ತೇಜಸ್ ಚಿತ್ರದಲ್ಲಿ ಕಂಗನಾ ರಣಾವತ್/courtesy: Kangana Ranaut@KanganaTeam
ಬೆಂಗಳೂರು: ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಅಪಮಾನ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನೆಲ್ಲೇ, ಆ ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ.
ಕೇಂದ್ರ ಸರಕಾರ ಕೃಷಿಗೆ ಸಂಬಂಧಿಸಿ ಜಾರಿಗೆ ತರಲಿರುವ ಮಸೂದೆಗಳ ವಿರುದ್ಧ ಪಂಜಾಬ್, ಕರ್ನಾಟಕ ಸೇರಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ವೀಟ್ ಮಾಡಿದ್ದ ಕಂಗನಾ, ಅನ್ನದಾತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದರು.
ಈ ಟ್ವೀಟ್ ಅನ್ನು ಖಂಡಿಸಿದ ವಕೀಲ ಎಲ್.ರಮೇಶ್ ನಾಯಕ್ ಅವರು ಇ-ಮೇಲ್ ಮೂಲಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ನೇರವಾಗಿ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿನೋದ್ ಬಾಲಾನಾಯಕ್ ಅವರು ನಟಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸಿ ತನಿಖೆ ನಡೆಸುವಂತೆ ಕ್ಯಾತ್ಸಂದ್ರ ಪೊಲೀಸರಿಗೆ ಆದೇಶ ನೀಡಿದ್ದಾರೆ.