lead photo: Jagdish R Chandra@JagdishRChandra
ಬೆಂಗಳೂರು: ಕಳೆದ ಹಲವು ಚುನಾವಣೆಗಳಲಿ ರಾಜ್ಯದ ವಿವಿಧೆಡೆ ಸ್ಯಾಡಲ್‌ವುಡ್ ತಾರೆಯರನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದ ಬಿಜೆಪಿ, ಈ ಉಪ ಚುನಾವಣೆಯಲ್ಲಿ ಮಾತ್ರ ಡ್ರಗ್ಸ್ ಕೇಸ್ ಹಿನ್ನೆಲೆಯಲ್ಲಿ ಅವರಿಂದ ದೂರವೇ ಉಳಿದಿತ್ತು. ಹೀಗಾಗಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕೆಲ ನಟ ನಟಿಯರನ್ನು ಹೊರತುಪಡಿಸಿರೆ, ಬೇರೆಯವರನ್ನು ಪ್ರಚಾರಕ್ಕೆ ಕರೆತಂದಿರಲಿಲ್ಲ.
ಆದರೆ; ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಜತೆಗಿನ ವೈಯಕ್ತಿಕ ಗೆಳೆತನದ ಕಾರಣಕ್ಕೆ ಸ್ಟಾರ್‌ನಟ ದರ್ಶನ್ ತೂಗುದೀಪ ಅವರು ಶುಕ್ರವಾರ ಕ್ಷೇತ್ರದ ಕೆಲ ಭಾಗಗಳಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು.
ಆಪರೇಷನ್ ಕಮಲಕ್ಕೆ ಸಿಕ್ಕಿ ಬಿಜೆಪಿ ಸೇರಿದ್ದ ಮುನಿರತ್ನಗೆ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲೇಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ಶತಾಯಗತಾಯ ಪ್ರಯತ್ನ ನಡೆಸುತ್ತಿವೆ. ಇದೇ ವೇಳೆ ಮೂಲ ಬಿಜೆಪಿ ಕಾರ್ಯಕರ್ತರು ಅರೆಮನಸ್ಸಿನಿಂದಲೇ ಮುನಿರತ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೆಲುವು ಕಷ್ಟವಾಗಬಹುದು ಎಂದು ಹೇಳಲಾಗುತ್ತಿದ್ದ ಹೊತ್ತಿನಲ್ಲೇ ಆಪದ್ಭಾಂದವನಂತೆ ಬಂದಿದ್ದಾರೆ ದರ್ಶನ್.
ಮತದಾನ ನವೆಂಬರ್ 3ರಂದು ನಡೆಯಲಿದ್ದು, ಅಕ್ಟೋಬರ್ 31; ಅಂದರೆ, ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇಂಥ ಹೊತ್ತಿನಲ್ಲೇ ಮುನಿರತ್ನ ಪಾಲಿಗೆ ಆಶಾಕಿರಣದಂತೆ ಬಂದ ದರ್ಶನ್, ಕ್ಷೇತ್ರದಲ್ಲಿ ಮಿಂಚಿನಂತೆ ಪ್ರಚಾರ ನಡೆಸಿದರು.
ಅವರು ಸಂಚಾರ ಮಾಡಿದ ಕಡೆಯಲ್ಲ ಬಿಜೆಪಿ ಕಾರ್ಯಕರ್ತರು, ಮುನಿರತ್ನ ಬೆಂಬಲಿಗರು ಹಾಗೂ ಜನರ ಜಾತ್ರೆಯೇ ಸೇರಿತ್ತು. ದರ್ಶನ್ ಅವರನ್ನು ನೋಡಲು ಮಹಿಳೆಯರು, ಮಕ್ಕಳು ಮನೆಗಳ ಮೇಲೆ ಹತ್ತಿದರು.
ತೆರೆದ ವಾಹನದಲ್ಲಿ ಪ್ರಚಾರ
ಬೆಳಗ್ಗೆ 10.30ಕ್ಕೆ ದರ್ಶನ್ ರೋಡ್ ಶೋ ಶುರುವಾಯಿತು. ತೆರೆದ ವಾಹನದ ಮೇಲೆ ಹತ್ತಿದ್ದ ದರ್ಶನ್ ಮೇಲೆ ಅಲ್ಲಲ್ಲಿ ಹೂಮಳೆಯೂ ಸುರಿಯಿತು. ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್ ಹೇಳಿದ್ದಿಷ್ಟು..
“ನಾನು ಪಕ್ಷ ನೋಡಿ ಪ್ರಚಾರ ಮಾಡುವ ವ್ಯಕ್ತಿ ಅಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತೇನೆ. ಮುನಿರತ್ನ ನಾನು ತುಂಬಾ ಇಷ್ಟಪಡುವ ವ್ಯಕ್ತಿ. ಕೊರೋನ ಲಾಕ್ʼಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿದ್ದರು. ಅಂದು ಕೆಜಿ ಅಕ್ಕಿಗೂ ಕಷ್ಟವಾಗಿತ್ತು. ಅರ್ಧ ಲೀಟರ್ ಹಾಲಿಗೂ ಹಾಹಾಕಾರ ಇತ್ತು. ಅಂಥ ಸಮಯದಲ್ಲಿ ಮುನಿರತ್ನ ಮಾನವೀಯತೆಯಿಂದ ಜನರಿಗೆ ನೆರವಾದರು. ಅನ್ನ ಕೊಟ್ಟರು, ಹಾಲು ಕೊಟ್ಟರು. ಅವರು ಮಾಡಿದ ಉತ್ತಮ ಸೇವೆ ನೋಡಿ ಮನಸ್ಸು ತುಂಬಿಬಂತು. ಇಂಥ ಮಾನವೀಯ ವ್ಯಕ್ತಿತ್ವದ ಮುನಿರತ್ನ ಪರ ನಾನು ಪ್ರಚಾರ ಮಾಡುತ್ತಿದ್ದೇನೆ.”
“ಎಷ್ಟು ಕೋಟಿ ಇದ್ದರೇನು? ಯಾವುದೂ ಹಿಂದೆ ಬರಲ್ಲ. ಪಿತೂರಿ ಮಾಡೋಕೆ ದುಡ್ಡು ಇರುತ್ತೆ. ಜನರಿಗೆ ಸಹಾಯ ಮಾಡೋಕೆ ದುಡ್ಡಿಲ್ಲವಾ? ಮುನಿರತ್ನ ರಾಜೀನಾಮೆ ಕೊಟ್ಟರೋ ಬಿಟ್ಟರೋ ಅದು ಬೇರೆ ಮಾತು. ಆದರೆ, ಅವರ ಮಾನವೀಯ ವ್ಯಕ್ತಿತ್ವವನ್ನು ಇಷ್ಟಪಟ್ಟು ಪ್ರಚಾರ ನಡೆಸುತ್ತಿದ್ದೇನೆ”
ಕೊರೊನ ಕಿವಿಮಾತು ಹೇಳಿದ ದರ್ಶನ್
ಎಲ್ಲ ಕಡೆ ಕೊರೊನ ತಾಂಡವವಾಡುತ್ತಿದೆ. ಎಲ್ಲರೂ ತಪ್ಪದೇ ಮುನ್ನೆಚ್ಚರಿಕೆ ವಹಿಸಬೇಕು. ಮಾಸ್ಕ್ ಹಾಕಿಕೊಂಡು ದೈಹಿಕ ಅಂತರ ಕಾಯ್ದುಕೊಂಡು ಪ್ರಚಾರ ಮಾಡಬೇಕು. ನಾವೂ ಹಾಗೆ ಮಾಡುತ್ತೇವೆ. ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೋರಿದರು.
ನಿಖಿಲ್ ಕುಮಾರಸ್ವಾಮಿ ಬಗ್ಗೆ
ಇನ್ನು; ನಿಖಿಲ್ ಕುಮಾರಸ್ವಾಮಿ ನಡೆಸುತ್ತಿರುವ ಪ್ರಚಾರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, “ನಿಖಿಲ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ನಾನು ಮಾತ್ರ ಮುನಿರತ್ನ ಪರ ಪ್ರಚಾರ ನಡೆಸುತ್ತೇನೆ” ಎಂದಷ್ಟೇ ಹೇಳಿದರು.
ಇಡೀ ದಿನ ರೋಡ್ ಶೋ
ದರ್ಶನ್ ಅವರು ತಮ್ಮ ನೆಚ್ಚಿನ ನಿರ್ಮಾಪಕ ಮುನಿರತ್ನ ಪರ ಇಡೀ ದಿನ ಪ್ರಚಾರ ಮಾಡಿದರು. ಕ್ಷೇತ್ರದ ವ್ಯಾಪ್ತಿಯ ಒಟ್ಟು 9 ವಾರ್ಡ್‍ಗಳಲ್ಲಿ ಮುನಿರತ್ನ ಜತೆಯಲ್ಲಿ ದರ್ಶನ್ ರೋಡ್ ಶೋ ನಡೆಸಿದರು.
ಇದೇ ವೇಳೆ ದರ್ಶನ್ ಜತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ʼಕುಮಾರ್ ಕಟೀಲ್, ಹಿರಿಯ ಸಚಿವ ಅಶೋಕ್ ಇದ್ದರು. ಯಶವಂತಪುರ ರೈಲು ನಿಲ್ದಾಣದ ಮುಂಭಾಗದಿಂದ ರೋಡ್ ಶೋ ಆರಂಭವಾಯಿತು. ರಾಜರಾಜೇಶ್ವರಿ ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಯಿತು.
ಕ್ಷೇತ್ರದ ಜೆ.ಪಿ.ಪಾರ್ಕ್ ವಾರ್ಡ್, ಜಾಲಹಳ್ಳಿ, ಹೆಚ್‍ಎಂಟಿ, ಪೀಣ್ಯ, ಗೊರಗುಂಟೆಪಾಳ್ಯ, ಲಕ್ಷ್ಮೀದೇವಿ ನಗರದಲ್ಲಿ ಪ್ರಚಾರ ನಡೆಸಿ, ಇದಾದ ಮೇಲೆ ಅಂತೆಯೇ ಲಗ್ಗೆರೆಯ ಆಲದಮರ ವೃತ್ತ, ಕೊಟ್ಟಿಗೆಪಾಳ್ಯ ಪೈಪ್‍ಲೈನ್, ಸುಂಕದಕಟ್ಟೆ, ಬಿಡಿಎ ಕಾಂಪ್ಲೆಕ್ಸ್, ಜ್ಞಾನಭಾರತಿಯ ಕೆಂಗುಂಟೆ, ಮಲ್ಲತ್ತಹಳ್ಳಿಯಲ್ಲಿ ರೋಡ್ ಶೋ ನಡೆಸಿದರು.
ಕುರುಕ್ಷೇತ್ರ ಚಿತ್ರದ ನಿರ್ಮಾಪಕ
ಮೊದಲಿನಿಂದಲೂ ದರ್ಶನ್ ಮತ್ತು ಮುನಿರತ್ನ ನಡುವೆ ಉತ್ತಮ ಬಾಂಧವ್ಯವಿದೆ. ದರ್ಶನ್ ನಟಿಸಿದ್ದ ಕನ್ನಡ ಚಿತ್ರರಂಗದ ಬಿಗ್‌ಬಜೆಟ್ ಚಿತ್ರ ʼಕುರುಕ್ಷೇತ್ರʼ ವನ್ನು ಇದೇ ಮುನಿರತ್ನ ನಿರ್ಮಿಸಿದ್ದರು.
ಇದೇ ವೇಳೆ ದರ್ಶನ್ ಎಂಟ್ರಿಯೊಂದಿಗೆ ಇಡೀ ರಾಜರಾಜೇಶ್ವರಿ ನಗರದ ಚಿತ್ರಣವೇ ಬದಲಾಗಬಹುದು ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವಿನಲ್ಲಿ ದರ್ಶನ್ ಪಾತ್ರ ಸಾಕಷ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಪ್ರಚಾರದಿಂದ ಮುನಿರತ್ನಗೆ ಆನೆಬಲ ಬರಬಹುದು. ಮುಖ್ಯವಾಗಿ, ಅವರ ಅಭಿಮಾನಿಗಳು, ಯುವಜನರು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ಹಾಕಬಹುದು. ಇದು ಕಾಂಗ್ರೆಸ್, ಅದರಲ್ಲೂ ಡಿಕೆ ಸಹೋದರರಿಗೆ ದೊಡ್ಡ ಸವಾಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.