photos: nandan mysore
ಮೈಸೂರು: ಈ ಬಾರಿಯ ದಸರಾ ಉತ್ಸವಕ್ಕೆ ಮಾಡಿರುವ ಖರ್ಚು-ವೆಚ್ಚಗಳ ಲೆಕ್ಕವನ್ನು ನವೆಂಬರ್ 1ರಂದು ಜನರಿಗೆ ಕೊಡುತ್ತೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಸರಾ ಆಯೋಜಿಸಲು ಸರಕಾರದಿಂದ 10 ಕೋಟಿ ರೂ. ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ದಿಂದ 5 ಕೋಟಿ ರೂ. ಅನುದಾನ ಒದಗಿಸುವುದು ಎಂದು ಮೊದಲೇ ನಿರ್ಧಾರವಾಗಿತ್ತು. ಆದರೆ, ದಸರಾವನ್ನು ಸರಕಾರ ನೀಡಿದ 10 ಕೋಟಿ ರೂ. ಅನುದಾನದಲ್ಲೇ ಪೂರ್ಣಗೊಳಿಸಲಾಗಿದ್ದು, ಮುಡಾ ಘೋಷಿಸಿದ್ದ 5 ಕೋಟಿ ರೂ. ಅನುದಾನವನ್ನು ಪಡೆದಿಲ್ಲ ಎಂದು ಮಾಹಿತಿ ನೀಡಿದರು.
ಸರಳ ದಸರಾ ಉತ್ಸವ ಮಾಡಲಾಗಿದೆ. ಯಾವ ಬಾಬ್ತಿಗೆ ಎಷ್ಟು ಖರ್ಚಾಗಿದೆ ಎಂಬುದನ್ನು ನವೆಂಬರ್ 1ರಂದೇ ತಿಳಿಸಲಾಗುವುದು. ಎಲ್ಲ ಲೆಕ್ಕಪತ್ರಗಳನ್ನು ಜನರಿಗೆ ನೀಡಲಾಗುವುದು ಎಂದವರು ಹೇಳಿದರು.
ಇದುವರೆಗೂ ದಸರಾ ಉತ್ಸವಕ್ಕೆ ಮಾಡಲಾಗುತ್ತಿದ್ದ ವೆಚ್ಚದ ಬಗ್ಗೆ ಮಾಹಿತಿ ನೀಡುವ ಪರಿಪಾಠ ಇರಲಿಲ್ಲ. ಸರಕಾರದಿಂದ ಅನುದಾನ ಬರುತ್ತದೆ ಎನ್ನುವ ಮಾಹಿತಿ ಬಿಟ್ಟರೆ ಯಾವುದಕ್ಕೆ ಎಷ್ಟು ಖರ್ಚಾಯಿತು ಎಂಬ ಲೆಕ್ಕಪತ್ರ ಇರುತ್ತಿರಲಿಲ್ಲ. ಎಸ್.ಟಿ.ಸೋಮಶೇಖರ್ ಇದಕ್ಕೆ ಈ ವರ್ಷದಿಂದ ನಾಂದಿ ಹಾಡಿದ್ದಾರೆ.
ಸರಳ, ಸಾಂಪ್ರದಾಯಿಕವಾದ 9 ದಿನಗಳ ದಸರಾ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಸೂಚನೆಯಂತ ಇಡೀ ಉತ್ಸವವನ್ನು ಆಚರಿಸಿದ್ದೇವೆ. 7 ಲಕ್ಷಕ್ಕೂ ಅಧಿಕ ಜನ ದಸರಾ ವೀಕ್ಷಿಸಿದ್ದಾರೆ. ನಗರದಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಬುಧವಾರದಿಂದ ತೆರವುಗೊಳಿಸಲಾಗುತ್ತದೆ. ಆಯ್ದ ಸ್ಥಳಗಳಲ್ಲಿ ಮಾತ್ರ ಕನ್ನಡ ರಾಜೋತ್ಸವದವರೆಗೂ ದೀಪಾಲಂಕಾರ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದರು.
ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದ್ದು, ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ ಆಗಿತ್ತು. ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿನಲ್ಲಿ ಒಂದು ದಿನದ ಕಾರ್ಯಕ್ರಮ ನಡೆಯಿತು. ಇದು ಸಹ ದಸರಾ ಮಹೋತ್ಸವದಲ್ಲಿ ಅಗಲಿದ ಗಣ್ಯರೊಬ್ಬರ ಹೆಸರಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿರುವುದು ಇದೇ ಮೊದಲು ಎಂದು ಅವರು ಹೇಳಿದರು.
ದಸರಾ ಸಂದರ್ಭದಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಿಸಲಾಯಿತು. ಪರೀಕ್ಷೆ ಪ್ರಮಾಣ ಹೆಚ್ಚಾದರೂ ಸೋಂಕಿತರ ಸಂಖ್ಯೆಗೆ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಕಡಿಮೆ ಬರುತ್ತಿರುವುದು ಸಮಾಧಾನಕರ ಸಂಗತಿ ಎಂದು ಅವರು ಹೇಳಿದರು.
ಮಾವುತರು ಹಾಗೂ ಕಾವಾಡಿಗರಿಗೆ ಗೌರವಧನ
ಇದೇ ವೇಳೆ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗರಿಗೆ ಎಸ್.ಟಿ.ಸೋಮಶೇಖರ್ ಗೌರವ ಧನ ವಿತರಿಸಿದರು. ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಪೂಜಾ ಕಾರ್ಯ ನೆರವೇರಿಸಿ, ಕಬ್ಬು, ಹಣ್ಣುಬೆಲ್ಲ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊತ್ತು ಸಾಗಿ ಯಶಸ್ವಿಗೊಳಿಸಿದೆ. ಸಾಂಪ್ರದಾಯದಂತೆ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಪೂಜೆ ಸಲ್ಲಿಸಿ, ಮಾವುತರು ಹಾಗೂ ಕಾವಾಡಿಗರಿಗೆ ಗೌರವ ಧನ ವಿತರಿಸಲಾಯಿತು ಎಂದರು.
ಮಾವುತರು ಹಾಗೂ ಕಾವಾಡಿಗರಿಗೆ ಗೌರವ ಧನವಾಗಿ 10 ಸಾವಿರ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು ಎಂದರು ಸಚಿವರು.