ಬೆಂಗಳೂರು/ನವದೆಹಲಿ: ತಂತ್ರಜ್ಞಾನ ನಿತ್ಯಜೀವನದ ಭಾಗವಾಗಿದ್ದು, ಈ ನಿಟ್ಟಿನಲ್ಲಿ ಭಾರತ ಜಗತ್ತಿನ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಹಾಗೂ ಜಗತ್ತಿನ ಅವಕಾಶಗಳ ಹೆಬ್ಬಾಗಿಲು ಆಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಗುರುವಾರ ಬೆಂಗಳೂರು ಟೆಕ್ ಸಮಿಟ್ ಅನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು; ತಂತ್ರಜ್ಞಾನ ಇವತ್ತು ಶರವೇಗದಲ್ಲಿ ಬೆಳೆಯುತ್ತಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದರು.
ಜೀವನದ ಅವಿಭಾಜ್ಯ ಅಂಗ
ಡಿಜಿಟಲ್ ವ್ಯವಹಾರ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದ್ದು, ಭೀಮ್ ಯುಪಿಐ (ಹಣ ಪಾವತಿ ಆಪ್) ಅದಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಹೀಗೆಯೇ, ಭಾರತವೂ ತಂತ್ರಜ್ಞಾನವನ್ನು ತನ್ನ ನಿತ್ಯದ ಆಗುಹೋಗುಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾ ಸಾಗಿದೆ ಎಂದು ಪ್ರಧಾನಿ ಹೇಳಿದರು.
ಎಲ್ಲರಿಗೂ ಗೊತ್ತಿರುವಂತೆ ಕೋವಿಡ್ ಕಾರಣಕ್ಕಾಗಿ ಜಗತ್ತು ತಂತ್ರಜ್ಞಾನದದ ಬೆನ್ಹತ್ತಿದೆ. ಇದಕ್ಕೆ ಭಾರತವೂ ಹೊರತಲ್ಲ ಎಂದ ಅವರು, ನಾವಿಂದು ಮಾಹಿತಿ ತಂತ್ರಜ್ಞಾನ ಯುಗದ ಮಧ್ಯಭಾಗದಲ್ಲಿದ್ದೇವೆ. ಅತ್ಯಂತ ಸವಾಲಿನಿಂದ ಕೂಡಿರುವ ಈ ಸಮಯದಲ್ಲಿ ಯಾರು ಮೊದಲು ಮುನ್ನಡೆಯುತ್ತಾರೋ ಅಥವಾ ಮುಂದೆಜ್ಜೆ ಇಡುತ್ತಾರೋ ಎಂಬ ಪ್ರಶ್ನೆ ಬರುವುದಿಲ್ಲ. ಆದರೆ, ಯಾರು ಪರಿಣಾಮಕಾರಿಯಾಗಿ ಉತ್ತಮ ಹೆಜ್ಜೆ ಇಡುತ್ತಾರೆ ಎಂಬುದೇ ಅತ್ಯಂತ ಮುಖ್ಯವಾಗುತ್ತದೆ ಎಂದು ಮೋದಿ ಅವರು ನುಡಿದರು.
ಜಾಗತಿಕ ಮಾರುಕಟ್ಟೆ ಸೃಷ್ಟಿ
ಟೆಕ್ನಾಲಜಿ ಕ್ಷೇತ್ರಕ್ಕೆ ಜಾಗತಿಕ ಮಾರುಕಟ್ಟೆ ಸೃಷ್ಟಿ ಮಾಡುವಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಮುಖ್ಯವಾಗಿ ಡಿಜಿಟಲ್ ಮತ್ತು ಟೆಕ್ ಪರಿಹಾರಗಳಿಗೆ ಸಂಬಂಧಿಸಿ ಅತಿದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ. ಇನ್ನು ಮುಂದೆಯೂ ಸರಕಾರ ಟೆಕ್ನಾಲಜಿ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಟೆಕ್ನಾಲಜಿ ಬೆಳೆದಂತೆ ಸವಾಲುಗಳು ಕೂಡ ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಸೈಬರ್ ಭದ್ರತೆಯ ಸವಾಲು ಕೂಡ ಒಂದು. ಇಂಥ ಭದ್ರತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಯುವಜನಋ ಶಕ್ತಿ, ಪ್ರತಿಭೆ ಮತ್ತೂ ಅವರೆಲ್ಲರಿಗೂ ಸಿಗುವ ಅವಕಾಶಗಳಿಗೆ ಎಣೆಯೇ ಇರುವುದಿಲ್ಲ. ನಮ್ಮ ದೇಶದಲ್ಲಿರುವ ಅಸಾಧಾರಣ ಸಾಮರ್ಥ್ಯದ ಯುವಜನರನ್ನು ಟೆಕ್ನಾಲಜಿ ನಾಯಕರು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ಮಾಡಿದರು.