ಬೆಂಗಳೂರು: ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಬರುವ ಸಾಧ್ಯತೆ ಇದ್ದು, ಡಿಸೆಂಬರ್ 20ರಿಂದ ಜನವರಿ 2 ರವರೆಗೆ 15 ದಿನಗಳ ಕಾಲ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೋವಿಡ್ 2ನೇ ಅಲೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಚಿವರು ವಿಧಾನಸೌಧದಲ್ಲಿ ಮಹತ್ತ್ವದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ; ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳು ಚಳಿಗಾಲದ ಅವಧಿ. ಮುಂದಿನ 45 ದಿನ ವೈರಸ್ಸಿನದು ನಿರ್ಣಾಯಕ ಹಂತವಾಗಿದೆ. ಬೇರೆ ದೇಶಗಳಲ್ಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ 45ರಿಂದ 90 ದಿನದೊಳಗೆ ಎರಡನೇ ಅಲೆ ಬರುತ್ತದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲೂ ಕೋವಿಡ್ 2ನೇ ಅಲೆ ಬರುವ ಸಾಧ್ಯತೆ ಇದೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಈ ಕುರಿತು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಈ 15 ದಿನಗಳ ಅವಧಿಯಲ್ಲಿ ಸಭೆ, ಸಮಾರಂಭಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು. ಮದುವೆ ಸಮಾರಂಭಕ್ಕೆ 100, ರಾಜಕೀಯ ಹಾಗೂ ಧಾರ್ಮಿಕ ಸಮಾರಂಭಕ್ಕೆ 200, ಅಂತ್ಯಕ್ರಿಯೆಯಲ್ಲಿ 50ಕ್ಕಿಂತ ಹೆಚ್ಚು ಜನರ ಸೇರುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಈ ನಿಯಮದೊಂದಿಗೆ ಮಾಸ್ಕ್ ಧರಿಸುವ, ಭೌತಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಖ್ಯವಾಗಿ ಜನರು ಗುಂಪುಗೂಡುವುದನ್ನು ನಿಯಂತ್ರಣಕ್ಕೆ ತರಬೇಕಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹೆಚ್ಚಿನ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊಸ ವರ್ಷಾಚರಣೆ ಅರ್ಥಹೀನ
ಹೊಸ ವರ್ಷ ಭಾರತೀಯರಿಗೆ ಹಬ್ಬವಲ್ಲ. ಜನರು ಪ್ರಾಣ ಕಳೆದುಕೊಂಡಿದ್ದಾರೆ, ಉದ್ಯೋಗ ನಷ್ಟವಾಗಿದೆ, ಆರ್ಥಿಕ ಅಸ್ಥಿರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಮಾಡುವುದು ಅರ್ಥಹೀನ. ಜನರು ಜವಾಬ್ದಾರಿಯುತರಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಸದಾ ಸಿದ್ಧ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸುವಂತೆ ತಿಳಿಸಲಾಗಿದೆ. ಫೆಬ್ರವರಿ ಅಂತ್ಯದವರೆಗೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸಬೇಕು. ನಿತ್ಯ 1 ಲಕ್ಷ ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಇನ್ನು, ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 3ನೇ ವಾರ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
LEAD PHOTO BY Anna Tarazevich FROM Pexels