LEAD PHOTO BY Polina Tankilevitch FROM Pexels
ಡಿಸೆಂಬರ್ ಅಂತ್ಯ, ಮಾರ್ಚ್ ಕೊನೆಯಲ್ಲಿ ಮತ್ತೆ ಸರ್ವೆ
ಬೆಂಗಳೂರು: ರಾಜ್ಯದಲ್ಲಿ ಶೇ.16ರಷ್ಟು ಜನರಲ್ಲಿ ಕೋವಿಡ್ ಪ್ರತಿಕಾಯ ಇದೆ ಎಂಬ ಅಂಶ ಸೆರೋ ಸಮೀಕ್ಷೆಯಿಂದ ಗೊತ್ತಾಗಿದೆ. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆದಿದ್ದು, 843 ಜನ ತಮ್ಮ ಸ್ಯಾಂಪಲ್ಸ್ ನೀಡಿದ್ದಾರೆ.
ಈ ವಿಷಯವನ್ನು ಬೆಂಗಳೂರಿನಲ್ಲಿ ಸುದಿಗೋಷ್ಠಿಯಲ್ಲಿ ತಿಳಿಸಿದ ಡಾ.ಕೆ.ಸುಧಾಕರ್ ಅವರು, ವಿವಿಧ ನಗರಗಳಾದ ಮುಂಬಯಿ, ಪುಣೆ, ದಿಲ್ಲಿ ನಗರಗಳ ಕೆಲ ಪ್ರದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಎಲ್ಲ 30 ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಲಾಗಿದೆ ಎಂದರು.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಎಂಟು ವಲಯಗಳಲ್ಲೂ ಈ ಸಮೀಕ್ಷೆ ನಡೆದಿದೆ. 16,585 ಜನರ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಪರೀಕ್ಷೆ ಮಾಡಲಾಗಿದ್ದು, 15,624 ಮಂದಿಯ ಫಲಿತಾಂಶ ಸಿಕ್ಕಿದೆ. ಈ ಹಿಂದೆ ಹಾಗೂ ಸಮೀಕ್ಷೆ ಮಾಡುವ ಸಮಯದಲ್ಲಿ ಸೋಂಕಿಗೆ ಒಳಗಾಗಿದ್ದವರ ಒಟ್ಟು ಪ್ರಮಾಣವು 27.3%ರಷ್ಟಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಪೈಕಿ ಸಮೀಕ್ಷೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 412 ಹಾಗೂ ಕೋಲಾರ ಜಿಲ್ಲೆಯಲ್ಲಿ 431 ಮಂದಿ ಸ್ಯಾಂಪಲ್ಸ್ ನೀಡಿದ್ದಾರೆ.
ಮುಖ್ಯವಾಗಿ ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಿಸಿ ಪರೀಕ್ಷೆ ನಡೆಸಲಾಗಿದೆ. ಕೊರೊನ ವೈರಸ್ ದೇಹವನ್ನು ಪ್ರವೇಶಿಸಿದಾಗ ಪ್ರತಿರೋಧಕವಾಗಿ ಐಜಿಜಿ ಉತ್ಪತ್ತಿಯಾಗುತ್ತದೆ. ಐಜಿಜಿ ಹೊಂದಿದವರು ಮತ್ತು ಸೋಂಕಿತರನ್ನು ಪತ್ತೆ ಮಾಡುವ ಮೂಲಕ ಈ ಸಮೀಕ್ಷೆಯನ್ನು ಕ್ರಮಬದ್ಧವಾಗಿ ನಡೆಸಲಾಗಿದೆ ಎಂದರು ಸಚಿವರು.
15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ 16.4% ಇದೆ. ಅಂದರೆ ಇಷ್ಟು ಜನರು ಸೋಂಕಿಗೊಳಗಾಗಿ ಗುಣಮುಖರಾಗಿದ್ದಾರೆ. ಈ ಪ್ರಮಾಣ ದೆಹಲಿಯಲ್ಲಿ 29.1%, ಮುಂಬೈ ಸ್ಲಮ್ ರಹಿತ ಪ್ರದೇಶಗಳಲ್ಲಿ 16% ಹಾಗೂ ಸ್ಲಮ್ ಗಳಲ್ಲಿ 57%, ಪುಣೆಯ 5 ಪ್ರದೇಶಗಳಲ್ಲಿ 36.1 ರಿಂದ 65.4%, ಇಂದೋರ್ ನಲ್ಲಿ 7.8%, ಪುದುಚೆರಿಯಲ್ಲಿ 22.7%, ಚೆನ್ನೈನಲ್ಲಿ 32.3% ಇದೆ. 15,624 ಜನರಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ 12.7% ರಷ್ಟಿದೆ ಎಂದು ಅವರು ವಿವರವಾದ ಮಾಹಿತಿ ನೀಡಿದರು.
ಸಮೀಕ್ಷೆ ನಡೆದದ್ದು ಯಾವಾಗ?
ಈ ಸಮೀಕ್ಷೆ 2020ರ ಸೆಪ್ಟೆಂಬರ್ 3ರಿಂದ 16 ರವರೆಗೆ ನಡೆದಿತ್ತು. ಕೋವಿಡ್ ಮರಣ ಪ್ರಮಾಣವನ್ನು ಸೋಂಕಿಗೆ ಒಳಗಾದ ಒಟ್ಟು ಜನರಿಗೆ ಹೋಲಿಸಿದರೆ, ಬಹಳ ಕಡಿಮೆ ಇದೆ. ರಾಜ್ಯದಲ್ಲಿ ಮರಣ ಪ್ರಮಾಣ 0.05% ಇದೆ. ಮುಂಬೈಯಲ್ಲಿ 0.05-0.10%, ಪುಣೆಯಲ್ಲಿ 0.08%, ದೆಹಲಿಯಲ್ಲಿ 0.09%, ಚೆನ್ನೈನಲ್ಲಿ 0.13% ಮರಣ ಪ್ರಮಾಣವಿದೆ. ಇದೇ ರೀತಿ ಡಿಸೆಂಬರ್ ಅಂತ್ಯದಲ್ಲಿ ಒಂದು ಹಾಗೂ ಮಾರ್ಚ್ ಅಂತ್ಯಕ್ಕೆ ಮತ್ತೊಂದು ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು.
ಹೆಚ್ಚು ಪರೀಕ್ಷೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿ ಮಾಡಲು ಈ ಸರ್ವೆ ನೆರವಾಗಲಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ. ಗುಣಮುಖರ ಪ್ರಮಾಣ 95%. ದೀಪಾವಳಿ ಆಚರಣೆಗೆ ಸಂಬಂಧಿಸಿದಂತೆ ವರದಿ ನೀಡಲು ತಜ್ಞರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಪಟಾಕಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಆರೋಗ್ಯದ ನಿಗಾ ಇರಿಸಲು ಪುನರ್ವಸತಿ ಕೇಂದ್ರ ಆರಂಭಿಸಲಾಗುವುದು ಎಂದು ಡಾ.ಸುಧಾಕರ್ ಹೇಳಿದರು.
ಏನಿದು ಐಜಿಜಿ?
ಐಜಿಜಿ ಎನ್ನುವುದು ಇಮ್ಯುನೊಗ್ಲೋಬಿಲಿನ್‌ಗಳ ಒಂದು ವರ್ಗ. ಮಾನವನ ದೇಹದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ಪ್ರತಿಕಾಯ ಇದಾಗಿದೆ. ಇದು ದೇಹಕ್ಕೆ ಪ್ರವೇಶಿಸಿದ ರೋಗಕಾರಕ ಅಣುಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಕೋವಿಡ್ ಸರ್ವೆ ಸಮಿತಿಯ ಮುಖ್ಯಸ್ಥ ಡಾ.ಗಿರಿಧರ ಬಾಬು ಉಪಸ್ಥಿತರಿದ್ದರು.