ಬೆಂಗಳೂರು: 2018ರ ಚುನಾವಣೆಯಲ್ಲಿ ಮತದಾರರ ಚೀಟಿ ಅಕ್ರಮ ಸಂಗ್ರಹಣೆ ಹಿನ್ನೆಲೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಆರೋಪ ಮಾಡಿ ಕಾನೂನು ಹೋರಾಟ ನಡೆಸಿದ್ದ ಬಿಜೆಪಿ, ಇದೀಗ ಮುನಿರತ್ನ ಅವರಿಗಾಗಿ ಸೇಮ್ ಟು ಸೇಮ್ ಅದೇ ಆರೋಪವನ್ನು ಕಾಂಗ್ರೆಸ್ ವಿರುದ್ಧ ಮಾಡಿದೆ.
ಇದರೊಂದಿಗೆ ಶಿರಾಗಿಂತ ರಾಜರಾಜೇಶ್ವರಿ ನಗರದ ಚುನಾವಣೆಯೇ ವಿಪರೀತ ಎನಿಸುವಷ್ಟು ರಂಗೇರಿದ್ದು, ಅಖಾಡದಲ್ಲಿ ತಿಕ್ಕಾಟ ಇದೀಗ ತಾರಕಕ್ಕೇರುತ್ತಿದೆ. ಬೆಂಗಳೂರಿನಲ್ಲಿ ಮಂಗಳವಾರ ಬಿಜೆಪಿ ನಗರ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ; ರಾಜರಾಜೇಶ್ವರಿ ನಗರದ ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಖಚಿತ ಸುಳಿವು ಸಿಕ್ಕಿರುವ ಬೆನ್ನಲ್ಲೇ ಇಡೀ ಚುನಾವಣೆಯ ಪ್ರಕ್ರಿಯೆಯನ್ನೇ ಹಳಿತಪ್ಪಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಹೂಡಿದೆ ಎಂದು ನೇರ ಆರೋಪ ಮಾಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಕಾನೂನುಬಾಹಿರವಾಗಿ ಮತದಾರರ ಗುರುತಿನ ಚೀಟಿಗಳನ್ನು, ವೋಟರ್ ಐಡಿಗಳ ಸಂಖ್ಯೆಗಳನ್ನೂ ಸಂಗ್ರಹ ಮಾಡುತ್ತಿದ್ದಾರೆ. ಈ ಆರೋಪವನ್ನು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ತಲೆಗೆ ಕಟ್ಟುವ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇಷ್ಟೆಲ್ಲ ಅಕ್ರಮಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಕಣ್ಸನ್ನೆಯಿಂದಲೇ ನಡೆಯುತ್ತಿವೆ.
ಡಿಸಿಎಂ ಮಾಡಿದ ಆರೋಪಗಳೇನು?
ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಇಂಥ ಹೀನಕೆಲಸ ಮಾಡುತ್ತಿರುವ ನಾಯಕರಿಗೆ ತಕ್ಕಶಾಸ್ತಿ ಕಾದಿದೆ. ತಪ್ಪು ಸಾಬೀತಾದರೆ ಒಂದು ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ಚೀಟಿ ಸಂಗ್ರಹ ಮಾಡುವುದು ದೊಡ್ಡ ಅಪರಾಧ. ಅದರ ಜತೆಗೆ, ಚುನಾವಣೆಯನ್ನೇ ನಡೆಸದೇ ಸ್ಥಗಿತಗೊಳಿಸಬೇಕು ಎನ್ನುವ ದುರುದ್ದೇಶವೂ ಈ ಪಿತೂರಿ ಹಿಂದೆ ಅಡಗಿದೆ. ಮತದಾನ ಮಾಡಲು ಒಟ್ಟು ಹದಿನಾಲ್ಕು ಗುರುತಿನ ಚೀಟಿಗಳನ್ನು ಬಳಸಬಹುದು. ಇದನ್ನೇ ತಮಗೆ ಅನುಕೂಲವಾಗಿ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಮತದಾರ ಚೀಟಿಗಳನ್ನು ಮಾತ್ರ ಸಂಗ್ರಹ ಮಾಡಿ ಮುನಿರತ್ನ ಅವರ ಮನೆಯಲ್ಲಿಟ್ಟು ಕಣದಿಂದ ಅವರನ್ನು ತಪ್ಪಿಸುವುದು ಇಲ್ಲವೇ; ಚುನಾವಣಾ ರಾಜಕೀಯದಿಂದಲೇ ಅವರನ್ನು ದೂರ ಮಾಡುವಂಥ ಷಡ್ಯಂತ್ರವನ್ನು ಮಾಡುತ್ತಾ ಹೊಸ ನಾಟಕಕ್ಕೆ ಅಣಿಯಾಗುತ್ತಿದ್ದಾರೆ.
ಇಬ್ಬರಿಗೂ ಭವಿಷ್ಯದ ಆತಂಕ
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರಿಗೆ ಭವಿಷ್ಯದ ಆತಂಕ ಶುರುವಾಗಿದೆ. ಶಿರಾದಲ್ಲಿ ಸೋಲುತ್ತೇವೆ, ರಾಜರಾಜೇಶ್ವರಿ ನಗರದಲ್ಲೂ ಸೋಲುತ್ತೇವೆ ಎಂಬುದು ಅವರಿಗೆ ಖಾತರಿಯಾಗಿದೆ. ಇನ್ನು, ಈ ಕ್ಷೇತ್ರಕ್ಕೆ ಕಾಂಗ್ರೆಸ್ ಏನೇನೂ ಮಾಡಿಲ್ಲ. ಸುರೇಶ್ ಅವರಂತೂ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಕೇವಲ 60 ಲಕ್ಷ ರೂ.ಗಳಷ್ಟು ಸಣ್ಣ ಪ್ರಮಾಣದ ಅನುದಾನ ಕೊಟ್ಟಿರುವುದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಅವರಿಗೆ ಸೋಲಿನ ಭಯ ಉಂಟಾಗಿದೆ. ಅಣ್ಣ ಕೆಪಿಸಿಸಿ ಅಧ್ಯಕ್ಷರು, ತಮ್ಮ ಲೋಕಸಭೆ ಸದಸ್ಯರು, ಸೋತರೆ ಎಲ್ಲ ಕಡೆ ಮಾನ ಮರ್ಯಾದೆಗೆ ಧಕ್ಕೆ ಉಂಟಾಗುತ್ತದೆ ಎಂಬ ಅಂಜಿಕೆಯಿಂದ ಇಂಥ ಷಡ್ಯಂತ್ರಕ್ಕೆ ಸಹೋದರರಿಬ್ಬರೂ ಕುಮ್ಮಕ್ಕು ನೀಡುತ್ತಿದ್ದಾರೆ.
ಸ್ವತಃ ಡಿಕೆಶಿ ಅವರಿಗೂ ಆತಂಕ ಕಾಡುತ್ತಿದೆ. ನನ್ನ ತಮ್ಮ ಸುರೇಶ್ ಈ ಕ್ಷೇತ್ರಕ್ಕೆ ಏನೂ ಕೆಲಸ ಮಾಡಿಲ್ಲ. ಇಷ್ಟು ದೊಡ್ಡ ವಿಧಾನಸಭಾ ಕ್ಷೇತ್ರಕ್ಕೆ ಕೇವಲ 60 ಲಕ್ಷ ಕೊಟ್ಟು ಕೈತೊಳೆದುಕೊಂಡಿರುವ ಸಹೋದರನ ನಿರ್ಲಕ್ಷ್ಯತೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲಬಹುದು ಎಂಬುದು ಅವರಿಗೆ ಗೊತ್ತಾಗಿದೆ. ಆದರೆ, ಬಿಜೆಪಿ ಸರಕಾರ ಬಂದ ಮೇಲೆ ಈ ಕ್ಷೇತ್ರವೊಂದಕ್ಕೆ 900 ಕೋಟಿ ರೂ. ಅನುದಾನ ನೀಡಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 60 ಲಕ್ಷ ಎಲ್ಲಿ? 900 ಕೋಟಿ ಎಲ್ಲಿ?
ಕಾಂಗ್ರೆಸ್ ಹತಾಶ ಸ್ಥಿತಿಯನ್ನು ಮುಟ್ಟಿದೆ. ಆ ಪಕ್ಷದ ನಾಯಕರು, ಕಾರ್ಯಕರ್ತರು ಗುಂಪುಗುಂಪಾಗಿ ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಡಿಕೆ ಬ್ರದರ್ಸ್ʼಗೆ ಆತಂಕ ಶುರುವಾಗಿದೆ. ಯಾವ ರೀತಿಯಲ್ಲೂ ಮುನಿರತ್ನ ಅವರನ್ನು ಸೋಲಿಸಲಾಗದು ಎಂದು ಗೊತ್ತಾದ ಮೇಲೆ ಮತದಾರರ ಚೀಟಿಗಳನ್ನು ಸಂಗ್ರಹ ಮಾಡುವ ಕೃತ್ಯಕ್ಕೆ ಕೈಹಾಕಿದ್ದಾರೆ. ಈಗಾಗಲೇ ಅನೇಕ ಪುರಾವೆಗಳು ಹೊರಬಂದಿವೆ. ಕೆಲ ವಿಡಿಯೋಗಳು ಆಚೆ ಬಂದಿವೆ ಎಂದ ಅವರು, ಹಿಂದಿನ ಸಮ್ಮಿಶ್ರ ಸರಕಾರವನ್ನು ಯಾರು ಪತನ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಮೀರ್ ಸಾದಿಕ್ ಯಾರು ಎಂಬುದು ಗೊತ್ತಿದೆ. ಸರಕಾರವನ್ನೇ ಬೀಳಿಸಿದವರು ಈಗ ಮುನಿರತ್ನ ಮೇಲೆ ಬಿದ್ದಿದ್ದಾರೆ. ಈ ಷಡ್ಯಂತ್ರವನ್ನು ಎದುರಿಸುವುದು ಬಿಜೆಪಿಗೆ ಗೊತ್ತಿದೆ.
**
ಇದುವರೆಗೂ ಒಂದು ಸೀಮಿತ ಚೌಕಟ್ಟನಲ್ಲಿಯೇ ನಡೆಯುತ್ತಿದ್ದ ಪ್ರಚಾರಕ್ಕೆ ಇದೀಗ ಮತ್ತೊಂದು ಸಂಘರ್ಷಾತ್ಮಕ ಆಯಾಮ ಬಂದಿದೆ. ಮಂಗಳವಾರ ಶಿರಾದಲ್ಲಿ ಪ್ರಚಾರದಲ್ಲಿದ್ದ ಡಿ.ಕೆ.ಶಿವಕುಮಾರ್ ಈ ಆರೋಪದ ಬಗ್ಗೆ ಕಾಮೆಂಟ್ ಮಾಡಿರಲಿಲ್ಲ. ಬುಧವಾರವಂತೂ ಡಿಸಿಎಂ ಆರೋಪಕ್ಕೆ ಕೌಂಟರ್ ಕೊಡುವುದಂತೂ ಖಚಿತ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
2018ರಲ್ಲಿ ಏನಾಗಿತ್ತು?
ಚುನಾವಣೆ ಹೊತ್ತಿನಲ್ಲಿಯೇ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿಗಳ ಜತೆ ಒಂದು ಟ್ರಕ್‌ನಲ್ಲಿ 95 ಲಕ್ಷ ರೂ. ನಗದು ಪತ್ತೆಯಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 1,08,064 ಮತಗಳನ್ನು ಹಾಗೂ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜೇಗೌಡ 82,572 ಮತಗಳನ್ನು ಪಡೆದಿದ್ದರು. ಇಬ್ಬರ ನಡುವೆ 25,492 ಮತಗಳ ಅಂತರವಿತ್ತು. ಹೀಗಿದ್ದರೂ ಬಿಜೆಪಿ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಚುನಾವಣಾಧಿಕಾರಿಯಿಂದ ಆಯ್ಕೆ ಪತ್ರವನ್ನು ಪಡೆದಿದ್ದ ಮುನಿರತ್ನ ವಿಧಾನಸಭೆ ಸದಸ್ಯರಾಗಿಯೂ ಪ್ರಮಾಣ ಸ್ವೀಕರಿಸಿದ್ದರು. ಆದರೆ, ಕಳೆದ ಜೂನ್-ಜುಲೈನಲ್ಲಿ ನಡೆದ ಆಪರೇಷನ್ ಕಮಲದ ಮೂಲಕ ಅವರು ಬಿಜೆಪಿಗೆ ಹಾರಿದ್ದರು.
ಕೆಳಗಿನ ಸುದ್ದಿವಿಶ್ಲೇಷಣೆ ಓದಲು ಈ ಲಿಂಕ್ ಕ್ಲಿಕ್ ಮಾಡಿ..