ಮೇಲಿನ ಚಿತ್ರ: ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಪದವಿ ಕಾಲೇಜು
ಬೆಂಗಳೂರು: ಕೋವಿಡ್ ಹಿನ್ನೆಲೆಯನಲ್ಲಿ ಬಾಗಿಲು ತೆರೆಯದೇ ಮುಚ್ಚಿಕೊಂಡಿದ್ದ ಪದವಿ ಕಾಲೇಜುಗಳ ಆರಂಭಕ್ಕೆ ಕೊನೆಗೂ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ. ಯುಜಿಸಿ ಮಾರ್ಗಸೂಚಿಯಂತೆ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದೆ.
“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ನವೆಂಬರ್ 17ರಿಂದಲೇ ಪದವಿ ಕಾಲೇಜುಗಳನ್ನು ತೆರೆಯಲು ನಿರ್ಧರಿಸಲಾಯಿತು. ಇವುಗಳ ಜತೆಗೆ, ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳನ್ನೂ ತೆರೆಯಲಾಗುತ್ತಿದೆ” ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.
ಆರಂಭದಲ್ಲಿ ಪದವಿ, ಡಿಪ್ಲೋಮಾ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ವಿದ್ಯಾರ್ಥಿಗಳು ನೇರವಾಗಿ ತರಗತಿಗೆ ಹಾಜರಾಗಿಯೂ ಕಲಿಯಬಹುದು ಅಥವಾ ಆನ್ʼಲೈನ್ ತರಗತಿಗಳ ಮೂಲಕವೂ ಕಲಿಯಬಹುದು. ಆಯ್ಕೆ ವಿದ್ಯಾರ್ಥಿಗಳಿಗೆ ಬಿಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ತರಗತಿಗಳಲ್ಲಿ ಎಲ್ಲಾ ರೀತಿಯ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
“ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವು ನೋಂದಾಯಿಸಿಕೊಳ್ಳಬಹುದು, ಜತೆಗೆ, ಕಾಲೇಜುಗಳಲ್ಲಿ ನೇರ ತರಗತಿಗಳಿಗೆ ಹಾಜರಾಗಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ತಮ್ಮ ಪೋಷಕರ ಅನುಮತಿ ಹೊಂದಿರಬೇಕು. ಇನ್ನು; ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ತರಗತಿಗಳನ್ನು ಹೇಗೆ ನಡೆಸಬೇಕು ಹಾಗೂ ಎಷ್ಟು ಬ್ಯಾಚ್‌ಗಳಲ್ಲಿ ನಡೆಸಬೇಕು ಎಂಬುದನ್ನು ನಂತರ ನಿರ್ಧರಿಸಲಾಗುವುದು” ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.
ಹಾಸ್ಟೆಲ್ʼಗಳಲ್ಲಿ ಉಳಿಯುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದ ಅವರು, ಕಾಲೇಜ್ ತರಗತಿಗಳಿಗೆ ಹಾಜರಾಗ ಬಯಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧಾರವಾಗಿ ಇಟ್ಟುಕೊಂಡು ಶಿಫ್ಟ್ ಆಥವಾ ಬ್ಯಾಚ್ ಆಧಾರದಲ್ಲಿ ತರಗತಿಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಷನ್, ದೈಹಿಕ ಅಂತರ ಇತ್ಯಾದಿ ಅಂಶಗಳ ಬಗ್ಗೆ ಹೆಚ್ಚು ನಿಗಾ ಇರಿಸಲಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿ ಕಾಲೇಜಿಗೂ ಮಾರ್ಗದರ್ಶಿ ಸೂತ್ರಗಳನ್ನು ಕಳಿಸಲಾಗುತ್ತಿದೆ. ವೈರಸ್ ಇನ್ನೂ ನಮ್ಮ ನಡುವೆಯೇ ಇದ್ದು, ಲಸಿಕೆ ಬರುವ ತನಕ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.
ಈ ಸಭೆಯಲ್ಲಿ ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಹಣಕಾಸು, ಸಾರಿಗೆ ಮತ್ತು ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾದು ನೋಡುವ ಉದ್ದೇಶವಿತ್ತು
ನವೆಂಬರ್ ಹೊತ್ತಿಗೆ ರಾಜ್ಯದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಲಿದೆ ಎಂದು ಈ ಮೊದಲೇ ಐಸಿಎಂಆರ್ ಎಚ್ಚರಿಕೆ ನೀಡಿತ್ತು. ಈ ಕಾರಣಕ್ಕೆ ಶಾಲಾ-ಕಾಲೇಜು ಆರಂಭಕ್ಕೆ ಆತುರ ಬೇಡ ಎಂದು ಸರಕಾರ ಹೇಳಿಕೊಂಡು ಬರುತ್ತಿತ್ತು. ಆದರೆ, ಪೋಷಕರು, ವಿದ್ಯಾರ್ಥಿಗಳ ಒತ್ತಡ ಹೆಚ್ಚುತ್ತಿದ್ದಂತೆಲ್ಲ, ಮೊದಲಿಗೆ ಪದವಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿತು ಎಂದು ಅಧಿಕಾರಿಯೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಿಳಿಸಿದರು.