ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು.
***
ಮೈಸೂರು: ಕೊನೆಗೂ ಡಿಗ್ರಿ ಕಾಲೇಜುಗಳನ್ನು ತೆರೆಯಲು ಸರಕಾರ ನಿರ್ಧರಿಸಿದೆ. ಕಳೆದ ಮಾರ್ಚ್‌ನಲ್ಲಿ ಕೋವಿಡ್ ರಾಜ್ಯಕ್ಕೆ ಕಾಲಿಟ್ಟು ಅಬ್ಬರಿಸುತ್ತಿದ್ದಂತೆಯೇ ಶೈಕ್ಷಣಿಕ ವರ್ಷವೂ ಸ್ಥಗಿತವಾಗಿ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಆದರೆ, ಇದೀಗ ನವೆಂಬರ್ ತಿಂಗಳಲ್ಲಿ ಮುಖ್ಯವಾಗಿ ಡಿಗ್ರಿ ಕಾಲೇಜುಗಳನ್ನು ತೆರೆಯಲು ಫಿಕ್ಸ್ ಆಗಿದೆ. ಆದರೆ, ಯಾವ ಡೇಟಿಗೆ ಕಾಲೇಜು ಕದ ತೆರೆಯಲಾಗುವುದು ಎಂಬ ಕ್ಲಾರಿಟಿಯನ್ನು ಕೊಟ್ಟಿಲ್ಲ. ಆದರೆ, ಮುಂದಿನ ತಿಂಗಳು ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ರೆಡಿಯಾಗಲೇಬೇಕು.
ಮೈಸೂರಿನಲ್ಲಿ ಸೋಮವಾರದಂದು ಮೈಸೂರು ವಿವಿಯ 100ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೋವಿಡ್ ಸಂಕಷ್ಟ ಕಾಲದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುವುದಕ್ಕೂ ಸಿನಿಮಾ ಟಾಕೀಸ್‌ಗಳನ್ನು ತೆರೆಯುವುದಕ್ಕೂ ಪರಸ್ಪರ ಹೋಲಿಸುವುದು ಸರಿಯಲ್ಲ ಎಂದರು.
ಈ ಬಗ್ಗೆ ಅವರು ಹೇಳೀದ್ದು ಇಷ್ಟು;
ಪದವಿ ಕಾಲೇಜುಗಳ ಬಗ್ಗೆ ಹೇಳುವುದಾದರೆ, ತರಗತಿ ನಡೆಯುವ ಕೋಣೆಗಳನ್ನು ನಿರಂತರವಾಗಿ ಸ್ಯಾನಿಟೈಸ್ ಮಾಡುತ್ತಿರಬೇಕು. ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಲೇ ಇರಬೇಕು. ಪ್ರತಿಕ್ಷಣವೂ ಎಚ್ಚರ ತಪ್ಪುವಂತಿಲ್ಲ. ವಿದ್ಯಾರ್ಥಿಗಳು ಮತ್ತು ಬೋಧಕರು, ಮತ್ತಿತರೆ ಸಿಬ್ಬಂದಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಮುಖ್ಯವಾಗಿ ವೈರಸ್ ನಮ್ಮ ನಡುವೆಯೇ ಜೀವಂತವಾಗಿ ಓಡಾಡಿಕೊಂಡಿದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭಿಸುತ್ತೇವೆ. ಈ ವಿಷಯದಲ್ಲಿ ಆತುರ ಸಲ್ಲ ಎಂದರು.
ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿಗಳು ಉತ್ತಮವಾಗಿ ನಡೆಯುತ್ತಿವೆ. ಡಿಜಿಟಲ್ ಕಲಿಕೆ ಮತ್ತು ಬೋಧನೆ ನಿರೀಕ್ಷೆಗೂ ಮೀರಿ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಇದೇ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ತಯಾರಿ ಮಾಡಿಕೊಳ್ಳಬೇಕು ಎಂದ ಅವರು, ಈಗಾಗಲೇ ಯುಜಿಸಿಯಿಂದ ಕಾಲೇಜು ಆರಂಭಕ್ಕೆ ಸೂಕ್ತ ಮಾಹಿತಿ, ಮಾರ್ಗಸೂಚಿ ಬಂದಿದೆ. ಅದರನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾಲೇಜು ಆರಂಭದ ದಿನವನ್ನು ಪ್ರಕಟಿಸಲಾಗುವುದು ಎಂದರು.
ನೂತನ ಶಿಕ್ಷಣ ನೀತಿ ಜಾರಿಗೆ ಎಲ್ಲ ಕ್ರಮ
ಕೇಂದ್ರ ಸರಕಾರ ರೂಪಿಸಿರುವ ನೂತನ ಶಿಕ್ಷಣ ನೀತಿ ಜಾರಿಗೆ ಸರಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ನೀತಿಯ ಅನುಷ್ಟಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಮೊದಲ ವರದಿಯನ್ನು ನೀಡಿದೆ. ಈ ವರ್ಷ ಎಲ್ಲ ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು 2021ನೇ ಸಾಲಿನಿಂದ ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು. ಘಟಿಕೋತ್ಸವ ಕಾರ್ಯಕ್ರದಲ್ಲಿ ದಿಲ್ಲಿಯಿಂದಲೇ ಆಲ್‌ಲೈನ್ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಹೀಗಾಗಿ, ಕಳೆದ ಎಂಟು ತಿಂಗಳಿಂದಲೇ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪನೆ ಮಾಡಿದ ಮೈಸೂರು ವಿಶ್ವವಿದ್ಯಾಲಯವು ಇಂದು ಶತಮಾನೋತ್ಸವ ಘಟಿಕೋತ್ಸವದ ಸಂಭ್ರಮದಲ್ಲಿದೆ. ಇದಕ್ಕೆ ಮೂಲ ಕಾರಣರಾದ ನಾಲ್ವಡಿ ಪ್ರಭುಗಳಿಗೆ ಸರಕಾರ ನಮನಗಳನ್ನು ಸಲ್ಲಿಸುತ್ತದೆ. ಶಿಕ್ಷಣದ ಬಗ್ಗೆ ಅವರಿಗಿದ್ದ ದೂರದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಭುಗಳ ಪ್ರೇರೇಪಣೆಯೊಂದಿಗೆ ಸರಕಾರ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತದೆ ಎಂದು ಡಿಸಿಎಂ ತಿಳಿಸಿದರು.,