ಶಬರಿಮಲೆ: ಶ್ರೀ ಅಯ್ಯಪ್ಪ ಸ್ವಾಮಿಯ ಎರಡು ತಿಂಗಳ ಮಂಡಲೋತ್ಸವ ಹಾಗೂ ಮಕರವಿಳಕ್ಕು ಉತ್ಸವದ ಆರಂಭವಾಗಿ ಇಂದಿಗೆ (ಶುಕ್ರವಾರ) ನಾಲ್ಕು ದಿನಗಳಾಗಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಟ್ರಾವಂಕೂರ್ ದೇವಸ್ವಂ ಮಂಡಳಿ ಬಿಗಿಕ್ರಮಗಳನ್ನು ಕೈಗೊಂಡಿದ್ದು, ಸಿಕೆನ್ಯೂಸ್ ನೌಗೆ ಸನ್ನಿಧಾನದ ಪ್ರತ್ಯಕ್ಷ ದೃಶ್ಯಗಳು ಲಭ್ಯವಾಗಿವೆ.
ಇದೇ ನವೆಂಬರ್ 16ರಂದು ಸಂಜೆಯೇ ಅಯ್ಯಪ್ಪ ಸ್ವಾಮಿ ಆಲಯದ ಬಾಗಿಲು ತೆರೆಯಲಾಯಿತಾದರೂ 17ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ವರ್ಚುವಲ್ ಕ್ಯೂನಲ್ಲಿ ಹೆಸರು ನೋಂದಾಯಿಸಿಕೊಂಡ 1000 ಭಕ್ತರಿಗೆ ಮಾತ್ರ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 17ರಿಂದ 20ರವೆರೆಗೆ 4000 ಭಕ್ತರು ಮಾತ್ರ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದು, ಇನ್ನೂ ಶನಿವಾರ ಮತ್ತು ಭಾನುವಾರ ದಿನಕ್ಕೆ 2000 ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ವಂ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರುಮಾನೂರ್ ಅವರು ಸಿಕೆನ್ಯೂಸ್ ನೌಗೆ ಮಾಹಿತಿ ನೀಡಿದ್ದಾರೆ.
ಪ್ರತಿವರ್ಷವೂ ಈ ಕಾಲದಲ್ಲಿ ಲಕ್ಷಾಂತರ ಭಕ್ತರಿಂದ ತುಂಬಿತುಳುಕುತ್ತಿದ್ದ ಸನ್ನಿಧಾನದಲ್ಲಿ ಸಾವಿರ ಲೆಕ್ಕದಲ್ಲಿ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭಕ್ತರು ಕಾಣುತ್ತಿದ್ದಾರೆ. ಈಗಾಗಲೇ ವರ್ಚುಯಲ್ ಕ್ಯೂನಲ್ಲಿ ನೋಂದಾಯಿಸಿಕೊಂಡಿರುವ ಭಕ್ತರು ಮಾತ್ರ ಸ್ವಾಮಿಯ ದರ್ಶನಕ್ಕೆ ಬರುತ್ತಿದ್ದಾರೆ. ಪಂಪಾ ತಟದಿಂದ ಕಾಲ್ನಡಿಗೆಯಲ್ಲಿ ಬೆಟ್ಟವನ್ನೇರಿ ಬರುವ ಭಕ್ತರು, ಸ್ವಾಮಿಯ ದರ್ಶನ ಪಡೆದು ಕೆಲವೊತ್ತು ಸನ್ನಿಧಾನದಲ್ಲಿಯೇ ವಿಶ್ರಮಿಸಿದ ನಂತರ ವಾಪಸ್ ಹೊರಡುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಸನ್ನಿಧಾನದಲ್ಲಿ ರಾತ್ರಿ ವೇಳೆ ಭಕ್ತರಿಗೆ ಉಳಿಯಲು ಅವಕಾಶ ನೀಡಲಾಗುತ್ತಿಲ್ಲ.
ದೈಹಿಕ ಅಂತರ, ಸ್ಯಾನಿಟೈಸ್ ಮತ್ತು ಮಾಸ್ಕ್
ಸನ್ನಿಧಾನದಲ್ಲಿ ದೈಹಿಕ ಅಂತರ, ಸ್ಯಾನಿಟೈಸ್ ಮತ್ತು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲಿನ ಸಿಬ್ಬಂದಿ ಈ ಮೂರು ಅಂಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ, ಭಕ್ತರಿಗೆ ಸನ್ನಿಧಾನದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮಾಹಿತಿ ಕೇಂದ್ರದಿಂದಲೂ ಈ ಬಗ್ಗೆ ನಿರಂತರವಾಗಿ ಮಾಹಿತಿ ನೀಡುತ್ತಿರುವುದರಿಂದ ಭಕ್ತರು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಂಡಿರುವುದು ಕಂಡು ಬಂದಿತು.
ದರ್ಶನಕ್ಕೆ ತೆರಳುವ ಕ್ಯೂನಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗುರುತು ಹಾಕಲಾಗಿದೆ. ಒಮ್ಮೆಲೆ ಭಕ್ತರು ನುಗ್ಗಿ ಬರಲು ಆಗದಂತೆ ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹಾಗೆಯೇ ಪಡಿ (ಹದಿನೆಂಟು ಮೆಟ್ಟಿಲು) ಹತ್ತಿ ಸನ್ನಿಧಾನವನ್ನು ಪ್ರವೇಶಿಸುವಾಗಲು ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ. ಪಡಿ ಹತ್ತುವಾಗ ಇಕ್ಕೆಲಗಳಲ್ಲೂ ಸಿಬ್ಬಂದಿ ಪಿಪಿ ಕಿಟ್‌ಗಳನ್ನು ಧರಿಸಿ, ಸ್ವತಃ ಮುನ್ನೆಚ್ಚರಿಕೆ ವಹಿಸಿ ಭಕ್ತರು ಸುಲಭವಾಗಿ ಹತ್ತಿಹೋಗುವುದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಸುನೀಲ್ ಅವರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ, ಮೂರನೇ ಬಾರಿಗೆ ಯಾತ್ರೆ ಕೈಗೊಂಡು ಗಂಟೆ ಕಟ್ಟುವ ಸ್ವಾಮಿಗಳಿಗೆ ಪ್ರತ್ಯೇಕ ಜಾಗ ನಿಗದಿ ಮಾಡಲಾಗಿದೆ. ಈ ಮೊದಲು ಸಿಕ್ಕಸಿಕ್ಕ ಜಾಗದಲ್ಲಿ ಭಕ್ತರು ಗಂಟೆ ಕಟ್ಟುವುದು, ಅದನ್ನು ಬೇರೆಯವರು ಮುಗಿಬಿದ್ದು ಕಿತ್ತುಕೊಳ್ಳುವುದು ನಡೆಯುತ್ತಿತ್ತು. ಈ ಬಾರಿ ಅಲ್ಲಿ ನಿರ್ದಿಷ್ಟ ಜಾಗವನ್ನು ಗೊತ್ತು ಮಾಡಲಾಗಿದೆ.
ಭಕ್ತರ ಆನಂದ, ಧನ್ಯತೆ
ಪ್ರತಿ ವರ್ಷವೂ ಸನ್ನಿಧಾನಕ್ಕೆ ಬಂದಾಗ ಭಕ್ತರು ಪ್ರವಾಹದಂತೆ ಇರುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಕಾರಣದಿಂದ ಭಕ್ತರು ಕಡಿಮೆಯಾಗಿದ್ದಾರೆ. ಲಕ್ಷ ಲೆಕ್ಕದಲ್ಲಿ ಇರುತ್ತಿದ್ದ ಜನ ಈಗ ಸಾವಿರ ಲೆಕ್ಕದಲ್ಲಿ ಇದ್ದಾರೆ. ಹೀಗಾಗಿ ಸ್ವಾಮಿ ದರ್ಶನ ಸುಲಭವಾಗಿ ಆಗುತ್ತಿದೆ. ಎಲ್ಲಿಯೂ ನಿಲ್ಲುವಂತಿಲ್ಲ. ಯಾರೂ ತಳ್ಳುತ್ತಿಲ್ಲ. ಸ್ವಾಮಿಯನ್ನು ಕಣ್ತುಂಬಾ ದರ್ಶನ ಮಾಡಿಕೊಳ್ಳುತ್ತಿದ್ದಾರೆ ಭಕ್ತರು. ಅವರ ಮುಖದಲ್ಲಿ ಧನ್ಯತೆ, ಆನಂದ ಕಾಣುತ್ತಿದೆ ಎಂದು ಸುನೀಲ್ ಅವರು ಹೇಳುತ್ತಾರೆ.