ಹಂಪಿ: ಶಿಕ್ಷಣ ತಜ್ಞ, ಸಮಾಜ ಸೇವಕ ಡಾ. ವೂಡೇ ಪಿ.ಕೃಷ್ಣ ಹಾಗೂ ಹೆಸರಾಂತ ವೈದ್ಯ ಡಾ.ಹಣಮಂತಪ್ಪ ಗೋವಿಂದಪ್ಪ ದಡ್ಡಿ (ಎಚ್.ಎಂ.ದಡ್ಡಿ) ಅವರು ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವಕ್ಕೆ ಪಾತ್ರರಾಗಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ʼಮಂಟಪʼ ಸಭಾಂಗಣದಲ್ಲಿ ಮಂಗಳವಾರ ನಡೆದ 20ನೇ ನುಡಿಹಬ್ಬದಲ್ಲಿ ಈ ಇಬ್ಬರು ಸಾಧಕರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನಾಡೋಜ ಪುರಸ್ಕಾರವನ್ನು ಪ್ರದಾನ ಮಾಡಿದರು. ಜತೆಗೆ, ಅರ್ಹ ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಡಿ.ಲೀಟ್. ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಿ ಶುಭ ಹಾರೈಸಿದರು.
ವೂಡೇ ಕೃಷ್ಣ ಅವರು ಸಮಾಜ ಸೇವೆಯಲ್ಲಿ ಮುಂಚೂಣಿಯ ಹೆಸರಾಗಿದ್ದು, ಮೂಲತಃ ಎಂಜಿನೀಯರಿಂಗ್ ಓದಿದವರು. ಸದ್ಯಕ್ಕೆ ಅವರು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ಪ್ರಧಾಕ ಕಾರ್ಯದರ್ಶಿಯೂ ಆಗಿ ಕೆಲಸ ಮಾಡುತ್ತಿದ್ದಾರೆ.
ಡಾ.ದಡ್ಡಿ ಅವರು ವೈದ್ಯರಾಗಿಯೂ ಸೇವೆ ಸಲ್ಲಿದ್ದಾರಲ್ಲದೆ, ಇದೀಗ ತಮ್ಮದೇ ಆಸ್ಪತ್ರೆ ಕಟ್ಟಿ ಆ ಮೂಲಕ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಸೀಮಿತ ಆಹ್ವಾನಿತರ ನಡುವೆ ನಡೆದ ಈ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಎಸ್.ಸಿ.ಶರ್ಮ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಡಾ.ಡಾ.ಸ.ಚಿ. ರಮೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ವಿರೂಪಾಕ್ಷ ದೇವರ ದರ್ಶನ
ಇದಕ್ಕೂ ಉಪ ಮುಖ್ಯಮಂತ್ರಿಗಳು ಹಂಪಿಯ ಜಗದ್ವಿಖ್ಯಾತ ವಿರೂಪಾಕ್ಷ ದೇಗುಲಕ್ಕೆ ತೆರಳಿ ಶ್ರೀ ವಿರೂಪಾಕ್ಷ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಅವರು ಉಪ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ಪೂಜೆ ನಂತರ ಡಿಸಿಎಂ ಅವರು ದೇಗುಲವನ್ನು ಹಾಗೂ ಆ ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.