ಬೆಂಗಳೂರು: ಬಾಹುಬಲಿ ಫೇಂ ರಾಜಮೌಳಿ ನಿರ್ದೇಶನ ಮಾಡಿದ್ದ, ಅದೇ ಬಾಹುಬಲಿ ಚಿತ್ರದ ಹೀರೋ ಪ್ರಭಾಸ್ 2008ರಲ್ಲಿ ನಟಿಸಿದ್ದ ʼಛತ್ರಪತಿʼ ಚಿತ್ರವು ಹಿಂದಿಗೆ ರೀಮೇಕ್ ಆಗುತ್ತಿದೆ. ಹಾಗಾದರೆ; ಪ್ರಭಾಸ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರಾ? ಇಲ್ಲ.
courtesy: SS Rajamouli Facebook page
ಅವರ ಬದಲಿಗೆ ಟಾಲಿವುಡ್ನ ಇನ್ನೊಬ್ಬ ಹೀರೋ ಹಾಗೂ ʼಅಲ್ಲುಡು ಸೀನುʼ ಚಿತ್ರದ ನಾಯಕ ನಟ ಬೆಲ್ಲಂಕೊಂಡ ಶ್ರೀನಿವಾಸ್ ಅವರು ಪ್ರಭಾಸ್ ನಟಿಸಿದ್ದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ರಾಜಮೌಳಿ ಬದಲಿಗೆ ವಿ.ವಿ.ವಿನಾಯಕ್ ಇದನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಈಗಿನ ಸಂದರ್ಭಕ್ಕೆ ತಕ್ಕಂತೆ ಕಥೆಯಲ್ಲಿ ಕೊಂಚ ಬದಲಾವಣೆಯನ್ನೂ ಅವರು ಮಾಡಿಕೊಳ್ಳುತ್ತಿದ್ದಾರೆ.
ಪೆನ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಡಾ. ಜಯಂತಿಲಾಲ್ ಗಡ ಬಂಡವಾಳ ಹೂಡುತ್ತಿದ್ದಾರೆ.
ಮೂಲ ʼಛತ್ರಪತಿʼ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು; ಅದರಲ್ಲಿ ಪ್ರಭಾಸ್, ಶ್ರಿಯಾ ಸರಣ್ ಸೇರಿ ಸಾಕಷ್ಟು ಕಲಾವಿದರು ನಟಿಸಿದ್ದರು. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಶೀಘ್ರದಲ್ಲಿ ಸಿನಿಮಾ ಕುರಿತ ಹೆಚ್ಚಿನ ಮಾಹಿತಿಯನ್ನು ತಂಡ ಹೇಳಿಕೊಳ್ಳಲಿದೆ.
ರಿಮೇಕ್ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರಾಗಿರುವ ನಿರ್ದೇಶಕ ವಿನಾಯಕ, ತಮಿಳಿನಲ್ಲಿ ವಿಜಯ್ ನಟಿಸಿದ್ದ ʼಕತ್ತಿʼ ಚಿತ್ರವನ್ನು ತೆಲುಗಿನಲ್ಲಿ ʼಕೈದಿ ನಂ.150ʼ ಸಿನಿಮಾ ಮಾಡುವ ಮೂಲಕ ಮೆಗಾಸ್ಟಾರ್ ಚಿರಂಜೀವಿಯವರನ್ನು ಮರಳಿ ಚಿತ್ರರಂಗಕ್ಕೆ ಕರೆತಂದಿದ್ದರು. ಇದೀಗ ಛತ್ರಪತಿ ಸಿನಿಮಾ ಮೂಲಕ ಬಾಲಿವುಡ್ಗೆ ಹೊರಟಿದ್ದಾರೆ.
ಸಾಯಿ ಶ್ರೀನಿವಾಸ್
courtesy: Wikipedia
“ಬಾಲಿವುಡ್ಗೆ ಪದಾರ್ಪಣೆ ಮಾಡುವುದಕ್ಕೆ ಇದು ಹೇಳಿಮಾಡಿಸಿದ ಕಥೆ. ನನ್ನ ಸಿನಿಮಾ ಕರಿಯರ್ನ ಮೊದಲ ನಿರ್ದೇಶರ ಜತೆ ಈ ಸಿನಿಮಾ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಭಾಸ್ ಅವರು ಮಾಡಿದ್ದ ಪಾತ್ರವನ್ನು ತೆರೆಮೇಲೆ ತರುವುದೂ ಅಷ್ಟೇ ದೊಡ್ಡ ಜವಾಬ್ದಾರಿ. ಅದನ್ನೂ ಅಷ್ಟೇ ಸಲೀಸಾಗಿ ಮಾಡಲಿದ್ದೇನೆ ಎಂಬ ನಂಬಿಕೆ ಇದೆ” ಎನ್ನುತ್ತಾರೆ ಸಾಯಿ ಶ್ರೀನಿವಾಸ್.
ಛತ್ರಪತಿ ಬ್ಲಾಕ್ಬಸ್ಟರ್
ಇನ್ನು ಪ್ರಭಾಸ್ ನಟಿಸಿದ್ದ ಛತ್ರಪತಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. 8 ಕೋಟಿ ರೂ. ವೆಚ್ಚದಲಿ ನಿರ್ಮಾಣವಾಗಿದ್ದ ಚಿತ್ರವು 24 ಕೋಟಿ ರೂ. ಬಿಸ್ನೆಸ್ ಮಾಡಿತ್ತು. ಈ ಚಿತ್ರಕ್ಕೆ ರಾಜಮೌಳಿ ಹಾಗೂ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು.