- Ground Report
ಶಿರಾ: ಮತದಾನಕ್ಕೆ ಬಾಕಿ ಇರುವುದು ಇನ್ನು ಮೂರೇ ದಿನ. ಶಿರಾದಲ್ಲಿ ಬಿಜೆಪಿಯ ನಿಗೂಢ ನಡೆಗಳು ಮತ್ತೂ ಹೆಚ್ಚುತ್ತಿವೆ. ನಾಮಪತ್ರ ಸಲ್ಲಿಕೆಯ ದಿನವೇ ಇದಕ್ಕೆ ನಾಂದಿ ಹಾಡಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ; ಪುನಾ ಶುಕ್ರವಾರ ಶಿರಾಕ್ಕೆ ಭೇಟಿ ನೀಡಿದರಲ್ಲದೆ, ಅವರು ಇಟ್ಟ ಹೆಜ್ಜೆಗಳು ಯಾರಿಗೂ ಕಾಣದೇ ಸಾಕಷ್ಟು ಕನ್‌ಫ್ಯೂಸ್ ಮಾಡಿದವು.
ಈಗಾಗಲೇ ಸಿಎಂ ಪುತ್ರ ವಿಜಯೇಂದ್ರ ಅವರು ಬೆಳ್ಳೂರು ಕ್ರಾಸಿನಲ್ಲೇ ಬೀಡುಬಿಟ್ಟು, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ದಿಕ್ಕುತಪ್ಪಿಸುತ್ತಿದ್ದರೆ, ಡಿಸಿಎಂ ಇತ್ತ ಬೆಂಗಳೂರು ಮತ್ತು ಅತ್ತ ಶಿರಾದಲ್ಲೂ ಉರುಳಿಸುತ್ತಿರುವ ದಾಳಗಳು ಅಕ್ಷಶಃ ಕಾಂಗ್ರೆಸ್-ಜೆಡಿಎಸ್ ಅಂಕೆಗೆ ಸಿಗದಂತೆ ಆಗಿಬಿಟ್ಟಿವೆ. ಕಾರಣವಿಷ್ಟೇ; ಹೆಚ್ಚೂಕಮ್ಮಿ ಶಿರಾದಲ್ಲಿ ಶೂನ್ಯಮಟ್ಟದ ಬೇಸ್ ಹೊಂದಿದ್ದ ಬಿಜೆಪಿ ಇದೀಗ ಕಾಂಗ್ರೆಸ್‌ಗೆ ಸರಿಸಮಾನವಾಗಿ, ಜೆಡಿಎಸ್ ಅನ್ನು ಹಿಂದಿಕ್ಕುವಷ್ಟು ಬಲ ಗಳಿಸಿದೆ ಎಂಬ ವರದಿ ಅಲ್ಲಿಂದ ಬಂದಿದೆ. ಇದಕ್ಕೆ ಕಾರಣರಾದವರು ಇಬ್ಬರೇ; ಒಬ್ಬರು ಡಿಸಿಎಂ, ಇನ್ನೊಬ್ಬರು ವಿಜಯೇಂದ್ರ.
ಆಪರೇಷನ್ ಶನಿವಾರ!
ಅಕ್ಟೋಬರ್ 31ರ ದಿನವಾದ ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಜತೆಗೆ, ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನವನ್ನು ಬಳಸಿಕೊಂಡು ಡಿಸಿಎಂ ಕೆಲ ನಿಗೂಢ ಹೆಜ್ಜೆಗಳನ್ನು ಇಟ್ಟರು. ವಾಲ್ಮೀಕಿ ಜಯಂತಿ ವೇಳೆಯಲ್ಲೇ ಡಿಸಿಎಂ, ವಾಲ್ಮೀಕಿ ಸಮುದಾಯದ ಕೆಲ ಮುಖ್ಯ ಮುಖಂಡರ ಜತೆ ಮಾತುಕತೆ ನಡೆಸಿದರು. ಆ ಕಾರ್ಯಕ್ರಮಕ್ಕೂ ಮುನ್ನ ಶಿರಾ ಐಬಿಯತ್ತಿರ ಕೆಲವರ ಜತೆ ಇನ್‌ಡೋರ್ ಮೀಟಿಂಗ್ ಮಾಡಿದರು. ಆ ಸಭೆಯಲ್ಲಿ ಏನಾಯಿತು? ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಏನು ಚರ್ಚೆ ನಡೆಯಿತು ಎಂದು ಸುದ್ದಿಗಾರರು ಪದೇಪದೆ ಪ್ರಶ್ನೆ ಹಾಕಿದರೂ ಡಿಸಿಎಂ ತುಟಿ ಬಿಚ್ಚಲಿಲ್ಲ.
ನಂಜಾವಧೂತ ಶ್ರೀಗಳನ್ನು ಭೇಟಿಯಾದ ಡಿಸಿಎಂ.
ಶ್ರೀಗಳ ಭೇಟಿ ಮಾಡಿದ ಡಿಸಿಎಂ
ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರೊಂದಿಗೆ ಪಟ್ಟನಾಯಕನಹಳ್ಳಿಗೆ ತೆರಳಿ ನಂಜಾವಧೂತ ಶ್ರೀಗಳನ್ನು ಭೇಟಿಯಾದ ಡಿಸಿಎಂ, ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದರು. ಆ ಮಾತುಕತೆ ಬಗ್ಗೆಯೂ ಡಿಸಿಎಂ ಯಾರಿಗೂ ಮಾಹಿತಿ ನೀಡಲಿಲ್ಲ. ಅಲ್ಲಿಗೆ ರಾಜೇಶ್ ಗೌಡರನ್ನು ಕರೆದೊಯ್ದಿದ್ದೂ ಅನೇಕರ ಹುಬ್ಬೇರುವಂತೆ ಮಾಡಿತು. ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಶ್ರೀಗಳನ್ನು ಒಬ್ಬೊಬ್ಬರೇ ಭೇಟಿಯಾಗಿ ಚರ್ಚೆ ನಡೆಸಿದ್ದರು. ಆದರೆ ಡಿಸಿಎಂ ಮಾತ್ರ ಪಕ್ಷದ ಅಭ್ಯರ್ಥಿಯನ್ನೂ ಕರೆದುಕೊಂಡು ಹೋಗಿದ್ದು, ಮಾಧ್ಯಮಗಳಿಗೆ ಅಚ್ಚರಿ ಮೂಡಿಸಿತು.
ನೀಲಕಂಠಾಪುರದ ಎಪಿಸೋಡ್
ಕಳೆದ ವಾರ ಶಿರಾಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ; ಆಂಧ್ರದ ಗಡಿಗ್ರಾಮ ನೀಲಕಂಠಾಪುರಕ್ಕೆ ತೆರಳಿ ಆಂಧ್ರ ಕಾಂಗ್ರೆಸ್ಸಿನ ಪ್ರಭಾವೀ ಮುಖಂಡ ಹಾಗೂ ಯಾದವ ಸಮುದಾಯದ ಬಲಿಷ್ಠ ನಾಯಕ ರಘುವೀರಾ ರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಭೇಟಿಯಂತೂ ಎಲ್ಲರ ಕಣ್ತಪ್ಪಿಸಿ ನಡೆದಂತೆ ಆದರೂ ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತ್ತು. ಅಷ್ಟೂ ಅಲ್ಲದೆ, ಡಿಸಿಎಂ ಭೇಟಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ರಘುವೀರಾ ರೆಡ್ಡಿ ಅಭ್ಯರ್ಥಿಗೆ ಶುಭವಾಗಲಿ ಎಂದು ಹಾರೈಸಿದ್ದರು. ಈ ಬೆಳವಣಿಗೆ ತುಮಕೂರು ರಾಜಕೀಯದಲ್ಲಿ ಕಂಪನ ಉಂಟು ಮಾಡಿದ್ದು, ಶಿರಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇ಼ಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕರು ಭೇಟಿಯಾಗಿ ಪ್ರಚಾರಕ್ಕೆ ಆಹ್ವಾನ ನೀಡಿದರೂ ಈವರೆಗೂ ರಘುವೀರಾ, ಶಿರಾ ಕಡೆ ಮುಖ ಮಾಡಿಲ್ಲ. ಟಿ.ಬಿ.ಜಯಚಂದ್ರ ಮತ್ತು ಕೆ.ಎನ್.ರಾಜಣ್ಣ ಕೂಡ ನೀಲಕಂಠಾಪುರ ಯಾತ್ರೆ ಕೈಗೊಂಡರೂ ರೆಡ್ಡಿ ಅವರು ಪ್ರಚಾರಕ್ಕೆ ಬರುವ ಮನಸ್ಸು ಮಾಡಿಲ್ಲ. ಹೀಗಾಗಿ ಅವರು ಪ್ರತಿನಿಧಿಸುವ ಯಾದವ ಸಮುದಾಯ ಬಿಜೆಪಿಗೆ ಕನ್ಸಾಲಿಡೇಟ್ ಆಯಿತಾ? ಎನ್ನುವ ಅನುಮಾನವೂ ಹುಟ್ಟಿಕೊಂಡಿದೆ.
ಒಂದೆಡೆ ಪ್ರಚಾರ; ಇನ್ನೊಂದೆಡೆ ಕಾರ್ಯತಂತ್ರ
ಶಿರಾದಲ್ಲಿ ಒಂದೆಡೆ ಪ್ರಚಾರ ನಡೆಸುತ್ತಲೇ, ಇನ್ನೊಂದೆಡೆ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿಯಾದ ಉಪ ಮುಖ್ಯಮಂತ್ರಿ, ಸರಣಿ ಮಾತುಕತೆ ನಡೆಸಿದರು. ಪಾದಯಾತ್ರೆ ನಡುನಡುವೆಯೇ ಅಲ್ಲಲ್ಲಿ ನಿಂತು ಡಿಸಿಎಂ ಕೆಲವರ ಜತೆ ಮಾತುಕತೆ ನಡೆಸಿದರು. ಅವರ ಪ್ರಚಾರದ ವೇಳೆ ಅತ್ಯಂತ ಗಮನ ಸೆಳೆದ ಅಂಶವಿದು.
ಶುಕ್ರವಾರ ಶಿರಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೇಟಿ ನೀಡಿ ಬೃಹತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಮರುದಿನವೇ ಡಿಸಿಎಂ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಚುನಾವಣಾ ಕಣಕ್ಕೆ ಬೇರೆಯದ್ದೇ ದಿಕ್ಸೂಚಿ ಬಂದಂತೆ ಆಗಿದೆ.
ಅವರದ್ದು ಪ್ರಚಾರ; ಇವರದ್ದು ಸ್ಟ್ರ್ಯಾಟಜಿ
ಹಿರಿಯ ಪತ್ರಕರ್ತರೊಬ್ಬರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳಿದ್ದು ಹೀಗೆ;
“ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಶಿರಾದಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಇವೆರಡೂ ಪಕ್ಷಗಳ ನಡೆಯಲ್ಲಿ ಸಂಘಟನಾತ್ಮಕ ಪ್ರಯತ್ನ ಕಾಣುತ್ತಿಲ್ಲ. ಒಬ್ಬರು ಬಂದರೆ, ಇನ್ನೊಬ್ಬರು ಪಕ್ಕಕ್ಕೆ ಮುಖ ತಿರುಗಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಜಯಚಂದ್ರ-ರಾಜಣ್ಣ-ಪರಮೇಶ್ವರ್ ನಡುವಿನ ಭಿನ್ನಮತ ಶಮನ ಎಂಬುದು ಹೈವಾಶ್ ಅಷ್ಟೇ. ಆ ಆಂತರಿಕ ಬಿಕ್ಕಟ್ಟು ಒಳಗೆ ಹಾಗೆಯೇ ಕುದಿಯುತ್ತಿದೆ. ಇನ್ನು; ಜೆಡಿಎಸ್‌ನಲ್ಲೂ ಇಂಥದ್ದೇ ಸಮಸ್ಯೆ ಇದೆ. ಬಿಜೆಪಿಯಲ್ಲಿ ಒಟ್ಟಾಗಿ ಪ್ರಯತ್ನ ನಡೆಯುತ್ತಿದೆ. ಗೆಲ್ಲಲೇಬೇಕೆಂಬ ಹಠವಿದೆ. ಮುಖ್ಯಮಂತ್ರಿ ಬಂದುಹೋದರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ ಬಂದರು. ಇನ್ನು ವಿಜಯೇಂದ್ರ ಇಲ್ಲೇ ಮೊಕ್ಕಾಂ ಹೂಡಿ ಕೂತಿದ್ದಾರೆ. ಒಟ್ಟಾರೆಯಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಚಾರವನ್ನಷ್ಟೇ ಮಾಡುತ್ತಿದ್ದರೆ, ಬಿಜೆಪಿ ಸ್ಟ್ರ್ಯಾಟಜಿ ಮಾಡುತ್ತಿದೆ. ಎಲೆಕ್ಷನ್‌ಗೆ ಬೇಕಿರುವುದು ಅದೇ ಅಲ್ಲವೇ? ಒಂದು ವೇಳೆ ಬಿಜೆಪಿ ಈ ಕ್ಷೇತ್ರದಲ್ಲಿ ಗೆದ್ದರೆ ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಆಗುತ್ತದೆ. ಇದರ ಪ್ರಭಾವ ಬಯಲುಸೀಮೆಯ 14 ಜಿಲ್ಲೆಗಳ ಮೇಲೂ ಇರುತ್ತದೆ” ಎನ್ನುತ್ತಾರೆ ಅವರು.
***