- ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರ ಡುಡ್ಡಿಗೆ ಸೋತ ಭಾರತ ಪುಸ್ತಕ ಈಗಷ್ಟೇ ಓದುಗರ ಕೈ ಸೇರಿದೆ. ಭಾರತದ ರಾಜಕಾರಣವು ಕಾರ್ಪೋರೇಟೀಕರಣ ಆಗುತ್ತಿರುವ ಈ ಅಪಾಯಕಾರಿ ಸನ್ನಿವೇಶವನ್ನು ಸಮರ್ಥವಾಗಿ ಚಿತ್ರಿಸಿರುವ ಕೃತಿ ಇದು. ಓದುಗರನ್ನು ತೀವ್ರವಾಗಿ ಚಿಂತನೆಗೆ ಹಚ್ಚುವ ಅನೇಕ ಬರಹಗಳು ಈ ಹೊತ್ತಿಗೆಯಲ್ಲಿವೆ. ಅದರಲ್ಲೊಂದು ಪ್ರಮುಖ ಅಧ್ಯಾಯವನ್ನು ಸಿಕೆನ್ಯೂಸ್ ನೌ ಓದುಗರಿಗಾಗಿ ಇಲ್ಲಿ ಕೊಡಲಾಗಿದೆ.
ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಗಳಾದ ಟಾಟಾ ಹಾಗೂ ಬಿರ್ಲಾ ಅವರು ಜವಾಹರಲಾಲ್ ನೆಹರೂ ಅವರನ್ನು ಭೇಟಿ ಮಾಡುತ್ತಾರೆ.
ಈ ಭೇಟಿಯ ಸಂದರ್ಭದಲ್ಲಿ ನೆಹರೂ ಅವರ ಜತೆ ಮಾತುಕತೆಯಾಡುತ್ತಾ ಟಾಟಾ ಮತ್ತು ಬಿರ್ಲಾ ಒಂದು ಪ್ರಸ್ತಾವವನ್ನು ಮುಂದಿಡುತ್ತಾರೆ. ಅದೆಂದರೆ; ದೇಶ ಪ್ರಥಮ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾವು ಬಯಸಿದವರಿಗೆಂದೇ ಇಂತಿಷ್ಟು ಸೀಟುಗಳನ್ನು ಕೊಡಬೇಕು ಎಂಬುದು ಈ ಪ್ರಸ್ತಾವ.
ಆದರೆ, ಜವಾಹರಲಾಲ್ ನೆಹರೂ ಈ ಪ್ರಸ್ತಾವವನ್ನು ತಿರಸ್ಕರಿಸುತ್ತಾರೆ. ಆಗ ಟಾಟಾ, ಬಿರ್ಲಾ ಅಧಿಕಾರಯುತವಾಗಿ ಒಂದು ಮಾತು ಹೇಳುತ್ತಾರೆ. “ಮಿಸ್ಟರ್ ನೆಹರೂಜೀ.. ಇವತ್ತು ಬ್ರಿಟಿಷರಿಂದ ಈ ದೇಶ ಸ್ವಾತಂತ್ರ್ಯ ಪಡೆಯಲು ದೊಡ್ಡ ಮಟ್ಟದ ಬಂಡವಾಳ ಹೂಡಿದವರು ನಾವು. ಗಾಂಧೀಜಿಯವರ ಅಹಿಂಸಾ ಹೋರಾಟ ಯಶಸ್ವಿಯಾಗಲೂ ನಮ್ಮ ಕೊಡುಗೆಯಿದೆ. ಅದೇ ರೀತಿ ಬ್ರಿಟಿಷರ ವಿರುದ್ದ ಯಾವ್ಯಾವ ಮಾದರಿಯ ಹೋರಾಟಗಳು ಯಾರ್ಯಾರಿಂದ ನಡೆದವೋ? ಅದರ ಹಿಂದೆಯೂ ನಮ್ಮ ಬಂಡವಾಳವಿದೆ. ಹೀಗಿರುವಾಗ ಯಾವ ಕಾರಣಕ್ಕಾಗಿ ಅಧಿಕಾರದಲ್ಲಿ ನಾವು ಪಾಲುದಾರರಾಗಬಾರದು ಎಂದು ಬಯಸುತ್ತೀರಿ?”
ಅವರ ಮಾತು ಕೇಳಿದ ನೆಹರೂ ಗಂಭೀರವಾಗಿ; “ಭಾರತದಿಂದ ಬ್ರಿಟಿಷರನ್ನು ಓಡಿಸಲು ಅಗತ್ಯವಾದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀವು ದೊಡ್ಡ ಮಟ್ಟದ ಬಂಡವಾಳ ಹಾಕಿದ್ದೀರಿ. ನಿಜ, ಆದರೆ ಈ ಬಂಡವಾಳವನ್ನು ಹಿಂಪಡೆಯಲು ನೀವು ಕೈಗಾರಿಕೆಗಳನ್ನೇ ಹೆಚ್ಚೆಚ್ಚಾಗಿ ತೆರೆಯಿರಿ. ಅದಕ್ಕೆ ಅಗತ್ಯವಾದ ಪರವಾನಗಿಯನ್ನು ನಾವು ಕೊಡುತ್ತೇವೆ” ಎನ್ನುತ್ತಾರೆ.
ಹಾಗೆಯೇ ಮುಂದುವರಿದು; “ನೀವು ಕೈಗಾರಿಕೆಗಳನ್ನು ಹೆಚ್ಚೆಚ್ಚು ಪ್ರಾರಂಭಿಸಿದರೆ ದೇಶದಲ್ಲಿ ಉದ್ಯೋಗದ ಪ್ರಮಾಣ ಹೆಚ್ಚುತ್ತದೆ. ಆ ಮೂಲಕ ಬಡತನ ನಿವಾರಣೆಗೂ ಸಹಕರಿಸಿದಂತಾಗುತ್ತದೆ. ಹಾಗೆಯೇ ಸ್ವಾತಂತ್ರ್ಯ ಹೋರಾಟಕ್ಕೆ ನೀವು ಹಾಕಿದ ಬಂಡವಾಳ ದೊಡ್ಡ ಮಟ್ಟದಲ್ಲಿ ಮರಳಿ ಪಡೆಯಲು ಸಾಧ್ಯವಾಗುತ್ತದೆ” ಎನ್ನುತ್ತಾರೆ ನೆಹರು.
ಜವಾಹರಲಾಲ್ ನೆಹರು
ನೆಹರೂ ಅವರ ಮಾತು ಕೇಳಿದ ಟಾಟಾ, ಬಿರ್ಲಾ ಇಬ್ಬರೂ; “ನೀವು ಹೇಳಿದ್ದು ಸರಿಯಾಗಿದೆ ನೆಹರೂಜೀ. ಆದರೆ ನಮ್ಮ ಪ್ರಶ್ನೆ ಎಂದರೆ ಯಾವ ಕಾರಣಕ್ಕಾಗಿ ನಾವು ರಾಜಕೀಯ ಅಧಿಕಾರದಲ್ಲಿ ಪಾಲು ಪಡೆಯಬಾರದು. ಅದನ್ನು ಹೇಳಿ” ಎನ್ನುತ್ತಾರೆ.
ಪುನಾ ನೆಹರೂ ಹೇಳುತ್ತಾರೆ. “ಒಂದು ವ್ಯವಸ್ಥೆಯಲ್ಲಿ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಪರಸ್ಪರ ಕೈ ಜೋಡಿಸಿ ನಡೆಯಬಾರದು. ಯಾಕೆಂದರೆ, ಒಂದರ ಉದ್ದೇಶ ಲಾಭ ಪಡೆಯುವುದು. ಮತ್ತೊಂದರ ಉದ್ದೇಶ ಸೇವೆ ಮಾಡುವುದು. ಹೀಗಾಗಿ ಇವೆರಡೂ ಒಗ್ಗೂಡಿ ನಡೆದರೆ ವ್ಯವಸ್ಥೆ ಗಂಭೀರ ಅಪಾಯವನ್ನು ಎದುರಿಸಬೇಕಾಗುತ್ತದೆ.”
ಅಂದ ಹಾಗೆ; ಈ ಮಾತುಗಳನ್ನಾಡಿದ ನೆಹರೂ ಕೈಗಾರಿಕೋದ್ಯಮಿಗಳಿಂದ ಸಂಪೂರ್ಣ ದೂರವಾಗಿ ಅಧಿಕಾರ ನಡೆಸಿದರು ಎಂದಲ್ಲ. ಆದರೆ ಅವರನ್ನು ಹಿಂದಿಟ್ಟುಕೊಂಡೇ ರಾಜಕೀಯ ವ್ಯವಸ್ಥೆಯನ್ನು ಮುನ್ನಡೆಸಿದರು. ಇದನ್ನೇಕೆ ಗಮನಿಸಬೇಕು ಎಂದರೆ, ರಾಜಕಾರಣ ಎಲ್ಲಿಯವರೆಗೆ ಬಂಡವಾಳಶಾಹಿಗಳನ್ನು ಮುನ್ನೆಲೆಗೆ ತಂದು ನಿಲ್ಲಿಸಿಕೊಳ್ಳಲಿಲ್ಲವೋ? ಅಲ್ಲಿಯವರೆಗೂ ಅದು ಹಳಿಯ ಮೇಲೆ ಓಡುತ್ತಿತ್ತು.
ಆದರೆ, ಮೊದಲ ಲೋಕಸಭಾ ಚುನಾವಣೆಗೂ ಇವತ್ತಿನ ಲೋಕಸಭಾ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ರಾಜಕೀಯ ಬೇರೆಯಲ್ಲ, ಬಂಡವಾಳಶಾಹಿಗಳು ಬೇರೆಯಲ್ಲ. ಅರ್ಥಾತ್, ನೀವು ಪೊಲಿಟಿಕಲ್ ಹೌಸ್ ನೋಡಲು ಹೋದರೆ ಅದರ ವ್ಯಾಪ್ತಿಯಲ್ಲೇ ಇಂಡಸ್ಟಿಯಲ್ ಹೌಸ್ ಕಾಣುತ್ತದೆ. ಇಂಡಸ್ಟ್ರಿಯಲ್ ಹೌಸ್ ನೋಡಲು ಹೋದರೆ ಅದರ ತೆಕ್ಕೆಯಲ್ಲೇ ಪೊಲಿಟಿಕಲ್ ಹೌಸ್ ಕಾಣುತ್ತದೆ.
ಪರಿಣಾಮ? ಇವತ್ತು ಇಡೀ ದೇಶದಲ್ಲಿ ಅಪನಂಬಿಕೆಯ ವಾತಾವರಣ ನೆಲೆಸಿದೆ. ಕರ್ನಾಟಕವನ್ನೇ ತೆಗೆದುಕೊಳ್ಳಿ. ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇರಲಿ. ಆದರೆ ಪಕ್ಷ ಭೇದವಿಲ್ಲದೆ ಜನರ ಹಿತ ಕಾಪಾಡುವ ವಿಷಯದಲ್ಲಿ ನಮ್ಮ ರಾಜಕಾರಣಿಗಳು ಕೆಲಸ ಮಾಡುತ್ತಿದ್ದರು. ಆದರೆ ಇವತ್ತು ಯಾವುದೇ ಪಕ್ಷ-ಪಕ್ಷಗಳ ನಡುವೆ ಅಲ್ಲ, ಪ್ರತಿಯೊಂದು ಪಕ್ಷದೊಳಗೂ ಹಲವಾರು ಪಂಗಡಗಳಿವೆ. ಯಡಿಯೂರಪ್ಪ ಅವರನ್ನು ನೋಡಿದರೆ ಸಹಿಸದ ಗುಂಪಿದೆ. ಈ ಗುಂಪನ್ನು ನೋಡಿದರೆ ಯಡಿಯೂರಪ್ಪ ಅವರಿಗೆ ಅಸಹನೆಯಾಗುತ್ತದೆ.
ಇದೇ ರೀತಿ ಎಷ್ಟೇ ಮೈತ್ರಿಯ ಮಾತನಾಡಿದರೂ ದೇವೇಗೌಡರಿಗೆ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆಯಿಲ್ಲ. ಸಿದ್ಧರಾಮಯ್ಯ ಅವರಿಗೆ ದೇವೇಗೌಡರ ಮೇಲೆ ನಂಬಿಕೆಯಿಲ್ಲ. ಇದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಜನರಲ್ಲೇ ಪರಸ್ಪರ ನಂಬಿಕೆ ಎಂಬುದಿಲ್ಲ.
ಹಾಗಂತ ಇದು ನಿನ್ನೆ, ಮೊನ್ನೆ ರೂಪುಗೊಂಡ ಸ್ಥಿತಿಯಲ್ಲ. ಯಾವಾಗ ಬಂಡವಾಳಶಾಹಿಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆಯಲು ಶುರು ಮಾಡಿದರೋ? ಅಲ್ಲಿಂದಲೇ ಇದು ಶುರುವಾಯಿತು.
ಕರ್ನಾಟಕದಲ್ಲಿ ಕಾರ್ಪೋರೇಟೀಕರಣ
ಕರ್ನಾಟಕವನ್ನು ಉದಾಹರಣೆಯಾಗಿಟ್ಟುಕೊಂಡು ನೋಡಿದರೆ ಪೊಲಿಟಿಕಲ್ ಹೌಸ್ʼನೊಳಗೆ ಇಂಡಸ್ಟ್ರಿಯಲ್ ಹೌಸ್ʼನ ನುಸುಳುಕೋರತನ ಶುರುವಾಗಿದ್ದು ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಹಾಗಂತ ಗುಂಡೂರಾವ್ ಅವರೇ ಸ್ವಯಂ ಆಗಿ ಇದಕ್ಕೆ ಕಾರಣರೂ ಅಂತಲ್ಲ.
ಗುಂಡೂರಾಯರು ಮುಖ್ಯಮಂತ್ರಿಯಾಗುವ ಮುನ್ನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರ ಕಾಲದಲ್ಲಿಯೇ ಪೊಲಿಟಿಕಲ್ ಹೌಸ್ʼಗೆ ಇಂಡಸ್ಟ್ರಿಯಲ್ ಹೌಸ್, ಪ್ರವೇಶ ಪಡೆಯಲು ಯತ್ನಿಸಿದರೂ ಅರಸರು ಅದಕ್ಕೆ ಅವಕಾಶ ಕೊಡಲಿಲ್ಲ. ಬದಲಿಗೆ ಇಂಡಸ್ಟ್ರಿಯಲ್ ಹೌಸ್ ನೇರವಾಗಿ ಪೊಲಿಟಿಕಲ್ ಹೌಸ್ʼಗೆ ಪ್ರವೇಶ ಪಡೆದರೆ ಜನಪ್ರತಿನಿಧಿಗಳಿಗೆ ಗೌರವ ಅಂತಿರುವುದಿಲ್ಲ. ಯಾಕೆಂದರೆ ಇಂಡಸ್ಟ್ರಿಯಲಿಸ್ಟ್ ಬಂಡವಾಳ ಹಾಕಿ ಬಂಡವಾಳ ತೆಗೆಯಲು ಬಯಸುವವರು. ಆದರೆ ಪೊಲಿಟಿಕಲ್ ಹೌಸ್ʼನಲ್ಲಿರುವವರು ಜನಸೇವೆಗೆ ಬದುಕನ್ನು ಮುಡುಪಾಗಿಟ್ಟವರು.
ರಾಜಕಾರಣಕ್ಕೆ ಬಂಡವಾಳ ಬೇಕು. ಆದರೆ ಅದು ನನ್ನ ಮೂಲಕವೇ ಕೆಳಗೆ ಹರಿಯಬೇಕೇ ಹೊರತು ನೀವೇ ನೇರವಾಗಿ ಪ್ರವೇಶ ಪಡೆದು ಹರಿಸುವಂತಾಗಬಾರದು ಎಂದರು. ಹೀಗಾಗಿ ಅರಸರ ಕಾಲದಲ್ಲಿ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಒಂದೇ ಕಾಂಪೌಂಡಿನೊಳಗೆ ಕಾಣಲಿಲ್ಲ.
ಆದರೆ, ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದೇ ಸಂಜಯಗಾಂಧಿ ಕೃಪೆಯಿಂದ. ಅವರ ಬೆಂಬಲ ಇದ್ದ ಕಾರಣಕ್ಕಾಗಿ ಇಂದಿರಾ ಗಾಂಧಿ ಅವರು ಗುಂಡೂರಾಯರನ್ನು ಮುಖ್ಯಮಂತ್ರಿ ಮಾಡಿದರು. ಯಾವಾಗ ಗುಂಡೂರಾಯರು ಮುಖ್ಯಮಂತ್ರಿಯಾದರೋ? ಆ ನಂತರದ ದಿನಗಳಲ್ಲಿ ದಿಲ್ಲಿಯ ಇಂಡಸ್ಟ್ರಿಯಲ್ ಹೌಸ್ ಸಂಜಯ ಗಾಂಧಿ ಅವರನ್ನು ಹಿಡಿದುಕೊಂಡು ಕರ್ನಾಟಕಕ್ಕೆ ನುಸುಳತೊಡಗಿತು. ಈ ವಿಷಯದಲ್ಲಿ ಗುಂಡೂರಾವ್ ಅಮಾಯಕರಾಗಿದ್ದರು. ಹೀಗಾಗಿ ಸಂಜಯ ಗಾಂಧಿ ಮೂಲಕ ಕರ್ನಾಟಕಕ್ಕೆ ಇಂಡಸ್ಟ್ರಿಯಲ್ ಹೌಸ್ ನುಸುಳತೊಡಗಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ನಂತರ ಈ ನುಸುಳುಕೋರರ ಸಂಖ್ಯೆ ಹೆಚ್ಚಾಯಿತು. ಯಾಕೆಂದರೆ ಖುದ್ದು ಹೆಗಡೆ ಅವರಿಗೆ ಈ ಇಂಡಸ್ಟ್ರಿಯಲ್ ಹೌಸ್ʼನ ಸಂಪರ್ಕವಿತ್ತು.
ಹಾಗೆಯೇ, ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವ ಭರದಲ್ಲಿ, ಈ ಉದ್ದೇಶದ ಮೇಲೆ ಬಂಡವಾಳ ಹೂಡಿದ ಇಂಡಸ್ಟ್ರಿಯಲ್ ಹೌಸ್ʼಗಳಿಗೆ ಹೆಗಡೆ ಅವರು ಹೆಚ್ಚೆಚ್ಚು ಅವಕಾಶ ಮಾಡಿಕೊಡತೊಡಗಿದರು. ಲಿಕ್ಕರ್ ಲಾಬಿ, ಎಜುಕೇಶನ್ ಲಾಬಿ ಕೂಡಾ ಈ ಇಂಡಸ್ಟ್ರಿಯಲ್ ಹೌಸ್ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮುಂದೆ ಯಾರೇ ಕರ್ನಾಟಕದ ಮುಖ್ಯಮಂತ್ರಿಯಾಗಲಿ, ಅವರಿಗೆ ಇಂಡಸ್ಟ್ರಿಯಲ್ ಹೌಸ್ʼನ ನುಸುಳುಕೋರರನ್ನು ತಡೆಯಲು ಸಾಧ್ಯವಾಗಲಿಲ್ಲ. ದೇವೇಗೌಡ ಹಾಗೂ ಪಟೇಲರ ಕಾಲದಲ್ಲಿ ಈ ನುಸುಳುಕೋರರ ಹಾವಳಿ ಸಹಿಸಿಕೊಳ್ಳಬಲ್ಲ ಮಟ್ಟದಲ್ಲಿತ್ತಾದರೂ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದ ನಂತರ ಇಂಡಸ್ಟ್ರಿಯಲ್ ಹೌಸ್ ಕರ್ನಾಟಕದ ಆಯಕಟ್ಟಿನ ಜಾಗಗಳಲ್ಲಿ ಸೆಟ್ಲ್ ಆಗುವಲ್ಲಿ ಯಶಸ್ವಿಯಾಗಿಬಿಟ್ಟಿತು.
ಎಸ್.ಎಂ.ಕೃಷ್ಣ ಕಾಲದಲ್ಲಿ
ಅದೇ ರೀತಿ ಇಂಡಸ್ಟ್ರಿಯಲ್ ಹೌಸ್ʼನ ಸಾಲಿಡ್ಡು ಸಪೋರ್ಟು ಪಡೆದ ಎಸ್.ಎಂ.ಕೃಷ್ಣ ಕೂಡ 2004 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ದೇಶದ ಅಧಿಕಾರ ಸೂತ್ರ ಹಿಡಿಯಲು ನೆರವು ನೀಡಿದರು. ಹೀಗೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸೆಟ್ಲ್ ಆದ ಇಂಡಸ್ಟ್ರಿಯಲ್ ಹೌಸ್, ಆ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಂತುಬಿಟ್ಟಿತು.ಇದೇ ಬೆಳವಣಿಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದು ಹೋಗಿದೆ ಎಂಬುದನ್ನೂ ನಾವು ನಿರ್ಲಕ್ಷಿಸಬಾರದು.
ಇವತ್ತು ಕರ್ನಾಟದ 224 ಜನಪ್ರತಿನಿಧಿಗಳ ಪೈಕಿ ಕನಿಷ್ಠ ಇನ್ನೂರು ಮಂದಿ ಉದ್ಯಮಿಗಳು. ಇಲ್ಲವೇ ವಿವಿಧ ಉದ್ಯಮಗಳಲ್ಲಿ ಪಾಲುದಾರರು ಎಂದರೆ ಇಂಡಸ್ಟ್ರಿಯಲ್ ಹೌಸ್ ಹಾಗೂ ಪೊಲಿಟಿಕಲ್ ಹೌಸ್ ಪರಸ್ಪರ ಹೇಗೆ ಬೆರೆತಿವೆ? ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಹೀಗೆ ಇಂಡಸ್ಟ್ರಿಯಲ್ ಹೌಸ್ʼಗಳು ದೇಶದ ವಿವಿಧ ಭಾಗಗಳಲ್ಲಿ ತಲೆ ಎತ್ತಿ ನಿಂತಿರುವ ಪರಿಣಾಮವಾಗಿ ಇವತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಹಾಹಾಕಾರ ಎಬ್ಬಿಸುತ್ತಿದೆ. ಒಂದು ವೇಳೆ ಅವರು ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಈ ಇಂಡಸ್ಟ್ರಿಯಲ್ ಹೌಸ್ʼನ ಪ್ರಭಾವ ಕಡಿಮೆಯಾಗುವುದಿಲ್ಲ. ಮತ್ತೂ ಸಮಾಜದ ತಳವರ್ಗದಲ್ಲಿರುವ ಜನರ ತಳಮಳ ತಪ್ಪುವುದಿಲ್ಲ.
ಯಾಕೆಂದರೆ; ನೆಹರೂ ಕಾಲದಲ್ಲಿ ಪೊಲಿಟಿಕಲ್ ಹೌಸ್ʼನ ಹಿಂಭಾಗದಲ್ಲಿದ್ದ ಇಂಡಸ್ಟ್ರಿಯಲ್ ಹೌಸ್ ಇವತ್ತು ಪೊಲಿಟಿಕಲ್ ಹೌಸ್ʼನ ಕೈ ಹಿಡಿದು ನಿರಾಯಾಸವಾಗಿ ನಡೆಯುತ್ತಿದೆ. ಹೀಗೆ ಯಾವುದನ್ನು ನೆಹರೂ ಬಯಸಿರಲಿಲ್ಲವೋ ಅದು ಸಾಧ್ಯವಾಗಿರುವುದರಿಂದ ದೇಶಾದ್ಯಂತ ಒಂದು ಅಪನಂಬಿಕೆಯ ವಾತಾವರಣ ಕಾಣುತ್ತಿದೆ.
ಇದು ಪ್ರಜಾಸತ್ತೆಯ ಮೇಲೆ ಯಾವ ಮಟ್ಟದ ಅಪಾಯವನ್ನು ತಂದೊಡ್ಡುತ್ತದೆ. ಸಾಮಾಜಿಕ ನ್ಯಾಯ ಎಂಬ ಪದವನ್ನು ಎಷ್ಟು ಹಾಸ್ಯಾಸ್ಪದಗೊಳಿಸುತ್ತದೆ ಅನ್ನುವುದನ್ನು ಅರ್ಥ ಮಾಡಿಕೊಂಡ ವಿಚಾರವಂತ ಸಮುದಾಯ ತನ್ನಿಂತಾನೇ ಒಂದು ವಿಸ್ಮಿತ ಸ್ಥಿತಿಯಲ್ಲಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಪೊಲಿಟಿಕಲ್ ಹೌಸ್ ಮತ್ತು ಇಂಡಸ್ಟ್ರಿಯಲ್ ಹೌಸ್ ತಮ್ಮ ಪಾಡಿಗೆ ಇಂಡಿಪೆಂಡೆಂಟ್ ಆಗಿದ್ದರೆ ಅವು ಅಪಾಯಕಾರಿ ಶಕ್ತಿಗಳಾಗುವುದಿಲ್ಲ. ಬದಲಿಗೆ ವ್ಯವಸ್ಥೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಆದರೆ ಇವೆರಡೂ ಪರಸ್ಪರ ಸೇರಿದರೆ ಅದಕ್ಕೆ ಜರಾಸಂಧನ ರಾಕ್ಷಸ ಶಕ್ತಿ ಬರುತ್ತದೆ.
ಈಗ ಆಗಿರುವುದೇ ಅದು. ಆದರೆ, ಈ ಜರಾಸಂಧನನ್ನು ಎದುರಿಸುವುದು ಯಾರು? ಇವತ್ತು ನಡೆಯುತ್ತಿರುವ ಲೋಕಸಭಾ ಚುನಾವಣೆಗಳು ಜನಸಾಮಾನ್ಯರಲ್ಲಿ ಅತ್ಯಂತ ಹೇವರಿಕೆ ಮೂಡಿಸುತ್ತಿರುವ ಸಂದರ್ಭದಲ್ಲಿ ಈ ಕುರಿತು ಯೋಚಿಸಬೇಕಾದ ಅನಿವಾರ್ಯತೆ ಇದೆ.
***
- ಆರ್.ಟಿ.ವಿಠ್ಠಲಮೂರ್ತಿ
ಕನ್ನಡದ ಅತ್ಯುತ್ತಮ, ವಸ್ತುನಿಷ್ಠ ಪತ್ರಕರ್ತರಲ್ಲಿ ಖಂಡಿತಾ ಒಬ್ಬರು. ರಾಜಕೀಯ ವಿಶ್ಲೇಷಣೆಯಲ್ಲಿ ಅವರದ್ದು ಸತ್ಯಮಾರ್ಗ. ಪ್ರಖರ ಬರವಣಿಗೆ ಅವರ ಶಕ್ತಿ. ಅನೇಕ ಪತ್ರಿಕೆಗಳಿಗೆ ಅಂಕಣಕಾರು ಕೂಡ. ʼಇದೊಂಥರಾ ಆತ್ಮಕಥೆʼ, ʼದುಡ್ಡಿಗೆ ಸೋತ ಭಾರತʼ ಅವರ ಕೃತಿಗಳು.
- ಸಂತೋಷ್ ಸಸಿಹಿತ್ಲು
ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ರಾಜಕೀಯ-ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನು ಬಿಡಿಸುವುದರಲ್ಲಿ ಸಸಿಹಿತ್ಲು ಅವರದ್ದು ಎತ್ತಿದ ಕೈ. ಬಹುತೇಕ ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…