ಅಂಬೇಡ್ಕರ್ ಜಯಂತಿ ದಿನ ಪ್ರಧಾನಿಯಿಂದ ನೂತನ ಕ್ಯಾಂಪಸ್ ಉದ್ಘಾಟನೆ: ಡಿಸಿಎಂ ನೇತೃತ್ವದ ಆಡಳಿತ ಮಂಡಳಿ ಸಭೆ ನಿರ್ಧಾರ
ಬೆಂಗಳೂರು: ನಗರದ ನಾಗರಬಾವಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ʼನ ನೂತನ ಕ್ಯಾಂಪಸ್ ಮುಂದಿನ ಅಂಬೇಡ್ಕರ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ, ಈ ಸಂಸ್ಥೆಯ ಬೋಧಕರಿಗೆ ಯುಜಿಸಿ ವೇತನ ಶ್ರೇಣಿ ಬದಲಿಗೆ ಐಜಿಐಡಿಆರ್ ವೇತನ ಶ್ರೇಣಿ..
ಬೆಂಗಳೂರಿನಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿಯ 9ನೇ ಸಭೆಯಲ್ಲಿ ಕೈಗೊಳ್ಳಲಾದ ಮಹತ್ವದ ನಿರ್ಧಾರಗಳಿವು.
ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಕೇಂದ್ರ ಸರಕಾರದ ಪ್ರಧಾನ ಆರ್ಥಿಕ ಸಲಹೆಗಾರ ಡಾ.ಸಂಜೀವ್ ಸನ್ಯಾಲ್ ಮುಂತಾದವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಇನ್ನು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅವು ಹೀಗಿವೆ.
- *2021 ಏಪ್ರಿಲ್ 14ರಂದು ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವಿದ್ದು, ಆ ದಿನವೇ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಅವರಿಂದ ಉದ್ಘಾಟಿಸುವುದು.
- ಜಾಗತಿಕ ಗುಣಮಟ್ಟದ ಬೋಧನೆಗೆ ಪೂರಕವಾಗಿ ಅತ್ಯುತ್ತಮ ಅಧ್ಯಾಪಕರನ್ನು ಆಕರ್ಷಿಸುವ ಸಲುವಾಗಿ ಯುಜಿಸಿ ಶ್ರೇಣಿಗೆ ಬದಲಾಗಿ ಇಂದಿರಾಗಾಂಧಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಗೆ (ಐಜಿಐಡಿಆರ್) ವಿಸ್ತರಿಸಲಾದ ವೇತನ ಮಾಪಕಗಳು ಮತ್ತು ಭತ್ಯೆಗಳನ್ನು ಈ ಸಂಸ್ಥೆ ಬೋಧಕರಿಗೆ ನೀಡುವುದು. (ಈ ವೇತನ ಶ್ರೇಣಿಯು ಹೆಚ್ಚು ವೇತನವನ್ನು ಒಳಗೊಂಡಿರುತ್ತದೆ. ಪ್ರೊಫೆಸರ್ ಒಬ್ಬರಿಗೆ ಮಾಸಿಕ; ಯುಜಿಸಿ ಶ್ರೇಣಿಯಲ್ಲಿ 2,97,352 ರೂ. ಇದ್ದರೆ, ಐಜಿಐಡಿಆರ್ ಶ್ವೇಣಿಯಲ್ಲಿ 3,50,376 ರೂ. ಇರುತ್ತದೆ. ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ ಯುಜಿಸಿ ಶ್ರೇಣಿಯಲ್ಲಿ 1,79,304 ರೂ. ಇದ್ದರೆ, ಐಜಿಐಡಿಆರ್ ಶ್ರೇಣಿಯಲ್ಲಿ 1,90,456 ರೂ. ಇರುತ್ತದೆ. ಇನ್ನು ಹೊಸದಾಗಿ ಸೇರುವ ಪ್ರೊಫೆಸರುಗಳಿಗೆ ಮಾಸಿಕ ಯುಜಿಸಿಯಲ್ಲಿ 1,09,128 ರೂ. ವೇತನವಿದ್ದರೆ, ಐಜಿಐಡಿಆರ್‌ನಲ್ಲಿ 1,38,640 ರೂ. ಇರುತ್ತದೆ.)
- ಕ್ಯಾಂಪಸ್ಸಿನಲ್ಲಿ ಲಭ್ಯವಿರುವ ಎಲ್ಲ ಮೂಲಸೌಕರ್ಯಗಳ ಸಂಪೂರ್ಣ ಬಳಕೆ.
- ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಆಡಳಿತ ವಿಭಾಗದ ಮುಂದೆ ಸ್ಥಾಪಿಸುವುದು.
- ಅಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕು ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ನೆರವು ಪಡೆಯಲು ಕ್ರಮ.
- ಈಗಾಗಲೇ ಬಾಬಾಸಾಹೇಬ್ ಅವರ ಆಲೋಚನೆಗಳನ್ನು ಅರ್ಥಶಾಸ್ತ್ರ ಮತ್ತು ಸಾಮಾಜಿಕ ಚಿಂತನೆಗಳನ್ನು ಪಠ್ಯದ ಭಾಗವನ್ನಾಗಿ ಮಾಡಲಾಗಿದೆ. ಆದರೆ, ಈ ಅಂಬೇಡ್ಕರ್ ಅವರ ಇನ್ನು ಹೆಚ್ಚಿ ವಿಚಾರಗಳನ್ನು ಸೇರಿಸುವುದು.
- ಪರಿಷ್ಕೃತ ಪಠ್ಯಕ್ರಮದ ವಿಷಯಗಳನ್ನು ಆಡಳಿತ ಮಂಡಳಿಯ ಸದಸ್ಯರೊಂದಿಗೆ ಹಂಚಿಕೊಳ್ಳಬೇಕು ಮತ್ತು ಅಂತಿಮಗೊಳಿಸುವ ಮೊದಲು ಮಂಡಳಿಯ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು.
- ಕೋರ್ಸ್‌ಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಜಾಹೀರಾತು ಮತ್ತಿತರೆ ಮಾರ್ಗಗಳಲ್ಲಿ ಪೂರ್ಣ ಮಾಹಿತಿ ನೀಡುವುದು.
- ಎನ್‌ಆರ್‌ಐ ಮತ್ತು ಪಿಐಒ ವಿದ್ಯಾರ್ಥಿಗಳಿಗೆ ಕೆಲ ಸೀಟುಗಳನ್ನು ಕಾಯ್ದಿರಿಸಬೇಕು.
- ಜರ್ಮನ್, ಫ್ರೆಂಚ್ ಸೇರಿದಂತೆ ಕೆಲ ವಿದೇಶಿ ಭಾಷೆಗಳನ್ನು ಬೋಧನೆ ಮಾಡಬೇಕು
- ಸಂಶೋಧನಾ ಕಾರ್ಯಕ್ರಮಗಳಿಗೆ ಧನಸಹಾಯಕ್ಕಾಗಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಹಾಗೂ ನಗರಗಳ ಸ್ಥಳೀಯ ಸಂಸ್ಥೆಗಳ ನೆರವು ಪಡೆಯುವುದು.
- ಸಂಸ್ಥೆಯ ಎಲ್ಲ ಪ್ರಾಧಿಕಾರಗಳು, ಸಮಿತಿಗಳು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ʼನ 2018ರ ಕಾಯ್ದೆಯಂತೆ ಕೆಲಸ ಮಾಡಬೇಕು.
- ಸಂಸ್ಥೆಯಲ್ಲಿರುವ ಕೋರ್ಸ್‌ಗಳಲ್ಲಿ ಸೀಟುಗಳನ್ನು ಕಾಯ್ದಿರಿಸುವುದು ಮತ್ತು ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡುವುದು ಕುರಿತು ಸರಕಾರದ ನೀತಿ ರೂಪಿಸುವುದು.
- ಬಹುಮುಖಿ ಕೋರ್ಸುಗಳನ್ನು ಆರಂಭಿಸುವುದು ಮತ್ತು ಎರಡನೇ ಹಂತದ ಎಲ್ಲ ಕೆಲಸಗಳನ್ನು ಆರಂಭಿಸುವುದು.
- ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು.
- ಹಂತ 1 ಮತ್ತು ಹಂತ 2ರ ಸಿವಿಲ್ ಕಾಮಗಾರಿಗಳು ಮತ್ತು ಒಳಾಂಗಣಗಳನ್ನು ಪೂರ್ಣಗೊಳಿಸಲು ಅಗತ್ಯವಾದ ಹಣವನ್ನು ಬಿಡುಗಡೆ ಮಾಡುವುದು.
ಮಂಡಳಿ ಸಭೆಯಲ್ಲಿ ಸುಧಾಮೂರ್ತಿ, ಡಾ.ಸಂಜೀವ್ ಸನ್ಯಾಲ್ ಜತೆಗೆ ಡಾ.ಆರ್.ಬಾಲಸುಬ್ರಹ್ಮಣ್ಯಂ, ಡಾ.ಕೆ.ಪಿ.ಗೋಪಾಲಕೃಷ್ಣ, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎನ್‌ಎಸ್ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರದೀಪ್, ಸಮಾಜ ಕಲ್ಯಾಣ ಮುಖ್ಯ ಕಾರ್ಯದರ್ಶಿ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ʼನ ಕುಲಪತಿ ಡಾ. ಎನ್.ಆರ್.ಭಾನುಮೂರ್ತಿ, ವಿಶ್ರಾಂತ ಕುಲಪತಿ ಪ್ರೊ.ಎಸ್.ಬಿಸಲಯ್ಯ ಇನ್ನೂ ಅನೇಕರು ಭಾಗಿಯಾಗಿದ್ದರು.