ಇಂದು ಭಾರತದ ಐಕ್ಯತಾಮೂರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಹಾಗೂ ರಾಜಕೀಯವಾಗಿ ಅವರಿಗೆ ಆಗಿದ್ದ ಅಪಚಾರವನ್ನು ಸರಿಪಡಿಸಿದ ದಿನವೂ ಹೌದು. ಪಟೇಲರ ಅವಿಸ್ಮರಣೀಯ ಕೀರ್ತಿಗೆ ಮುಕ್ಕಾಗದೆ ನೋಡಿಕೊಂಡವರಲ್ಲಿ ಪಿ.ವಿ.ನರಸಿಂಹ ರಾವ್ ಮತ್ತು ನರೇಂದ್ರ ಮೋದಿ ಬಹುಮುಖ್ಯರು. ಈ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣರು ಈ ಲೇಖನದೊಂದಿಗೆ ಸರ್ದಾರರನ್ನು ಮತ್ತೆ ನಮ್ಮ ಮುಂದೆ ಸಾಕ್ಷಾತ್ಕರಿಸಿದ್ದಾರೆ.
***
ಅಕ್ಟೋಬರ್ 31 ಬಂದಾಗ ಆ ಮಹಾಪುರುಷನ ನೆನಪು ಕೆಲವರಿಗಾದರೂ ಆಗದೆ ಇರದು. ಅವರೇನಾದರೂ ಈ ದೇಶದ ಮೊಟ್ಟ ಮೊದಲ ಪ್ರಧಾನಿಯಾಗಿದ್ದಿದ್ದರೆ, ಸ್ವಾತಂತ್ರ್ಯ ಬಂದ ಈ 73 ವರ್ಷಗಳ ಕಾಲಾವಧಿಯಲ್ಲಿ ನಮ್ಮ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಮಂದಿರ, ನಾಗರಿಕ ತಿದ್ದುಪಡಿ ಕಾಯ್ದೆ(ಸಿಎಎ) ಮುಂತಾದ ಕ್ಲಿಷ್ಟಾತಿಕ್ಲಿಷ್ಟ ಕ್ರಮಗಳನ್ನು ಮೋದಿ ಸರ್ಕಾರ ಕೈಗೊಳ್ಳಬೇಕಾದ ಅಗತ್ಯವೇ ಉಳಿಯುತ್ತಿರಲಿಲ್ಲ. ಆದರೆ ಆ ಮಹಾನುಭಾವ ಪ್ರಧಾನಿಯಾಗದಂತೆ ಅವರ ಗುರುಸಮಾನರಾದ ಮಹಾತ್ಮಾ ಗಾಂಧೀಜಿಯವರೇ ಅಡ್ಡಗಾಲು ಹಾಕಿದರು. ಈ ದೇಶದ ನೆಲದ ಗಂಧಗಾಳಿ ಅರಿಯದ, ಇಲ್ಲಿನ ಅಸ್ಮಿತೆ, ಸಂಸ್ಕೃತಿ ಪರಂಪರೆಗಳ ಬಗ್ಗೆ ಏನೇನೂ ಶ್ರದ್ಧೆಯಿಲ್ಲದ ಜವಾಹರಲಾಲ್ ನೆಹರೂ ಅವರನ್ನು ಪ್ರಧಾನಿಯಾಗಿ ಮಾಡಿಬಿಟ್ಟರು. ಗಾಂಧೀಜಿ ಎಸಗಿದ ಅತಿದೊಡ್ಡ ಪ್ರಮಾದಗಳಲ್ಲಿ ಇದೂ ಒಂದು ಎಂಬುದು ಸ್ವಾತಂತ್ರ್ಯಾ ನಂತರದ ಹಾಗೂ ಸ್ವಾತಂತ್ರ್ಯ ಪೂರ್ವ ಇತಿಹಾಸವನ್ನು ಅವಲೋಕಿಸಿದಾಗ ವೇದ್ಯವಾಗುವ ಸಂಗತಿ.
ಅಖಂಡತೆಯ ಮಹಾಪುರುಷ
ಅಷ್ಟಕ್ಕೂ ಆ ಮಹಾನುಭಾವ ಯಾರೆಂಬುದು ರಹಸ್ಯವಾಗಿರಲು ಸಾಧ್ಯವಿಲ್ಲ. ಉಕ್ಕಿನ ಮನುಷ್ಯ, ಭಾರತದ ಬಿಸ್ಮಾರ್ಕ್, ಸರ್ದಾರ್ ಎಂದೆಲ್ಲ ಬಿರುದುಗಳಿಂದ ಕರೆಯಲಾಗುವ ಭಾರತದ ಮೊಟ್ಟ ಮೊದಲ ಉಪ ಪ್ರಧಾನಿ, ಗೃಹ ಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ (ಜನನ: 31.10.1875, ಮರಣ: 15.12.1950). ಪ್ರಧಾನಿಯಾಗದಿದ್ದರೇನು, ಗೃಹಮಂತ್ರಿಯಾಗಿ ಪಟೇಲರು ಮಾಡಿದ ಸಾಧನೆ ಚಿರಸ್ಮರಣೀಯ. ರಾಜರ ಆಳ್ವಿಕೆಯಲ್ಲಿದ್ದ 552ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳನ್ನು ಭಾರತದ ಒಕ್ಕೂಟ ಗಣರಾಜ್ಯ ವ್ಯವಸ್ಥೆಯಲ್ಲಿ ವಿಲೀನಗೊಳಿಸಿ ಭಾರತದ ಅಖಂಡತೆ ಹಾಗೂ ಏಕತೆಯನ್ನು ಎತ್ತಿ ಹಿಡಿದ ಮಹಾಪುರುಷರು ಅವರು.
ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ʼನೆಹರು ಅವರ ಬದಲಿಗೆ ಪಟೇಲರು ದೇಶದ ಮೊದಲ ಪ್ರಧಾನಿಯಾಗಿ ನೇಮಕಗೊಂಡಿದ್ದರೆ ದೇಶದ ಈಗಿನ ಪರಿಸ್ಥಿತಿಯೇ ಬದಲಾಗುತ್ತಿತ್ತುʼ ಎಂದು ಸಭೆಯೊಂದರಲ್ಲಿ ಹೇಳಿದ್ದರು. ಈ ಹೇಳಿಕೆ ಎಂದಿನಂತೆ ಭಾರೀ ವಿವಾದ ಹಾಗೂ ಚರ್ಚೆಗೂ ಗ್ರಾಸವಾಗಿತ್ತು. ಕಾಂಗ್ರೆಸ್ ಮುಖಂಡರಂತೂ ಮೋದಿ ಅವರ ಈ ಹೇಳಿಕೆ ವಿರುದ್ಧ ಕೆಂಡ ತುಳಿದವರಂತೆ ಎಗರಾಡಿದ್ದರು.
ಆದರೆ ಅಸಲಿಗೆ ಇಂತಹದೊಂದು ಹೇಳಿಕೆಯನ್ನು ಮೊದಲು ನೀಡಿದ್ದು ನರೇಂದ್ರ ಮೋದಿಯವರೇನೂ ಅಲ್ಲ. ನೆಹರು ಪ್ರಧಾನಿಯಾಗಿ ಕಾಲು ಶತಮಾನ ಕಳೆದ ಬಳಿಕ ಭಾರತದ ಮೊದಲ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರೇ ಇಂತಹ ಹೇಳಿಕೆಯನ್ನು ನೀಡಿದ್ದರು. “Undoubtedly it would have been better if Nehru had been asked to be Foreign Minister and Patel made the Prime Minister’ ಇದು ರಾಜಾಜಿ ಅವರದ್ದೇ ಹೇಳಿಕೆ. ನರೇಂದ್ರ ಮೋದಿ ಇಂತಹ ಹೇಳಿಕೆ ನೀಡಿದ್ದಕ್ಕೆ ಆಕ್ಷೇಪಿಸುವ ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಹಿಂದಿನ ಹಿರಿಯ ಮುಖಂಡ ರಾಜಾಜಿ ಕೂಡ ಇದೇ ರೀತಿ ಹೇಳಿದ್ದರೆಂಬುದನ್ನು ಮರೆತೇಬಿಟ್ಟಿರಬಹುದು ಅಥವಾ ಸ್ವಾತಂತ್ರ್ಯ ಪ್ರಾಪ್ತಿಯಾದ ನಂತರದ ಕಾಲಾವಧಿಯಲ್ಲಿ ಯಾರು ಏನು ಹೇಳಿದರು ಎಂಬ ಬಗ್ಗೆ ಗಾಢ ಅಜ್ಞಾನ ಅವರಲ್ಲಿ ತುಂಬಿಕೊಂಡಿರಲೂಬಹುದು!
500ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯೊಳಗೆ ವಿಲೀನಗೊಳಿಸುವ ಸವಾಲು ಸುಲಭದ್ದೇನೂ ಆಗಿರಲಿಲ್ಲ. ಆದರೆ ಗೃಹಮಂತ್ರಿಯಾಗಿ ಪಟೇಲರು ಈ ಗಂಭೀರ ಸವಾಲನ್ನು ಸ್ವೀಕರಿಸಿ ಬಗೆಹರಿಸಿದ ಪರಿ ಮಾತ್ರ ಅದ್ಭುತ ಹಾಗೂ ಅನನ್ಯ. ಉಳಿದೆಲ್ಲ ದೇಶೀಯ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿದ್ದರೂ ಪಟೇಲರಿಗೆ ತಲೆನೋವಾಗಿ ಕಾಡಿದ್ದು-ಹೈದರಾಬಾದ್, ಕಾಶ್ಮೀರ ಮತ್ತು ಜುನಾಗಢ ಸಂಸ್ಥಾನಗಳು. ಸ್ವತಂತ್ರ ಸಂಸ್ಥಾನವಾಗಿದ್ದ ಹೈದರಾಬಾದಿನ ನಿಜಾಮ ಪಾಕಿಸ್ಥಾನದ ಪರವಾಗಿದ್ದ. ಭಾರತದೊಳಗೆ ತನ್ನ ಸಂಸ್ಥಾನವನ್ನು ವಿಲೀನಗೊಳಿಸಲು ಆತನಿಗೆ ಸುತರಾಂ ಮನಸ್ಸಿರಲಿಲ್ಲ. ಪಟೇಲರ ಬುದ್ದಿಮಾತುಗಳಿಗೆ ಆತ ಕ್ಯಾರೇ ಎನ್ನಲಿಲ್ಲ. ಸಂಘರ್ಷವಿಲ್ಲದೆ ಈ ವಿಲೀನ ಸಾಧ್ಯವಾಗದೆಂದು ಪಟೇಲರಿಗೆ ಅನಿಸಿದ್ದು ಆವಾಗಲೇ. ಪಟೇಲರು ಅನಿವಾರ್ಯವಾಗಿ ನೇರ ಪೊಲೀಸ್ ಕಾರ್ಯಾಚರಣೆ ಕ್ರಮ ಕೈಗೊಳ್ಳಬೇಕಾಯಿತು. ಹೈದರಾಬಾದನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಳಿಸಿದ್ದು ಪಟೇಲರ ದಿಟ್ಟತನ ಹಾಗೂ ಉಕ್ಕಿನಂತಹ ವ್ಯಕ್ತಿತ್ವಕ್ಕೆ ನಿದರ್ಶನ. ದೇಶದೊಳಗೊಂದು ದೇಶ ಇರಕೂಡದು. ಬಲಿಷ್ಠ ಭಾರತಕ್ಕೆ ಇದೊಂದು ಅಡ್ಡಿ ಎಂಬ ಕಹಿಸತ್ಯ ಪಟೇಲರಿಗೆ ಗೊತ್ತಿತ್ತು. ಹೈದರಾಬಾದ್ ನಿಜಾಮನ ವಂಶದ ಕುಡಿಗಳಾದ ಓವೈಸಿಗಳು ಈಗಲೂ ಭಾರತ ತನ್ನ ದೇಶ ಎಂದು ಒಪ್ಪಿಕೊಳ್ಳದಿರುವುದಕ್ಕೆ, ವಂದೇಮಾತರಂ ಹೇಳಲು ವಿರೋಧಿಸುತ್ತಿರುವುದಕ್ಕೆ ಕಾರಣವೇನು ಎಂಬುದು ಈ ವಿದ್ಯಮಾನವನ್ನು ಬಗೆದಾಗ ಅರಿವಾಗುತ್ತದೆ.
ಪಟೇಲರಿಗೆ ಬಹುದೊಡ್ಡ ಸವಾಲಾಗಿ ಕಾಡಿದ್ದು ಕಾಶ್ಮೀರ. ಕಾಶ್ಮೀರದ ಪರಿಸ್ಥಿತಿ ಹೈದರಾಬಾದ್ʼಗಿಂತ ಭಿನ್ನವಾಗಿತ್ತು. ಹೈದರಾಬಾದ್ ರಾಜನಾಗಿದ್ದವನು ಮುಸ್ಲಿಂ (ನಿಜಾಮ). ಆದರೆ ಅಲ್ಲಿದ್ದ ಪ್ರಜೆಗಳೆಲ್ಲ ಬಹುತೇಕ ಹಿಂದುಗಳೇ. ಕಾಶ್ಮೀರದ ರಾಜನಾದರೋ ಹಿಂದುವಾಗಿದ್ದ ರಾಜಾ ಹರಿಸಿಂಗ್. ಆದರೆ ಶೇ.77 ಮಂದಿ ಪ್ರಜೆಗಳೆಲ್ಲ ಮುಸ್ಲಿಮರಾಗಿದ್ದರು. ಇದೇ ಕಾರಣಕ್ಕೆ ಕಾಶ್ಮೀರನ್ನು ಕಬಳಿಸಲು ಪಾಕಿಸ್ತಾನ ಸಜ್ಜಾಗಿ ನಿಂತಿತ್ತು. 1947ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ಮಾಡಿತು. ಕಾಶ್ಮೀರದ ರಾಜ ನಿರ್ವಾಹವಿಲ್ಲದೆ ಭಾರತದ ಒಕ್ಕೂಟಕ್ಕೆ ಸೇರಿದ. ಆಗ ಕಾಶ್ಮೀರದ ರಕ್ಷಣೆಯ ಹೊಣೆ ಹೊತ್ತವರು ಜನರಲ್ ತಿಮ್ಮಯ್ಯ. ಪಾಕಿಸ್ತಾನ ವಶಪಡಿಸಿಕೊಂಡ ಸಂಪೂರ್ಣ ಪ್ರದೇಶವನ್ನು ಮತ್ತೆ ನಮ್ಮದಾಗಿಸಿಕೊಳ್ಳಲು ಭಾರತೀಯ ಸೈನ್ಯಕ್ಕೆ ಖಂಡಿತ ಸಾಧ್ಯವಿತ್ತು. ತಿಮ್ಮಯ್ಯ ಅದಕ್ಕಾಗೇ ಸಜ್ಜಾಗಿದ್ದರು. ಆದರೆ ಅವರ ಈ ಸಾಹಸಕ್ಕೆ ಅಡ್ಡ ಬಂದವರು ಸನ್ಮಾನ್ಯ ಪ್ರಧಾನಿ ನೆಹರು ಅವರು! ಇದ್ದಕ್ಕಿದ್ದಂತೆ ನೆಹರು ʼಕದನ ವಿರಾಮʼ ಘೋಷಿಸಿದರು.
ಕದನವಿರಾಮ ಘೋಷಿಸುವುದು-ಸಾಮಾನ್ಯವಾಗಿ ಸೈನ್ಯ ಹೋರಾಡಲು ಅಸಮರ್ಥವಾಗಿದ್ದಾಗ ಅಥವಾ ಇನ್ನೇನಾದರೂ ಕೊರತೆ ಎದುರಿಸುತ್ತಿದ್ದಾಗ. ಆಗ ಅಂತಹ ಯಾವುದೇ ವಿಷಮಸ್ಥಿತಿ ಭಾರತದ ಪಾಲಿಗಿರಲಿಲ್ಲ. ನೆಹರು ಅವರಿಗೆ ಕಾಶ್ಮೀರದ ರಕ್ಷಣೆಗಿಂತ ಕಾಶ್ಮೀರದ ತಮ್ಮ ʼಪರಮಾಪ್ತ ಬಂಧುʼ ಶೇಖ್ ಅಬ್ದುಲ್ಲಾರ ರಕ್ಷಣೆಯೇ ಮುಖ್ಯವಾಗಿತ್ತು. ಹಾಗಾಗಿ ಕಾಶ್ಮೀರದ ಐದನೇ ಎರಡು ಭಾಗ ಪಾಕ್ ವಶವಾಗಿ ʼಪಾಕ್ ಆಕ್ರಮಿತ ಕಾಶ್ಮೀರʼ (ಪಿಒಕೆ) ಎಂಬ ಹೊಸ ಹೆಸರು ಪಡೆಯಿತು. ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಅದನ್ನು ವಿಶ್ವಸಂಸ್ಥೆಗೊಯ್ದು, ಅದನ್ನೊಂದು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಪರಿವರ್ತಿಸಿದವರು ಇದೇ ನೆಹರು! ಸರ್ದಾರ್ ಪಟೇಲ್ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಅವರಷ್ಟಕ್ಕೇ ಬಿಟ್ಟಿದ್ದರೆ, ನೆಹರು ಹಸ್ತಕ್ಷೇಪ ಮಾಡಿರದಿದ್ದರೆ ಕಾಶ್ಮೀರ ಸಮಸ್ಯೆ ಎಂಬುದೇ ಇರುತ್ತಿರಲಿಲ್ಲ. ಶಾರದಾ ದೇವಿಯ ಆವಾಸಸ್ಥಾನವಾಗಿದ್ದ ಕಾಶ್ಮೀರವು ಮದ್ರಾಸಾ, ಮಸೀದಿಗಳು, ಮತಾಂಧರ, ಉಗ್ರರ ತಾಣವಾಗುತ್ತಿರಲಿಲ್ಲ. ಆದರೆ ಭಾರತದ ಅದೃಷ್ಟ! ಪಟೇಲರ ತವರು ನೆಲದವರೇ ಆದ ಮೋದಿ ಪ್ರಧಾನಿಯಾದ ಬಳಿಕ ಕಾಶ್ಮೀರ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ದೊರಕಿತು.
ಮುಸ್ಲಿಂ ದಾಳಿಯಿಂದ ಭಗ್ನಗೊಂಡಿದ್ದ ಪ್ರಸಿದ್ಧ ಸೋಮನಾಥ ಮಂದಿರದ ಪುನರ್ನಿರ್ಮಾಣಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ನೆಹರೂ ವಿರೋಧವನ್ನೂ ಲೆಕ್ಕಿಸದೆ ಮಂದಿರ ನಿರ್ಮಿಸಿ, ದಾಸ್ಯದ ಕಳಂಕ ತೊಡೆದು ಹಾಕಿದ ಕೀರ್ತಿಯೂ ಪಟೇಲರಿಗೇ ಸಲ್ಲಬೇಕು.
41 ವರ್ಷಗಳ ಬಳಿಕ ಭಾರತರತ್ನ
ಇಂತಹ ಉಕ್ಕಿನ ಮನುಷ್ಯನೆನಿಸಿಕೊಂಡ ಪಟೇಲರಿಗೆ ದೇಶದ ಅತ್ಯುನ್ನತ ಪುರಸ್ಕಾರವಾಗಿರುವ ಭಾರತರತ್ನ ಲಭಿಸಿದ್ದು ಮಾತ್ರ 1991ರಲ್ಲಿ, ಅವರು ಇಹಲೋಕ ತ್ಯಜಿಸಿದ 41 ವರ್ಷಗಳ ಬಳಿಕ! ಪಟೇಲರಿಗೆ ಭಾರತರತ್ನ ದೊರೆಯುವುದಕ್ಕೆ ಮುನ್ನ ಇಂದಿರಾಗಾಂಧಿ (1971), ವಿ.ವಿ. ಗಿರಿ(1975), ಕೆ.ಕಾಮರಾಜ್ (1976), ಮದರ್ ತೆರೇಸಾ(1980), ಎಂ.ಜಿ. ರಾಮಚಂದ್ರನ್ (1988), ರಾಜೀವ್‌ಗಾಂಧಿ (1990)… ಹೀಗೆ ಯಾರ‍್ಯಾರೋ ಆ ಉನ್ನತ ಪ್ರಶಸ್ತಿಗೆ ಭಾಜನರಾಗಿದ್ದರು. ಪಿ.ಪಿ.ನರಸಿಂಹರಾವ್ ಸರ್ಕಾರ ಕೊನೆಗೂ ಪಟೇಲರಿಗೆ ಮರಣೋತ್ತರವಾಗಿ ಆ ಪ್ರಶಸ್ತಿ ನೀಡಿ ಆಗಿದ್ದ ಪ್ರಮಾದವನ್ನು ಸರಿಪಡಿಸಿತ್ತು.
ಪಟೇಲರಿಗೆ ಗುಜರಾತಿನ ನರ್ಮದಾ ಸರೋವರದ ಸಮೀಪ ಕೇವಾಡಿಯಾದಲ್ಲಿ 182 ಮೀಟರ್ (597 ಅಡಿ) ಎತ್ತರದ ಉಕ್ಕಿನ ಪ್ರತಿಮೆ ನಿರ್ಮಿಸಿ, ಕಾಂಗ್ರೆಸ್ಸಿಗರು ತುಕ್ಕು ಹಿಡಿಸಿದ್ದ ಉಕ್ಕಿನ ಮನುಷ್ಯನಿಗೆ ತಕ್ಕ ಬಹುದೊಡ್ಡ ಗೌರವ ಸಲ್ಲಿಸಿರುವುದು ಶ್ಲಾಘನೀಯ ಸಂಗತಿ. ಕಳೆದ ವರ್ಷ ಆ ಪ್ರತಿಮೆಯನ್ನು ಕಣ್ಣಾರೆ ವೀಕ್ಷಿಸುವ ಸೌಭಾಗ್ಯ ನನ್ನದಾಗಿತ್ತು.
ಭಾರತವನ್ನು ಒಗ್ಗೂಡಿಸಿದ, ನವಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ದೇಶದ ಏಕತೆಯ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರ, ನಿಷ್ಠುರ ರಾಜಕಾರಣಿ, ಸ್ವಾಭಿಮಾನ ಸಂಪನ್ನ ದೇಶಭಕ್ತ, ಮುಳ್ಳನ್ನು ಮುಳ್ಳಿನಿಂದಲೇ ಕೀಳುವ ತಂತ್ರಗಾರಿಕೆಯ ಆಧುನಿಕ ಚಾಣಕ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾರತದ ರಾಜಕೀಯ ಇತಿಹಾಸ ಕಂಡ ಹಿಮಾಲಯ ಸದೃಶ ಮಹಾನ್ ವ್ಯಕ್ತಿ. ಕಾಂಗ್ರೆಸ್‌ನ ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ಪಟೇಲರು ಕಾಣಿಸಿಕೊಳ್ಳದಿರಬಹುದು. ಆದರೆ ಭಾರತದ ಜನಕೋಟಿಯ ಹೃದಯಗಳಲ್ಲಿ ಅವರು ಎಂದೆಂದಿಗೂ ವಿರಾಜಮಾನರಾಗಿಯೇ ಇರುತ್ತಾರೆ.
***
photos courtesy: Wikipedia
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.