ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವಕ್ಕೆ ಸಾಕ್ಷಿಯಾದ ಕ್ರಾಫರ್ಡ್ ಹಾಲ್.
ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ್ದ ಐತಿಹಾಸಿಕ ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವ ಸೋಮವಾರ ವರ್ಚುವಲ್ ವೇದಿಕೆಯಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
29,018 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗಿದೆ. ಮೈಸೂರು ವಿವಿಯಲ್ಲಿ ಪುರುಷರೇ ಮೇಲುಗೈ ಸಾಧಿಸಿದ್ದು, 18,344 (ಶೇ.63.21) ವಿದ್ಯಾರ್ಥಿಗಳು, 10,674 (ಶೇ.36.78) ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು. ಅಗ್ರಿ ಬಿಸನೆಸ್ ವಿಭಾಗದಲ್ಲಿ ಮನೋಜ್ ರಂಜನ್ ಅವರಿಗೆ ಡಿಲಿಟ್ ನೀಡಿ ಗೌರವಿಸಲಾಗಿದೆ. 654 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು. 264 ಮಹಿಳೆ, 390 ಪುರುಷರಿಗೆ ಪಿಎಚ್‍ಡಿ ಪದವಿ ಪ್ರದಾನಿಸಲಾಗಿದೆ. ಒಟ್ಟು 392 ಪದಕ, 198 ಬಹುಮಾನ ನೀಡಲಾಗಿದೆ. 7,971 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 20,393 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗಿದೆ.
ಪದವಿ ಪ್ರದಾನ ಮಾಡಿದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ.
ಇನ್ಪೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಅನುಪಸ್ಥಿತಿಯಲ್ಲಿ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವಕ್ಕೆ ಕ್ರಾಫರ್ಡ್ ಹಾಲ್ ಸಾಕ್ಷಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆನ್ಲೈನ್ ಮೂಲಕವೇ ಘಟಿಕೋತ್ಸವ ಭಾಷಣ ಮಾಡಿದರು. ರಾಜ್ಯಪಾಲ ವಾಜುಬಾಯಿ ವಾಲಾ ಅವರು ಬೆಂಗಳೂರಿನ ರಾಜಭವನದಿಂದ ಲೈವ್ʼನಲ್ಲಿ ಪಾಲ್ಗೊಂಡಿದ್ದರು. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸೇರಿ ಹಲವು ಗಣ್ಯರು ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಿ ಭಾಷಣವೂ ಐತಿಹಾಸಿಕ
PM Narendra Modi(Image courtesy: twitter.com/BJP4India)
ಕೋವಿಡ್ ಹಿನ್ನೆಲೆಯಲ್ಲಿ ದಿಲ್ಲಿಯಿಂದಲೇ ಆಲ್‌ಲೈನ್ ಮೂಲಕವೇ ಘಟಿಕೋತ್ಸವ ಭಾಷಣ ಮಾಡಿದ ಪ್ರಧಾನಿ ಮೋದಿ ಅವರ ಭಾಷಣವೂ ಐತಿಹಾಸಿಕ ಎನ್ನುವಷ್ಟು ವಿಶೇಷವಾಗಿತ್ತು. ಅವರು ತಮ್ಮ ಮಾತಿನುದ್ದಕ್ಕೂ ಶಿಕ್ಷಣದ ಮಹತ್ತ್ವವನ್ನು ಒತ್ತಿ ಹೇಳಿದರಲ್ಲದೆ, ಮೈಸೂರು ವಿವಿಯನ್ನು ಸ್ಥಾಪಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿಶೇಷವಾಗಿ ನೆನಪು ಮಾಡಿಕೊಂಡರು. ಅವರ ದಿವ್ಯ ದೂರದೃಷ್ಟಿಯಿಂದ ಈ ವಿಶ್ವವಿದ್ಯಾಲಯವು ದೇಶದಲ್ಲಿಯೇ ಪ್ರತಿಷ್ಟಿತ ಮತ್ತು ಶ್ರೇಷ್ಟ ವಿವಿಯಾಗಿ ರೂಪುಗೊಂಡಿದೆ. ಇದಕ್ಕೆ ಮಾನಸ ಗಂಗೋತ್ರಿ ಎಂದು ನಾಮಕರಣ ಮಾಡಿದ ಪೂರ್ವ ಕುಲಪತಿ ಕುವೆಂಪು ಅವರ ಕ್ರಮ ಅತ್ಯಂತ ಸೂಕ್ತವಾಗಿದೆ ಎಂದು ನುಡಿದರು.
ಇದಕ್ಕೂ ಮುನ್ನ ತಮ್ಮ ಮಾತಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮಾತು; “ಶಿಕ್ಷಣವೇ ಜೀವನದ ಬೆಳಕು” ಎಂಬ ವಾಕ್ಯವನ್ನು ಉದ್ಘರಿಸಿದರು. ಇದರೊಂದಿಗೆ ಮೈಸೂರು ವಿವಿಯ ಪರಂಪರೆ ಹಾಗೂ ಕನ್ನಡದ ಘನತೆಯನ್ನು ಪ್ರಧಾನಿ ಕೊಂಡಾಡಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಪದವಿಗಳನ್ನು ಸ್ವೀಕರಿಸಿದವರೆಲ್ಲರೂ ಪ್ರಧಾನಿ ಮಾತುಗಳನ್ನು ತದೇಕಚಿತ್ತದಿಂದ ಆಲಿಸಿದರು.
ಮುಖ್ಯವಾಗಿ ಅವರು ಕೆಲವು ವಾಕ್ಯಗಳನ್ನು ಕನ್ನಡದಲ್ಲಿಯೇ ಮಾತನಾಡಿದರು. “ಘಟಿಕೋತ್ಸವದ ಈ ಸ್ಮರಣೀಯ ಸಮಾರಂಭದ ಸಂದರ್ಭದಲ್ಲಿ ನಿಮಗೆಲ್ಲರಿಗೂ ಅಭಿನಂದನೆಗಳು. ಇದು ಪದವಿ ಪ್ರಮಾಣ ಪತ್ರ ಪಡೆಯುತ್ತಿರುವ ಎಲ್ಲರಿಗೂ ಶುಭಾಶಯಗಳು. ಬೋಧಕ ಸಿಬ್ಬಂದಿಗೂ ಶುಭಾಶಯಗಳನ್ನು ಕೋರುತ್ತೇನೆ” ಎಂದು ಹೇಳಿದಾಗ ಕ್ರಾಫರ್ಡ್ ಹಾಲ್‌ಗೆ ಮತ್ತಷ್ಟು ಮೆರುಗು ಬಂದಿತೆನ್ನಬಹುದು.
ಜಾಗತಿಕವಾಗಿ ಸ್ಪರ್ಧಿಸಲು ನಮ್ಮ ದೇಶದ ಯುವಕರನ್ನು ಸಜ್ಜುಗೊಳಿಸಬೇಕಾಗಿದೆ ಎಂದ ಪ್ರಧಾನಿ, ಈ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಜಾಗತಿಕ ಅವಶ್ಯಕತೆಗೆ ತಕ್ಕಂತೆ ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಲಾಗುತ್ತಿದೆ. ಈಗ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದ್ದು, ಆ ಮೂಲಕ ದೇಶದ ಯುವಕರಿಗೆ ಜಾಗತಿಕ ಮಟ್ಟದ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.
ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯ ಕೋರಿದ ಪ್ರಧಾನಿ, ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು; ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ ಎಂದು ಅವರು ಹೇಳಿದರು.