- ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್! ಭಾರತದ ಸ್ವಾತಂತ್ರ್ಯೋತ್ತರ ಚರಿತ್ರೆಯಲ್ಲಿ ಅತ್ಯಂತ ವಿವಾದಕ್ಕೆ ಒಳಗಾಗಿರುವ ವ್ಯಕ್ತಿತ್ವವೊಂದರ ಹೆಸರಷ್ಟೇ ಅಲ್ಲ, ಸಮಕಾಲೀನ ಚರಿತ್ರೆಯಲ್ಲಿ ವ್ಯವಸ್ಥಿತವಾಗಿ ವಿಸ್ಮೃತಿಗೆ ಸರಿಸಲಾಗಿರುವ ಉಜ್ವಲ ವ್ತಕ್ತಿತ್ವವೂ ಹೌದು. ಸಾವರ್ಕರ್ ಬಗ್ಗೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಕೇವಲ ನಕಾರಾತ್ಮಕ ಚಿತ್ರವೊಂದು ಮಾತ್ರ ಮೂಡಿಬರುವಂತೆ ಮಾಡಿರುವುದರ ಹಿಂದಿನ ಹಕೀಕತ್ತಾದರೂ ಏನು? ಇಂತಹ ಷಡ್ಯಂತ್ರದ ಹಿಂದೆ ಕೆಲಸ ಮಾಡಿದ ಕೈಗಳಾವುವು? ಇಂತಹ ಪ್ರಶ್ನೆಗಳು ಸಹಜ. ನಿಜ ಹೇಳಬೇಕೆಂದರೆ, ಸಾವರ್ಕರ್ ಅವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪ್ರಖರ ವೈಚಾರಿಕ, ಸಮಾನತೆಗೆ ಪರಿಶ್ರಮಿಸಿದ ಮಾನವತಾವಾದಿ, ಸ್ವದೇಶಿ ಚಳವಳಿಯ ಅಧ್ವರ್ಯು, ಭಾರತೀಯರ ಉದ್ಯಮಶೀಲತೆಯ ಅಗ್ರ ಪ್ರತಿಪಾದಕ! ಇದರ ಜೊತೆಗೆ, ಮಹಾತ್ಮ ಗಾಂಧಿ, ಕಾಂಗ್ರೆಸ್ ಮತ್ತು ಮುಸ್ಲಿಮರ ಬಗ್ಗೆ ನಿಷ್ಠುರ ನಿಲುವುಗಳನ್ನು ಹೊಂದಿದ್ದ ರಾಷ್ಟ್ರೀಯವಾದಿ. ಇಂತಹ ಬಹುಮುಖ ವ್ಯಕ್ತಿತ್ವವನ್ನು ಕುರಿತ ಮಹತ್ತ್ವದ ಕೃತಿ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಇದೇ ನ.೨೮ರಂದು ಬಿಡುಗಡೆಯಾಗುತ್ತಿದೆ. ಬಿ.ಎಸ್. ಜಯಪ್ರಕಾಶ ನಾರಾಯಣ ಅನುವಾದಿಸಿ, ವಸಂತ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಆಯ್ದ ಭಾಗ ನಮ್ಮ ಸಿಕೆನ್ಯೂಸ್ ನೌ ಓದುಗರಿಗಾಗಿ.
***
ಏನೂ ಯೋಚನೆ ಮಾಡ್ಬೇಡಿ, ಈ ಸರಕಾರ ತುಂಬಾ ಉದಾರಿಯಾಗಿದೆ. 1960ನೇ ಇಸವಿಯಲ್ಲಿ ನಿಮ್ಮನ್ನು ಖಂಡಿತವಾಗಿಯೂ ಇವರು ಜೈಲಿನಿಂದ ಬಿಡುಗಡೆ ಮಾಡ್ತಾರೆ..ʼ ಬಾಂಬೆಯ ಡೋಂಗ್ರಿ ಜೈಲಿನಲ್ಲಿ ಸಾವರ್ಕರ್ ಅವರಿಗೆ “ಜೈಲ್ ಟಿಕೆಟ್ʼ ಕೊಡುತ್ತ, ಈ ಮಾತುಗಳನ್ನಾಡುತ್ತ ದುರುದ್ದೇಶದಿಂದ ನಕ್ಕವನು ಬ್ರಿಟಿಷ್ ಸರಕಾರದ ಒಬ್ಬ ಸಿಪಾಯಿ.
ಇದಕ್ಕೆ ಪ್ರತಿಯಾಗಿ ಸಾವರ್ಕರ್ ಅವರು, ʼಈ ಸರಕಾರಕ್ಕಿಂತ ಸಾವು ದೊಡ್ಡ ದಯಾಮಯಿ. ಪ್ರಾಯಶಃ ನಿಮ್ಮ ಸರಕಾರಕ್ಕಿಂತ ಮೊದಲೇ ಅದು ನನಗೆ ವಿಮೋಚನೆಯನ್ನು ಕರುಣಿಸಬಹುದು,ʼ ಎಂದರು. ಇದಾದ ಮೇಲೆ, ಸಿಪಾಯಿ ಮತ್ತು ಸಾವರ್ಕರ್ ಇಬ್ಬರೂ ನಗತೊಡಗಿದರು. ಈ ಪೈಕಿ ಆ ಸಿಪಾಯಿಯು ಅಂಕೆಯಿಲ್ಲದೆ ನಗುತ್ತಿದ್ದರೆ, ಸಾವರ್ಕರ್ ಅವರು ‘ಸ್ವಲ್ಪ ಪ್ರಯತ್ನಪಟ್ಟು’ ನಗುತ್ತಿದ್ದರು.
ಇಷ್ಟರ ಮಧ್ಯೆಯೇ ಆ ಸಿಪಾಯಿಯು ಒಂದು ಕಬ್ಬಿಣದ ರಿಂಗ್‌ಗೆ ಸಿಕ್ಕಿಸಿದ್ದ ಮರದ ಬಿಲ್ಲೆಯನ್ನು ಸಾವರ್ಕರ್ ಅವರ ಕೊರಳಿಗೆ ಸುತ್ತಿದ. ಅದರಲ್ಲಿ, ಸಾವರ್ಕರ್ ಅವರನ್ನು ಯಾವ ವರ್ಷ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ ಎನ್ನುವುದನ್ನು ಬರೆದಿತ್ತು. ಇದರ ಜೊತೆಯಲ್ಲೇ ಸಾವರ್ಕರ್ ಅವರ ಕೈಗೆ ಜೈಲಿನ ಸಮವಸ್ತ್ರವಾದ ಒಂದು ಕುರ್ತಾ, ಒಂದು ದುಂಡನೆಯ ಟೋಪಿ ಮತ್ತು ಒಂದು ತುಂಡು ಮೇಲಂಗಿಯನ್ನೂ ಇಡಲಾಯಿತು. ಜೈಲಿನ ನಿಯಮಗಳ ಪ್ರಕಾರ, ವಿಚಾರಣಾಧೀನ ಕೈದಿಗಳು ಮಾತ್ರ ತಮ್ಮದೇ ಆದ ಉಡುಪುಗಳನ್ನು ಹಾಕಿಕೊಳ್ಳಬಹುದಾಗಿತ್ತು. ಆದರೆ ಸಾವರ್ಕರ್ ಅವರು ಈಗ ಅಪರಾಧಿಯಾಗಿದ್ದರು. ಹೀಗಾಗಿ ಅವರು ಈ ಉಡುಪನ್ನೇ ಹಾಕಿಕೊಳ್ಳಬೇಕಾಗಿತ್ತು. ಸಿಪಾಯಿ ಕೊಟ್ಟ ಈ ವಸ್ತುಗಳನ್ನು ತೆಗೆದುಕೊಂಡ ಅವರು, ʼಪ್ರಾಯಶಃ ಈ ಉಡುಪುಗಳನ್ನು ಬಿಚ್ಚಬೇಕಾದ ಪ್ರಸಂಗವೇ ನನ್ನ ಪಾಲಿಗೆ ಬರುವುದಿಲ್ಲವೇನೋ? ಇದೇ ಬಟ್ಟೆಯಲ್ಲೇ ನನ್ನನ್ನು ಒಂದು ದಿನ ಸುಡಬೇಕಾಗಬಹುದು,ʼ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು. ಹೌದು, ಸಾವರ್ಕರ್ ಅವರನ್ನು ಬಾಂಬೆಯ ಡೋಂಗ್ರಿ ಜೈಲಿನಿಂದ ಬಂಗಾಳ ಕೊಲ್ಲಿಯಲ್ಲಿದ್ದ ಅಂಡಮಾನ್ ಜೈಲಿಗೆ ಸ್ಥಳಾಂತರಿಸಲಾಗುತ್ತಿತ್ತು. ಅಂಡಮಾನಿನ ಜೈಲೆಂದರೆ, ಅದು ಸಾವಿನ ಬಾಯಿಗೆ ಹೊಕ್ಕಂತೆಯೇ! ಬ್ರಿಟಿಷರು ಅಲ್ಲಿ ಹೀಗೆ ದಂಡನೆಗೆ ಒಳಗಾದವರನ್ನು ಇಡಲೆಂದೇ ಒಂದು ಕಾಲೋನಿಯನ್ನು ಕಟ್ಟಿ, ಭಯಾನಕವಾದ ಸೆಲ್ಯುಲರ್ ಜೈಲನ್ನೂ ನಿರ್ಮಿಸಿದ್ದರು. ಇಂತಹ ಅಂಡಮಾನ್ ಕಾಯಿಲೆ ಕಸಾಲೆಗಳಿಗೆ, ಒಂಟಿತನಕ್ಕೆ ಮತ್ತು ಬುದ್ಧಿಮಾಂದ್ಯತೆಗೆ ಕುಖ್ಯಾತವಾಗಿತ್ತು. ಇಂತಹ ನರಕದಿಂದ ಬಚಾವಾಗಿ ಬಂದವನು ನಿಜಕ್ಕೂ ಅದೃಷ್ಟಶಾಲಿಯಾಗಿರುತ್ತಿದ್ದ. ಆದರೆ, ಸಾಮಾನ್ಯವಾಗಿ ಹೆಚ್ಚಿನವರು ಇಲ್ಲಿ ಬದುಕುಳಿಯುತ್ತಿರಲಿಲ್ಲ. ಇಲ್ಲಿಗೆ ಕೈದಿಯಾಗಿ ಬಂದವರು ಕತ್ತೆ ಚಾಕರಿ ಮಾಡಬೇಕಾಗಿತ್ತು. ಇಂತಹ ಶಿಕ್ಷೆಗೊಳಗಾದವರು ದಣಿವಿನಿಂದ ಕುಸಿದು ಬೀಳುತ್ತಿದ್ದರು. ಅದರಲ್ಲೂ ಸ್ವಲ್ಪ ಸೂಕ್ಷ್ಮ ಸ್ವಭಾವದವರಂತೂ ಪೋರ್ಟ್ʼಬ್ಲೇರ್‌ನ ಜೈಲಿಗೆ ಬರುವುದಕ್ಕೂ ಮೊದಲೇ ಅಪಾಯಕ್ಕೆ ಈಡಾಗುತ್ತಿದ್ದರು. ಅಂದಹಾಗೆ, ಅಂಡಮಾನಿನ ಸೆಲ್ಯುಲರ್ ಜೈಲು ಮೈದಾಳಿದ್ದೇ ಈ ಮುಖ್ಯದ್ವೀಪದಲ್ಲಿ!
ಹೆಸರು ಮಹಾರಾಜ, ಉಳಿದದ್ದೆಲ್ಲ ಕೊಳಕು
ಅಂತೂ ಇಂತೂ ಸಾವರ್ಕರ್ ಅವರನ್ನು ಅಂಡಮಾನಿಗೆ ತೆಗೆದುಕೊಂಡು ಹೋಗಿ ಹಾಕುವ ದಿನ ಬಂದೇಬಿಟ್ಟಿತು. ಮೊದಲಿಗೆ ಇವರನ್ನು ಬಾಂಬೆಯಿಂದ ಮದ್ರಾಸ್‌ಗೆ ಸಾಗಿಸಿದ ಬ್ರಿಟಿಷರು, ಅಲ್ಲಿನ ಸಮುದ್ರತೀರದಿಂದ ಅಂಡಮಾನ್ ಕಡೆಗೆ ʼಎಸ್.ಎಸ್.ಮಹಾರಾಜʼ ಹಡಗನ್ನು ಹತ್ತಿಸಿದರು. ಆಗ ಅವರಿಗೆ ‘ಬಾಂಬೆಯಿಂದ ಮದ್ರಾಸಿಗೆ ಕರೆತಂದು, ಈ ಹಡಗಿಗೆ ನನ್ನನ್ನು ಹತ್ತಿಸಿದ್ದೇಕೆ?ʼ ಎನ್ನುವುದು ಗೊತ್ತಾಯಿತು. ಅಂದರೆ, ಈ ಹಡಗಿನಲ್ಲಿದ್ದವರೆಲ್ಲ ಘೋರ ಪಾತಕಿಗಳು! ಈ ಪೈಕಿ ಸಿಂಧ್ ಪ್ರಾಂತ್ಯದ ಒಬ್ಬ ಕ್ರಿಮಿನಲ್ ಕೂಡ ಇದ್ದ. ಇವನು ತನಗೇನೋ ಹೇಳಲು ಬಂದ ಒಬ್ಬ ತರುಣನ ಬುರುಡೆಯನ್ನೇ ಒಡೆದು, ಕೊಂದು ಹಾಕಿದ್ದ. ಈ ಮೊದಲೇ ಬೇರೆಬೇರೆ ಎರಡು ಪ್ರಕರಣಗಳಲ್ಲಿ ಎರಡು ಸಲ ಅಂಡಮಾನಿನ ಜೈಲಿನಲ್ಲಿ ʼಕರಿನೀರ ಶಿಕ್ಷೆʼಯನ್ನು ಅನುಭವಿಸಿದ್ದ ಈ ಭೂಪ, ಮೂರನೇ ಸಲ ಈಗ ಮತ್ತೆ ಅದೇ ಕಾಲಾಪಾನಿ ಶಿಕ್ಷೆಗೆ ಒಳಗಾಗಿದ್ದ. ಅಲ್ಲಿದ್ದ ಇನ್ನೊಬ್ಬ ಹಂತಕ ಕೇವಲ ಹತ್ತೊಂಬತ್ತು ವರ್ಷದ ತರುಣ. ಇವನಿಗೆ ಭಂಗಿ ಸೇದುವ ದುಶ್ಚಟವಿತ್ತು. ಇದನ್ನು ಪ್ರಶ್ನಿಸಿದಳೆಂದು ಈತ ತನ್ನೊಂದಿಗೆ ರಕ್ತ ಹಂಚಿಕೊಂಡು ಹುಟ್ಟಿದ್ದ ಸಹೋದರಿಯನ್ನೇ ಇರಿದು ಕೊಂದಿದ್ದ. ಇನ್ನು ಕೆಲವರು ಡಕಾಯಿತಿ ಮತ್ತು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡು ಆಗಲೇ ಶಿಕ್ಷೆ ಅನುಭವಿಸಿದ್ದವರಾಗಿದ್ದರು. ತಮ್ಮನ್ನೆಲ್ಲ ಭಯಾನಕವಾದ ಅಂಡಮಾನ್ ಜೈಲಿಗೆ ಹಾಕಲಾಗುತ್ತಿದೆ ಎನ್ನುವುದೆಲ್ಲ ಇವರಿಗೆ ತಿಳಿದಿತ್ತು. ಅದನ್ನು ಜೀರ್ಣಿಸಿಕೊಳ್ಳಲು ಅಥವಾ ಒಪ್ಪಿಕೊಳ್ಳಲು ಇವರೆಲ್ಲ ಜೋರಾಗಿ ಕಿರುಚಾಡುತ್ತ, ಕೋಲಾಹಲವನ್ನು ಉಂಟುಮಾಡುತ್ತ, ಬರೀ ಸೊಂಟದ ಕೆಳಗಿನ ಮಾತುಗಳನ್ನೇ ಆಡುತ್ತಿದ್ದರು. ಇಂತಹ ಅಶ್ಲೀಲ ವಾತಾವರಣದಿಂದ ತುಂಬಿದ್ದ ಹಡಗಿನಲ್ಲಿ ತಮಗೆ ಸರಪಳಿ ಹಾಕಿಕೊಂಡು ಕೆಳಗಿನ ಡೆಕ್‌ಗೆ ಕರೆದುಕೊಂಡು ಹೋಗುತ್ತಿದ್ದುದು ಸಾವರ್ಕರ್ ಪಾಲಿಗೆ ಅಸಹನೀಯವಾದ ಅನುಭವವಾಗಿತ್ತು. ಆ ಕೆಳಗಿನ ಡೆಕ್ ಹೇಗಿತ್ತೆಂದರೆ, ಮುವ್ವತ್ತು ಜನ ಇರಬಹುದಾದ ಜಾಗದಲ್ಲಿ ಐವತ್ತು ಜನರನ್ನು ತುಂಬಲಾಗಿತ್ತು. ಜೊತೆಗೆ, ಈ ಕ್ರಿಮಿನಲ್‌ಗಳು ಯಾವ ಕಾರಣಕ್ಕೂ ತಪ್ಪಿಸಿಕೊಂಡು ಹೋಗಬಾರದೆಂದು ಆ ಡೆಕ್‌ನ ಸುತ್ತೆಲ್ಲ ಕಬ್ಬಿಣದ ಸಲಾಕೆಗಳನ್ನು ಹಾಕಿಡಲಾಗುತ್ತಿತ್ತು. ಇದರಿಂದಾಗಿ, ಆ ಜಾಗ ಮತ್ತಷ್ಟು ಭಯಾನಕವಾಗಿ ಪರಿಣಮಿಸಿತ್ತು. ಅಂದಂತೆ, ಸಾವರ್ಕರ್ ಅವರಿಗೆ ಲಂಡನ್ನಿನಲ್ಲಿದ್ದಾಗಲೇ ಬ್ರಾಂಕೈಟಿಸ್ (ಶ್ವಾಸನಾಳಗಳ ಉರಿಯೂತ) ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಇಕ್ಕಟ್ಟಿನಿಂದ ಕೂಡಿದ್ದ ಜಾಗದಲ್ಲಿದ್ದಾಗಲೆಲ್ಲ ಉಸಿರಾಟ ಕಷ್ಟವಾಗಿ, ಇದರ ಪರಿಣಾಮವಾಗಿ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ, ಹಡಗಿನಲ್ಲಿದ್ದ ವೈದ್ಯರು ಇವರಿಗೆ ತೀರಾ ಒಂದು ತುದಿಗೆ ಹೋಗಿ ಕೂರುವಂತೆ ಹೇಳಿದರು. ಆದರೆ, ಇದರಿಂದ ಸಾವರ್ಕರ್ ಅವರಿಗೇನೂ ಉಪಯೋಗವಾಗಲಿಲ್ಲ. ಏಕೆಂದರೆ, ಅಲ್ಲಿದ್ದ ಪಾತಕಿಗಳು ತಮ್ಮ ಹೊದಿಕೆಗಳನ್ನು ಹರಡಿಕೊಂಡು ಅದರ ಮೇಲೆ ಉರುಳಿಕೊಳ್ಳುತ್ತಿದ್ದರು. ಇವರೆಲ್ಲ ಎಷ್ಟು ಒತ್ತೊತ್ತಾಗಿ ಮಲಗಿಕೊಳ್ಳುತ್ತಿದ್ದರೆಂದರೆ ಒಬ್ಬನ ಕಾಲು ಇನ್ನೊಬ್ಬನ ತಲೆಗೆ ತಗುಲುತ್ತಿತ್ತು; ಹಾಗೆಯೇ ಒಬ್ಬರೊಬ್ಬರ ಭುಜಗಳು ಒತ್ತಿಕೊಂಡು ಉಜ್ಜಾಡುತ್ತಿದ್ದವು; ಒಟ್ಟಿನಲ್ಲಿ ಅಲ್ಲಿ ಒಂದು ಅಂಗುಲದಷ್ಟು ಜಾಗವೂ ಖಾಲಿ ಇರುತ್ತಿರಲಿಲ್ಲ. ಇನ್ನು ಹಡಗಿನ ಮೇಲ್ಚಾವಣಿಯಲ್ಲಿ ಗಾಳಿ-ಬೆಳಕಿಗೆಂದು ಇದ್ದ ಕಿಂಡಿಗಳು ಕೂಡ ಎಲ್ಲೋ ತೀರಾ ಮೇಲಿದ್ದವು. ಹೀಗಾಗಿ ಅವುಗಳಿಂದ ಸರಿಯಾಗಿ ಗಾಳಿಯೂ ಆಡುತ್ತಿರಲಿಲ್ಲ. ಇದರ ಜೊತೆಗೆ ಅಲ್ಲಿ ಮೊದಲೇ ಇದ್ದ ದುರ್ಗಂಧವಿತ್ತು. ಇದರ ಜೊತೆಗೆ ಈ ಕ್ರಿಮಿನಲ್‌ಗಳ ಮಲಮೂತ್ರ ವಿಸರ್ಜನೆಗೆಂದು ಅಲ್ಲೇ ಇಟ್ಟಿದ್ದ ಬಕೆಟ್‌ನಿಂದ ಸಹಿಸಲಾಗದಂತಹ ಗಬ್ಬುನಾತ ಹೊಡೆಯುತ್ತಿತ್ತು. ಇಂತಹ ಕ್ಷಣಗಳಲ್ಲಿ ಸಾವರ್ಕರ್ ಅವರ ಕಣ್ಣೆದುರೇ ಬಂದ ಒಬ್ಬ ಪಾತಕಿಯು ಆ ಬಕೆಟ್ ಮೇಲೆ ಕೂತು ಮಲ ವಿಸರ್ಜನೆ ಮಾಡಿ, ಎದ್ದು ಹೋದ. ರಾತ್ರಿ ಆಗುತ್ತ ಆಗುತ್ತ ಹೆಚ್ಚುಹೆಚ್ಚು ಪಾತಕಿಗಳು ಈ ಬಕೆಟನ್ನು ಉಪಯೋಗಿಸುತ್ತಿದ್ದರು. ಇದರಿಂದ ಸಾವರ್ಕರ್ ಅವರಿಗೆ ಹೊಟ್ಟೆ ತೊಳೆಸಿದಂತಾಗಿ, ಅವರು ಹಾಗೆಯೇ ಕಣ್ಣುಗಳನ್ನು ಮುಚ್ಚಿಕೊಂಡರು. ಆದರೆ, ಇದನ್ನು ಸಹಿಸಿಕೊಳ್ಳದೆ ಅವರಿಗೆ ಬೇರೆ ದಾರಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ವೇದಾಂತಿಯಂತೆ ಯೋಚಿಸತೊಡಗಿದ ಅವರು, ʼಮಲಮೂತ್ರಗಳ ವಿಸರ್ಜನೆಯು ಒಂದು ದೈಹಿಕ ಕ್ರಿಯೆ. ಇದರಿಂದ ಯಾರೂ ಹೊರತಲ್ಲ. ಒಬ್ಬ ಮನುಷ್ಯ ತನ್ನ ಮಲಮೂತ್ರಗಳ ದುರ್ವಾಸನೆಯನ್ನು ತಾನು ಸಹಿಸಿಕೊಳ್ಳಬಲ್ಲವನಾದರೆ, ಅವನು ಬೇರೆಯವರದನ್ನೂ ಸಹಿಸಿಕೊಳ್ಳಬಹುದು. ಆಧ್ಯಾತ್ಮಿಕ ಸಾಧಕರಾದ ರಾಮಕೃಷ್ಣ ಪರಮಹಂಸ ಮತ್ತು ಸಮರ್ಥ ರಾಮದಾಸರೆಲ್ಲ ಮಾಡಿದ್ದು ಹೀಗೆ ಅಲ್ಲವೇ?ʼ ಎಂದು ಯೋಚಿಸತೊಡಗಿದರು.
ನಾಲ್ಕು ದಿನಗಳ ನಂತರ ನರಕ ದರ್ಶನ
ಸಾವರ್ಕರ್ ಅವರು ಸತತವಾಗಿ ನಾಲ್ಕು ದಿನಗಳ ಕಾಲ ಇಂತಹ ಗಬ್ಬು ವಾಸನೆಯನ್ನು ಕುಡಿದುಕೊಂಡೇ ಇರಬೇಕಾಯಿತು. ಆಮೇಲಷ್ಟೆ ಆ ಹಡಗಿನ ಪ್ರಯಾಣದಲ್ಲಿ ದ್ವೀಪ ಸಮೂಹಗಳು ಕಾಣತೊಡಗಿದವು. ಆಗ ಇವರನ್ನು ಹೊತ್ತಿದ್ದ ಹಡಗು ಆ ಕಾಲದಲ್ಲಿ ಪಾತಕಿಗಳನ್ನು ಇಡಲೆಂದು ಏಕೈಕ ಸೆಟ್ಲ್ಮೆಂಟ್ ಪ್ರದೇಶವಿದ್ದ ಪೋರ್ಟ’ಬ್ಲೇರ್‌ನತ್ತ ಹೋಗುತ್ತಿತ್ತು. ಈ ಪೋರ್ಟ’ಬ್ಲೇರ್ ಕೂಡ ಸುತ್ತಮುತ್ತ ಇದ್ದ ಹತ್ತಾರು ದ್ವೀಪಗಳಂತೆಯೇ ಅನೇಕ ಬೆಟ್ಟಗಳನ್ನೂ ದಟ್ಟಕಾಡನ್ನೂ ಹೊಂದಿತ್ತು. ಆದರೆ, ಉಳಿದ ದ್ವೀಪಗಳಿಗಿಂತ ಇದು ಒಂದು ವಿಚಾರದಲ್ಲಿ ಭಿನ್ನವಾಗಿತ್ತು. ಅದೇನೆಂದರೆ, ಇಲ್ಲಿ ಬ್ರಿಟಿಷರು ದಟ್ಟ ಕಾನನದ ನಡುವೆ ಅನೇಕ ಕಟ್ಟಡಗಳನ್ನು ಕಟ್ಟಿದ್ದರು. ಈ ಕಟ್ಟಡಗಳೆಲ್ಲ ಇಲ್ಲಿ ಮೈದಾಳುವಂತೆ ಮಾಡಿದ್ದು ಯಾರೆಂದರೆ, ಬ್ರಿಟಿಷ್ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ಆರ್ಕಿಬಾಲ್ಡ್ ಬ್ಲೇರ್. ಈ ಅಂಡಮಾನ್ ದ್ವೀಪವನ್ನು ಇವನೇ 1789ರಲ್ಲಿ ಬ್ರಿಟಿಷ್ ವಸಾಹತುವನ್ನಾಗಿ ಪರಿವರ್ತಿಸಿದ. ಅದರಲ್ಲೂ ಈ ದ್ವೀಪದ ದಕ್ಷಿಣ ಭಾಗದಲ್ಲಿ ತಲೆಯೆತ್ತಿದ್ದ ಬೃಹತ್ ಕಟ್ಟಡವು ನೋಡಲು ಕೋಟೆಯಂತೆ ಕಾಣುತ್ತಿತ್ತು. ಇದನ್ನು ಮೊದಲಿಗೆ ನೋಡಿದಾಗ ಸಾವರ್ಕರ್ ಅವರು, ‘ಓಹೋ, ಪ್ರಾಯಶಃ ಇದು ಅಂಡಮಾನ್ ದ್ವೀಪದ ಮುಖ್ಯ ಆಯುಕ್ತರ (ಚೀಫ್ ಕಮಿಷನರ್) ನಿವಾಸವಿರಬೇಕು,ʼ ಎಂದುಕೊಂಡಿದ್ದರು. ʼಮಹಾರಾಜʼ ಹಡಗಿನಲ್ಲಿ ಅಂಡಮಾನ್‌ಗೆ ಬಂದಿಳಿದ ಅಪರಾಧಿಗಳಿಗೆ ಎಲ್ಲಕ್ಕಿಂತ ಮೊದಲು, ಕಡಿದಾದ ಕೋಟೆಯಂತಿದ್ದ ಈ ಏಣನ್ನು ಬೇಡಿಗಳ ಸಮೇತ ಹತ್ತುವಂತೆ ಹುಕುಂ ಹೊರಡಿಸಲಾಯಿತು. ಯಾರಾದರೂ ಏದುಸಿರು ಬಿಡುತ್ತ, ಹತ್ತುವುದನ್ನು ನಿಧಾನಗೊಳಿಸಿದರೆ ಅಂಥವರನ್ನು ಬಾಯಿಗೆ ಬಂದಂತೆ ಬೈಯಲಾಗುತ್ತಿತ್ತು. ಆದರೆ, ಒಂದಿಷ್ಟು ದೂರ ಹೋಗುವುದರಲ್ಲೇ ಈ ಅಪರಾಧಿಗಳೆಲ್ಲ, ʼಅಯ್ಯೋ, ಇನ್ನು ಕೆಲವರ್ಷಗಳ ಮಟ್ಟಿಗೆ ಇದೇ ನಮ್ಮ ಪಾಲಿನ ಮನೆ!ʼ ಎನ್ನುವ ಕಟುಸತ್ಯ ಅರ್ಥವಾಗುತ್ತಿತ್ತು. ನಿಜ, ಕೋಟೆಯಂತೆ ಕಾಣುತ್ತಿದ್ದ ಈ ಕಟ್ಟಡ ಬೇರೇನೂ ಅಲ್ಲ, ಅದೇ ಕುಖ್ಯಾತ ಸೆಲ್ಯುಲರ್ ಜೈಲ್! ಪೋರ್ಟಬ್ಲೇರ್‌ನಲ್ಲಿದ್ದ ಸೆಟ್ಲ್ಮೆಂಟ್ ಪ್ರದೇಶಕ್ಕೆ ಮೊದಲು ಬಂಧಿಗಳಾಗಿ ಬಂದವರೆಂದರೆ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಪರವಾಗಿ ಹೋರಾಡಿದ ಕ್ರಾಂತಿಕಾರಿಗಳು; ಇಲ್ಲಿ ಈ ಸೆಲ್ಯುಲರ್ ಜೈಲು ತಲೆಯೆತ್ತಿದ್ದು 1890ರ ದಶಕದ ಉತ್ತರಾರ್ಧದಲ್ಲಿ. ಸಾವರ್ಕರ್ ಅವರು ಇಲ್ಲಿಗೆ ಬಂಧಿಯಾಗಿ ಬರುವ ಹೊತ್ತಿಗಾಗಲೇ ಇಲ್ಲಿ ಕೈದಿಗಳನ್ನು ಕೂಡಿಡಲು 600 ಸೆಲ್‌ಗಳಿದ್ದವು. ಈ ಜೈಲಿನ ಮಧ್ಯಭಾಗದಲ್ಲಿ ಸರಿಯಾಗಿ ಮೂರಂತಸ್ತಿನ ಪ್ರಧಾನ ಗೋಪುರವಿತ್ತು. ಇಲ್ಲಿಂದ ನಿಂತುಕೊಂಡು ನೋಡಿದರೆ ಜೈಲಿನಲ್ಲಿದ್ದ ಮೂರಂತಸ್ತಿನ ಏಳೂ ಬ್ಲಾಕ್‌ಗಳು ಕಾಣುತ್ತಿದ್ದವು. ಈ ಪ್ರತಿಯೊಂದು ಅಂತಸ್ತಿನಲ್ಲೂ 30 ಸೆಲ್‌ಗಳಿದ್ದವು. ಈ ಪ್ರತಿಯೊಂದು ಸೆಲ್‌ನ ವಿಸ್ತೀರ್ಣ ಎಷ್ಟೆಂದರೆ 7.4 ಅಡಿ ಅಗಲ ಮತ್ತು 13.5 ಅಡಿ ಉದ್ದ. ಇಂಥ ಒಂದೊಂದು ಸೆಲ್‌ನಲ್ಲೂ ಒಬ್ಬೊಬ್ಬ ಕೈದಿಯನ್ನು ಇಡಲಾಗುತ್ತಿತ್ತು. ಈ ಸೆಲ್‌ಗಳ ಪೈಕಿ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಇದ್ದವಕ್ಕೆ ಬೆಳಕಿಗೆಂದು ಎತ್ತರದಲ್ಲಿ ಒಂದು ಸಣ್ಣ ಕಿಟಕಿಯನ್ನು ಇಟ್ಟು, ಕೈದಿಗಳು ತಿಪ್ಪರಲಾಗ ಹಾಕಿದರೂ ತಪ್ಪಿಸಿಕೊಳ್ಳದಂತೆ ಅವುಗಳಿಗೆ ಭದ್ರವಾದ ಕಬ್ಬಿಣದ ಸಲಾಕೆಗಳನ್ನಿಟ್ಟಿದ್ದರು; ನೆಲಮಹಡಿಯಲ್ಲಿ ಇದ್ದ ಸೆಲ್‌ಗಳಲ್ಲಿ ದಿಂಡಿನಂತಹ ಕೂಡುಗಂಬಗಳಿದ್ದವು. ಎಲ್ಲ ಸೆಲ್‌ಗಳಲ್ಲೂ ಇಟ್ಟಿದ್ದ ಮರದ ಒಂದು ಹಾಸುತುಂಡಿನ ಮೇಲೆ ಕೈದಿಗಳು ಮಲಗಿಕೊಳ್ಳಬೇಕಾಗಿತ್ತು. ಮಲವಿಸರ್ಜನೆಯ ನಂತರದ ಅಗತ್ಯಕ್ಕೆ ಒಂದು ಮಡಕೆಯನ್ನಿಡುತ್ತಿದ್ದರು. ಇಂತಹ ಸೆಲ್‌ನ ಬಾಗಿಲುಗಳಿಗೆ ಹೊರಗಡೆಯಿಂದ ಮಾತ್ರ ಹಾಕಿಕೊಳ್ಳುವಂತೆ ಕಬ್ಬಿಣದ ಚಿಲಕ ಮತ್ತು ಅಗಳಿಗಳಿದ್ದವು. ಒಂದೊಂದು ಮಹಡಿಯಲ್ಲೂ ಪಡಸಾಲೆಗಳಿದ್ದವು. ಹಾಗೆಯೇ ಒಂದೊಂದು ಬ್ಲಾಕ್‌ನಲ್ಲೂ ಅಂಗಳವಿದ್ದು, ಅಲ್ಲಿ ಕೈದಿಗಳು ಕತ್ತೆಚಾಕರಿ ಮಾಡಬೇಕಾದ ವರ್ಕ್ಶಾಪುಗಳಿದ್ದವು. ಈ ಅಂಗಳದಂತಹ ಜಾಗದಲ್ಲಿ ಸಣ್ಣಸಣ್ಣ ಟ್ಯಾಂಕುಗಳಿದ್ದು, ಅವಕ್ಕೆ ನಲ್ಲಿಯನ್ನು ಅಳವಡಿಸಿದ್ದರು. ಇಂತಹ ಒಂದೊಂದು ಅಂಗಳದಲ್ಲೂ ಕೇವಲ ಒಂದೊಂದು ಶೌಚಾಲಯಗಳು ಮಾತ್ರ ಇದ್ದವು.
ಕ್ರೂರಿ, ಡೇವಿಡ್ ಬ್ಯಾರಿ
ಸೆಲ್ಯುಲಾರ್ ಜೈಲಿಗೂ ಭಾರತದ ಉಳಿದ ಜೈಲುಗಳಿಗೂ ಒಂದು ವ್ಯತ್ಯಾಸವಿತ್ತು. ಅದೆಂದರೆ, ಇಲ್ಲಿದ್ದ ನಿಯಮಗಳು ಅಥವಾ ನಿಯಮಬಾಹಿರತೆ! 19ನೇ ಶತಮಾನದ ಕೊನೆಯವರೆಗೂ ಇಲ್ಲಿ ಯಾವ ನಿಯಮಗಳೂ ಇರಲಿಲ್ಲ. ಆಗ, ಇಲ್ಲಿದ್ದ ಕೈದಿಗಳು, ʼಭಾರತದ ಅಪರಾಧ ದಂಡಸಂಹಿತೆಯಲ್ಲಿ ಹೇಳಿರುವ ನಿಯಮಗಳ ಪ್ರಕಾರ ಈ ಜೈಲು ನಡೆಯುತ್ತಿಲ್ಲ,ʼ ಎಂದು ದೂರಲು ಶುರು ಮಾಡಿದರು. ಆಗ ಇಲ್ಲಿ ನಿಯಮಗಳು ಬರತೊಡಗಿದವು. ಆದರೂ ಬಹುಕಾಲ ಈ ನಿಯಮಗಳೆಲ್ಲ ಬರೀ ಕಾಗದದ ಮೇಲಷ್ಟೆ ಇದ್ದವು. ಕೊನೆಗೂ ಇಲ್ಲಿ ನಿಯಮಗಳು ಬರಲು ಕಾರಣವಾದವನೆಂದರೆ, ಇಲ್ಲಿ ಜೈಲರ್ ಮತ್ತು ಮುಖ್ಯ ನಿಗಾ ಅಧಿಕಾರಿಯಾಗಿದ್ದ ಡೇವಿಡ್ ಬ್ಯಾರಿ. ನಾವೆಲ್ಲ 21ನೇ ಶತಮಾನದಲ್ಲಿ ಅಮೆರಿಕವು ತನ್ನ ಶತ್ರುರಾಷ್ಟ್ರಗಳ ಯೋಧರನ್ನು ಹಿಂಸಿಸಲೆಂದೇ ಗ್ವಾಂಟನಾಮೋ ಕೊಲ್ಲಿಯಲ್ಲಿ ಭಯಾನಕವಾದ ಜೈಲನ್ನು ಕಟ್ಟಿರುವುದನ್ನು ಕೇಳುತ್ತಿದ್ದೇವೆ. ಈ ದೃಷ್ಟಿಯಿಂದ ನೋಡಿದರೆ, ಅಂಡಮಾನ್‌ನ ಸೆಲ್ಯುಲರ್ ಜೈಲು 20ನೇ ಶತಮಾನದ ಗ್ವಾಂಟನಾಮೋ ಜೈಲಾಗಿತ್ತು. ಒಟ್ಟಿನಲ್ಲಿ, ಡೇವಿಡ್ ಬ್ಯಾರಿಯ ಇಚ್ಛೆಗೆ ತಕ್ಕಂತೆ ಇಲ್ಲಿಯ ನಿಯಮಗಳು ರೂಪಿತವಾಗುತ್ತಿದ್ದವು ಮತ್ತು ಅವನಿಗೆ ಹೇಗೆ ಬೇಕೋ ಹಾಗೆ ಅವು ಬದಲಾಗುತ್ತಲೂ ಇದ್ದವು. ಈತನ ದಾಸಾನುದಾಸರಂತೆ ಇದ್ದ ಜನರು ಈ ನಿಯಮಗಳನ್ನು ಜಾರಿಗೆ ತರುತ್ತಿದ್ದರು. ಈ ಅಡಿಯಾಳುಗಳಲ್ಲೂ ಮೂರು ಸ್ತರಗಳ ಜನರಿದ್ದರು. ಅವರೆಂದರೆ- ಜಾಮದಾರರು, ವಾರ್ಡರ್‌ಗಳು ಮತ್ತು ಸಣ್ಣಪುಟ್ಟ ಚಾಕರಿಗಳನ್ನು ಮಾಡುವವರು. ವಿಚಿತ್ರವೆಂದರೆ, ಜೈಲಿನ ಕೈದಿಗಳ ಗುಂಪಿನಿಂದಲೇ ಇವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಈ ಜನಗಳು ಸ್ವತಃ ಇಂಗ್ಲಿಷ್ ಅಧಿಕಾರಿಗಳಿಗಿಂತ ಹೆಚ್ಚು ಉತ್ಸಾಹದಿಂದ ಡೇವಿಡ್ ಬ್ಯಾರಿ ಹೇಳುತ್ತಿದ್ದ ನಿಯಮಗಳನ್ನೆಲ್ಲ ಜಾರಿಗೆ ತರುತ್ತಿದ್ದರು!
ಈ ಡೇವಿಡ್ ಬ್ಯಾರಿ ಎಂತಹ ಕ್ರೂರಿಯೆಂದರೆ, ಇವನನ್ನು ಕಂಡರೆ ಸಾಕು, ಕೈದಿಗಳ ಥರಗುಟ್ಟುತ್ತಿದ್ದರು. ಅಲಿಪುರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ, ಸಾವರ್ಕರ್ ಅವರಗಿಂತ ಒಂದು ವರ್ಷ ಮುಂಚೆ ಆರು ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿ ಇದೇ ಜೈಲಿನಲ್ಲಿ ಬಂಧಿಯಾಗಿದ್ದ ಬರೀಂದ್ರ ಘೋಷ್ (ಅರವಿಂದ ಘೋಷರ ತಮ್ಮ) ಈ ಬಗ್ಗೆ ಬರೆಯುತ್ತ, ʼಹುಲಿಯನ್ನು ಕಂಡರೆ ಹುಲ್ಲೆಯು ಹೇಗೆ ಹೆದರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಅಧಿಕಾರಿಯನ್ನು ಕಂಡರೆ ಇಲ್ಲಿನ ಕೈದಿಗಳು ಆ ಹುಲ್ಲೆಗಿಂತಲೂ ಎರಡು ಪಟ್ಟು ಹೆಚ್ಚು ಗಡಗಡನೆ ನಡುತ್ತಿದ್ದರು. ಹಾಗೆ ನೋಡಿದರೆ, ಈ ಡೇವಿಡ್ ಬ್ಯಾರಿಯು ಅಂಡಮಾನಿನ ಅನಭಿಷಿಕ್ತ ರಾಜನೇ ಆಗಿಹೋಗಿದ್ದ,ʼ ಎಂದು ವಿವರಿಸಿದ್ದಾರೆ. ಈತ ನೋಡಲು ಕುಳ್ಳ ಮತ್ತು ಠೊಣಪನಾಗಿದ್ದ; ಹೊತ್ತುಹೊತ್ತಿಗೂ ಗಡದ್ದಾಗಿ ಉಂಡು ಅವನ ಹೊಟ್ಟೆ ಮುಂದಕ್ಕೆ ಬಂದಿತ್ತು; ಜೊತೆಗೆ ದುಂಡಾದ ಕಣ್ಣುಗಳು; ಚಪ್ಪಟೆಯಾದ ಮೂಗು; ಚೂಪಾದ ಮೀಸೆ. ಅಂಡಮಾನ್ ಜೈಲಿಗೆ ಯಾರೇ ಹೊಸ ಕೈದಿ ಬಂದರೂ ಅವನು ತನ್ನನ್ನು ತಾನು ಒಂದು ವಿಚಿತ್ರವಾದ ರೀತಿಯಲ್ಲಿ -ಕೈದಿಗಳಿಗೆ ಭಯದಿಂದ ಚಳುಕು ಹುಟ್ಟುವಂತೆ- ಪರಿಚಯ ಮಾಡಿಕೊಳ್ಳುತ್ತಿದ್ದನಂತೆ. ಬರೀಂದ್ರ ಘೋಷ್ ಅವರ ಪ್ರಕಾರ ಇವನು ಕೈದಿಗಳ ಎದುರು, ʼನೋಡಿ, ನಿಮ್ಮ ಸುತ್ತ ಒಂದು ಗೋಡೆ ಇದೆ. ಆದರೆ, ಈ ಗೋಡೆಯೇನೂ ಎತ್ತರವಾಗಿಲ್ಲ. ಯಾಕೆ ಗೊತ್ತಾ? ಗೋಡೆ ಎತ್ತರವಿಲ್ಲದಿದ್ದರೂ ನೀವು ಇಲ್ಲಿಂದ ತಪ್ಪಿಸಿಕೊಳ್ಳುವುದು ಅಸಂಭವ. ಏಕೆಂದರೆ, ಇಲ್ಲಿಂದ ಸಾವಿರ ಮೈಲಿಯುದ್ದಕ್ಕೂ ಸಮುದ್ರವಿದೆ. ಇನ್ನು ಇಲ್ಲಿ ಸುತ್ತಮುತ್ತ ಇರುವ ಅರಣ್ಯದಲ್ಲಿ ಕ್ರೂರಿಗಳಾದ ಕಾಡುಮನುಷ್ಯರಿದ್ದಾರೆ (ಅವನು ಅಂಡಮಾನಿನ ಸ್ಥಳೀಯ ಜರಾವಾ ಬುಡಕಟ್ಟು ಜನರನ್ನು ಹೀಗೆ ಕಾಡುಮನುಷ್ಯರೆಂದು ಕರೆಯುತ್ತಿದ್ದ). ನೀವೇನಾದರೂ ಅವರ ಕಣ್ಣಿಗೆ ಬಿದ್ದರೆ ನಿಮ್ಮ ಕತೆ ಮುಗಿದಂತೆಯೇ. ಅವರು ತಮ್ಮಲ್ಲಿರುವ ಚೂಪಾದ ಬಾಣಗಳಿಂದ ನಿಮ್ಮ ಕರುಳನ್ನು ಬಗೆದು, ತಿಂದು ಹಾಕಿಬಿಡುತ್ತಾರಷ್ಟೆ,ʼ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಇನ್ನು ತನ್ನ ಅಧಿಕಾರ ಎಷ್ಟಿದೆಯೆಂದು ತೋರಿಸಿಕೊಳ್ಳಲು ಅವನು, ʼನೋಡಿ, ನನ್ನ ಮಾತನ್ನು ತುಟಿಕ್‌ಪಿಟಿಕ್ ಎನ್ನದೆ ಕೇಳಬೇಕು. ಏನಾದರೂ ಕಮಕ್‌ಕಿಮಕ್ ಎಂದರೆ, ಆ ದೇವರೇ ನಿಮ್ಮನ್ನು ಕಾಪಾಡಬೇಕಷ್ಟೆ!ʼ ಎನ್ನುತ್ತಿದ್ದನಂತೆ. ಜೊತೆಗೆ, ಅದೇ ಉಸಿರಿನಲ್ಲಿ, ʼನೋಡಿ, ಒಂದು ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಆ ದೇವರು ಕೂಡ ಈ ಪೋರ್ಟ್ ಬ್ಲೇರ್‌ನ ಮೂರು ಮೈಲಿ ಸುತ್ತಳತೆಯಲ್ಲಿ ಕಾಲಿಡಲಾರ!ʼ ಎಂದು ಎಚ್ಚರಿಕೆಯ ಸಂದೇಶ ಕೊಡುತ್ತಿದ್ದನಂತೆ.
ಬ್ಯಾರಿ-ಸಾವರ್ಕರ್ ಭೇಟಿ
ಇಂತಹ ಡೇವಿಡ್ ಬ್ಯಾರಿಯು ಸಾವರ್ಕರ್ ಅವರನ್ನು ಮೊದಲ ಸಲವೇ ಪ್ರತ್ಯೇಕವಾಗಿ ಭೇಟಿ ಮಾಡಿ, ಮಾತನಾಡಿದ. ಅಂದರೆ, ಹೊಸ ಕೈದಿಗಳ ತಂಡ ಬಂದಾಗ ಅವರನ್ನೆಲ್ಲ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈತ ಸಾವರ್ಕರ್ ಅವರನ್ನು ಉದ್ದೇಶಿಸಿ ಏನೂ ಮಾತನಾಡಲಿಲ್ಲ. ಫ್ರಾನ್ಸ್‌ನ ಮಾರ್ಸೆಲಸ್‌ನಲ್ಲಿ ಈ ತರುಣ ಕ್ರಾಂತಿಕಾರಿಯು ಬ್ರಿಟನ್ನಿನ ಹಡಗಿನಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಘಟನೆಯು ಸೃಷ್ಟಿಸಿದ್ದ ಕೋಲಾಹಲ ಮತ್ತು ಅಂಡಮಾನಿಗೆ ಇವರನ್ನು ಸ್ಥಳಾಂತರಿಸುವಾಗ ಬ್ರಿಟಿಷ್ ಗೃಹ ಇಲಾಖೆಯು ಜೈಲಿನ ಅಧಿಕಾರಿಗಳಿಗೆ, ʼಈ ಆಸಾಮಿಯ ಮೇಲೆ ನೀವು ಹದ್ದಿನ ಕಣ್ಣಿಟ್ಟಿರಬೇಕು. ಇಲ್ಲದಿದ್ದರೆ ಈತ ಮತ್ತೆ ಪರಾರಿಯಾಗಿ ಬಿಡಬಹುದು,ʼ ಎಂಬ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು ಇದಕ್ಕೆ ಕಾರಣವಾಗಿತ್ತು. ಹೀಗಾಗಿ, ಇಪ್ಪತ್ತಾರರ ಏರುಪ್ರಾಯದ ಸಾವರ್ಕರ್ ಅವರನ್ನು ಎದುರಿಗೆ ಕೂರಿಸಿಕೊಂಡ ಬ್ಯಾರಿ, ಮೊದಲಿಗೆ ಅವರಿಗೆ ಹಿತವಚನಗಳನ್ನು ಹೇಳುವ ಧಾಟಿಯಲ್ಲಿ, ʼಮಿಸ್ಟರ್, ಮೂಲತಃ ನಾನೊಬ್ಬ ಐರಿಷ್ ಮನುಷ್ಯ. ನಿನ್ನಂತೆ ಪ್ರಾಯದ ಹುಡುಗನಾಗಿದ್ದಾಗ ನಾನೂ ಸಹ ಐರ್ಲೆಂಡಿನ ಸ್ವಾತಂತ್ರ್ಯ ಚಳವಳಿಯಲ್ಲಿದ್ದವನೇ. ಆದರೆ, ವಯಸ್ಸು ಮತ್ತು ಅನುಭವವಾಗುತ್ತ ಬಂದಂತೆ ನನ್ನ ಮನಸ್ಸು ಬದಲಾಯಿತು. ನಿನಗಿನ್ನೂ ಇಪ್ಪತ್ತಾರು ವರ್ಷವಷ್ಟೆ. ನೀನಿನ್ನೂ ಬಾಳಿ, ಬದುಕುಬೇಕಾದ ಹುಡುಗ. ಈ ರೀತಿ ಕ್ರಾಂತಿ-ಗೀತಿ ಎಂದುಕೊಂಡು ಜೀವನವನ್ನು ಹಾಳು ಮಾಡಿಕೊಳ್ಳಬೇಡ. ಒಂದು ಮಾತನ್ನು ನೀನು ನೆನಪಿಟ್ಟುಕೊ. ನೀನು ಯಾವ ಉದ್ದೇಶದಿಂದಲಾದರೂ ಕೊಲೆ ಮಾಡು, ಅದು ಕೊಲೆಯೇ. ಇಂಥ ಕೊಲೆಗಳು ಯಾವತ್ತೂ ಒಂದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವುದಿಲ್ಲ,ʼ ಎಂದು ಒತ್ತಿ ಹೇಳಿದ. ಈ ಮಾತುಗಳನ್ನು ಕೇಳಿಸಿಕೊಂಡ ಸಾವರ್ಕರ್, ʼನೋಡಿ ಮಿಸ್ಟರ್ ಬ್ಯಾರಿ, ನೀವೊಬ್ಬ ಬ್ರಿಟಿಷ್ ಆಸಾಮಿಯೇ ಆಗಿದ್ದರೂ ನಾನು ನಿಮ್ಮನ್ನು ದ್ವೇಷಿಸುತ್ತಿರಲಿಲ್ಲ. ಏಕೆಂದರೆ, ಸ್ವತಃ ಇಂಗ್ಲೆಂಡಿನಲ್ಲಿ ನಾನು ಕೆಲವು ವರ್ಷಗಳ ಕಾಲ ಇದ್ದು ಬಂದಿರುವವನು. ಇಂಗ್ಲೀಷರ ರೀತಿನೀತಿಗಳು, ಅವರಲ್ಲಿರುವ ಗುಣಗಳು ನನಗೆ ತುಂಬಾ ಇಷ್ಟ,ʼ ಎಂದರು. ಇದರ ಜೊತೆಗೆ, ʼಮಿಸ್ಟರ್ ಬ್ಯಾರಿ, ನೀವು ಐರ್ಲೆಂಡ್‌ನ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಕ್ರಾಂತಿಕಾರಿ ಸಂಘಟನೆಯಾದ ಸಿನ್ ಫೀರ್ಸ್‌ನ ಸದಸ್ಯರಿಗೆ ನಿಮ್ಮ ಈ ಸಲಹೆಗಳನ್ನು ಕೊಟ್ಟಿಲ್ಲ ಎನಿಸುತ್ತದೆ. ಇದು ಸರಿಯಲ್ಲ. ಹಾಗೆಯೇ, ನಾನು ರಾಜಕೀಯ ಕೊಲೆಗಳನ್ನು ಮಾಡಬೇಕೆಂದು ಪ್ರತಿಪಾದಿಸುತ್ತಿದ್ದೇನೆಂದು ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ,ʼ ಎಂದೂ ಅವರು ಸೇರಿಸಿದರು. ಈ ಮನುಷ್ಯನನ್ನು ಸುಲಭವಾಗಿ ಗೆಲ್ಲುವುದು ಸಾಧ್ಯವಿಲ್ಲ ಎನ್ನುವುದನ್ನು ಗ್ರಹಿಸಿದ ಡೇವಿಡ್ ಬ್ಯಾರಿ, ತಕ್ಷಣವೇ ತನ್ನ ತಂತ್ರವನ್ನು ಬದಲಿಸಿ, ʼಏಯ್, ನೀನು ಜೈಲಿನ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ನಿನಗೆ ತಕ್ಕ ಶಿಕ್ಷ ಕಾದಿದೆ,ʼ ಎಂದು ಗದರುವ ದನಿಯಲ್ಲಿ ಹೇಳಿದ. ಅಲ್ಲದೆ, ಉಳಿದ ಕೈದಿಗಳಿಗೆಲ್ಲ ಹೇಳುತ್ತಿದ್ದ ಹಾಗೆ ಕೊನೆಯದಾಗಿ, ʼಇಲ್ಲಿಂದ ಪರಾರಿಯಾಗಲು ನೋಡಬೇಡ. ಹಾಗೇನಾದರೂ ಮಾಡಲು ಹೋದರೆ ಇಲ್ಲಿರುವ ಕಾಡುಮನುಷ್ಯರಿಗೆ ನೀನು ಆಹಾರವಾಗುತ್ತೀಯ ಅಷ್ಟೆ!ʼ ಎಂದು ಎಚ್ಚರಿಸಿದ.
ಒಟ್ಟಿನಲ್ಲಿ, ಈ ಡೇವಿಡ್ ಬ್ಯಾರಿಯು ‘ನಾನು ಹೇಳಿದ್ದೇ ಕಾನೂನು,ʼ ಎನ್ನುವಂತೆ ದರ್ಪದಿಂದ ಮೆರೆಯುತ್ತಿದ್ದ. ಭಾರತದಲ್ಲಿ ನಡೆಯತೊಡಗಿದ ಕ್ರಾಂತಿಕಾರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರವು ರಾಜಕೀಯ ಕೈದಿಗಳನ್ನು ʼಅಪಾಯಕಾರಿʼ ಎಂದು ಪರಿಗಣಿಸಿ, ಅಂಥವರಿಗೆ ಸಾಮಾನ್ಯ ಕೈದಿಗಳಿಗಿಂತ ಹೆಚ್ಚಿನ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ತೀರ್ಮಾನಿಸಿದ್ದು ಅವನ ಇಂತಹ ಬರ್ಬರ ವರ್ತನೆಗೆ ಕಾರಣವಾಗಿತ್ತು. ಮುಖ್ಯವಾಗಿ ಬ್ರಿಟಿಷ್ ಸರಕಾರವು, ಜೈಲಿನಲ್ಲಿರುವ ರಾಜಕೀಯ ಕೈದಿಗಳು ಒಬ್ಬರಿಗೊಬ್ಬರು ಜೊತೆಗೂಡದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಯಾವ ಕಾರಣಕ್ಕೂ ಗುಮಾಸ್ತಿಕೆಯ ಕೆಲಸವನ್ನು ಕೊಡಬಾರದು. ಬದಲಿಗೆ, ಇವರಿಂದೆಲ್ಲ ಕಡುಕಷ್ಟದ ಕತ್ತೆಚಾಕರಿಗಳನ್ನೇ ಮಾಡಿಸಬೇಕು ಎಂದು ಸ್ಪಷ್ಟವಾಗಿ ಹೇಳಿತ್ತು. ಅಲ್ಲದೆ, ಸಾಮಾನ್ಯ ಕೈದಿಗಳಿಗೆ ಇರುತ್ತಿದ್ದ ಯಾವೊಂದು ಹಕ್ಕುಗಳೂ ರಾಜಕೀಯ ಕೈದಿಗಳಿಗೆ ಇರುತ್ತಿರಲಿಲ್ಲ. ಈ ಕೈದಿಗಳು ತಮಗೆ ಸೂಚಿಸಿದ ಕೆಲಸವನ್ನೇನಾದರೂ ಪೂರೈಸಲಿಲ್ಲವೆಂದರೆ ಜೈಲಿನ ಅಧಿಕಾರಿಗಳು ಇವರಿಗೆ ಲಾಠಿಯಲ್ಲಿ ಬಾರಿಸಬಹುದಿತ್ತು; ಛಡಿ ಏಟನ್ನೂ ಕೊಡಬಹುದಿತ್ತು; ಅಲ್ಲದೆ, ಬಾಯಿಗೆ ಬಂದಂತೆ ಬೈಯಬಹುದಿತ್ತು. ಇಷ್ಟೇ ಅಲ್ಲ, ರಾಜಕೀಯ ಕೈದಿಗಳಿಗೆ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ನಿಷೇಧಿಸಲಾಗಿತ್ತು. ಇವರ ಬಳಿ ಒಂದು ತುಂಡು ಕಾಗದವೋ, ಸೀಸದ ಕಡ್ಡಿಯೋ ಕಂಡುಬಂದರೆ, ಅಥವಾ ಅದರ ಮೇಲೇನಾದರೂ ನಾಲ್ಕು ಸಾಲು ಬರವಣಿಗೆ ಕಂಡರೆ, ಆ ದೇವರೇ ಇವರನ್ನು ಕಾಪಾಡಬೇಕಾಗಿತ್ತು! ಅಲ್ಲಿ ಇವರಿಗೆ ಕೊಡುತ್ತಿದ್ದ ಆಹಾರವೂ ಅಷ್ಟೆ, ಅದು ಅರೆಹೊಟ್ಟೆಗೂ ಸಾಕಾಗುತ್ತಿರಲಿಲ್ಲ. ಶೌಚಾಲಯಕ್ಕೂ ಅಷ್ಟೆ, ರಾಜಕೀಯ ಕೈದಿಗಳು ಒಂದು ದಿನದಲ್ಲಿ ಗೊತ್ತುಪಡಿಸುತ್ತಿದ್ದ ‘ಮೂರು ಗಂಟೆಗಳ ಕಾಲದಲ್ಲಿ’ ಮಾತ್ರವೇ ಮಲಮೂತ್ರ ವಿಸರ್ಜನೆಗಳನ್ನು ಮುಗಿಸಿಕೊಳ್ಳಬೇಕಾಗಿತ್ತು. ಸಾಮಾನ್ಯ ಕೈದಿಗಳಿಗೆ ಅವರ ಸನ್ನಡತೆಯ ಆಧಾರದ ಮೇಲೆ ಶಿಕ್ಷೆಯನ್ನು ಕಡಿತಗೊಳಿಸಲಾಗುತ್ತಿತ್ತು. ಆದರೆ, ಸಾವರ್ಕರ್ ಅವರಂತಹ ರಾಜಕೀಯ ಕೈದಿಗಳಿಗೆ ಈ ಹಕ್ಕಿರಲಿಲ್ಲ. ಇವರು ಯಾವುದೇ ಸಂದರ್ಭದಲ್ಲಿ ಜೈಲಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎನಿಸಿದರೆ, ಇವರನ್ನು ದಿನವಿಡೀ ನಿಲ್ಲಿಸಿ ಕೈಗಳಿಗೆ ಕೋಳ ಹಾಕಿ ಕಟ್ಟಿಹಾಕಲಾಗುತ್ತಿತ್ತು; ಇಲ್ಲವೇ ಸರಪಳಿ ಹಾಕಲಾಗುತ್ತಿತ್ತು; ಅಥವಾ ಅಡ್ಡಪಟ್ಟಿಯ ಬೇಡಿಗಳನ್ನು ತೊಡಿಸಲಾಗುತ್ತಿತ್ತು. ಇವುಗಳ ವಿವರವನ್ನು ಮುಂದೆ ನೋಡೋಣ.
ಕಾಲಾಪಾನಿ
ಹಿಂಸೆ, ಕಿರುಕುಳ ಮತ್ತು ಕಾವಲು
ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕೈದಿಗಳಾಗಿ ಬಂದವರಿಗೆ ಸ್ನಾನಕ್ಕೆ ಬಂಗಾಳಕೊಲ್ಲಿಯೇ ಗತಿಯಾಗಿತ್ತು! ಈ ಉಪ್ಪುನೀರಿನಲ್ಲಿ ಸ್ನಾನ ಮಾಡುತ್ತಿದ್ದುದರಿಂದ ಚರ್ಮದಲ್ಲಿ ವಿಪರೀತ ತುರಿಕೆ ಕಾಣಿಸಿಕೊಳ್ಳುತ್ತಿತ್ತು; ತಲೆಗೂದಲೆಲ್ಲ ಒರಟಾಗುತ್ತಿತ್ತು. ಒಮ್ಮೆ ಸಾವರ್ಕರ್ ಅವರನ್ನು ಸ್ನಾನಕ್ಕೆಂದು ಬಿಡಲಾಯಿತು. ಆಗ ಇವರನ್ನು ಪಹರೆ ಕಾಯಲು ನಿಯೋಜಿತನಾಗಿದ್ದ ಒಬ್ಬ ಪಠಾಣ್ ಮುಸ್ಲಿಂ ಪಂಗಡಕ್ಕೆ ಸೇರಿದ ಜಾಮದಾರನು ಇವರನ್ನು ಜೈಲಿನ ಏಳನೇ ಬ್ಲಾಕ್‌ಗೆ ಕರೆದುಕೊಂಡು ಹೋದ. ಅಲ್ಲಿ ಸಾವರ್ಕರ್ ಅವರು ಇನ್ನಿತರ ಕೈದಿಗಳೊಂದಿಗೆ ಯಾವ ಕಾರಣಕ್ಕೂ ಮಾತನಾಡಲು ಆಸ್ಪದವಿರಬಾರದೆಂದು 7ನೇ ಬ್ಲಾಕಿನ ಕಾರಿಡಾರನ್ನೆಲ್ಲ ಖಾಲಿ ಮಾಡಿಸಿ, ಒಂದು ಏಕಾಂತದ ಸೆಲ್‌ಗೆ ತಳ್ಳಿ, ಹೊರಗಡೆಯಿಂದ ಚಿಲಕ-ಅಗಳಿ ಎರಡನ್ನೂ ಹಾಕಿಕೊಳ್ಳಲಾಯಿತು. ಇದಲ್ಲದೆ, ಸಾವರ್ಕರ್ ಅವರನ್ನು ದಿನದ ಇಪ್ಪತ್ನಾಲ್ಕು ಗಂಟೆಯೂ ಪಹರೆ ಕಾಯಲು ಮೂವರು ವಾರ್ಡರ್‌ಗಳನ್ನು -ಇವರಲ್ಲಿ ಇಬ್ಬರು ಬಲೂಚಿ ಮುಸ್ಲಿಮರಾದರೆ, ಇನ್ನೊಬ್ಬ ಪಠಾಣ್ ಮುಸ್ಲಿಂ- ನೇಮಿಸಲಾಗಿತ್ತು.
ಸ್ನಾನದ್ದು ಈ ಗತಿಯಾದರೆ, ಊಟ-ತಿಂಡಿ ಕೂಡ ಇಷ್ಟೇ ಕೆಟ್ಟದಾಗಿರುತ್ತಿದ್ದವು. ಆದರೆ, ಎಷ್ಟೇ ಹೊಟ್ಟೆ ಹಸಿದಿದ್ದರೂ ಇದನ್ನೇ ತಿನ್ನಬೇಕಾಗುತ್ತಿತ್ತು. ಅಲ್ಲಿ ಕೊಡುತ್ತಿದ್ದ ಊಟ-ತಿಂಡಿಗಳಲ್ಲಿ ಉಪ್ಪು-ಹುಳಿ-ಖಾರ ಹೀಗೆ ಯಾವ ರುಚಿಯೂ ಇರುತ್ತಿರಲಿಲ್ಲ; ಹಾಗೆಯೇ, ಅವರು ಕೊಡುತ್ತಿದ್ದುದು ಹೊಟ್ಟೆಗೆ ಸಾಲುತ್ತಲೂ ಇರಲಿಲ್ಲ. ಕೈದಿಗಳಿಗೆಂದು ದಿನವೂ ಕೊಡುತ್ತಿದ್ದ ಬ್ರೆಡ್ ತುಂಡುಗಳನ್ನು ವಾರ್ಡರುಗಳು, ಇಲ್ಲವೇ ಸಣ್ಣಪುಟ್ಟ ಚಾಕರಿ ಮಾಡುತ್ತಿದ್ದ ಜೈಲಿನ ಸಿಬ್ಬಂದಿಯೇ ಎಗರಿಸಿ ಬಿಡುತ್ತಿದ್ದರು; ವಾರಕ್ಕೊಂದು ದಿನ ಕೊಡುತ್ತಿದ್ದ ಮೊಸರಿಗೂ ಇದೇ ಗತಿಯಾಗುತ್ತಿತ್ತು. ಬ್ರೆಡ್ಡು ಮತ್ತು ಮೊಸರನ್ನು ಕೊಡದಿದ್ದ ಕೈದಿಗಳಿಗೆ ಬೆನ್ನಮೇಲೆ ಬಾಸುಂಡೆ ಬರುವಂತೆ ಏಟುಗಳು ಬೀಳುತ್ತಿದ್ದವು. ಇನ್ನು ಅನ್ನವಂತೂ ಅರೆಬರೆ ಬೆಂದಿರುತ್ತಿತ್ತು; ಊಟಕ್ಕೆಂದು ಕೊಡುತ್ತಿದ್ದ ತೊವ್ವೆಯೂ ಅಷ್ಟೆ, ಅದರಲ್ಲಿ ಶುಚಿ-ರುಚಿ ಎರಡೂ ಇರುತ್ತಿರಲಿಲ್ಲ; ಅಪರೂಪಕ್ಕೊಮ್ಮೆ ಕೊಡುತ್ತಿದ್ದ ಅಕ್ಕಿಗಂಜಿಯಲ್ಲಿ ಸೀಮೆಎಣ್ಣೆ ಬಿದ್ದಿರುತ್ತಿತ್ತು! ಇಷ್ಟು ಸಾಲದೆಂಬಂತೆ, ಮೈಯೆಲ್ಲೆಲ್ಲ ಬೆವರು ಸುರಿಸುತ್ತಿದ್ದ ಕೆಲವು ಕೈದಿಗಳೇ ಕೆಟ್ಟು ಕೊಳಕಾಗಿದ್ದ ಸಾಮೂಹಿಕ ಅಡುಗೆಮನೆಯಲ್ಲಿ ಈ ಅಡುಗೆಯನ್ನು ಮಾಡುತ್ತಿದ್ದರು. ಇದರಿಂದ ಎಷ್ಟೋ ಸಲ ಕೈದಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಬರುತ್ತಿದ್ದವು.
ಮೊದಲಿನಿಂದಲೂ ಪ್ರತ್ಯೇಕವಾಗಿಯೇ ಇದ್ದ ಸಾವರ್ಕರ್, ತಮ್ಮ ಸೆಲ್‌ನಲ್ಲಿ ತಾವಿರುತ್ತಿದ್ದರು. ಆದರೆ, ಜೈಲಿಗೆ ಬಂದು ಹದಿನೈದು ದಿನಗಳಾದ ಮೇಲೆ ಇವರನ್ನು ಕೆಳಕ್ಕೆ ಕರೆದುಕೊಂಡು ಬಂದು, ತಮ್ಮ ಬ್ಲಾಕ್‌ನ ಎದುರಿಗಿದ್ದ ಅಂಗಳದಲ್ಲಿ ತೆಂಗಿನ ನಾರನ್ನು ಕುಟ್ಟುವ ಕೆಲಸ ಮಾಡುವಂತೆ ಹುಕುಂ ಹೊರಡಿಸಲಾಯಿತು. ಆಗಂತೂ ಇಡೀ ಅಂಡಮಾನ್‌ನಲ್ಲಿ ಇದ್ದುದೆಲ್ಲ ಸರಕಾರಿ ಜಮೀನೇ ಆಗಿದ್ದು, ಎಲ್ಲೆಡೆಯೂ ತೆಂಗಿನ ಮರಗಳು ಹುಲುಸಾಗಿದ್ದವು. ಹೀಗಾಗಿ, ಈ ದ್ವೀಪದ ಇಡೀ ವ್ಯಾಪಾರ ವಹಿವಾಟು ತೆಂಗಿನ ಉತ್ಪನ್ನಗಳ ಸುತ್ತಲೇ ನಡೆಯುತ್ತಿತ್ತು. ಒಟ್ಟಿನಲ್ಲಿ, ಸೆಲ್ಯುಲರ್ ಜೈಲಿನಲ್ಲಿ ಕೈದಿಗಳು ಪ್ರತಿದಿನವೂ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮತ್ತು ಮಧ್ಯಾಹ್ನದಿಂದ ಸಂಜೆ 5 ಗಂಟೆಯವರೆಗೆ ಕತ್ತೆಚಾಕರಿ ಮಾಡಬೇಕಾಗಿತ್ತು. ಬೆಳಗ್ಗೆ 10 ಗಂಟೆಯಾದ ನಂತರ ಈ ಕೈದಿಗಳಿಗೆ ಎರಡು ಗಂಟೆಗಳ ಕಾಲ ಊಟಕ್ಕೆಂದು ಬಿಡುವು ಕೊಡಲಾಗುತ್ತಿತ್ತಷ್ಟೆ.
ನಾರಿನ ಜತೆ ಸವೆಸಿದ ದಿನಗಳು
ರಾಜಕೀಯ ಕೈದಿಗಳಿಗೆ ಇಲ್ಲಿ ವಿಧಿಸುತ್ತಿದ್ದ ಕಡುಕಷ್ಟದ ಕೆಲಸವೆಂದರೆ ಅದು ತೆಂಗಿನ ನಾರನ್ನು ಕುಟ್ಟುವುದೇ ಆಗಿತ್ತು. ಆದರೆ, ಪುಸ್ತಕ-ಪೆನ್ನು-ಪೆನ್ಸಿಲ್ಲುಗಳ ಒಡನಾಟದಲ್ಲಿ ಬೆಳೆದಿರುತ್ತಿದ್ದ ಈ ಭಾರತೀಯ ಚಿಂತಕರ ವರ್ಗಕ್ಕೆ ಇದು ಭಯಾನಕವಾದ ಹಿಂಸೆಯನ್ನು ಉಂಟುಮಾಡುತ್ತಿತ್ತು. ಏಕೆಂದರೆ, ಇಂತಹ ಪ್ರತಿಯೊಬ್ಬ ರಾಜಕೀಯ ಕೈದಿಯ ಮುಂದೆಯೂ ಜೈಲಿನ ಸಿಬ್ಬಂದಿ ಪ್ರತಿದಿನವೂ ಇಪ್ಪತ್ತು ತೆಂಗಿನಕಾಯಿಗಳನ್ನು ಸುಲಿದರೆ ಬರುವ ನಾರನ್ನೆಲ್ಲ ಗುಡ್ಡೆ ಹಾಕುತ್ತಿದ್ದರು. ಕೈದಿಗಳು ಒಂದು ಮರದ ಸುತ್ತಿಗೆಯಲ್ಲಿ ಈ ನಾರು ಮೃದುವಾಗುವವರೆಗೂ ಅದನ್ನು ಜಜ್ಜಬೇಕಾಗುತ್ತಿತ್ತು. ನಂತರ, ಈ ನಾರಿನ ಹೊಟ್ಟನ್ನು ನೀರಿನಲ್ಲಿ ನೆನೆಸುತ್ತಿದ್ದರು. ಅದನ್ನು ಮತ್ತೊಮ್ಮೆ ಕುಟ್ಟಿದ ಮೇಲೆ ಉಳಿಯುತ್ತಿದ್ದ ನಾರನ್ನು ಬಿಸಿಲಿನಲ್ಲಿ ಒಣಗಿಸಿ, ಒಪ್ಪ ಮಾಡಬೇಕಾಗುತ್ತಿತ್ತು. ಇದರ ಜೊತೆಗೆ ಪ್ರತಿದಿನವೂ ಸಂಜೆ ಐದು ಗಂಟೆಯ ಹೊತ್ತಿಗೆ ಒಂದರಿಂದ ಮೂರು ಪೌಂಡುಗಳಷ್ಟು ಹಗ್ಗವನ್ನು ಹೊಸೆಯಬೇಕಾದ್ದು ಕಡ್ಡಾಯವಾಗಿತ್ತು. ಇಂತಹ ಕೆಲಸಕ್ಕೆ ದೂಡಲ್ಪಟ್ಟ ಸಾವರ್ಕರ್ ಅವರಿಗೆ ಕೈಮೇಲೆಲ್ಲ ಗುಳ್ಳೆಗಳು ಕಾಣಿಸಿಕೊಂಡವಲ್ಲದೆ, ರಟ್ಟೆಗಳಲ್ಲೆಲ್ಲ ಅಸಹನೀಯವಾದ ನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ತಡೆಯಲಾಗದೆ, ಸಾವರ್ಕರ್ ಅವರು ಪ್ರತಿದಿನ ಸಂಜೆ ಇದರ ಬಗ್ಗೆ ದೂರುತ್ತಿದ್ದರು. ಆದರೆ, ಜೈಲಿನ ಅಧಿಕಾರಿಗಳು ಇದನ್ನೆಲ್ಲ ಕೇಳಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ, ‘ಮಿಸ್ಟರ್, ನೀನು ನಿಜಕ್ಕೂ ನಮಗೆ ಕೃತಜ್ಞನಾಗಿರಬೇಕು. ಏಕೆಂದರೆ, ಉಳಿದ ಕೈದಿಗಳಿಗೆ ಇನ್ನೂ ಹೆಚ್ಚು ಕೆಲಸವನ್ನು ಕೊಡಲಾಗಿದೆ. ನಿನಗೆ ನಾವು ಕೊಟ್ಟಿರುವುದು ತೀರಾ ಕಡಿಮೆ ಕೆಲಸ,ʼ ಎಂದು ದಬಾಯಿಸುತ್ತಿದ್ದರು.
ಎಣ್ಣೆ ಅರೆಯುವ ಕೆಲಸ
ಸಾವರ್ಕರ್ ಅವರು ಹೀಗೆ ತೆಂಗಿನ ನಾರನ್ನು ಕುಟ್ಟುವ ಕೆಲಸ ಮಾಡಿ ಮುಗಿಸಿದರು. ಇದಾದಮೇಲೆ, ಒಂದು ದಿನ ಬಂತು. ಅದು, 1911ರ ಆಗಸ್ಟ್ 16. ಅವತ್ತು, ಡೇವಿಡ್ ಬ್ಯಾರಿಯ ಧಣಿಯಾಗಿದ್ದ ಪೋರ್ಟ್‌ಬ್ಲೇರ್‌ನ ಸೂಪರಿಂಟೆಂಡೆಂಟ್- ಎಚ್.ಎ.ಬ್ರೌನಿಂಗ್, ʼಏಯ್, ನೋಡು, ಇಲ್ಲಿ ಗಾಣ ಇದೆಯಲ್ಲ, ಅದಕ್ಕೆ ಕೊರಳೊಡ್ಡಿ ಇವತ್ತಿನಿಂದ ಹದಿನಾಲ್ಕು ದಿನಗಳ ಕಾಲ ಎಣ್ಣೆ ಅರೆಯೋ,ʼ ಎಂದು ಅಪ್ಪಣೆ ಮಾಡಿದ. ಅಂದಂತೆ, ಸಾವರ್ಕರ್ ದಿನಕ್ಕೆ ಎಷ್ಟು ಎಣ್ಣೆ ಅರೆಯಬೇಕಾಗಿತ್ತು ಗೊತ್ತಾ? ದಿನಕ್ಕೆ 30 ಪೌಂಡುಗಳಷ್ಟು ಸಾಸಿವೆ ಎಣ್ಣೆ! (ಒಂದು ಪೌಂಡ್ ಎಂದರೆ, ಟ್ರಾಯ್ ಪದ್ಧತಿಯಲ್ಲಿ 373 ಗ್ರಾಮುಗಳಿಗಿಂತ ತುಸು ಹೆಚ್ಚು. ಆವರ್ಡುಪಾಯ್ಸ್ ಪದ್ಧತಿಯಲ್ಲಿ 453 ಗ್ರಾಮುಗಳಿಗಿಂತ ಒಂದಿಷ್ಟು ಜಾಸ್ತಿ). ಅಂದರೆ, ಸಾವರ್ಕರ್ ಅವರು ದಿನಕ್ಕೆ 12 ಕೆ.ಜಿ. ಎಣ್ಣೆಯನ್ನು ದಿನವೂ ಅರೆಯಬೇಕಾಗಿತ್ತು! ನಿಜಕ್ಕೂ ಇದು ಒಬ್ಬ ಸಾಮಾನ್ಯ ಮನುಷ್ಯನಿಗೆ ಸಾಧ್ಯವಿರಲಿಲ್ಲ. ಅಲಿಪುರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಉಪೇಂದ್ರನಾಥ ಬ್ಯಾನರ್ಜಿಯವರು ಈ ಬಗ್ಗೆ ಬರೆಯುತ್ತ, ʼಗಾಣದಿಂದ ಎಣ್ಣೆ ತೆಗೆಯುವುದು ಮನುಷ್ಯಮಾತ್ರದವನು ಮಾಡುವ ಕೆಲಸವಾಗಿರಲಿಲ್ಲ. ಬದಲಿಗೆ, ಅದೊಂದು ದೊಡ್ಡ ಹೋರಾಟವೇ ಆಗಿತ್ತು,ʼ ಎಂದಿದ್ದಾರೆ. ಇವತ್ತಿನ ನುಡಿಗಟ್ಟಿನಲ್ಲಿ ಹೇಳುವುದಾದರೆ, ಇದು ʼಅಮಾನುಷ, ಹಿಂಸಾತ್ಮಕ ಮತ್ತು ಮನುಷ್ಯನ ಘನತೆಗೆ ಕುಂದು ತರುವಂತಹ ಕೆಲಸʼವಾಗಿತ್ತು. ಸಾವರ್ಕರ್ ಅವರನ್ನು ಎಣ್ಣೆ ಅರೆಯುವ ಕೆಲಸಕ್ಕೆ ಹಚ್ಚಿದ ಬ್ರೌನಿಂಗ್, ʼನೋಡು, ಬರ್ಮಾದವನಾದ ಇನ್ನೊಬ್ಬ ಕೈದಿ ನಿನ್ನ ಜೊತೆಗೆ ರ‍್ತಾನೆ. ನಿನ್ನೊಂದಿಗೆ ಅವನೂ ಗಾಣವನ್ನು ಎಳೀತಾನೆ,ʼ ಎಂದು ಅಬ್ಬರಿಸಿದ. ಇದು, ʼನಾವು ನಿನ್ನನ್ನು ಎಷ್ಟು ಕ್ರೂರವಾಗಿ ನಡೆಸಿಕೊಳ್ತೀವೋ, ಬೇರೆಯವರನ್ನೂ ಅಷ್ಟೇ ಕೆಟ್ಟದಾಗಿ ನಡೆಸಿಕೊಳ್ತೀವಿ. ಇಲ್ಲಿಗೆ ಬಂದ್ಮೇಲೆ ಎಲ್ಲರೂ ಒಂದೇ; ನಾವಿಲ್ಲಿ ಮುಖ-ಮೂತಿ ನೋಡೋದಿಲ್ಲ,ʼ ಎಂದು ಹೇಳುವ ವಿಧಾನವಾಗಿತ್ತು.
ಒಳ್ಳೆ ಜಟ್ಟಿಯಂತೆ ಮೈಬೆಳೆಸಿದ್ದ ಗಟ್ಟಿಗನಿಗೆ ಕೂಡ ಎಣ್ಣೆ ಗಾಣಕ್ಕೆ ಎತ್ತುಗಳಂತೆಯೋ, ಎಮ್ಮೆಗಳಂತೆಯೋ ಕೊರಳೊಡ್ಡಿ ಎಳೆಯುವುದು ಸುಲಭವಾದ ಕೆಲಸವೇನಾಗಿರಲಿಲ್ಲ. ಇನ್ನು, ಓದು-ಬರಹ-ಚಿಂತನೆ ಇತ್ಯಾದಿಗಳಲ್ಲೇ ತಲ್ಲೀನರಾಗಿರುತ್ತಿದ್ದ ರಾಜಕೀಯ ಕೈದಿಗಳ ಪಾಲಿಗೆ ಇದು ಕರಾಳವಾದ ಶಿಕ್ಷೆಯಾಗಿತ್ತು. ಇದಕ್ಕೆ ಸಾವರ್ಕರ್ ಅವರೇನೂ ಹೊರತಾಗಿರಲಿಲ್ಲ. ಸೆಲ್ಯುಲರ್ ಜೈಲಿನಲ್ಲಿ ಹೀಗೆ ಎಣ್ಣೆ ಅರೆಯುವ ಶಿಕ್ಷೆಗೆ ಒಳಗಾದವರ ಮೈಮೇಲೆ ಸೊಂಟದ ಸುತ್ತ ಒಂದು ತುಂಡುದಟ್ಟಿಯನ್ನು ಬಿಟ್ಟರೆ ಬರ‍್ಯಾರ ಬಟ್ಟೆಯೂ ಇರುವಂತಿರಲಿಲ್ಲ. ಹೀಗೆ, ಗಾಣ ಎಳೆಯತೊಡಗಿದ ಸಾವರ್ಕರ್‌ಗೆ ಕೆಲವೇ ಕ್ಷಣಗಳಲ್ಲಿ ತಲೆ ಸುತ್ತಲು ಶುರುವಾಗಿ, ಮೈಯ ಕಸುವೆಲ್ಲ ಬಸಿದು ಹೋದಂತಾಯಿತು. ಉಪೇಂದ್ರನಾಥ ಬ್ಯಾನರ್ಜಿಯವರು, ಕ್ರೂರವಾದ ಈ ಶಿಕ್ಷೆಯು ಹೇಗೆ ಒಂದೆರಡು ಕ್ಷಣದಲ್ಲಿ ವಿಪರೀತ ದಣಿವನ್ನು ಉಂಟುಮಾಡುತ್ತಿತ್ತು ಎನ್ನುವುದನ್ನು ವಿವರಿಸಿದ್ದು, ʼಗಾಣವನ್ನು ಎಳೆಯಲು ಶುರು ಮಾಡಿದ ಹತ್ತೇಹತ್ತು ನಿಮಿಷಗಳಲ್ಲಿ ಉಸಿರೇ ನಿಂತಂತಾಗುತ್ತಿತ್ತು; ನಾಲಿಗೆ ಒಣಗಿ ಹೋಗುತ್ತಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲೇ ಮೈಗೆಲ್ಲ ಲಕ್ವಾ ಹೊಡೆದಂತಾಗುತ್ತಿತ್ತು,ʼ ಎಂದಿದ್ದಾರೆ. ಬರೀಂದ್ರ ಘೋಷರು ಈ ಶಿಕ್ಷೆಯ ಬಗ್ಗೆ ಬರೆಯುತ್ತ, ʼಈ ಗಾಣವನ್ನು ಹುಲುಮಾನರ‍್ಯಾರೂ ಎಳೆಯಲು ಸಾಧ್ಯವಿರಲಿಲ್ಲ. ಇದನ್ನು ಎಳೆಯಬೇಕೆಂದರೆ, ಅಂಥವರು ಶ್ರೀರಾಮಚಂದ್ರನಿಗಿಂತ ದೊಡ್ಡ ಅವತಾರಪುರುಷರೇ ಆಗಿರಬೇಕಾಗಿತ್ತು,ʼ ಎಂದಿರುವುದನ್ನು ಗಮನಿಸಬೇಕು. ʼಯಾರಾದರೂ ಹೀಗೆ ಗಾಣದಿಂದ ಎಣ್ಣೆ ತೆಗೆಯುವುದು ಮತ್ತು ತೆಂಗಿನ ನಾರನ್ನು ಅದು ಮೆದುವಾಗುವವರೆಗೂ ಕುಟ್ಟುವುದು ಎರಡೂ ಸುಲಭವಾಗಿ ಮಾಡಬಹುದಾದ ಕೆಲಸ ಎಂದುಕೊಂಡಿದ್ದರೆ, ಅಂಥವರಿಗೆ ಕೇವಲ ಒಂದು ವಾರದಲ್ಲಿ ಸತ್ಯ ಗೊತ್ತಾಗುತ್ತಿತ್ತು.ʼ
ಏಕೆಂದರೆ, ಈ ಕೆಲಸಗಳಲ್ಲಿ ಆಯಾಸದಿಂದ ಬಳಲುತ್ತಿದ್ದರಿಗೆ ಸ್ವಲ್ಪ ಉಸಿರು ಬಿಟ್ಟುಕೊಳ್ಳಲೂ ಅವಕಾಶವಿರಲಿಲ್ಲ; ಹಾಗೆಯೇ ತುಂಬಾ ಬಾಯಾರಿಕೆಯಾದರೆ ಒಂದು ಬೊಗಸೆ ಜಾಸ್ತಿ ನೀರನ್ನೂ ಕೊಡುತ್ತಿರಲಿಲ್ಲ. ಇಂತಹ ಕೈದಿಗಳಿಗೆ ಇಡೀ ದಿನದಲ್ಲಿ ಕೊಡುತ್ತಿದ್ದುದು ಎರಡು ಕರಟ ನೀರಷ್ಟೆ! ಇದಕ್ಕಿಂತ ಹೆಚ್ಚಿಗೆ ಒಂದು ಹನಿ ನೀರನ್ನೂ ಕೊಡುತ್ತಿರಲಿಲ್ಲ. ಗಾಣವನ್ನು ಎಳೆದೂ ಎಳೆದೂ ಸುಸ್ತಾಗಿ ಕುಸಿದು ಬಿದ್ದರೂ ಊಟಕ್ಕಲ್ಲದೆ ಬರ‍್ಯಾವುದಕ್ಕೂ ವಿಶ್ರಾಂತಿ ಕೊಡುತ್ತಿರಲಿಲ್ಲ. ಇಂತಹ ಶಿಕ್ಷೆಗೊಳಗಾದ ಸಾವರ್ಕರ್ ಮೊದಲ ದಿನ ಗಾಣವನ್ನೆಳೆದು ತಮ್ಮ ಸೆಲ್‌ಗೆ ಬಂದು, ಅಲ್ಲಿದ್ದ ಹಲಗೆಯ ತುಂಡಿನ ಮೇಲೆ ಉರುಳಿಕೊಂಡರೆ, ಇಡೀ ಮೈಯೆಲ್ಲ ಅಸಹನೀಯವಾದ ನೋವಿನಿಂದ ಕತ್ತರಿಸಿದಂತಾಗುತ್ತಿತ್ತು; ಇನ್ನೊಂದೆಡೆ, ಜ್ವರ ಕ್ಷಣದಿಂದ ಕ್ಷಣಕ್ಕೆ ಏರುತ್ತಿತ್ತು. ಇನ್ನೊಂದು ಮಧ್ಯಾಹ್ನ ಹೀಗೆಯೇ ಗಾಣವನ್ನೆಳೆಯುತ್ತಿದ್ದಾಗ, ಅವರಿಗೆ ಇನ್ನಿಲ್ಲದಂತಹ ನೋವು ಬಂದುಬಿಟ್ಟಿತು. ಜೊತೆಗೆ ಯದ್ವಾತದ್ವಾ ಹೊಟ್ಟೆಯಲ್ಲಿ ಸೆಳೆತ ಕಾಣಿಸಿಕೊಂಡಿತು. ತಕ್ಷಣವೇ ಅವರಿಗೆ, ʼಓಹೋ, ನಾನಿನ್ನು ಕುಸಿದು ಬೀಳಲಿದ್ದೇನೆ,ʼ ಎನ್ನುವುದು ಗೊತ್ತಾಯಿತು. ಕೂಡಲೇ ಕಷ್ಟಪಟ್ಟುಕೊಂಡು, ಅಲ್ಲೇ ನಾಲ್ಕು ಮಾರು ಆಚೆಗಿದ್ದ ಗೋಡೆಯನ್ನು ಹಿಡಿದುಕೊಂಡ ಅವರು, ಮರುಕ್ಷಣದಲ್ಲೇ ಪ್ರಜ್ಞೆಯನ್ನು ಕಳೆದುಕೊಂಡರು.
ಚಿಕ್ಕದೊಂದು ಸಾಂತ್ವನ
ಹೀಗೆ ಶಿಕ್ಷೆಯ ರೂಪದಲ್ಲಿ ಯಾತನೆಯನ್ನು ಅನುಭವಿಸತೊಡಗಿದ ಸಾವರ್ಕರ್ ಪಾಲಿಗೆ ಒಂದೇಒಂದು ಸಮಾಧಾನವಿತ್ತು. ಅದೇನೆಂದರೆ, ಇದಕ್ಕೆ ಮೊದಲು ಅವರನ್ನು ಒಬ್ಬಂಟಿಯಾಗಿ ಸೆಲ್‌ನಲ್ಲಿ ಇಡಲಾಗಿತ್ತು. ಆದರೆ, ಈಗ ಅವರು ತಮ್ಮಂತೆಯೇ ಗಾಣವನ್ನೆಳೆದು ಎಣ್ಣೆ ತೆಗೆಯುವ ಶಿಕ್ಷೆಯನ್ನು ಅನುಭವಿಸುತ್ತಿದ್ದ ಉಳಿದ ರಾಜಕೀಯ ಕೈದಿಗಳೊಂದಿಗೆ ದಿನವನ್ನು ಕಳೆಯಬಹುದಾಗಿತ್ತು. ಇಲ್ಲಿ ಕೂಡ ಯಾರೊಂದಿಗೂ ಯಾರೊಬ್ಬರೂ ಮಾತನಾಡಲು ಅವಕಾಶವಿರಲಿಲ್ಲ. ಅಕಸ್ಮಾತ್ತೇನಾದರೂ ಹಾಗೆ ಮಾತನಾಡಿದ್ದು ಕಂಡುಬಂದರೆ, ಜೈಲಿನ ಸಿಬ್ಬಂದಿಯು ತಕ್ಷಣವೇ ಮುಷ್ಟಿಯಿಂದ ಗುದ್ದುತ್ತಿದ್ದರು; ಇಲ್ಲವೇ ಲಾಠಿಯಿಂದ ಬಾರಿಸುತ್ತಿದ್ದರು; ಅಥವಾ ಕೆಲವೊಮ್ಮೆ ಎರಡೂ ಶಿಕ್ಷೆಯನ್ನು ಕೊಡುತ್ತಿದ್ದರು. ಇಷ್ಟರ ಮಧ್ಯೆಯೂ ಸಾವರ್ಕರ್ ಮತ್ತು ಇತರ ಬಂಗಾಳಿ ರಾಷ್ಟ್ರೀಯವಾದಿಗಳು ದಿನವೂ ಕದ್ದುಮುಚ್ಚಿ, ಒಂದಿಷ್ಟು ಹೊತ್ತು ಹೇಗೋ ಪರಸ್ಪರ ಮಾತನಾಡುತ್ತಿದ್ದರು. ಇಂತಹ ಸಮಯದಲ್ಲಿ, ಮಾತಿಗೆ ಇಳಿಯದೆ ಇರುವಂತಹ ಒಂದಿಬ್ಬರು ಕೈದಿಗಳು ಜೈಲಿನ ಸಿಬ್ಬಂದಿಗಳಾದ ಜಾಮದಾರರು, ವಾರ್ಡರುಗಳು ಅಥವಾ ಸಣ್ಣಪುಟ್ಟ ಚಾಕರಿ ಮಾಡಿಕೊಂಡಿದ್ದವರೇನಾದರೂ ಇದ್ದಕ್ಕಿದ್ದಂತೆ ಬಂದರೆ, ಆ ಕುರಿತು ಮಿಂಚಿನ ವೇಗದಲ್ಲಿ ಸಂದೇಶವನ್ನು ರವಾನಿಸುವ ಕೆಲಸವನ್ನು ಮಾಡುತ್ತಿದ್ದರು.
ಎಣ್ಣೆ ಗಾಣದ ಶಿಕ್ಷೆಯನ್ನು ಪೂರೈಸಿದ ಮೇಲೆ, ಸಾವರ್ಕರ್ ಅವರನ್ನು ಹಗ್ಗ ಹೊಸೆಯುವ ಕೆಲಸಕ್ಕೆ ಹಚ್ಚಲಾಯಿತು. ಈ ಶಿಕ್ಷೆಯಲ್ಲಿ ಕೈದಿಗಳ ಮುಂದಕ್ಕೆ ಪ್ರತಿದಿನವೂ ಒಂದು ಹೊರೆ ತೆಂಗಿನ ನಾರನ್ನು ಎಸೆಯಲಾಗುತ್ತಿತ್ತು. ಕೈದಿಗಳು ಈ ನಾರನ್ನು ಮೊದಲಿಗೆ ನೆಲದ ಮೇಲಿಟ್ಟುಕೊಂಡು, ಅದನ್ನು ಕೈಯಲ್ಲಿ ಹೊಸೆದು ಚಿಕ್ಕಚಿಕ್ಕ ಎಳೆಗಳನ್ನಾಗಿ ಮಾಡಬೇಕಾಗಿತ್ತು. ನಂತರ, ಪ್ರತಿದಿನವೂ ಒಂದು ಹೊರೆ ನಾರನ್ನು ಪೂರ್ತಿ ಹೊಸೆಯಬೇಕಾಗಿತ್ತು. ಆಮೇಲೆ, ಇಂತಹ ಒಂದೆರಡು ಎಳೆಗಳನ್ನು ಒಂದು ತುದಿಯಲ್ಲಿ ಕಾಲಿನಲ್ಲಿ ಭದ್ರವಾಗಿ ಅದುಮಿಕೊಂಡು, ಇನ್ನೊಂದು ತುದಿಯನ್ನು ಕೈಯಲ್ಲಿ ಹಿಡಿದುಕೊಂಡು ಈ ಎಳೆಗಳನ್ನು ಒಂದಕ್ಕೊಂದು ಹೆಣಿಗೆ ಹಾಕಿ, ಎರಡು ಬೆರಳು ಗಾತ್ರದ ಹಗ್ಗವನ್ನಾಗಿ ಮಾಡಬೇಕಾಗಿತ್ತು. ʼಬಳಿಕ, ಇಂತಹ ಇನ್ನೆರೆಡು ಎಳೆಗಳನ್ನು ಹಿಡಿದುಕೊಂಡು ಈ ಹಗ್ಗದ ಎರಡು ತುದಿಗಳಿಗೂ ಗಂಟು ಹಾಕಿ, ಮತ್ತೆ ಹೀಗೆಯೇ ಹೊಸೆದು, ಅದನ್ನು ಉದ್ದವಾದ ಹಗ್ಗವಾಗಿ ಮಾಡಬೇಕಿತ್ತು. ಈ ಕೆಲಸವನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಹೀಗೆಯೇ ಮಾಡಬೇಕಾಗಿತ್ತು.ʼ ಶುರುವಿನಲ್ಲಂತೂ ಈ ಹಗ್ಗ ಹೊಸೆಯುವ ಕೆಲಸ ತುಂಬಾ ಕಷ್ಟಕರವಾಗಿ ಕಾಣುತ್ತಿತ್ತು. ಆದರೆ, ಸಾವರ್ಕರ್ ಮತ್ತು ಇತರೆ ರಾಜಕೀಯ ಕೈದಿಗಳು ದಿನಗಳೆದಂತೆ ಈ ಕೆಲಸವನ್ನು ಕಲಿತರು. ಈ ಶಿಕ್ಷೆಯನ್ನು ಅನುಭವಿಸುವಾಗ ಉಳಿದ ಕೈದಿಗಳು ಜೊತೆಯಲ್ಲಿ ಕೂರಲು ಅನುಮತಿಯಿತ್ತು. ಆದರೆ, ಸಾವರ್ಕರ್ ಮಾತ್ರ ಮೂರನೇ ಅಂತಸ್ತಿನಲ್ಲಿದ್ದ ತಮ್ಮ ಸೆಲ್‌ನ ಮುಂಭಾಗದಲ್ಲಿ ಕಾರಿಡಾರ್‌ನಲ್ಲಿ ಒಂಟಿಯಾಗಿ ಕೂತು, ಈ ಕೆಲಸವನ್ನು ಮಾಡಬೇಕೆಂದು ಬ್ರೌನಿಂಗ್ ಆದೇಶಿಸಿದ್ದ.
ಅಣ್ಣನೂ ಅದೇ ಜೈಲಿನಲ್ಲಿ
ಅಂಡಮಾನ್‌ನ ಸೆಲ್ಯುಲರ್ ಜೈಲಿಗೆ ಬಂದಾಗಿನಿಂದಲೂ ವಿನಾಯಕ ದಾಮೋದರ ಸಾವರ್ಕರ್ ಅವರು, ಅದೇ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ತಮ್ಮ ಒಡಹುಟ್ಟಿದ ಅಣ್ಣ ಬಾಬಾರಾವ್ ಅವರನ್ನು ಕಾಣಬೇಕೆಂದು ತುಡಿಯುತ್ತಿದ್ದರು. 1909ರಲ್ಲಿ ಬ್ರಿಟಿಷರಿಂದ 25 ವರ್ಷಗಳ ಜೀವಾವಧಿ ಶಿಕ್ಷೆಗೆ ತುತ್ತಾಗಿದ್ದ ಇವರನ್ನು, 1910ರಲ್ಲಿ ಈ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಸಾವರ್ಕರ್ ಅವರು ಶುರುವಿನಲ್ಲಿ ಕೆಲವು ದಿನ, ತಮ್ಮ ಅಣ್ಣ ಈ ಜೈಲಿನಲ್ಲಿ ಎಲ್ಲಿದ್ದಾರೆಂದು ಡೇವಿಡ್ ಬ್ಯಾರಿ ಸೇರಿದಂತೆ ಕಾರಾಗೃಹದ ಇನ್ನಿತರ ಕೆಲವು ಸಿಬ್ಬಂದಿಯನ್ನು ವಿಚಾರಿಸಿದರು. ಆದರೆ, ಆ ಸಿಬ್ಬಂದಿಯು ಇವರ ಮನವಿಗಳನ್ನು ಹಿಂದುಮುಂದು ನೋಡದೆ ತಳ್ಳಿಹಾಕಿದರು. ಜೊತೆಗೆ, ʼನಿಮ್ಮಣ್ಣ ಈ ಜೈಲಿನಲ್ಲಿ ಇದ್ದಾನೋ, ಇಲ್ಲವೋ ಅದೂ ನಮಗೆ ಗೊತ್ತಿಲ್ಲ. ನಿನ್ನ ಕೆಲಸ ಎಷ್ಟಿದೆಯೋ ಅಷ್ಟನ್ನು ನೋಡಿಕೋ. ಅವರಿವರ ಬಗ್ಗೆಯೆಲ್ಲ ವಿಚಾರಿಸಬೇಡ, ಹುಷಾರ್!ʼ ಎಂದು ಅವರು ಕೆಟ್ಟದಾಗಿ ಹೇಳುತ್ತಿದ್ದರು. ಕೊನೆಗೆ, ಅಲ್ಲಿಯ ಒಬ್ಬ ವಾರ್ಡರ್ ಈ ವಿಷಯದಲ್ಲಿ ಗುಟ್ಟಾಗಿ ಸಹಕರಿಸುವುದಾಗಿ ಒಪ್ಪಿಕೊಂಡ. ಸೆಲ್ಯುಲರ್ ಜೈಲಿನಲ್ಲಿ ಕೈದಿಗಳು ಆಯಾ ದಿನ ಎಷ್ಟೆಷ್ಟು ಕೆಲಸ ಮಾಡಿದ್ದಾರೆ ಎನ್ನುವ ಲೆಕ್ಕ ತೆಗೆದುಕೊಳ್ಳಲು ಅವರನ್ನೆಲ್ಲ ಜೈಲಿನ ಮುಖ್ಯಗೋಪುರದ ಎದುರಿನ ಜಾಗದಲ್ಲಿ ಸಂಜೆಯ ಹೊತ್ತು ಒಟ್ಟಾಗಿ ನಿಲ್ಲಿಸಲಾಗುತ್ತಿತ್ತು. ಹೀಗೆ ಒಂದು ತಂಡದ ಕೈದಿಗಳು ಬಂದು ವಾಪಸ್ ಹೋಗುವಾಗ, ಅಲ್ಲಿಗೆ ಇನ್ನೊಂದು ತಂಡದ ಕೈದಿಗಳನ್ನು ಕರೆತರಲಾಗುತ್ತಿತ್ತು. ಆದರೆ ಕೆಲವೊಮ್ಮೆ ಗೋಪುರದ ಬಳಿ ಕೈದಿಗಳ ಒಂದು ತಂಡ ಇನ್ನೂ ಇರುವಾಗಲೇ ಇನ್ನೊಂದು ಕೈದಿಗಳ ತಂಡವನ್ನೂ ಕರೆದುಕೊಂಡು ಬರಲಾಗುತ್ತಿತ್ತು. ಹೀಗೆಯೇ ಒಂದು ದಿನ ಆ ವಾರ್ಡರ್, ಸಾವರ್ಕರ್ ಅವರಿದ್ದ ತಂಡವನ್ನು ಅಲ್ಲಿಗೆ ಒಂದೆರಡು ನಿಮಿಷ ಮೊದಲೇ ಕರೆದುಕೊಂಡು ಬಂದ. ಅಷ್ಟು ಹೊತ್ತಿಗಾಗಲೇ, ಬಾಬಾರಾವ್ (ಗಣೇಶ್ ಸಾವರ್ಕರ್) ಅವರಿದ್ದ ಕೈದಿಗಳ ತಂಡವು ಆ ಗೋಪುರದ ಬಳಿ ನಿಂತಿತ್ತು. ಹೀಗೆ ವಿನಾಯಕ ಸಾವರ್ಕರ್ ಮತ್ತು ಗಣೇಶ್ ಸಾವರ್ಕರ್ ಅವರು ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿದರು! ತಮ್ಮ ಕಿರಿಯ ಸಹೋದರನನ್ನು ಕಂಡ ಬಾಬಾರಾವ್ ಅವರಿಗೆ ಆಘಾತವಾದಂತಾಗಿ, ʼಅರೆ, ತಾತ್ಯಾ, ಇದೇನಿದು, ನೀನಿಲ್ಲಿ?ʼ ಎಂದು ತೊದಲಿದರು. ಸಾವರ್ಕರ್ ಸಹೋದರರ ನಡುವೆ ಆ ಕ್ಷಣದಲ್ಲಿ ವಿನಿಮಯವಾದ ಮಾತು ಇದೊಂದೇ. ಅವರಿಬ್ಬರೂ ಇನ್ನೊಂದು ಮಾತನಾಡುವ ಮೊದಲೇ ಅಲ್ಲಿಗೆ ಬಂದ ವಾರ್ಡರುಗಳು ಮತ್ತು ಚಾಕರಿದಾರರು, ಇಬ್ಬರಿಗೂ ಅವರವರ ದಾರಿ ಹಿಡಿಯುವಂತೆ ಸೂಚಿಸಿದರು. ಇದಾದ ಕೆಲವೇ ದಿನಗಳಲ್ಲಿ ಬಾಬಾರಾವ್ ಅವರು ಒಂದು ಪತ್ರದೊಂದಿಗೆ ವಿನಾಯಕ ಸಾವರ್ಕರ್ ಅವರ ಸೆಲ್‌ಗೆ ಅದ್ಹೇಗೋ ನುಸುಳಿ ಬರುವಲ್ಲಿ ಯಶಸ್ವಿಯಾದರು. ಆ ಪತ್ರದಲ್ಲಿ ʼಪ್ರಿಯ ತಾತ್ಯಾ (ಇದು ವಿನಾಯಕ ಸಾವರ್ಕರ್ ಅವರನ್ನು ಮನೆಯವರು ಮುದ್ದಿನಿಂದ ಕರೆಯುತ್ತಿದ್ದ ಹೆಸರು), ನಾವು ಅಂದುಕೊಂಡಿರುವ ಕೆಲಸವನ್ನು ಜೈಲಿನಿಂದ ಆಚೆ ಇರುವ ನೀನು ಪೂರೈಸುತ್ತೀಯ ಎನ್ನುವ ಭರವಸೆಯೇ ನನ್ನ ಈ ಜೀವಾವಧಿ ಶಿಕ್ಷೆಯನ್ನು ಸಹನೀಯಗೊಳಿಸಿತ್ತು. ಆದರೆ, ಪ್ಯಾರಿಸ್ಸಿನಲ್ಲಿದ್ದ ನೀನು ಈ ಬ್ರಿಟಿಷರ ಬಲೆಗೆ ಹೇಗೆ ಬಿದ್ದೆ? ನಮ್ಮ ಕೊನೆಯ ತಮ್ಮ ಬಾಳಾ (ನಾರಾಯಣ ಸಾವರ್ಕರ್) ಹೇಗಿದ್ದಾನೆ? ಅವನನ್ನು ನೋಡಿಕೊಳ್ಳುವವರು ಯಾರು?ʼ ಎಂಬ ಒಕ್ಕಣೆಯಿತ್ತು. ಈ ಪತ್ರದ ಬಗ್ಗೆ ನಂತರದ ದಿನಗಳಲ್ಲಿ ಬರೆದ ಸಾವರ್ಕರ್, ʼಆ ಪತ್ರವನ್ನು ನೋಡುತ್ತಿದ್ದಂತೆಯೇ ನನ್ನ ಎದೆಗೆ ಇರಿದಂತಾಯಿತು,ʼ ಎಂದು ಉದ್ಗರಿಸಿದ್ದಂಟು. ಬಾಬಾರಾವ್ (ಗಣೇಶ್ ಸಾವರ್ಕರ್) ಅವರು ಕೂಡ ತಮ್ಮ ಕಿರಿಯ ಸಹೋದರರಾದ ವಿನಾಯಕ ಸಾವರ್ಕರ್ ಅವರನ್ನು ನೋಡಿ ಐದು ವರ್ಷಗಳು ಉರುಳಿ ಹೋಗಿದ್ದವು. ಅಂದರೆ, ಅವರು ಕಾನೂನು ವಿದ್ಯಾಭ್ಯಾಸ ಮಾಡಲು ಲಂಡನ್ನಿಗೆ ಹೊರಟಾಗ ಬೀಳ್ಕೊಟ್ಟಿದ್ದಷ್ಟೆ. ಅದಾದಮೇಲೆ, ಅಣ್ಣ-ತಮ್ಮ ಇಬ್ಬರೂ ಸಂಧಿಸಿದ್ದು ಇದೇ ಮೊದಲ ಸಲವಾಗಿತ್ತು. ಅಂದಂತೆ, ಬಾಬಾರಾವ್ ಅವರಿಗೆ ಕೂಡ ʼನನ್ನ ತಮ್ಮ ಠಾಕುಠೀಕಾಗಿ ನ್ಯಾಯವಾದಿಯ ಉಡುಪನ್ನು ಹಾಕಿಕೊಂಡು ಭಾರತಕ್ಕೆ ಬಂದಿಳಿಯಲಿದ್ದಾನೆ,ʼ ಎನ್ನುವ ಮಹದಾಸೆ ಇತ್ತು. ಆದರೆ, ಈಗ ನೋಡಿದರೆ ಆ ಸಹೋದರನು ಅಂಡಮಾನ್‌ನ ಕಾರಾಗೃಹಕ್ಕೆ ʼಜೈಲು ಟಿಕೆಟ್ʼ ತೆಗೆದುಕೊಂಡು ಬಂದಿದ್ದ. ಹೀಗಾಗಿ, ಯಮುನಾ ಅವರಿಗೆ ಐದು ವರ್ಷಗಳ ನಂತರ ತಮ್ಮ ಪತಿ ಸಾವರ್ಕರ್ ಅವರನ್ನು ಬಾಂಬೆಯ ಜೈಲಿನಲ್ಲಿ ನೋಡಿದಾಗ ಎಷ್ಟು ನಿರಾಸೆಯಾಯಿತೋ, ಅಷ್ಟೇ ನಿರಾಸೆ ಈಗ ಅಣ್ಣನಿಗೂ ಆಯಿತು. ಇದಕ್ಕೆ ಪ್ರತಿಯಾಗಿ ಅಣ್ಣನಿಗೆ ಸಮಾಧಾನದ ಮಾತುಗಳನ್ನು ಹೇಳಿದ ವಿನಾಯಕ ಸಾವರ್ಕರ್, ʼಅಣ್ಣ, ಸಾರ್ವಜನಿಕ ಜೀವನದ ಕೇಂದ್ರಸ್ಥಾನದಲ್ಲಿ ನಿಂತಿರುವವರಂತೆಯೇ ರಾಷ್ಟ್ರೀಯ ಚಳವಳಿಗೆ ಧುಮುಕಿ ಅನಾಮಿಕರಂತೆ ಪ್ರಾಣತ್ಯಾಗ ಮಾಡಿರುವವರು ಕೂಡ ನಮಗೆ ತುಂಬಾ ಮುಖ್ಯವೆನ್ನುವುದನ್ನು ನಾವು ಮರೆಯಬಾರದು.ʼ ಎಂದರು. ಆದರೆ, ಈ ಸಮಾಧಾನದ ಮಾತುಗಳು ತಮ್ಮ ಬಗ್ಗೆ ಅಣ್ಣನಿಗೆ ಯಾವುದೇ ಭರವಸೆಯನ್ನು ನೀಡಲಾರವು ಎನ್ನುವುದು ಕೂಡ ಅವರಿಗೆ ತಿಳಿದಿತ್ತು.
ಕಾಲಾಪಾನಿ ಸೆಲ್
ಏಕಾಂತ ಶಿಕ್ಷೆ
ಹೀಗೆ ಜೈಲಿನಲ್ಲಿ ಕಠಿಣ ಶಿಕ್ಷೆಯನ್ನು ಅನುಭವಿಸುತ್ತಿದ್ದ ಸಾವರ್ಕರ್ ಪಾಲಿಗೆ 1911ರ ಆಗಸ್ಟ್ 20ರಂದು ಇನ್ನೊಂದು ಆಘಾತ ಎದುರಾಯಿತು. ಏಕೆಂದರೆ, ಅಂದು ಅವರಿಗೆ ʼಆರು ತಿಂಗಳ ಏಕಾಂತ ಶಿಕ್ಷೆʼಯನ್ನು ವಿಧಿಸಿ, ʼಮುಂದಿನ ಆದೇಶ ಬರುವವರೆಗೂʼ ಇನ್ನೊಂದು ಸೆಲ್‌ಗೆ ಸ್ಥಳಾಂತರಿಸಲಾಯಿತು. ಕೇಂದ್ರ ಗೃಹ ಇಲಾಖೆಯು ಸಂರಕ್ಷಿಸಿಕೊಂಡು ಬಂದಿರುವ `ವಿನಾಯಕ ದಾಮೋದರ ಸಾವರ್ಕರ್ ಅವರ ಜೈಲ್ ಟಿಕೆಟ್‌ನ ಅಧಿಕೃತ ಇತಿಹಾಸ’ದಿಂದ ಇದು ದೃಢಪಟ್ಟಿದೆ. ಇವರನ್ನು ಏಕೆ ಹೀಗೆ ಏಕಾಂತದ ಶಿಕ್ಷೆಗೆ ದೂಡಲಾಯಿತು ಎನ್ನುವುದರ ಹಿಂದಿನ ಕಾರಣ ಮಾತ್ರ ಈ ದಾಖಲೆಗಳಲ್ಲಿ ನಮೂದಾಗಿಲ್ಲ. ಅದೇನೇ ಇರಲಿ, ʼಅಪರಾಧಿ ನಂಬರ್ 32778ʼ ಆದ ಸಾವರ್ಕರ್ ಅವರನ್ನು ಹೀಗೆ ಒಂಟಿಯಾಗಿಟ್ಟಿದ್ದುದು ʼಸೆಲ್ ನಂಬರ್ 52ʼರಲ್ಲಿ. ಈ ಸೆಲ್ ಎಂತಹ ಜಾಗದಲ್ಲಿತ್ತೆಂದರೆ, ಕತ್ತೆತ್ತಿ ನೋಡಿದರೆ ಸಾಕು, ಒಮ್ಮೆಲೇ ಮೂರು ಜನರನ್ನು ನೇಣಿಗೇರಿಸಬಹುದಾಗಿದ್ದಂತಹ ನೇಣುಗಂಬಗಳು ಕಣ್ಣಿಗೆ ಬೀಳುತ್ತಿದ್ದವು.
ಇದಾದ ಮೇಲೆ 1912ನೇ ಇಸವಿಯ ಜೂನ್ ಬಂತು. ಆಗ ಸಾವರ್ಕರ್ ಅವರಿಗೆ ಮತ್ತೊಮ್ಮೆ ʼಜೈಲಿನ ಅಧಿಕಾರಿಗಳ ಅನುಮತಿಯನ್ನು ಪಡೆಯದೆಯೇ ಉಳಿದ ಕೈದಿಗಳಿಗೆ ಪತ್ರ ಬರೆದಿದ್ದಾರೆʼ ಎಂಬ ಕಾರಣಕ್ಕಾಗಿ ಇನ್ನೂ ಒಂದು ತಿಂಗಳ ಏಕಾಂತ ಶಿಕ್ಷೆಯನ್ನು ವಿಧಿಸಲಾಯಿತು. ಬಳಿಕ, ಅದೇ ವರ್ಷದ ಸೆಪ್ಟೆಂಬರ್ 10ರಂದು ‘ಮತ್ತೊಬ್ಬ ಕೈದಿಗೆ ಬರೆದಿರುವ ಪತ್ರವನ್ನು ಇಟ್ಟುಕೊಂಡಿದ್ದರು’ ಎಂಬ ನೆಪವೊಡ್ಡಿ, ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿ, ಕೋಳ ಹಾಕಿ ಏಳು ದಿನಗಳ ಕಾಲ ದಿನಕ್ಕೆ ಎಂಟು ಗಂಟೆಗಳ ಕಾಲ ಹಾಗೆಯೇ ನಿಂತುಕೊಂಡಿರಬೇಕೆಂಬ ಅಮಾನುಷ ಶಿಕ್ಷೆಯನ್ನು ಹೇರಲಾಯಿತು. ಈ ಶಿಕ್ಷೆಯ ಸಂದರ್ಭದಲ್ಲಿ ಕೋಳ ಹಾಕಿದ್ದ ಕೈಗಳನ್ನು ತಲೆಯಿಂದ ಮೇಲಕ್ಕೆ ಎತ್ತಿಕೊಂಡು ನಿಲ್ಲುವುದು ಕಡ್ಡಾಯವಾಗಿತ್ತು. ಈ ಶಿಕ್ಷೆಯನ್ನು ಅನುಭವಿಸುವಾಗ ಕೈದಿಯು ಯಾವ ಕಾರಣಕ್ಕೂ ಶೌಚಾಲಯವನ್ನು ಉಪಯೋಗಿಸುವಂತಿರಲಿಲ್ಲ. ಹೀಗಾಗಿ, ಹೆಚ್ಚಿನ ಕೈದಿಗಳು ಸೆಲ್‌ನ ಗೋಡೆಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡಿಕೊಂಡು, ನೆಲದ ಮೇಲೆ ಮಲವನ್ನು ವಿಸರ್ಜಿಸುತ್ತಿದ್ದರು. ಜೈಲಿನಲ್ಲಿದ್ದ ಜಾಡಮಾಲಿಗಳು ತಮ್ಮನ್ನು ಬಾಯಿಗೆ ಬಂದಂತೆ ಬೈಯುತ್ತ, ಅದನ್ನೆಲ್ಲ ಬಾಚಿ ಹಾಕುವವರೆಗೂ ಆ ಕೈದಿಗಳು ಈ ಗಬ್ಬುನಾತವನ್ನು ಕುಡಿದುಕೊಂಡೇ ಇರಬೇಕಾಗಿತ್ತು.
ಕ್ರೂರ ಶಿಕ್ಷೆಗಳು
ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅವರನ್ನು ಗೋಳು ಹುಯ್ದುಕೊಳ್ಳುವುದು ಇಷ್ಟಕ್ಕೇ ನಿಲ್ಲಲಿಲ್ಲ. ಬದಲಿಗೆ, ಇಂತಹ ಕ್ರೂರ ಶಿಕ್ಷೆಗಳು ಇನ್ನಷ್ಟು ಮುಂದುವರಿದವು. ಇದಕ್ಕೆ ತಕ್ಕಂತೆ 1912ರ ನವೆಂಬರ್‌ನಲ್ಲಿ ʼಇನ್ನೊಬ್ಬ ಕೈದಿಯು ಬರೆದಿರುವ ಒಂದು ಟಿಪ್ಪಣಿಯು ಇವರ ಬಳಿ ಇತ್ತುʼ ಎಂಬ ಕಾರಣಕ್ಕೆ ಸಾವರ್ಕರ್‌ಗೆ ಅವರಿಗೆ ಮೂರನೇ ಬಾರಿಗೆ ಒಂದು ತಿಂಗಳ ಅವಧಿಯ ಪ್ರತ್ಯೇಕ ಏಕಾಂತವಾಸದ ಶಿಕ್ಷೆಯನ್ನು ವಿಧಿಸಲಾಯಿತು. ಇದರಿಂದ ರೊಚ್ಚಿಗೆದ್ದ ಸಾವರ್ಕರ್ ಅವರು 1912ರ ಡಿಸೆಂಬರ್ 30, 31 ಮತ್ತು 1912ರ ಜನವರಿ ೧ರಂದು -ಒಟ್ಟು ಮೂರು ದಿನಗಳ ಕಾಲ- ಒಂದು ಗುಟುಕು ನೀರನ್ನೂ ಕುಡಿಯಲಿಲ್ಲ. ಆದರೆ, ಆ ಡಿಸೆಂಬರಿನಲ್ಲಿ ಸಾವರ್ಕರ್ ಪಾಲಿಗೆ ಒಂದು ಸಣ್ಣ ನೆಮ್ಮದಿ ಸಿಕ್ಕಿತು. ಅದೇನೆಂದರೆ, ಆಗ ಕಲ್ಕತ್ತಾದಲ್ಲಿ ವೈದ್ಯಕೀಯ ಪದವಿಯನ್ನು ಓದುತ್ತಿದ್ದ ತಮ್ಮ ಕಿರಿಯ ಸಹೋದರ ನಾರಾಯಣ ಸಾವರ್ಕರ್‌ಗೆ ಒಂದು ಪತ್ರವನ್ನು ಕಳಿಸುವ ಅವಕಾಶವನ್ನು ಅವರಿಗೆ ಕೊಡಲಾಯಿತು. ತಮ್ಮ ಸಹೋದರನಿಗೆ ಬರೆದ ಪತ್ರದಲ್ಲಿ ಎಂದಿನಂತೆ ತಮ್ಮ ಹಾಸ್ಯ ಮನೋಭಾವವನ್ನು ಪ್ರದರ್ಶಿಸಿದ ವಿನಾಯಕ ಸಾವರ್ಕರ್, ʼಏನಪ್ಪ ನಾರಾಯಣ, ಈಗಾಗಲೇ ಬಂಗಾಳಿ ಹುಡುಗಿಯೊಬ್ಬಳಿಗೆ ಮನಸೋತಿರುವ ನೀನು ನಮ್ಮ ಮನೆಮಾತಾದ ಮರಾಠಿಯನ್ನೇ ಮರೆತಿರಬಹುದಲ್ಲವೇ? ಏನೇ ಆಗಲಿ, ನಿನಗೆ ಗೊತ್ತಿರುವಂತೆ ನಾನು ಯಾವಾಗಲೂ, ಹಿಂದೂಗಳು ಪರಸ್ಪರ ಅಂತರ್‌ಪ್ರಾಂತೀಯ ವೈವಾಹಿಕ ಸಂಬಂಧಗಳನ್ನು ಬೆಳೆಸಬೇಕು ಎಂದು ಹೇಳುತ್ತ ಬಂದಿರುವ ಮನುಷ್ಯ,ʼ ಎಂಬ ಒಕ್ಕಣೆಯನ್ನು ಬರೆದರು. ಈ ಪತ್ರದಲ್ಲಿ ಜೈಲಿನ ಕೆಲವು ನಿಯಮಾವಳಿಗಳು ಮತ್ತು ದಿನಚರಿಯ ಕ್ರಮವನ್ನು ವಿವರಿಸಿದ್ದ ಸಾವರ್ಕರ್, ತಮ್ಮ ಆರೋಗ್ಯ ಚೆನ್ನಾಗಿದೆ ಎಂದೂ ತಿಳಿಸಿದ್ದರು. ಅಲ್ಲದೆ, ನೀನು ನನಗೆ ಉತ್ತರಿಸುವಾಗ, ನಮ್ಮ ಮಾತೃಭೂಮಿಯ ಸ್ಥಿತಿಗತಿಗಳು ಹೇಗಿವೆ? ಕಾಂಗ್ರೆಸ್ ಒಗ್ಗಟ್ಟಿನಿಂದ ಇದೆಯೇ ಅಥವಾ ಇಲ್ಲವೇ? 1910ರಲ್ಲಿ ಅಲಹಾಬಾದಿನಲ್ಲಿ ಮಾಡಿದಂತೆಯೇ ಕಾಂಗ್ರೆಸ್ ಈಗಲೂ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಯಥಾಪ್ರಕಾರ ಒಂದು ನಿರ್ಣಯ ಅಂಗೀಕರಿಸಿದೆಯೇ? ಟಾಟಾ ಉಕ್ಕು ಉದ್ಯಮ ಅಥವಾ ಸ್ಟೀಮ್ ನ್ಯಾವಿಗೇಶನ್ ಕಂಪನಿಯಂತಹ ಅಥವಾ ಜವಳಿ ಗಿರಣಿಯಂತಹ ಬೇರೆ ಯಾವುದಾದರೂ ಸ್ವದೇಶಿ ಉದ್ಯಮಗಳು ದೇಶದೊಳಗೆ ಅಸ್ತಿತ್ವಕ್ಕೆ ಬಂದಿವೆಯೇ? ಚೀನಾದ ಸ್ಥಿತಿ ಹೇಗಿದೆ? ಪರ್ಷಿಯಾ, ಪೋರ್ಚುಗಲ್, ಈಜಿಪ್ಟ್ನ ಅವಸ್ಥೆ ಹೇಗಿದೆ? ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೇ? ಮುಂತಾದ ವಿಚಾರಗಳನ್ನು ಕುರಿತು ನನಗೆ ಕೂಲಂಕಷವಾಗಿ ಬರೆಯಬೇಕು,ʼ ಎಂದು ಸೂಚಿಸಿದರು. ಇದರ ಜೊತೆಗೆ, ಆ ಪತ್ರದಲ್ಲಿ ಅವರು, ʼಗೋಖಲೆಯವರು ಎಲ್ಲರಿಗೂ ಕಡ್ಡಾಯ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಒಂದು ಕಾನೂನು ಜಾರಿಗೆ ಬರಬೇಕೆಂದು ಹೇಳುತ್ತಿದ್ದರು. ಅಂತಹ ಯಾವುದಾದರೂ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿದೆಯೇ ಎನ್ನುವುದನ್ನು ಕೂಡ ನನಗೆ ತಿಳಿಸಬೇಕು. ಮಿಗಿಲಾಗಿ, ಮಹಾನುಭಾವ ತಿಲಕರು ಯಾವಾಗ ಜೈಲಿನಿಂದ ಬಿಡುಗಡೆಯಾಗಿ ಬರಲಿದ್ದಾರೆ ಎನ್ನುವುದರ ಬಗ್ಗೆಯೂ ಸಮಾಚಾರ ಕೊಡು,ʼ ಎಂದು ಕೂಡ ತಮ್ಮ ಕಿರಿಯ ಸಹೋದರನನ್ನು ಕೋರಿದ್ದರು. ಈ ಪತ್ರದಲ್ಲೂ, ಅವರು ಒಂದು ವರ್ಷ ಶಿಕ್ಷೆಯನ್ನು ಪೂರೈಸಿದ ನಂತರ ವರ್ಷಕ್ಕೊಮ್ಮೆ ತಮ್ಮ ಕುಟುಂಬಕ್ಕೆ ಬರೆಯಬಹುದಾಗಿದ್ದ ಪತ್ರಗಳಲ್ಲೂ ತಾವು ಅಪಾರವಾಗಿ ಪ್ರೀತಿಸುತ್ತಿದ್ದ ಮೂವರು ಮಹಿಳೆಯರ ಬಗ್ಗೆ ತಮ್ಮ ಆರ್ದ್ರ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಮೂವರು ಮಹಿಳೆಯರು ಯಾರೆಂದರೆ- ಪತ್ನಿ ಯಮುನಾ, ಅತ್ತಿಗೆ (ವೈನಿ) ಯಶೂಬಾಯಿ ಮತ್ತು ತಮ್ಮ ಜೊತೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಭಿಕೈಜಿ ಕ್ಯಾಮಾ.
ಚೈನೀಸ್ ಟಾರ್ಚರ್
ತಾವು ಜೈಲಿನಿಂದ ಬರೆದ ಚೊಚ್ಚಲ ಪತ್ರದಲ್ಲಿ ಸಾವರ್ಕರ್ ಅವರು ʼಮನುಷ್ಯ ಜೈಲಿನ ಒಳಕ್ಕೆ ಬರುವುದು ಸುಲಭ. ಆದರೆ, ಅವನು ಅಷ್ಟೇ ಸಲೀಸಾಗಿ ಇಲ್ಲಿಂದ ಆಚೆಗೆ ಬರುವುದು ಸಾಧ್ಯವಿಲ್ಲ,ʼ ಎಂದು ಅರ್ಥಗರ್ಭಿತವಾಗಿ ಬರೆದಿದ್ದರು. ಸೆಲ್ಯುಲರ್ ಜೈಲುವಾಸದಲ್ಲಿ ಹೀಗೆ ಏಕಾಂತವಾಸದ ಶಿಕ್ಷೆ ಮತ್ತು ʼಚೈನೀಸ್ ಟಾರ್ಚರ್ʼನಿಂದ ನಲುಗುತ್ತಿದ್ದ ಸಾವರ್ಕರ್ ಪಾಲಿಗೆ, ವರ್ಷಕ್ಕೊಮ್ಮೆ ತಮ್ಮ ಕಿರಿಯ ಸಹೋದರನಿಗೆ ಪತ್ರ ಬರೆಯಲು ಸಿಕ್ಕಿದ ಅವಕಾಶವು ಒಂದಿಷ್ಟು ನೆಮ್ಮದಿಯ ಸಂಗತಿಯಾಗಿತ್ತು (ಚೈನೀಸ್ ಟಾರ್ಚರ್ ಎನ್ನುವುದು ಒಂದು ಶಿಕ್ಷೆ. ಇದರಲ್ಲಿ ಒಂದು ಅಟ್ಟಣಿಗೆಯ ಮೇಲೆ ದೊಡ್ಡ ಬೋಗುಣಿ ಅಥವಾ ಕೊಳಗವನ್ನು ಇಟ್ಟು, ಅದರಲ್ಲಿ ತಣ್ಣೀರನ್ನು ತುಂಬಲಾಗುತ್ತದೆ. ಈ ಬೋಗುಣಿಯ ಕೆಳಕ್ಕೆ ಸರಿಯಾಗಿ ಕೈದಿಯನ್ನು ಕೂರಿಸಿ, ಈ ಬೋಗುಣಿಯಲ್ಲಿರುವ ನೀರು ಗಂಟೆಗಟ್ಟಲೆ ಕಾಲ ಅವನ ತಲೆಬುರುಡೆ, ನೆತ್ತಿ ಮತ್ತು ಮುಖದ ಮೇಲೆ ಬೀಳುವಂತೆ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ಕೈದಿಯು ಸ್ತಿಮಿತವನ್ನು ಕಳೆದುಕೊಂಡು, ಹುಚ್ಚನಂತಾಗುತ್ತಿದ್ದ). ಇನ್ನೊಂದೆಡೆಯಲ್ಲಿ, ʼಜೈಲಿನಲ್ಲಿ ಹೇಳುತ್ತಿದ್ದ ಕೆಲಸಗಳನ್ನು ಮಾಡಲು ನಿರಾಕರಿಸಿದʼ ಸಾವರ್ಕರ್ ಅವರಿಗೆ 1913ರ ಡಿಸೆಂಬರಿನಲ್ಲಿ ಮತ್ತೊಂದು ತಿಂಗಳ ಪ್ರತ್ಯೇಕ ಏಕಾಂತವಾಸದ ಶಿಕ್ಷೆಯನ್ನು ವಿಧಿಸಲಾಯಿತು. ಬಳಿಕ, ಅಂದರೆ 1914ರ ಜನವರಿ 17ರಿಂದ ಮತ್ತೊಮ್ಮೆ ಅವರನ್ನು ಹಗ್ಗವನ್ನು ಹೊಸೆಯುವ ಶಿಕ್ಷೆಗೆ ಒಳಪಡಿಸಲಾಯಿತು. ಆಮೇಲೆ ಅದೇ ವರ್ಷದ ಜೂನ್ ೮ರಂದು ʼಪುನಾ ಜೈಲಿನ ಕೆಲಸಗಳನ್ನು ಮಾಡುವುದಿಲ್ಲವೆಂದು ಹಠ ಹಿಡಿದ ತಪ್ಪಿಗಾಗಿʼ ಒಂದು ವಾರ ಕೈಗೆ ಬೇಡಿ ಹಾಕಿ, ನಿಲ್ಲಿಸಲಾಯಿತು. ಸಾವರ್ಕರ್ ಅವರಿಗೆ ಈ ಶಿಕ್ಷೆಯನ್ನು ವಿಧಿಸುತ್ತಿದ್ದುದು ಎರಡನೇ ಸಲವಾಗಿತ್ತು. ಒಂದು ವಾರದ ಈ ಶಿಕ್ಷೆಯನ್ನು ಪೂರೈಸಿದ ನಂತರ ಜೈಲಿನ ಸಿಬ್ಬಂದಿಯು ಇವರ ಕೈಗೆ ಹಾಕಿದ್ದ ಕೋಳವನ್ನು ಬಿಚ್ಚಿದರು. ಆಗಲೂ ಸಾವರ್ಕರ್, ಜೈಲಿನಲ್ಲಿ ಸೂಚಿಸುತ್ತಿದ್ದ ಕೆಲಸಗಳನ್ನು ʼಯಾವ ಕಾರಣಕ್ಕೂ ನಾನು ಮಾಡುವುದಿಲ್ಲʼ ಎಂದು ದೃಢವಾಗಿ ಹೇಳಿದರು. ಆಗ ಅವರಿಗೆ ಸರಪಳಿ ಹಾಕಿ ಕಟ್ಟಿಹಾಕಲಾಯಿತು.
ಇದಾಗಿ ಎರಡು ದಿವಸಗಳಾಗಿದ್ದವಷ್ಟೆ. ಅಂದರೆ, ಅದು 1914ರ ಜೂನ್ 18ನೇ ತಾರೀಖು. ಅವತ್ತು ಸಾವರ್ಕರ್‌ಗೆ ʼಜೈಲಿನ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆʼ ಎಂದು ಅಡ್ಡಪಟ್ಟಿಗಳ ಬೇಡಿಯನ್ನು ಹಾಕಲಾಯಿತು. ʼಅಡ್ಡಪಟ್ಟಿಗಳ ಬೇಡಿ ಎಂದರೆ, ಅದೊಂದು ತ್ರಿಭುಜಾಕೃತಿಯಾಗಿದ್ದು, ಇದನ್ನು ಕೈದಿಯ ಎರಡೂ ಮೊಣಕಾಲು ಮತ್ತು ಸೊಂಟದ ಸುತ್ತ ಬಿಗಿಯಲಾಗುತ್ತಿತ್ತು. ಹೀಗೆ ಮಾಡಿದರೆ, ಕೈದಿಗೆ ಒಂದಿಂಚೂ ಹಿಂದಕ್ಕಾಗಲಿ, ಮುಂದಕ್ಕಾಗಲಿ ಬಗ್ಗಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ, ಇಡೀ ದಿನ ಅವನು ತನ್ನ ಕಾಲುಗಳನ್ನು ಹಿಗ್ಗಲಿಕೊಂಡೇ ಇರಬೇಕಾಗುತ್ತಿತ್ತು.ʼ
ಜೈಲ್ ಟಿಕೆಟ್ ದಾಖಲೆಗಳನ್ನು ನಂಬಬಹುದಾದರೆ, ಈ ಅಡ್ಡಪಟ್ಟಿಗಳ ಬೇಡಿಯನ್ನು ಹಾಕಿದ ಮಾರನೇ ದಿನ ಸಾವರ್ಕರ್ ಅವರು, ʼಯಾವುದಾದರೂ ಕೆಲಸ ಕೊಡಿ,ʼ ಎಂದು ಜೈಲು ಸಿಬ್ಬಂದಿಯನ್ನು ಕೇಳಿದರಂತೆ. ಆಗ ಅವರಿಗೆ ಮತ್ತೆ ಹಗ್ಗವನ್ನು ಹೊಸೆಯುವ ಕೆಲಸವನ್ನು ಕೊಡಲಾಯಿತಂತೆ. ಇದಾದ ಹತ್ತು ದಿನಗಳ ನಂತರವಷ್ಟೆ, ಅವರಿಗೆ ಹಾಕಿದ್ದ ಬೇಡಿಯನ್ನು ಕಳಚಲಾಯಿತು. ಬಳಿಕ, 1914ರ ಜುಲೈ ಮಧ್ಯಭಾಗದಲ್ಲಿ ಮಗದೊಮ್ಮೆ ಇವರಿಗೆ ಮೂರು ತಿಂಗಳ ಕಾಲ ಸರಪಳಿ ಕಟ್ಟಲಾಯಿತು. ಈ ಸರಪಳಿಯನ್ನು ಆ ವರ್ಷದ ಅಕ್ಟೋಬರಿನಲ್ಲಷ್ಟೇ ಬಿಚ್ಚಲಾಯಿತು.
ಜೈಲಿನಲ್ಲೇ ಪ್ರಭಾವ ಬೀರಿದರು
ತಮಗಿದ್ದ ಸಾರ್ವಜನಿಕ ವರ್ಚಸ್ಸು, ತಾವು ಮಾರ್ಸೆಲಸ್‌ನಲ್ಲಿ ಬ್ರಿಟನ್ನಿನ ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದು ಮತ್ತು ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆದ ತಮಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ- ಈ ಮೂರು ಕಾರಣಗಳಿಂದಾಗಿ ಸಾವರ್ಕರ್ ಅವರು ಅಂಡಮಾನ್‌ನ ಜೈಲಿನಲ್ಲಿದ್ದ ಉಳಿದ ಕೈದಿಗಳಿಗಿಂತ ಗಮನಾರ್ಹರಾಗಿದ್ದರು. ಅಲಿಪುರ್ ಪ್ರಕರಣದ ಆರೋಪಿಯಾಗಿ ಇದೇ ಜೈಲಿನಲ್ಲಿದ್ದ ಉಲ್ಲಾಸ್ಕರ್ ದತ್ ಅವರಿಗೆ ಒಂದು ರಾತ್ರಿ ಬಿದ್ದ ಕನಸಿನ ವಿವರಗಳನ್ನು ಗಮನಿಸಿದರೆ, ಸಾವರ್ಕರ್ ಅವರು ಸೆಲ್ಯುಲರ್ ಜೈಲಿನಲ್ಲಿದ್ದ ಸಹಕೈದಿಗಳ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದರೆಂಬುದು ತಿಳಿಯುತ್ತದೆ. ಈ ಉಲ್ಲಾಸ್ಕರ್ ಅವರು ಸ್ವತಃ ಕ್ರಾಂತಿಕಾರಿಗಳಾಗಿದ್ದು, ಬ್ರಿಟಿಷ್ ಸರಕಾರದ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದಂತಹ ಸಾಹಸಿಯಾಗಿದ್ದವರು. ಇವರನ್ನು ಬಂಧಿಸಿದ ಬ್ರಿಟಿಷ್ ಸರಕಾರವು ಇವರಿಗೆ ಮರಣದಂಡನೆಯನ್ನೇ ವಿಧಿಸಿತ್ತು. ಆದರೆ, ಉಲ್ಲಾಸ್ಕರ್ ಅವರು ಈ ತೀರ್ಪಿನ ವಿರುದ್ಧ ಕಲ್ಕತ್ತಾ ಹೈಕೋರ್ಟಿನ ಮೆಟ್ಟಿಲನ್ನೇರಿದರು. ಇವರ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು. ಇವರ ಮರಣದಂಡನೆಯನ್ನು ರದ್ದುಪಡಿಸಿ, ಅದನ್ನು 25 ವರ್ಷಗಳ ಜೀವಾವಧಿ ಶಿಕ್ಷೆಗೆ ಇಳಿಸಿ, ಅಂಡಮಾನ್ ಜೈಲಿನಲ್ಲಿಡುವಂತೆ ಹೇಳಿತ್ತು. ಅವರು ತಮ್ಮ ಪುಸ್ತಕದಲ್ಲಿ ವಿವರಿಸಿರುವಂತೆ, ʼರಾತ್ರಿ ನನಗೆ ಬಿದ್ದ ಒಂದು ಕನಸಿಲ್ಲಿ ಜೈಲಿನ ಅಧಿಕಾರಿಯಾದ ಡೇವಿಡ್ ಬ್ಯಾರಿಯು ನನಗೆ ಮೈಚರ್ಮ ಸುಲಿಯುವಂತೆ ಬಾರಿಸುವ ಮುವ್ವತ್ತು ಛಡಿ ಏಟುಗಳ ಶಿಕ್ಷೆಯ ಬೆದರಿಕೆ ಹಾಕಿದ. ಆದರೆ ನಾನು ಅದರಿಂದ ಹೆದರಲಿಲ್ಲ. ಆಗ ಅಲ್ಲಿಗೆ ಬಂದ ಸಾವರ್ಕರ್ ಅವರು ಕ್ರೂರಿಯಾದ ಆ ಅಧಿಕಾರಿಯೊಂದಿಗೆ ನನ್ನ ಪರವಾಗಿ ಜಟಾಪಟಿಗಿಳಿದರು. ಅನಂತರ ಅವರು ಬ್ಯಾರಿಯ ಮುಖಕ್ಕೆ ಗುದ್ದಿದರು. ಅವರ ಗುರಿ ಎಷ್ಟು ನಿಖರವಾಗಿತ್ತೆಂದರೆ, ಬ್ಯಾರಿಯ ಮುಖ ಹಾಗೆಯೇ ಅಪ್ಪಚ್ಚಿಯಾಯಿತು. ಇದರಿಂದಾಗಿ ಆ ಬ್ಯಾರಿ ಒಳ್ಳೆ ಕೋಡಂಗಿಯಂತೆ ಕಾಣಿಸುತ್ತಿದ್ದ.ʼ
ಕನಸುಗಳು ಹೇಗೇ ಇರಲಿ, ಆದರೆ ವಾಸ್ತವವು ಮಾತ್ರ ಸದಾ ಬೇರೆಯೇ. ಏಕೆಂದರೆ, ಜೈಲಿನಲ್ಲಿ ಕೈದಿಗಳಿಗೆ ನೀಡುತ್ತಿದ್ದ ಚಿತ್ರಹಿಂಸೆಯು ಭಯಾನಕ ಪರಿಣಾಮಗಳನ್ನು ಬೀರುತ್ತಿತ್ತು. ಉದಾಹರಣೆಗೆ ಹೇಳುವುದಾದರೆ, ಮಾಣಿಕ್‌ತಲಾ ಪ್ರಕರಣದ ತರುಣ ಆರೋಪಿಗಳಲ್ಲಿ ಒಬ್ಬರಾಗಿದ್ದ ಇಂದುಭೂಷಣ್ ರಾಯ್ ಅವರು (ಕೈದಿ ನಂಬರ್ 31555) ಬ್ರಿಟಿಷ್ ಪೊಲೀಸರ ಹಿಂಸೆಯನ್ನು ತಾಳಲಾರದೆ, ಇದೇ ಜೈಲಿನಲ್ಲಿ 1914ರ ಏಪ್ರಿಲ್ 29ರಂದು ತಮ್ಮ ಬಳಿ ಇದ್ದ ಕುರ್ತಾದಿಂದಲೇ ಸೆಲ್‌ನ ಕಿಟಕಿಗೆ ನೇಣು ಹಾಕಿಕೊಂಡರು. ಆಗ ಜೈಲಿನ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಡಾ.ಎಫ್.ಎ.ಬಾರ್ಕರ್ ಎಂಬ ಬ್ರಿಟಿಷ್ ಆಸಾಮಿಯು, ಈ ಕ್ರಾಂತಿಕಾರಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ. ಈತ ರಾಜಕೀಯ ಕೈದಿಗಳ ಬಗ್ಗೆ ಹೀಗೆ ಹೃದಯವೇ ಇಲ್ಲದವನಂತೆ ವರ್ತಿಸುತ್ತಿದ್ದ. ಅಷ್ಟೇ ಅಲ್ಲ, ಯಾರಾದರೂ ರಾಜಕೀಯ ಕೈದಿಗಳನ್ನು ಚಿಕಿತ್ಸೆಗೆಂದು ಕರೆತಂದರೆ, ಅವರಿಗೆ ಛಡಿ ಏಟುಗಳನ್ನು ಕೊಡುವಂತೆ ಶಿಫಾರಸು ಮಾಡುತ್ತಿದ್ದ! ಅಂದಂತೆ, ಇಂದುಭೂಷಣ್ ರಾಯ್ ಅವರು ನೇಣು ಹಾಕಿಕೊಂಡಿರುವುದನ್ನು ಜೈಲಿನ ವಾರ್ಡರ್ ಮಧ್ಯರಾತ್ರಿ 2 ಗಂಟೆಯ ಹೊತ್ತಿನಲ್ಲಿ ನೋಡಿದ್ದ. ಆದರೆ, ಈ ವೈದ್ಯಾಧಿಕಾರಿಯು ಅವರನ್ನು ನೋಡಲು ಬಂದಾಗ ಆಗಲೇ ಬೆಳಗ್ಗೆ ಎಂಟು ಗಂಟೆ ಆಗಿಹೋಗಿತ್ತು. ಅಂದರೆ, ಏನಿಲ್ಲವೆಂದರೂ ಇವನು ಆರು ಗಂಟೆಗಳಷ್ಟು ತಡವಾಗಿ ಆಗಮಿಸಿದ್ದ. ಸಾವರ್ಕರ್ ಅವರು ತಮ್ಮ ಲೋಕವಿಖ್ಯಾತ ಕೃತಿಯಾದ ʼಮಜಿ ಜನ್ಮತೇಪ್ʼನಲ್ಲಿ ಸೆಲ್ಯುಲರ್ ಜೈಲಿನ ಭಯಾನಕ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. ಇದರಲ್ಲಿ ಅವರು ಇಂದುಭೂಷಣ್ ರಾಯ್ ಅವರ ಬಗ್ಗೆ ಬರೆಯುತ್ತ, ‘ಈ ಹುಡುಗ ನನಗೆ ಚೆನ್ನಾಗಿ ಗೊತ್ತಿದ್ದ. ಅವನು ಕೂಡ ನನ್ನ ಹಾಗೆಯೇ ಇಲ್ಲಿ ಏಳನೇ ಬ್ಲಾಕ್‌ನ ಒಂದು ಸೆಲ್‌ನಲ್ಲೇ ಇದ್ದ. ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಇವನಿಗೆ ಮನವರಿಕೆ ಮಾಡಿಕೊಡಲು ನಾನು ಯತ್ನಿಸಿದೆ. ಆದರೂ ಈ ಹುಡುಗ ಸಾಯುವ ಮಾತನ್ನೇ ಆಡಿದ,ʼ ಎಂದಿದ್ದಾರೆ. ಅಂದಂತೆ, ಇಡೀ ಭಾರತದಲ್ಲಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ದೇಶದ ಮೊಟ್ಟಮೊದಲ ಕ್ರಾಂತಿಕಾರಿ ಇಂದುಭೂಷಣ್ ಆಗಿದ್ದರು. ಈ ತರುಣ ಕ್ರಾಂತಿಕಾರಿ ಹೀಗೆ ಅಸು ನೀಗಿದ್ದನ್ನು ಕಂಡು ಆಘಾತಕ್ಕೊಳಗಾದ ಸಾವರ್ಕರ್, ʼಪ್ರಾಯಶಃ ಮುಂದಿನ ಸರದಿ ನನ್ನದೇ ಇರಬಹುದು,ʼ ಎಂದರು. ಏಕೆಂದರೆ, ಸೆಲ್ಯುಲರ್ ಜೈಲಿನಲ್ಲಿ ತಮ್ಮನ್ನು ಎಣ್ಣೆಯ ಗಾಣವನ್ನು ಎಳೆಯುವಂತೆ ಹೇಳಿದ ದಿವಸ ಬಳಲಿ, ಕುಸಿದು ಬಿದ್ದ ಕ್ಷಣಗಳಲ್ಲಿ ಅವರಿಗೆ ಆತ್ಮಹತ್ಯೆ ಮಾಡಿಕೊಂಡು ಬಿಡೋಣವೇ ಎನ್ನುವ ಯೋಚನೆ ಸುಳಿದಾಡಿತ್ತು. ಆದರೆ, ಆ ನಕಾರಾತ್ಮಕ ತುಡಿತವನ್ನು ಅವರು ಕಷ್ಟಪಟ್ಟು ಹತ್ತಿಕ್ಕಿದ್ದರು.
ಇದಾಗಿ ಕೆಲವು ದಿನಗಳು ಕಳೆದಿದ್ದವಷ್ಟೆ. ಅಂದರೆ, ಅದು 1912ರ ಜೂನ್ 15ನೇ ತೇದಿ. ಅವತ್ತು ಬೆಳಗ್ಗೆ ಜೈಲಿನ ಕಾರಿಡಾರ್‌ನಲ್ಲಿ ಆಕ್ರಂದನದ ದನಿ ಕೇಳಿಬರತೊಡಗಿ, ಸಾವರ್ಕರ್ ಅವರು ದಡಬಡನೆ ಎದ್ದರು. ನೋಡಿದರೆ, ಬ್ಲಾಕ್ 5ರಲ್ಲಿ ಬಂಧಿಯಾಗಿದ್ದ ಉಲ್ಲಾಸ್ಕರ್ ದತ್ ಅವರನ್ನು ಪೊಲೀಸರು ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಅಲ್ಲಿದ್ದ ವಾರ್ಡರುಗಳ ಪೈಕಿ ಒಬ್ಬ ʼಇವನಿಗೆ ಹುಚ್ಚು ಹಿಡಿದಿದೆ!ʼ ಎಂದು ಕೂಗಿಕೊಳ್ಳುತ್ತಿದ್ದ. ಆ ಕ್ಷಣಗಳಲ್ಲಿ ಉಲ್ಲಾಸ್ಕರ್ ಅವರನ್ನು ಹುಚ್ಚರ ವಾರ್ಡ್‌ಗೆ ಎಳೆದುಕೊಂಡು ಹೋಗಲಾಗುತ್ತಿತ್ತು. ಇದಕ್ಕೂ ಮೊದಲು, ನಿವೃತ್ತ ಪ್ರೊಫೆಸರಾಗಿದ್ದ ಉಲ್ಲಾಸ್ಕರ್ ಅವರ ತಂದೆಯವರು, ತಮ್ಮ ಮಗನ ಸ್ಥಿತಿಗತಿಯ ಬಗ್ಗೆ ವಿಚಾರಿಸಿ ವೈಸ್‌ರಾಯ್‌ಗೆ ಒಂಬತ್ತು ಪತ್ರಗಳನ್ನು ಬರೆದಿದ್ದರು. ಆದರೆ ಇದ್ಯಾವುದಕ್ಕೂ ಬ್ರಿಟಿಷ್ ಸರಕಾರ ಉತ್ತರಿಸಲಿಲ್ಲ. ಒಂಬತ್ತನೆಯ ಪತ್ರಕ್ಕೆ ಉತ್ತರಿಸಿದ ಪೋರ್ಟ್ ಬ್ಲೇರ್‌ನ ಮುಖ್ಯ ಆಯುಕ್ತ ಬ್ರೌನಿಂಗ್, ʼನಿಮ್ಮ ಮಗನಿಗೆ ಸನ್ನಿ ಹಿಡಿಯಲು ಮಲೇರಿಯಾ ಸೋಂಕು ಕಾರಣ. ಸದ್ಯಕ್ಕೆ ಅವನ ಸ್ಥಿತಿಗತಿ ಉತ್ತಮವಾಗಿದೆ,ʼ ಎಂದು ಚುಟುಕಾಗಿ ಉತ್ತರಿಸಿದ. ಇದಾದ ಆರು ತಿಂಗಳ ಮೇಲೆ ಉಲ್ಲಾಸ್ಕರ್ ಅವರನ್ನು ಮದ್ರಾಸಿನ ಹುಚ್ಚಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಎರಡು ಸಾವುಗಳ ನಂತರ
ಇಂದುಭೂಷಣ್ ರಾಯ್ ಮತ್ತು ಉಲ್ಕಾಸ್ಕರ್ ದತ್ ಅವರ ದುರಂತ ಸಾವು ಜೈಲಿನ ಉಳಿದ ಕೈದಿಗಳೆಲ್ಲರೂ ಒಗ್ಗಟ್ಟಿನಿಂದ ಪ್ರತಿಭಟಿಸಲು ಕಾರಣವಾಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ʼಸ್ವರಾಜ್ʼ ಪತ್ರಿಕೆಯ ಸಂಪಾದಕರಾದ ಲಧಾರಾಮ್ ಮತ್ತು ಹದಿನೇಳರ ಪ್ರಾಯದ ಕ್ರಾಂತಿಕಾರಿ ನಾನಿ ಗೋಪಾಲ್ ಮುಖರ್ಜಿ ಇಬ್ಬರೂ 1912ರ ಸೆಪ್ಟೆಂಬರಿನಲ್ಲಿ ಉಪವಾಸ ಮುಷ್ಕರವನ್ನು ಕೈಗೊಂಡರು. ಆಗ ಉಳಿದ ಕೈದಿಗಳು ಜೈಲಿನಲ್ಲಿ ತಮಗೆ ವಿಧಿಸುತ್ತಿದ್ದ ಕೆಲಸಗಳನ್ನು ಮಾಡುವುದಿಲ್ಲವೆಂದು ಹಠ ಹಿಡಿದರು. ಇವರೆಲ್ಲರೂ ಆಗ ಒಕ್ಕೊರಲಿನಿಂದ, ಸಾಮಾನ್ಯ ಕೈದಿಗಳಿಗೆ ಇರುವಂತಹ ಮೂರು ಹಕ್ಕುಗಳನ್ನು ರಾಜಕೀಯ ಕೈದಿಗಳಿಗೂ ಕೊಡಬೇಕೆಂದು ದನಿಯೆತ್ತಿದರು. ಆ ಬೇಡಿಕೆಗಳೆಂದರೆ, ಆರು ತಿಂಗಳು ಶಿಕ್ಷೆಯನ್ನು ಪೂರೈಸಿದ ನಂತರ ಜೈಲಿನ ಹೊರಗಡೆ ಕೆಲಸ ಮಾಡಲು ಅವಕಾಶ, ಕೇವಲ ಗುಮಾಸ್ತಿಕೆಯ ಕೆಲಸಗಳನ್ನು ಮಾತ್ರ ಮಾಡಿಸಬೇಕು, ಮತ್ತು ಶಿಕ್ಷೆಯನ್ನು ಕಡಿತಗೊಳಿಸಬೇಕು. ಇವುಗಳ ಜೊತೆಗೆ, ರಾಜಕೀಯ ಕೈದಿಗಳಿಗೆ ದಿನಪತ್ರಿಕೆಗಳನ್ನೂ ಪುಸ್ತಕಗಳನ್ನೂ ಒದಗಿಸಬೇಕೆಂಬ ನಾಲ್ಕನೆಯ ಬೇಡಿಕೆಯೂ ಒಂದಿತ್ತು.
ರಾಜಕೀಯ ಕೈದಿಗಳ ಈ ಪ್ರತಿಭಟನೆಯು 1912ರ ಡಿಸೆಂಬರಿನವರೆಗೂ ಮುಂದುವರಿಯಿತು. ಕೊನೆಗೆ, ನಿರಶನಕ್ಕೆ ಕೂತಿದ್ದ ಲಧಾರಾಮ್ ಮತ್ತು ನಾನಿ ಗೋಪಾಲ್ ಮುಖರ್ಜಿಯವರಿಗೆ ಬಲವಂತದಿಂದ ನಳಿಕೆಗಳ ಮೂಲಕ ಆಹಾರವನ್ನು ಕೊಡಲಾಯಿತು. ಇಷ್ಟೇ ಅಲ್ಲದೆ, ನಾನಿಯವರಿಗೆ ಆ ಸ್ಥಿತಿಯಲ್ಲೂ ಒಂದು ವಾರ ಕೈಕೋಳ ಹಾಕಿ ನಿಲ್ಲಿಸಿದ್ದರ ಜೊತೆಗೆ, ಈ ʼತಪ್ಪಿಗಾಗಿʼ ಹೆಚ್ಚುವರಿ ಒಂದು ವರ್ಷದ ಜೈಲುಶಿಕ್ಷೆಯನ್ನು ವಿಧಿಸಲಾಯಿತು. ಈ ಪ್ರತಿಭಟನೆಯಿಂದ ರೋಸಿ ಹೋದ ಜೈಲಿನ ಸೂಪರಿಂಟೆಂಡೆಂಟ್ ಬಂದು, ʼಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಆದರೆ, ಇದಕ್ಕೆ ಸರಕಾರದ ಆದೇಶ ಬರುವವರೆಗೂ ಕಾಯಬೇಕು,ʼ ಎಂದು ಹೇಳಿದ. ಆಮೇಲಷ್ಟೆ, ಅರ್ಧದಷ್ಟು ಕೈದಿಗಳು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಉಳಿದ ಅರ್ಧದಷ್ಟು ಕೈದಿಗಳು ಆ ಅಧಿಕಾರಿಯ ಈ ಆಶ್ವಾಸನೆಗೆ ಕರಗಲಿಲ್ಲ. ಆಗ ಜೈಲಿನ ಸಿಬ್ಬಂದಿ ಇವರಿಗೆ ಬಗೆಬಗೆಯ ಭಯಾನಕ ಬೇಡಿಗಳನ್ನು ಹಾಕಿ, ಹಿಂಸೆಯನ್ನು ಕೊಟ್ಟರು. ಆದರೂ ಈ ಕೈದಿಗಳು ಮಾತ್ರ ಜಗ್ಗಲಿಲ್ಲ. ಇದರಿಂದ ಬೆಚ್ಚಿ ಬಿದ್ದ ಬ್ರಿಟಿಷ್ ಸರಕಾರವು, ಇವರೊಂದಿಗೆ ಮಾತುಕತೆ ನಡೆಸುವಂತೆ ಭಾರತೀಯ ವೈದ್ಯಕೀಯ ಸೇವೆಯ ನಿರ್ದೇಶಕರಾಗಿದ್ದ ಪಾರ್ಸಿ ಲೂಕಾಸ್ ಅವರನ್ನು ಸೆಲ್ಯುಲರ್ ಜೈಲಿಗೆ ಕಳಿಸಿಕೊಟ್ಟಿತು. ಪ್ರತಿಭಟನಾನಿರತ ರಾಜಕೀಯ ಕೈದಿಗಳೊಂದಿಗೆ ಮಾತನಾಡಿ, ಸಂಧಾನ ಮಾಡಿದ ಲೂಕಾಸ್, ʼನಿಮಗೆಲ್ಲ ಇನ್ನುಮುಂದೆ ಸುಲಭವಾದ ಕೆಲಸಗಳನ್ನು ಕೊಡಲಾಗುವುದು. ಜೊತೆಗೆ, ಆರು ತಿಂಗಳ ಶಿಕ್ಷೆ ಪೂರೈಸಿದ ಕೂಡಲೇ ಜೈಲಿನಿಂದ ಹೊರಗೆ ಕೆಲಸ ಮಾಡಲು ಮತ್ತು ವಾಸಿಸುವ ಸೌಲಭ್ಯವನ್ನು ಒದಗಿಸಲಾಗುವುದು. ಅಲಲ್ದೆ, ಕೆಲವು ಬಗೆಯ ಪುಸ್ತಕಗಳನ್ನೂ ನಿಮಗೆ ಪೂರೈಸಲಾಗುವುದು,ʼ ಎನ್ನುವ ಆಶ್ವಾಸನೆಗಳನ್ನು ಕೊಟ್ಟನು. ಇಷ್ಟಾದಮೇಲೆ, ಕೈದಿಗಳು ಪ್ರತಿಭಟನೆಯನ್ನು ನಿಲ್ಲಿಸಿ, ತಂತಮ್ಮ ಕೆಲಸಗಳಿಗೆ ಮರಳಿದರು.
ವಿನಾಯಕ ಸಾವರ್ಕರ್ ಅವರ ಅಣ್ಣ ಬಾಬಾರಾವ್ ಕೂಡ ಮೊದಲ ದಿನದಿಂದಲೇ ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ಹಲವು ಬಗೆಯ ಅವಮಾನಗಳನ್ನು ಅನುಭವಿಸಿದರು. ಆದರೆ, ವಿನಾಯಕ ಸಾವರ್ಕರ್ ಅವರು ಕೂಡಲೇ ಇದರಲ್ಲಿ ಪಾಲ್ಗೊಳ್ಳಲಿಲ್ಲ. ಈ ಬಗ್ಗೆ ತಮ್ಮ ನಿಲುವು ಏನಾಗಿತ್ತೆಂಬುದನ್ನು ಅವರು ತಮ್ಮ ಜ್ಞಾಪಕ ಚಿತ್ರಶಾಲೆಯ ಸಂಪುಟದಲ್ಲಿ ವಿವರಿಸಿದ್ದು, ಆ ಸಾಲುಗಳು ಹೀಗಿವೆ;
- “ಅದು ಇನ್ನೇನು ಅಕ್ಟೋಬರ್ ತಿಂಗಳು ಬರುವ ಹೊತ್ತಾಗಿತ್ತು. ಜೈಲಿನಲ್ಲಿ ಈ ದಿನಗಳೆಂದರೆ, ಸಾಮಾನ್ಯವಾಗಿ ಅವರವರ ಮನೆಯಿಂದ ಪತ್ರಗಳು ಬರುತ್ತಿದ್ದ ದಿನಗಳು. ಹೊರಗಿನ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯಲು ನಮಗೆಲ್ಲ (ಕೈದಿಗಳಿಗೆ) ಇದ್ದ ಮಾರ್ಗ ಇದೊಂದೇ ಆಗಿತ್ತು. ಅಂದಂತೆ, ನಮ್ಮನಮ್ಮ ಮನೆಯವರು ಕೂಡ ನಮಗೆಲ್ಲ ಪತ್ರ ಬರೆಯುವಾಗ ತುಂಬಾ ಹುಷಾರಾಗಿರಬೇಕಾಗಿತ್ತು. ಅಂದರೆ, ಈ ಪತ್ರಗಳಲ್ಲಿ ಯಾವುದೇ ರಾಜಕೀಯ ವಿಚಾರದ ವಾಸನೆ ಇರದಂತೆ ನೋಡಿಕೊಳ್ಳಬೇಕಾಗಿತ್ತು. ಏಕೆಂದರೆ, ಅಂತಹ ಸೂಕ್ಷ್ಮ ವಿಚಾರಗಳನ್ನೇನಾದರೂ ಪತ್ರದಲ್ಲಿ ಪ್ರಸ್ತಾಪಿಸಿರುವುದು ಕಣ್ಣಿಗೆ ಬಿದ್ದರೂ ಸಾಕು, ಜೈಲಿನ ಅಧಿಕಾರಿಗಳು ಆ ಪತ್ರಗಳನ್ನು ನಮಗೆ ಕೊಡುತ್ತಿರಲಿಲ್ಲ. ಇದಲ್ಲದೆ, ನನಗೆ ನನ್ನ ತಮ್ಮ ನಾರಾಯಣನಿಂದ ಬರುತ್ತಿದ್ದ ಪತ್ರದಿಂದ ಭಾರತದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಗಳ ಬಗ್ಗೆಯೂ ಖಚಿತವಾದ ವರ್ತಮಾನ ಸಿಕ್ಕುತ್ತಿತ್ತು. ಅವನ ಪತ್ರದಲ್ಲಿದ್ದ ವಿಚಾರಗಳ ಎಳೆಯನ್ನು ಹಿಡಿದುಕೊಂಡು ನಾವೆಲ್ಲರೂ -ರಾಜಕೀಯ ಕೈದಿಗಳು- ಸಾಕಷ್ಟು ಚರ್ಚಿಸಲು ಅವಕಾಶ ಸಿಕ್ಕುತ್ತಿತ್ತು. ಜೊತೆಗೆ, ಅವನ ಆ ಪತ್ರವನ್ನು ನಾವು ಎಲ್ಲ ರಾಜಕೀಯ ಕೈದಿಗಳಿಗೂ ಹಂಚುತ್ತಿದ್ದೆವು. ನಮ್ಮ ಸಹಕೈದಿಗಳು ಪ್ರತಿಭಟನೆಯನ್ನು ಶುರು ಮಾಡಿದಾಗ, ನಾರಾಯಣನಿಂದ ನನಗೆ ಪತ್ರ ಬರಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದವು. ಹೀಗಾಗಿ, ಅವನಿಂದ ಪತ್ರ ಬರುವವರೆಗೂ ನಾನು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಬೇಡವೆಂದು ತೀರ್ಮಾನಿಸಿದೆ.”
ಅಂತೂ ನಾರಾಯಣ ಸಾವರ್ಕರ್ ಅವರು ಬರೆದ ಪತ್ರ ಸೆಲ್ಯುಲರ್ ಜೈಲನ್ನು ತಲುಪಿತು. ಆದರೆ, ಜೈಲಿನ ಅಧಿಕಾರಿಗಳು ʼಇದರಲ್ಲಿ ಆಕ್ಷೇಪಾರ್ಹ ಅಂಶಗಳಿವೆ,ʼ ಎಂದು ಹೇಳಿ, ವಿನಾಯಕ ಸಾವರ್ಕರ್ ಅವರಿಗೆ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಅವರು, ಜೈಲಿನ ಕೆಲಸಗಳನ್ನು ಮಾಡುವುದಿಲ್ಲ ಎಂದು ಹೇಳಿದರು. ದಿನಗಳು ಹೀಗೆಯೇ ಉರುಳುತ್ತಿದ್ದವು. ಇಷ್ಟರಲ್ಲಿ ಆ ವರ್ಷದ ಡಿಸೆಂಬರ್ ಕೊನೆಯ ಹೊತ್ತಿಗೆ ನಾನಿ ಗೋಪಾಲ್ ಮುಖರ್ಜಿಯವರ ಆರೋಗ್ಯ ತೀರಾ ಹದಗೆಟ್ಟು, ಚಿಂತಾಜನಕ ಸ್ಥಿತಿ ಸೃಷ್ಟಿಯಾಯಿತು. ಆಗ ಸಾವರ್ಕರ್ ಅವರು ನಿರಶನ ಮುಷ್ಕರವನ್ನು ಕೈಗೊಂಡರು. ಇದು ನಾನಿ ಗೋಪಾಲ್ ಅವರ ಹೋರಾಟಕ್ಕೆ ಕೈಗೂಡಿಸಿದ ಕ್ರಮವಾಗಿರಲಿಲ್ಲ. ಬದಲಿಗೆ, ಅವರು ತಮ್ಮ ನಿರಶನ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡುವುದು ಸಾವರ್ಕರ್ ಅವರ ತಂತ್ರವಾಗಿತ್ತು. ಇದಕ್ಕೂ ಮೊದಲು ಅವರು, ನಾನಿಯವರೊಂದಿಗೆ ಮಾತನಾಡಲು ತಮಗೆ ಅವಕಾಶ ಕೊಡಬೇಕೆಂದು ಜೈಲಿನ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಆದರೆ, ಅವರ ಈ ಮನವಿಯನ್ನು ತಿರಸ್ಕರಿಸಲಾಗಿತ್ತು.
ಉಪವಾಸ ಕೂರಬೇಕಾಗಿಲ್ಲ
ಸಾವರ್ಕರ್ ಅವರು ಎಂದಿಗೂ ಉಪವಾಸ ಮುಷ್ಕರಗಳನ್ನಾಗಲಿ, ನಿರಶನ ಪ್ರತಿಭಟನೆಗಳನ್ನಾಗಲಿ ಒಪ್ಪಿದವರಲ್ಲ. ಇದು ಯಾವಾಗಲೂ ನಮ್ಮನ್ನು ನಾವು ಸೋಲಿಗೆ ದೂಡಿಕೊಳ್ಳುವ ಕ್ರಮ ಎಂದೇ ಅವರು ಭಾವಿಸಿದ್ದರು. ಈ ಬಗ್ಗೆ ತಮ್ಮ ಮಹತ್ತ್ವದ ಕೃತಿಯಾದ ʼಮೈ ಟ್ರಾನ್ಸ್ಪೋರ್ಟೇಶನ್ ಫಾರ್ ಲೈಫ್ʼನಲ್ಲಿ ಅವರು, ʼನಿರಶನ ಮುಷ್ಕರವು ಆತ್ಮಹತ್ಯಾತ್ಮಕವೆಂದೇ ನಾನು ಯಾವಾಗಲೂ ಅಂದುಕೊಂಡಿದ್ದೇನೆ. ಏಕೆಂದರೆ, ಉಪವಾಸವು ಒಬ್ಬ ವ್ಯಕ್ತಿಗೆ ಹಾನಿಯನ್ನು ಉಂಟುಮಾಡುತ್ತದಲ್ಲದೆ, ಅವನು ಹೊಂದಿರುವ ಘನವಾದ ಉದ್ದೇಶವನ್ನೂ ಹಾಳು ಮಾಡಿಬಿಡುತ್ತದೆ,ʼ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಜೊತೆಗೆ, ಈ ಕೃತಿಯಲ್ಲಿ ಅವರು ಸೆಲ್ಯುಲರ್ ಜೈಲಿನ ಪ್ರಸಂಗವನ್ನು ಸಾದ್ಯಂತವಾಗಿ ನೆನಪಿಸಿಕೊಂಡಿದ್ದು, ಆ ಸಾಲುಗಳು ಹೀಗಿವೆ;
“ನಮ್ಮ ಶತ್ರುಗಳ ವಿರುದ್ಧ ಹೋರಾಡಬೇಕೆಂದರೆ, ನಾವು ಉಪವಾಸ ಕೂರಬೇಕಾಗಿಲ್ಲ ಎಂದು ನಾನು ಪ್ರಬಲವಾಗಿ ಹೇಳುತ್ತಲೇ ಇದ್ದೆ. ನನ್ನ ಈ ನಿಲುವು ನಮ್ಮ ಗೆಳೆಯರ ಮೇಲೆ ಅಪೇಕ್ಷಿತ ಪ್ರಭಾವ ಬೀರಿ, ಅವರೆಲ್ಲರೂ ನಿರಶನ ಪ್ರತಿಭಟನೆಯನ್ನು ಕೈಬಿಟ್ಟರು. ಆದರೆ, ನಾನಿ ಗೋಪಾಲ್ ಮುಖರ್ಜಿಯವರು ಮಾತ್ರ ಉಪವಾಸ ಮುಷ್ಕರವನ್ನು ನಿಲ್ಲಿಸಲು ಎಷ್ಟೇ ಹೇಳಿದರೂ ಒಪ್ಪಲಿಲ್ಲ. ಉಪವಾಸ ಕೂತು ಕೂತು, ಅವರು ಸಾವಿನ ಅಂಚಿಗೆ ಬಂದುಬಿಟ್ಟರು. ಆಗ ನಾನು, ಅವರನ್ನು ಮಣಿಸಲು ಒಂದು ಅತಿರೇಕದ ಕ್ರಮಕ್ಕೆ ಮುಂದಾದೆ. ಅಂದರೆ, ನೀವು ನಿರಶನವನ್ನು ಕೈಬಿಡದೆ ಇದ್ದರೆ ನಾನು ಕೂಡ ಊಟವನ್ನು ಮುಟ್ಟುವುದಿಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಷ್ಟೆ ಅಲ್ಲ, ಮಾರನೆ ದಿನವೇ ನಾನು, ನನ್ನ ಮಾತಿಗೆ ತಕ್ಕಂತೆ, ನಿರಶನ ಮುಷ್ಕರ ಶುರು ಮಾಡಿದೆ. ನಾನು ಹೀಗೆ ಉಪವಾಸ ಕೂತ ಸುದ್ದಿಯು ಜೈಲಿನ ತುಂಬೆಲ್ಲ ಕಾಡ್ಗಿಚ್ಚಿನಂತೆ ಹರಡಿತು. ಜೈಲಿನ ಅಧಿಕಾರಿಗಳಿಗೆ ನನ್ನ ಈ ಕ್ರಮವು ಅಪರಾಧವಾಗಿ ಕಂಡಿತು. ಹೀಗಾಗಿ ಅವರು ನನ್ನನ್ನು ತನಿಖೆಗೆ ಒಳಪಡಿಸಿದರು. ಅಂತಿಮವಾಗಿ ಈ ಪ್ರಕರಣದಲ್ಲಿ ಅವರು ನನ್ನನ್ನು ಶಿಕ್ಷಿಸುವ ಬದಲು, ಉಪವಾಸವನ್ನು ಕೈಬಿಡುವಂತೆ ಕೇಳಿಕೊಂಡರು. ಆಗ ನಾನು ಅವರಿಗೆ, ಉಪವಾಸ ಕೂರಲು ಕಾರಣವೇನೆಂಬುದನ್ನು ಹೇಳಿ, ನಾನಿ ಗೋಪಾಲರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕೆಂದು ಕೇಳಿದೆ. ನಾನು ಮೂರು ದಿನಗಳ ಕಾಲ ಅನ್ನ-ನೀರು ಏನನ್ನೂ ಮುಟ್ಟುವುದಿಲ್ಲವೆಂದು ಮುಷ್ಕರ ಕೂತಿರುವ ಸುದ್ದಿ ನಾನಿಯ ಕಿವಿಗೂ ಬಿದ್ದು, ಅವನು ದುಃಖದಲ್ಲಿ ಮುಳುಗಿ ಹೋದ. ಕೊನೆಗೆ, ಡೇವಿಡ್ ಬ್ಯಾರಿಯೇ ನನ್ನನ್ನು ನಾನಿ ಗೋಪಾಲರ ಸೆಲ್‌ಗೆ ಕರೆದುಕೊಂಡು ಹೋದ. ನಾನು ಅವರೊಂದಿಗೆ ಎಲ್ಲವನ್ನೂ ಮಾತನಾಡಿದೆ. ಬಳಿಕ ಅವರು ತಮ್ಮ ನಿರಶನ ಮುಷ್ಕರವನ್ನು ಕೈಬಿಡಲು ಒಪ್ಪಿಕೊಂಡರು.”
ನಾನಿಯವರೊಂದಿಗೆ ಮಾತನಾಡಿದ ಸಾವರ್ಕರ್ ಅವರು, ʼನೋಡಯ್ಯ ನಾನಿ, ಯಾವುದೇ ಮನುಷ್ಯ ಉಪವಾಸ ಬಿದ್ದು ಸಾಯುವುದು ಬಹಳ ದೊಡ್ಡ ಸಂಗತಿಯಲ್ಲ. ಇವತ್ತು ನೀನು ಮಾಡುತ್ತಿರುವುದು ರಾಜಕೀಯವಾಗಿ ಸರಿಯಲ್ಲ. ನೀನು ಈ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುವುದು ನಿಜವಾದರೆ ಹೊಟ್ಟೆಗಿಲ್ಲದೆ ಆ ತ್ಯಾಗವನ್ನು ಮಾಡಬೇಡ. ಬದಲಿಗೆ, ಶತ್ರುಗಳೊಂದಿಗೆ ಹೋರಾಡಿ, ಜೀವವನ್ನು ಬಿಡು,ʼ ಎಂದರು.
ನಂತರ ಬ್ರಿಟಿಷ್ ಸರಕಾರವು ಒಪ್ಪಂದದಂತೆ, 19 ಮಂದಿ ರಾಜಕೀಯ ಕೈದಿಗಳಿಗೆ ಸೆಲ್ಯುಲರ್ ಜೈಲಿನಿಂದ ಹೊರಗೆ ಕೆಲಸ ಮಾಡಲು ಮತ್ತು ವಾಸಿಸಲು ಅವಕಾಶವನ್ನು ಮಾಡಿಕೊಟ್ಟಿತಾದರೂ ಈ ಪಟ್ಟಿಯಲ್ಲಿ ಸಾವರ್ಕರ್ ಅವರ ಹೆಸರು ಇಲ್ಲದಂತೆ ನೋಡಿಕೊಂಡಿತು. ಅವರು ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತ, ಹಗ್ಗವನ್ನು ಹೊಸೆಯುವುದನ್ನು ಮುಂದುವರಿಸಬೇಕಾಯಿತು. ಆದರೆ, ಹೀಗೆ ವಿನಾಯಿತಿ ಪಡೆದಿದ್ದ ಆ 19 ಕೈದಿಗಳನ್ನೂ 1913ರ ಆಗಸ್ಟ್ನಲ್ಲಿ ಇದ್ದಕ್ಕಿದ್ದಂತೆಯೇ ಮತ್ತೆ ಜೈಲಿನೊಳಕ್ಕೆ ತಳ್ಳಲಾಯಿತು! ಜೈಲಿನ ಸೂಪರಿಂಟೆಂಡೆಂಟ್ ಆಗ, ʼಇವರೆಲ್ಲರೂ ಒಂದು ರಹಸ್ಯ ಸಂಘಟನೆಯನ್ನು ಕಟ್ಟಿಕೊಂಡು, ಬಾಂಬ್ ತಯಾರಿಸುತ್ತ, ನಮ್ಮ ಅಧಿಕಾರಿಯೊಬ್ಬರನ್ನು ಕೊಲ್ಲಲು ನೋಡುತ್ತಿದ್ದರು. ಜೊತೆಗೆ, ನನ್ನ ಮೇಲೂ ಬಾಂಬ್ ಹಾಕಲು ಪಿತೂರಿ ನಡೆಸುತ್ತಿದ್ದರು,ʼ ಎಂದು ಹೇಳಿದ.
ಕೈದಿಗಳ ದಾರುಣ ಕಥನ
ಇಷ್ಟು ಹೊತ್ತಿಗಾಗಲೇ, ಸೆಲ್ಯುಲರ್ ಜೈಲಿನಲ್ಲಿ ಬಂಧಿಗಳಾಗಿರುವ ರಾಜಕೀಯ ಹೋರಾಟಗಾರರು ಎಂತೆಂತಹ ಘೋರ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಭಾರತದ ಜನರಿಗೆ ಗೊತ್ತಾಗಿತ್ತು. ಇಷ್ಟರ ಮಧ್ಯೆ, ಅಂಡಮಾನಿನ ಈ ಕರಾಳ ಜೈಲಿನಲ್ಲಿ ಬಂಧಿಯಾಗಿದ್ದ ಹೋತೀಲಾಲ್ ವರ್ಮ ಅವರು ಕೈದಿಗಳ ಭಯಾನಕ ಪರಿಸ್ಥಿತಿಯನ್ನು ವಿವರಿಸುತ್ತಿದ್ದ ಒಂದು ಪತ್ರವನ್ನು ಅದ್ಹೇಗೋ ಕದ್ದುಕೊಂಡು, ಪವಾಡಸದೃಶವಾಗಿ ಕಲ್ಕತ್ತಾಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದರು. ಈ ಪತ್ರವನ್ನು ಸಂಪಾದಿಸಿದ ʼಬಂಗಾಳಿʼ ಪತ್ರಿಕೆಯು 1912ರಲ್ಲಿ ಅಂಡಮಾನಿನ ಜೈಲಿನ ಕೈದಿಗಳ ದಾರುಣ ಸ್ಥಿತಿಯನ್ನು ಕುರಿತು ಮೂರು ಲೇಖನಗಳನ್ನು ಪ್ರಕಟಿಸಿತು. ಇದರಿಂದ ಸ್ಫೂರ್ತಿ ಪಡೆದ ಲಾಹೋರ್‌ನ ʼಟ್ರಿಬ್ಯೂನ್ʼ, ಪೂನಾದ ʼಮರಾಠಾʼ ಮತ್ತು ಗೈ ಆಲ್ಡೆಂಡ್ ಅವರ ಸಂಪಾದಕತ್ವದ ಹಾಗ ಲಂಡನ್ನಿನಿಂದ ಪ್ರಕಟವಾಗುತ್ತಿದ್ದ ʼಹೆರಾಲ್ಡ್ ಆಫ್ ರಿವೋಲ್ಟ್ʼ ಪತ್ರಿಕೆಗಳು ಈ ವಿಷಯದ ಕುರಿತು ದೊಡ್ಡದಾಗಿ ದನಿ ಎತ್ತಿದವು. ಈ ಹೋರಾಟ ಎಷ್ಟೊಂದು ಕಾವು ಪಡೆಯಿತೆಂದರೆ, ಬ್ರಿಟಿಷ್ ಸರಕಾರಕ್ಕೆ ಇದನ್ನು ಉದಾಸೀನ ಮಾಡುವುದು ಅಸಂಭವವಾಯಿತು. ಆಗ ತನ್ನ ಗೃಹ ಸಚಿವರಿಗೆ ಸಮಾನ ಸ್ಥಾನಮಾನವನ್ನು ಹೊಂದಿದ್ದ ಗೃಹ ಸಚಿವಾಲಯದ ಸದಸ್ಯನಾಗಿದ್ದ ರೆಜಿನಾಲ್ಡ್ ಕ್ರ್ಯಾಡ್‌ಡಾಕ್ ಅವರನ್ನು ಅಂಡಮಾನಿಗೆ ಕಳಿಸಿದ ಬ್ರಿಟಿಷ್ ಸರಕಾರವು ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿತು. ಇವನೇನೂ ಅಲ್ಲಿ ಕೈದಿಗಳ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಕುರಿತು ಚರ್ಚಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಬದಲಿಗೆ, ಈ ಕೈದಿಗಳು ತಮ್ಮ ಶಿಕ್ಷೆಯನ್ನು ಸಂಪೂರ್ಣವಾಗಿ ಮುಗಿಸುವವರೆಗೂ ಅವರನ್ನು ಸೆಲ್‌ನಲ್ಲೇ ಇಟ್ಟಿರಬೇಕು ಎಂದು ಹೇಳಿದ್ದ ಜೈಲಿನ ಸೂಪರಿಂಟೆಂಡೆಂಟ್‌ನ ಶಿಫಾರಸುಗಳನ್ನು ಜಾರಿಗೆ ತರುವುದು ಹೇಗೆನ್ನುವ ಬಗ್ಗೆ ಮುಂದಿನ ಹೆಜ್ಜೆ ಇಡುವ ಕುರಿತು ವಿಚಾರ ವಿನಿಮಯ ನಡೆಸುವುದು ಇವನ ಗುರಿಯಾಗಿತ್ತು. ಇದರಂತೆ 1912ರ ನವೆಂಬರ್‌ನಲ್ಲಿ ಅಂಡಮಾನ್ ಜೈಲಿಗೆ ಬಂದ ಕ್ರ್ಯಾಡ್‌ಡಾಕ್, ಸಾವರ್ಕರ್ ಸೇರಿದಂತೆ ಅಲ್ಲಿನ ಐವರು ಕೈದಿಗಳೊಂದಿಗೆ ಮಾತನಾಡಿದ. ಕೊನೆಗೆ, ʼಈ ಕೈದಿಗಳನ್ನೇನಾದರೂ ಜೈಲಿನಿಂದ ಬಿಟ್ಟರೆ, ಇವರೆಲ್ಲರೂ ಮತ್ತೆ ಒಟ್ಟುಗೂಡಿ ನಮ್ಮ (ಬ್ರಿಟಿಷರು) ವಿರುದ್ಧ ಸಂಚು ಹೆಣೆಯುವ ಸಂಭವವಿದೆ. ಇದರ ಜೊತೆಗೆ ಇವರಿಗೆ ಪೋರ್ಟ್ ಬ್ಲೇರ್‌ನಲ್ಲಿ ನೆಲೆಸಿರುವ ಜನತೆಯ ಸಹಾನುಭೂತಿಯೂ ಸಿಗುವ ಸಂಭವವಿದೆ. ಈ ಕೈದಿಗಳು ಅಪಾಯಕಾರಿಗಳಾಗಿದ್ದು, ನಮ್ಮ ವಿರುದ್ಧ ರಾಜಕೀಯ ಮತ್ತು ಕ್ರಾಂತಿಕಾರಿ ಚಳವಳಿಗಳನ್ನು ಮುನ್ನಡೆಸುತ್ತಿರುವವರು,ʼ ಎಂದು ಎಚ್ಚರಿಸಿದ. ಮುಂದುವರಿದು, ʼಇವರಿಗೇನಾದರೂ ಅವಕಾಶ ಸಿಕ್ಕಿದರೆ, ಇವರು ಸಾವಿರಾರು ಕೈದಿಗಳನ್ನು ನಮ್ಮ ವಿರುದ್ಧದ ಹೋರಾಟಕ್ಕೆ ಹತಾರಗಳನ್ನಾಗಿ ಬಳಸಿಕೊಂಡು ಬಿಡುತ್ತಾರೆ. ಆದ್ದರಿಂದ ಇವರನ್ನು ಯಾವ ಕಾರಣಕ್ಕೂ ಜೈಲಿನಿಂದ ಹೊರಕ್ಕೆ ಬಿಡಬಾರದು,ʼ ಎಂದು ಇವನು ಹೇಳಿದ.
ಇಂತಹ ರೆಜಿನಾಲ್ಡ್ ಕ್ರ್ಯಾಡ್‌ಡಾಕ್ ತನ್ನ ವರದಿಯಲ್ಲಿ, ʼಸಾವರ್ಕರ್ ಅವರಿಗೆ ಒಂದಿಷ್ಟೂ ಸ್ವಾತಂತ್ರ್ಯವನ್ನು ಕೊಡಬಾರದು. ಇವರನ್ನೇನಾದರೂ ಆಚೆಗೆ ಬಿಟ್ಟರೆ, ಅವರು ಪರಾರಿಯಾಗುವುದರಲ್ಲಿ ಅನುಮಾನವಿಲ್ಲ. ಅಂತಹ ಸಂದರ್ಭದಲ್ಲಿ ಇವರ ಸ್ನೇಹಿತರು ಇವರಿಗೆಂದು ಒಂದು ಹಡಗನ್ನೇ ಗೊತ್ತುಮಾಡಿಕೊಂಡು, ಸ್ಥಳೀಯರಿಗೆ ದುಡ್ಡು ಕೊಟ್ಟು ಉಳಿದ ಕೆಲಸವನ್ನೆಲ್ಲ ಮಾಡಿಬಿಡುತ್ತಾರೆ. ಅಕಸ್ಮಾತ್, ಇವರನ್ನು ಭಾರತದಲ್ಲಿರುವ ಬರ‍್ಯಾವುದೇ ಕಾರಾಗೃಹದಲ್ಲಿಟ್ಟರೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ನಿಸ್ಸಂಶಯ,ʼ ಎಂದು ಹೇಳಿದ. ಒಟ್ಟಿನಲ್ಲಿ, ಸಾವರ್ಕರ್ ಅವರನ್ನು ಅವರು ಜೀವಾವಧಿ ಶಿಕ್ಷೆ ಮುಗಿಯುವವರೆಗೂ ಅಂಡಮಾನಿನಲ್ಲೇ ಇಡುವುದು ಮತ್ತು ಉಳಿದ ಕೈದಿಗಳಗಳನ್ನು ಅವರ ಪರ ಸಹಾನುಭೂತಿ ಇರುವವರು ಹೆಚ್ಚೇನೂ ಇಲ್ಲದ ಕಡೆಗಳಲ್ಲಿರುವ ಕಾರಾಗೃಹಗಳಿಗೆ ಸ್ಥಳಾಂತರಿಸಬೇಕು ಎನ್ನುವುದು ರೆಜಿನಾಲ್ಡ್ ಮಾಡಿದ ಶಿಫಾರಸುಗಳ ಉದ್ದೇಶವಾಗಿತ್ತು.
ಆಗ ಬ್ರಿಟಿಷ್ ಸರಕಾರವು ʼನಿಶ್ಚಿತ ಅವಧಿಯ ಶಿಕ್ಷೆಯನ್ನು ಅನುಭವಿಸುತ್ತಿದ್ದ ಅಪರಾಧಿಗಳನ್ನುʼ ಅವರವರ ಪ್ರಾಂತ್ಯದ ಜೈಲುಗಳಿಗೆ ಸ್ಥಳಾಂತರಿಸಲು ಒಪ್ಪಿಕೊಂಡಿತು. ಆದರೆ, ಆಗಲೂ 16 ಕೈದಿಗಳು ತಮಗೆ ವಿಧಿಸಿರುವ ಶಿಕ್ಷೆಯನ್ನು ಕಡಿತಗೊಳಿಸಲು ನಿರಾಕರಿಸಿದ ಬ್ರಿಟಿಷ್ ಸರಕಾರದ ಕ್ರಮವನ್ನು ವಿರೋಧಿಸಿ ಇನ್ನೊಂದು ಮುಷ್ಕರವನ್ನು ಹೂಡಿದರು. ಕೈದಿಗಳ ಈ ವರ್ತನೆಯಿಂದ ಕುಪಿತನಾದ ಜೈಲಿನ ಸೂಪರಿಂಟೆಂಡೆಂಟನು ಸಾವರ್ಕರ್ ಅವರ ಮೇಲೆ ಕಿಡಿಕಾರಲು ಶುರು ಮಾಡಿ, ʼಇವನೇ ಈ ಕೈದಿಗಳ ನಾಯಕ. ಉಳಿದ ಕೈದಿಗಳನ್ನು ಇವನು ತನ್ನ ಇಚ್ಛೆಗೆ ತಕ್ಕಂತೆ ಕುಣಿಸುತ್ತಾನೆ,ʼ ಎಂದು ದೂರಿದ. ಜೊತೆಗೆ, ಈ ಮುಷ್ಕರವನ್ನು ಹತ್ತಿಕ್ಕಬೇಕೆಂದರೆ, ಸಾವರ್ಕರ್ ಅವರನ್ನು ದಿನದ ಇಪ್ಪತ್ನಾಲ್ಕು ಗಂಟೆಯೂ ಸೆಲ್‌ನ ಒಳಗೇ ಪ್ರತ್ಯೇಕವಾಗಿ ಇಟ್ಟಿರಬೇಕೆಂದು ಇವನು ಬಯಸಿದ. ಅಲ್ಲದೆ, ʼಈ ವ್ಯಕ್ತಿಯನ್ನು ಉಳಿದ ರಾಜಕೀಯ ಕೈದಿಗಳ ಹತ್ತಿರವೇ ಇಟ್ಟಿರುವುದು ತುಂಬಾ ಅಪಾಯಕಾರಿ. ಆದ್ದರಿಂದ ಇವನನ್ನು ಎಲ್ಲಾದರೂ ದೂರದ ಜೈಲಿಗೆ ಹಾಕುವುದು ಒಳ್ಳೆಯದು,ʼ ಎಂದು ಅವನು ಸಲಹೆ ನೀಡಿದ.
ಮೊದಲ ಮಹಾಯುದ್ಧದ ಹೊತ್ತು
ಸೆಲ್ಯುಲರ್ ಜೈಲಿನಲ್ಲೇ ಇರಬೇಕಾಗಿ ಬಂದ ಕೈದಿಗಳ ಪಾಡು ಬಹುತೇಕ ಹಿಂದಿನಂತೆಯೇ ಮುಂದುವರಿಯಿತು. ಇಷ್ಟರ ಮಧ್ಯೆ 1914ರಲ್ಲಿ ಮೊದಲ ಮಹಾಯುದ್ಧ ಆಸ್ಫೋಟಿಸಿತು. ಆಗ ಪೋರ್ಟ್ ಬ್ಲೇರ್‌ನ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ರಾಜಕೀಯ ಕೈದಿಗಳನ್ನು ವಶಕ್ಕೆ ತೆಗೆದುಕೊಳ್ಳತೊಡಗಿದರು. ಏಕೆಂದರೆ, ಇವರನ್ನು ಹೀಗೆಯೇ ಬಿಟ್ಟರೆ ಬ್ರಿಟನ್ನಿನ ವೈರಿರಾಷ್ಟ್ರಗಳು ಇವರೆಲ್ಲರ ಬೆಂಬಲ ಗಿಟ್ಟಿಸಿಕೊಂಡು, ಅಂಡಮಾನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಡಬಹುದು ಎನ್ನುವುದು ಈ ಅಧಿಕಾರಿಗಳ ಆತಂಕವಾಗಿತ್ತು. ಇದಕ್ಕೆ ತಕ್ಕಂತೆ, ಮೊದಲ ಮಹಾಯುದ್ಧ ಶುರುವಾದ ಕೆಲವೇ ದಿನಗಳಲ್ಲಿ ಜರ್ಮನಿಯ ನೌಕಾಪಡೆಗೆ ಸೇರಿದ ʼಎಮ್ಡನ್ʼ ಜಲಾಂತರ್ಗಾಮಿಯು ಅಂಡಮಾನ್‌ನ ಸುತ್ತಮುತ್ತ ಕಾಣಿಸಿಕೊಳ್ಳತೊಡಗಿತು. ಪರಿಣಾಮವಾಗಿ, ಜರ್ಮನಿಯು ಅಂಡಮಾನ್‌ಗೆ ಮುತ್ತಿಗೆ ಹಾಕಿ, ಇಲ್ಲಿನ ಸೆಲ್ಯುಲರ್ ಜೈಲಿನಲ್ಲಿ ಬಂಧಿಗಳಾಗಿರುವ ಸಾವಿರಾರು ರಾಜಕೀಯ ಕೈದಿಗಳು ಪರಾರಿಯಾಗಲು ಸಹಕರಿಸಲಿದೆಯೆಂದೂ, ನಂತರ ಇವರ ಸಹಾಯದಿಂದ ಬರ್ಮಾವನ್ನು ವಶಪಡಿಸಿಕೊಂಡು ನಂತರ ಭಾರತದ ಉಳಿದ ಭೂಭಾಗಗಳಿಗೆ ನುಗ್ಗಲಿದೆಯೆಂದೂ ಗಾಳಿಸುದ್ದಿ ಹಬ್ಬಿತು. ಹೀಗಾಗುತ್ತಿದ್ದಂತೆಯೇ ಆತಂಕಕ್ಕೊಳಗಾದ ಸೇನೆಯು ಕೂಡಲೇ ಪೋರ್ಟ್ ಬ್ಲೇರ್‌ಗೆ ಸೇನೆಯ ಒಂದು ರೆಜಿಮೆಂಟನ್ನು ರವಾನಿಸಿತು. (ಅಂದಂತೆ, ಬ್ರಿಟಿಷ್ ಸರಕಾರವು 1886ರಲ್ಲಿ ಬರ್ಮಾವನ್ನು ಭಾರತದ ಒಂದು ಪ್ರಾಂತ್ಯವನ್ನಾಗಿ ಮಾಡಿತು. ಇದು 1937ರಲ್ಲಿ ಬ್ರಿಟಿಷ್ ಭಾರತದಿಂದ ಪ್ರತ್ಯೇಕಗೊಂಡಿತು).
ಮೊದಲನೇ ಮಹಾಯುದ್ಧದ ದಿನಗಳಲ್ಲಿ ಅಂಡಮಾನಿನ ಜೈಲಿಗೆ ದಿನವೂ ನೂರಾರು ರಾಜಕೀಯ ಕೈದಿಗಳನ್ನು ತರುಬಲಾಗುತ್ತಿತ್ತು. ಇವರೆಲ್ಲರೂ ಜೈಲಿನ ಅಧಿಕಾರಿಯಾಗಿದ್ದ ಡೇವಿಡ್ ಬ್ಯಾರಿಯ ಅಮಾನುಷ ನೀತಿಗಳ ವಿರುದ್ಧ ಪ್ರತಿಭಟಿಸಲು ಶುರು ಮಾಡಿದರು. ಇದು ಬ್ರಿಟಿಷರಲ್ಲಿ ಆತಂಕವನ್ನು ಹುಟ್ಟಿಸತೊಡಗಿತು. ಹೀಗಾಗಿ, ಸರಕಾರವು ರಾಜಕೀಯ ಕೈದಿಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿತು. ಇನ್ನೊಂದೆಡೆಯಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಗದ್ದರ್ ಪಾರ್ಟಿಯನ್ನು ಹುಟ್ಟುಹಾಕಿದ್ದ ಲಾಲಾ ಹರ್‌ದಯಾಳ್ ಅವರು, ಆ ದೇಶದಲ್ಲಿ ನೆಲೆ ನಿಂತಿದ್ದ ಸಿಖ್ಖರನ್ನು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಪ್ರೇರೇಪಿಸುತ್ತಿದ್ದರು. ಅವರ ಚಿಂತನೆಗಳಿಂದ ಸ್ಫೂರ್ತಿಯನ್ನು ಪಡೆದ ನೂರಾರು ಸಿಖ್ಖರು ಪ್ರಥಮ ಮಹಾಯುದ್ಧದ ಸಮಯದಲ್ಲಿ ಗುಟ್ಟಾಗಿ ಪಂಜಾಬಿಗೆ ಬಂದು, ಭಾರತದಲ್ಲಿನ ಬ್ರಿಟಿಷ್ ಸರಕಾರವನ್ನು ಉರುಳಿಸಲು ಪ್ರಯತ್ನಿಸಿದರು. ಬ್ರಿಟಿಷರು ಭಾರತದಲ್ಲಿ ಹೊಂದಿರುವ ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೈನಿಕರು ಮುಖ್ಯವಾಗಿ ಉತ್ತರ ಭಾರತದಲ್ಲಿ ಒಳಗಿನಿಂದಲೇ ದಂಗೆ ಏಳುವುದು, ಆಗ ಇವರಿಗೆ ಈಗಾಗಲೇ ತಾವು ಖಚಿತಪಡಿಸಿಕೊಂಡಿರುವ ವಿದೇಶಿ ಸರಕಾರಗಳು ನೆರವನ್ನು ಕೊಡುವುದು, ಈ ಮೂಲಕ ಭಾರತದಲ್ಲಿ ಬ್ರಿಟಿಷರನ್ನು ಪದಚ್ಯುತಗೊಳಿಸುವುದು ಈ ತಂತ್ರವಾಗಿತ್ತು. ʼಲಾಹೋರ್ ಸಂಚುʼ ಎಂದೇ ಹೆಸರಾಗಿರುವ ಈ ಪ್ರಕರಣದ ರೂವಾರಿಗಳೆಂದರೆ, ರಾಸ್ ಬಿಹಾರಿ ಬೋಸ್ ಮತ್ತು ವಿ.ಜಿ.ಪಿಂಗಳೆ. ಆದರೆ, ಬ್ರಿಟಿಷರಿಗೆ ಭಾರತೀಯ ಕ್ರಾಂತಿಕಾರಿಗಳ ಈ ಯೋಜನೆಯು ಗೊತ್ತಾಗಿ, ಅದನ್ನು ಅವರು ಬೇಧಿಸಿ, ನೂರಾರು ಜನರನ್ನು ಬಂಧಿಸಿದರು. ಹೀಗೆ ಸಿಕ್ಕಿಬಿದ್ದವರನ್ನೆಲ್ಲ ಅಂಡಮಾನಿನ ಜೈಲಿಗೆ ಅಟ್ಟಲಾಯಿತು. ಒಟ್ಟಿನಲ್ಲಿ ಬ್ರಿಟಿಷ್ ಸರಕಾರವು ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ರಾಜಕೀಯ ಹೋರಾಟಗಾರರ ವಿರುದ್ಧ ಮುಗಿಬಿದ್ದಿತು.
ಈ ಲಾಹೋರ್ ಪ್ರಕರಣದಲ್ಲಿ ಬಂಧಿತರಾದವರಲ್ಲಿ ಪಂಜಾಬಿನ ಭಾಯಿ ಪರಮಾನಂದ ಕೂಡ ಒಬ್ಬರಾಗಿದ್ದರು. ಸೆಲ್ಯುಲರ್ ಜೈಲಿನ ಅಧಿಕಾರಿಯಾಗಿದ್ದ ಡೇವಿಡ್ ಬ್ಯಾರಿಯು ಕೈದಿಗಳನ್ನು ಅಶ್ಲೀಲವಾಗಿ ಬೈಯುತ್ತಿದ್ದುದನ್ನು ಕಂಡು ಕನಲಿ ಕೆಂಡವಾದ ಇವರು ಅವನನ್ನು ಬಂಗಾಳದ ಇನ್ನೊಬ್ಬ ಕೈದಿ ಆಶುತೋಷ್ ಲಾಹಿರಿ ಜತೆ ಅನಾಮತ್ತಾಗಿ ಮೇಲಕ್ಕೆತ್ತಿ, ನೆಲಕ್ಕೆ ಹಾಕಿ ಒಗೆದಿದ್ದರು! ಈ ʼಅಪರಾಧಕ್ಕಾಗಿʼ ಪರಮಾನಂದ ಮತ್ತು ಲಾಹಿರಿ ಇಬ್ಬರಿಗೂ ಮುವ್ವತ್ತು ಛಡಿ ಏಟುಗಳ ಶಿಕ್ಷೆಯನ್ನು ವಿಧಿಸಲಾಯಿತು. ಮತ್ತೊಬ್ಬ ಕೈದಿಯಾಗಿದ್ದ ರಾಮ್ ರಖನ್ ಅವರು ಜೈಲಿನಲ್ಲಿ ತಮಗೆ ಪವಿತ್ರವಾದ ಯಜ್ಞೋಪವೀತವನ್ನು (ಜನಿವಾರ) ಹಾಕಿಕೊಳ್ಳಲು ಅವಕಾಶ ಕೊಡಲಿಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಂಡರು. ಮಗದೊಬ್ಬ ಕೈದಿಯಾಗಿದ್ದ ಪೃಥ್ವಿಸಿಂಗ್ ಅವರನ್ನು ವರ್ಷಗಟ್ಟಲೆ ಕಾಲ ಏಕಾಂತವಾಸದ ಸೆಲ್‌ಗೆ ಹಾಕಲಾಗಿತ್ತು. ಈ ರೀತಿಯ ಸಂಘರ್ಷ ಮತ್ತು ಉಸಿರುಗಟ್ಟಿಸುವಂಥ ವಾತಾವರಣದ ವಿರುದ್ಧ ಸಿಡಿದೆದ್ದ ಕೈದಿಗಳು ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಮತ್ತೊಂದು ಮುಷ್ಕರವನ್ನು ಹೂಡಿದರು. ಇದರ ಹಿಂದೆಯೂ ಸಾವರ್ಕರ್ ಅವರ ಕೈವಾಡವೇ ಇರಬಹುದು ಎಂದು ಶಂಕಿಸಿದ ಡೇವಿಡ್ ಬ್ಯಾರಿಯು, ಈ ಪ್ರಕರಣದಲ್ಲೂ ಅವರನ್ನು ಪ್ರಮುಖ ಸಂಚುಗಾರನೆಂದು ಹೆಸರಿಸಿದರು.
ಕಾಲಾಪಾನಿ ಮುಂದೆ ಸಾವರ್ಕರ್ ಪ್ರತಿಮೆ
ನಿಜ ಹೇಳಬೇಕೆಂದರೆ, ಗದ್ದರ್ ಪಾರ್ಟಿಯ ಸದಸ್ಯರಿಗೆ ಸಾವರ್ಕರ್ ಅವರು ರಾಷ್ಟ್ರೀಯವಾದದ ಸ್ಫೂರ್ತಿಸೆಲೆಯಾಗಿದ್ದರು. ಅದರಲ್ಲೂ ಬ್ರಿಟಿಷರಿಗೆ ಸಿಕ್ಕಿಬಿದ್ದಿದ್ದ ಆ ಪಕ್ಷದ ಸದಸ್ಯನೊಬ್ಬ ವಿಚಾರಣೆಯ ಸಮಯದಲ್ಲಿ, ʼಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅವರನ್ನು ಎಣ್ಣೆಯ ಗಾಣಕ್ಕೆ ಕಟ್ಟಿ, ಎಣ್ಣೆ ಅರೆಸುತ್ತಿರುವ ವ್ಯಂಗ್ಯಚಿತ್ರವನ್ನು ನಾನು ನಮ್ಮ ಪಕ್ಷದ ಮುಖವಾಣಿಯಲ್ಲಿ ಪ್ರಕಟವಾಗಿದ್ದನ್ನು ಕ್ಯಾಲಿಫೋರ್ನಿಯಾದಲ್ಲಿದ್ದಾಗ ನೋಡಿದೆ. ಅದಾದಮೇಲೆ ನಾನು ಕ್ರಾಂತಿಕಾರಿಯಾಗಿ ಬದಲಾದೆ,ʼ ಎಂದು ಧೈರ್ಯವಾಗಿ ಹೇಳಿದ್ದುಂಟು. ಮತ್ತೊಬ್ಬ ಕ್ರಾಂತಿಕಾರಿಯು, ತಾನು 1857ರ ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಕುರಿತು ಸಾವರ್ಕರ್ ಅವರು ಬರೆದಿರುವ ಪುಸ್ತಕವನ್ನು ಓದಿದ ಮೇಲೆ ಈ ಹಾದಿ ತುಳಿದು, ಆ ಹೋರಾಟದ ಅಗ್ರೇಸರರ ತರಹವೇ ತಾನೂ ಆಗಬೇಕು ಎಂದು ಸಂಕಲ್ಪ ಮಾಡಿದವನು ಎಂದ. ಒಂದು ಕಾಲದಲ್ಲಿ ಗದ್ದರ್ ಪಾರ್ಟಿಯ ಸದಸ್ಯನಾಗಿದ್ದು, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಲಾಲಾ ಹರ್‌ದಯಾಳ್ ಅವರೊಂದಿಗೆ ಕೆಲಸ ಮಾಡಿದ್ದ ಲೂಧಿಯಾನಾದ ನವಾಬ್ ಖಾನ್, ಈ ʼಲಾಹೋರ್ ಪಿತೂರಿ ಪ್ರಕರಣʼದಲ್ಲಿ ನಂತರ ಮಾಫೀಸಾಕ್ಷಿಯಾಗಿ ಬದಲಾದ. ಆತ ವಿಚಾರಣೆಯ ವೇಳೆಯಲ್ಲಿ, ʼನಮ್ಮ ಗುಂಪು ಅಮೆರಿಕದಲ್ಲಿ ಸಭೆ ಸೇರಿದಾಗ ಪಕ್ಷದ ಮುಖವಾಣಿಯಾಗಿ ಗದ್ದರ್ ಎನ್ನುವ ಪತ್ರಿಕೆಯನ್ನು ಹೊರತರಲು ತೀರ್ಮಾನಿಸಿದೆವು. ಆಗ, ಸಾವರ್ಕರ್ ಅವರು 1857ರ ಸ್ವಾತಂತ್ರ್ಯ ಹೋರಾಟವನ್ನು ಕುರಿತು ಇಂಗ್ಲೀಷಿನಲ್ಲಿ ಬರೆದಿರುವ ಕೃತಿಯನ್ನು ಉರ್ದುವಿಗೂ ಅನುವಾದಿಸಲು ನಿರ್ಧಾರ ಮಾಡಲಾಯಿತು,ʼ ಎಂದು ಬಾಯ್ಬಿಟ್ಟಿದ್ದ.
ಗೋಡೆಗಳ ಮೇಲೆ ಕವಿತೆ
ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಅವರು ತಮ್ಮ ಸೆಲ್‌ನಲ್ಲಿಯೇ ನೂರಾರು ಕವನಗಳನ್ನು ರಚಿಸಿದರು. ತಮ್ಮಲ್ಲಿ ಉಕ್ಕಿ ಬರುತ್ತಿದ್ದ ಕಾವ್ಯದ ಸಾಲುಗಳನ್ನು ಅವರು ಬಾಗಿಲಿನ ಚಿಲಕದ ಸಂದಿಗಳಲ್ಲಿ ಅಡಗಿಸಿಟ್ಟಿರುತ್ತಿದ್ದ ಮೊಳೆಗಳ ಸಹಾಯದಿಂದ ಅಥವಾ ಗಿಡಮರಗಳ ಚೂಪಾದ ಎಲೆಗಳ ಸಹಾಯದಿಂದ ಸೆಲ್‌ನ ಗೋಡೆಯ ಮೇಲೆ ಕೆತ್ತುತ್ತಿದ್ದರು. ಅದನ್ನೆಲ್ಲ ಅಳಿಸುವ ಮುನ್ನ ಅವರು ಆ ಸಾಲುಗಳನ್ನು ಹೃದ್ಗತ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಈ ಕವನಗಳೆಲ್ಲ ಉಳಿದುಕೊಂಡವು. ಇವುಗಳ ಪೈಕಿ ಅವರು ಬರೆದ ʼಬೇಡಿʼ ಮತ್ತು ʼಕೊಠಡಿʼ ಎನ್ನುವ ಕವನಗಳು, ರವೀಂದ್ರನಾಥ ಟ್ಯಾಗೋರರಿಗೆ 1913ರಲ್ಲಿ ನೊಬೆಲ್ ಪುರಸ್ಕಾರ ಬಂದಾಗ ಬರೆದ ಒಂದು ಸ್ತುತಿಗೀತೆ, ತಮ್ಮ ಮನದೊಳಗೆ ಕಲ್ಪನೆಯಾಗಿ ಮೂಡಿಬಂದ ಒಮದು ಉದ್ಯಾನ ಮತ್ತು ಅಲ್ಲಿನ ಅಚ್ಚಹಸಿರನ್ನು ವರ್ಣಿಸಿರುವ ʼಕಮಲಾʼ ಎನ್ನುವ ಪದ್ಯಗಳೆಲ್ಲ ಇವೆ.
ಮೊದಲ ಮಹಾಯುದ್ಧದಲ್ಲಿ ಬ್ರಿಟನ್ ಗೆಲ್ಲುವುದು ಹತ್ತಿರವಾಗುತ್ತಿದ್ದಂತೆಯೇ ಸೆಲ್ಯುಲರ್ ಜೈಲಿನಲ್ಲಿದ್ದ ರಾಜಕೀಯ ಕೈದಿಗಳು ತಮಗೊಂದಿಷ್ಟು ಪ್ರಯೋಜನವಾಗುವಂಥ ಒಪ್ಪಂದವನ್ನು ಕುದುರಿಸಿಕೊಳ್ಳಲು, ಹಾಗೆಯೇ ಸಾಧ್ಯವಾದರೆ ಈ ಅಂಡಮಾನ್ ದ್ವೀಪದಿಂದ ಬಚಾವಾಗಲು ತಮ್ಮ ಯತ್ನಗಳನ್ನು ತೀವ್ರಗೊಳಿಸಿದರು.
Photos Courtesy: Wikipedia
***
*ಬಿ.ಎಸ್. ಜಯಪ್ರಕಾಶ ನಾರಾಯಣ
*ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ.. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.
- JP photo by Naveen Sagar