PHOTO COURTESY: WIKIPEDIA
ಸ್ಟಾಕ್ಹೋಮ್: ಜಾಗತಿಕ ಪರಿಸರಕ್ಕಾಗಿ ನಿರಂತರ ಹೋರಾಟ ಮಾಡುತ್ತ ಅದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ ಕೆಲ ಜಾಗತಿಕ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಅದೇ ಸ್ವೀಡನ್ ದೇಶದ ಗ್ರೆಟಾ ಥನ್ಬರ್ಗ್ ಅವರಿಗೆ ಈ ವರ್ಷದ ಶಾಂತಿ ನೊಬೆಲ್ ತಪ್ಪಿದೆ. ತಪ್ಪಿಸಲಾಗಿದೆ ಎಂಬ ಕೂಗೂ ಎದ್ದಿದೆ.
2020ರ ನೊಬೆಲ್ ಶಾಂತಿ ಪುರಸ್ಕಾರ ವಿಶ್ವಸಂಸ್ಥೆಯ ಆಹಾರ ವಿಭಾಗಕ್ಕೆ (World Food Programme ) ಸಂದಿದ್ದು, ಯುದ್ಧ ಮತ್ತು ಪ್ರಕೃತಿ ವಿಕೋಪದಂಥ ಸಂಕಷ್ಟದ ಕಾಲದಲ್ಲಿ ಕಷ್ಟಕ್ಕೆ ಸಿಲುಕಿದ ಜನರ ಹಸಿವು ನೀಗಿಸಿದ ಮಾನವೀಯ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ಸ್ವೀಡಿಷ್ ಅಕಾಡೆಮಿ ಘೋಷಿಸಿದೆ.
“ಜಗತ್ತಿನಲ್ಲಿ ಹಸಿವನ್ನು ನಿವಾರಿಸಲು ಮಾಡಿರುವ ಆ ಕಾರ್ಯಕ್ರಮದ ಪ್ರಯತ್ನಗಳು, ಯುದ್ಧ ಮತ್ತು ಸಂಘರ್ಷಕ್ಕೀಡಾದ ದೇಶಗಳಲ್ಲಿ ಶಾಂತಿಗೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಲು ಮಾಡಿರುವ ಗಟ್ಟಿ ಪ್ರಯತ್ನಗಳು, ಜತೆಗೆ, ಯುದ್ಧ ಹಾಗೂ ಸಂಘರ್ಷದ ಹೊತ್ತಿನಲ್ಲಿ ಹಸಿವನ್ನೇ ಸೇಡಿನ ಆಯುಧವನ್ನಾಗಿ ಮಾಡಿಕೊಳ್ಳುವ ಅಪಾಯಕಾರಿ ಕೃತ್ಯಗಳನ್ನು ತಪ್ಪಿಸಲು ಆ ಕಾರ್ಯಕ್ರಮದ ಪರಿಶ್ರಮವನ್ನು ಗುರುತಿಸಿ ಈ ವರ್ಷದ ಶಾಂತಿ ನೊಬೆಲ್ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದೆ” ಎಂದು ನೊಬೆಲ್ ಪುರಸ್ಕಾರ ಆಯ್ಕೆ ಸಮಿತಿ ಅಧ್ಯಕ್ಷೆ ಬೆರಿಟ್ ರೀಸ್ ಆಂಡರ್ʼಸನ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಕೋವಿಡ್-19 ಪಿಡುಗು ಹಬ್ಬಿದ ನಂತರ ಎಲ್ಲೆಡೆ ಹಸಿವಿನ ತೀವ್ರತೆ ಹೆಚ್ಚಿದೆ. ಹಸಿವಿನಿಂದ ಬಳಲುತ್ತಿರುವ ಜನರ ಪ್ರಮಾಣವೂ ಹೆಚ್ಚಾಗಿದೆ. ಇವರೆಲ್ಲರಿಗೂ ಡಬ್ಲ್ಯೂಎಫ್ಪಿ ನೆರವಾಗಿದೆ ಎಂದು ಅವರು ಹೇಳಿದರು.
ಅಂದಹಾಗೆ, ಈ ಪುರಸ್ಕಾರವು ದೊಡ್ಡ ಮೊತ್ತದ ನಗದು ಬಹುಮಾನವನ್ನು ಹೊಂದಿದೆ. ಪ್ರಶಸ್ತಿ 10 ಮಿಲಿಯನ್ ಸ್ವೀಡನ್ ಕ್ರೋನಾ; ಅಂದರೆ, 8 ಕೋಟಿ ರೂಪಾಯಿಗೂ ಹೆಚ್ಚು ನಗದು ಮೊತ್ತದ ಬಹುಮಾನ, ಚಿನ್ನದ ಪಧಕ ಒಳಗೊಂಡಿದೆ.
17 ವರ್ಷಕ್ಕೇ ಮಲಾಲಾಗೆ ಸಿಕ್ಕಿತ್ತು!
PHOTO COURTESY: Malala@Malala
ಈ ವರ್ಷದ ಶಾಂತಿ ನೊಬೆಲ್ ಪುರಸ್ಕಾರಕ್ಕೆ 211 ವ್ಯಕ್ತಿಗಳು, 107 ಸಂಘ-ಸಂಸ್ಥೆಗಳನ್ನು ನಾಮಿನೇಟ್ ಮಾಡಲಾಗಿತ್ತು. ಈ ಪೈಕಿ ಈ ಪ್ರಶಸ್ತಿಯ ತವರು ದೇಶವಾದ ಸ್ವೀಡನ್ʼನ ಪರಿಸರ ಹೋರಾಟಗಾರ್ತಿ, ಹದಿನೇಳು ವರ್ಷದ ಗ್ರೆಟಾ ಥನ್ಬರ್ಗ್ ಅವರಿಗೆ ಫೀಸ್ ನೊಬೆಲ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಯಾರೂ ನಿರೀಕ್ಷಿಸದಂತೆ ವಿಶ್ವಸಂಸ್ಥೆಯ ಆಹಾರ ಸಂಸ್ಥೆಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಪಾಕಿಸ್ತಾನದ ಶಾಲೆಯಲ್ಲಿ ಓದುತ್ತಿದ್ದ, ಬಳಿಕ ತಾಲಿಬಾನ್ ಭಯೋತ್ಪಾದಕರ ದಾಳಿಗೊಳಗಾಗಿದ್ದ ಯೂಸಫ್ ಮಲಾಲ ಅವರಿಗೂ 2014ರಲ್ಲಿ ಶಾಂತಿ ನೊಬೆಲ್ ನೀಡಲಾಗಿತ್ತು. ಆಗ ಅವರಿಗೂ 17 ವರ್ಷ ವಯಸ್ಸಾಗಿತ್ತು. ಮಲಾಲ ಅವರಂತೆ ಗ್ರೆಟಾ ಕೂಡ ಪರಿಸರಕ್ಕಾಗಿ ನಡೆಸುತ್ತಿರುವ ಹೋರಾಟ ಇಡೀ ಜಗತ್ತಿನಾದ್ಯಂತ ಗಮನ ಸೆಳೆದಿರುವುದು ಮಾತ್ರವಲ್ಲದೆ, ಮೂಲೆಮೂಲೆಯಲ್ಲೂ ಗ್ರೆಟಾದಂಥ ಯುವತಿಯರು ಹಸಿರು ಜಗತ್ತಿಗಾಗಿ ಟೊಂಕ ಕಟ್ಟಿದ್ದಾರೆ. ಆ ಮಟ್ಟಿಗೆ ಗ್ರೆಟಾ ಹೋರಾಟ ಜಗತ್ತಿನ ಮೇಲೆ ಪ್ರಭಾವ ಬೀರಿದೆ.
ಟ್ರಂಪ್ ಹೆಸರೂ ಇತ್ತು
PHOTO COURTESY: Wikipedia
ಇದೇ ವೇಳೆ ಡೊನಾಲ್ಡ್ ಟ್ರಂಪ್ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಹಿಂದೆ ಬರಾಕ್ ಒಬಾಮಾ ಅವರನ್ನು ಆಯ್ಕೆ ಮಾಡಿ ಜಗತ್ತಿಗೆ ಶಾಕ್ ಕೊಟ್ಟಿದ್ದ ಆಯ್ಕೆ ಸಮಿತಿ ಅದೃಷ್ಟಕ್ಕೆ ಟ್ರಂಪ್ ಅವರನ್ನು ಆಯ್ಕೆ ಮಾಡಲಿಲ್ಲ. ಅರಬ್ ಜಗತ್ತಿನಲ್ಲಿ ಶಾಂತಿ ನೆಲೆಸಲು, ಕೊರಿಯಾ ದೇಶಗಳ ನಡುವೆ ಶಾಂತಿ ಪ್ರಕ್ರಿಯೆ ಇತ್ಯಾದಿ ನೆಪಗಳನ್ನೊಡ್ಡಿ ಅವರನ್ನು ನಾಮಿನೇಟ್ ಮಾಡಲಾಗಿತ್ತು. ಕೆಲ ಮಾಧ್ಯಮಗಳಂತೂ ಗ್ರೆಟಾ ಥನ್ಬರ್ಗ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದೇಬಿಡುತ್ತಾರೆ ಎಂದು ಪ್ರಚಾರ ಮಾಡಿದ್ದವು.
ಅರ್ಥಶಾಸ್ತ್ರ ಪ್ರಶಸ್ತಿ ಬಾಕಿ
ಈಗಾಗಲೇ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ಇನ್ನು ಅರ್ಥಶಾಸ್ತ್ರದ ಬಹುಮಾನವಷ್ಟೇ ಬಾಕಿ ಇದೆ. ಬಹುಶಃ ನಾಳೆ ಆ ಪ್ರಶಸ್ತಿ ಘೋಷಣೆ ಆಗಬಹುದು.