- ಚೀನಾ ಆಕ್ರಮಿತ ಟೆಬೆಟ್‌ನಲ್ಲಿ ಹುಟ್ಟಿ ಹಿಮಾಲಯವನ್ನು ಸೀಳಿಕೊಂಡು ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿ ಅಗಾಧ ಪ್ರಮಾಣದಲ್ಲಿ ಹರಿದು ಬಾಂಗ್ಲಾದೇಶವನ್ನು ಪ್ರವೇಶಿಸಿ, ಅಲ್ಲಿಂದ ಗಂಗಾ ನದಿಯನ್ನು ಸೇರಿ ಬಂಗಾಳಕೊಲ್ಲಿಯಲ್ಲಿ ಲೀನವಾಗುವ ಬ್ರಹ್ಮಪುತ್ರ ನದಿಯನ್ನು ಟಬೆಟ್‌ನಲ್ಲೇ ಮುಗಿಸಿಬಿಡಲು ಚೀನಾ ಮುಂದಾಗಿದೆ. ಭೂದಾಹಕ್ಕೆ ಹೆಸರಾದ ನೆರೆ ದೇಶ ಈಗ ಜಲದಾಹಕ್ಕೂ ಕುಖ್ಯಾತಿ ಪಡೆಯುತ್ತ ಭಾರತಕ್ಕೆ ದೊಡ್ಡ ಕಂಠಕವಾಗಿ ಪರಿಣಮಿಸಿದೆ. ಅದು ಹೇಗೆ ಎಂಬುದನ್ನು ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಇಲ್ಲಿ ವಿವರವಾಗಿ ಚರ್ಚಿಸಿದ್ದಾರೆ.
****
ಕ್ರಿ.ಶ.1940ರ ನಂತರ ಏಷ್ಯಾದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದವು. 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕ ದೇಶಗಳಾದವು. 1949ರಲ್ಲಿ ಚೀನಾ ದೇಶವು ʼಪೀಪಲ್ಸ್ ಆಫ್ ರಿಪಬ್ಲಿಕ್ ಚೀನಾ’ ಆಯಿತು. ಅದೇ ವರ್ಷ ಚೀನಾ, ಟೆಬೆಟನ್ನು ವಶಪಡಿಸಿಕೊಳ್ಳುವುದಾಗಿ ಹೇಳಿಕೆ ನೀಡಿದಾಗ ಭಾರತ ಪ್ರತಿರೋಧ ತೋರಿಸಿತು. 1950ರಲ್ಲಿ ನೆಹರೂ ʼಮೆಕ್‌ಮೋಹನ್ ಲೈನ್, (ಭಾರತ-ಟೆಬೆಟ್ ಸರಿಹದ್ದು) ನಮ್ಮ ಸರಿಹದ್ದು ಎಂದು ಘೋಷಿಸಿದರು. ಆದರೆ ಭಾರತ ಮಾತ್ರ ಯುಎನ್‌ನಲ್ಲಿ ಚೀನಾ ಬಗ್ಗೆ ಒಲವು ತೋರುತ್ತಲೇ ಬಂದ ಕಾರಣ ಚೀನಾಗೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯತ್ವ ಸಿಕ್ಕಿತು. ಭಾರತ ಆಗ ಮಾಡಿದ ತಪ್ಪಿಗೆ ಈಗಲೂ ಪಶ್ಚಾತ್ತಾಪ ಪಡುತ್ತ ಯುಎನ್ ಸದಸ್ಯತ್ವ ಪಡೆಯಲು ಅಂಗಲಾಚುತ್ತಿದೆ. ಚೀನಾ ಅದುವರೆಗೂ ಭಾರತದ ಬಗ್ಗೆ ಯಾವುದೇ ಪ್ರತಿರೋಧ ತೋರಲಿಲ್ಲ. ನೆಹರೂ ʼಚೀನಾ-ಇಂಡಿಯಾ ಭಾಯಿ ಭಾಯಿ’ ಸ್ಲೋಗನ್ ಹೇಳುತ್ತಲೇ ಇದ್ದರು.
1950-51ರಲ್ಲಿ ಚೀನಾ ಟಿಬೆಟ್‌ನ ಪ್ರತಿರೋಧ ಮುಗಿಸಿ ರಾಜ್ಯಧಾನಿ ʼಲಾಸಾ’ವರೆಗೂ ಬಂದಿತು. ದಲೈಲಾಮಾ ಮತ್ತು ಅವರ ಅನುಯಾಯಿಗಳು ತಲೆ ಮರೆಸಿಕೊಳ್ಳಲು ಭಾರತದ ಕಡೆಗೆ ಓಡಿಬಂದಾಗ ಭಾರತ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯ ನೀಡಿತು. ಕುಪಿತಗೊಂಡ ಚೀನಾ 1962ರಲ್ಲಿ ಯಾವ ಸೂಚನೆಯೂ ಇಲ್ಲದೆ ಭಾರತದ ಮೇಲೆ ದಾಳಿ ಮಾಡಿತು. ಪಶ್ಚಿಮದಲ್ಲಿ ಭಾರತದಿಂದ ವಶಪಡಿಸಿಕೊಂಡ ಪ್ರದೇಶವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಲೇ-ಲಡಾಕ್‌ನಲ್ಲಿ ವಶಪಡಿಸಿಕೊಂಡ ಪ್ರದೇಶವನ್ನು ತನ್ನ ವಶದಲ್ಲಿ ಇಟ್ಟುಕೊಂಡಿತು. ಚೀನಾ ಈಗ ಈ ಪ್ರದೇಶಗಳಲ್ಲಿ ರಸ್ತೆಗಳನ್ನು ಮಾಡುತ್ತ, ಟಿಬೆಟ್‌ನ ದೋಚೆಂಗ್ ಪ್ರದೇಶದಲ್ಲಿ ʼಯಾಡಿಂಗ್’ (4411 ಮೀ. ಎತ್ತರದಲ್ಲಿ) ವಿಮಾನ ನಿಲ್ದಾಣ ಸ್ಥಾಪಿಸಿದೆ.
20ನೇ ಶತಮಾನದ 50/60ರ ದಶಕಗಳಲ್ಲಿ ಚೀನಾ ಬಹಳ ಮುಂದಾಲೋಚನೆಯಿಂದಲೇ ಬ್ರಹ್ಮಪುತ್ರ ನದಿ ಪಾತ್ರದ ಜೊತೆಗೆ ಹಿಮಚ್ಛಾಧಿತ ʼಪ್ರಪಂಚ ಛಾವಣಿ’ ಟೆಬೆಟ್‌ನ್ನು ವಶಪಡಿಸಿಕೊಂಡಿದ್ದೇ ನೀರಿನ ದಾಹಕ್ಕಾಗಿ. ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬಿಟ್ಟರೆ ಹೆಚ್ಚು ಹಿಮ/ನೀರು ಹೆಪ್ಪುಕಟ್ಟಿಕೊಂಡಿರುವುದು ಇದೇ ಪ್ರದೇಶದಲ್ಲಿ. ಆಗ ಭಾರತಕ್ಕೆ ಚೀನಾ ರಾಜಕೀಯ ಏನೇನೂ ಅರ್ಥವಾಗಿರಲಿಲ್ಲ. ಟೆಬೆಟ್ ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದು, ತೀರಾ ಹಿಂದುಳಿದಿತ್ತು. ಬ್ರಹ್ಮಪುತ್ರ ಜೊತೆಗೆ ಹಲವು ದೊಡ್ಡ ನದಿಗಳು ಟಿಬೆಟ್‌ನಲ್ಲಿ ಹುಟ್ಟುವುದರ ಕಾರಣ, ಚೀನಾವು ಟಿಬೆಟ್‌ನ್ನು ಯಾವ ಅಡೆತಡೆಯೂ ಇಲ್ಲದೆ ಸುತ್ತುವರಿದು ಒಳಕ್ಕೆ ಸೇರಿಕೊಂಡುಬಿಟ್ಟಿತು. ಈಗ ಟಿಬೆಟ್ ಸಂರ್ಪೂವಾಗಿ ಚೀನಾ ದೇಶವಾಗಿ, ಬ್ರಹ್ಮಪುತ್ರ (ಟಿಬೆಟ್ ದೇಶದಲ್ಲೇ ಇರುವ) ಚೀನಾ ದೇಶದ ನದಿಯಾಗಿದೆ. ಭಾರತದಲ್ಲಿ ತಲೆ ಮರೆಸಿಕೊಂಡಿರುವ ಟಿಬೆಟ್‌ನ ಬೌದ್ಧಗುರು ದಲೈಲಾಮಾ ಈಗ ಟಿಬೆಟ್ ದೇಶವನ್ನು ನಮಗೆ ಕೊಡಿ ಎಂದು ಕೇಳದೆ, ʼನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ’ ಎಂದು ಚೀನಾ ದೇಶವನ್ನು ಕೇಳಿಕೊಳ್ಳುತ್ತಿದ್ದಾರೆ. ಚೀನಾ, ಟಿಬೆಟನ್ನು ಉತ್ತಮವಾಗಿ ಅಭಿವೃದ್ಧಿಪಡಿಸುತ್ತಿದೆ.
ಅಗಾಧ ದುಷ್ಪರಿಣಾಮ ಬೀರುವ ಚೀನಾದ ಮಹಾಯೋಜನೆಗಳು
ಟೆಬೆಟ್‌ನ ಕೈಲಾಸ-ಮಾನಸ ಸರೋವರದ ಆಗ್ನೇಯ ದಿಕ್ಕಿನಲ್ಲಿ ʼಯರ‍್ಲುಂಗ್ ಝಾಂಗ್ಪೋ’ ಅಥವಾ ʼಬ್ರಹ್ಮಪುತ್ರ’ ನದಿ ಛೆಮಿಯುಂಗ್ಡುಂಗ್ ಗ್ಲೇಸಿಯರ್‌ನಿಂದ ಉದ್ಭವಿಸುತ್ತದೆ. ಚೀನಾ ಬ್ರಹ್ಮಪತ್ರ ನದಿಯ ಮೇಲೆ ಹತ್ತಾರು ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ತನ್ನ ದೇಶದ ಕಡೆಗೆ ತಿರುಗಿಸುವ ಯೋಜನೆಗಳನ್ನು ಹೊಂದಿದ್ದು, ಅಗಾಧವಾದ ವಿದ್ಯುತ್ತನ್ನು ಈಗಾಗಲೇ ಉತ್ಪತ್ತಿಸಿ ಚೀನಾದ ಉತ್ತರ ರಾಜ್ಯಗಳು ಮತ್ತು ಟಿಬೆಟ್‌ನ ಮಧ್ಯ ಭಾಗಕ್ಕೆ ʼಪವರ್ ಗ್ರಿಡ್’ ಮೂಲಕ ಸರಬರಾಜು ಮಾಡುತ್ತಿದೆ. ಈ ಯೋಜನೆಗಳಿಂದ ಭಾರತ/ಬಾಂಗ್ಲಾ ದೇಶಗಳಿಗೆ ಏನೂ ತೊಂದರೆ ಇಲ್ಲ ಎಂದು ಚೀನಾ ಕಾಲಕಾಲಕ್ಕೆ ಹೇಳುತ್ತಾ ಬರುತ್ತಿದೆ. ವಿಪರ‍್ಯಾಸವೆಂದರೆ ನಮ್ಮ ರಾಜಕಾರಣಿಗಳು, ತಜ್ಞರು ಜನರಿಗೆ ಗೊಂದಲದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಕೆಲವರು ಚೀನಾ ಯೋಜನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸಬೇಕು ಎಂದರೆ, ಕೆಲವರು ಭಾರತಕ್ಕೆ ಏನೂ ತೊಂದರೆ ಇಲ್ಲ ಎನ್ನುತ್ತಾರೆ. ಚೀನಾ ಮಾತ್ರ ಯಾವುದಕ್ಕೂ ತಲೆ ಕೆಡಸಿಕೊಳ್ಳದೆ ದೊಡ್ಡದೊಡ್ಡ ಯೋಜನೆಗಳನ್ನು ಒಂದೊಂದಾಗಿ ಮುಗಿಸುತ್ತಲೇ ಬರುತ್ತಿದೆ. ಈ ಯೋಜನೆಗಳಲ್ಲಿ ಅಣೆಕಟ್ಟುಗಳು, ಜಲವಿದ್ಯುತ್ ಯೋಜನೆಗಳು, ಕಾಲುವೆಗಳು-ನೀರು ಸಂಪರ್ಕ, ಕೃಷಿ-ಮೀನುಗಾರಿಕೆಯೂ ಸೇರಿದೆ. ಬ್ರಹ್ಮಪುತ್ರ ನದಿಯ ಮೇಲೆ ಮುಂದಿನ ದಿನಗಳಲ್ಲಿ ಒಟ್ಟು 28 ಅಣೆಕಟ್ಟುಗಳು ಬರಲಿವೆ ಎನ್ನಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬ್ರಹ್ಮಪುತ್ರ ನದಿಯನ್ನು ʼಯಲ್ಲೋ'(ಹಳದಿ) ನದಿಗೆ ಜೋಡಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಚೀನಾ, ಬ್ರಹ್ಮಪುತ್ರ ನದಿಯ ಮೇಲೆ ಕಟ್ಟುವ ಅಣೆಕಟ್ಟುಗಳು/ಜಲವಿದ್ಯತ್ ಯೋಜನೆಗಳಿಂದ ದೇಶದ ಬಹಳಷ್ಟು ವಿದ್ಯುತ್ ಸಮಸ್ಯೆ ನೀಗುತ್ತದೆ ಎಂದು ನೇರವಾಗಿಯೇ ಹೇಳುವುದರ ಜೊತೆಗೆ ಅಣೆಕಟ್ಟುಗಳ ಕೆಳಗೆ ಮತ್ತು ಮೇಲಿನ ಹಂತಗಳಲ್ಲಿ ಯಾವುದೇ ತೊಂದರೆಯಾಗದಂತೆ ಈ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎನ್ನುತ್ತದೆ. ಮೇಲಿನವರಿಗೆ (ಚೀನಾಗೆ) ತೊಂದರೆ ಆಗದೇ ಇರಬಹುದು. ಆದರೆ ಕೆಳಗಿನವರಿಗೆ (ಭಾರತ/ಬಾಂಗ್ಲಾಗೆ) ತೊಂದರೆ ಆಗದೇ ಇರಲು ಹೇಗೆ ಸಾಧ್ಯ? ಆಶ್ಚರ್ಯವೆಂದರೆ ಚೀನಾ-ಭಾರತದ ನಡುವೆ ಯಾವುದೇ ಅಂತರರಾಷ್ಟ್ರೀಯ ನೀರು ಹಂಚಿಕೆಯ ಬಗ್ಗೆ ಗಂಭೀರವಾದ ಮಾತುಕತೆಗಳು ಇದುವರೆಗೂ ನಡೆದಿಲ್ಲ. ಭಾರತ ಆಗಾಗ ಅಲ್ಲಿ ಇಲ್ಲಿ ವಿರೋಧಿಸುವ ಹೇಳಿಕಗಳನ್ನು ಮಾತ್ರ ನೀಡುತ್ತಿದೆ. ಆದರೆ ಚೀನಾ, ಭಾರತದ ಮಾತುಗಳಿಗೆ ಎಂದಿನಂತೆಯೇ ಹಾರಿಕೆಯ ಉತ್ತರ ನೀಡುತ್ತಾ ಬಂದಿದೆ. 2000ರಲ್ಲಿ ಚೀನಾದಲ್ಲಿ ಭೂ ಕುಸಿತವಾದ ಕಾರಣ ಬ್ರಹ್ಮಪುತ್ರ ನದಿಯಲ್ಲಿ ನೀರು ಹರಿಯುವುದು ತಾತ್ಕಾಲಿಕವಾಗಿ ನಿಂತುಹೋಗಿತ್ತು. ಒಂದು ವಾರದ ಮೇಲೆ ಅಗಾಧ ಮಣ್ಣನ್ನು ನದಿ ಕೆಳಕ್ಕೆ ತಳ್ಳುತ್ತ ಒಮ್ಮಲೆ ಹರಿಯತೊಡಗಿತು. ಆಗ ಅಸ್ಸಾಂನಲ್ಲಿ ದಿಢೀರನೆ ಪ್ರವಾಹ ಉಕ್ಕಿ ಬಂದು ಹೇರಳ ಆಸ್ತಿಪಾಸ್ತಿ ಮತ್ತು ಪ್ರಾಣ ಹಾನಿ ಸಂಭವಿಸಿತು. ಅಸ್ಸಾಂ ನದಿ ಪಾತ್ರದಲ್ಲಿರುವ ಜನರು ಪದೇಪದೇ ಈ ರೀತಿಯ ತೊಂದರೆಗೆ ಸಿಲುಕಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ.
ಚೀನಾ, ಬ್ರಹ್ಮಪುತ್ರ ನದಿಯ ಉದ್ದಕ್ಕೂ ಕಟ್ಟಿರುವ ಮತ್ತು ಕಟ್ಟಲಿರುವ ಯೋಜನೆಗಳಿಂದ ನದಿ ಪಾತ್ರದಲ್ಲಿ ನೆಲೆಸಿರುವ ಸುಮಾರು 10 ಕೋಟಿ ಜನರ ಜೀವನಾಧಾರಕ್ಕೆ ತೊಂದರೆ ಬಂದಿರುವುದರ ಜೊತೆಗೆ ಪರಿಸರದ ಮೇಲೆ ಅಗಾಧವಾದ ದುಷ್ಪರಿಣಾಮಗಳು ಬೀಳುತ್ತವೆ. ಚೀನಾದಲ್ಲಿರುವ ಅಣೆಕಟ್ಟುಗಳು ದುರ್ಗಮ ಹಿಮಾಲಯದಲ್ಲಿದ್ದು ಅವು ಯಾರ ಕಣ್ಣಿಗೂ ಬೀಳದಂತಹ ಸ್ಥಳಗಳಲ್ಲಿ ಬಚ್ಚಿಟ್ಟುಕೊಂಡಿವೆ. ಅಂದರೆ ಚೀನಾ ಏನೇನು ಯೋಜನೆಗಳನ್ನು ಮಾಡಿದೆ ಎನ್ನುವುದನ್ನು ಸಂಪೂರ್ಣವಾಗಿ ಹೊರಗಿನ ಪ್ರಪಂಚಕ್ಕೆ ಬಿಟ್ಟುಕೊಟ್ಟಿಲ್ಲ ಎಂಬುದಾಗಿ ವಿದೇಶಿ ತಜ್ಞರು ಹೇಳುತ್ತಾರೆ. ಒಟ್ಟಿನಲ್ಲಿ ಈ ಬ್ರಹ್ಮಪುತ್ರ ನದಿಯ ಮೇಲಿರುವ ಅಣೆಕಟ್ಟುಗಳು ಮುಗಿಯದ ರಾಜಕೀಯ, ಅಭಿವೃದ್ಧಿ ಮತ್ತು ಪರಿಸರದ ಮೇಲಿನ ದುಷ್ಪರಿಣಾಮಗಳ ಗೊಂದಲದ ಗೂಡಾಗಿದೆ. ಮುಂದಿನ ದಿನಗಳಲ್ಲಿ ಬ್ರಹ್ಮಪುತ್ರಕ್ಕೆ ಸಂಬಂಧಪಟ್ಟ ಹಾಗೇ ಚೀನಾ-ಭಾರತಗಳ ನಡುವಿನ ಸಂಬಂಧ ಇನ್ನಷ್ಟು ಹದಗೆಡಬಹದು.
ಭಾರತದಿಂದ ಹರಿದುಹೋಗುವ ಗಂಗಾ ನದಿಯ ನೀರಿನಲ್ಲಿ ಹೇರಳ ರಸಗೊಬ್ಬರಗಳ ವಿಷ, ಕೈಗಾರಿಕಾ ತ್ಯಾಜ್ಯ, ರೋಗಕಾರಕ ಜೈವಿಕ ಮಾಲಿನ್ಯ ಬ್ರಹ್ಮಪುತ್ರ ಸೇರುವ ಕಾರಣ ಕೆಳಗಿನ ಬಾಂಗ್ಲಾ ದೇಶದ ಬಹಳಷ್ಟು ಜನಸಂಖ್ಯೆ ಭಾರತದ ಈಶಾನ್ಯ ಭಾಗಕ್ಕೆ ವಲಸೆ ಬಂದಿದೆ ಎನ್ನಲಾಗಿದೆ. ಅದೇ ರೀತಿ ಚೀನಾದಿಂದ ಹರಿದು ಬರುವ ಬ್ರಹ್ಮಪುತ್ರ ನದಿಯಲ್ಲಿನ ಮಾಲಿನ್ಯಕಾರಕ ದ್ರವ್ಯಗಳು ಭಾರತಕ್ಕೆ ಹರಿದುಬಂದರೆ, ಅಸ್ಸಾಂ ಟೀ ತೋಟಗಳು, ಬತ್ತದ ಗದ್ದೆಗಳು ಮತ್ತು ಮೀನಿನ ಸಂತಾನ ಸಂಪೂರ್ಣ ನಶಿಸಿ ಹೋಗಿ ಇಲ್ಲಿನ ಜನರು ಬೇರೆ ಪ್ರದೇಶಕ್ಕೆ ವಲಸೆ ಹೋಗಬೇಕಾಗಬಹುದು. ಚೀನಾ ಕಟ್ಟುತ್ತಿರುವ ದೈತ್ಯ ಅಣೆಕಟ್ಟುಗಳು ಭೂಕಂಪನಗಳಿಂದ (ಹಿಮಾಲಯ ಭೂಕಂಪಗಳ ತವರು) ಹೊಡೆದು ಹೋಗಿ ನೆರೆ ಬಂದರೆ ಈ ವಲಯ ಏನಾಗಬಹುದು?
ಚೀನಾ, ಬ್ರಹ್ಮಪುತ್ರ ನದಿಯ ಮೇಲೆ 2009ರಲ್ಲಿ ಪ್ರಾರಂಭಿಸಿದ ಝಂಗ್ಮು ಜಲವಿದ್ಯುತ್ ಅಣೆಕಟ್ಟೆಯನ್ನು 2014ರಲ್ಲಿ ಕಟ್ಟಿ ಮುಗಿಸಿತು. ಇದರ ಜೊತೆಗೆ ಇದೇ ಜಾಡಿನಲ್ಲಿರುವ 5 ಜಲ ವಿದ್ಯುತ್ ಅಣೆಕಟ್ಟುಗಳು ಶೀಘ್ರದಲ್ಲೇ ಮುಗಿಯಲಿವೆ (ಬಹುಶಃ ಈಗಾಗಲೇ ಮುಗಿದರಲೂಬಹುದು?). ಈ ಎಲ್ಲಾ ಯೋಜನೆಗಳಿಂದ ಒಟ್ಟು 2.5 ಬಿಲಿಯನ್ ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಝಂಗ್ಮು ಪ್ರಪಂಚದ ಅತಿ ಎತ್ತರದಲ್ಲಿರುವ ದೊಡ್ಡ ಅಣೆಕಟ್ಟಾಗಿದ್ದು ಇದಕ್ಕೆ ಉಪಯೋಗಿಸಿದ ಕಾಂಕ್ರೀಟ್ 3,400,000 ಚದರ ಘನ ಮೀಟರುಗಳು. ಅಣೆಕಟ್ಟಿನ ಎತ್ತರ 116 ಮೀ, ಉದ್ದ 389 ಮೀ. ಈ ಅಣೆಕಟ್ಟಿನ ನದಿಪಾತ್ರ 1,57,688 ಚ.ಕಿ.ಮೀ. ಝಂಗ್ಮುಗೆ ಖರ್ಚಾದ ಹಣ 1.5 ಬಿಲಿಯನ್ ಡಾಲರ್ (9764 ಸಾವಿರ ಕೋಟಿ).
ಚೀನಾ ಬಹಳಷ್ಟು ಮಾಹಿತಿಯನ್ನು ಹೊರಗಿನ ಪ್ರಪಂಚಕ್ಕೆ ನೀಡದೇ ಯಾವಾಗಲೂ ಗುಪ್ತವಾಗಿಯೇ ಇಡುತ್ತದೆ. 2010ರವರೆಗೂ ಈ ಯೋಜನೆ ಸಣ್ಣದು ಎಂದು ಹೇಳುತ್ತಲೇ ಬಂದಿತ್ತು. ಅನಂತರ ಈ ಯೋಜನೆಯಿಂದ ಭಾರತಕ್ಕೆ ಯಾವ ತೊಂದರೆಯೂ ಇಲ್ಲ ಎಂದಿತು. ಆದರೆ ಭಾರತ ಮಾತ್ರ ಯಾವ ರೀತಿಯ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಹಿಮಾಲಯದಲ್ಲಿ ನದಿಗಳು ಬಹಳ ಆಳದಲ್ಲಿ ಹರಿಯುವುದರಿಂದ ನೀರನ್ನು ಎಲ್ಲೆಂದರಲ್ಲಿ ಸಾಕಷ್ಟು ಸಂಗ್ರಹಿಸಿ ಇಡಬಹುದು. ನಮ್ಮ ತಜ್ಞರು ಕೆಲವರು ಹೇಳುವುದೆಂದರೆ, ಬ್ರಹ್ಮಪುತ್ರ ನದಿ ಸರಾಸರಿ 3,500 ಮೀ.ಗಳ ಎತ್ತರದಲ್ಲಿ ಹರಿದು ಬರುವುದರಿಂದ ಅದನ್ನು ಚೀನಾದ ಉತ್ತರ ಪ್ರಾಂತ್ಯಕ್ಕೆ ತಿರಿಗಿಸಲು ಕನಿಷ್ಟ 1000 ಮೀಟರುಗಳ ಎತ್ತರದ ಗೋಡೆಯನ್ನು ಕಟ್ಟಬೇಕು. ಅದು ಅಸಾಧ್ಯ. ಚೀನಾ ಹಾಗೇ ಯೋಚಿಸಿದರೂ ಅದಕ್ಕೆ ಅಷ್ಟೊಂದು ಹಣ ಎಲ್ಲಿಂದ ತರುತ್ತದೆ?
ಬ್ರಹ್ಮಪುತ್ರ ನದಿ ಚೀನಾದಿಂದ ಅರುಣಾಚಲದ ಒಳಕ್ಕೆ ಪ್ರವೇಶಿಸುವ ಮುನ್ನ ಒಂದು ದೊಡ್ಡ ಬೆಟ್ಟವನ್ನು ಸುತ್ತಿಕೊಂಡು 300 ಕಿ.ಮೀ. ಚಲಿಸುತ್ತದೆ. ಇದನ್ನು ಮಹಾ ತಿರುವು (ಗ್ರೇಟ್ ಬೆಂಡ್) ಎಂದು ಕರೆಯಲಾಗುತ್ತಿದ್ದು ಚೀನಾ ಈ ವಲಯದಲ್ಲಿ ದೊಡ್ಡದೊಡ್ಡ ಜಲವಿದ್ಯುತ್ ಯೋಜನೆಗಳನ್ನು ಹಾಕಿಕೊಂಡಿದೆ. ʼಲೀ ಲಿಂಗ್’ ಎಂಬ ಚೀನಾದ ಎಂಜಿನಿಯರ್ ಪ್ರಕಟಿಸಿರುವ ʼಟೆಬೆಟ್ ವಾಟರ್ ವಿಲ್ ಸೇವ್ ಚೀನಾ’ ಎಂಬ ಕೃತಿಯಲ್ಲಿ ಈ ಯೋಜನೆಗಳ ನೀಲಿನಕ್ಷೆ ದೊರಕುತ್ತದೆ. ಟಿಬೆಟ್‌ನಲ್ಲಿ ಉಗಮವಾಗುವ ʼಮೇಕಾಂಗ್’ ನದಿ ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್, ಕಾಂಬೋಡಿಯಾ, ವಿಯಟ್ನಾಂ ದೇಶಗಳ ಮೂಲಕ ಹಾದು ಹೋಗುತ್ತದೆ. ಮೇಕಾಂಗ್ ನದಿಯ ಮೇಲೆ ಚೀನಾ ಅಣೆಕಟ್ಟುಗಳ ಜಾಲವನ್ನೇ ಬಿಚ್ಚಿದಾಗ, ಕೆಳಗಿನ ದೇಶಗಳಿಗೆ ಹರಿದುಬರುತ್ತಿದ್ದ ನೀರು ನಿಂತೇಹೋಯಿತು. ಆ ದೇಶಗಳೆಲ್ಲ ಚೀನಾಗೆ ಛೀಮಾರಿ ಹಾಕಿದವೆ ಹೊರತು ಏನೂ ಮಾಡಲಾಗಲಿಲ್ಲ.
ಭಾರತ, ಅರುಣಾಚಲ ಪ್ರದೇಶದಲ್ಲಿ ಬ್ರಹ್ಮಪುತ್ರ (ಅರುಣಾಚಲ ಪ್ರದೇಶದಲ್ಲಿ ಸೀಯಾಂಗ್ ಎಂದು ಕರೆಲಾಗುತ್ತದೆ) ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲು 2007ರಲ್ಲಿಯೆ ಪ್ರಾರಂಭಿಸಿತು. ಭೂ ಕುಸಿತ ಇನ್ನಿತರೆ ಸಮಸ್ಯೆಗಳಿಂದ ಅದು ಕುಂಟುತ್ತಾ ಸಾಗುತ್ತಿದೆ. ಭಾರತದ ನದಿ ಜೋಡನೆ ಎಂಬ ಬೃಹತ್ ಯೋಜನೆ ಸ್ವಾತಂತ್ರ್ಯಪೂರ್ವ/ಸ್ವಾತತ್ರ್ಯದ ನಂತರವೂ ಕಡತಗಳಲ್ಲಿಯೇ ಹರಿದಾಡುತ್ತಿದೆ. ಈ ನಡುವೆ ನಮ್ಮ ದೇಶದಲ್ಲಿ 600 ದೊಡ್ಡ/ಸಣ್ಣ ಅಣೆಕಟ್ಟೆಗಳನ್ನು ಕಟ್ಟಿರುವುದು ಒಂದು ಸಮಾಧಾನದ ಸಂಗತಿ. ಇತ್ತೀಚೆಗೆ ಚಂದ್ರಬಾಬು ನಾಯ್ಡು ಅವರ ಪ್ರಯತ್ನದಿಂದ 174 ಕಿ.ಮೀ. ದೂರದ ಗೋದಾವರಿ-ಕೃಷ್ಣ ನದಿ ಜೋಡಣೆಯಾಗಿದೆ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳ ಮಧ್ಯದ ʼಕೆನ್-ಬೆಟ್ವಾ’ ನದಿ ಜೋಡನೆಯ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರಕಾರ 100 ಕೋಟಿ ಹಣ ಬಿಡುಗಡೆ ಮಾಡಿದೆ.
- ಮೇಲಿನ ಚಿತ್ರ: ಹಿಮಾಲಯ ಶ್ರೇಣಿಯಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಅಣೆಕಟ್ಟೆಯನ್ನು ಕೆಂಪು ವೃತ್ತದ್ಲಲಿ ತೋರಿಸಲಾಗಿದೆ.
ಡಾ.ಎಂ.ವೆಂಕಟಸ್ವಾಮಿ
- ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್‌ನವರು. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ʼಸುವರ್ಣ ಕಥನʼ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ʼಏಳು ಪರ್ವತಗಳು ಒಂದು ನದಿʼ, ʼಈಶಾನ್ಯ ಭಾರತದ ಆಧುನಿಕ ಕಥೆಗಳುʼ ಮತ್ತು ʼಈಶಾನ್ಯ ಭಾರತದ ಕವಿತೆಗಳುʼ ನವಕರ್ನಾಟಕ ಪ್ರಕಾಶನದಲ್ಲಿ ಪ್ರಕಟವಾಗಿವೆ. ಮುಖ್ಯವಾಗಿ ಬ್ರಹ್ಮಪುತ್ರ ನದಿಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದಾರೆ.