ಮೈಸೂರು: ನಾಡಿನ ಹೆಮ್ಮೆಯ ಬಾಲಪ್ರತಿಭೆ ಚಿರಂಜೀವಿ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ದಸರಾ ಸವಿಯುತ್ತಿದ್ದ ಮೈಸೂರುನ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಮೂರನೇ ದಿನದಂದು ಚಿರಂಜೀವಿ ರಾಹುಲ್ ವೆಲ್ಲಾಳ್ ಅವರು ತಮ್ಮ ಸಿರಿಕಂಠದ ಗಾಯನದಿಂದ ಎಲ್ಲರನ್ನು ಮೋಡಿ ಮಾಡಿದರು.
ಅರಮನೆ ಆವರಣದಲ್ಲಿ ಗಾಯನ
ಕಾರ್ಯಕ್ರಮದಲ್ಲಿ ಮೊದಲಿಗೆ ನವರಾತ್ರಿಯ ವಿದ್ಯಾದೇವತೆಯಾದ ಸರಸ್ವತಿಗೆ ನಮಿಸುತ್ತ ʼಸರಸ್ವತಿ ನಮೋಸ್ಥುತೆʼ ಎಂಬ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಪ್ರಸಿದ್ಧ ಕೃತಿಯಿಂದ ತಮ್ಮ ಗಾಯನವನ್ನು ಪ್ರಾರಂಭಿಸಿದರು.
ನಂತರ ʼಅನ್ನಪೂರ್ಣೆ ವಿಶಾಲಾಕ್ಷೀʼ ಎಂಬ ಸಾಮಾರಾಗದ ಕೃತಿಯನ್ನು ಮನೋಜ್ಞವಾಗಿ ಹಾಡಿದರು. ಸಂಗೀತ ಕಛೇರಿಯ ಪ್ರಮುಖ ರಾಗವಾಗಿ ರಾಗ ಬಿಳಹರಿಯನ್ನು ಪ್ರಸ್ತುತಪಡಿಸಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ʼಶ್ರೀ ಚಾಮುಂಡೇಶ್ವರಿ ಪಾಲಯಮಾಂʼ ಎಂಬ ಜನಪ್ರಿಯ ಕೃತಿಯನ್ನು ಪ್ರಸ್ತುತಪಡಿಸಿದರು. ನಂತರ ಕೆಲವು ಪ್ರಸಿದ್ದ ಜನಪ್ರಿಯ ದಾಸರ ಕೀರ್ತನೆಗಳನ್ನು ಇಂಪಾಡಿ ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಅವರೊಡನೆ ಸಹಕಲಾವಿದರಾಗಿ ಪೀಟಿಲು ವಿದ್ವಾಂಸರಾದ ವಿದ್ವಾನ್ ತುಮಕೂರು ಯಶಸ್ವಿ, ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ.ಪ್ರಹ್ಲಾದರಾವ್ ಹಾಗೂ ಮೊರ್ಸಿಂಗ್‌ನಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಅವರಿದ್ದರು.
ರಾಹುಲ್ ಹಾಡಿದಷ್ಟು ಹೊತ್ತು ಇಡೀ ಅರಮನೆಯ ಅವರಣ ಸಪ್ತಸ್ವರಗಳಿಂದ ಮೈಮೆರಯಿತಲ್ಲದೆ, ಸಂಗೀತ ಪ್ರಿಯರೆಲ್ಲರೂ ಆ ಗಾನಘರಿಯಲ್ಲಿ ತೊಯ್ದು ಹೋದರು.