lead photo: CKPhotography ಸಿಕೆಪಿ@ckpixels
ಬೆಂಗಳೂರು: ಚಿಕ್ಕಬಳ್ಳಾಪುರ ಮತ್ತು ಯಲಹಂಕ ನಡುವೆ ನಿತ್ಯವೂ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿದೆ ಸಿಹಿಸುದ್ದಿ. ಇನ್ನು ಮುಂದೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಅಂದರೆ; ರೈಲು ಸಂಚರಿಸುವ ವೇಗ ಹೆಚ್ಚಲಿದೆ. ಅದೇ ರೀತಿ ಬೆಂಗಳೂರು ವಯಾ ಬಂಗಾರಪೇಟೆ ಮೂಲಕ ಜೋಲಾರ್ ಪೇಟೆಗೆ ಹೋಗುವ ಜೋಲಾರ್ ಪೇಟೆ ಎಕ್ಸ್‌ಪ್ರೆಸ್ ರೈಲಿನ ಸ್ಪೀಡೂ ಏರಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ, 13 ವರ್ಷಗಳ ಬಳಿಕ ಯಲಹಂಕ-ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಇನ್ನು ಮುಂದೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. ಈಗ ಈ ರೈಲುಗಳು ಗಂಟೆಗೆ 75 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುತ್ತಿವೆ. ಈ ವೇಗದ ಬದಲಾವಣೆಯಿಂದಾಗಿ ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ಬರುವ 8 ಕಡೆ ರೈಲುಗಳು ಹೆಚ್ಚಿನ ವೇಗದಲ್ಲಿ ಸಂಚರಿಸಲಿವೆ.
ಸದ್ಯಕ್ಕೆ ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವೆ 46 ಕಿ.ಮೀ ರೈಲು ಮಾರ್ಗವಿದ್ದು, ಪ್ರಯಾಣದ ಅವಧಿ 1 ಗಂಟೆ 15 ನಿಮಿಷ ಬೇಕಾಗುತ್ತದೆ. ಈಗ ರೈಲಿನ ವೇಗಮಿತಿಯನ್ನು ಹೆಚ್ಚಿಸಿದರೆ, ಈ ಮಾರ್ಗದ ಪ್ರಯಾಣದ ಅವಧಿ 45ರಿಂದ 50 ನಿಮಿಷಗಳಾಗುತ್ತದೆ. ದಿನನಿತ್ಯವೂ ಇವೆರಡೂ ಪ್ರದೇಶಗಳ ನಡುವೆ ಓಡಾಡುವ ಪ್ರಯಾಣನಿಕರಿಗೆ ಇದರಿಂದ ಅನುಕೂಲವಾಗಲಿದೆ. ಚಿಕ್ಕಬಳ್ಳಾಪುರದ ಜತೆಗೆ, ನಂದಿ, ಆವತಿ, ದೇವನಹಳ್ಳಿಯಿಂದ ಓಡಾಡುವವರಿಗೆ ಸಹಕಾರಿಯಾಗಲಿದೆ. ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತವೆ.
ಇದರೊಂದಿಗೆ ಬೆಂಗಳೂರು-ಜೋಲಾರಪೇಟೆ ನಡುವೆ ನಿತ್ಯವೂ ಸಂಚರಿಸುವ ಜೋಲಾರ್ ಪೇಟೆ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ದಿನನಿತ್ಯವೂ ಬೆಂಗಳೂರು-ಬಂಗಾರಪೇಟೆ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜತೆಗೆ, ಮಾಲೂರು, ಟೇಕಲ್‌ನಲ್ಲೂ ಈ ರೈಲಿನ ನಿಲುಗಡೆ ಇದ್ದು, ಇದರಿಂದ ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ ಜನರಿಗೆ ಉಪಯೋಗವಾಗಲಿದೆ.
ಸದ್ಯಕ್ಕೆ 110 ಕಿ.ಮೀ ವೇಗದಲ್ಲಿ ಸ್ಪೀಡ್ ಟೆಸ್ಟ್ ಮಾಡಲಾಗುತ್ತಿದ್ದು, ಗರಿಷ್ಠ 100 ಕಿ.ಮೀ ವೇಗದಲ್ಲಿ ರೈಲುಗಳು ಸಂಚರಿಸಲಿವೆ. ಬೈಯ್ಯಪ್ಪನಹಳ್ಳಿ-ಧರ್ಮಾವರಂ, ಪೆನುಕೊಂಡ- ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ- ಧರ್ಮಾವರಂ, ಕೆಎಸ್ಆರ್ ಬೆಂಗಳೂರು-ಜೋಲಾರ್ ಪೇಟೆ (ಡಬಲ್ ಟ್ರ್ಯಾಕ್), ಯಶವಂತಪುರ-ತುಮಕೂರು (ಡಬಲ್ ಟ್ರ್ಯಾಕ್), ಯಶವಂತಪುರ-ತುಮಕೂರು (ಡಬಲ್ ಟ್ರ್ಯಾಕ್) ಹಾಗೂ ಬೀರೂರು-ಚಿಕ್ಕಜಾಜೂರು ಮಾರ್ಗಗಳಲ್ಲಿ 110 ಕಿ.ಮೀ ವೇಗದಲ್ಲಿ ಸಂಚರಿಸಲು ಅನುಮತಿ ಇದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.