ಬೆಂಗಳೂರು: ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಕೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಷಯವು ಪಕ್ಷದಲ್ಲಿ ವಲಸಿಗರು ಮತ್ತು ಮೂಲ ನಿವಾಸಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ತಿಕ್ಕಾಟದ ಲಾಭವನ್ನು ಪಡೆಯಲು ಕಾಂಗ್ರೆಸ್ ಸರ್ಕಸ್ ಮಾಡುತ್ತಿದ್ದರೆ, ಜೆಡಿಎಸ್ ಮಾತ್ರ ಕೊನೆಕ್ಷಣದವರೆಗೂ ಮುಗುಮ್ಮಾಗಿಯೇ ಇದ್ದು, ತನ್ನ ಗುಟ್ಟು ರಟ್ಟಾಗದಂತೆ ಎಚ್ಚರ ವಹಿಸಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲು ಕಾರಣವಾದ ಕ್ಷೇತ್ರಗಳಲ್ಲಿ ಆರ್.ಆರ್.ನಗರವೂ ಒಂದು. ಹಾಗೇಯೇ ಸಮ್ಮಿಶ್ರ ಸರಕಾರ ಪತನವಾಗಲು ಕಾರಣವಾದ ಕ್ಷೇತ್ರವೂ ಹೌದು. ಆಪರೇಷನ್ ಕಮಲದ ಮೂಲಕ ಮುನಿರತ್ನ ಅವರನ್ನು ಸೆಳೆದುಕೊಂಡ ಬಿಜೆಪಿಗೆ ಈ ಕ್ಷೇತ್ರವನ್ನು ಗೆದ್ದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅದೇ ರೀತಿ; ಹೇಗಾದರೂ ಆಗಲಿ ಮತ್ತೆ ಮುನಿರತ್ನ ಗೆದ್ದು ಆ ಕ್ಷೇತ್ರ ಬಿಜೆಪಿ ತೆಕ್ಕೆಗೆ ಹೋಗಬಾರದು ಎಂದು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಡಿಕೆಶಿ ಅಂಡ್ ಟೀಮ್ ಜ್ಯೋತಿಷ್ಯದ ಮೊರೆ ಹೋಗಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಕಾರಣಕ್ಕಾಗಿಯೇ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರಿಗೆ ಟಿಕೆಟ್ ಕಾಂಗ್ರೆಸ್ ನೀಡಿದೆ. ಕುಸುಮಾಗೆ ಟಿಕೆಟ್ ನೀಡಿದ್ದೇ ತನಗೆ ಅಡ್ವಾಂಟೇಜ್ ಎಂದು ಭಾವಿಸಿರುವ ಬಿಜೆಪಿಗೆ ಶನಿವಾರವಾದರೂ ಅಭ್ಯರ್ಥಿಯನ್ನು ಫೈನಲ್ ಮಾಡುವುದು ಸಾಧ್ಯವಾಗಲೇ ಇಲ್ಲ.
ಇದೇ ಕಾರಣಕ್ಕೆ ಆಡಳಿತ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ತೀವ್ರ ಸರ್ಕಸ್ ಮಾಡುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳ ಬಡಿದಾಟದ ನಡುವೆ ತನಗೇನಾದರೂ ನುಗ್ಗಲು ಸಾದ್ಯವೇ ಎಂದು ಜೆಡಿಎಸ್ ಹೊಂಚು ಹಾಕಿ ಕೂತಿದೆ.
ಮೂಲ ನಿವಾಸಿಗಳು ವರ್ಸಸ್ ವಲಸಿಗರು
ಕಾಂಗ್ರೆಸ್‌ನಲ್ಲಿ ತೀವ್ರವಾಗಿರುವ ವಲಸಿಗರು ಮತ್ತು ಮೂಲ ನಿವಾಸಿಗಳ ತಿಕ್ಕಾಟ ಇದೀಗ ಶಿಸ್ತಿನ ಪಕ್ಷ ಬಿಜೆಪಿಗೂ ವ್ಯಾಪಿಸಿದೆ. ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದ ಶಾಸಕರಲ್ಲಿ 10 ಮಂದಿ ಕಳೆದ ಉಪ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚಕ್ರ ತಿರುಗಿಸುತ್ತಿದ್ದಾರೆ. ಆ ಪೈಕಿ ಇತ್ತೀಚೆಗೆ ವಿಧಾನ ಪರಿಷತ್ತಿಗೆ ಎಂಟ್ರಿ ಕೊಟ್ಟ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜು ಮತ್ತು ಆರ್.ಶಂಕರ್ ಕ್ಯಾಬಿನೆಟ್ ಪ್ರವೇಶಕ್ಕೆ ಆತುರ ಹೆಚ್ಚಾಗಿದೆ. ಬಿಜೆಪಿ ನಾಯತಕ್ವ ಎಂಟಿಬಿ ನಾಗರಾಜು, ಆರ್.ಶಂಕರ್ ಸೇರ್ಪಡೆಗೆ ಓಕೆ ಎಂದಿದೆಯಾದರೂ ವಿಶ್ವನಾಥ್ ಎಂಟ್ರಿಗೆ ತಡೆಯೊಡ್ಡಿ ಕೂತಿದೆ. ಕಳೆದ ಬೈ ಎಲೆಕ್ಷನ್‌ನಲ್ಲಿಯೇ ವಿಶ್ವನಾಥ್‌ಗೆ ಹುಣಸೂರು ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಹಾಗೂ ವಲಸಿಗರ ನಡುವೆ ಒಂದು ಸುತ್ತಿನ ಕಿತ್ತಾಟ ನಡೆದು ವಲಸಿಗರ ಕೈಮೇಲಾಗಿತ್ತು. ಅದರಲ್ಲೂ ಬೆಳಗಾವಿಯ ಸಾಹುಕಾರ್ ರಮೇಶ್ ಜಾರಕಿಹೊಳಿ ಅಬ್ಬರಿಸಿದ್ದರು.
ಕೊನೆಗೆ ಒತ್ತಡಕ್ಕೆ ಮಣಿದ ಪಕ್ಷವು ಅಡಗೂರಿಗೆ ಟಿಕೆಟ್ ಕೊಟ್ಟು ಸಮಸ್ಯೆಗೆ ಮುಲಾಮು ಹಚ್ಚಿ ಸುಮ್ಮನಾಗಿತ್ತು. ಆದರೆ, ಆ ಮುಲಾಮು ಪರಿಣಾಮಕಾರಿಯಾಗಿ ಕೆಲಸ ಮಾಡಿದಂತಿಲ್ಲ. ವಿಶ್ವನಾಥ್ ಅವರನ್ನು ಸಾಹಿತ್ಯದ ಲೆಕ್ಕದಲ್ಲಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ವಿಚಾರದಲ್ಲಿಯೂ ಪಕ್ಷ ಅಪಸ್ವರ ತೆಗೆದಿತ್ತು. ಆದರೆ, ಮತ್ತೆ ಬಿಜೆಪಿ ಅಡಳಿತಕ್ಕೆ ಬರಲು ಕಾರಣರಾದವರಲ್ಲಿ ಪ್ರಮುಖರು ಎಂಬ ಹಠಕ್ಕೆ ಬಿದ್ದು ಮುಖ್ಯಮಂತ್ರಿಗಳು ವಿಶ್ವನಾಥರನ್ನು ಮೇಲ್ಮನೆಗೆ ನಾಮಕರಣ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲೂ ಟೀಮ್ ವಲಸಿಗರ ಒತ್ತಡ ಕೆಲಸ ಮಾಡಿತ್ತು. ಬಳಿಕ ವಿಶ್ವನಾಥ್ ಪರಿಷತ್ತಿಗೆ ಬಂದು ಲ್ಯಾಂಡ್ ಆಗಿದ್ದರು.
ಮುನಿರತ್ನ
ತಿಕ್ಕಾಟ ಮತ್ತೊಮ್ಮೆ
ನವೆಂಬರ್ 3ರಂದು ಶಿರಾ ಮತ್ತು ಆರ್.ಆರ್.ನಗರದ ಚುನಾವಣೆ ನಡೆಯಲಿದ್ದು, ಶುಕ್ರವಾರ (ಅ.16)ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಕೊನೆ ದಿನಕ್ಕೆ ಇನ್ನು ಮೂರೇ ದಿನ ಬಾಕಿ ಇದ್ದರೂ ಈವರೆಗೂ ಟಿಕೆಟ್ ಯಾರಿಗೆ ಎಂಬುದು ಫೈನಲ್ ಆಗಿಲ್ಲ. ಇದು ವಲಸಿಗರಿಗೆ ತೀವ್ರ ಸಿಟ್ಟು ಉಂಟು ಮಾಡಿದೆ. ಸೋಮವಾರ ಬೆಳಗ್ಗೆಯೇ ದಸರಾ ಉದ್ಘಾಟನೆಗೆ ಆಹ್ವಾನ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಸಚಿವ ಎಸ್.ಟಿ.ಸೋಮಶೇಖರ್, “ಯಾವುದೇ ಕಾರಣಕ್ಕೂ ಮುನಿರತ್ನ ಅವರಿಗೆ ಟಿಕೆಟ್ ತಪ್ಪಬಾರದು. ಇದು ನಿಮ್ಮ ಜವಾಬ್ದಾರಿ” ಎಂದು ನೇರವಾಗಿಯೇ ಹೇಳಿದ್ದಾರೆಂದು ಗೊತ್ತಾಗಿದೆ. ಇದಾದ ಮೇಲೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಉಪ ಚುನಾವಣಾ ರಣತಂತ್ರ ರೂಪಿಸುವ ಸಭೆಯಲ್ಲಿ ಭಾಗಿಯಾಗಿದ್ದ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಜತೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ʼನಿಂದ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ ಮುನಿರತ್ನ ಅವರಿಗೆ ಟಿಕೆಟ್ ನೀಡಲೇಬೇಕು. ಬೆಂಗಳೂರು ನಗರದಲ್ಲಿ ಬಿಜೆಪಿ ಬಲಗೊಳ್ಳಲು ಮುನಿರತ್ನ ಅವಶ್ಯಕ ಎಂದು ಒತ್ತಾಯಿಸಿದ್ದಾರೆ.
ಈ ಒತ್ತಾಯಕ್ಕೆ ಸಭೆಯಲ್ಲಿ ಉತ್ತರಿಸಿದ ಸಿಎಂ, “ಸರಕಾರ ಅಧಿಕಾರಕ್ಕೆ ಬರಲು ಸಹಕರಿಸಿದ ಮುನಿರತ್ನ ಅವರನ್ನು ಕಡೆಗಣಿಸುವುದಿಲ್ಲ. ಒಗ್ಗಟ್ಟಿನಿಂದ ಉಪ ಚುನಾವಣೆಯನ್ನು ಗೆಲ್ಲೋಣ” ಎಂದು ಹೇಳಿದ್ದಾರೆ. ಅಲ್ಲಿಗೆ ಟೀಮ್ ವಲಸಿಗರು ಅರೆಮನಸ್ಸಿನಿಂದಲೇ ಆ ಸಭೆಯಿಂದ ಹೊರಬಂದರೂ, ದೆಹಲಿಯಿಂದ ಯಾವ ನಿರ್ಣಯ ಬರುತ್ತದೋ ಎಂಬ ಆತಂಕದಲ್ಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಮುನಿರತ್ನಗೆ ಕೈಕೊಟ್ಟು ನಿಷ್ಠಾವಂತ ತುಳಸಿ ಮುನಿರಾಜೇಗೌಡರಿಗೆ ಮಣೆ ಹಾಕಿದರೆ ಯಾವ ರೀತಿ ಈ ಬಿಕ್ಕಟ್ಟಿಗೆ ತೇಪೆ ಹಚ್ಚಬೇಕೆಂಬ ಸೂತ್ರವೂ ಸಿಎಂ ಅಂಗಳದಲ್ಲಿ ರೆಡಿಯಾಗಿದೆ ಎಂಬ ಸುದ್ದಿಯೂ ಹೊರಬಂದಿದೆ. ಇದೇ ವೇಳೆ, ಮುನಿರತ್ನಗೆ ಟಿಕೆಟ್ ಕೋಡಿಸುವ ವಿಚಾರದಲ್ಲಿ ವಲಸಿಗರೆಲ್ಲರೂ ಇನ್ನಷ್ಟು ಗಟ್ಟಿಯಾಗಿ ನಿಂತಿದ್ದಾರೆ ಮಾತ್ರವಲ್ಲದೆ; ಪಕ್ಷಕ್ಕಿಂತ ನಮಗೆ ಸ್ನೇಹವೇ ಮುಖ್ಯ ಎಂಬ ಸಂದೇಶವನ್ನೂ ಅವರೆಲ್ಲರೂ ಸ್ಪಷ್ಟವಾಗಿ ಪಕ್ಷಕ್ಕೆ ರವಾನಿಸಿದ್ದಾರೆ.
ಜೆ.ಪಿ.ನಡ್ಡಾ ಅವರೊಂದಿಗೆ ತುಳಸಿ ಮುನಿರಾಜೇಗೌಡ.
ಪಕ್ಷಕ್ಕೆ ಚಿಂತೆ ಇಲ್ಲ
ಈ ನಡುವೆ 2018ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಮುನಿರತ್ನ ವಿರುದ್ಧ ಯುದ್ಧದಂತೆ ಸೆಣಸಿದ್ದ ತುಳಸಿ ಮುನಿರಾಜೇಗೌಡರಿಗೆ ಪಕ್ಷದ ನಾಯಕತ್ವ ಬೆಂಬಲ ನೀಡುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಮುಖ್ಯಮಂತ್ರಿ ಅವರು ಮುನಿರತ್ನ ಅವರಿಗೇ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದರೆ, ಪಕ್ಷದ ರಾಜ್ಯಾಧ್ಯಕ್ಷರು ತುಳಸಿ ಮುನಿರಾಜೇಗೌಡರ ಪರ ಬ್ಯಾಟ್ ಮಾಡಿದ್ದರು. ಅದಕ್ಕೆ ಕಾರಣ; ಮುನಿರತ್ನ ವಿರುದ್ಧ ಕ್ಷೇತ್ರದ ಬಿಜೆಪಿ ಕಾರ್ತಕರ್ತರಲ್ಲಿ ಮಡುಗಟ್ಟಿರುವ ಆಕ್ರೋಶ. ಕಳೆದ ಚುನಾವಣೆಯಲ್ಲಿ ಅನುಭವಿಸಿದ ಕಿರುಕುಳ. ಹೀಗಾಗಿ ಕಾರ್ಯಕರ್ತರ ಮಟ್ಟದಲ್ಲಿಯೂ ಒಡಕು ಎದ್ದು ಕಾಣುತ್ತಿದೆ. ಇದರ ನಡುವೆ ತುಳಸಿ ಮುನಿರಾಜೇಗೌಡ ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರವನ್ನೂ ಶುರು ಮಾಡಿಕೊಂಡಿದ್ದಾರೆ. ಇದು ವಲಸಿಗರ ಸಿಟ್ಟು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
2018ರಲ್ಲಿ ಏನಾಗಿತ್ತು?
ಚುನಾವಣೆ ಹೊತ್ತಿನಲ್ಲಿಯೇ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿಗಳ ಜತೆ ಒಂದು ಟ್ರಕ್‌ನಲ್ಲಿ 95 ಲಕ್ಷ ರೂ. ನಗದು ಪತ್ತೆಯಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 1,08,064 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜೇಗೌಡ 82,572 ಮತಗಳನ್ನು ಪಡೆದಿದ್ದರು. ಇಬ್ಬರ ನಡುವೆ 25,492 ಮತಗಳ ಅಂತರವಿತ್ತು. ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಚುನಾವಣಾಧಿಕಾರಿಯಿಂದ ಆಯ್ಕೆ ಪತ್ರವನ್ನು ಪಡೆದಿದ್ದ ಮುನಿರತ್ನ ವಿಧಾನಸಭೆ ಸದಸ್ಯರಾಗಿಯೂ ಪ್ರಮಾಣ ಸ್ವೀಕರಿಸಿದ್ದರು. ಆದರೆ, ಕಳೆದ ಜೂನ್-ಜುಲೈನಲ್ಲಿ ನಡೆದ ಆಪರೇಷನ್ ಕಮಲದ ಮೂಲಕ ಅವರು ಬಿಜೆಪಿಗೆ ಹಾರಿದ್ದರು. ಆದರೆ, ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾತ್ರ ಅವರನ್ನು ಒಪ್ಪುತ್ತಿಲ್ಲ.
ಬಿಜೆಪಿ ಇಕ್ಕಟ್ಟಿನಲ್ಲಿದೆಯಾ?
ಹೌದು ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಆರ್.ಟಿ.ವಿಠಲಮೂರ್ತಿ. ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ಹೇಳಿದ್ದು ಇಷ್ಟು;
ಆರ್.ಟಿ.ವಿಠಲಮೂರ್ತಿ
“ರಾಜರಾಜೇಶ್ವರಿ ನಗರವನ್ನು ಬಿಜೆಪಿ ಕಲಸುಮೇಲೋಗರ ಮಾಡಿಕೊಂಡಿದೆ. ಆಪರೇಷನ್ ಕಮಲಕ್ಕೆ ಮೊದಲು ಇದೇ ಬಿಜೆಪಿಯು ಮುನಿರತ್ನ ಅವರನ್ನು ತೀವ್ರವಾಗಿ ವಿರೋಧಿಸಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ, ಚುನಾವಣಾ ಕಣದಲ್ಲಿ ಅವರ ವಿರುದ್ಧ ದೊಡ್ಡ ಸಮರವನ್ನೇ ನಡೆಸಿತ್ತು. ಈಗ ಮುನಿರತ್ನ ಬಿಜೆಪಿಗೆ ಬಂದು ನಾಯಕರಿಗೆ ಹತ್ತಿರವಾಗಿದ್ದಾರೆಯೇ ವಿನಾ, ಕಾರ್ಯಕರ್ತರಿಗೆ ಅಲ್ಲ. ಇದು ಒಂದು ಸಮಸ್ಯೆ. ಇನ್ನೊಂದು; ಮುನಿರತ್ನ ಮತ್ತು ತುಳಸಿ ಮುನಿರಾಜೇಗೌಡ ನಡುವೆ ಬಿಜೆಪಿ ಹೋಳಾಗಿದೆ, ಇದು ಸ್ಪಷ್ಟ. ಹೀಗಾಗಿ ಮುನಿರತ್ನಗೆ ಟಿಕೆಟ್ ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ. ಕಾಂಗ್ರೆಸ್ ಅಭ್ಯರ್ಥಿಗೆ ಇದೆಲ್ಲದರ ಪ್ರಯೋಜನ ಸಿಗುವ ಸಾಧ್ಯತೆ ಇದೆ. ಜತೆಗೆ, ಆ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಮುನಿರತ್ನ ನೇರವಾಗಿ ಡಿಕೆ ಬ್ರದರ್ಸ್ ಎದುರೇ ಹೋರಾಟ ನಡಸಬೇಕು. ಹೀಗಾಗಿ ಆ ಕ್ಷೇತ್ರದ ಫಲಿತಾಂಶದ ಬಗ್ಗೆ ನನಗೂ ತೀವ್ರ ಕುತೂಹಲವಿದೆ” ಎನ್ನುತ್ತಾರೆ ಅವರು.
****