ಸ್ಟಾಕ್ಹೋಮ್: ಅರ್ಥಶಾಸ್ತ್ರದಲ್ಲಿ ಇಬ್ಬರಿಗೆ ನೊಬೆಲ್ ಪ್ರಶಸ್ತಿ ಘೋಷಣೆ ಮಾಡುವುದರೊಂದಿಗೆ 2020ನೇ ಸಾಲಿನ ನೊಬೆಲ್ ಪ್ರಶಸ್ತಿಗಳ ಘೋಷಣೆ ಪ್ರಕ್ರಿಯೆ ಮುಗಿದಿದ್ದು, ಇನ್ನು ಪ್ರಶಸ್ತಿ ಪ್ರದಾನ ಕಾರ್ಯಕ್ರಮವಷ್ಟೇ ಬಾಕಿ ಇದೆ.
ಅಮೆರಿಕದ ಇಬ್ಬರು ಅರ್ಥಶಾಸ್ತ್ರಜ್ಞರಾದ ರಾಬರ್ಟ್ ವಿಲ್ಸನ್ ಮತ್ತು ಪೌಲ್ ಮಿಲ್‌ಗ್ರಾಮ್ ಅವರಿಗೆ ಪ್ರಸಕ್ತ ಸಾಲಿನ ನೊಬೆಲ್ ಬಹುಮಾನ ನೀಡಲಾಗಿದ್ದು, ಸೋಮವಾರ ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್‌ನಲ್ಲಿ ಸ್ವಿಡಿಷ್ ಅಕಾಡೆಮಿ ಈ ವಿಷಯವನ್ನು ಪ್ರಕಟಿಸಿತು.
ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಕ್ಕಾಗಿ ಅವರಿಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಜಾಗತಿಕವಾಗಿ ಬದಲಾಗುತ್ತಿರುವ ಹರಾಜು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಈ ಇಬ್ಬರು ಅರ್ಥಶಾಸ್ತ್ರಜ್ಞರಿಗೆ ಜಗತ್ತಿನ ಉನ್ನತ ಪುರಸ್ಕಾರ ಸಂದಿರುವುದಕ್ಕೆ ಆರ್ಥಿಕ ವಲಯದಲ್ಲಿ ಅಪಾರ ಸಂತಸ ವ್ಯಕ್ತವಾಗಿದೆ.
ಪೌಲ್ ಮಿಲ್ʼಗ್ರಾಮ್ ಅವರು ಹರಾಜಿಗೆ ಸಂಬಂಧಿಸಿದಂತೆ ಸಾಮಾನ್ಯ ಸಿದ್ಧಾಂತವನ್ನು ರೂಪಿಸಿದ್ದು, ರಾಬರ್ಟ್ ವಿಲ್ಸನ್ ಅವರು ಬಿಡ್ ಮಾಡುವವರು ಯಾವಾಗಲೂ ಸಾಮಾನ್ಯ ಮೌಲ್ಯದ ತಮ್ಮದೇ ಆದಂತಹ ಅತ್ಯುತ್ತಮ ಅಂದಾಜಿಗಿಂತ ಕಡಿಮೆ ಪ್ರಮಾಣದಲ್ಲಿ ಬಿಡ್ ಮಾಡುತ್ತಾರೆ, ಇದು ಹೇಗೆ ಎಂಬುದನ್ನು ಆವಿಷ್ಕರಿಸಿದ್ದಾರೆ.
ಈ ಇಬ್ಬರು ಮಾಡಿರುವ ಆವಿಷ್ಕಾರಗಳು ಜಗತ್ತಿನ ಮೇಲೆ ಗುರುತರ ಪರಿಣಾಮ ಬೀರಲಿವೆ. ಮುಖ್ಯವಾಗಿ ಮಾರಾಟಗಾರರು, ಖರೀದಿದಾರರು ಹಾಗೂ ತೆರಿಗೆ ಪಾವತಿದಾರರು ಅತಿಹೆಚ್ಚು ಪ್ರಯೋಜನ ಹೊಂದಲಿದ್ದಾರೆ ಎಂದು ಅಕಾಡೆಮಿ ಮತ್ತಷ್ಟು ವಿವರವಾಗಿ ತಿಳಿಸಿದೆ.
83 ವರ್ಷದ ರಾಬರ್ಟ್ ವಿಲ್ಸನ್ ಅವರು ಅಮೆರಿಕದ ಪ್ರತಿಷ್ಟಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಪೌಲ್ ಮಿಲ್‌ಗ್ರಾಮ್ ಕೂಡ ಇದೇ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಮೊದಲು ವಿಜ್ಞಾನಕ್ಕೆ ಮಾತ್ರ ನೊಬೆಲ್ ನೀಡಲಾಗುತ್ತಿತ್ತು. 1969ರಿಂದ ಈಚೆಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಈವರೆಗೆ 51 ಸಲ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧಕರಿಗೆ ಪುರಸ್ಕಾರ ನೀಡಲಾಗಿದೆ.
ಕಳೆದ ವರ್ಷ ಭಾರತಕ್ಕೆ ಬಂದಿತ್ತು ನೊಬೆಲ್
2019ನೇ ಸಾಲಿನಲ್ಲಿ ಭಾರತೀಯ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಅಭಿಜಿತ್ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಸಿಕ್ಕಿತ್ತು. ಅವರ ಜತೆ ಇನ್ನಿಬ್ಬರು ಆರ್ಥಿಕ ತಜ್ಞರಾದ ಎಸ್ತರ್ ಡುಫ್ಲೋ (ಇವರು ಅಭಿಜಿತ್ ಬ್ಯಾನರ್ಜಿ ಅವರ ಪತ್ನಿ ಕೂಡ) ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ಹಂಚಿಕೊಂಡಿದ್ದರು.
ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ
ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಈ ಮೂವರಿಗೆ ನೊಬೆಲ್ ನೀಡಲಾಗಿತ್ತು. 1998ರಲ್ಲಿ ಅಮರ್ತ್ಯ ಸೇನ್ ಅವರಿಗೆ ಇದೇ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು.