photo courtesy: wikipedia
obituary
ನವದೆಹಲಿ: ನಮ್ಮ ದೇಶದ ದಲಿತ ರಾಜಕಾರಣದ ಬಹದೊಡ್ಡ ಕೊಂಡಿಯೊಂದು ಕಳಚಿಬಿದ್ದಿದೆ. ಕೇಂದ್ರ ಸಚಿವ ಹಾಗೂ ಬಿಹಾರದ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದ ರಾಮ್’ವಿಲಾಸ್ ಪಾಸ್ವಾನ್ ಅವರ ನಿಧನದೊಂದಿಗೆ ಆ ರಾಜ್ಯದ ದಲಿತ ರಾಜಕಾರಣ ಹೊಸ ಮಗ್ಗುಲಿಗೆ ಹೊರಳಿದೆ. ಅದಕ್ಕೊಂದು ದೊಡ್ಡ ನಷ್ಟವಾಗಿದೆ.
ಅಕ್ಟೋಬರ್-ನವೆಂಬರ್ʼನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ, ಇದೀಗ ತನ್ನ ನಾಯಕನನ್ನೇ ಕಳೆದುಕೊಂಡು ಅನಾಥವಾಗಿದೆ. ಕೆಲ ದಿನಗಳ ಹಿಂದೆ ಹೃದ್ರೋಗ ಸಮಸ್ಯೆಯಿಂದ ದಿಲ್ಲಿಯ ಆಸ್ಪತ್ರೆಗೆ ಸೇರಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಅವರು, ಆರೋಗ್ಯದಲ್ಲಿ ಚೇತರಿಕೆ ಕಾಣದೇ ಗುರುವಾರ (ಅಕ್ಟೋಬರ್ 8) ನಿಧನರಾಗಿದ್ದಾರೆ. ಎನ್ಡಿಎ ಮೈತ್ರಿಕೂಟ ಸರಕಾರದಲ್ಲಿ ಅವರು ಗ್ರಾಹಕ ವ್ಯವಹಾರಗಳ ಖಾತೆ ಹೊಂದಿದ್ದರಲ್ಲದೆ, ಕೋವಿಡ್ ಲಾಕ್‌ಡೌನ್ ವೇಳೆ ಮಹತ್ತ್ವದ್ದಾಗಿದ್ದ ಈ ಖಾತೆಯನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದರು.
ಸಾಲುಸಾಲು ಸಾವುಗಳ ಸರದಿ ಎಂಬಂತೆ ಕಳೆದ ಸೆಪ್ಟೆಂಬರ್ 23ರಂದು ಕೇಂದ್ರ ರೈಲ್ವೆ ಸಹಾಯಕ ಖಾತೆ ಮಂತ್ರಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಕಳೆದುಕೊಂಡಿದ್ದ ಬಿಜೆಪಿ, ಇದೀಗ ತನ್ನ ನಿಷ್ಟಾವಂತ ಮಿತ್ರನನ್ನು ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿದೆ.
ಬಿಹಾರದ ವಿಧಾನಸಭೆಯಲ್ಲಿ 243 ವಿಧಾನಸಭೆ ಸ್ಥಾನಗಳಿವೆ. ಇದೇ ಅಕ್ಟೋಬರ್ 28 ಹಾಗೂ ನವೆಂಬರ್ 3-7ರಂದು ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮತ ಎಣಿಕೆ ನವೆಂಬರ್ 10ಕ್ಕೆ ನಿಗಧಿಯಾಗಿದೆ. ಆದರೆ ಬಿಹಾರದಲ್ಲೂ ಎನ್ಡಿಎ ಮಿತ್ರಪಕ್ಷವಾಗಿದ್ದ ಪಾಸ್ವಾನ್ ಅವರ ಪಕ್ಷ ಹೆಚ್ಚು ಸ್ಥಾನಗಳಿಗೆ ಬೇಡಿಕೆ ಇಟ್ಟು ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವಕ್ಕೆ ಸಡ್ಡು ಹೊಡೆದು ಆ ಮೈತ್ರಿಕೂಟದಿಂದ ರಾಜ್ಯದ ಮಟ್ಟಿಗೆ ಹೊರಬಂದಿತ್ತು. ಆ ನಿರ್ಧಾರದ ಹಿಂದೆ ಇದ್ದವರು ಇದೇ ಪಾಸ್ವಾನ್ ಅವರು. ಜತೆಗೆ, ತಮ್ಮ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣಕ್ಕೆ ಕಳೆದ ಮಂಗಳವಾರ ತಮ್ಮ ಪುತ್ರ ಚಿರಾಗ್ ಪಾಸ್ವಾನ್ʼಗೆ ಪಕ್ಷದ ಅಧ್ಯಕ್ಷಗಿರಿಯನ್ನು ಒಪ್ಪಿಸಿದ್ದರು. ಬಳಿಕ ಆ ವಿಷಯವನ್ನು ಸ್ವತಃ ಪಾಸ್ವಾನ್ ಅವರೇ ಸುದ್ದಿಗಾರರಿಗೂ ತಿಳಿಸಿದ್ದರು.
ಈಗ್ಗೆ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಚಿರಾಗ್ ಬಗ್ಗೆ ತಂದೆ ಪಾಸ್ವಾನ್ ಅವರಿಗೆ ಬಹಳ ನಂಬಿಕೆ ಇತ್ತು. ಮಾತ್ರವಲ್ಲದೆ; ನಟನಾಗಬೇಕೆಂದು ಹೊರಟ ಮಗನನ್ನು ಮುಂಬಯಿಯಿಂದ ಪಟನಾಕ್ಕೆ ವಾಪಸ್ ಕರೆತಂದು ಪಕ್ಷದ ಕೆಲಸಕ್ಕೆ ಹಚ್ಚಿದ್ದರು. ಆದರೆ, ಮೈತ್ರಿ ರಾಜಕಾರಣದಲ್ಲಿ ಪಲ್ಲಟಗಳು ಉಂಟಾಗಿರುವ ಬೆನ್ನಲ್ಲಿಯೇ ಇದ್ದಕ್ಕಿದ್ದಂತೆ ಪಾಸ್ವಾನ್ ಅವರು ಅಗಲಿರುವುದು ಅತ್ತ ಪಕ್ಷದ ಕಾರ್ಯಕರ್ತರಿಗೆ ತೀವ್ರ ಶಾಕ್ ಆಗಿದೆ, ಇತ್ತ ಚಿರಾಗ್ ಅವರಿಗೂ ಅನಿರೀಕ್ಷಿತ ಆಘಾತವಾಗಿದೆ.
ಇದೇ ವೇಳೆ ಈಗಾಗಲೇ ಪಕ್ಷದ ನಾಯಕರೆಲ್ಲರೂ ಪಟನಾದಿಂದ ದೆಹಲಿ ತಲುಪಿದ್ದಾರೆ. ಚಿರಾಗ್ ಪಾಸ್ವಾನ್, ತಮ್ಮ ತಂದೆ ನಿಧನರಾದ ವಿಷಯವನ್ನು ಟ್ವಿಟರಿನಲ್ಲಿ ಪ್ರಕಟಿಸುತ್ತಿದ್ದಂತೆ ಬಿಹಾರದಲ್ಲಿ ನೀರವಮೌನ ಆವರಿಸಿದೆ.
पापा….अब आप इस दुनिया में नहीं हैं लेकिन मुझे पता है आप जहां भी हैं हमेशा मेरे साथ हैं।
— युवा बिहारी चिराग पासवान (@iChiragPaswan) October 8, 2020
Miss you Papa… pic.twitter.com/Qc9wF6Jl6Z
73 ವರ್ಷದ ರಾಮ್ ವಿಲಾಸ್ ಪಾಸ್ವಾನ್ ಅವರು ಬಿಹಾರದಲ್ಲಿ 2000ದಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ಸ್ಥಾಪಿಸಿದ್ದರು. 2010ರಿಂದ 2014ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದ ಪಾಸ್ವಾನ್, ಅದೇ ವರ್ಷ ಬಿಹಾರದ ಹಾಜಿಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಒಟ್ಟು ಎಂಟು ಸಲ ಲೋಕಸಭೆಗೆ, ಒಮ್ಮೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ದಲಿತಧ್ವನಿಯಾಗಿದ್ದರು ಮಾತ್ರವಲ್ಲದೆ, ಬಿಹಾರಕ್ಕೆ ಆಗಬೇಕಿದ್ದ ಕೆಲಸಗಳ ಬಗ್ಗೆ ಬಹಳ ಖಡಕ್ಕಾಗಿದ್ದರು.
ಸುದೀರ್ಘ ಹಾದಿ, ವರ್ಚಸ್ವಿ ನಾಯಕ
1946 ಜುಲೈ 5ರಂದು ಬಿಹಾರದಲ್ಲಿ ಜನಿಸಿದ್ದ ಪಾಸ್ವಾನ್, ಆರಂಭದಲ್ಲಿಯೇ ಹೊಸ ಪಕ್ಷವನ್ನೇ ಹುಟ್ಟು ಹಾಕಿ (ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ) 1969ರಲ್ಲೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅದಾದ ಮೇಲೆ ಜಯಪ್ರಕಾಶ್ ನಾರಾಯಣ್ ಮತ್ತು ರಾಜ್’ನಾರಾಯಣ್ ಬೆಂಬಲಿಗರಾಗಿ 1974ರಲ್ಲಿ ಲೋಕದಳ ಸೇರಿ ಆ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲಿಗೂ ಹೋಗಿದ್ದರು. ಬಳಿಕ 1977ರಲ್ಲಿ ಜನತಾ ಪಕ್ಷಕ್ಕೆ ಬಂದು ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. 1980, 1989, 1996, 1998, 1999, 2004, 2014ರಲ್ಲಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರಕಾರದಲ್ಲಿ ಕಾರ್ಮಿಕ ಖಾತೆ ಮಂತ್ರಿಯಾಗಿದ್ದರು. ತದ ನಂತರ ಎಚ್.ಡಿ.ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಅವರ ಸಂಯುಕ್ತ ರಂಗ ಸರಕಾರಗಳಲ್ಲೂ ರೈಲ್ವೆ ಖಾತೆ ಮಂತ್ರಿಯಾಗಿದ್ದರು.
2000ರಲ್ಲಿ ಜನತಾದಳವನ್ನು ತೊರೆದು ಲೋಕ ಜನಶಕ್ತಿ ಪಕ್ಷವನ್ನು ಸ್ಥಾಪಿಸಿ ಅದಾದ ಮೇಲೆ ಬಿಜೆಪಿ ನೇತೃತ್ವದ ಎನ್ಡಿಎ ಕೂಟ ಸೇರಿದ ಪಾಸ್ವಾನ್, ವಾಜಪೇಯಿ ಸರಕಾರದಲ್ಲಿ 2001ರವರೆಗೂ ಸಂಪರ್ಕ ಖಾತೆ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೊದಲ ಅವಧಿಲ್ಲಿ ಸಚಿವರೂ ಆಗಿದ್ದರು. ಆದಿಯಿಂದಲೂ ಕಾಂಗ್ರೆಸ್ ವಿರೋಧಿ ರಾಜಕೀಯವನ್ನೇ ಮಾಡಿಕೊಂಡು ಬಂದ ಪಾಸ್ವಾನ್, ಬದಲಾದ ರಾಜಕೀಯ ಸಮೀಕರಣದಿಂದ ಮನಮೋಹನ್ ಸಿಂಗ್ ಸರಕಾರದಲ್ಲಿ ರಸಗೊಬ್ಬರ ಖಾತೆ ಮಂತ್ರಿಯಾಗಿ ಕೆಲಸ ಮಾಡಿದ್ದರು.
ಪಾಸ್ವಾನ್ ಅವರು ಒಟ್ಟು 6 ಜನ ಪ್ರಧಾನಿಗಳ ಜತೆ ಕೆಲಸ ಮಾಡಿದ್ದರು. ಮೊದಲು ವಿ.ಪಿ.ಸಿಂಗ್, ಬಳಿಕ ಎಚ್.ಡಿ.ದೇವೇಗೌಡರು, ಐ.ಕೆ.ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ.. ಇವರೆಲ್ಲರ ಸಂಪುಟಗಳಲ್ಲಿ ಕ್ರಮವಾಗಿ 1989: ಕಾರ್ಮಿಕ ಖಾತೆ, 1996: ರೈಲ್ವೆ ಮತ್ತು ಸಂಸದೀಯ ವ್ಯವಹಾರ, 1999: ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, 2001: ಕಲ್ಲಿದ್ದಲು ಮತ್ತು ಗಣಿ, 2004: ರಾಸಾಯನಿಕ ಮತ್ತು ರಸಗೊಬ್ಬರ, 2014: ಗ್ರಾಹಕ ವ್ಯವಹಾರಗಳ ಖಾತೆಗಳನ್ನು ನಿರ್ವಹಿಸಿದ್ದರು. ಹೀಗೆ ನೋಡಿದರೆ ಎಲ್ಲ ವಿಭಿನ್ನ ಹಿನ್ನೆಲೆಯ, ವಿಭಿನ್ನ ಸೈದ್ಧಾಂತಿಕ ಹಿನ್ನೆಲೆಯ ಪ್ರಧಾನಿಗಳ ಜತೆ ಪಾಸ್ವಾನ್ ಕೆಲಸ ಮಾಡಿದ್ದರು. ಮುಖ್ಯವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಸಖ್ಯ ಬೆಳೆಸಿ ಅವರು ಕೇಂದ್ರ ಮಂತ್ರಿಯಾದದ್ದು ಎಲ್ಲರ ಹುಬ್ಬೇರಿಸಿತ್ತು. ಆದರೆ, ಅದಕ್ಕೆ ಬಿಹಾರ ರಾಜಕಾರಣವೇ ಕಾರಣವಾಗಿತ್ತು.
ಸಮಾಜವಾದಿ ತತ್ತ್ವದ ಪ್ರಭಾವದಿಂದ ಸೋಶಿಯಲಿಸ್ಟ್ ಪಕ್ಷವನ್ನು ಕಟ್ಟಿದ್ದ ಪಾಸ್ವಾನ್, ಜನತಾ ಪರಿವಾರದಲ್ಲಿ ಉನ್ನತ ಸ್ಥಾನಕ್ಕೇರಿದ್ದರು. ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ʼರಂಥ ನಾಯಕರನ್ನು ಮೀರಿ ಬೆಳೆದರು. ವಿ.ಪಿ.ಸಿಂಗ್ ಅವರ ಕನಸಿನ ಹುಡುಗನಾಗಿದ್ದ ಅವರು ಅದೇ ಬಿಹಾರದ ರಾಜಕೀಯ ಕಚ್ಚಾಟದಿಂದ ಬೇಸತ್ತು ಜನತಾದಳದಿಂದ ಆಚೆ ಬಂದರು. ಆದರೆ, ಕಾಂಗ್ರೆಸ್ಸಿನಂತೆ ಬಿಜೆಪಿಯನ್ನೂ ತೀವ್ರವಾಗಿ ವಿರೋಧಿಸುತ್ತಿದ್ದ ಪಾಸ್ವಾನ್ ತಮ್ಮ ಕೊನೆಗಾಲದಲ್ಲಿ ಅದೇ ಬಿಜೆಪಿ ನೇತೃತ್ವದ ಸರಕಾರದಲ್ಲಿ ಮಂತ್ರಿಯಾಗಿದ್ದರು. ದೇಶ ಕಂಡ ಅನೇಕ ‘ಸೈದ್ಧಾಂತಿಕ ರಾಜಿ’ಗಳಿಗೆ ಮೂರ್ತ ಸ್ವರೂಪದಂತೇ ಇದ್ದ ಅವರು ದಲಿತಪರವಾದ ತಮ್ಮ ಮೂಲತತ್ತ್ವದಿಂದ ಎಂದೂ ವಿಮುಖರಾಗಿರಲಿಲ್ಲ.