ಚೆನ್ನೈ: ಕೆಲ ದಿನಗಳ ಹಿಂದೆ ನಿವಾರ್ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿನಿಂದ ಗುರುವಾರ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ. ಆದರೆ, ಅದು ತಮಿಳುನಾಡು ರಾಜಕಾರಣಿಗಳಿಗೆ ಸುನಾಮಿಯಂತೆ ಅಪ್ಪಳಿಸಿದೆ. ಸೂಪರ್‌ಸ್ಟಾರ್ ರಜನೀಕಾಂತ್ ಹೊಸ ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದ್ದಾರೆ.
ಇದೇ ಡಿಸೆಂಬರ್ 31ರಂದು ಅವರು ರಾಜಕೀಯ ಪಕ್ಷವನ್ನು ಘೋಷಣೆ ಮಾಡಲಿದ್ದು, ಈ ಬಗ್ಗೆ ತಮ್ಮ ಟಿಟ್ಟರ್ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಮಾಡಿದ್ದಾರೆ. ಇದರೊಂದಿಗೆ ಬಿಜೆಪಿ ಸಹಾಯದಿಂದ ಅಧಿಕಾರದಲ್ಲಿ ಮುಂದುವರಿಯಬೇಕು ಎಂದು ಹೊರಟಿದ್ದ ಎಐಡಿಎಂಕೆ ಹಾಗೂ ಕಾಂಗ್ರೆಸ್-ಕಮ್ಯುನಿಸ್ಟರ ನೆರವಿನಿಂದ 9 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಗದ್ದುಗೆಯನ್ನು ಏರಲೇಬೇಕೆಂದು ಹಾತೊರೆಯುತ್ತಿರುವ ಡಿಸಿಎಂ ಪಕ್ಷಗಳಿಗೆ ಶಾಕ್ ನೀಡಿದ್ದಾರೆ. ಇದರ ಜತೆಗೆ, ರಜನೀಕಾಂತ್ ಅವರ ಕಟು ವಿರೋಧಿ ಪಕ್ಷ ಪಿಎಂಕೆ, ಎಂಡಿಎಂಕೆ, ಕ್ಯಾಪ್ಟನ್ ವಿಜಯ್ ಕಾಂತ್ ಪಕ್ಷಗಳಿಗೂ ರಜನಿ ನಿರ್ಧಾರ ಬೆಚ್ಚಿಬೀಳುವಂತೆ ಮಾಡಿದೆ.
ಕಳೆದ ಹತ್ತು ವರ್ಷಗಳಿಂದ ರಾಜಕೀಯಕ್ಕೆ ಬರಬೇಕಾ? ಬೇಡವಾ? ಎಂಬ ಡೈಲಮಾದಲ್ಲಿದ್ದ ಸೂಪರ್‌ಸ್ಟಾರ್, ಮೂರು ವರ್ಷಗಳಿಂದೀಚೆಗೆ ಪೊಲಿಟಕಲ್ ಎಂಟ್ರಿ ಪಕ್ಕ ಎನ್ನುವಂತೆ ಆಗಿತ್ತು. ಆದರೆ, ಕೋವಿಡ್ ಹಾಗೂ ಅವರ ಆರೋಗ್ಯದ ಕಾರಣಕ್ಕೆ ಅವರು ಚುನಾವಣಾ ರಾಜಕೀಯಕ್ಕೆ ಬರುವುದು ಅನುಮಾನವೇ ಎಂದು ಹೇಳಲಾಗಿತ್ತು. ಆದರೆ, ಎಲ್ಲರ ನಿರೀಕ್ಷೆಗಳನ್ನು ಉಲ್ಟಾ ಮಾಡಿ ಅನೂಹ್ಯವಾಗಿ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಅವರು ಅನೌನ್ಸ್ ಮಾಡಿದ್ದಾರೆ.
ತಮ್ಮ ಎಂದಿನ ಶೈಲಿಯಲ್ಲಿ ಟ್ವೀಟ್ ಮಾಡಿರುವ ರಜನಿ, “ಜನವರಿಯಲ್ಲಿ ಪಕ್ಷದ ಘೋಷಣೆ. ಡಿಸೆಂಬರ್ 31ರಂದೇ ಪ್ರಕಟಣೆ. ಈಗ ಬದಲಾವಣೆ, ಈಗ ಅಲ್ಲದಿದ್ದರೆ ಮತ್ತೆಂದೂ ಸಾಧ್ಯವಿಲ್ಲ” ಎಂದು ಬರೆದಿದ್ದಾರೆ. ಈ ಪ್ರಕಟಣೆಗೂ ಮುನ್ನ ಅವರು ತಮ್ಮ ಹಿತೈಷಿಗಳು, ಅಭಿಮಾನಿ ಸಂಘಗಳ ಪ್ರಮುಖರ ಜತೆ ಮಾತುಕತೆ ನಡೆಸಿದ್ದರು. ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ತಮಿಳುನಾಡಿನಲ್ಲಿ ಅಧ್ಯಾತ್ಮ ಆಧಾರಿತ ರಾಜಕೀಯಕ್ಕೆ ಮುನ್ನುಡಿ ಬರೆಯುವುದಾಗಿ ಸೂಪರ್‌ಸ್ಟಾರ್ ಈ ಮೊದಲೇ ಹೇಳಿದ್ದರು. ಅದರಂತೆ, ಮುಂದಿನ ವರ್ಷದ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಈ ಪ್ರಕಟಣೆ ಮಾಡಿದ್ದಾರೆ.
lead photo courtesy: Wikipedia