ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಕ್ಯಾಬಿನೆಟ್ಟಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಜಾಕ್’ಪಾಟ್! ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಜತೆಗೆ ಆರೋಗ್ಯ ಖಾತೆಯೂ ಸಿಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಚಿಕ್ಕಬಳ್ಳಾಪುರ ಜನತೆಯಲ್ಲಿ ಸಂತಸ ಉಂಟು ಮಾಡಿದೆ.
ರಾಜ್ಯವು ಸದ್ಯಕ್ಕೆ ಕೋವಿಡ್-19 ಮಾರಿಯಿಂದ ಪಾರಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಆಗಿದ್ದ ಟೆನ್ಷನ್ ಅಷ್ಟಿಷ್ಟಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಅವರೇ ತಮಗೆ ಆರೋಗ್ಯ ಖಾತೆ ಬದಲು ಬೇರೆ ಖಾತೆ ಕೊಡಿ ಎಂದು ಮುಖ್ಯಮಂತ್ರಿಯವರನ್ನು ಕೇಳಿದ್ದರು ಎಂಬ ಮಾಹಿತಿ ಬಂದಿತ್ತು. ಬಹುಶಃ ಅದೇ ಕಾರಣಕ್ಕೆ ಯಡಿಯೂರಪ್ಪ ಅವರು ಖಾತೆಗಳಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಾರೆಂದು ಅತ್ಯಂತ ವಿಶ್ವಸನೀಯ ಮೂಲವೊಂದು ಸಿಕೆನ್ಯೂಸ್ʼಗೆ ತಿಳಿಸಿದೆ. ಖಾತೆ ಬದಲಾವಣೆ ಆದೇಶ ಯಾವ ಕ್ಷಣದಲ್ಲಾದರೂ ಹೊರಬೀಳಬಹುದು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬಳಿ ಲೋಕೋಪಯೋಗಿ ಖಾತೆ ಜತೆಗೆ ಸಮಾಜ ಕಲ್ಯಾಣ ಖಾತೆಯೂ ಇದೆ. ಇವೆರಡೂ ಮಹತ್ವದ ಖಾತೆಗಳಾಗಿದ್ದು, ಸಮಾಜ ಕಲ್ಯಾಣ ಖಾತೆಯ ಮೇಲೆ ಮೊದಲಿನಿಂದಲೂ ಶ್ರೀರಾಮುಲು ಅವರಿಗೆ ಆಸಕ್ತಿ ಇತ್ತೆನ್ನಲಾಗಿದೆ. ಹೀಗಾಗಿ ಅದೇ ಖಾತೆಯನ್ನು ಅವರಿಗೆ ಸಿಎಂ ಹಂಚಿಕೆ ಮಾಡಲಿದ್ದಾರೆನ್ನಲಾಗಿದೆ. ಇನ್ನು, ಡಾ.ಸುಧಾಕರ್ ಅವರ ಬಳಿ ಈಗಾಗಲೇ ಮಹತ್ತ್ವದ ವೈದ್ಯಕೀಯ ಶಿಕ್ಷಣ ಖಾತೆಯೂ ಇದೆ. ಕೋವಿಡ್ ವೇಳೆ ಅದನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರಿಗೆ ಹೆಚ್ಚುವರಿಯಾಗಿ ಆರೋಗ್ಯ ಖಾತೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಆ ಮೂಲ ಖಚಿತಪಡಿಸಿದೆ.
ಯಾಕೆ ಈ ಬದಲಾವಣೆ?
ಮುಖ್ಯವಾಗಿ ಕೋವಿಡ್ ನಿರ್ವಹಣೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶ್ರೀರಾಮುಲು ಮತ್ತು ಡಾ.ಸುಧಾಕರ್ ಹೆಚ್ಚಿನ ಪ್ರಮಾಣದಲ್ಲಿ ನಿರತರಾಗಿದ್ದರು. ಆದರೆ, ಈ ಮೂವರ ನಡುವೆ ಸಮನ್ವಯದ ಕೊರತೆ ಉಂಟಾಗಿ ಕೋವಿಡ್ ನಿರ್ವಹಣೆ ಹಳಿತಪ್ಪಿದ್ದ ಬಗ್ಗೆ ಮುಖ್ಯಮಂತ್ರಿಗಳಿಗೆ ಬೇಸರವಿತ್ತು ಎಂದು ಆ ಮೂಲವು ಹೇಳಿದೆ.
ಉತ್ತಮ ಬೆಳವಣಿಗೆ
ಎಂ.ಜಯರಾಂ
“ಡಾ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ಜತೆಗೆ ಆರೋಗ್ಯ ಖಾತೆಯನ್ನು ನೀಡುತ್ತಿರುವುದು ಸಂತೋಷ ಉಂಟು ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಚಿವರಾಗುವುದಕ್ಕೆ ಮೊದಲೇ ಅವರು ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದರು. ಈಗಾಗಲೇ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುವ ಅರೂರು ಬಳಿ ಕಾಲೇಜಿನ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದೆ. ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ಸಿಕ್ಕಿದ ಮೇಲಂತೂ ಆ ಕೆಲಸಕ್ಕೆ ಇನ್ನೂ ಹೆಚ್ಚು ಹುರುಪು ಬಂದಿದೆ. ಇದರ ಜತೆಯಲ್ಲೇ ಹೆಲ್ತ್ʼಸಿಟಿ ನಿರ್ಮಾಣಕ್ಕೆ 60 ಎಕರೆ ಜಾಗವನ್ನೂ ಗುರುತಿಸಲಾಗಿದೆ. ಇದೀಗ ಅವರು ಆರೋಗ್ಯ ಸಚಿವರು ಆಗುತ್ತಿರುವ ಹಿನ್ನೆಲೆಯಲ್ಲಿ ಇವೆಲ್ಲ ಕೆಲಸಗಳಿಗೆ ರಾಕೆಟ್ ವೇಗ ಬರಲಿದೆ. ಚಿಕ್ಕಬಳ್ಳಾಪುರಕ್ಕೆ ಮಾತ್ರವಲ್ಲ, ಕೋಲಾರ ಜಿಲ್ಲೆಗೂ ತುಂಬಾ ಒಳ್ಳೆಯದಾಗಲಿದೆ. ಸುಧಾಕರ್ ಮೂಲತಃ ವೈದ್ಯರಾಗಿದ್ದು, ಅವರಿಗೆ ಆರೋಗ್ಯ ಖಾತೆಯೇ ಸಿಗುತ್ತಿರುವುದರಿಂದ ಇಡೀ ರಾಜ್ಯಕ್ಕೂ ಒಳ್ಳೆಯದೇ ಆಗುತ್ತದೆ ಎಂಬುದು ನನ್ನ ಭಾವನೆ ಎನ್ನುತ್ತಾರೆ ಚಿಕ್ಕಬಳ್ಳಾಪುರದವರೇ ಆದ ಕಿದ್ವಾಯಿ ಆಸ್ಪತ್ರೆಯ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎಂ.ಜಯರಾಂ.
ನಿಜಕ್ಕೂ ಸ್ವಾಗತಾರ್ಹ
ಜಿ.ಎನ್.ಚಂದ್ರಶೇಖರ್
“ಡಾ.ಸುಧಾಕರ್ ಅವರಿಗೆ ಆರೋಗ್ಯ ಖಾತೆ ಸಿಗುತ್ತಿರುವುದು ಸ್ವಾಗತಾರ್ಹ. ಅವರು ಶಾಸಕರಾಗಿದ್ದಾಗಲೇ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವು ಉತ್ತಮವಾಗಿ ಬೆಳವಣಿಗೆ ಆಗುತ್ತಿತ್ತು. ಅವರು ಸಚಿವರಾದ ಮೇಲೆ ಆ ಅಭಿವೃದ್ಧಿ ಮತ್ತಷ್ಟು ಜೋರಾಯಿತು. ಮೆಡಿಕಲ್ ಕಾಲೇಜು ಜತೆಗೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಹಿಂದೆ ಸರಕಾರದ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಎಂದರೆ ತುಂಬಾ ನಿರ್ಲಕ್ಷ್ಯವಿತ್ತು. ಸುಧಾಕರ್ ಬಂದ ಮೇಲೆ ಆ ಪರಿಸ್ಥಿತಿ ಬದಲಾಗಿದೆ” ಎನ್ನುವುದು ಶಿಡ್ಲಘಟ್ಟ ತಾಲ್ಲೂಕಿನ ಜಿ.ಎನ್.ಚಂದ್ರಶೇಖರ್ ಹೇಳುವ ಮಾತು. ಅವರು ಪ್ರತಿಷ್ಟಿತ ವಿಪ್ರೋದಲ್ಲಿ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ.