ನಷ್ಟು ನೋವು ಅನುಭವಿಸಿ ಕೊಂಗ್‌ನಂಗ್‌ಪೋಕಿ ಎಂಬ ಸ್ಥಳವನ್ನು ತಲುಪಿದೆ. ಅಲ್ಲಿಗೆ ವೈದ್ಯರು ತಲುಪಿದ್ದರು. ವೈದ್ಯರಾದ ಲಚ್‌ಮನ್ ಪ್ರಸಾದ್ ಕೊಟ್ಟ ಔಷಧಿಯಿಂದ ನೋವು ಸಾಕಷ್ಟು ಕಡಿಮೆಯಾಗಿ ರಾತ್ರಿ 11ಕ್ಕೆ ಇಂಫಾಲ್ ತಲುಪಿದೆವು. ನನ್ನ ನೋವು ಇನ್ನಷ್ಟು ಉಲ್ಬಣಿಸಿ ಡಾ.ಓ.ಎನ್ ಬ್ರಿಯನ್‌ರನ್ನು ಕರೆಸಲಾಯಿತು. ಅದೃಷ್ಟಶಾತ್ ನಾನು ಸಾವಿನಿಂದ ಪಾರಾಗಿದ್ದೆ. ಒಂದು ದಿನ ಮೆ.ತಂಗಲ್‌ರ ಜೊತೆಗೆ ಖೋನೊಮಾ ವಿಷಯವಾಗಿ ಮಾತನಾಡಲು ಹೋದೆ.
1880 ಜನವರಿ 30ರಂದು ಕಛಾರ್‌ನ ಬಾಲ್ದುನ್ ಚಹ ಕಾರ್ಖಾನೆ ಮೇಲೆ ದಾಳಿ ನಡೆದಿದ್ದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೆಲವರು ಕೂಲಿಗಳು ಮತ್ತು ಒಬ್ಬ ಯುರೋಪಿಯನ್ ಅಧಿಕಾರಿ ಸತ್ತಿರುವುದಾಗಿ ತಿಳಿಯಿತು. ಈ ದಾಳಿ ಮಾಡಿದವರು ಖೋನೊಮಾದ ಮೆರೆಮಾ ನಾಗಾಗಳು. ಕಛಾರ್‌ಗೆ ತುರ್ತಾಗಿ ಸೈನ್ಯ ಪಡೆ ಬೇಕಾಗಿದ್ದು 200 ಸೈನಿಕರನ್ನು ಕಳುಹಿಸುವಂತೆ ಮಣಿಪುರ ದರ್ಬಾರನ್ನು ಕೇಳಿಕೊಂಡೆ. ಫೆಬ್ರವರಿ 6ರಂದು ಕಛಾರ್‌ಗೆ ಹೋಗಿ ಅಲ್ಲಿಂದ ಮತ್ತೆ 20ಕ್ಕೆ ಕಮಿಷನರ್ ಜೊತೆಗೆ ಮಣಿಪುರಕ್ಕೆ ಹಿಂದಿರುಗಿದೆ. ಕಮಿಷನರ್‌ಗೆ ಮಣಿಪುರದಲ್ಲಿ ಭವ್ಯ ಸ್ವಾಗತ ದೊರಕಿತ್ತು. ಮಹಾರಾಜರು ತನ್ನ ಸಿಬ್ಬಂದಿಯ ಜೊತೆಗೆ ಸ್ವಾಗತ ನೀಡಿದ್ದರು. ಕಮಿಷನರ್ 5 ದಿನಗಳನ್ನು ಆರಾಮದಾಯಕವಾಗಿ ಕಳೆದು ಪೋಲೊ ಆಟವನ್ನು ವೀಕ್ಷಿಸಿದರು. (ಪೋಲೊ ಆಟ ಪ್ರಪಂಚದಲ್ಲಿಯೇ ಮೊದಲಿಗೆ ಮಣಿಪುರದಲ್ಲಿ ಪ್ರಾರಂಭವಾಯಿತು ಎನ್ನಲಾಗಿದೆ) ಮಣಿಪುರದಿಂದ ನಾಗಾ ಪರ್ವತಗಳ ಕಡೆಗೆ ಹೋಗುವ ಮುನ್ನ ಚುಸಾದ್ ಕುಕಿಗಳು ತಂಕೂಲ್ ಹಳ್ಳಿಯ ಮೇಲೆ ದಾಳಿ ಮಾಡಿ 45 ಜನರನ್ನು ಸಾಯಿಸಿರುವುದಾಗಿ ವಿಷಯ ಬಂದಿತ್ತು. ವಿಶೇಷವೆಂದರೆ ಇದನ್ನು ಬರ್ಮಾ ಕಡೆಯ ಕುಮ್ಮಕ್ಕಿನಿಂದ ನಡೆಸಲಾಗಿದೆ ಎಂಬ ಸುದ್ದಿ ಎದ್ದಿತ್ತು. ಕಮಿಷನರ್ ಅವರನ್ನು ಕೊಹಿಮಾದಲ್ಲಿ ಬಿಟ್ಟು ನಾನು ಖುದ್ದಾಗಿ ವಿಷಯ ತಿಳಿಯಲು ತಂಕೂಲ್ ತಲುಪಿದೆ.
ಮಣಿಪುರಿಗಳ ಧಾರುಣ ಸ್ಥಿತಿ
ಅದಕ್ಕೆ ಮುಂಚೆ ಮಣಿಪುರ ರಾಜರು, ನಾವು ಅವರ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದೆವು ಎನ್ನುವ ನಂಬಲಾರದ ಊಹೆಗಳು ಹುಟ್ಟಿಕೊಂಡು ಮಹಾರಾಜರು ಅದರ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ನಾಗಾಗಳು, ರಾಜರನ್ನು ತಮಗೆ ಸಹಾಯ ಮಾಡಿ ತಮ್ಮ ವಿರುದ್ಧವಾಗಿ ನಡೆದುಕೊಳ್ಳದೆ ಇದ್ದರೆ, ತಮಗೆ ಎಂದೆಂದಿಗೂ ಅಧೀನ ಸಾಮಂತರಾಗಿ ಚಿರಋಣಿಗಳಾಗಿ ಇರುವುದಾಗಿ ಪ್ರಮಾಣ ಮಾಡಿದ್ದರು. ಪರಿಸ್ಥಿತಿ ಸ್ವಲ್ಪ ಗಂಭೀರವಾಗಿ ಇರುವುದನ್ನು ತಿಳಿದುಕೊಂಡ ನಾವು ಕೊಹಿಮಾ ಕಡೆಗೆ ನಡೆದೆವು. ಅದರ ನಂತರವೂ ಚಂದ್ರಕೀರ್ತಿಸಿಂಗ್ ನಮಗೆ ತಮ್ಮ ತನುಮನಧನಗಳನ್ನು ಅರ್ಪಿಸಿದ್ದರು.
ಮಣಿಪುರದ ಮುಂದಿನ ಚರಿತ್ರೆ ದುರದೃಷ್ಟಕರ ಹಾದಿಯಲ್ಲಿ ಸಾಗಿತ್ತು. ಚಂದ್ರಕೀರ್ತಿಸಿಂಗ್‌ರ ಮಗ ಜುಬ್‌ರಾಜ್ ಸೂರ್ ಚಂದ್ರಸಿಂಗ್ ಕೂಡ ನಮ್ಮೊಂದಿಗೆ ಅದೇ ರೀತಿ ನಡೆದುಕೊಂಡರು. ಆದರೆ ಬ್ರಿಟಿಷ್ ಸರಕಾರದ ಆಜ್ಞೆಯಿಂದ ಅವರನ್ನು ಗಡಿಪಾರು ಮಾಡಿ ಎಲ್ಲೋ ಅನಾಥರಾಗಿ ಸತ್ತುಹೋಗುವಂತೆ ನೋಡಿಕೊಂಡಿತು. ತಂಕಲ್ ಮೇಜರ್‌ರನ್ನು ಗಲ್ಲುಗೇರಿಸಲಾಯಿತು. ನಮ್ಮ ಜೊತೆಗೆ ಯುದ್ಧ ಯಾತ್ರೆ ನಡೆಸಿದ ಹಲವು ಮಣಿಪುರಿ ಸೈನಿಕರ ಮೇಲೆ ಅಪರಾಧಗಳನ್ನು ಹೊರಿಸಿ ದೇಶಭ್ರಷ್ಟರೆಂದು ಕರಾಳ ಸಮುದ್ರದ ನಡುವಿನ ಅಂಡಮಾನ್ ಜೈಲಿಗೆ ಅಟ್ಟಲಾಯಿತು.
ನಾಗಾ ಪರ್ವತಗಳಲ್ಲಿ ನಾಗಾಗಳ ಎದುರಿಗೆ ನಮ್ಮೊಂದಿಗೆ ಹೋರಾಡಿದ ಆ ಧೀರ ಸೈನಿಕರನ್ನು ಪೂರ್ಣವಾಗಿ ನಿರ್ಲಕ್ಷಿಸಿ ಅಪಮಾನ ಮಾಡಿದ್ದ ಬ್ರಿಟಿಷ್ ಸರಕಾರ ಘನಘೋರ ಅಪರಾಧ ಮಾಡಿತ್ತು. ಆಗ ಆಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಿಂದ ನಾಗಾ ಪರ್ವತಗಳ ಯುದ್ಧವನ್ನು ಸಂಪೂರ್ಣವಾಗಿ ಮರೆಮಾಚಿತ್ತು. ಈಶಾನ್ಯ ಭಾರತದಲ್ಲಿ ಸೈನಿಕರು ನಡೆಸಿದ ಧೀರ ಸಮರ್ಪಣೆಯನ್ನು ಬ್ರಿಟಿಷ್ ಭಾರತ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿ ಪಶ್ಚಿಮ ಭಾರತದಲ್ಲಿ ನಡೆದ ಯುದ್ಧವನ್ನು ಎತ್ತಿಹಿಡಿದಿತ್ತು. ಕೈಯಿ ಎಂಬ ಇತಿಹಾಸಕಾರ ಹೀಗೆ ದಾಖಲಿಸಿದ್ದಾನೆ. ‘The countries to the north of Bay of Bengal, were the grave of fame’ ಈ ಮಾತುಗಳು ನಾಗಾ ಯುದ್ಧಯಾತ್ರೆಯನ್ನು ಸಂಪೂರ್ಣವಾಗಿ ನಿರೂಪಿಸುವಂತಿವೆ. ಪಶ್ಚಿಮದಲ್ಲಿ ಕಾಬೂಲ್‌ನಿಂದ ಕಂದಾಹಾರ್‌ವರೆಗೂ ಒಂದೇ ಒಂದು ತೊಟ್ಟು ರಕ್ತವು ನೆಲಕ್ಕೆ ಬೀಳದೆ ಯುದ್ಧಯಾತ್ರೆಗೆ ಎಲ್ಲಾ ಬಹುಮಾನಗಳನ್ನು ನೀಡಲಾಯಿತು. ಆದರೆ ಕೊಹಿಮಾ ಪರ್ವತಗಳನ್ನು ಸೆರೆಹಿಡಿದ ಸೈನಿಕರಿಗೆ ಒಂದೇ ಒಂದು ಜೊತೆ ಕೈಗಳು ಚಪ್ಪಾಳೆ ತಟ್ಟಲಿಲ್ಲ. ಬಂದೂಕಿನಿಂದ ಹಾರಿದ ಒಂದು ಗುಂಡನ್ನು ಕಾಣದ ಅಧಿಕಾರಿಗಳಗೆ ಸಿಕ್ಕ ಗೌರವ ರಕ್ತವನ್ನೇ ಸುರಿಸಿದ ಆ ಯೊಧರಿಗೆ ದೊರಕದೆ ಹೋಯಿತು. ಅಂದರೆ ಇದು, ಇತಿಹಾಸ ಬೇಕಾಗಿಯೇ ಮರೆತುಬಿಟ್ಟ ಬ್ರಿಟಿಷ್-ನಾಗಾಗಳ ಭೀಕರ ಯುದ್ಧ.
(ಮುಗಿಯಿತು)
***
ಈ ರೋಚಕ ಯುದ್ಧ ಕಥನದ ಹಿಂದಿನ ಅಧ್ಯಾಯ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.
***
ಏಳು ಪರ್ತಗಳು ಒಂದು ನದಿ
ಇದು ಡಾ.ಎಂ. ವೆಂಕಟಸ್ವಾಮಿ ಅವರು ಬರೆದಿರುವ ಈಶಾನ್ಯ ಭಾರತದ ಕಥನ. ಎಂಟು ವರ್ಷ ಆ ಭಾಗದಲ್ಲಿ ಭೂ ವಿಜ್ಞಾನಿಯಾಗಿ ಕೆಲಸ ಮಾಡಿದ್ದ ಅವರು, ಅಷ್ಟೂ ರಾಜ್ಯಗಳನ್ನು ವ್ಯಾಪಕವಾಗಿ ಸುತ್ತಿದ್ದಾರೆ. ಮುಖ್ಯವಾಗಿ ನಮ್ಮ ದೇಶದ ಏಕೈಕ ಗಂಡುನದಿ ಬ್ರಹ್ಮಪುತ್ರವನ್ನು ಹತ್ತಿದಿಂದ ಕಂಡು ಅದರ ಸನಿಹದಲ್ಲಿ ನೆಲನಿಂತ ಜನಜೀವನವನ್ನೂ ಕಣ್ಣಾರೆ ನೋಡಿದ್ದಾರೆ. ಈಶಾನ್ಯ ಭಾರತದ ಅಷ್ಟೂ ರಾಜ್ಯಗಳ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಕಟ್ಟಿಕೊಡುವ ಕೃತಿ ಏಳು ಪರ್ತಗಳು ಒಂದು ನದಿ. ಹಿಡಿದರೆ ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುತ್ತದೆ. ನವಕರ್ನಾಟಕ ಈ ಕೃತಿಯನ್ನು ಪ್ರಕಾಶಿಸಿದೆ. ಆನ್‌ಲೈನ್ ಮೂಲಕವೂ ಕೃತಿಯನ್ನು ಕೊಳ್ಳಬಹುದು. ನೂರ ಎಪ್ಪತ್ತು ಚಿಲ್ಲರೆ ಪುಟಗಳ ಈ ಪುಸ್ತಕ ಇಡೀ ಈಶಾನ್ಯವನ್ನು ಇಡಿಯಾಗಿ ಪರಿಚಯಿಸುತ್ತದೆ. ಇತಿಹಾಸಕ್ತರು ಮಾತ್ರವಲ್ಲ, ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಿದು.