ಎರಡೂ ಜಿಲ್ಲೆಗಳ ಡಿಸಿಸಿ ಬ್ಯಾಂಕ್-ಕೋಮುಲ್ ಪ್ರತ್ಯೇಕಗೊಳಿಸಲಾಗುವುದು ಎಂದ ಡಾ.ಸುಧಾಕರ್
ಚಿಕ್ಕಬಳ್ಳಾಪುರ: 11 ವರ್ಷಗಳ ಹಿಂದೆ ರಚನೆಯಾದ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಲವಾರು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಎರಡೂ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ʼ ಅನ್ನು ಪ್ರತ್ಯೇಕಗೊಳಿಸಿ ಪ್ರತ್ಯೇಕ ಆಡಳಿತ ಮಂಡಳಿ ರಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡೂ ಜಿಲ್ಲೆಗಳಲ್ಲಿ ಅನೇಕರ ರೈತರು ಕೃಷಿಯ ಜತೆಯಲ್ಲೇ ಅನೇಕ ಉಪಕಸುಬುಗಳನ್ನು ಮಾಡುತ್ತಿದ್ದಾರೆ. ಇಂತಹ ರೈತರೆಲ್ಲರಿಗೂ ಹೆಚ್ಚಿನ ಆರ್ಥಿಕ ಶಕ್ತಿ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ ಅನ್ನು ಪ್ರತ್ಯೇಕಿಸಿದರೆ ಎರಡೂ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಮುಖ್ಯವಾಗಿ ಹೊಸ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಅನುಕೂಲವಾಗುತ್ತದೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಮಾಡಲಾಗುವುದು. ಇದರಿಂದ ರೈತರು ಬೆಳೆಯುವ ಬೆಳೆಗಳಿಗೆ ರಕ್ಷಣೆ ಸಿಗಲಿದೆ ಎಂದು ಸಚಿವರು ಹೇಳಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಸಂಸದ ಬಚ್ಚೇಗೌಡ, ಜಿಲ್ಲಾಧಿಕಾರಿ ಲತಾ ಮುಂತಾದವರು ಪಾಲ್ಗೊಂಡಿದ್ದರು.
***
ಇಲಾಖೆಗಳ ನಡುವೆ ಸಮನ್ವಯ
ರಾಜ್ಯದ ಎಲ್ಲ ಇಲಾಖೆಗಳ ನಡುವೆ ಸಮನ್ವಯ ತಂದು ರೈತರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಪ್ರಯೋಗ ಮಾಡಬೇಕು ಎಂದ ಅವರು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ತಂಡ ರಚಿಸಿ, ಎಲ್ಲ ಇಲಾಖೆಗಳ ಸಮನ್ವಯವನ್ನು ಮಾಡಿ, ರೈತರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಸಮನ್ವಯದಿಂದ ಸೂಕ್ತವಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಸಹಕಾರ ಎಂದರೆ ಆರ್ಥಿಕ ಸಮೃದ್ಧಿ. ಕುಟುಂಬ ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿಯಾಗುತ್ತದೆ. ರಾಜ್ಯದ ಬಹುಪಾಲು ಜನರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವ್ಯಕ್ತಿ ಸಹಕಾರದಿಂದ ಮುಂದೆ ಬಾರಲು ಸಾಧ್ಯ ಎಂಬುದನ್ನು ತೋರಿಸಿಕೊಡಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ. ಆರ್ಥಿಕ ಪರಿಹಾರ ಪ್ಯಾಕೇಜ್ ನೀಡಿದ್ದಾರೆ. ಯಾವ ದೇಶವೂ ಇಷ್ಟು ಮೊತ್ತದ ಪರಿಹಾರವನ್ನು ನೀಡಿಲ್ಲ. ರಾಜ್ಯದಲ್ಲಿ ಕಳೆದ ವರ್ಷ ರೈತರಿಗೆ 13 ಸಾವಿರ ಕೋಟಿ ರೂ. ಸಾಲ ನೀಡಲಾಗಿತ್ತು. ಈ ಬಾರಿ 15 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಕೊರೊನಾ ಬಂದರೂ ಸಾಲದ ಗುರಿಯನ್ನು ಇನ್ನೂ ಹೆಚ್ಚಿಸಲಾಗಿದೆ. ಇದು ರಾಜ್ಯ ಸರ್ಕಾರದ ಬದ್ಧತೆಗೆ ಹಿಡಿದ ಕೈಗನ್ನಡಿ ಎಂದು ಅವರು ಹೇಳಿದರು.
ಮುಂದಿನ ಮೂರು ವರ್ಷದಲ್ಲಿ ರೈತರ ಆದಾಯ ದ್ವಿಗುಣಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಅದಕ್ಕೆ ಪೂರಕವಾಗಿ ನೀತಿಗಳನ್ನು ತರಲಾಗಿದೆ. ರಾಜ್ಯದಲ್ಲಿ ರೈತರು ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಎಪಿಎಂಸಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಆದರೆ ಇದನ್ನು ದಲ್ಲಾಳಿಗಳು ವಿರೋಧ ಮಾಡುತ್ತಿದ್ದಾರೆ. ತೂಕದಲ್ಲಿ ಯಾಮಾರಿಸುವ, ಬೆಲೆ ನಿರ್ಧಾರ ಮಾಡುವ ದಲ್ಲಾಳಿಗಳು ಉತ್ತಮ ಆದಾಯ ಹೊಂದುತ್ತಿದ್ದರು. ಇದನ್ನು ನೋಡಿ ನಮ್ಮ ಸರ್ಕಾರ ರೈತಪರ ತಿದ್ದುಪಡಿ ಮಾಡಿದೆ ಎಂದು ವಿವರಿಸಿದರು.
ಲಾಕ್‌ಡೌನ್‌ನಿಂದ ಉತ್ತಮ ಫಲಿತಾಂಶ
ಅಭಿವೃದ್ಧಿ ಸಾಧಿಸಿದ ಹಾಗೂ ಕಡಿಮೆ ಜನಸಂಖ್ಯೆಯ ಅಮೆರಿಕದಲ್ಲಿ ಪ್ರತಿದಿನ ಲಕ್ಷಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 44 ಲಕ್ಷಕ್ಕಿಂತ ಕಡಿಮೆ ಇದೆ. ಲಾಕ್ʼಡೌನ್ ಮಾಡುವ ನಿರ್ಧಾರವನ್ನು ಮೊದಲು ನಮ್ಮಲ್ಲೇ ಕೈಗೊಳ್ಳಲಾಯಿತು. ಲಾಕ್ʼಡೌನ್ ನಿಂದ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ವಿದೇಶಿ ಪತ್ರಿಕೆಗಳೇ ಶ್ಲಾಘಿಸಿವೆ ಎಂದು ಆರೋಗ್ಯ ಸಚಿವರು ಹೇಳಿಕೊಂಡರು.
ನೆಲ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ
ಒಂದು ಸಮುದಾಯದ ಅಭಿವೃದ್ಧಿಗೆ ಕ್ರಮ ಕೈಗೊಂಡರೆ ತಪ್ಪಲ್ಲ. ಪ್ರತಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ನೀಡಿದರೆ ಆ ಸಮುದಾಯಕ್ಕೆ ಶಕ್ತಿ ಸಿಗುತ್ತದೆ. ಸ್ಥಳೀಯ ಬೇಡಿಕೆ, ಸಮಸ್ಯೆ ಪರಿಗಣಿಸಿ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದು, ಇದರಿಂದ ಕನ್ನಡಿಗರಿಗೆ ಯಾವುದೇ ಅನ್ಯಾಯ ಆಗಿಲ್ಲ. ಆದ್ದರಿಂದ ಯಾರೂ ತಪ್ಪು ಗ್ರಹಿಕೆ ಮಾಡುವುದು ಬೇಡ. ಭಾಷೆ, ಜಲ, ನೆಲದ ವಿಚಾರದಲ್ಲಿ ಬಿಜೆಪಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪರೋಕ್ಷವಾಗಿ ಮರಾಠ ಪ್ರಾಧಿಕಾರ ರಚನೆಯ ಬಗ್ಗೆ ಡಾ.ಕೆ.ಸುಧಾಕರ್ ಹೇಳಿದರು.
***
ಮೇಲಿನ ಚಿತ್ರದ ಶೀರ್ಷಿಕೆ
ದ್ರಾಕ್ಷಿ; ಚಿಕ್ಕಬಳ್ಳಾಪುರ ಜಿಲ್ಲೆ ರೈತರು ಬೆಳೆಯುವ ಪ್ರಮುಖ ಬೆಳೆ. ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಹೆಚ್ಚಾಗಿ ಸ್ಥಾಪನೆ ಮಾಡುವುದರಿಂದ ಈ ಹಣ್ಣು ಬೆಳೆಯುವ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ.
Lead Photo: CKPhotography ಸಿಕೆಪಿ@ckpixels