ಬೆಂಗಳೂರು: ಲವ್ ಮಾಕ್ಟೇಲ್ ಫೇಮ್ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ʼಶುಗರ್ ಫ್ಯಾಕ್ಟರಿʼ ಎಂದು ಹೆಸರಿಡಲಾಗಿದ್ದು, ಕೃಷ್ಣ ಅವರಿಗೆ ನಾಯಕಿಯಾಗಿ ಪಂಚರಂಗಿ ಬೆಡಗಿ ಸೋನಲ್ ಮಾಂಥೆರೊ ನಟಿಸುತ್ತಿದ್ದಾರೆ.
ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದು, ಈ ಹಿಂದೆ ಅವರು ʼಮನಸಾಲಜಿʼ ಎಂಬ ಸಿನಿಮಾ ನಿರ್ದೇಶಿಸಿದ್ದರು. ಇದು ಅವರಗೆ ಎರಡನೇ ಚಿತ್ರ. ಅಂದಹಾಗೆ, ದೀಪಕ್ ಅರಸ್ ಕನ್ನಡದ ಖ್ಯಾತ ನಟಿ ಅಮೂಲ್ಯ ಅವರ ಸಹೋದರ.
ದೀಪಕ್ ಅರಸ್ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ಬಹದ್ದೂರ್ ಚೇತನ್ ಕುಮಾರ್ ಬರೆಯುತ್ತಿದ್ದಾರೆ. ಆರ್. ಗಿರೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಗೋವಾ, ಮೈಸೂರು ಹಾಗೂ ವಿದೇಶಗಳಲ್ಲಿ ಚಿತ್ರೀಕರಣ ಸಾಗಲಿದೆ.
ಚಿತ್ರದಲ್ಲಿ ಆರು ಹಾಡುಗಳಿದ್ದು, ಕಬೀರ್ ರಫಿ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ತಮ್ಮ ಕ್ಯಾಮೆರಾದಲ್ಲಿ ಶುಗರ್ ಫ್ಯಾಕ್ಟರಿ ಯನ್ನು ಸುಂದರವಾಗಿ ಸೆರೆಹಿಡಿಯಲಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಮೂರು ನಾಯಕಿಯರಿದ್ದು, ಸೋನಾಲ್ ಮಾಂಟೆರೊ ಮೊದಲ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನಿಬ್ಬರು ನಾಯಕಿಯರು ಸೇರಿದಂತೆ ಉಳಿದ ತಾರಾಬಳಗದ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.