ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ʼಡಾಕ್ಟರ್ ಆಫ್ ಸೈನ್ಸ್ʼ ಗೌರವ ಪದವಿಗೆ ಪಾತ್ರರಾಗಿದ್ದಾರೆ.
ಅತ್ಯುತ್ತಮ ವಿಜ್ಞಾನಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಗುರುತಿಸಿ ನೀಡಲಾಗುವ ಈ ಪದವಿಯನ್ನು ರಾಜಭವನದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲ ಅವರು ಶಿವನ್ ಅವರಿಗೆ ಪ್ರದಾನ ಮಾಡಿದರು.
ಇಸ್ರೋ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಶಿವನ್ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ ರಾಜ್ಯಪಾಲರು, ಕಳೆದ ಹಲವು ದಶಕಗಳಿಂದ ಇಸ್ರೋ ಅನೇಕ ಮೈಲುಗಲ್ಲುಗಳ್ನು ದಾಟಿದೆ. ಆ ಎಲ್ಲ ಸಾಧನೆಗಳಲ್ಲಿ ಶಿವನ್ ಕೆಲಸ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಶಿವನ್ ಅವರನ್ನು ಅಭಿನಂದಿಸಿದರಲ್ಲದೆ, ಶಿವನ್ ನಾಯಕತ್ವದಲ್ಲಿ ಇಸ್ರೋ ಬಾಹ್ಯಾಕಾಶದಲ್ಲಿ ಅದ್ಭುತಗಳನ್ನೇ ಸೃಷ್ಟಿಸುತ್ತಿದೆ. ನಮ್ಮ ದೇಶ ಕೈಗೊಂಡ ಅನೇಕ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಅವರ ಪಾತ್ರವಿದೆ. ಅವರ ಮುಂದಿನ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೆ.ಶಿವನ್ ಅವರಿಗೆ ಪದವಿ ಪ್ರದಾನ ಮಾಡಿದ ರಾಜ್ಯಪಾಲ ವಜೂಭಾಯಿ ವಾಲ. ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕುಲಪತಿ ಪ್ರೊ.ಕರಿಸಿದ್ದಪ್ಪ ಇದ್ದರು.
***
ಸಾಧನೆಯ ಶಿಖರ ಶಿವನ್
ಇಸ್ರೋ ಉಡಾವಣಾ ವಾಹನಗಳ ವಿನ್ಯಾಸ ಅಭಿವೃದ್ಧಿಗೆ ಶಿವನ್ ಅವರು ಸಾಕಷ್ಟು ಕೆಲಸ ಮಾಡಿದ್ದು, 1982ರಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಯೋಜನೆಯಲ್ಲಿ ಭಾಗವಹಿಸುವ ಮೂಲಕ ಅವರು ಇಸ್ರೋಗೆ ಸೇರಿದರು. 2014 ಜುಲೈ, ೨ರಂದು ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕರಾಗಿ ಅವರನ್ನು ನೇಮಕಗೊಂಡರು. 2015 ಜೂನ್ 1ರಂದು ವಿಎಸ್ಎಸ್ಸಿಯ ನಿರ್ದೇಶಕರಾದರಲ್ಲದೆ, ಅವರನ್ನು 2018ರ ಜನವರಿಯಲ್ಲಿ ಇಸ್ರೋ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇವರ ಅಧ್ಯಕ್ಷತೆಯಲ್ಲಿ 2019 ಜುಲೈ 22ರಂದು ಚಂದ್ರಯಾನದ ಎರಡನೇ ಮಿಷನ್ ಚಂದ್ರಯಾನ-2 ಆರಂಭವಾಯಿತು.
Lead photo courtesy: Wikipedia