lead photo: @NitishKumar@NitishKumar
ಪಟನಾ: ಭಾರತದ ಮಟ್ಟಿಗೆ ಅಮೆರಿಕ ಚುನಾವಣೆಯಷ್ಟೇ ಮಹತ್ತ್ವ ಪಡೆದುಕೊಂಡಿದ್ದ ಬಿಹಾರದ ಫೈನಲ್ ಫಲಿತಾಂಶ ಬುಧವಾರ ಬೆಳಗಿನ ಜಾವ 3 ಆದರೂ ಹೊರಬೀಳಲಿಲ್ಲ. ಆದರೆ, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಸರಕಾರ ರಚನೆಯತ್ತ ಹೆಜ್ಜೆ ಇಟ್ಟಿದೆ. ಇನ್ನು; ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನ್ ಕೂಡ ಉತ್ತಮ ಸಾಧನೆ ಮಾಡಿದ್ದು, ಪ್ರಬಲ ವಿರೋಧಿ ಕೂಟವಾಗಿ ಹೊರಹೊಮ್ಮಿದೆ.
ಆಲ್‌ಮೋಸ್ಟ್ ಮಹಾ ಘಟಬಂಧನ್ ಈ ಬಾರಿ ಸರಕಾರ ರಚಿಸುವುದು ಪಕ್ಕಾ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಆದರೆ, ಗೆಲುವಿನಲ್ಲಿ ಘಟಬಂಧನ್ ಮತ್ತು ಎನ್‌ಡಿಎ ನಡುವೆ ನೆಕ್ ಟು ನೆಕ್ ಫೈಟ್ ನಡೆದಿತ್ತು. ಪರಿಣಾಮವಾಗಿ ಘಟಬಂಧನ್‌ಗಿಂತ 9 ಕ್ಷೇತ್ರಗಳಲ್ಲಿ ಎನ್‌ಡಿಎ ಮುಂದಿತ್ತು. ಮುಂದಿನ ದಿನಗಳಲ್ಲಿ ಘಟಬಂಧನ್ ಸಿಕ್ಕ ಜಯ ರಾಷ್ಟ್ರ ಮತ್ತು ಪ್ರಾದೇಶಿಕ ರಾಜಕಾರಣದಲ್ಲಿ ಹೊಸ ಸಮೀಕರಣಕ್ಕೆ ನಾಂದಿಯಾಗಬಹುದು.
ಈ ಸುದ್ದಿ ಬರೆಯುವ ಹೊತ್ತಿಗೆ (ಬುಧವಾರ ಬೆಳಗಿನ ಜಾವ 3) ಚುನಾವಣಾ ಆಯೋಗದ ವೆಬ್‌ಸೈಟ್ ಗೋಡೆಯ ಮೇಲೆ ಪ್ರಕಟಿಸಿದ್ದ ಸಂಖ್ಯಾಲೆಕ್ಕದ ಪ್ರಕಾರ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆದ್ದತು. ಇನ್ನು ಬಿಜೆಪಿ ಲೀಡ್‌ನಲ್ಲಿದ್ದ ಎರಡು ಕ್ಷೇತ್ರ ಸೇರಿ 74 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಇನ್ನು ಕಾಂಗ್ರೆಸ್ ಪಕ್ಷವು ಲೀಡ್‌ನಲ್ಲಿದ್ದ ಒಂದು ಕ್ಷೇತ್ರ ಸೇರಿ 19 ಕಡೆ ಜಯಶಾಲಿಯಾಗಿದೆ. ಉಳಿದಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ 43 ಕ್ಷೇತ್ರಗಳಲ್ಲಿ ಜಯಿಸಿತು.
ರಾಜ್ಯದಲ್ಲಿರುವ 7.3 ಕೋಟಿ ಮತದಾರರ ಪೈಕಿ 4.16 ಕೋಟಿ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 243 ಸದಸ್ಯರಿರುವ ಅಸೆಂಬ್ಲಿಯಲ್ಲಿ ಸಿಂಪಲ್ ಮೆಜಾರಿಟಿಗೆ 122 ಕ್ಷೇತ್ರಗಳನ್ನು ಗೆದ್ದರೆ ಸಾಕು. ಆದರೆ ಎನ್‌ಡಿಎ ಸದ್ಯಕ್ಕೆ ಘಟಬಂಧನ್‌ಗಿಂತ ಕೊಂಚ ಮುಂದೆ ಇದೆ. ಅಂತಿಮ ಫಲಿತಾಂಶ ಹೊರಬರುವ ಹೊತ್ತಿಗೆ ಸಂಖ್ಯಾಬಲದಲ್ಲಿ ಯಾರಿಗೆ ಬೇಕಾದರೂ ಹೊಡೆತ ಬೀಳಬಹುದು. ಸುಮಾರು 3,755 ಅಭ್ಯರ್ಥಿಗಳು ಕಣಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.
@TejashwiYadav@yadavtejashwi
ಜೆಡಿಯುಗೆ ಭಾರೀ ಹೊಡೆತ
ಎನ್‌ಡಿಎ ದೊಡ್ಡಣ್ಣನಂತೆ ಬಿಹಾರದಲ್ಲಿ ಚಕ್ರ ತಿರುಗಿಸಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ದೊಡ್ಡ ನಷ್ಟವನ್ನೇ ಅನುಭವಿಸಿದೆ. ಅದು ಸ್ಪರ್ಧಿಸಿದ್ದ ಒಟ್ಟು 115 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಲ್ಲಿ ಮಾತ್ರ ದಡ ಸೇರಿದೆ. ಹಾಗೆ ನೋಡಿದರೆ 110 ಕಡೆ ಕಣದಲ್ಲಿದ್ದ ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದು ಮಿತ್ರಪಕ್ಷ ಜೆಡಿಯುಗೇ ಶಾಕ್ ನೀಡಿದೆ. ಇನ್ನು 11 ಕಡೆ ಕಣದಲ್ಲಿದ್ದ ವಿಕಾಶೀಲ್ ಇನ್ಸಾನ್ ಪಾರ್ಟಿ 4 ಸ್ಥಾನಗಳನ್ನು ಜಯಿಸಿದೆ. ಹಾಗೆಯೇ 7 ಸೀಟುಗಳಲ್ಲಿ ಸ್ಪರ್ಧಿಸಿದ್ದ ಹಿಂದೂಸ್ತಾನಿ ಅವಾಮ್ ಮೋರ್ಚಾ ಅಚ್ಚರಿ ಎಂಬಂತೆ 4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಅಲ್ಲಿಗೆ ಎನ್‌ಡಿಎ ಮೈತ್ರಿಕೂಟ ಒಟ್ಟು 124 ಕ್ಷೇತ್ರಗಳಲ್ಲಿ ಗೆದ್ದು ಸರಳ ಬಹುಮತಕ್ಕಿಂತ 2 ಸೀಟು ಜಾಸ್ತಿ ಗೆದ್ದಿದೆ.
ಮೊದಲು ಬೀಗಿ ನಂತರ ಮುಗ್ಗರಿಸಿದ ಘಟಬಂಧನ್
ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್ ಕಡೆ ಬಂದರೆ; 144 ಕ್ಷೇತ್ರಗಳಲ್ಲಿ ಅಧಿಕಾರಕ್ಕೆ ಬಂದು ಸಿಎಂ ಕುರ್ಚಿ ಏರಲೇಬೇಕೆಂದು ಸೆಣಸಿದ ತೇಜಸ್ವಿ ಯಾದವ್ ಅವರ ಆರ್‌ಜೆಡಿ 75 ಕ್ಷೇತ್ರಗಳಲ್ಲಿ ಗೆದ್ದಿದೆ. ಇನ್ನು ಅಸ್ತಿತ್ವಕ್ಕಾಗಿ ಒದ್ದಾಡುತ್ತಿದ್ದ ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಕಣಕ್ಕಿಳಿದು 19 ಕಡೆ ಗೆದ್ದು ಸ್ವಲ್ಪಮಟ್ಟಿಗೆ ಸಮಾಧಾನಕರ ಸ್ಥಿತಿಯಲ್ಲಿದೆ. ಇದಾದ ಮೇಲೆ ಸಿಪಿಐ (ಎಂಎಲ್) 19 ಕಡೆ ನಿಂತು 12 ಕ್ಷೇತ್ರಗಳಲ್ಲಿ ಅದ್ಭುತ ಎನಿಸುವಷ್ಟು ಸಾಧನೆ ಮಾಡಿದೆ. ಆದರೆ, ತಲಾ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಪಿಐ ಮತ್ತು ಸಿಪಿಐಎಂ ಪಕ್ಷಗಳು ಸಮಾನತೆ ಇರಲೋ ಎಂಬಂತ ತಲಾ 2 ಕ್ಷೇತ್ರಗಳಲ್ಲಿ ಗೆದ್ದಿವೆ.
ಇವೆರಡೂ ಮೈತ್ರಿಕೂಟಗಳನ್ನು ಬಿಟ್ಟು ಸಿಂಗಲ್ಲಾಗಿ ಸ್ಪರ್ಧಿಸಿದ್ದ ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೆದುಲ್ ಮುಸ್ಲಿಮೀನ್ 5 ಕಡೆ, ಬಿಎಸ್‌ಪಿ 1 ಕ್ಷೇತ್ರದಲ್ಲಿ, ಒಂದು ಕಡೆ ಪಕ್ಷೇತರರೊಬ್ಬರು ಜಯಶಾಲಿಯಾಗಿದ್ದಾರೆ.
ಚಿರಾಗ್ ಪಾಸ್ವಾನ್ ವಿಫಲ
ಬಿಹಾರದಲ್ಲಿ ಚುನಾವಣೆ ಘೋಷಣೆಯಾದ ಮೇಲೆ ಎಲ್‌ಜೆಪಿ ಪಕ್ಷದ ನಾಯಕ ರಾಮ್‌ವಿಲಾಸ್ ಪಾಸ್ವಾನ್ ಅನಾರೋಗ್ಯದಿಂದ ನಿಧನರಾಗಿದ್ದರು, ಆದರೆ, ರಾಜ್ಯದಲ್ಲಿ ಅವರ ನಿಧನದ ಅನುಕಂಪದ ಅಲೆ ಏಳಲಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲೇ ಇದ್ದರೂ ಒಂದೆಡೆ ಬಿಜೆಪಿಯನ್ನು ಹೊಗಳುತ್ತ, ಇನ್ನೊಂದೆಡೆ ನಿತೀಶ್ ಕುಮಾರ್ ಅವರನ್ನು ತೆಗಳುತ್ತಾ ಸಾಗಿದ ಅವರನ್ನು ಮತದಾರರ ನಂಬಿಲ್ಲ. 137 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆ ಪಕ್ಷವು ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಆದರೆ, ಅವರು ಜೆಡಿಯುಗೆ ಹಲವೆಡೆ ಆಘಾತವನ್ನೇ ನೀಡಿದ್ದಾರೆ.
ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಸುದ್ದಿಗಾರರ ಜತೆ ಮಾತನಾಡಿದ ಚುನಾವಣಾ ಆಯೋಗದ ಅಧಿಕಾರಿಗಳು; “ಇನ್ನೂ ಅಂತಿಮ ಟ್ಯಾಲಿ ನಡೆಯುತ್ತಿದೆ. ಬಹುಶಃ ಎರಡೂವರೆ ಗಂಟೆ ಹೊತ್ತಿಗೆ ಅಂತಿಮ ಫಲಿತಾಂಶ ಸಿದ್ಧವಾಗಬಹುದು. ಕ್ಷಣಕ್ಷಣ ಮಾಹಿತಿ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತದೆ. ಇನ್ನು ಬುಧವಾರ ಬೆಳಗ್ಗೆ ನಮ್ಮ ಬ್ರೀಫಿಂಗ್ ಇರುತ್ತದೆ. ಗುಡ್‌ನೈಟ್” ಎಂದ್ಹೇಳಿ ಹೊರಟರು.
ಈ ಸುದ್ದಿ ಬರೆಯುವ ಹೊತ್ತಿಗೆ ಪಕ್ಷಗಳ ಬಲಾಬಲ ಹೀಗಿತ್ತು
1.ಆಲ್ ಇಂಡಿಯಾ ಮಜ್ಲೀಸ್ ಇ ಇತ್ತೆದುಲ್ ಮುಸ್ಲಿಮೀನ್ / 05
2.ಬಹುಜನ ಸಮಾಜ ಪಕ್ಷ / 01
3.ಭಾರತೀಯ ಜನತಾ ಪಕ್ಷ / 74
4.ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) / 02
5.ಭಾರತೀಯ ಕಮ್ಯುನಿಸ್ಟ್ ಪಕ್ಷ/ಮಾರ್ಕ್ಸ್‌ವಾದಿ (ಸಿಪಿಎಂ) / 02
6.ಭಾರತೀಯ ಕಮ್ಯುನಿಸ್ಟ್ ಪಕ್ಷ (ಎಂಎಲ್) / 12
7.ಹಿಂದೂಸ್ತಾನ್ ಆವಾಮ್ ಮೋರ್ಚಾ (ಸೆಕ್ಯೂಲರ್) / 04
8.ಪಕ್ಷೇತರ / 01
10.ಕಾಂಗ್ರೆಸ್ / 19
11.ಸಂಯುಕ್ತ ಜನತಾದಳ (ಜೆಡಿಯು) / 43
12.ಲೋಕ್ ಜನಶಕ್ತಿ ಪಕ್ಷ (ಎಲ್‌ಜೆಪಿ) / 01
13.ರಾಷ್ಟ್ರೀಯ ಜನತಾದಳ (ಆರ್‌ಜೆಡಿ) / 75
14.ವಿಕಾಶೀಲ್ ಇನ್ಸಾನ್ / 04
courtesy: election commission of india