ವಿಶ್ಲೇಷಣೆ
ಮುಂದಿನ ವರ್ಷ ತಮಿಳುನಾಡು ರಾಜ್ಯವು ಚುನಾವಣೆಗೆ ಸಜ್ಜಾಗುತ್ತಿರುವ ಡ್ರಾವಿಡ ರಾಜಕೀಯದ ತಲೈವರ್‌ಗಳಿಗೆಲ್ಲ ಗುರುವಾರ ಶಾಕ್ ನೀಡಿದ್ದಾರೆ ಸೂಪರ್‌ಸ್ಟಾರ್ ರಜನೀಕಾಂತ್. ತಮ್ಮ ಇಷ್ಟದೈವ ಗುರುರಾಘವೇಂದ್ರರ ಆಶೀರ್ವಾದದೊಂದಿಗೆ ಅವರು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಜನಿ ಪೊಲಿಟಿಕಲ್ ಎಂಟ್ರಿಯೊಂದಿಗೆ ನಮ್ಮ ನೆರೆ ರಾಜ್ಯದ ರಾಜಕೀಯದಲ್ಲಿ ಏನೆಲ್ಲ ಆಗಲಿದೆ? ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬ ಲೆಕ್ಕಾಚಾರ ಶುರುವಾಗಿದೆ.
ಹಾಗೆ ನೋಡಿದರೆ; ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಎಂ.ಜಿ.ರಾಮಚಂದ್ರನ್, ಎನ್‌ಟಿಆರ್, ಜಯಲಲಿತಾ ಬಿಟ್ಟರೆ ರಾಜಕೀಯವಾಗಿ ಸಕ್ಸಸ್ ಆದ ಸಿನಿಮಾದವರು ಕಡಿಮೆ ಅಥವಾ ಇಲ್ಲ. ಹಾಗೊಮ್ಮೆ, ಹೀಗೊಮ್ಮೆ ಶಾಸಕರೋ ಸಂಸದರೋ ಆಗಿದ್ದುಬಿಟ್ಟರೆ ಈ ಮೂವರಂತೆ ಚಕ್ರ ತಿರುಗಿಸಿದವರು ಇಲ್ಲ. ರಜನೀಕಾಂತ್ ಈ ಮೂವರ ಸಾಲಿಗೆ ಸೇರುತ್ತಾರಾ? ಅಥವಾ ಉಳಿದಂತೆ ಹಾಗೊಮ್ಮೆ ಹೀಗೊಮ್ಮೆ ಕಂಡು ಮರೆಯಾಗುತ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇನ್ನೂ ಆರು ತಿಂಗಳ ಮೇಲಾಗುತ್ತದೆ.
ಕಳೆದ ಒಂದು ವಾರದವರೆಗೂ ರಜನೀಕಾಂತ್ ಸ್ವಂತ ಪಕ್ಷದ ಬದಲು ಬಿಜೆಪಿಗೆ ಬೆಂಬಲ ನೀಡಿದರೆ ಹೇಗೆ ಎಂಬ ಆಲೋಚನೆಯಲ್ಲಿದ್ದರು. ಅವರು ತಮ್ಮ ʼರಜನಿ ಮಕ್ಕಳ್ ಮನ್ರುಂʼ ಸಂಘಟನೆಯನ್ನು ಬಿಜೆಪಿ ಬೀ ಟೀಮ್ ಮಾಡಿದ್ದರು ಎಂದು ಅನೇಕರು ಹೇಳುತ್ತಿದ್ದರು. ಹಾಗೆ ನೋಡಿದರೆ, ಬಿಜೆಪಿ ಮಿತ್ರಪಕ್ಷ ಎಐಎಡಿಂಕೆ ನಾಯಕರಾದ ಸಿಎಂ ಎ.ಪಳನೀಸ್ವಾಮಿ, ಡಿಸಿಎಂ ಓ.ಪನ್ನೀಲ್ ಸೆಲ್ವಂ ಅವರಿಗಿಂತ ರಜನೀಕಾಂತ್‌ಗೆ ಮೋದಿ-ಅಮಿತ್ ಶಾ ಕ್ಲೋಸ್‌ನೆಸ್ ಜಾಸ್ತಿ ಎಂಬುದು ಗುಟ್ಟಿನ ಸಂಗತಿಯೇನಲ್ಲ. ಹೀಗಾಗಿ; ಸೂಪರ್‌ಸ್ಟಾರ್ ತಮಿಳುನಾಡಿನಲ್ಲಿ ಬಿಜೆಪಿಯನ್ನು ನೇರವಾಗಿ ಸೇರುತ್ತಾರೆ ಅಥವಾ ಆ ಪಕ್ಷಕ್ಕೆ ಹೊರಗಿನ ಬೆಂಬಲಿಗರಾಗಿ ಇರಲಿದ್ದಾರೆ ಎಂಬ ವಾದ ಇವತ್ತು ಬ್ರೇಕ್ ಆಗಿದೆ.
ಕಾರಣವಿಷ್ಟೇ; ದ್ರಾವಿಡ ರಾಜಕೀಯ ಹಾಗೂ ಡ್ರಾವಿಡ ಥೀಯರಿ ಬಗ್ಗೆ ಮಡಿವಂತಿಕೆ ಹೊಂದಿರುವ ಬಿಜೆಪಿ ಕೇವಲ ರಾಜಕೀಯ ಲಾಭಕ್ಕೆ ಮಾತ್ರ ಈಗ ಎಐಎಡಿಎಂಕೆ ಜತೆ ಮೈತ್ರಿ ಹೊಂದಿದೆ. ಹಿಂದೆಯೂ ಆ ಪಕ್ಷ ಲೋಕಸಭೆಯಲ್ಲಿ ಸ್ಥಾನಗಳು ಕಡಿಮೆಬಿದ್ದಾಗ ಸೈದ್ಧಾಂತಿವಾಗಿ ತನ್ನ ಕಡು ವಿರೋಧಿಯಾದ ಡಿಎಂಕೆ ಜತೆ ಕೂಡ ಹೊಂದಾಣಿಕೆ ಮಾಡಿಕೊಂಡಿತ್ತು. ಹಾಗೆ ನೋಡಿದರೆ, ದ್ರಾವಿಡ ಪೊಲಿಟಿಕ್ಸ್‌ನಿಂದ ಕಾಂಗ್ರೆಸ್ ಕಳೆದುಕೊಂಡಿದ್ದೇ ಹೆಚ್ಚು. ಇನ್ನು ಬಿಜೆಪಿಗೆ ನಷ್ಟವೇನೂ ಆಗಿಲ್ಲವಾದರೂ ಅಂಥ ಹಂಗಿನ ರಾಜಕೀಯವೇಕೆ ಎಂಬ ನಿರ್ಧಾರಕ್ಕೆ ಬಂದು ಸ್ವಂತ ಅಸ್ತಿತ್ವ ಬಲಪಡಿಸಿಕೊಳ್ಳಲು ಮೋದಿ, ಶಾ ಯತ್ನಿಸುತ್ತಿದ್ದಾರೆ. ಹೀಗೆ ಅವರಿಬ್ಬರೂ ಆಡಳಿತಾರೂಢ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡರೂ ತನ್ನದೇ ಬೇಸ್ ಕ್ರಿಯೇಟ್ ಮಾಡಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಅದರ ಭಾಗವಾಗಿಯೇ, ಆ ರಾಜ್ಯದಲ್ಲಿ ಬಿಜೆಪಿ ನಡೆಸಿದ ʼವೇಲ್ʼ ಯಾತ್ರೆ ಹಾಗೂ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಂಥವರು ಕಮಲ ಹಿಡಿದಿದ್ದು. ಆದರೆ, ರಜನೀಕಾಂತ್ ಕೊಟ್ಟ ಸಡನ್ ಶಾಕ್ ಬಿಜೆಪಿ ನಾಯಕರಿಗೆ ಹೆಚ್ಚು ದಿಗ್ಭ್ರಮೆ ಉಂಟು ಮಾಡಿರುವ ಹಾಗೆ ಕಾಣುತ್ತಿದೆ. ಮುಂದಿನ ಚುನಾವಣೆಗೆ ಸೂಪರ್‌ಸ್ಟಾರ್ ಊರುಗೋಲಾಗುತ್ತಾರೆಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ, ತನಗೆ ಅಪಥ್ಯವಾದ ಡ್ರಾವಿಡ ರಾಜಕೀಯದ ನೆಲೆಗಟ್ಟಿನ ಮೇಲೆಯೇ ರಜನಿ ಪಕ್ಷ ಸ್ಥಾಪನೆ ಮಾಡುತ್ತಿರುವುದು ಕಮಲಕ್ಕೆ ಕಸಿವಿಸಿ ಉಂಟು ಮಾಡಿದೆ.
ಯಾಕೆ ಹೀಗಾಯಿತು?
ಕೋವಿಡ್ ಬಂದ ಮೇಲೆ ರಜನಿ ರಾಜಕೀಯ ಭವಿಷ್ಯ ಖತಂ ಆಯಿತೆಂದೇ ಎಲ್ಲರೂ ನಂಬಿದ್ದರು. ಕಾರಣವಿಷ್ಟೇ, ಸೂಪರ್‌ಸ್ಟಾರ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರು ರಾಜಕೀಯ ಬೇಡ ಎಂದು ಒಮ್ಮೆ ಯೋಚನೆ ಮಾಡಿದ್ದುಂಟು. ಅವರ ವೈದ್ಯರು, ಆರೋಗ್ಯ ಬೇಕಿದ್ದರೆ ರಾಜಕೀಯದ ಉಸಾಬರಿ ಬಿಡಿ ಎಂದು ಸಲಹೆ ಮಾಡಿದ್ದರು. ಈ ವಿಷಯವನ್ನು ಸ್ವತಃ ರಜನಿ ಅವರೇ ಹಂಚಿಕೊಂಡಿದ್ದರು ಹಾಗೂ ಪ್ರಜೆಗಳಿಂದ ದೂರ ಇರುವುದು ಕಷ್ಟ ಎಂತಲೂ ಹೇಳಿಕೊಂಡಿದ್ದರು.
ಆದರೆ, ಮನುಷ್ಯನಿಗಿಂತ ಅದೇ ಮನುಷ್ಯನ ವಿಲ್ ಪವರ್ ಹೆಚ್ಚು ಸ್ಟ್ರಾಂಗ್ ಎನ್ನುವ ಮಾತಿದೆ. ಇದೇ ಮಾತಿಗೆ ರಜನಿ ಓಕೆ ಅಂದ ಹಾಗಿದೆ. ಸೂಪರ್‌ಸ್ಟಾರ್ ವಿಲ್ ಪವರ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಏನೇ ಮಾಡಿದರೂ ಆಲೋಚಿಸುತ್ತಾರೆ, ಒಮ್ಮೆ ಡಿಸೈಡ್ ಮಾಡಿದ ಮೇಲೆ ಅವರು ಆ ನಿರ್ಧಾರದಿಂದ ಹಿಂದೆ ಸರಿಯಲ್ಲ. ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಆದರೆ, ಇಲ್ಲೊಂದು ಸಣ್ಣ ಕಿರಿಕ್ ಇದೆ. ಈ ಹಿಂದೆ; ತಮಿಳುನಾಡಿನಲ್ಲಿ ಚಿತ್ರರಂಗದಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟ ಎಂ.ಜಿ. ರಾಮಚಂದ್ರನ್, ಕರುಣಾನಿಧಿ, ಇವರಾದ ಮೇಲೆ ಬಂದ ಜಯಲಲಿತಾ ಸಿನಿಮಾ ಮತ್ತು ದ್ರಾವಿಡ ಸಿದ್ಧಾಂತದ ನೆರಳಿನಲ್ಲೇ ಬಂದವರು. ಆದರೆ, ಜಯಲಲಿತಾ ತುಸು ಭಿನ್ನ. ರಜನಿ ಹಾಗಲ್ಲ; ಅವರಿಗೆ ಸಿನಿಮಾ ಬಿಟ್ಟರೆ ಸಿದ್ದಾಂತದ ಹಂಗಿಲ್ಲ. ಈ ಕಾರಣಕ್ಕೆ ಅವರು ಕರುಣಾನಿಧಿ ಅವರೊಂದಿಗಿದ್ದಷ್ಟೇ ಆತ್ಮೀಯತೆಯನ್ನು ಈಗ ಮೋದಿ, ಅಮಿತ್ ಶಾ ಜತೆಗೂ ಹೊಂದಿದ್ದಾರೆ. ಈ ನಡುವೆ ಅನಾರೋಗ್ಯ, ಕೋವಿಡ್‌ನಿಂದ ಮನೆಯಲ್ಲೇ ಉಳಿದ ರಜನಿಯನ್ನು ಕಡಿಮೆ ಲೆಕ್ಕ ಹಾಕಿದ ಬಿಜೆಪಿ ತನ್ನದೇ ಸ್ಟೈಲಿನಲ್ಲಿ ಪಕ್ಷ ಸಂಘಟನೆಗೆ ಕೈಹಾಕಿತು. ಎಲ್.ಮುರುಗನ್ ನೇತೃತ್ವದಲ್ಲಿ ಆ ಪಕ್ಷ, ತಮಿಳರ ಇಷ್ಟದೈವ ಮುರುಗರ ʼವೇಲ್ʼ (ದಂಡ) ಅನ್ನು ಹಿಡಿದಿದ್ದು, ಆಸ್ತಿಕತೆಯ ನಂಬಿಕೆಯ ಭಾಗವಾಗಿದ್ದ ʼವೇಲ್ʼ ಬಿಜೆಪಿ ರಾಜಕೀಯ ಅಸ್ತ್ರವಾಗಿದ್ದು ರಜನಿ ಪಥ ಬದಲಿಸಲು ಕಾರಣ ಎನ್ನಲಾಗಿದೆ.
ಇದೆಲ್ಲ ಒಂದು ಕಡೆಯಾದರೆ; ಸೂಪರ್‌ಸ್ಟಾರ್ ಜನಪರ ಕಾಳಜಿಯನ್ನು ಪ್ರಶ್ನಿಸುವಂತೆಯೇ ಇಲ್ಲ. ನಟನಾಗಿ ಅವರು ಡೈಲಾಗ್‌ಗಳು, ಸ್ಟೈಲ್‌ನಿಂದ ಸೂಪರ್‌ಸ್ಟಾರ್ ಆಗಿದ್ದಾರೆಂಬುದು ನಿಜ, ಅದರ ಜತೆಜತೆಯಲ್ಲೇ ಅನೇಕ ವರ್ಷಗಳಿಂದ ಅವರು ರಾಜಕೀಯಕ್ಕೆ ಬರಲೇಬೇಕೆಂಬ ಅಭಿಮಾನಿಗಳ ಒತ್ತಾಯವೂ ಇತ್ತು. ಅವರ ಒಂದೇಒಂದು ಮಾತಿನಿಂದ ಒಂದು ಪಕ್ಷ ಗೆಲ್ಲುವುದು ಅಥವಾ ಸೋಲುವುದೂ ಆಗುತ್ತಿತ್ತು. ಅದರಲ್ಲೂ ಡಿಎಂಕೆ ಪಾಲಿಗೆ ಅನೇಕ ಚುನಾವಣೆಗಳಲ್ಲಿ ರಜನಿ ಆಪದ್ಭಾಂದವರು. ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದ ತಮಿಳುನಾಡು ರಾಜಕೀಯದಲ್ಲಿ ಈಗ ನಾಯಕತ್ವದ ಶೂನ್ಯತೆ ಇದೆ. ಅದನ್ನು ತುಂಬಲು ಕರುಣಾನಿಧಿ ಅವರಿಗೆ ಸ್ಟಾಲಿನ್ ಇದ್ದಾರೆ. ಅದೇ ಜಯಲಲಿತಾ ಪಕ್ಷದ ಬಗ್ಗೆ ಹಾಗೆ ಹೇಳುವಂತಿಲ್ಲ. ಅವರ ಪಕ್ಷದಲ್ಲಿ ಪುರುಚ್ಛಿತಲೈವಿಗೆ ಸಮರ್ಥ ಉತ್ತರಾಧಿಕಾರಿ ಇಲ್ಲ. ಪಳನೀಸ್ವಾಮಿ, ಪನ್ನೀರ್‌ಸೆಲ್ವಂ ಇಬ್ಬರಿಗೂ ಆ ಸೀನ್ ಇಲ್ಲ. ಹೀಗಾಗಿ ಎಐಎಡಿಎಂಕೆ ಮುಂದಿನ ವಿಧಾನಸಭೆ ಚುನಾವಣೆ ನಂತರ ಇರುತ್ತಾ? ಇಲ್ಲವೇ ಬಿಜೆಪಿಯಲ್ಲಿ ವಿಲೀನ ಆಗುತ್ತಾ? ಅದೂ ಇಲ್ಲಾಂದ್ರೆ ಪಳನೀಸ್ವಾಮಿ, ಪನ್ನೀರ್‌ಸೆಲ್ವಂ ಹಾಗೂ ಇನ್ನೇನು ಜನವರಿ ಹೊತ್ತಿಗೆ ಜೈಲಿನಿಂದ ಬಿಡುಗಡೆಯಾಗಲಿರುವ ಶಶಿಕಲಾ ನಡುವೆ ಹರಿದುಹಂಚಿ ಹೋಗುತ್ತಾ? ಎಂಬ ಆತಂಕವಿದೆ. ಹೀಗಾಗಿ ಜಯಾ ಲೆಗಸಿಯನ್ನು ರಜನಿ ತಮ್ಮ ಸ್ವಂತ ಪಾರ್ಟಿ ಮೂಲಕವೇ ಮುಂದುವರಿಸಬಹುದು ಎಂಬ ಲೆಕ್ಕ ಇವತ್ತಿನಿಂದಲೇ ಆರಂಭವಾಗಿದೆ.
ಮತ್ತೊಂದಡೆ ಇನ್ನೊಬ್ಬ ಟಾಪ್‌ಸ್ಟಾರ್ ಕಮಲ್ ಹಾಸನ್ ಈಗಾಗಲೇ ಪಕ್ಷ ಸ್ಥಾಪನೆ ಮಾಡಿದ್ದಾರೆ. ಆದರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿಲ್ಲ. ಪೊಲಿಟಿಕಲ್ ಕ್ಲಾರಿಟಿ ವಿಷಯಕ್ಕೆ ಬಂದರೆ ರಜನಿಗಿಂತ ಕಮಲ್ ಹೆಚ್ಚು ಸ್ಪಷ್ಟತೆ ಹೊಂದಿದ್ದಾರೆ. ಈಗೆಲ್ಲ ಮನಿ ಪಾಲಿಟಿಕ್ಸ್ ಹೆಚ್ಚು ಕೆಲಸ ಮಾಡುತ್ತೆಯಾದ್ದರಿಂದ ರಜನಿಗೆ ಹೆಚ್ಚು ಚಾನ್ಸಸ್ ಇದೆ ಎಂದು ಹೇಳಬಹುದು. ಉಳಿದಂತೆ, ಈಗಾಗಲೇ ರಾಜಕೀಯದಲ್ಲಿರುವ ಇನ್ನಿಬ್ಬರು ಸ್ಟಾರ್‌ನಟ ವಿಜಯಕಾಂತ್, ಶರತ್‌ಕುಮಾರ್ ಜಸ್ಟ್ ಅಸ್ತಿತ್ವ ಹೊಂದಿದ್ದಾರೆ ಎನ್ನಬಹುದು.
ಫ್ಯಾನ್ಸ್ ಕೊಟ್ಟ ಟ್ವಿಸ್ಟ್
ಕೊನೆಕ್ಷಣದವರೆಗೂ ರಜನಿಗೆ ಬಿಜೆಪಿ ಒಳಗೊಂಡಂತೆ ಪೊಲಿಟಿಕಲ್ ಪ್ಲಾನ್ ಮಾಡಬೇಕೂಂತಿತ್ತು. ಆದರೆ, ʼರಜನಿ ಮಕ್ಕಳ್ ಮನ್ರುಂʼ ಪದಾಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿಲ್ಲ. “ನಿಮ್ಮ ನಾಮಬಲದಿಂದ ನೀವೇ ಮುಖ್ಯಮಂತ್ರಿಯಾಗಬೇಕು. ನಿಮ್ಮ ಹೆಸರು ಹೇಳಿಕೊಂಡು ಇನ್ನೊಬ್ಬರು ಸಿಎಂ ಆಗುವುದು ಬೇಡ. ಇಷ್ಟು ದಿನ ನಾವು ನಂಬಿಕೊಂಡು ಬಂದ ರಜನಿ ಮೇಲಿನ ಪ್ರೀತಿ-ಅಭಿಮಾನ ಅದಕ್ಕೆ ಸಮ್ಮತಿಸದು. ಒಂದು ವೇಳೆ, ನಿಮಗೆ ಸ್ವಂತ ಪಕ್ಷ ಬೇಡವೆಂದರೆ, ಸಿನಿಮಾಗಳಲ್ಲಿಯೇ ಇದ್ದುಬಿಡಿ. ಮೊದಲಿನಿಂದ ನಮ್ಮ ಹೃದಯಗಳಲ್ಲಿ ಹೇಗಿದ್ದಿರೋ ಹಾಗೆಯೇ ಇದ್ದುಬಿಡಿ. ಅದರ ಹೊರತಾಗಿ ನಿಮ್ಮ ಜಾಗದಲ್ಲಿ ಮತ್ತೊಬ್ಬರನ್ನು ಒಪ್ಪಿಕೊಳ್ಳಲಾರೆವು” ಎಂದು ಆ ಪದಾಧಿಕಾರಿಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಸೂಪರ್‌ಸ್ಟಾರ್ ತಮ್ಮ ಅಭಿಮಾನಿಗಳ ಮಾತು ಮೀರಲಿಲ್ಲ ಎಂಬುದಾಗಿ ಚೆನ್ನೈನ ಪತ್ರಕರ್ತ ಮಿತ್ರರೊಬ್ಬರು ಹೇಳಿದ ಮಾತು.
ಜತೆಗೆ, ಇನ್ನೊಂದು ಕಾರಣವಿದೆ. ಆದಿಯಿಂದಲೂ ಬಿಜೆಪಿ ಹಾಗೂ ತಮಿಳುನಾಡು ರಾಜಕೀಯ ಸಿದ್ದಾಂತಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಪೆರಿಯಾರ್ ಪ್ರೇರಿತ ದ್ರಾವಿಡ ಸಿದ್ದಾಂತದ ಮೇಲೆಯೇ ಈವರೆಗೆ ತಮಿಳುನಾಡನ್ನು ಆಳಿದ ಎಲ್ಲ ನಾಯಕರು ರಾಜ್ಯಭಾರ ನಡೆಸಿದರು. ಅಣ್ಣಾದೊರೈ ಅವರಿಂದ ಮೊದಲಾದ ʼದ್ರಾವಿಡ ಪರ್ವʼವು ಕರುಣಾನಿಧಿವರೆಗೂ ಅವಿಚ್ಛಿನ್ನವಾಗಿ ನಡೆಯಿತು. ಆಧುನಿಕ ಮನೋಭಾವದ ಜಯಲಿಲತಾ ಅವರು ಕೂಡ ಪೆರಿಯಾರ್ ಥಿಯರಿ ಹೊರತುಪಡಿಸಿದ ರಾಜಕಾರಣ ಮಾಡಲಾಗಲಿಲ್ಲ. ಇನ್ನು, ಈಗ ರಾಜ್ಯದಲ್ಲಿರುವ ವೈಕೋ ಅವರ ಎಂಡಿಎಂಕೆ, ರಾಮದಾಸ್ ಅವರ ಪಿಎಂಕೆ, ದೊಡ್ಡ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಎಲ್ಲ ಪಕ್ಷಗಳೂ ಪೆರಯಾರ್ ಪ್ರಭಾವಳಿಯಲ್ಲೇ ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್‌ಗೂ ಇದು ತಪ್ಪಿಲ್ಲ. ಎಡಪಕ್ಷಗಳು ಕೂಡ ಕಾರ್ಲ್‌ಮಾರ್ಕ್ಸ್, ಲೆನಿನ್, ಏಂಜೆಲ್ಸ್ ಪೋಟೋಗಳ ಪಕ್ಕ ಪೆರಿಯಾರ್ ಫೋಟೋ ಇಟ್ಟುಕೊಂಡೇ ರಾಜಕಾರಣ ಮಾಡುತ್ತಿವೆ. ಪೆರಿಯಾರ್ ಸಮಸ್ತ ತಮಿಳರ ಆಸ್ಮಿತೆ ಹಾಗೂ ಶೋಷಿತರ ದನಿ. ಹೀಗಾಗಿ ರಜನಿ ಈ ದಾರಿ ಬಿಟ್ಟರೆ ಫಲವಿಲ್ಲ ಎಂಬುದು ಅವರ ಅಭಿಮಾನಿಗಳಿಗೆ ಮನದಟ್ಟಾಗಿದೆ. ಹಾಗೆಯೇ, ಅವರ ಹಿತೈಷಿಗಳಲ್ಲಿ ಅನೇಕರು ತಮಿಳುನಾಡಿನ ತಾತ್ವಿಕ ಶ್ರೇಷ್ಠರು. ಹಿಂದೆ ರಜನಿ ಅವರು ಪತ್ರಕರ್ತ, ಚಿಂತಕ ಚೋ ರಾಮಸ್ವಾಮಿ ಅವರ ಹಾಕಿದ ಗೆರೆ ದಾಟುತ್ತಿರಲಿಲ್ಲ. ಈಗಲೂ ರಜನಿ ಅವರ ಜತೆ ಅಂಥ ಥಿಂಕ್‌ಟ್ಯಾಂಕ್ ಇದೆ. ಆ ಎಲ್ಲ ಶಕ್ತಿಗಳು ರಜನಿಯನ್ನು ಬಿಜೆಪಿ ಜತೆ ಸೇರುವುದನ್ನು ತಡೆದಿವೆ.
ಕರುಣಾನಿಧಿ ಮತ್ತು ಜಯಲಿಲಿತಾ I courtesy: Wikipedia
ಆದರೆ, ಇದು ಗುಡ್ ಟೈಮ್ ಅಲ್ಲ!
ಸೂಪರ್‌ಸ್ಟಾರ್ ರಾಜಕೀಯಕ್ಕೆ ಬರುತ್ತಿರುವ ಸಮಯ ಅವರಿಗೆ ಪೂರಕವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಅವರು ಶತಾಯ-ಗತಾಯ ಪಕ್ಷ ರಾಜಕಾರಣಕ್ಕೆ ಧುಮುಕಿದ್ದಿದ್ದರೆ ಅವರಿಗೆ ಈ ಹೊತ್ತಿಗೆ ಸರಕಾರ ರಚನೆ ಮಾಡುವಷ್ಟು ಶಕ್ತಿ ಬರುತ್ತಿತ್ತು ಎನ್ನಲಾಗುತ್ತಿದೆ. 2012ರಲ್ಲಿ ಅವರು ನಟಿಸಿದ ʼಬಾಬಾʼ ಸಿನಿಮಾ ಸೂಪರ್‌ಸ್ಟಾರ್ ರಾಜಕೀಯ ಅರಂಗೇಟ್ರಂಗೆ ವೇದಿಕೆ ಎಂದು ಹೇಳಿಲಾಯಿತು. ಅದೇ ಹೊತ್ತಿನಲ್ಲಿ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಜೋರಾಗಿತ್ತು. ಅದಕ್ಕೂ ಹಿಂದೆ ಬಂದ ʼಪಡೆಯಪ್ಪʼ ಚಿತ್ರವು ರಜನಿಯನ್ನು ರಾಜಕೀಯ ಅತಿ ಹತ್ತಿರಕ್ಕೆ ತಂದು ನಿಲ್ಲಿಸಿತ್ತು. ಆಗ ನಡೆದಿದ್ದೇ ದೊಡ್ಡ ನಾಟಕ ಎನ್ನಬಹುದು. ರಜನಿ ಕನ್ನಡದವರು. ಕಾವೇರಿ ವಿಷಯಕ್ಕೆ ಬಂದರೆ ಅವರು ಕರ್ನಾಟಕದ ಪರ ಎಂದೆಲ್ಲ ಹುಯಿಲೆಬ್ಬಿಸಲಾಯಿತು. ಚೋ ರಾಮಸ್ವಾಮಿ ಅವರ ಸಲಹೆಯಂತೆ ರಾಜಕೀಯ ರಂಗಪ್ರವೇಶಕ್ಕೆ ಸನ್ನದ್ಧರಾಗಿದ್ದ ಅವರು, ತಮ್ಮ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರದಿಂದ ಬೇಸತ್ತು ತಮ್ಮ ಅಧ್ಯಾತ್ಮಗುರು ಬಾಬಾ ಅವರನ್ನು ಸ್ಮರಸಿಕೊಂಡು ಹಿಮಾಲಯದ ಗುಹೆಯೊಂದನ್ನು ಸೇರಿಕೊಡಿದ್ದರು. ಅದಾದ ಮೇಲೆ ಬಹಳ ವರ್ಷ ಅವರು ಸಿನಿಮಾ ಕಡೆಯೇ ಗಮನವಿಟ್ಟು ತಟಸ್ಥರಾಗಿದ್ದರು. ಆದರೆ, ಅವರ ವಿರುದ್ಧ ಸವಕಲು ಅಪಪ್ರಚಾರ ಮಾಡಿದ ಪಿ.ರಾಮದಾಸ್‌ರಂಥ ನಾಯಕರು ನೇಪಥ್ಯಕ್ಕೆ ಸರಿದು ತಣ್ಣಗಾಗಿದ್ದಾರೆ. ಜತೆಗೆ, ಕರುಣಾನಿಧಿ, ಜಯಲಲಿತಾ ಅವರಂಥ ದಿಗ್ಗಜರ ಜತೆ ಸೆಣಸಾಡಬೇಕಾದ ಅಗತ್ಯವೂ ಈಗ ಇಲ್ಲ.
ಹೀಗಿದ್ದರೂ ರಜನಿಗೆ ಈಗ ಅನುಕೂಲಕರ ವಾರಾವರಣ ಇಲ್ಲ ಎನ್ನಬಹುದು. ದೇಶದಲ್ಲೀಗ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದಂತೆ ತಮಿಳುನಾಡಿನಲ್ಲೂ ಸರಕಾರ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದೆ ಆ ಪಕ್ಷ. ಈ ಕಾರಣಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಸೋಲುವ ಪಕ್ಷವೆಂದು ಗೊತ್ತಿದ್ದರೂ ಎಐಎಡಿಎಂಕೆ ಮೇಲೆ ಟವೆಲ್ ಹಾಕಿದ್ದಾರೆ ಮೋದಿ, ಶಾ ಜೋಡಿ. ಸ್ವಂತ ಶಕ್ತಿಯಿಂದ, ಅದರಲ್ಲೂ ದ್ರಾವಿಡ ಆಸ್ಮಿತೆಯೆದುರು ಹಿಂದುತ್ವದ ಥೇರನ್ನು ಎಳೆದು ದಡ ಸೇರಿಸುವುದು ಕಷ್ಟ ಎನ್ನುವ ಅರಿವು ಅವರಿಗಿದೆ. ಹೀಗಾಗಿ, ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯಕ್ಕೆ ಅಂತ್ಯ ಹಾಡಲು ಬಿಜೆಪಿ ಹವಣಿಸುತ್ತಿದೆ. ಈ ಕಾರಣಕ್ಕಾಗಿಯೇ ದೇಶವನ್ನೇ ಗೆದ್ದ ಮೋದಿ-ಶಾ ಇಲ್ಲಿ ಪಳನೀಸ್ವಾಮಿ-ಪನ್ನೀರ್ ಸೆಲ್ವಂ ಅವರನ್ನು ನಂಬಿಕೊಂಡಿದ್ದಾರೆ. ಇನ್ನು, ಕಾಂಗ್ರೆಸ್ ದೂರದ ಬಿಹಾರದಲ್ಲಿ ಮಾಡಿದಂತೆ ಡಿಎಂಕೆ ನೆರವಿನಿಂದ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿದೆ. ಕಳೆದ ನಾಲ್ಕು ವರ್ಷಗಳಿಂದ ಪಳನಿ-ಪನ್ನೀರ್ ಆಡಳಿತಕ್ಕೆ ರೋಸಿ ಹೋಗಿರುವ ತಮಿಳರು ಇತ್ತೀಚೆಗೆ ʼಸಾಲಿಡ್ʼ ಆಗಿ ಡಿಎಂಕೆಯ ಸ್ಟಾಲಿನ್ ಪರ ವಾಲುತ್ತಿದ್ದಾರೆ. ಬರುವ ಆರು ತಿಂಗಳಲ್ಲಿ ಈ ವಾಲುವಿಕೆಯನ್ನು ಯಾರಿಗಾದರೂ ತಡೆಯುವ ಶಕ್ತಿ ಇದೆಯಾ? ಅಥವಾ ರಜನೀಕಾಂತ್ ಅವರಿಂದ ಇದು ಸಾಧ್ಯವಿದೆಯಾ? ಕಾದು ನೋಡಬೇಕು.
2021, ಮೇ ತಿಂಗಳಲ್ಲಿ ಎಲೆಕ್ಷನ್
234 ಸದಸ್ಯ ಬಲದ ತಮಿಳುನಾಡು ಅಸೆಂಬ್ಲಿ ಚುನಾವಣೆ 2021ರ ಮೇ ಅಥವಾ ಜೂನ್‌ನಲ್ಲಿ ನಡೆಯಲಿದೆ. ಹೇಗೆ ನೋಡಿದರೂ ರಜನಿಗೆ ಉಳಿದಿರುವುದು ಆರು ತಿಂಗಳು ಮಾತ್ರ. ಅಷ್ಟರಲ್ಲಿ ಅವರು ತಮ್ಮ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬೇಕು. ತಮ್ಮ ಅಭಿಮಾನಿ ಸಂಘ ʼರಜನಿ ಮಕ್ಕಳ್ ಮನ್ರುಂʼ ಅನ್ನೇ ಅವರು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸುತ್ತಾರಾ? ಅಥವಾ ಹೊಸ ಹೆಸರಿನ ಪಕ್ಷ ಸ್ಥಾಪಿಸುತ್ತಾರಾ? ನೋಡಬೇಕು. ಅದಕ್ಕಿಂತ ಮಿಗಿಲಾಗಿ ಅವರು ತಮ್ಮ ಅಭಿಮಾನಿಗಳನ್ನು ತಮ್ಮ ಮತದಾರರನ್ನಾಗಿ ಪರಿವರ್ತಿಸುವ ಕೆಲಸ ಮಾಡಬೇಕಿದೆ. ಅದೂ ಸಾಲದೆ, ರಾಜ್ಯ ಮಟ್ಟದಿಂದ ಆರಂಭಿಸಿ ಗ್ರಾಮ ಮಟ್ಟದವರೆಗೂ ಹರಡಿಕೊಂಡಿರುವ ಅಭಿಮಾನಿಗಳನ್ನು ಪಕ್ಷದ ಕಾರ್ಯಕರ್ತರನ್ನಾಗಿ ಪರಿವರ್ತನೆ ಮಾಡಬೇಕಿದೆ. ಹೀಗಾಗಿ, ಅವರಿಗೆ ಅಭಿಮಾನಿಗಳು ಬಿಟ್ಟರೆ ಬೇರೆ ಶಕ್ತಿಯೇ ಇಲ್ಲ. ಇದೇ ಕಾಲಕ್ಕೆ ಅವರು ನೆರೆಯ ಆಂಧ್ರ ಪ್ರದೇಶದಲ್ಲಿ ಚಿರಂಜೀವಿ, ಪವನ್ ಕಲ್ಯಾಣ್ ವೈಫಲ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಎನ್‌ಟಿಆರ್, ಎಂಜಿಆರ್ ಕಾಲದ ಸಿನಿಮಾ ಪಾಲಿಟಿಕ್ಸ್ ಈಗ ಕಷ್ಟ. ಸಕ್ಸಸ್ ರೇಟ್ ಕೂಡ ತೀರಾ ಕೆಳಮಟ್ಟದಲ್ಲಿದೆ.
ರಜನಿಗೆ ಸ್ವಂತ ಪಾರ್ಟಿಯೇ ಬೆಸ್ಟ್ ಏಕೆ?
ಸೂಪರ್‌ಸ್ಟಾರ್ ಪೊಲಿಟಿಕಲ್ ಎಂಟ್ರಿಯ ಬಗ್ಗೆ ನಾನೊಮ್ಮೆ ನಮ್ಮ ರಾಜ್ಯದ ಹಿರಿಯ ರಾಜಕೀಯ ವಿಶ್ಲೇಷಕ ಮಹದೇವ ಪ್ರಕಾಶ್ ಅವರೊಂದಿಗೆ ಚರ್ಚೆ ಮಾಡಿತ್ತು ಸಿಕೆನ್ಯೂಸ್ ನೌ. ರಜನಿ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣವಿತ್ತು. ಹೀಗೆ ಹೇಳಿದ್ದರು ಅವರು;
“ರಜನೀಕಾಂತ್ ಅವರಿಗೆ ಬಿಜೆಪಿ ಎಂದರೆ ಉತ್ತಮ ಅಭಿಪ್ರಾಯವೇ ಇದೆ. ಅದೇ ರೀತಿ ಮೋದಿ-ಅಮಿತ್ ಶಾ ಇಬ್ಬರಿಗೂ ಈ ಸೂಪರ್‌ಸ್ಟಾರ್ ಪಕ್ಷಕ್ಕೆ ಬಂದರೆ ಉತ್ತಮ ಎಂಬ ನಂಬಿಕೆ ಇದೆ. ಇದೆಲ್ಲವೂ ಸರಿ. ಆದರೆ, ತಮಿಳುನಾಡು ಜನರು ರಾಷ್ಟ್ರೀಯ ಪಕ್ಷಗಳನ್ನು ಇಷ್ಟಪಡಲ್ಲ. ಮೋದಿ ಪ್ರಧಾನಿಯಾದ ಮೇಲೆಯೂ ಆ ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಸುಧಾರಿಸಿಲ್ಲ. ಇಷ್ಟೆಲ್ಲ ಹಿನ್ನೆಲೆ ನೋಡಿಯೇ ಕಮಲ್ ಹಾಸನ್ ಸ್ವಂತ ಪಕ್ಷ ಕಟ್ಟಿದರು. ಅವರಿಗೆ ಕಾಂಗ್ರೆಸ್‌ಗೆ ಸೇರುವ ಅವಕಾಶವಿದೆ. ಅವರ ಸಿದ್ದಾಂತಕ್ಕೂ ಆ ಪಕ್ಷ ಹೊಂದಿಕೆಯಾಗುತ್ತದೆ. ಅವರು ಸೇರಲಿಲ್ಲ. ಇನ್ನು ರಜನೀಕಾಂತ್ ಸ್ವಂತ ಪಕ್ಷ ಕಟ್ಟಿದರೆ ಉತ್ತಮ” ಎಂದಿದ್ದರು.
ಇದು ನಿಜ ಕೂಡ. ತಮಿಳುನಾಡಿನ ಮೇಲಿರುವ ಪೆರಿಯಾರ್ ಪ್ರಭಾವಳಿಯನ್ನು ಅಳಿಸುವುದು ಸುಲಭವಲ್ಲ. ಆದರೆ, ಅದನ್ನು ಕೊಂಚ ಅಲುಗಾಡಿಸುವ ಪ್ರಯತ್ನ ಮೋದಿ- ಅಮಿತ್ ಶಾ ಅವರಿಂದ ಆಗಬಹುದು. ಹೀಗಿದ್ದರೂ ರಜನಿ ಈ ಪೊಲಿಟಿಕಲ್ ಫೀಲ್ಡಿನಲ್ಲಿ ಸಕ್ಸಸ್ ಆಗುತ್ತಾರಾ? ಇಲ್ಲವಾ? ಎಂಬುದನ್ನು ತಿಳಿಯಲು ಇನ್ನು ಆರು ತಿಂಗಳು ಟೈಮ್ ಇದೆ. ಆಗ ಸೂಪರ್‌ಸ್ಟಾರ್ ತಾಕತ್ತು ಏನೆಂಬುದು ಜಗತ್ತಿಗೆ ತಿಳಿಯಲಿದೆ.
****
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಸಂತೋಷ್ ಸಸಿಹಿತ್ಲು
ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ರಾಜಕೀಯ-ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನು ಬಿಡಿಸುವುದರಲ್ಲಿ ಅವರದ್ದು ಎತ್ತಿದ ಕೈ. ರಾಜ್ಯ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿ, ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮೊಬೈಲ್ ಸಂಖ್ಯೆ 9986688101 ಮೂಲಕ ಸಸಿಹಿತ್ಲು ಅವರನ್ನು ಸಂಪರ್ಕಿಸಬಹುದು.