#CKNEWSNOWEXCLUSIVE
BY PK CHANNAKRISHNA & KAVITHA HG
ಸೂಪರ್‌ಸ್ಟಾರ್ ರಜನೀಕಾಂತ್ ಅವರ ಜನಪ್ರಿಯ ಡೈಲಾಗ್‌ವೊಂದು ಇದೆ. ಅವರು ನಿಜಜೀವನದಲ್ಲೂ ಅನೇಕ ಸಲ ಇದನ್ನು ಹೇಳಿದ್ದಾರೆ. ಹಾಗೆಯೇ, ಬೆಳ್ಳಿತೆರೆಯ ಮೇಲೂ ಪಾತ್ರಧಾರಿಯಾಗಿ ಹಲವು ಬಾರಿ ಹೇಳಿದ್ದಾರೆ.
“ಲೈಫಿನಲ್ಲಿ ಏನು? ಯಾವಾಗ? ಹೇಗೆ ನಡೆಯುತ್ತದೆ? ಎಂದು ಹೇಳಲು ಸಾಧ್ಯವೇ ಇಲ್ಲ. ಆದರೆ ನಡೆಯಬೇಕಾದದ್ದು ನಡೆದೇ ನಡೆಯುತ್ತದೆ.”
ನಿಜ. ಜೀವನದಲ್ಲಿ ನಡೆಯಬೇಕಾದ್ದು ನಡೆದೇ ನಡೆಯುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಬೇಕಾದರೆ ವಿಧಿ ಎನ್ನಬಹುದು, ಹಣೆಬರಹ ಎನ್ನಬಹುದು ಇಲ್ಲವೇ ನಂಬಿಕೆ ಎಂತಾದರೂ ಭಾವಿಸಬಹುದು. ಹೀಗೆ ರಜನಿ ಡೈಲಾಗ್‌ಗೆ ಸರಿಹೊಂದುವಂಥ ವ್ಯಕ್ತಿಯೊಬ್ಬರನ್ನು ಸಿಕೆನ್ಯೂಸ್ ನೌ ಇಲ್ಲಿ ಪರಿಚಯ ಮಾಡುತ್ತಿದೆ. ಹಾಗಾದರೆ ಅವರು ಯಾರು?
ಹೆಸರು ಆರ್.ಎಂ.ಶ್ರೀನಿವಾಸ್. ಊರು ಬೆಂಗಳೂರಿನ ಹಳೆಯ ಮದ್ರಾಸು ರಸ್ತೆ ಬದಿಯಲ್ಲಿರುವ ಮೇಡಹಳ್ಳಿ. ಕಾಯಕ; ಶಬರಿಮಲೆಯ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಮುಖ್ಯ ಅನೌನ್ಸರ್. ಮಿಗಿಲಾಗಿ ಅಯ್ಯಪ್ಪ ಸ್ವಾಮಿಯ ಪರಮಭಕ್ತ. ಹೆಚ್ಚೂಕಮ್ಮಿ ಗೌತಮ ಬುದ್ಧನ ಶಿಷ್ಯ *ಅಂಗುಲೀಮಾಲನಂತೆ ( *ಗಮನಿಸಿ; ಅಂಗುಲೀಮಾಲನಿಗೆ ಇವರನ್ನು ಒಂದು ರೂಪಕದಂತೆ ಮಾತ್ರ ಹೋಲಿಸಲಾಗಿದೆ. ಅವನಂತೆ ಇವರು ಕೊಲೆ, ಕಳುವು ಮಾಡಿದವರು ಎಂದರ್ಥವಲ್ಲ) ದಿಕ್ಕುತಪ್ಪಿ ಬದುಕಿದ ಈ ವ್ಯಕ್ತಿ ಸತತ ಮೂವತ್ತು ವರ್ಷ ನಿರಂತರ ಮದ್ಯವ್ಯಸನಿ! ಅದೂ ಸಾಲದೆಂಬಂತೆ ಮಾದಕ ವಸ್ತುಗಳಿಗೆ ದಾಸಾನುದಾಸ!! ಆದರೆ ಈಗ, ಅದೇ ಅಂಗುಲೀಮಾಲನಂತೆಯೇ ಸಾತ್ವಿಕ ಜಗತ್ತಿಗೆ ಹೊರಳಿದ ಇವರ ಬದುಕೇ ರೋಚಕ. ಶ್ರೀನಿವಾಸ್ ಜತೆ ಸಿಕೆನ್ಯೂಸ್ ನೌ ನಡೆಸಿದ ಮಾತುಕತೆ ಇಲ್ಲಿದೆ.
ಮೇಡಹಳ್ಳಿಯಿಂದ ಶಬರಿಮಲೆಯ ಸನ್ನಿಧಾನಕ್ಕೆ ಈ ಪಯಣ ಹೇಗೆ?
ನನ್ನ ಹಿಂದಿನ ದಾರಿಯನ್ನು ಈಗೊಮ್ಮೆ ನೋಡಿಕೊಂಡರೆ ನನಗೆ ಈಗಲೂ ಎಣಿಸಲಾರದಷ್ಟು ಆಶ್ಚರ್ಯವಾಗುತ್ತದೆ. ಕಳೆದುಹೋದ ಆ ದಿನಗಳನ್ನು ನೆನಪು ಮಾಡಿಕೊಂಡರೆ ಜಿಗುಪ್ಸೆಯೂ ಆಗುತ್ತದೆ. ನೆನಪು ಮಾಡಿಕೊಳ್ಳಬಾರದು ಅಂತ ಅನಿಸುತ್ತದೆ. ಆದರೆ, ಹಳೆಯದನ್ನು ಮರೆಯದೇ, ಅದರಿಂದ ಪಾಠ ಕಲಿತು ವರ್ತಮಾನವನ್ನು ಆನಂದದಿಂದ ಅನುಭವಿಸುತ್ತಿದ್ದೇನೆ. ಈ ಧನ್ಯತೆಯೇ ನನ್ನನ್ನು ಇವತ್ತು ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಸೇರಿಸಿದೆ. ಸ್ವಾಮಿ ಸನ್ನಿಧಿಯಲ್ಲಿ ಸೇವೆ ಮಾಡುತ್ತ ಬರುವ ಅಯ್ಯಪ್ಪ ಸಮದರ್ಶಿಗಳಾದ ಮಾಲಧಾರಿಗಳನ್ನು ನೋಡಿಕೊಂಡು ಪುನೀತನಾಗುತ್ತಿದ್ದೇನೆ.
ಹೇಗೆ ಸಾಧ್ಯವಾಯಿತು ಇದೆಲ್ಲ?
ಇಪ್ಪತ್ತೊಂದು ವರ್ಷಗಳ ಹಿಂದಕ್ಕೆ ಹೋಗಬೇಕು ಆ ಕಥೆಯನ್ನು ತಿಳಿಯಲು. ನನ್ನ ಆತ್ಮದಲ್ಲಿ ಅಯ್ಯಪ್ಪ ಜ್ಯೋತಿ ಬೆಳಗುವ ತನಕ ನಾನೊಬ್ಬ ಪರಮ ಅಯೋಗ್ಯನಾಗಿದ್ದೆ. ವಿಪರೀತ ಎನಿಸುವಷ್ಟು ಮದ್ಯವ್ಯಸನಿ ಆಗಿದ್ದೆ. ಅದೂ ಸಾಲದೆ ಮಾದಕ ವಸ್ತುಗಳಿಗೂ ದಾಸನಾಗಿ ಇಡೀ ಬದುಕನ್ನು ನರಕ ಮಾಡಿಕೊಂಡಿದ್ದೆ. ನಂಬಿದವರಿಗೂ ನರಕ ತೋರಿಸುತ್ತಿದ್ದೆ. ಆಲ್‌ಮೋಸ್ಟ್ ಜೀವನ ಮುಗಿದುಹೋಯಿತು ಎನ್ನುವಷ್ಟು ಅಧೋಗತಿಯಲ್ಲಿದ್ದೆ. ಅಂಥ ಕೆಟ್ಟ ಸಮಯದಲ್ಲಿ ನನ್ನ ಕಣ್ಣಿಗೆ ದೈವದಂತೆ ಕಂಡವರು ಪಿ.ಕೆ.ಕೆ.ಪಣಿಕ್ಕರ್. ಅವರು, ಅಯ್ಯಪ್ಪ ಸೇವಾ ಸಂಘದ ಕರ್ನಾಟಕ ವಿಭಾಗದ ಕಾರ್ಯದರ್ಶಿ ಆಗಿದ್ದರು. ನನ್ನ ಧ್ವನಿಯನ್ನು ಗುರುತಿಸಿದ್ದು ಅವರೇ. ಅಷ್ಟೊತ್ತಿಗೇ ಹಾದಿ-ಬೀದಿಯಲ್ಲಿ ಅವರಿವರ ಎಲೆಕ್ಷನ್ ಪ್ರಚಾರ ಮಾಡುವುದು, ಅಲ್ಲಿ ಸಿಕ್ಕ ಬಿಡಿಗಾಸು ಇಟ್ಟುಕೊಂಡು ಕಂಠಪೂರ್ತಿ ಕುಡಿಯುವುದು, ಸಿಕ್ಕಸಿಕ್ಕ ಕಡೆಯಲ್ಲೆಲ್ಲ ಬಿದ್ದು ಹೊರಳಾಡುವುದು ನನ್ನ ನಿತ್ಯದ ದಿನಚರಿಯಾಗಿತ್ತು.
ಶಬರಿಮಲೆ ಅನೌನ್ಸರ್ ಆಗಿ ಸೇರಿದ್ದು ಹೇಗೆ?
ಪಣಿಕ್ಕರ್ ಅವರು ನನ್ನ ಧ್ವನಿಯನ್ನು ಗುರುತಿಸಿದರು ಎಂದು ಮೊದಲೇ ಹೇಳಿದೆ. ಅದಕ್ಕೊಂದು ಶಕ್ತಿ ಇದೆ ಎಂದು ಮೊದಲು ನನಗೆ ಹೇಳಿದ್ದು ಅವರೇ. ಅದುವರೆಗೂ ನನ್ನ ಧ್ವನಿಯ ಬಗ್ಗೆ ನನಗೇ ನಂಬಿಕೆ ಇರಲಿಲ್ಲ. ಬೇರೆಯರಿಗಂತೂ ಅದು ದೊಡ್ಡ ಸದ್ದಿನ ಗಂಟಲು ಮಾತ್ರವೇ ಆಗಿತ್ತು. ಇಂಥ ಹೊತ್ತಿನಲ್ಲಿ ಪಣಿಕ್ಕರ್ ಅವರು ಹದಿನೈದು ದಿನ ಶಬರಿಮಲೆಯಲ್ಲಿ ಕನ್ನಡ ಭಾಷೆಯ ಉದ್ಘೋಷಕ (ಅನೌನ್ಸರ್)ನಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ನನ್ನನ್ನು ಕೇಳಿದರು. ನಾನೋ, ಆ ಸಂದರ್ಭದಲ್ಲಿ ಬಿಕಾರಿಯಾಗಿಬಿಟ್ಟಿದ್ದೆ. ಬಿಡಿಗಾಸಿಲ್ಲ, ಅಗಳು ಅನ್ನವಿಲ್ಲ. ನನ್ನ ಪಾಲಿಗೆ ಇದು ಸಾಕ್ಷಾತ್ ಅಯ್ಯಪ್ಪನೇ ಕೊಟ್ಟ ಅವಕಾಶ ಎನಿಸಿತು. ಹೊರಟೇಬಿಟ್ಟೆ ಶಬರಿಮಲೆಗೆ. ಅದು 2000ನೇ ಇಸವಿ. ಅದೂ ಮಕರವಿಳಕ್ಕು ಸಂದರ್ಭವೇ. ಹದಿನೈದು ದಿನ ಅಂತ ಹೋದರೆ ನಲವತ್ತು ದಿನವಾಯಿತು. ಅದುವರೆಗೂ ನಾನು ಎಲ್ಲಿದ್ದೆ? ಈಗ ಎಲ್ಲಿದ್ದೇನೆ? ಎಂಬುದರ ಅಂತರ ಮೆಲ್ಲ ಮೆಲ್ಲನೇ ಗೊತ್ತಾಗುತ್ತಾ ಹೋಯಿತು. ಮಾಡಿದ್ದ ತಪ್ಪುಗಳು ಶೂಲಗಳಂತೆ ಇರಿಯುತ್ತಿದ್ದವು. ಅಷ್ಟೊತ್ತಿಗೆ ನಾನು ಅಯ್ಯಪ್ಪನಿಗೇ ಶರಣಾಗತೊಡಗಿದ್ದೆ. ಆ ವರ್ಷದ ಮಕರವಿಳಕ್ಕು ಮುಗಿಸಿ ಬೆಂಗಳೂರಿಗೆ ವಾಪಸ್ ಹೊರಡುವಾಗ ಸನ್ನಿಧಾನದ ಪಿಆರ್‌ಓ ವಿಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಹಳಷ್ಟು ಧೈರ್ಯ, ಸ್ಥೈರ್ಯ ತುಂಬಿದರು. ಮುಂದಿನ ವರ್ಷ ತಪ್ಪದೇ ಬನ್ನಿ ಅಂದರು. ನಾನು 2001ರಲ್ಲೂ ಸನ್ನಿಧಾನಕ್ಕೆ ಹೋದೆ. ೬೬ ದಿನ ಅಲ್ಲಿಯೇ ಇದ್ದೆ. ಆಮೇಲೆ ಬದುಕು ಸಣ್ಣದಾಗಿ ಬದಲಾಗತೊಡಗಿತು. ಅಯ್ಯಪ್ಪ ಸೇವೆಯಲ್ಲಿ ನಾನೆಷ್ಟು ಲೀನನಾದೆ ಎಂದರೆ, ತಂದೆ-ತಾಯಿ ತೀರಿಕೊಂಡಾಗಲೂ ನಾನು ಸನ್ನಿಧಾನದಿಂದ ವಿಮುಖನಾಗಲಿಲ್ಲ. ಪಿತೃಕಾರ್ಯದ ಜತೆಗೆ ದೈವಕಾರ್ಯವನ್ನು ಮಾಡಿದೆ. ಆ ಸಂದರ್ಭದಲ್ಲಿ ತಂತ್ರಿಗಳು ಸೂಕ್ತ ಮಾರ್ಗದರ್ಶನ ಮಾಡಿದ್ದರು.
ಮೊದಲ ಕನ್ನಡ ಅನೌನ್ಸರ್ ಆಗಿ ಹೋದಿರಿ. ಈಗ ಎಷ್ಟು ಭಾಷೆಗಳಲ್ಲಿ ಆನೌನ್ಸ್ ಮಾಡುತ್ತಿದ್ದೀರಿ?
ಪಂಚಭಾಷೆಗಳಲ್ಲಿ ನಾನು ಉದ್ಘೋಷ ಮಾಡುತ್ತಿದ್ದೇನೆ. ಕನ್ನಡದ ನಂತರ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಮಾಹಿತಿ ನೀಡುತ್ತಿದ್ದೇನೆ. ನನ್ನ ಈ ಸೇವೆ ಅಯ್ಯಪ್ಪ ಸ್ವಾಮಿಗೆ ಇಷ್ಟವಾಗಿದೆ. ಅದಕ್ಕೆ ಏನೋ ಇನ್ನೂ ಸನ್ನಿಧಾನದಲ್ಲಿ ಸೇವೆ ಮಾಡುತ್ತಿದ್ದೇನೆ.
ಮೂವತ್ತು ವರ್ಷ ಮದ್ಯಕ್ಕೆ ದಾಸರಾಗಿದ್ದ ನೀವು ಅದರಿಂದ ವಿಮುಖರಾಗಿದ್ದು ಯಾವಾಗ?
ಮೂವತ್ತೇಳು ವರ್ಷ ಒಂದು ದಿನವೂ ತಪ್ಪದಂತೆ ಕುಡಿದಿರುವ ನೆನಪಿದೆ. ನನಗೆ ನೆನಪಿದ್ದ ಮಟ್ಟಿಗೆ 1975ರಿಂದಲೇ ಮದ್ಯ ಸೇವನೆ ಶುರು ಮಾಡಿದೆ. 2012ರವರೆಗೂ ನಿರಂತರವಾಗಿ ಕುಡಿದೆ. 2000ರಿಂದ ನಾನು ವರ್ಷಕ್ಕೊಮ್ಮೆ ಮಕರವಿಳಕ್ಕು ಸಂದರ್ಭದಲ್ಲಿ ಅಯ್ಯಪ್ಪ ಸನ್ನಿಧಾನದಲ್ಲಿರುತ್ತಿದ್ದ ಸಂದರ್ಭವನ್ನು ಬಿಟ್ಟರೆ, ಉಳಿದೆಲ್ಲ ಸಮಯದಲ್ಲೂ ಕುಡಿಯುತ್ತಲೇ ಇದ್ದೆ. ಶಬರಿಮಲೆಯಿಂದ ಬೆಂಗಳೂರಿಗೆ ಬಂದ ಕೂಡಲೇ ಮನೆಗೆ ಹೋಗಬೇಕಾಗಿದ್ದವನು ನೇರ ಬಾರ್ ಕಡೆಗೇ ಓಡುತ್ತಿದ್ದೆ. ಸನ್ನಿಧಾನದಲ್ಲಿ ಸಿಗುತ್ತಿದ್ದ ಸಂಭಾವನೆಯನ್ನು ಎಣ್ಣೆಗೆ ಸುರಿದು ಪೋಲು ಮಾಡುತ್ತಿದ್ದೆ. ಅಟ್‌ಲೀಸ್ಟ್ ಮನೆಗೂ ಹೋಗಬೇಕು, ಮಡದಿಯನ್ನೂ ಮಕ್ಕಳನ್ನು ನೋಡಬೇಕು ಎಂದೆನಿಸುತ್ತಿರಲಿಲ್ಲ. ಕುಡಿತದ ಅಮಲಿನಲ್ಲಿ ಹಲಸೂರು ಡಿಪೋ ಪಕ್ಕದಲ್ಲಿರುವ ಸ್ಮಶಾಣದಲ್ಲಿ ಸಮಾಧಿಗಳಿಗೆ ಎಡೆ ಇಡುತ್ತಿದ್ದ ತಿಂಡಿಯನ್ನು ತಿಂದು ಅಲ್ಲಿಯೇ ಮಲಗಿಯೂಬಿಡುತ್ತಿದ್ದೆ. ಹೆಂಡಕ್ಕೆ ಹಣ ಇಲ್ಲದಿದ್ದಾಗ ಅವರಿವರ ಬಳಿ ಸಾಲ ಮಾಡುತ್ತಿದ್ದೆ. ಹೀಗೆ ಎಲ್ಲ ನಾಟಕಗಳು ನಡೆಯುತ್ತಲೇ ಇದ್ದವು. ಇದರ ಜತೆಯಲ್ಲೇ ತಪ್ಪದೇ ವರ್ಷಕ್ಕೊಮ್ಮೆ ಶಬರಿಮಲೆಗೆ ಹೋಗುವುದೂ ನಡೆದಿತ್ತು.
ಹಾಗಾದರೆ, ಈ ಎಲ್ಲ ಅವಾಂತರಗಳಿಗೆ ತೆರೆ ಬಿದ್ದಿದ್ದು ಯಾವಾಗ?
2012. ನನಗೂ ಈ ನಾಟಕಗಳಿಗೆ ತೆರೆ ಎಳೆಯಬೇಕು ಅನಿಸುತ್ತಿತ್ತು. ಆದರೆ ಅದೆಲ್ಲ ಅಂಕೆ ಮೀರಿ ನಿಂತಿತ್ತು. ಆದರೆ ಪ್ರತಿವರ್ಷದ ಅಯ್ಯಪ್ಪ ಸನ್ನಿಧಾನದಲ್ಲಿ ಮಾಡುತ್ತಿದ್ದ ಸೇವೆ ನನ್ನೊಳಗೆ ಬದಲಾವಣೆಗೆ ನಾಂದಿ ಹಾಡಿತೆನ್ನಬಹುದು. ಅದುವರೆಗೆ, ಹನ್ನೆರಡು ವರ್ಷಗಳ ನಿರಂತರ ಶಬರಿಮಲೆ ಯಾತ್ರೆ ಅಧ್ಯಾತ್ಮದತ್ತ ನನ್ನ ಮನಸ್ಸು ಹೊರಳುವಂತೆ ಮಾಡಿತು. ಅದೇ ವೇಳೆಗೆ ನನ್ನನ್ನು ವ್ಯಸನಮುಕ್ತ ಕೇಂದ್ರಕ್ಕೆ ಅಟ್ಟಲಾಯಿತು. ಅಲ್ಲೊಬ್ಬರು ಹಿರಿಯರು ಸಿಕ್ಕಿದರು. ಅವರನ್ನೇ ಗುರುವೆಂದು ಸ್ವೀಕರಿಸಿದೆ. ಅವರ ಮಾತುಗಳು ನನ್ನ ಪರಿವರ್ತನೆಗೆ ಪ್ರೇರಣೆ ನೀಡಿದವು. ಸರ್ವವ್ಯಸನಗಳಿಗೂ ನಾನು ತೆರೆ ಎಳೆದಿದ್ದು ಆಗಲೇ. ಹೀಗೆ ಸಾಗಿರಬೇಕಾದರೆ, ಅಯ್ಯಪ್ಪ ಸ್ವಾಮಿ ಮುಂದೆ ನಿಂತಾಗಲೆಲ್ಲ ನನ್ನಲ್ಲಿ ನನಗೆ ಗೊತ್ತಿಲ್ಲದಂತೆ ಏನೇನೋ ಪ್ರಶ್ನಾವಳಿ ಆಗುತ್ತಿತ್ತು. ನನ್ನೆಲ್ಲ ದುಮ್ಮಾನಗಳನ್ನು ಸ್ವಾಮಿಗೆ ಹೇಳಿಕೊಳ್ಳುತ್ತಿರುವಂತೆ, ಸ್ವಾಮಿ ನನ್ನ ಜಿಜ್ಞಾಸೆಗಳಿಗೆ ಉತ್ತರ ನೀಡುತ್ತಿರುವಂತೆ ಅನಿಸುತ್ತಿತ್ತು. ಹೀಗೆ ಮದ್ಯವೆಂಬುದು ನನ್ನ ಜೀವನದಲ್ಲಿ ಇಲ್ಲವಾಯಿತು.
ಎರಡು ತಿಂಗಳು ಶಬರಿಮಲೆಯಲ್ಲಿದ್ದು ಬಂದ ಮೇಲೆ ಉಳಿದ ಸಮಯದಲ್ಲಿ ಬೆಂಗಳೂರಿನಲ್ಲಿ ಏನು ಮಾಡುತ್ತೀರಿ?
ಎಲ್ಲಿ ನಾನು ಕುಡಿತ ಬಿಟ್ಟು ಸಹಜ ಜೀವನಕ್ಕೆ ಮರಳಿದೆನೋ ಅಂತಹ ವ್ಯಸನಮುಕ್ತ ಕೇಂದ್ರಗಳಲ್ಲಿ ಕೌನ್ಸೆಲಿಂಗ್ ಕೆಲಸ ಮಾಡುತ್ತಿದ್ದೇನೆ. ಮದ್ಯಕ್ಕೆ ದಾಸರಾಗಿ ನನ್ನಂತೆ ಜೀವನ ಹಾಳು ಮಾಡಿಕೊಂಡಿರುವ ವ್ಯಸನಿಗಳನ್ನು ಮರಳಿ ಸಹಜಸ್ಥಿತಿಗೆ ಕರೆತರುವ ಕಾಯಕ ಮಾಡುತ್ತಿದ್ದೇನೆ. ನನ್ನೆಲ್ಲ ಕಹಿ ಅನುಭವಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳುತ್ತಾ ಅನೇಕರು ಮದ್ಯದಿಂದ ವಿಮುಖರಾಗುವಂತೆ ಮಾಡಿದ್ದೇನೆ. ಹೀಗೆ, ಶಬರಿಮಲೆ ಅಯ್ಯಪ್ಪ ಸನ್ನಿಧಿ ಮತ್ತು ಕೌನ್ಸೆಲಿಂಗ್‌ನಿಂದ ನನ್ನ ಲೈಫಿಗೆ ಸಾರ್ಥಕತೆ ಸಿಕ್ಕಿತೆನ್ನಬಹುದು. ಮುಖ್ಯವಾಗಿ ಹೇಳಬೇಕೆಂದರೆ; ನಾನಿಂದು ಬದುಕಿದ್ದೇನೆ ಎಂದರೆ ಅದಕ್ಕೆ ಕಾರಣ ಸ್ವಾಮಿ ಅಯ್ಯಪ್ಪನೇ. ಅನುಮಾನವೇ ಇಲ್ಲ.. ನನ್ನೊಳಗೆ ಪ್ರಶಾಂತತೆ, ನೆಮ್ಮದಿ ನೆಲೆಸಿದೆ ಎಂದರೆ ಅದೆಲ್ಲ ಆ ಸ್ವಾಮಿಯಿಂದಲೇ ಆಗಿದೆ. ಸಾತ್ವಿಕ ಲೈಫಿನ ಟ್ರ್ಯಾಕಿಗೆ ಮರುಳುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಜೈಲು ಅಥವಾ ಸ್ಮಶಾಣದಲ್ಲಿರಬೇಕಾಗಿದ್ದ ನಾನಿಂದು ಸ್ವಾಮಿ ಸನ್ನಿಧಾನದಲ್ಲಿ ಸೇವೆ ಮಾಡುತ್ತಿದ್ದೇನೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೆಂಡದಲ್ಲಿ ಮುಳುಗೇಳುತ್ತಿದ್ದ ನನ್ನನ್ನು ಆ ಪಂಪಾ ಪುಣ್ಯನದಿ ಪರಿಶುಭ್ರಗೊಳಿಸಿದೆ. ಎಂಟು ವರ್ಷವಾಯಿತು. ಈವರೆಗೂ ಆ ಮದ್ಯವನ್ನು ಕೊನೆಪಕ್ಷ ನೋಡಿಯೂ ಇಲ್ಲ. ಅಂತಹ ಸದೃಢವಾದ ಆತ್ಮನಿರ್ಭರತೆ ಸ್ವಾಮಿ ಅಯ್ಯಪ್ಪನ ದಯೆಯಿಂದ ಬಂದಿದೆ. ಇದಕ್ಕಿಂತ ಧನ್ಯತೆ ಇನ್ನೇನಿದೆ ನನ್ನ ಪಾಲಿಗೆ?
ಇಷ್ಟೆಲ್ಲ ಆಯಿತಲ್ಲ? ಕೊನೆಗೆ ನೀವು ಏನು ಹೇಳಬಯಸುತ್ತೀರಿ?
ನನ್ನ ಪತ್ನಿಯ ಕ್ಷಮೆ ಕೇಳಲು ಬಯಸುತ್ತೇನೆ. ನಿಜಕ್ಕೆ ಆಕೆಗೆ ಆತ್ಮನಿವೇದನೆ ಮಾಡಿಕೊಳ್ಳಲೇಬೇಕು. ಎಕೆಂದರೆ, ಅವರೇ ನನ್ನ ಪಾಲಿನ ಗುರುಸ್ವಾಮಿ, ದೇವತೆಯೂ ಕೂಡ. ನಾನು ಕಂಠಪೂರ್ತಿ ಕುಡಿದು ಹಾದಿ ಬೀದಿಯಲ್ಲಿ ಹೊರಳಾಡುತ್ತಿರುವಾಗ ಆಕೆ ಮಕ್ಕಳ ಆರೈಕೆಯಲ್ಲಿ ನಿರತರಾಗಿದ್ದರು. ಮನಸ್ಸಿನ ತುಂಬಾ ನೋವಿದ್ದರೂ ಮಕ್ಕಳಿಗಾಗಿ ಅವರು ಜೀವನ ತ್ಯಾಗ ಮಾಡಿದರು. ಸಂತೋಷವಾಗಿರಬೇಕಾದ ಕಾಲದಲ್ಲಿ ನಾನು ಅವರಿಗೆ ಕಷ್ಟಗಳನ್ನು ಕೊಡುತ್ತಲೇ ಇದ್ದೆ. ಹೀಗಾಗಿ ಆಕೆ ಕ್ಷಮಿಸಿದರೆ, ಅದಕ್ಕಿಂತ ದೊಡ್ಡ ವರ ನನಗೆ ಬೇರೊಂದಿಲ್ಲ. ಜತಗೆ, ಸುಮನಾ ಎಲ್.ಎನ್.ಪೌಂಡೇಶನ್ ಹಾಗೂ ಈವರೆಗೆ ನನಗೆ ಮಾರ್ಗದರ್ಶನ ಮಾಡಿ ಸರಿಯಾದ ದಿಕ್ಕಿನಲ್ಲಿ ನಡೆಸಿದ ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ.
ಆರ್.ಎಂ.ಶ್ರೀನಿವಾಸ್ ಅವರಿಗೆ ಶಬರಿಮಲೆ ದೇವಸ್ವಂ ಮಂಡಳಿಯ ಮುಖ್ಯ ಪಿಆರ್‌ಓ ಸುನೀಲ್ ಅವರಿಂದ ಸನ್ಮಾನ.
***
ಸುಮಾರು ಎರಡು ಗಂಟೆಕಾಲ ತಮ್ಮ ಬದುಕನ್ನೇ ಸಿಕೆನ್ಯೂಸ್ ನೌ ಮುಂದೆ ಪ್ರಾಮಾಣಿಕವಾಗಿ ತೆರೆದಿಟ್ಟ ಶ್ರೀನಿವಾಸ್, ಸಂದರ್ಶನ ಕೊಟ್ಟ ಮರುದಿನವೇ (ನವೆಂಬರ್ 13) ಶಬರಿಮಲೆಗೆ ಹೊರಟು 14ರಂದು ಸನ್ನಿಧಾನ ಸೇರಿಕೊಂಡಿದ್ದರು. ಇನ್ನು ಎರಡು ತಿಂಗಳು; ಅಂದರೆ, ಮಂಡಲೋತ್ಸವ ಹಾಗೂ ಮಕರವಿಳಕ್ಕು ಮುಗಿಯುವ ತನಕ ಅವರು ಅಲ್ಲಿಯೇ ಇರುತ್ತಾರೆ.