lead photo courtesy: Wikipedia
ಕಳೆದ ಸೆಪ್ಟೆಂಬರ್ 6ರಂದು ಬೃಂದಾವನಸ್ಥರಾದ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಮತ್ತೆಮತ್ತೆ ನೆನಪಾಗುತ್ತಿದ್ದಾರೆ. ಅದು ಸರ್ವೋಚ್ಛ ನ್ಯಾಯಾಲಯ ಇರಲಿ, ಹೈಕೋರ್ಟ್ ಇರಲಿ; ದೇಶದ ಯಾವುದೇ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ ಶ್ರೀಗಳ ನೆನಪು ತಪ್ಪದೇ ಅಗುತ್ತದೆ. ಅವರ ಅಗಲಿಕೆಯ ನಂತರವೂ ಅನೇಕ ಮಹತ್ತ್ವದ ತೀರ್ಪುಗಳು ಹೊರಬಂದವು. ತನ್ನಿಮಿತ್ತ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮತ್ತೊಮ್ಮೆ ಸ್ವಾಮೀಜಿ ಅವರನ್ನು ಸ್ಮರಿಸಿದ್ದಾರೆ.
***
courtesy: chayakuteer
ಗೋಶಾಲೆಗಳನ್ನು ನಡೆಸುವ ಸಂತರ ಹೆಸರನ್ನು ಕೇಳಿದ್ದೇನೆ. ಪೂಜೆ, ಅನುಷ್ಠಾನ, ಧ್ಯಾನ, ಪ್ರವಚನಗಳಲ್ಲೇ ಸಾರ್ಥಕ್ಯ ಕಂಡುಕೊಳ್ಳುವ ಸ್ವಾಮೀಜಿಗಳನ್ನೂ ಕಂಡಿದ್ದೇವೆ. ಕಾವಿಧಾರಣೆ ಮಾಡಿಯೂ ರಾಜಕಾರಣಿಗಳನ್ನು ಓಲೈಸುವ, ಅವರ ಕಳ್ಳ ವ್ಯವಹಾರಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಮಠಾಧಿಪತಿಗಳನ್ನೂ ನೋಡಿದ್ದೇವೆ. ಇನ್ನು ಕೆಲವರು ನೆಪಕ್ಕೆ ಕಾವಿಯುಟ್ಟು ಮದಿರೆ, ಮಾನಿನಿಯರ ದಾಸರಾಗಿ ಮಾಡಬಾರದುದನ್ನೆಲ್ಲ ಮಾಡುವ ಸನ್ಯಾಸಿಗಳ ಬಗ್ಗೆಯೂ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.
ಆದರೆ; ಸ್ವಾಮೀಜಿಯೊಬ್ಬರು ಪ್ರಜಾತಂತ್ರ ವ್ಯವಸ್ಥೆಗೆ ಭಗವದ್ಗೀತೆಯಂತಿರುವ ನಮ್ಮ ಸಂವಿಧಾನದ ಸ್ವರೂಪ ಕೆಡದಂತೆ ಅದರ ತಾಯಿಬೇರಿಗೆ ನೀರೆರೆದು ಪೋಷಿಸಿ ಮಹಾನ್ ಕಾರ್ಯ ಮಾಡಿದ್ದರು. ಅವರೇ ಈಚೆಗೆ ಬೃಂದಾವನಸ್ಥರಾದ ಕಾಸರಗೋಡು ಜಿಲ್ಲೆಯ ಎಡನೀರು ಮಠದ ಶ್ರೀಕೇಶವಾನಂದ ಭಾರತಿ. ಪ್ರಧಾನಿ ಮೋದಿಯವರೂ ಈ ಸ್ವಾಮೀಜಿಗೆ ಸಂವಿಧಾನ ರಕ್ಷಣೆಯ ಅವರ ಘನಕಾರ್ಯಕ್ಕಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಪ್ರಜಾತಂತ್ರ ವ್ಯವಸ್ಥೆಗೆ ಮಾರ್ಗದರ್ಶನ ನೀಡುವ ಸರ್ವಶ್ರೇಷ್ಠ ಗ್ರಂಥವೆಂದರೆ ಭಾರತದ ಸಂವಿಧಾನ. ಇಂತಹ ಸಂವಿಧಾನಕ್ಕೆ ಇದುವರೆಗೆ 104 ಬಾರಿ ತಿದ್ದುಪಡಿ ತರಲಾಗಿದೆ. ಇಂದಿರಾ ಗಾಂಧಿ ಕೇಂದ್ರದಲ್ಲಿ ಪ್ರಧಾನಿಯಾದ ಬಳಿಕವಂತೂ ಸುಮಾರು 41 ಬಾರಿ ತಮಗೆ ಬೇಕಾದಂತೆ ತಿದ್ದುಪಡಿಗಳನ್ನು ತಂದು, ಸಂವಿಧಾನದ ಮೂಲ ಸ್ವರೂಪವನ್ನೇ ಹಾಳುಗೆಡವಲು ಯತ್ನಿಸಿದ್ದರು. ತಮಗೆ ಬೇಕಾದಂತೆ, ತಮ್ಮಿಚ್ಛೆಯಂತೆ ಸಂವಿಧಾನ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗಳಿರಬೇಕೆಂದು ಎಲ್ಲವನ್ನೂ ಬದಲಿಸಲು ಮುಂದಾದರು. ಅವರ ಭಂಡಧೈರ್ಯ ಎಲ್ಲಿಯವರೆಗಿತ್ತೆಂದರೆ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗಿದೆ ಎಂದು ವಾದಿಸಿದ್ದರು. ಅಷ್ಟೇ ಅಲ್ಲ, ವ್ಯಕ್ತಿಯ ಆಸ್ತಿಯ ಹಕ್ಕನ್ನೂ ಕಿತ್ತುಕೊಳ್ಳಲು 1972ರಲ್ಲಿ ಆಸ್ತಿ ಹಕ್ಕಿಗೆ ತಿದ್ದುಪಡಿ ತರುವ 25ನೇ ತಿದ್ದುಪಡಿಯನ್ನೂ ಮಂಡಿಸಿದ್ದರು. ಅದೇ ವೇಳೆ 14 ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಅದರ ಮೂಲ ಮಾಲೀಕರಿಗೆ ಸೂಕ್ತ ಪರಿಹಾರಧನವನ್ನು ಕೊಡುವುದನ್ನೇ ಮರೆತುಬಿಟ್ಟರು! ಆದರೆ, ಮಾಲೀಕರು ಬಿಡಬೇಕಲ್ಲ. ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ಮಾಲೀಕರ ಪರವಾಗಿ ತೀರ್ಪು ನೀಡಿತು. ಇದನ್ನು ಸಹಿಸದ ಇಂದಿರಾ ಗಾಂಧಿ ಸಂವಿಧಾನಕ್ಕೆ ಇನ್ನೊಂದು ತಿದ್ದುಪಡಿ ತಂದರು. ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿದ್ದ ರಾಜಮನೆತನಗಳಿಗೆ ರಾಯಧನ ರದ್ದುಗೊಳಿಸಿದಾಗ, ಕೋರ್ಟ್ ರಾಜಕುಟುಂಬಗಳ ಪರವಾದ ತೀರ್ಪು ನೀಡಿತ್ತು. ಕೋಪಗೊಂಡ ಇಂದಿರಾ ಗಾಂಧಿ ಅದನ್ನು ಅನೂರ್ಜಿತಗೊಳಿಸಲು ಮತ್ತೆ ಸಂವಿಧಾನಕ್ಕೆ 26ನೇ ತಿದ್ದುಪಡಿ ತಂದಿದ್ದರು.
ಇಂದಿರಾ ಗಾಂಧಿ / courtesy: wikipedia
ಹೀಗೆ; ಇಂದಿರಾ ಗಾಂಧಿ ಎಂಬ ಸರ್ವಾಧಿಕಾರಿ ತಮಗೆ ಬೇಕಾದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು, ಸಂವಿಧಾನವೆಂದರೆ ತನ್ನ ಖಾಸಗಿ ಆಸ್ತಿ ಎಂದು ಪರಿಭಾವಿಸಿದ್ದ ಸಂದರ್ಭದಲ್ಲೇ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಸಂವಿಧಾನದ ಮೂಲ ಸ್ವರೂಪವನ್ನು ಯಥಾವತ್ ಉಳಿಸಲು ಹೋರಾಟ ಆರಂಭಿಸಿದರು. 1972ರಲ್ಲಿ ಕೇರಳ ಸರಕಾರ ಎರಡು ಭೂಸುಧಾರಣಾ ಕಾನೂನುಗಳನ್ನು ರೂಪಿಸಿತು. ಅದರಂತೆ ಕೇರಳದಲ್ಲಿದ್ದ ಕಾಸರಗೋಡು ಜಿಲ್ಲೆಯ ಎಡನೀರು ಮಠಕ್ಕೆ ಸೇರಿದ ಜಮೀನಿನ ನಿರ್ವಹಣೆಯನ್ನು ಮಠದಿಂದ ಕಸಿದುಕೊಳ್ಳಲು ಸರಕಾರ ಮುಂದಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸ್ವಾಮೀಜಿ ಕೋರ್ಟಿನ ಮೆಟ್ಟಿಲೇರಿದರು. ಇದರ ಜೊತೆಗೆ ಇನ್ನೂ ಮೂರು ಸಂವಿಧಾನ ತಿದ್ದುಪಡಿಗಳ ಬಗ್ಗೆ ಸ್ವಾಮೀಜಿ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದರು. ಅರ್ಜಿಯಲ್ಲಿ ಎತ್ತಲಾಗಿದ್ದ ಮೂಲಭೂತ ಪ್ರಶ್ನೆಗಳೆಂದರೆ: ಸಂಸತ್ತು ಸಂವಿಧಾನವನ್ನು ತಿದ್ದುವ ಪರಮಾಧಿಕಾರವನ್ನು ಎಷ್ಟರ ಮಟ್ಟಿಗೆ ಹೊಂದಿದೆ? ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ತಿದ್ದುಪಡಿಯನ್ನು ಸಂಸತ್ತು ಮಾಡಬಹುದೆ? ಆಸ್ತಿ ಹೊಂದುವ ಹಕ್ಕು ಕೂಡ ಭಾರತೀಯ ಪ್ರಜೆಗಿರುವ ಮೂಲಭೂತ ಹಕ್ಕಲ್ಲವೆ?
ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಅವರು ದೇಶದ ದೃಷ್ಟಿಯಲ್ಲಿ ಅಂತಹ ಪ್ರಾಮುಖ್ಯತೆ ಪಡೆದವರೇನಾಗಿರಲಿಲ್ಲ. ಆದರೆ, ಈ ಪ್ರಕರಣದಲ್ಲಿ ಸ್ವಾಮೀಜಿ ಪ್ರಶ್ನೆಗಳು ಮಾತ್ರ ಬಹಳ ಮಹತ್ವಪೂರ್ಣದ್ದೇ ಆಗಿದ್ದವು. ಹಾಗಾಗಿ ಈ ಪ್ರಕರಣದ ಇತ್ಯರ್ಥಕ್ಕೆ 13 ನ್ಯಾಯಾಧೀಶರನ್ನೊಳಗೊಂಡ ಪೀಠ ರಚಿಸಿದ್ದು ಬಹುಶಃ ಇದೇ ಮೊದಲಿರಬಹುದು. ಇದೇ ಕೊನೆಯದೂ ಆಗಿರಬಹುದು! 68 ದಿನಗಳ ಸುದೀರ್ಘ ವಿಚಾರಣೆ ನಡೆದ ದಾಖಲೆಯ ಪ್ರಕರಣವೂ ಇದೇ. ಮುಖ್ಯ ನ್ಯಾಯಮೂರ್ತಿ ಎಸ್.ಎಂ.ಸಕ್ರಿ ನೇತೃತ್ವದ 13 ನ್ಯಾಯಾಧೀಶರ ಪೀಠ ನೀಡಿದ ತೀರ್ಪು ಮಾತ್ರ ಬಹಳ ಮಹತ್ವದ್ದಾಗಿತ್ತು. ಕೇಶವಾನಂದ ಭಾರತಿಗಳ ಪರವಾಗಿ 7:6ರ ತೀರ್ಪು ಬಂದಿತ್ತು.
ನಾನೀ ಪಾಲ್ಖೀವಾಲಾ, ಫಾಲಿ ನಾರಿಮನ್‌ರಂಥ ಪ್ರಸಿದ್ಧ ನ್ಯಾಯವಾದಿಗಳೆಲ್ಲ ಈ ಪ್ರಕರಣದಲ್ಲಿ ಕೇಶವಾನಂದ ಭಾರತಿಗಳ ಪರ ವಾದಿಸಿದ್ದರು. ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ಸರಕಾರ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡುವಂತಿಲ್ಲ ಎಂದು ಪೀಠದ ಮುಂದೆ ಇವರೆಲ್ಲ ಪ್ರಬಲ ವಾದ ಮಂಡಿಸಿದ್ದರು. ಸಂವಿಧಾನಕ್ಕೆ ತಿದ್ದುಪಡಿ ತರುವ ಹಕ್ಕನ್ನು ಸಂವಿಧಾನವೇ ಕೇಂದ್ರ ಸರಕಾರಕ್ಕೆ 380ನೇ ವಿಧಿಯಲ್ಲಿ ನೀಡಿದ್ದರೂ ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವಂತಿಲ್ಲ ಎಂಬುದು ತೀರ್ಪಿನ ಸಾರಾಂಶ.
ಈ ತೀರ್ಪಿನಿಂದಾಗಿ ಇಂದಿರಾ ಗಾಂಧಿ ಅವರ ಸಿಟ್ಟು ನೆತ್ತಿಗೇರಿತು. ನ್ಯಾಯಾಂಗ ನೀಡಿದ ಈ ತೀರ್ಪಿಗೆ ಕ್ಯಾರೇ ಎನ್ನದೆ, ತೀರ್ಪು ಪ್ರಕಟವಾದ ದಿನವೇ ಪೀಠದಲ್ಲಿದ್ದ ಹಿರಿಯ ನ್ಯಾಯಾಧೀಶರನ್ನು ಕಡೆಗಣಿಸಿ, ಸರಕಾರದ ಪರ ನಿಲುವು ಮಂಡಿಸಿದ್ದ ಎ.ಎನ್.ರೇ ಎಂಬ ಕಿರಿಯ ನ್ಯಾಯಾಧೀಶರನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ)ಯಾಗಿ ನೇಮಿಸಿದರು. ಅಷ್ಟೇ ಅಲ್ಲ, ನೂತನ ಸಿಜೆಐ, ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಮರುಪರಿಶೀಲನೆಗೆ 13 ನ್ಯಾಯಾಧೀಶರ ಇನ್ನೊಂದು ಪೀಠ ರಚಿಸಿದರು. ಆದರೆ ಪ್ರಕರಣದ ತೀರ್ಪಿನ ಮರುಪರಿಶೀಲನೆಗೆ ಯಾರೂ ಅರ್ಜಿ ಸಲ್ಲಿಸಿರಲೇ ಇಲ್ಲ! ಅರ್ಜಿಯನ್ನೇ ಸಲ್ಲಿಸದೆ ಪ್ರಕರಣದ ಮರುಪರಿಶೀಲನೆ ಅದೆಂತು ಸಾಧ್ಯ? ಹಾಗಾಗಿ ಟೀಕೆಗೆ ಗುರಿಯಾದ ಎ.ಎನ್.ರೇ ಎರಡೇ ದಿನಗಳಲ್ಲಿ ತಾವು ರಚಿಸಿದ್ದ ಪೀಠವನ್ನು ವಿಸರ್ಜಿಸಬೇಕಾಯಿತು!
ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿರದ ಇಂದಿರಾ ಗಾಂಧಿ ಮಾತ್ರ ಸುಪ್ರೀಂಕೋರ್ಟ್ ನ ಈ ತೀರ್ಪಿನ ಬಳಿಕವೂ ಎಗ್ಗಿಲ್ಲದೆ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರುವ ಮೂಲಕ ಹಲವಾರು ತಿದ್ದುಪಡಿಗಳನ್ನು ತಂದು ತಮ್ಮ ಅಧಿಕಾರದ ಕುರ್ಚಿಯನ್ನು ಸಂವಿಧಾನಕ್ಕಿಂತಲೂ ಎತ್ತರಕ್ಕೊಯ್ಯಲು ಯತ್ನಿಸಿದರು. ಆದರೆ ಅವರೇನೇ ಷಡ್ಯಂತ್ರ ನಡೆಸಿದರೂ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಮುಂದೆ ಆ ತಿದ್ದುಪಡಿಗಳು ಊರ್ಜಿತವಾಗಿ ಉಳಿಯಲಿಲ್ಲ.
ಕೇಶವಾನಂದ ಭಾರತಿ ಸ್ವಾಮೀಜಿಯವರು ಎಡನೀರು ಮಠದ ಜಮೀನು ವಿವಾದ ಪ್ರಕರಣದಲ್ಲಿ ಸಂವಿಧಾನ ಕುರಿತ ಮೂಲಭೂತ ಪ್ರಶ್ನೆಗಳನ್ನೇನಾದರೂ ಎತ್ತದಿದ್ದಲ್ಲಿ, ಅವರು ಕೋರ್ಟ್ ಮೆಟ್ಟಿಲೇರದಿದ್ದಲ್ಲಿ ಇಂದು ಸಂವಿಧಾನವು ತಿದ್ದುಪಡಿಗಳ ಮೇಲೆ ತಿದ್ದುಪಡಿಗಳನ್ನು ಕಂಡು ಅದರ ಮೂಲಸ್ವರೂಪ ಗುರುತು ಸಿಗದಷ್ಟು ವಿರೂಪಗೊಂಡಿರುತ್ತಿತ್ತು. ನಮ್ಮ ಪ್ರಜಾಪ್ರಭುತ್ವ ಗಣರಾಜ್ಯದ ಮೂಲ ಸ್ವರೂಪವೇ ಅಳಿಸಿಹೋಗಿ ಅಧ್ಯಕ್ಷೀಯ ಮಾದರಿ ಆಡಳಿತ ವ್ಯವಸ್ಥೆ ಬರುತ್ತಿತ್ತೇನೋ! ಸದ್ಯ ಹಾಗಾಗಲಿಲ್ಲ. ಸಂವಿಧಾನದ ಮೂಲಸ್ವರೂಪ ಕೆಡದಂತೆ, ಅದರ ತಾಯಿಬೇರಿಗೆ ನೀರೆರೆದು ಪೋಷಿಸಿದ ಕೇಶವಾನಂದ ಭಾರತಿಯವರಿಗೆ ಶತಕೋಟಿ ನಮನಗಳನ್ನು ಸಲ್ಲಿಸಿದರೂ ಅದೂ ಕಡಿಮೆಯೇ.
ಕೇಶವಾನಂದ ಭಾರತಿ ಪ್ರಕರಣದ ನಂತರ ನೂರಾರು ಪ್ರಕರಣಗಳಲ್ಲಿ ಹೊಸ ತೀರ್ಪುಗಳನ್ನು ನೀಡಿದ್ದು ಇದೇ ತೀರ್ಪಿನ ಆಧಾರದಲ್ಲೆ ಎಂಬುದು ಗಮನಾರ್ಹ. ನ್ಯಾಯಾಲಯದ ಅಸಂಖ್ಯಾತ ವಾದ-ವಿವಾದಗಳಲ್ಲಿ ಈ ತೀರ್ಪನ್ನು ಉಲ್ಲೇಖಿಸಲಾಗಿದೆ. ಅನೇಕ ಸಂವಿಧಾನ ತಿದ್ದುಪಡಿಗಳನ್ನು ಈ ತೀರ್ಪಿನ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಸಂವಿಧಾನಕ್ಕೆ ತಮಗೆ ಬೇಕಾದಂತೆ ಯಾವುದೇ ಸರ್ಕಾರ ತಿದ್ದುಪಡಿ ತರಲು ಹವಣಿಸಿದರೂ ಆ ಸರ್ಕಾರಕ್ಕೆ ಮೊದಲು ತಡೆಗೋಡೆಯಂತೆ ಅಡ್ಡಿಯಾಗಿ ನಿಲ್ಲುವುದು ಇದೇ ಕೇಶವಾನಂದ ಭಾರತಿ ಪ್ರಕರಣದ ತೀರ್ಪು. ಹಾಗಾಗಿ ಈ ತೀರ್ಪಿಗೆ ಎಲ್ಲಿಲ್ಲದ ಪ್ರಾಧಾನ್ಯತೆ. ಕಳೆದ ನಾಲ್ಕು ದಶಕಗಳಿಂದಲೂ ಈ ತೀರ್ಪು ಸಂವಿಧಾನದ ಮೂಲ ತಳಹದಿಯನ್ನು ಎತ್ತಿ ಹಿಡಿಯುತ್ತಲೇ ಕಾವಲುಭಟನಾಗಿ ಕಾಯುತ್ತಿದೆ.
ಹಾಗಾಗಿ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿಯವರನ್ನು ನಮ್ಮ ಸಂವಿಧಾನದ ಸಂರಕ್ಷಕ ಸಂತ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಈಚೆಗೆ ಬೃಂದಾವನಸ್ಥರಾದ ಆ ಸಂತನಿಗೊಂದು ನಮ್ಮೆಲ್ಲರ ಗೌರವಪೂರ್ಣ ನಮನವಿರಲಿ.
**
*ಈ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.