KSPCB ಅಧ್ಯಕ್ಷರ ನೇಮಕದ ಬಗ್ಗೆ ಸರಕಾರಕ್ಕೂ ಬಿಸಿ ಮುಟ್ಟಿಸಿದ ಹೈಕೋರ್ಟ್; ನೀರಾವರಿ ಹೋರಾಟಗಾರ ಆರ್. ಆಂಜನೇಯ ರೆಡ್ಡಿ ಸಂದರ್ಶನ
ಇತ್ತೀಚೇಗೆ ಸದಾ ಸುದ್ದಿಯಲ್ಲಿರುವ, ಸುಪ್ರೀಂ ಕೋರ್ಟ್ ನ ಆದೇಶವನ್ನು ಉಲ್ಲಂಘಿಸಿ ಹೈಕೋರ್ಟ್’ನಿಂದ ಅನೇಕ ಸಲ ಛೀಮಾರಿಯನ್ನೂ ಹಾಕಿಸಿಕೊಂಡಿರುವ ಸರಕಾರಕ್ಕೆ “ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ” ಅಧ್ಯಕ್ಷರ ನೇಮಕಾತಿ ವಿಷಯದಲ್ಲಿ ಅಂತಿಮವಾಗಿ ಇದೇ ಅಕ್ಟೋಬರ್ 8ರಂದು ರಾಜ್ಯ ಹೈಕೋರ್ಟ್ ಅತ್ಯಂತ ಮಹತ್ತ್ವದ ಆದೇಶ ನೀಡಿದೆ. “ಇನ್ನು ಮುಂದೆ ತನ್ನ ಗಮನಕ್ಕೆ ತರದೆ ಈ ಮಂಡಳಿಗೆ ಅಧ್ಯಕ್ಷರನ್ನಾಗಲಿ, ಸದಸ್ಯ ಕಾರ್ಯದರ್ಶಿಯನ್ನಾಗಲಿ ಅಥವಾ ಸದಸ್ಯರನ್ನಾಗಲಿ ನೇಮಕ ಮಾಡುವಂತಿಲ್ಲ” ಎಂದು ನ್ಯಾಯಾಲಯ ಸರಕಾರಕ್ಕೆ ಖಡಕ್ ಆದೇಶ ನೀಡಿದೆ.
ಅಷ್ಟೇ ಅಲ್ಲ; “ಸುಪ್ರೀಂ ಕೋರ್ಟ್ ನೀಡಿರುವ ಆದೇಶದನ್ವಯ ನಿಯಮಾವಳಿಯನ್ನು ರೂಪಿಸಿ. ನವೆಂಬರ್ 9ರೊಳಗೆ ಈ ಹೊಸ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಹೈಕೋರ್ಟ್’ಗೆ ಸಲ್ಲಿಸಬೇಕು. ಹೊಸ ನೇಮಕಾತಿ ಮಾಡುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಲೇಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸರಕಾರಕ್ಕೆ ಆದೇಶಿಸಿದೆ. ಈ ಆದೇಶಕ್ಕೆ ರಾಜ್ಯಾದ್ಯಂತ ವ್ಯಾಪಕ ಸ್ವಾಗತವೂ ವ್ಯಕ್ತವಾಗಿದೆ. ಪರಿಸರ ತಜ್ಞರು ಮತ್ತು ಹೋರಾಟಗಾರರಂತೂ ಹರ್ಷ ವ್ಯಕ್ತಪಡಿಸಿದ್ದಾರಲ್ಲದೆ, ಈ ಆದೇಶದಿಂದ ಇಡೀ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಂಟಿದ್ದ ʼರಾಜಕೀಯ ಮಾಲಿನ್ಯʼವನ್ನು ತೊಡೆದುಹಾಕಲು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿದ್ದ ಪ್ರಗತಿಪರ ಕೃಷಿಕ, ನೀರಾವರಿ ಹೋರಾಟಗಾರ ಆರ್. ಆಂಜನೇಯ ರೆಡ್ಡಿ ಅವರನ್ನು ಈ ಆದೇಶದ ಹಿನ್ನೆಲೆಯಲ್ಲಿ ಸಿಕೆನ್ಯೂಸ್ ನೌ ಸಂದರ್ಶಿಸಿದೆ.
ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ ಕಂಡುಬಂದ ಎಚ್ ಎನ್ ವ್ಯಾಲಿ ನೀರಿನ ದೃಶ್ಯ.
ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳಿಗಾಗಿ ಹೋರಾಡುತ್ತಿದ್ದ ನೀವು, ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಸಿಡಿದೇಳಲು ಕಾರಣವೇನು? ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ ಹಿನ್ನೆಲೆ ಏನು?
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆ. ಸರಕಾರದ ಅಧೀನಕ್ಕೆ ಒಳಪಡದ ವೈಜ್ಞಾನಿಕ ಸಂಸ್ಥೆಯೂ ಹೌದು. ಅದೇ ರೀತಿಯಲ್ಲಿ ಈ ಸಂಸ್ಥೆ ಕೆಲಸ ಮಾಡಬೇಕಾಗಿತ್ತು. ಯಾರ ಕಪಿಮುಷ್ಠಿಗೂ ಸಿಲುಕದೆ, ರಾಜಕೀಯ ಒತ್ತಡಕ್ಕೆ ಅತೀತವಾಗಿ ಕರ್ತವ್ಯವನ್ನು ನಿರ್ವಹಿಸಬೇಕಾಗಿತ್ತು. ಇದು ರಾಜಕೀಯ ಕಾರಣಕ್ಕೆ ಅತೃಪ್ತಗೊಂಡ ಶಾಸಕರನ್ನೋ ಅಥವಾ ಪಕ್ಷದ ನಾಯಕರನ್ನೋ ನೇಮಕ ಮಾಡುವಂಥ ಸಾಮಾನ್ಯ ಮಂಡಳಿ ಅಥವಾ ನಿಗಮವಲ್ಲ. ಆದರೆ, ಇದರಲ್ಲಿ ಆಗಿರುವುದೇನು? ರಾಜಕೀಯ ಕಪಿಮುಷ್ಠಿಗೆ ಸಿಲುಕಿ ನಲುಗುತ್ತಿದೆ. ರಾಜಕೀಯ ಗಂಜಿ ಕೇಂದ್ರವಾಗಿ ಬದಲಾಗಿದೆ. ಹೊರಗಿನ ಮಾಲಿನ್ಯವನ್ನು ತೊಡೆದು ಹಾಕುವುದಿರಲಿ ಅದುವೇ ʼರಾಜಕೀಯ ಮಾಲಿನ್ಯʼಕ್ಕೆ ಸಿಕ್ಕಿ ಒದ್ದಾಡುತ್ತಿದೆ. ಈ ವಿಷರ್ತುಲದಿಂದ ಆ ಮಂಡಳಿಯನ್ನು ಪಾರು ಮಾಡಲು ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು.
ನಿಮ್ಮ ಪ್ರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯು ಕರ್ತವ್ಯ ನಿರ್ವಹಿಸುವಲ್ಲಿ ಸಂರ್ಣವಾಗಿ ವಿಫಲವಗಿದೆಯಾ?
ಖಂಡಿತಾ. ಕಳೆದ 20 ವರ್ಷದ ಇತಿಹಾಸವನ್ನು ನೋಡುತ್ತಾ ಹೋದರೆ ಮಾಲಿನ್ಯ ನಿಯಂತ್ರಣ ಮಂಡಳಿ ಹೇಗೆ ಕೆಲಸ ಮಾಡಿದೆ ಎಂಬುದನ್ನೂ ಎಲ್ಲರೂ ನೋಡಿದ್ದಾರೆ. ಅದರಿಂದ ಮಾಲಿನ್ಯ ನಿಯಂತ್ರಣ ಎಲ್ಲಿ ಆಗಿದೆ? ಎಂಬುದನ್ನು ಭೂತಗನ್ನಡಿ ಹಾಕಿ ಹುಡುಕಬೇಕಿದೆ. ಎಲ್ಲ ರೀತಿಯ ಮಾಲಿನ್ಯವೂ ಅಂಕೆ ಮೀರಿಬಿಟ್ಟಿದೆ. ಅಧಿಕಾರ ಕೇಂದ್ರದಲ್ಲಿ ಕೂತಿದ್ದ ನಾಯಕರು ಈ ಮಂಡಳಿಯನ್ನು ತಮಗಿಷ್ಟ ಬಂದ ಹಾಗೆ ದುರುಪಯೋಗ ಮಾಡಿಕೊಂಡರು. ಬೇಕಾದವರನ್ನು ಕೂರಿಸಿ ಬೇಳೆ ಬೇಯಿಸಿಕೊಂಡರು. ಪರಿಣಾಮ; ಕಡಿಮೆಯಾಗಬೇಕಿದ್ದ ಮಾಲಿನ್ಯ ಹೆಚ್ಚುತ್ತಲೇ ಹೋಯಿತು. ಕಾರಣ; ಪರಿಸರದ ತಜ್ಞರು, ವಿಶೇಷ ಜ್ಞಾನವುಳ್ಳವರು, ವಿಜ್ಞಾನಿಗಳು, ವಿಷಯ ಪರಿಣಿತರು ಯಾರೂ ಈ ಸಂಸ್ಥೆಯ ಚುಕ್ಕಾಣಿ ಹಿಡಿಯಲಿಲ್ಲ. ನಿಜಕ್ಕಾದರೆ ಅವರು ಆ ಕಡೆ ಸುಳಿಯದಂತೆ ರಾಜಕೀಯವಾಗಿ ತಡೆಯಲಾಯಿತು. ಬೆಂಗಳೂರು ನಗರವನ್ನೇ ತೆಗೆದುಕೊಳ್ಳಿ. ಎಷ್ಟು ಕೆರೆಗಳಿದ್ದವು? ಅದೆಷ್ಟು ರಾಜಕಾಲುವೆಗಳಿದ್ದವು? ಎಷೊಂದು ಶುದ್ಧ ಜಲಮೂಲಗಳಿದ್ದವು? ಆ ಎಲ್ಲ ಜಲಮೂಲಗಳೂ ಸರ್ವನಾಶವಾಗಿವೆ. ಕೆರೆಕಟ್ಟೆಗಳು ವಿಷಮಯವಾಗಿ ಅಪಾಯಕಾರಿ ತ್ಯಾಜ್ಯದಿಂದ ತುಂಬಿಹೋಗಿವೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಆಸ್ಪತ್ರೆಗಳು, ವಸತಿ ಸಮುಚ್ಛಯಗಳು, ಕೈಗಾರಿಕೆಗಳಿಂದ ಹೊರಬರುತ್ತಿರುವ ತ್ಯಾಜ್ಯ ನಿರ್ವಹಣೆ ಆಗುತ್ತಿದೆಯಾ? ಆಗುತ್ತಿಲ್ಲ. ನಗರಸಭೆ, ಪುರಸಭೆಗಳ ವ್ಯಾಪ್ತಿಯಲ್ಲೇ ಇದೆಲ್ಲ ಮಿತಿಮೀರಿಬಿಟ್ಟಿದೆ. ಇದೆಲ್ಲವನ್ನೂ ನಿಯಂತ್ರಿಸಿ ಜಲಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಯಬೇಕಾದ ಕೆಲಸ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಬೇಕಾಗಿತ್ತು. ಶುದ್ಧ ಜಲಮೂಲಗಳಿರುವ ಕೆರೆ-ಕಟ್ಟೆ, ನದಿ, ಕಾಲುವೆಗಳಿಗೆ ಘನ ತ್ಯಾಜ್ಯ ಸುರಿಯುವುದು, ತ್ಯಾಜ್ಯ ನೀರನ್ನು ಹರಿಸುವುದೂ ಕಾನೂನು ಪ್ರಕಾರ ಮಹಾ ಅಪರಾಧ. ಮಂಡಳಿಗೆ ಈ ವಿಷಯ ಗೊತ್ತಿಲ್ಲವೇ? ಯಾರು ಮಾಲಿನ್ಯಕ್ಕೆ ಕಾರಣರೋ ಅವರನ್ನು ಕಾನೂನು ಕ್ರಮ ಜರುಗಿಸುವ ಪರಮಾಧಿಕಾರ ಇದ್ದರೂ ಮಾಲಿನ್ಯಕ್ಕೆ ಕಾರಣವಾಗುವವರನ್ನು ಟಚ್ ಮಾಡುವ ಧೈರ್ಯವನ್ನೂ ಈ ಮಂಡಳಿ ಮಾಡಲಿಲ್ಲ! ಇದು ಸಾಲದೆಂಬಂತೆ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ತ್ಯಾಜ್ಯ ನೀರನ್ನು ಹರಿಸುವ ಮಹತ್ವಾಕಾಂಕ್ಷೆ ಯೋಜನೆಗಳಾದ ಕೆ ಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆಗಳ ಸಂಸ್ಕರಣಾ ಘಟಕಗಳ ನಿರ್ವಹಣೆ, ಸಂಸ್ಕರಿಸಿದ ನೀರಿನ ನೈಜ ಗುಣಮಟ್ಟ , ಸಂಸ್ಕರಿಸುವ ಘಟಕಗಳ ಪರಿಶೀಲನೆ ಮಾಡುವಲ್ಲಿ ಸಂಪೂರ್ಣ ವಿಫಲವಾಯಿತು. ಇದರಿಂದ ನಮ್ಮ ಬರಪೀಡಿತ ಜಿಲ್ಲೆಗಳಿಗೆ ಮಹಾ ಅನ್ಯಾಯವನ್ನೇ ಮಾಡಿದೆ. ಕೆ ಸಿ ವ್ಯಾಲಿ, ಎಚ್ ಎನ್ ವ್ಯಾಲಿ ಮೂಲಕ ಹರಿಸುತ್ತಿರುವ ನೀರು ಅರೆ ಸಂಸ್ಕರಿಸಿದ ಅಶುದ್ಧ ನೀರಾಗಿದೆ. ಕಾರ್ಖಾನೆಗಳು, ಕೈಗಾರಿಕೆಗಳು ಹೊರಹಾಕುತ್ತಿರುವ ವಿಷಕಾರಿ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಟ್ರೀಟ್ಮೆಂಟ್ ಮಾಡುತ್ತಿಲ್ಲ. ಹರಿದು ಬರುತ್ತಿರುವ ನೀರು ಒಮ್ಮೆ ನೊರೆ, ಮತ್ತೊಮ್ಮೆ ಕಪ್ಪು, ಮಗದೊಮ್ಮೆ ಹಸಿರು ಬಣ್ಣದಲ್ಲಿದೆ. ಕೆಲ ಕೆರೆಗಳಲ್ಲಿ ಜಲಚರಗಳು ಸತ್ತುಹೋಗಿವೆ. ಆ ನೀರು ಕೆರೆಗಳಲ್ಲಿ ಇಂಗಿ ಭೂಮಿಗೆ ಸೇರಿದರೆ ಅಂತರ್ಜಲವೂ ಕಲುಷಿತವಾಗಿ, ಮುಂದಿನ ದಿನಗಳಲ್ಲಿ ಕುಡಿಯುವ ನೀರೂ ವಿಷವಾಗುತ್ತದೆ. ಹಾಗಾದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿರುವುದೇನು? ತ್ಯಾಜ್ಯ ನೀರನ್ನು ಸಂಸ್ಕರಿಸುವ ಘಟಕಗಳ ಸಾಮರ್ಥ್ಯವನ್ನು ಅದು ಪರಿಶೀಲನೆ ಮಾಡಿದೆಯೇ? ಮಾಡಿಲ್ಲ. ಸರಕಾರ ಜಾರಿಗೆ ತರುತ್ತಿರುವ ಅನೇಕ ಯೋಜನೆಗಳ ಬಗ್ಗೆ ವಿಧಾನಸೌಧದಲ್ಲಿ ಕೂತ ಜನ ಈ ಮಂಡಳಿಯನ್ನು ಕ್ಯಾರೆ ಎನ್ನುತ್ತಿಲ್ಲ. ನಿರ್ಲಜ್ಜವಾಗಿ ಖಾಸಗಿ ಪ್ರಯೋಗಾಲಯಗಳಿಂದ ತನಗೆ ಬೇಕಾದ ರೀತಿಯಲ್ಲಿ ವರದಿಗಳನ್ನು ಹಣ ತೆತ್ತು ತಯಾರಿ ಮಾಡಿಸಿಕೊಳ್ಳುತ್ತಿದೆ ಸರಕಾರ. ಹೀಗಾದರೆ, ರಾಜ್ಯಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಾದರೂ ಏತಕ್ಕೆ? ಯಾವ ಪುರುಷಾರ್ಥಕ್ಕೆ ಬೇಕು? ಇದೆಲ್ಲವನ್ನೂ ನೋಡಲಾರದೆ, ನೋವಾಗಿ, ಪರಿಸರಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಲಾಗದೆ ನ್ಯಾಯಾಲಯದ ಮೊರೆ ಹೋದೆ. ಘನ ನ್ಯಾಯಾಲಯದಿಂದ ಇಡೀ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ.
ಮುಂದಿನ ದಿನಗಳಲ್ಲಿ ಕೆ ಸಿ ವ್ಯಾಲಿ, ಎಚ್ ಎನ್ ವ್ಯಾಲಿ ಯೋಜನೆಗಳ ಪರಿಸ್ಥಿತಿ ಏನು?
ಮಾಲಿನ್ಯ ನಿಯಂತ್ರಣ ಮಂಡಳಿ ಉದ್ದೇಶಪೂರ್ವಕವಾಗಿಯೇ ಮೈಮರೆಯದೇ ಇದ್ದಿದ್ದರೆ ಈ ಯೋಜನೆಗಳು ಸುರಕ್ಷಿತ ಗುಣಮಟ್ಟದ ನೀರನ್ನು ಹರಿಸಬಹುದಿತ್ತು. ಹಾಗೆ ನೋಡಿದರೆ ನಮ್ಮ ಕುಡಿಯುವ ನೀರಿನ ಮೂಲವಾದ ಅಂತರ್ಜಲ ಅಭಿವೃದ್ಧಿ ಮಾಡುವ ಉದ್ದೇಶ ಇಟ್ಟುಕೊಂಡು ರೂಪಿಸಿದ ಇವೆರಡೂ ಯೋಜನೆಗಳು ಜಗತ್ತಿನಲ್ಲಿಯೇ ಮೊದಲು ಎಂಬ ಹೆಗ್ಗಳಿಕೆ ಇತ್ತು. ಇಂಥ ಯೋಜನೆಗಳನ್ನು ಎಷ್ಟು ಮುನ್ನೆಚ್ಚರಿಕೆಯಿಂದ, ಎಷ್ಟು ವೈಜ್ಞಾನಿಕವಾಗಿ, ಅದೆಷ್ಟು ಜಾಗರೂಕತೆ ಮತ್ತು ಮುಂದಾಲೋಚನೆಯಿಂದ ಜಾರಿ ಮಾಡಬೇಕಾಗಿತ್ತು, ಅಲ್ಲವೇ? ಇಡೀ ದೇಶ ಅಥವಾ ಜಗತ್ತಿನಲ್ಲಿ ಮುಂದೆ ಇಂಥ ಯೋಜನೆಗಳನ್ನು ರೂಪಿಸಲು ಕೆ ಸಿ ವ್ಯಾಲಿ, ಎಚ್ ಎನ್ ವ್ಯಾಲಿ ಮಾದರಿಯಾಗಬೇಕಿದ್ದವು. ಆದರೆ, ಆಗಿರುವುದೇನು? ಸರ್.ಎಂ.ವಿಶ್ವೇಶ್ವರಯ್ಯ, ಡಾ.ಪರಮಶಿವಯ್ಯ ಅವರಂಥ ಮಹಾನ್ ದಾರ್ಶನಿಕ ಎಂಜಿನಿಯರ್’ಗಳನ್ನು ಕಂಡ ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಸರಕಾರ ಮಾಡಿಬಿಟ್ಟಿದೆ. ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಅಸಮರ್ಥತೆ ಮುಖ್ಯ ಕಾರಣ. ಇದರ ಜತೆಗೆ, ಅಕ್ರಮ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ತಡೆಯುವಲ್ಲಿ ಇದು ಸೋತಿದೆ. ಉದಾಹರಣೆಗೆ; ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಎಲ್ಲ ಆದೇಶಗಳನ್ನು ಉಲ್ಲಘಿಸಿ ಅಕ್ರಮವಾಗಿ ನಡೆಯುತ್ತಿವೆ.
ಈ ಹೋರಾಟದಲ್ಲಿ ತಜ್ಞರ ನೆರವನ್ನು ನೀವು ಪಡೆದಿದ್ದೀರಾ? ಅವರಿಂದ ನಿಮಗೆ ಯಾವ ರೀತಿಯ ಅನುಕೂಲವಾಯಿತು?
ಹೌದು. ನ್ಯಾಯಾಲಯದಲ್ಲಿ ನಾವು ನಡೆಸಿದ ಕಾನೂನು ಹೋರಾಟಕ್ಕೆ ಹಿರಿಯ ಕಾನೂನು ತಜ್ಞರು ಮತ್ತು ಪರಿಸರ ತಜ್ಞರು ಹೆಗಲು ಕೊಟ್ಟಿದ್ದಾರೆ. ನಮ್ಮ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸರಕಾರವನ್ನು ಎಚ್ಚರಿಸಿದರೂ , ನಮ್ಮ ಮನವಿಗೆ ಕಿವಿಗೊಡದೆ ಯಾವಾಗ ಬೆಂಗಳೂರಿನ ವಿಷಯುಕ್ತ ತ್ಯಾಜ್ಯ ನೀರು ಎಗ್ಗಿಲ್ಲದೆ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸಿದರೋ, ಅಲ್ಪಸ್ವಲ್ಪ ಚಲಚರಗಳು ವಿಲವಿಲನೆ ಒದ್ದಾಡಿ ಪ್ರಾಣಬಿಟ್ಟವು. ನೊರೆ ಮಿಶ್ರಿತ ನೀರು ಜನರಲ್ಲಿ ದಿಗಿಲು ಮೂಡಿಸಿತು. ಆಗ ಗೊತ್ತಿದ್ದ ಎಲ್ಲ ಪರಿಸರ ತಜ್ಞರು, ಕಾನೂನು ಪಂಡಿತರ ಬಳಿ ನಮ್ಮ ದುಗುಡವನ್ನು ತೋಡಿಕೊಂಡಾಗ, ಅವರೆಲ್ಲರೂ ಜಲಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಹಸಿರು ನ್ಯಾಯ ಮಂಡಳಿ ನಿರಂತರವಾಗಿ ನೀಡುತ್ತಾ ಬಂದಿರುವ ಮಹತ್ತ್ವದ ಆದೇಶಗಳ ಬಗ್ಗೆ ಮಾಹಿತಿ ನೀಡಿದರು. ಆಗ ಜಲ ಮಾಲಿನ್ಯದ ಬಗ್ಗೆ ನನಗೊಂದು ಸ್ಪಷ್ಟಚಿತ್ರಣ ಮೂಡಿತು. ಇದಕ್ಕೆ ಯಾರು ಕಾರಣ? ಮಾಲಿನ್ಯ ನಿಯಂತ್ರಣ ಮಂಡಳಿ ಎಂಬ ರಾಜಕೀಯ ಗಂಜಿ ಕೇಂದ್ರ ಮಾಡುತ್ತಿರುವ ಅನಾಹುತವೇನು ಎಂಬುದರ ಅರಿವಾಯಿತು. ಆಮೇಲೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು.
ಹಾಗಾದರೆ, ನ್ಯಾಯಾಲಯದಲ್ಲಿ ಸರಕಾರ ವಾದಿಸಿದ್ದೇನು?
ನಮ್ಮಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದನ್ವಯ ನ್ಯಾಯಾಲಯಕ್ಕೆ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಕ್ಕೆ ಪ್ರತಿಯಾಗಿ ಸರಕಾರ ಖಾಸಗಿ ಪ್ರಯೋಗಾಲಯಗಳಿಂದ ತಯಾರು ಮಾಡಿಸಿದ್ದ ಸುಳ್ಳು ವರದಿಗಳನ್ನು ಸಲ್ಲಿಸಿತ್ತು. ತ್ಯಾಜ್ಯ ನೀರನ್ನು ಶುದ್ಧೀಕರಿಸುತ್ತಿರುವ ಘಟಕಗಳನ್ನು ಕೂಡ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲಿಸಿ ನೋಡಿಲ್ಲ. ನಿಮಗೆ ಗೊತ್ತಿರಲಿ, ಇಂಥ ಶುದ್ಧಕರಿಸುವ ಘಟಕಗಳನ್ನು ಬೆಂಗಳೂರು ಒಳಚರಂಡಿ ಮಂಡಳಿ ಕೂಡ ಹೊರಗುತ್ತಿಗೆ ನೀಡಿದೆ. ಇಂಥ ಘಟಕಗಳಿಗೆ ವಿಧಿಸಿರುವ ಮಾನದಂಡಗಳೇನು? ಯಾರು ಇವುಗಳ ಮೇಲುಸ್ತುವಾರಿ ಮಾಡುತ್ತಿದ್ದಾರೆ? ಜಲಮೂಲಗಳಿಗೆ ಮತ್ತು ವಿಫಲವಾಗಿರುವ ಕೊಳವೆ ಬಾವಿಗಳಿಗೆ ಅಕ್ರಮವಾಗಿ ತುಂಬಿಸಲಾಗುತ್ತಿರುವ ತ್ಯಾಜ್ಯ ನೀರಿಗೆ ಯಾರು ಹೊಣೆ? ಈ ಎಲ್ಲ ಹಿನ್ನೆಲೆಯಲ್ಲಿ ಸರಕಾರ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಮಾಡಿದೆ? ಯಾರ ಮೇಲಾದರೂ ಮೊಕದ್ದಮೆ ದಾಖಲಿಸಿದೆಯಾ ಅಥವಾ ಕ್ರಮ ಕೈಗೊಂಡಿದೆಯಾ? ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಎಲ್ಲ ಸತ್ಯಗಳೂ ಹೊರಬಂದವು.
ನಿಮ್ಮ ಕಾನೂನು ಹೋರಾಟ ಶುರುವಾದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಏನಾದರೂ ಬದಲಾವಣೆ ಆಯಿತಾ?
ಖಂಡಿತಾ ಆಗಿದೆ. ಹಿಂದೆ ಮಂಡಳಿ ಮೇಲೆ ಬಂದು ಕೂತವರೆಲ್ಲ ಬಹುತೇಕ ರಾಜಕೀಯ ಹಿನ್ನೆಲೆಯವರೆ. ಅನೇಕರಿಗೆ ಪರಿಸರದ ಬಗ್ಗೆ ರಾಗಿ ಕಾಳಿನಷ್ಟೂ ಜ್ಞಾನವಿರಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಂಥ ಸಂಸ್ಥೆಗಳಿಗೆ ಮುಖ್ಯಸ್ಥರನ್ನು ನೇಮಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾದ ನಿರ್ದೇಶನವನ್ನು ನೀಡಿದೆ. ಅದನ್ನು ನ್ಯಾಯಾಲಯದ ಉಸ್ತುವಾರಿಯಲ್ಲೇ ದೇಶಾದ್ಯಂತ ವ್ಯಾಪಕ ಪ್ರಚಾರ ಮಾಡಿ; ಅಂದರೆ ಜಾಹೀರಾತುಗಳನ್ನು ನೀಡಿ ಮಾಲಿನ್ಯ ನಿಯಂತ್ರಣದ ಬಗ್ಗೆ ಅಪಾರ ಜ್ಞಾನವುಳ್ಳ, ಆ ಕೇತ್ರದಲ್ಲಿ ಕೆಲಸ ಮಾಡಿರುವ ನುರಿತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಆದರೆ ಇಷ್ಟು ದಿನ ಮುಖ್ಯಮಂತ್ರಿ, ಅರಣ್ಯ ಸಚಿವರ ಮಟ್ಟದಲ್ಲೇ ಎಲ್ಲವೂ ನಿರ್ಧಾರವಾಗಿ ಬೇಕಾಬಿಟ್ಟಿಯಾಗಿ ಅನರ್ಹರನ್ನು ನೇಮಕ ಮಾಡಲಾಗುತ್ತಿತ್ತು. ಇನ್ನು ನಾವು ನ್ಯಾಯಾಲಯದ ಮೊರೆ ಹೋದ ಮೇಲೆ ಸರಕಾರಗಳು ಈ ರೀತಿಯಾಗಿ ನೇಮಕ ಮಾಡಿದ್ದ ಇಬ್ಬರು ಅಧ್ಯಕ್ಷರು ರಾಜಿನಾಮೆ ಕೊಟ್ಟರು. ಇದು ನ್ಯಾಯಾಲಯ ಮಧ್ಯಪ್ರವೇಶ ಮಾಡಿದ್ದರಿಂದ ಮಾತ್ರ ಸಾಧ್ಯವಾಯಿತು. ಇನ್ನು ಮುಂದೆ ಯಾರೇ ಅಧ್ಯಕ್ಷರಾಗಿ ಬರಬೇಕಾದರೂ ಪರಿಸರದ ಬಗ್ಗೆ ಅಪಾರವಾದ ತಿಳಿವಳಿಕೆ, ಅನುಭವ, ಜ್ಞಾನ ಇರಲೇಬೇಕು. ಇದುವರೆಗೂ ಮಂಡಳಿಗೆ ವಿಜ್ಞಾನಿಗಳು, ಪರಿಸರ ತಜ್ಞರು ಬರುವುದನ್ನು ತಡೆದಿದ್ದ ಸರಕಾರಕ್ಕೆ ಈಗ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ಮಂಡಳಿಯ ಸದಸ್ಯರು ಎಂಥವರು ಇರಬೇಕು ಎಂಬ ಬಗ್ಗೆಯೂ ನ್ಯಾಯಪೀಠವು ನಿಖರವಾಗಿ ಒತ್ತಿ ಹೇಳಿದೆ. ಇಡೀ ಮೂವತ್ತು ರಾಜ್ಯಗಳಿಗೆ ಅನ್ವಯ ಆಗುವಂಥ ಆದೇಶವನ್ನು ಘನ ನ್ಯಾಯಾಲಯ ನೀಡಿದೆ. ಇನ್ನು ಮುಂದೆ ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬಂದು ಪರಿಸರ ರಕ್ಷಣೆಗೆ ಒಳ್ಳೆಯ ದಿನಗಳು ಬರಲಿವೆ ಎಂಬುದು ನಮ್ಮ ಗಾಢ ನಂಬಿಕೆ.