ಕೋಲಾರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ.
ಚಿಂತಾಮಣಿ/ಕೋಲಾರ: ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಆರು ದಿನ ಮಾತ್ರ ಉಳಿದಿರುವಂತೆ ಆಗ್ನೇಯ ಪದವೀಧರರ ಕ್ಷೇತ್ರವನ್ನೊಳಗೊಂಡ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬಿಜೆಪಿ ಅತಿರಥಮಹಾರಥರು ಗುರುವಾರ ಬಿರುಸಿನ ಪ್ರಚಾರ ನಡೆಸಿದರು.
ಚಿಂತಾಮಣಿ ಮತ್ತು ಕೋಲಾರದಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಅಬಕಾರಿ ಸಚಿವ ನಾಗೇಶ್, ಕೋಲಾರ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎನ್.ನಾರಾಯಣ ಸ್ವಾಮಿ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮುಂತಾದವರು ಪಾಲ್ಗೊಂಡು ಬಿಜೆಪಿ ಹುರಿಯಾಳು ಚಿದಾನಂದಗೌಡ ಪರವಾಗಿ ಮತ ಯಾಚನೆ ಮಾಡಿದರು.
ಒಂದೇ ದಿನ ಬಿಜೆಪಿ ನಾಯಕರ ದಂಡು ಅವಳಿ ಜಿಲ್ಲೆಗಳಿಗೆ ದಾಂಗುಡಿ ಇಟ್ಟಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ತಳಮಳ ಉಂಟು ಮಾಡಿರುವುದರಲ್ಲಿ ಸಂಶಯವೇ ಇಲ್ಲವಾದರೂ, ಆಡಳಿತ ಪಕ್ಷದ ನಾಯಕರು ಇಡುತ್ತಿರುವ ನಿಗೂಢ ಹೆಜ್ಜೆಗಳು ಪರಿಷತ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯಷ್ಟೇ ರಂಗೇರಿಸಿದೆ.
ಹಾಗೆ ನೋಡಿದರೆ, ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಡಾ.ಸುಧಾಕರ್ ಗೆಲ್ಲುವ ತನಕ ಆ ಜಿಲ್ಲೆಯಲ್ಲಿ ಬಿಜೆಪಿ ಖಾತೆ ಓಪೆನ್ ಆಗಿರಲಿಲ್ಲ. ಇನ್ನು ಕೋಲಾರದಲ್ಲಿ ಇದ್ದ ಚಿಕ್ಕನೆಲೆಯನ್ನೂ ಆ ಪಕ್ಷ ಕಳೆದುಕೊಂಡಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುನಸ್ವಾಮಿ ಗೆದ್ದ ಮೇಲೆ ಕಮಲಕ್ಕೆ ಬಲವಾದ ರೆಕ್ಕೆಗಳು ಬಂದಿದ್ದವು. ಮಾಲೂರಿನಲ್ಲಿ ಕೃಷ್ಣಯ್ಯ ಶೆಟ್ಟಿ ಸೋಲುತ್ತಲೇ ಇದ್ದರು, ಅಲ್ಲಿನ ಬೇಸ್ ಹಾಗೆಯೇ ಇದೆ. ಆದರೆ; ಇದೀಗ ಮುಳಬಾಗಿಲಿನಿಂದ ಪಕ್ಷೇತರರಾಗಿ ಗೆದ್ದಿದ್ದ ಸಚಿವ ನಾಗೇಶ್ ಬಿಜೆಪಿ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಹೈ ಜೋಶ್‌ನೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.
ಇವತ್ತಿನ ಪ್ರಚಾರ ಸಭೆಗಳು ಬಿಜೆಪಿ ಬಲಕ್ಕೆ ಮತ್ತಷ್ಟು ಇಂಬು ನೀಡಿದವಲ್ಲದೆ, ಪಕ್ಷದ ನಾಯಕರ ದಂಡು ಬಂದಿಳಿದಿದ್ದು ಎರಡೂ ಜಿಲ್ಲೆಗಳ ಪದವೀಧರರಲ್ಲಿ ಕೊಂಚ ಭರವಸೆ ಮೂಡಿಸಿದೆ. ಜತೆಗೆ, ಆಗ್ನೇಯ ಪದವೀಧರ ಕ್ಷೇತ್ರದ ಐದು ಜಿಲ್ಲೆಯ 32 ತಾಲ್ಲೂಕುಗಳಲ್ಲಿರುವ ಲಕ್ಷಾಂತರ ನಿರುದ್ಯೋಗಿ ಪದವೀಧರರಿಗೆ ಪ್ರೋತ್ಸಾಹ ಧನ ನೀಡಿ ವೃತ್ತಿ ಕೌಶಲ್ಯ ತರಬೇತಿ ನೀಡುವುದು ನಮ್ಮ ಸರಕಾರದ ಆದ್ಯತೆ. ನಿರುದ್ಯೋಗಿ ಪದವೀಧರರು ಸ್ವಯಂ ಉದ್ಯೋಗ ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವಾರು ಯೋಜನೆಗಳ ಮೂಲಕ ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಉದ್ಯೋಗವಕಾಶ ಕಲ್ಪಿಸಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಸೇರಿದಂತೆ ಭಾಷಣ ಮಾಡಿದ ನಾಯಕರೆಲ್ಲ ಭರವಸೆ ನೀಡಿ ಹೋಗಿದ್ದಾರೆ.
ಜತೆಗೆ, ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ನಿರುದ್ಯೋಗಿ ಪದವೀಧರರಿಗೆ ಸರಕಾರದಿಂದ ವಿಶೇಷ ಆರ್ಥಿಕ ನೆರವು ಕೊಡಿಸಲಾಗುವುದು. ಈ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲ ಐದು ತಾಲ್ಲೂಕುಗಳ ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಸಿಬ್ಬಂದಿಗಳ ಕಷ್ಟಗಳನ್ನು ಬಹಳ ಹತ್ತಿರದಿಂದ ಬಲ್ಲ ಚಿದಾನಂದ ಗೌಡರು ಈಡೇರಿಸಲಿದ್ದಾರೆಂದು ಬಿಜೆಪಿ ನಾಯಕರೆಲ್ಲರೂ ಹೇಳಿದ್ದಾರೆ.
***
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..