ಬೆಂಗಳೂರು: ಉಪ ಚುನಾವಣೆಯ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಒಂದಿಷ್ಟೂ ಬೇಸ್ ಇಲ್ಲದ ಶಿರಾದಲ್ಲೂ ಕಮಲ ಅರಳಿರುವುದು ಆ ಪಕ್ಷದ ಹುಮ್ಮಸ್ಸು ಮತ್ತಷ್ಟು ಇಮ್ಮಿಡಿಸುವಂತೆ ಮಾಡಿದೆ.
ಆಪರೇಷನ್ ಕಮಲಕ್ಕೆ ಸಿಕ್ಕಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಮುನಿರತ್ನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಪಕ್ಷದ ಕುಸುಮಾ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮುನಿರತ್ನ, ಡಾ.ರಾಜೇಶ್ ಗೌಡ
ಇನ್ನು; ತುಮಕೂರು ಜಿಲ್ಲೆಯ ಶಿರಾದಲ್ಲಿ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ಎದುರಾದ ಉಪ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಗೆಲುವು ದಾಖಲಿಸಿದ್ದು, ಆ ಪಕ್ಷದ ಹುರಿಯಾಳು ಡಾ.ರಾಜೇಶ್ ಗೌಡ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಉಂಟಾದ ಸೋಲಿನಿಂದ ಕಾಂಗ್ರೆಸ್ ಪಾಳದಲ್ಲಿ ನೀರವ ಮೌನ ಆವರಿಸಿದ್ದರೆ, ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಆರ್‌ಆರ್ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್
ನಿರೀಕ್ಷೆಯಂತೆಯೇ ಮುನಿರತ್ನ ಈ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದು, ಅವರು 1,25,734 ಮತಗಳನ್ನು ಗಳಿಸಿದ್ದರೆ, ಕುಸುಮಾ ಅವರು 67,798 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಗಿದೆ. ಅಂದರೆ; 57,696 ಮತಗಳ ಅಂತರದಿಂದ ಮುನಿರತ್ನ ಗೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಕೇವಲ 10,251 ಮತಗಳನ್ನಷ್ಟೇ ಪಡೆದಿದ್ದಾರೆ. ಅಲ್ಲಿಗೆ ಈ ಕ್ಷೇತ್ರದಲ್ಲಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದಂತೆ ಆಗಿದೆ.
ಕುರುಕ್ಷೇತ್ರದಂಥ ಈ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನು ಎದುರು ಹಾಕಿಕೊಂಡು ಸೆಣಸಿದ್ದ ಮುನಿರತ್ನ, ಬಿಜೆಪಿ ಬೆಂಬಲವಿದ್ದರೂ ಯಾರನ್ನೂ ನೆಚ್ಚಿಕೊಳ್ಳದೇ ತಮ್ಮದೇ ಸ್ವತಂತ್ರ ಕಾರ್ಯತಂತ್ರ ರೂಪಿಸಿಕೊಂಡಿದ್ದರು. ಕಡೇ ಕ್ಷಣದಲ್ಲಿ ಅವರ ಪರ ಚಿತ್ರನಟ ದರ್ಶನ್ ಬಿರುಗಾಳಿಯಂಥ ಪ್ರಚಾರ ನಡೆಸಿದ್ದರು. ಇದು ಅವರಿಗೆ ಪ್ಲಸ್ ಆಗಿದೆ.
ಇನ್ನೊಂದೆಡೆ, ಜ್ಯೋತಿಷಿಗಳ ಮಾತು ನಂಬಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರಿಗೆ ಟಿಕೆಟ್ ಕೊಟ್ಟು, ನೀಚಭಂಗ ಯೋಗವನ್ನು ನೆಚ್ಚಿಕೊಂಡು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದ ಡಿಕೆಶಿ ಹೀನಾಯವಾಗಿ ಮುಗ್ಗರಿಸಿದ್ದಾರೆ. ಆಡಳಿತಾರೂಢ ಬಿಜೆಪಿಯ ಕೊನೆ ಕ್ಷಣದ ಆಟಗಳಿಗೆ ಅಂಕೆ ಹಾಕಲು ಡಿಕೆ ಬ್ರದರ್ಸ್‌ಗೆ ಸಾಧ್ಯವಾಗಿಲ್ಲ. ಇನ್ನು, ಕ್ಷೇತ್ರದಲ್ಲಿ ಜೆಡಿಎಸ್ ಸಾಧನೆ ಅತ್ಯಂತ ನೀರಸವಾಗಿದೆ. ಆ ಪಕ್ಷದ ಮತಗಳಲ್ಲಿ ಸ್ಪಷ್ಟವಾದ ವಿಭಜನೆ ಆಗಿದ್ದು, ಅಂಥ ಮತಗಳೆಲ್ಲವೂ ಮುನಿರತ್ನ ʼಪಾಲಾʼಗಿವೆ.
ಶಿರಾದಲ್ಲಿ ದೋಸ್ತಿಗಳ ಕೋಟೆ ಛಿದ್ರ
ಇನ್ನು ಏಳು ದಶಕಗಳ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿರಾದಲ್ಲಿ ಕೇಸರಿ ಬಾವುಟ ಹಾರಿದೆ. ಪರಂಪರಾಗತವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಂಚಿಹೋಗಿದ್ದ ಶಿರಾ ಕ್ಷೇತ್ರದಲ್ಲಿ ಕಮಲ ಕೇಕೆ ಹಾಕಿದೆ. ನಾಮಪತ್ರ ಸಲ್ಲಿಕೆಗೆ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಜಂಪ್ ಮಾಡಿದ್ದ ವೈದ್ಯ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿತ್ತು. ಅದರಂತೆ, ರಾಜೇಶ್ 74,552 ಮತ ಗಳಿಸಿ ಗೆಲುವು ಸಾಧಿಸಿದ್ದು, ತಮ್ಮ ಪ್ರತಿಸ್ಪರ್ಧಿ ಟಿ.ಬಿ.ಜಯಚಂದ್ರ ಅವರನ್ನು 12,979 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜಯಚಂದ್ರ 61,573 ಮತಗಳನ್ನು ಗಳಿಸಿದ್ದಾರೆ. ಇನ್ನು ದಿವಂಗತ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರು ೩೫,೯೮೨ ಮತಗಳನ್ನಷ್ಟೇ ಪಡೆದುಕೊಳ್ಳಲು ಸಾಧ್ಯವಾಗಿದೆ.
ಅಬ್ಬರಕ್ಕೆ ಅಂತ್ಯ; ವರ್ಕೌಟ್ ಆಗದ ಸಿಂಪಥಿ
ಎರಡೂ ಕ್ಷೇತ್ರಗಳಲ್ಲಿ ಕಾಮನ್ ಫ್ಯಾಕ್ಟರ್ ಸಿಂಪಥಿಯನ್ನು ಅಭ್ಯರ್ಥಿಗಳು ಪ್ಲೇ ಮಾಡಿದ್ದರು. ಶಿರಾದಲ್ಲಿ ಅಮ್ಮಾಜಮ್ಮ ಅವರು ಅಗಲಿದ ಪತಿ ಹೆಸರೇಳಿಕೊಂಡು ಸೆರಗೊಡ್ಡಿ ಮತ ಕೇಳಿದ್ದರು. ಆರ್‌ಆರ್ ನಗರದಲ್ಲಿ ಕುಸುಮಾ ಕಣ್ಣೀರು ಹಾಕಿಕೊಂಡೇ ಪ್ರಚಾರ ನಡೆಸಿದ್ದರು. ಎರಡೂ ಕಡೆ ಈ ಸಿಂಪಥಿ ಫ್ಯಾಕ್ಟರ್ ಕೆಲಸ ಮಾಡಿಲ್ಲ. ಒಟ್ಟಾರೆ, ಬಿಜೆಪಿ-ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ ರಾಜಕೀಯದಿಂದ ಎರಡೂ ಕ್ಷೇತ್ರಗಳು ಗಂಗೇರಿದ್ದವು. ಆ ಜಿದ್ದಾಜಿದ್ದಿನ ಪೈಪೋಟಿಗೆ ಕೊನೆಗೂ ತೆರೆ ಬಿದ್ದಿದೆ. ಇನ್ನು ಚುನಾವಣಾ ಆಯೋಗ ಫಲಿತಾಂಶವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ವಿಜಯೇಂದ್ರ ಸಂತಸ
ಶಿರಾ ಮತಗಟ್ಟೆಯ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ, “ಈ ಪಕ್ಷದ ಸಂಘಟಿತ ಹೋರಾಟಕ್ಕೆ ಸಂದ ಜಯವಿದು. ನಮ್ಮ ಪಕ್ಷದ ನಾಯಕರೆಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದಾಗಿ ಶಿರಾದಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಅಭಿವೃದ್ಧಿಗೆ ಹಾಗೂ ಯಡಿಯೂರಪ್ಪ ಅವರ ನಾಯಕತ್ವವನ್ನು ಒಪ್ಪಿ ಜನರ ಕೊಟ್ಟಿರುವ ತೀರ್ಪು ಇದಾಗಿದೆ. ಇನ್ನು ಮತದಾನಕ್ಕೆ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೋಲೊಪ್ಪಿಕೊಂಡಿದ್ದವು. ಜಾತಿ ಆಧಾರಿತವಾಗಿ ರಾಜಕಾರಣ ಮಾಡುವುದನ್ನು ಆ ಪಕ್ಷಗಳು ಈಗಲಾದರೂ ಬಿಡಬೇಕು” ಎಂದಿದ್ದಾರೆ.
ಸಾಮೂಹಿಕ ನಾಯಕತ್ವ ಎಂದ ಡಿಸಿಎಂ
ಇನ್ನು ಫಲಿತಾಂಶದ ಬಗ್ಗೆ ಮಾತನಾಡಿರುವ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು; “ಸಾಮೂಹಿಕ ನಾಯಕತ್ವ ಹಾಗೂ ಪಕ್ಷ, ಸರಕಾರದ ಉತ್ತಮ ಕೆಲಸಗಳಿಗೆ ಜನರು ಬೆಂಬಲ ನೀಡಿದ್ದಾರೆ. ನರೇಂದ್ರ ಮೋದಿ ಅವರ ಸರಕಾರದ ಕೆಲಸಗಳು ಮತದಾರರಿಗೆ ಹಿಡಿಸಿವೆ” ಎಂದು ಹಂಪಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.