Lead image: ck graphics
ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಹೈದರಾಬಾದಿನತ್ತ ಸಾಗಿದರೆ ಕರ್ನಾಟಕದ ಕಟ್ಟಕಡೆಯಲ್ಲಿ ಸಿಗುವ ಪಟ್ಟಣ ಬಾಗೇಪಲ್ಲಿ. ಕನ್ನಡ-ತೆಲುಗಿನ ಸೊಗಸಾದ ಸಮ್ಮಿಲನ, ಸೌಹಾರ್ದತೆಗೆ ಈ ಊರು ಅತ್ಯುತ್ತಮ ಉದಾಹರಣೆ. ಆದರೆ, ಕೆಲದಿನಗಳಿಂದ ಬಾಗೇಪಲ್ಲಿ ಎಂಬ ಹೆಸರನ್ನು ತೆಗೆದು ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡುವಂತೆ ಕೂಗು ಎದ್ದಿದೆ. ಈ ಕೂಗಿನ ನಡುವೆ ನಮ್ಮ ಗಡಿಭಾಗದ ಚಿಂತಕ, ಜಾನಪದಕ್ಕೆ ತನ್ನನ್ನು ತಾನು ಒಡ್ಡಿಕೊಂಡ ಡಾ.ನಯಾಜ್ ಅಹಮದ್, ಒಂದು ಅರ್ಥಪೂರ್ಣ ಚರ್ಚೆಗೆ ಸಿಕೆನ್ಯೂಸ್ ನೌ ಮೂಲಕ ನಾಂದಿ ಹಾಡಿದ್ದಾರೆ. ಈ ಬಗ್ಗೆ ಮತ್ತಷ್ಟು ಚರ್ಚೆಗೆ ಸ್ವಾಗತ. ಹಾಗೆಯೇ ಲೇಖನಗಳಿಗೂ ಕೂಡ.
ಬಾಗೇಪಲ್ಲಿ ಈಗ ಭಾಗ್ಯನಗರವಾಗಬೇಕು…
ಹೌದು. ಇಂಥದ್ದೊಂದು ಚರ್ಚೆ ಬಾಗೇಪಲ್ಲಿ ತಾಲ್ಲೂಕಿನಾದ್ಯಂತ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕಾಗಿ ಹೋರಾಟಗಳೂ ತೀವ್ರ ಸ್ವರೂಪವನ್ನೂ ಪಡೆದುಕೊಳ್ಳುತ್ತಿವೆ. ಸಂಸ್ಕೃತಿ ಹಿತಚಿಂತನೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳುವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿ ಕನ್ನಡದ ಮನಸ್ಸುಗಳು ಸದ್ದು ಮಾಡುತ್ತಲೇ ಒಂದಾಗುತ್ತಿವೆ. ನಾಲ್ಕು ದಶಕಗಳ ಹಿಂದ ಬಾಗೇಪಲ್ಲಿಯಲ್ಲಿ ವರನಟ ಡಾ.ರಾಜ್ ಕುಮಾರ್ ಹೊತ್ತಿಸಿದ್ದ ‘ಭಾಗ್ಯನಗರದ’ ಕಿಡಿ ಇಂದು ಉರಿಯುವ ಜ್ವಾಲೆಯಾಗುತ್ತಿದೆ.
ಹಿಂದಿನ ತಲೆಮಾರುಗಳು ಈಗಿಲ್ಲ, ಈಗಿರುವುದು ಏನಾದರೂ ಯುವರಕ್ತ. ಅದರಲ್ಲಿಯೂ ಬರಿಯ ಮತ್ತು ಬೋಳು ಬಂಡೆಗಳ ನಡುವೆ ಸದಾ ಬೀಳುವ ಗಾಢವಾದ ಬಿಸಿಲಿಗೆ ಕುದಿಯುವ, ಆದರೆ ಆವಿಯಾಗದ ಬಿಸಿರಕ್ತದ ಯುವ ಮನಸ್ಸುಗಳು. ಇದೇ ಮನಸ್ಸುಗಳೇ ಇಂದು ಹಿಂದೆಂದಿಗಿಂತಲೂ ಈ ಬಾರಿ ಹೆಸರು ಬದಲಾವಣೆಗೆ ಪಣತೊಟ್ಟು ನಿಂತಿವೆ. ತೆಲುಗು ಸಂಸ್ಕೃತಿಯ ಕೊಂಡಿಯಂತೆ ಇರುವ ಹೆಸರಿನ ಉಸಾಬರಿಯೇ ನಮಗೆ ಸಾಕು ಎಂಬ ಬಲವಾದ ಮತ್ತು ಕನ್ನಡದ ಬಗೆಗಿನ ಅಭಿಮಾನದ ನುಡಿಗಳು ಈಗ ಹೋರಾಟದ ಮುಂಚೂಣಿಯನ್ನು ಪಡೆದುಕೊಳ್ಳುತ್ತಿವೆ.
ಆದರೆ, ಒಂದರ್ಥದಲ್ಲಿ ಅಪಾಯ ಇರುವುದು ಇಲ್ಲಿಯೇ. ಅಭಿಮಾನದಿಂದ ಮತ್ತು ಸಾಂಸ್ಕೃತಿಕ ಪ್ರಜ್ಞೆಯಿಂದ ಈ ಕಾರ್ಯ ಸಾಧಿಸಬೇಕಾಗಿದೆ. ಈ ನೆಲೆದ ಮಹತ್ತರವಾದ ಮತ್ತು ಇತಿಹಾಸದಲ್ಲಿ ಹಿತ ಎನಿಸಿಬಹುದಾದ ಶ್ರೇಷ್ಟ ಮತ್ತು ಮೌಲ್ಯಯುತ ಅಂಶಗಳ ಅಧಾರದಲ್ಲಿ ಕನ್ನಡೀಕರಣಕ್ಕೆ ಒತ್ತು ನೀಡಬೇಕಾಗುತ್ತದೆ. ಇಲ್ಲಿ ಅಭಿಮಾನ ಮತ್ತು ಪ್ರೀತಿ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರಧಾನವಾಗಬೇಕು. ಉನ್ಮಾದ ಹಾಗೂ ಭಾವಾವೇಶಗಳು ಎಂದಿಗೂ ʼಒಂದು ಮನಸ್ಸುಗಳನ್ನು’ ಒಡೆದು ಮುಂದಿನ ಹಲವು ಪೀಳಿಗೆಗೆಳು ಒಡೆದ ಹಾಲಾಗಿ ಮತ್ತೆ ಸೇರಲಾಗದ, ಬೆಸೆದುಕೊಳ್ಳದ, ಸದಾ ಬಡಿದಾಡಿಕೊಳ್ಳುವ ಸ್ಥಿತಿಯನ್ನು ಎಂದಿಗೂ ಪ್ರತಿಷ್ಠಾಪಿಸಬಾರದು. ನಮ್ಮ ಆತಂಕ ಇರುವುದು ಇಲ್ಲಿಯೇ.
ನಿಜ ‘ಪಲ್ಲಿ’ ಎನ್ನುವುದು ಈಗಿನ ಜನರಿಗೆ ತೆಲುಗಿನ ಮೂಲ ಎನಿಸಿಕೊಳ್ಳುತ್ತಿದೆ. ಆದರೆ ದ್ರಾವಿಡ ಭಾಷೆಯ ಭಾಗವೇ ಆಗಿರುವ ಕನ್ನಡ, ತೆಲುಗು, ತಮಿಳು, ತುಳು ಭಾಷೆಗಳಲ್ಲಿ ಹಲವು ಪದಗಳಲ್ಲಿ ಸಾಮ್ಯತೆಯಿದೆ. ಹಳೆಗನ್ನಡದಲ್ಲಿ ‘ಹ’ಕಾರ ‘ಪ’ಕಾರವಾಗಿಯೇ ಇತ್ತು. ನಂತರದ ದಿನಗಳಲ್ಲಿ ‘ಪ’ ಕಾರ ‘ಹ’ ಕಾರವಾಗಿ ಬದಲಾಗುತ್ತಾ ಹೋಯಿತು. ತಮಿಳುನಾಡಿನ ಪ್ರಸಿದ್ಧ ವಾಣಿಜ್ಯನಗರಿಯೊಂದರ ಹೆಸರು ತಿರುಚಿನಾಪಲ್ಲಿ. ಇಂದಿಗೂ ಇದೆ. ಹಾಗಾದರೆ ಇದೂ ಸಹಾ ತೆಲಗು ಪದವಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
‘ಪಲ್ಲಿ’ ಎನ್ನುವುದು ದ್ರಾವಿಡ ಪದ. ಅದು ದಕ್ಷಿಣದ ತೆಲುಗು, ಕನ್ನಡ ಹಾಗೂ ತಮಿಳಿನಲ್ಲಿ ಸಾಮಾನ್ಯವಾಗಿದೆ. ಇದನ್ನು ವಿಶೇಷವಾಗಿ ತೆಲಗು ಪದವೇ ಆಗಿದೆ ಎಂಬ ಅರ್ಥದಲ್ಲಿ ವಾದಿಸುವುದುರಲ್ಲಿ ಅರ್ಥವಿಲ್ಲ. ಅಂದು ಇದ್ದ ‘ಪಳ್ಳಿ’ ನಂತರದ ದಿನಗಳಲ್ಲಿ ಹಳ್ಳಿಗಳಾದವು. ಹಾಗೆಂದು ‘ಪಲ್ಲಿ’ಯನ್ನು ಬದಲಾಯಿಸಬೇಕಾಗಿಲ್ಲ ಎಂದು ಹೇಳುತ್ತಿಲ್ಲ. ಬಹುಜನರ ಭಾವನೆಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಆದರೆ ಹೆಸರು ಬದಲಾವಣೆಯ ನಿಟ್ಟಿನಲ್ಲಿ ನಮ್ಮಲ್ಲಿ ಮೂಡುತ್ತಿರುವ ಚಿಂತನೆಗಳು, ಆಲೋಚನೆಗಳು, ನಮ್ಮ ಮಾತುಗಳು ಮನೆಯನ್ನು, ಮನವನ್ನು ಒಡೆಯುವಂತೆ ಇರಬಾರದು. ಅದು ಏನಿದ್ದರೂ ಬೆಸೆಯುವ ಅಂಟಾಗಬೇಕು.
ಈ ಭಾಗದ ಹಿಂದಿನ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅಂಶಗಳ ಆಧಾರವೇ ಹೆಸರು ಬದಲಾವಣೆಯ ಪ್ರಮುಖ ವಿಷಯವಾಗಬೇಕು. ಅದೇ ನಿಟ್ಟಿನಲ್ಲಿಯೇ ನಾವು ನಮ್ಮತನವನ್ನು ಉಳಿಸಿಕೊಳ್ಳುವ ಮತ್ತು ಮುಂದುವರೆಸುವ ವಿಷಯವನ್ನು ಮಂಡನೆ ಮಾಡಬೇಕು. ಅಂಧಭಕ್ತಿ ಎಂದೂ ಅಪಾಯಕಾರಿ. ವಿಷಯಾಧಾರಿತ ಮತ್ತು ತಾರ್ಕಿಕ ಮೌಲ್ಯಗಳೇ ನಿರ್ಣಾಯಕ ಎಂಬುದನ್ನು ಯುವ ಮನಸ್ಸುಗಳು ಅರ್ಥ ಮಾಡಿಕೊಳ್ಳಬೇಕು. “ಅದು ತೆಲಗು, ಅದನ್ನು ಬದಲಾಯಿಸಿ ಎನ್ನವ ವಾದಕ್ಕಿಂತಲೂ ಹಿಂದಿನಿಂದಲೂ ನಾವು ಕನ್ನಡಿಗರು. ಹಾಗಾಗಿ ನಮಗೆ ಕನ್ನಡದ ಹೆಸರು ನೀಡಿ” ಎನ್ನುವ ಧೋರಣೆಯೇ ಹೆಚ್ಚು ಪ್ರಸ್ತುತ ಎನಿಸುತ್ತದೆ. ಈ ವಾದಕ್ಕೆ ಪೂರಕವಾದ ಸಾಹಿತ್ಯಕ, ಸಾಂಸ್ಕೃತಿಕ, ಐತಿಹಾಸಿಕ ಮಹತ್ವದ ವಿಚಾರಧಾರೆಗಳು ಮುನ್ನಲೆಗೆ ಬರಬೇಕು. ಈ ಅಂಶಗಳ ಕೊಡುಗೆಗಳೂ ಪ್ರಸ್ತಾಪವಾಗಬೇಕು.
- ಗುಮ್ಮನಾಯಕನ ಪಾಳ್ಯದ ಐತಿಹಾಸಿಕ ಕುರುಹುಗಳು.
ಐದು ಸಾವಿರ ವರ್ಷ ಇತಿಹಾಸ-ಕನ್ನಡಿಗರ ಗುರುಪೀಠ
ಈ ಭಾಗಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಇರುವುದು ತಿಳಿಯುತ್ತದೆ. ಇಲ್ಲಿನ ಇತಿಹಾಸ ಕ್ರಿ.ಪೂ. 5000ರಿಂದ ಮೊದಲುಗೊಂಡು ಕ್ರಿ.ಪೂ. 2500ರವರೆಗೆ ಮುಂದುವರಿಯುತ್ತದೆ. ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ಜಡಮಡುಗು ಅಕ್ಕಮ್ಮಗಾರಿ ಬೆಟ್ಟದ ಪ್ರಾಂತ್ಯದಲ್ಲಿ ಪತ್ತೆಯಾದ ಬೃಹತ್ ಶಿಲಾಯುಗದ ಪಳೆಯುಳಿಕೆಗಳು, ಅದೇ ಹೋಬಳಿಯ ಯರ‍್ರಗುಡಿಯಲ್ಲಿ ಸಿಕ್ಕಿರುವ ಮಾನವ ನಿರ್ಮಿತ ಶಿಲಾಯುಗದ ಕಾಲದ ಸಮಾಧಿಗಳು ಹಾಗೂ ಮಾನವ ನೆಲೆಗಳು ಈ ತಾಲ್ಲುಕಿನ ಹಿರಿಮೆಯನ್ನು ಸಾದರಪಡಿಸುತ್ತವೆ. ಈಗಲೂ ಇಲ್ಲಿನ ಬಹುತೇಕ ಬೆಟ್ಟಗಳ ಮೇಲೆ ಇಂಥ ಮಾನವ ನೆಲೆಗಳು ಗೋಚರಿಸಿ ತಾಲ್ಲೂಕಿನ ಇತಿಹಾಸಕ್ಕೆ ಮೆರಗು ನೀಡುತ್ತಿವೆ.
ಇಲ್ಲಿನ ಇತಿಹಾಸ ಹಾಗೂ ಸಾಂಸ್ಕೃತಿಕ ಬೇರುಗಳು ಅರಳಿರುವ ಬಾಗೇಪಲ್ಲಿ ತಾಲ್ಲೂಕಿನ ಶ್ರೀ ನಿಡುಮಾಮಿಡಿ ಮಹಾಸಂಸ್ಥಾನ ಎಂಬ ಅಚ್ಚ ಕನ್ನಡಿಗರ ಗುರುಪೀಠದಲ್ಲಿ. ಸುಮಾರು ಒಂದು ಸಾವಿರದ ಎರಡುನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಪೀಠ ಅಷ್ಟೂ ವರ್ಷಗಳಿಂದ ಕನ್ನಡಿಗರ ಗುರುಪೀಠವಾಗಿಯೇ ಉಳಿದುಕೊಂಡುಬಂದಿದೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಈ ಮಠದ ಗುರುಗಳು ಸದಾ ತವಕಿಸಿರುವುದು ಈ ಭಾಗದ ಕನ್ನಡೀಕರಣಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಸಾವಿರ ವರ್ಷಗಳಿಂದಲೂ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡದ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೂರಾರು ಮೌಲಿಕ ಗ್ರಂಥಗಳನ್ನು ನೀಡಿದ ಈ ಪೀಠ ಹಾಗೂ ಪೀಠದ ಜಗದ್ಗುರುಗಳು ಈ ನೆಲೆದ ಮೂಲಭಾಷೆಯಾದ ಕನ್ನಡದ ಮತ್ತು ಇಲ್ಲಿ ನೆಲೆಸಿದ ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸಿದವರು. ಇಂದಿಗೂ ಈ ಪೀಠ ಇದೇ ಕಾರ್ಯ ಮಾಡುತ್ತಿದೆ. ಜಾತಿಯಾಧಾರಿತವಾಗದ, ಧರ್ಮಾಧಾರಿತವಾಗದ ಈ ಪೀಠ ಕೇವಲ ಕನ್ನಡದ ಮನಸ್ಸುಗಳನ್ನು ಮಾತ್ರ ಕಾಣುತ್ತಿದೆ. ಈ ಪೀಠದ ಪೀಠಾಧಿಕಾರಿಗಳ ಪಟ್ಟವಲ್ಲರಿಯನ್ನು ಗಮನಿಸಿದಾಗ ಎಲ್ಲಾ ಗುರುಗಳೂ ಕನ್ನಡದವರು.
ಪಾಳೇಗಾರರ ಕನ್ನಡತನ
ಎರಡನೆಯ ಅತ್ಯಂತ ಮಹತ್ತ್ವದ ಅಂಶವೆಂದರೆ ಈ ಭಾಗವನ್ನು ಸುಮಾರು ಆರುನೂರು ವರ್ಷಗಳ ಕಾಲ ಆಳ್ವಿಕೆ ಮಾಡಿದ ಗುಮ್ಮನಾಯಕನಪಾಳ್ಯದ 25 ಮಂದಿ ಪಾಳೇಗಾರರು ಮತ್ತು ಅವರ ಆಳ್ವಿಕೆಯಲ್ಲಿ ಅವರು ಕನ್ನಡದ ರಾಜಮಹಾರಾಜರೊಂದಿಗೆ ಹೊಂದಿದ್ದ ಸಂಬಂಧಗಳು ಬಹಳ ಮುಖ್ಯವಾಗುತ್ತವೆ. ಬೆಟ್ಟಗುಡ್ಡಗಳಲ್ಲಿ ಕೋಟೆಯನ್ನು ಕಟ್ಟಿದರೂ ಕನ್ನಡದ ದೊರೆಗಳಾದ ವಿಜಯನಗರದ ಶ್ರೀ ಕೃಷ್ಣದೇವರಾಯ ಹಾಗೂ ಮೈಸೂರಿನ ಒಡೆಯರು, ಶ್ರೀರಂಗಪಟ್ಟಣದ ಹೈದರಾಲಿಯವರೊಂದಿಗೆ ಅವರು ಹೊಂದಿದ್ದ ಸಂಬಂಧಗಳು ಕನ್ನಡದ ಮತ್ತು ಕನ್ನಡತನದ ಮೂಲಬೇರುಗಳನ್ನು ತೋರುತ್ತವೆ.
ಈ ಪಾಳೇಗಾರರು ಎಷ್ಟು ಪ್ರಭಾವಿಗಳೆಂದರೆ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ನಡೆಯುತ್ತದ್ದ ನವರಾತ್ರಿ ಉತ್ಸವಗಳಲ್ಲಿ ಭಾಗವಹಿಸಿ ‘ಅಹುದೋ ಎದೆಗಾರ’ ಎಂಬ ಕನ್ನಡದ ಪಟ್ಟವನ್ನು ಪಡೆದುಕೊಂಡಿದ್ದವರು. ಇದೇ ಗುಮ್ಮನಾಯಕನ ಪಾಳ್ಯದ ಪಾಳೇಗಾರ ವಂಸಂತನಾಯಕನಿಗೆ ಶ್ರೀಕೃಷ್ಣದೇವರಾಯ ತಾಮ್ರದ ನಾಣ್ಯಗಳನ್ನು ಟಂಕಿಸುವ ಜವಾಬ್ದಾರಿಯನ್ನು ನೀಡಿದ್ದ. ಅದರಂತೆಯೇ ಆತ ಸೂರ್ಯ, ಚಂದ್ರ ಹಾಗೂ ತ್ರಿಶೂಲವನ್ನು ಒಳಗೊಂಡ ತಾಮ್ರದ ನಾಣ್ಯಗಳನ್ನು 1456ರಲ್ಲಿಯೇ ಟಂಕಿಸಿ ವಿಜಯನಗರ ದೊರೆಗಳಿಂದ ಸೈ ಎನಿಸಿಕೊಂಡಿದ್ದ ವಿಷಯ ಇತಿಹಾಸದಲ್ಲಿ ಉಲ್ಲೇಖವಾಗಿದೆ.
ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮೈಸೂರು ಸಂಸ್ಥಾನದ ದೊರೆಗಳಿಗೆ ಹಾಗೂ ಬ್ರಿಟೀಷರಿಗೆ ಇದೇ ಪಾಳೇಗಾರರು ನೆರವಾದದ್ದು, ಶ್ರೀರಂಗಪಟ್ಟಣದ ದೇವಾಲಯದ ಒಂದು ಗೋಪರವನ್ನು ಇಲ್ಲಿನ ಗಾರೆ ಕೆಲಸಗಾರರಿಗೆ ಕರೆದುಕೊಂಡು ಹೋಗಿ ನಿರ್ಮಿಸಿದ್ದು, ಹಂಪಿಯ ಸಂತೆಗಳಿಗೆ ಇಲ್ಲಿನ ವ್ಯಾಪಾರಿಗಳನ್ನು ಕರೆದುಕೊಂಡು ಹೋಗಿ ವ್ಯಾಪಾರ ವಹಿವಾಟನ್ನು ಪ್ರಾರಂಭಿಸಿದ್ದು ಇದೇ ಪಾಳೇಗಾರರು. ಈ ವಿಚಾರಗಳು ಶತಮಾನಗಳಿಂದಲೂ ಕನ್ನಡತನದ ಜೊತೆಗೆ ಈ ತಾಲ್ಲೂಕು ಹೊಂದಿರುವ ನಂಟಿಗೆ ಉದಾಹರಣೆಯನ್ನು ನೀಡುತ್ತದೆ.
ಉದಾತ್ತ ಸಾಂಸ್ಕೃತಿಕ ಹಿನ್ನೆಲೆ
ಇಂತಹಾ ಉದಾತ್ತತೆಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಮ್ಮ ಕೂಗು ಬಲವಾಗಬೇಕು. ತೆಲುಗು ಪದವಾಗಿರುವುದರಿಂದಲೇ ಅದನ್ನು ಬದಲಿಸಬೇಕು ಎಂಬ ನಿಲುವು ಶತಮಾನಗಳಿಂದ ಬೆಸೆದುಕೊಂಡು ಬಂದಿರುವ ನಮ್ಮ ಬಾಂಧವ್ಯಗಳಿಗೆ ಕೊಡಲಿ ಪೆಟ್ಟು ನೀಡುತ್ತದೆ. ಎಷ್ಟಾದರೂ ಇಲ್ಲಿನ ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿಗಳು ಇಂದಿಗೂ ತೆಲುಗಿನಲ್ಲಿಯೇ ಇವೆ. ಕಾಂಬೋಜ ರಾಜ ಕಥೆ, ಸಾಸುವುಲ ಚಿನ್ನಮ್ಮನ ಕಥೆ, ಮಹಿಸಭಾ, ಶ್ರೀ ಕೃಷ್ಣಾರ್ಜುನ ವಿಜಯಂ ಮೊದಲಾದ ಸಣ್ಣಾಟ, ದೊಡ್ಡಾಟಗಳು ತೆಲುಗಿನಲ್ಲಿಯೇ ಇಲ್ಲಿ ಪ್ರದರ್ಶನ ಕಾಣುತ್ತವೆ. ನಾಟಕದ ಪದ್ಯಗಳು, ಅದರ ಆಲಾಪನೆಗಳಿಗೆ ಜನರು ಇಂದಿಗೂ ಮುಗಿಬೀಳುತ್ತಾರೆ.
ಕನ್ನಡದ ವಿಚಾರ ಬಂದಾಗ ತೆಲಗಿನಲ್ಲಿಯೇ ಮಾತನಾಡುತ್ತಾ ಕನ್ನಡದ ಬಾವುಟ ಕಟ್ಟುವ ಜನರು ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಇಂದಿಗೂ ಇಲ್ಲಿನ ಅನೇಕರಿಗೆ ಎನ್.ಟಿ.ರಾಮರಾವ್ ಅಭಿಮಾನ ನಟರು. ತೆಲಗುನಾಡಿನ ರಾಜಕೀಯ ಆಗುಹೋಗುಗಳಿಗೆ ಇಲ್ಲಿನ ಮನಸ್ಸುಗಳ ಕಣ್ಣು-ಕಿವಿ ತೆರೆದುಕೊಳ್ಳುತ್ತವೆ. ವೈ.ಎಸ್.ಜಗನ್ಮೋಹನ್ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾದರೆ ಇಲ್ಲಿನ ಗೂಳೂರು ವೃತ್ತದಲ್ಲಿ ಪಟಾಕಿಗಳು ಸಿಡಿಯುತ್ತವೆ. ಪವನ್ ಕಲ್ಯಾಣ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುತ್ತಾರೆ ಎಂದರೆ ಜನ ಎದುರುಬಿದ್ದು ಮುಗಿಬೀಳುತ್ತಾರೆ. ಪೊಲೀಸರ ಲಾಠೀಚಾರ್ಜ್ ಆಗುತ್ತದೆ.
ಸಂಬಂಧಗಳು ಇಲ್ಲಿ ಗಾಢವಾಗಿದ್ದರೂ ಎಂದಿಗೂ ತೆಲಗಿನ ಬಗೆಗೆ ಮಾತೃವ್ಯಾಮೋಹ ಇಲ್ಲಿನವರು ಹೊಂದಿಲ್ಲ. ಚಿತ್ರಾವತಿ ವಿಚಾರದಲ್ಲಿ ಆಂಧ್ರದ ನಾಯಕರು ಬಾಗೇಪಲ್ಲಿಗೆ ಲಗ್ಗೆ ಇಟ್ಟಿದ್ದಾಗ ಇಲ್ಲಿನವರು ಕೋಲು, ಬಡಿಗೆ, ದೊಣ್ಣೆ ಹಿಡಿದುಕೊಂಡು ಆಂಧ್ರದವರ ವಿರುದ್ಧ ಸಮರ ಸಾರಿದ್ದರು. ಆಕ್ರೋಶ ಹೊರ ಹಾಕಿದ್ದರು. ಶತಮಾನಗಳಿಂದಲೂ ಎರಡೂ ಭಾಗದಲ್ಲಿ ಸೌಹಾರ್ದತೆ ಮನೆ ಮಾಡಿದೆ. ಕೊಡುಕೊಳ್ಳುವಿಕೆಗಳು ನಡೆದಿವೆ. ಸಂಬಂಧಗಳು ಬಲವಾಗಿವೆ. ಸಂಸ್ಕೃತಿ ಗಡುಸಾಗಿದೆ. ಬ್ರಾತೃತ್ವದ ಬಂಧನಗಳು ಬಲಗೊಂಡಿವೆ. ಇಂಥ ಸಂದರ್ಭದಲ್ಲಿ ನಾವುಗಳು ಹಾಕುವ ಹೆಜ್ಜೆಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮಗೆ ಕಾರ್ಯಸಾಧನೆಯಾಗಬೇಕು, ಆದರೆ ಭಾವನೆಗಳಿಗೆ ಧಕ್ಕೆ ಆಗಬಾರದು. ಗಡಿ ಸಾಮರಸ್ಯಕ್ಕೆ ತೊಂದರೆಯಾಗಬಾರದು. ಕನ್ನಡ–ತೆಲಗಿನ ಭಾವನೆಗಳನ್ನು ಹಾಗೆಯೇ ಉಳಿಸಿಕೊಂಡು, ಸೌಹಾರ್ದತೆಯನ್ನು ಕಾಪಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟನಲ್ಲಿ ನಮ್ಮ ಚಿಂತನೆಗಳು ಸಾಗಬೇಕಾಗಿದೆ. ಸೌಹಾರ್ದತೆಯ ಗಾಜಿನ ಮನೆಗೆ ಕಲ್ಲು ಎಸೆಯುವ ಕಾರ್ಯ ಮಾಡಿದರೆ ನಷ್ಟ ನಮಗೇ.
ಡಾ.ಕೆ.ಎಂ.ನಯಾಜ್ ಅಹ್ಮದ್
ಮೂಲತಃ ಬಾಗೇಪಲ್ಲಿಯವರು. ವೃತ್ತಿಯಲ್ಲಿ ಕನ್ನಡದ ಬೋಧಕ. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ. ಗಡಿಭಾಗದ ಅತ್ಯಂತ ಪ್ರಮುಖ ಜಾನಪದ ತಜ್ಞ ಹಾಗೂ ಸಾಂಸ್ಕೃತಿ ಚಿಂತಕ. ಹಲವು ಕೃತಿಗಳ ಜತೆಗೆ, ಅನೇಕ ಮೌಲಿಕ ಬರಹಗಳನ್ನೂ ಇವರು ಬರೆದಿದ್ದಾರೆ.