news & views
ಶಾಪಗ್ರಸ್ತ ಕಾಂಗ್ರೆಸ್ ಪಕ್ಷದ ಪತನಪರ್ವ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಷನ್ (GHMC) ಚುನಾವಣೆಯಲ್ಲೂ ಮುಂದಕ್ಕೆ ಅವಿಚ್ಛಿನ್ನವಾಗಿ ಸಾಗುತ್ತಿದೆ. ಇನ್ನು, ಆ ಪಕ್ಷಕ್ಕೆ ಹೊಟ್ಟೆ ಉರಿಯುವ ವಿಷಯವೆಂದರೆ; ತೆಲಂಗಾಣ ರಾಷ್ಟ್ರಸಮಿತಿ (ಟಿಆರ್‌ಎಸ್) ಹಾಗೂ ಎಐಎಂಐಎಂ ಉಕ್ಕಿನ ಕೋಟೆಯನ್ನು ಬಿಜೆಪಿ ಅಲುಗಾಡಿಸಿದೆ.
ಹೈದರಾಬಾದ್ ಓಲ್ಡ್‌ಸಿಟಿಯಲ್ಲಿರುವ ಚಾರ್‌ಮಿನಾರ್. / courtesy: Wikipedia
ಹೈದರಾಬಾದ್ ಮುನಿಸಿಪಾಲಿಟಿಯಲ್ಲಿ ಲೆಕ್ಕ ತೆಗೆಯುವುದು ಬಿಜೆಪಿಗೆ ಸಾಧ್ಯವೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಮುಸ್ಲಿಮ್ ಬಾಹುಳ್ಯದ ಓಲ್ಡ್‌ಸಿಟಿಯನ್ನು, ಟಿಆರ್‌ಎಸ್ ತೆಕ್ಕೆಯಲ್ಲಿದ್ದ ಸ್ಟ್ರಾಂಗ್ ಡಿವಿಜನ್‌ಗಳನ್ನು ಗೆಲ್ಲುವುದು ಅಸಾಧ್ಯ ಎಂದು ತೆಲಂಗಾಣ, ಆಂಧ್ರ ಪ್ರದೇಶದ ಮಾಧ್ಯಮಗಳು ಗಂಟೆ ಹೊಡೆದು ಭವಿಷ್ಯ ಹೇಳಿದ್ದವು.
2016ರ ಮಾತು. ಕೇಂದ್ರದ ಈಗಿನ ಈಗಿನ ಸಹಾಯಕ ಗೃಹಮಂತ್ರಿ ಕಿಶನ್ ರೆಡ್ಡಿ ಅವರ ಮಾತನ್ನು ಧಿಕ್ಕಸಿ ಚಂದ್ರಬಾಬು ನಾಯ್ಡುಗೆ ಆಪ್ತರಾಗಿದ್ದ ನಾಯಕರೊಬ್ಬರ ಮಾತು ಕೇಳಿ ತೆಲುಗುದೇಶಂ ಜತೆ ಮೈತ್ರಿ ಮಾಡಿಕೊಂಡು, ಅದೇ ಪಕ್ಷದ ಜತೆ ಮುಳುಗಿದ್ದ ಬಿಜೆಪಿ, ನಾಲ್ಕೇ ವರ್ಷಗಳಲ್ಲಿ ಪುಟಿದೆದ್ದಿದೆ. ಹಿಂದಿನ ಚುನಾವಣೆಯಲ್ಲಿ ಕೇವಲ ಮೂರು ಸೀಟು ಗೆದ್ದು ಆಘಾತಕ್ಕೀಡಾಗಿದ್ದ ಆ ಪಕ್ಷವು 2020ರ ಚುನಾವಣೆಯಲ್ಲಿ 49 ಕಡೆ ವಿಜಯದ ಕೇಕೆ ಹಾಕಿದೆ. ನೂರು ಸೀಟಿಗೂ ಹೆಚ್ಚು ಗೆದ್ದು ಮತ್ತೆ ಸಿಂಗಲ್ಲಾಗಿ ಹೈದರಾಬಾದ್ ಗದ್ದುಗೆಯಲ್ಲಿ ಕೂತು ಮೀಸೆ ತಿರುವಲು ಹೊರಟಿದ್ದ ತೆಲಂಗಾಣ ಆಡಳಿತಾರೂಢ ಕೆ.ಚಂದ್ರಶೇಖರ ರಾವ್ ಸರಕಾರವನ್ನು ಬೆಚ್ಚಿಬೀಳುವಂತೆ ಮಾಡಿದೆ.
ಹಾಗೆ ನೋಡಿದರೆ; ʼಅಮಿತʼ ಚಾಣಾಕ್ಷತೆಯಿಂದ ರಂಗಕ್ಕೆ ಧುಮುಕಿದ್ದ ಬಿಜೆಪಿ, ಒಂಟಿಯಾಗಿ ಮೆಜಾರಿಟಿ ಸಾಧಿಸುವುದು ಕಷ್ಟ ಎಂಬ ಸತ್ಯವನ್ನು ಅರಿತುಕೊಂಡಿತ್ತು. ತಾನು ಯಾವ ನಂಬರ್‌ಗೆ ರೀಚ್ ಆಗಬಹುದು ಎಂಬುದನ್ನೂ ಗ್ರಹಿಸಿತ್ತು. ಐವತ್ತಕ್ಕೆ ಒಂದು ಸೀಟು ಕಮ್ಮಿ ಬಿದ್ದರೂ ಕಮಲದ ಸಾಧನೆ ಕಮ್ಮಿಯೇನಲ್ಲ. ಆದರೆ, ಒಂದೇ ಕಲ್ಲಿನಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಎರಡು ಪ್ರಬಲ ಹಕ್ಕಿಗಳನ್ನು ಹೊಡೆದಿದೆ. ಹೈದರಾಬಾದ್ ನಮ್ಮಪ್ಪನ ಜಹಗೀರು ಎಂಬಂತೆ ಮಾತನಾಡುತ್ತಿದ್ದ ಮಜ್ಲೀಸ್ ಮುಖಂಡರಿಗೆ ಮರ್ಮಾಘಾತ ನೀಡಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಮನೆಯ ಫ್ಯಾಮಿಲಿ ಪಾಲಿಟಿಕ್ಸ್‌ನ್ನು ಪತರುಗುಟ್ಟುವಂತೆ ಮಾಡಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಇದು ಖಂಡಿತಾ ದಿಕ್ಸೂಚಿ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಕೆ.ಚಂದ್ರಶೇಖರ ರಾವ್, ಕೆಟಿಆರ್ / courtesy: Wikipedia
ಟಿಆರ್‌ಎಸ್ 55 ಕಡೆ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ನಿಜ. ಆದರೆ, ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅಧಿಕಾರ ಬೇಕಿದ್ದರೆ 44 ಸೀಟು ಗೆದ್ದಿರುವ ಎಐಎಂಐಎಂ (ಕಳೆದ ಚುನಾವಣೆಯಲ್ಲಿ ಇದು 44 ಸ್ಥಾನಗಳನ್ನೇ ಗೆದ್ದಿತ್ತು) ಎಐಎಂಐಎಂ ಮರ್ಜಿಗೆ ಹೋಗಲೇಬೇಕು. ಎಐಎಂಐಎಂ ನಾಯಕರಿಗೂ ಈಗ ಟಿಆರ್‌ಎಸ್ ಬಿಟ್ಟರೆ ಗತಿ ಇಲ್ಲ. ಇನ್ನು, ಈ ಎರಡೂ ಪಕ್ಷಗಳು ಬಿಜೆಪಿ ಸೇರುವ ಸಾಧ್ಯತೆ ಇಲ್ಲವೇಇಲ್ಲ. ಕಾಂಗ್ರೆಸ್ 2 ಕಡೆ ಗೆದ್ದಿದ್ದರೂ, ಅದಕ್ಕೆ ಅಧಿಕಾರ ಹಿಡಿದವರ ಹಿಂಬಾಗಿಲಿನಲ್ಲಿ ಕಾವಲು ತಪ್ಪಿದ್ದಲ್ಲ. ಇನ್ನು ಕಳೆದ ಚುನಾವಣೆಯಲ್ಲಿ ಒಂದು ಸೀಟು ಗೆದ್ದುಕೊಂಡು ತೆಲಂಗಾಣದಲ್ಲಿ ಕೊನೆಯುಸಿರೆಳೆಯುತ್ತಿದ್ದ ತೆಲುಗುದೇಶಂ ಈ ಸಲ ಸಂಪೂರ್ಣ ನಿರ್ನಾಮವಾಗಿದೆ.
ಬಿಜೆಪಿ ರೈಸಿಂಗ್ ಕಥೆ ರೋಚಕ
ಸಿಕೆನ್ಯೂಸ್ ನೌಗೆ ಸಿಕ್ಕಿದ ಮಾಹಿತಿ ಹಾಗೂ ಹೈದರಾಬಾದ್‌ನ ಕೆಲ ಸುದ್ದಿಮೂಲಗಳ ಪ್ರಕಾರ ಬಿಜೆಪಿಗೆ 30 ಸೀಟು ದಾಟುವುದು ಕಷ್ಟವಿತ್ತು. ನಿತ್ಯವೂ ಏರುತ್ತಿದ್ದ ತೈಲಬೆಲೆ, ಕೃಷಿ ಮಸೂದೆಗಳ ಗಲಾಟೆ, ಟಿಆರ್‌ಎಸ್ ಜತೆ ತಿಕ್ಕಾಟ, ಕೋವಿಡ್ ಸಿಟ್ಟು; ಹೀಗೆ ಹಲ ಕಾರಣಗಳಿಂದ ಮೋದಿ ಸರಕಾರದ ಬಗ್ಗೆ ತುಸು ಅಸಹನೆ ಇತ್ತು. ಇದೆಲ್ಲ ಬಿಜೆಪಿ ನಾಯಕರು ರಂಜನೀಯವಾಗಿ ಹೇಳುವಂತೆ ಒತ್ತಿ ಹೇಳುವುದು ಅನ್ಯರಿಗೆ ಆಗಲಿಲ್ಲ. ಸಾಲದೆಂಬಂತೆ; ಕೆಲ ದಿನಗಳ ಹಿಂದೆ ಬಂದಿದ್ದ ಪ್ರವಾಹ, ತೆಲಂಗಾಣ ಸರಕಾರದ ಕಳಪೆ ನಿರ್ವಹಣೆ, ಕೆಸಿಆರ್ ಫ್ಯಾಮಿಲಿ ಪಾಲಿಟಿಕ್ಸ್ (ಅಪ್ಪ; ಚಂದ್ರಶೇಖರ ರಾವ್ ಮುಖ್ಯಮಂತ್ರಿ, ಮಗ ಕೆಟಿಆರ್ ಹಾಗೂ ಅಳಿಯ ಹರೀಶ್ ರಾವ್ ಸಚಿವರು, ಮಗಳು ಕವಿತಾ ಸಂಸದೆ. ಮೇಲೆ ಕಾಣೋರು ಇಷ್ಟು. ಉಳಿದವರು ಎಷ್ಟೋ ಗೊತ್ತಿಲ್ಲ.) ಟಿಆರ್‌ಎಸ್‌ಗೆ ಗ್ರೇಟರ್ ಹೈದರಾಬಾದ್ ಕೈತಪ್ಪುವಂತೆ ಮಾಡಿದೆ.
ಇನ್ನು; ಅಮಿತ್ ಶಾ ಮಾಡಿದ ಫರ್ಪೆಕ್ಟ್ ಪ್ಲಾನಿಂಗ್. ಒಂದು ನಗರಕ್ಕೆ ಮೀಸಲಾದ ಚುನಾವಣೆಯೊಂದಕ್ಕೆ ಕೇಂದ್ರದ ಗೃಹ ಸಚಿವರು ಸ್ಟ್ರ್ಯಾಟಜಿ ಮಾಡೋದು ಎಂದರೆ ಅಸಾಮಾನ್ಯ ಸಂಗತಿಯೇ ಸರಿ. ಅವರಿಗೆ ಕಳೆದ ಚುನಾವಣೆಯಲ್ಲಿ 44 ಸೀಟು ಗೆದ್ದಿದ್ದ ಮಜ್ಲೀಸ್ ಕೋಟೆಯನ್ನು ಬೇಧಿಸುವುದು ಗುರಿಯಾಗಿತ್ತು. ಅದೇ ರೀತಿ; ಮೋದಿ ಸರಕಾರಕ್ಕೆ ಕೆಲ ಸಮಯಗಳಲ್ಲಿ ಸವಾಲಾಗಿಬಿಡುತ್ತಿದ್ದ ಕೆಸಿಆರ್ ಅವರನ್ನು ತಡೆಯುವುದು ಇನ್ನೊಂದು ಟಾರ್ಗೆಟ್. ಎರಡನೆಯದನ್ನೇನೋ ಬಿಜೆಪಿ ಮಾಡಿ ಯಶಸ್ವಿಯಾಯಿತು. ಆದರೆ, ಮಜ್ಲೀಸ್‌ಗೆ ಏನೂ ಮಾಡಲಾಗಲಿಲ್ಲ. ತನ್ನ ಮತಬ್ಯಾಂಕ್ ಅನ್ನು ಅದು ಭದ್ರವಾಗಿರಿಸಿಕೊಳ್ಳುವಲ್ಲಿ ಸಕ್ಸಸ್ ಆಯಿತು ಮಾತ್ರವಲ್ಲ, ತನ್ನ ಕೋಟೆಯಲ್ಲಿ ಕಮಲ ಅರಳದಂತೆ ನೋಡಿಕೊಂಡಿತು. ಹೈದರಾಬಾದ್ ಓಲ್ಡ್‌ಸಿಟಿ ಪಾಲಿಟಿಕ್ಸ್ ಅಮಿತ್ ಶಾ ಅಂಕೆಗೂ ಸಿಗಲಿಲ್ಲ. ಹೀಗಾಗಿ 49 ಸೀಟು ಗೆದ್ದುಬೀಗಿದ ಬಿಜೆಪಿ ಹಳೆಯ ಹೈದರಾಬಾದ್ ಮತ್ತು ಚಾರ್ ಮಿನಾರ್ ಸುತ್ತ ಚಮಕ್ ಮಾಡಲಾಗಲಿಲ್ಲ.
ಬಂಡಿ ಸಂಜಯ್, ಕಿಶನ್ ರೆಡ್ಡಿ
ಇದೇನೇ ಆದರೂ ಟಿಆರ್‌ಎಸ್‌ಗೆ ಬಿಜೆಪಿ ದೊಡ್ಡ ಆಘಾತವನ್ನೇ ಕೊಟ್ಟಿತು ಎಂಬುದರಲ್ಲಿ ಎರಡು ಮಾತಿಲ್ಲ. ಬಹುತೇಕ ಕಡೆ, ಅಂದರೆ; ಟಿಆರ್‌ಎಸ್ ಗೆಲ್ಲುವ ಕಡೆಯಲ್ಲೆಲ್ಲ ಕಮಲ ಅರಳಿದೆ. ತೆಲುಗು ದೇಶಂ ಪಕ್ಷದ ಕಾರ್ಯಕರ್ತರೆಲ್ಲ ಕೇಸರಿ ಶಾಲು ಹೊದ್ದುಕೊಂಡ ಪರಿಣಾಮ, ಕಮಲದ ಬಲ ಕೊಂಚ ಹೆಚ್ಚಿತು. ಜತೆಗೆ, ಮೋದಿ ಪ್ರಭಾವ. ಯುವ ಮತದಾರರು, ಅದರಲ್ಲೂ ಪ್ರಥಮ ವೋಟ್ ಮಾಡಿದ ಯುವಜನರೆಲ್ಲ ಬಿಜೆಪಿಗೇ ಜೈ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಮೋದಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿ ಮೊದಲೇ ಸ್ಪರ್ಧಾಕಣ ತೊರೆದು ಶಸ್ತ್ರತ್ಯಾಗ ಮಾಡಿತು. ಹೀಗಾಗಿ ಮೆಗಾ ಫ್ಯಾಮಿಲಿ (ಚಿರಂಜೀವಿ) ಹೀರೋಗಳ ಅಭಿಮಾನಿಗಳಲ್ಲಿ ಬಹುತೇಕರು ಕಮಲಕ್ಕೆ ಮತ ಹಾಕಿದ್ದಾರೆ. ಇದಕ್ಕೆ ಪೂರಕವಾಗಿ ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಅವರ ಹಗಲಿರುಳ ಶ್ರಮ. ಟಿಆರ್‌ಎಸ್ ಫ್ಯಾಮಿಲಿ ಪಾಲಿಟಿಕ್ಸ್ ಅನ್ನು ಬಲವಾಗಿ ಎದುರಿಸಿ ನಿಂತವರು ಇವರೊಬ್ಬರೇ. ಕಾರ್ಯಕರ್ತರ ಉಮೇದು ಹೆಚ್ಚಲು ಕಾರಣವಾಗಿದ್ದು ಅವರ ನಾಯಕತ್ವದ ಪವರ್.
ಇಷ್ಟೆಲ್ಲ ಪೂರಕ ಅಂಶಗಳ ನಡುವೆ; ಕಾಂಗ್ರೆಸ್ ವೀಕ್‌ನೆಸ್ ಬಿಜೆಪಿ ಪಾಲಿಗೆ ಮತಗಳ ಅಕ್ಷಯ ಪಾತ್ರೆ ಆಯಿತೆನ್ನಬಹದು. ಅದು ಹೇಗಾಯಿತು ಎಂದರೆ; ಟಿಆರ್‌ಎಸ್ ಗೆಲ್ಲುತ್ತದೆ ಎನ್ನುವಂತಿದ್ದ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಗುಳೆ ಹೋದರು ಅಥವಾ ಮತ ಹಾಕಿದರು. ಅವರಿಗೆಲ್ಲ ಕಾಂಗ್ರೆಸ್ ಗೆಲ್ಲುವುದಕ್ಕಿಂತ ಟಿಆರ್‌ಎಸ್ ಸೋಲುವುದು ಮುಖ್ಯವಾಗಿತ್ತು. ಬಿಜೆಪಿ ಬಲಕೊಟ್ಟ ಫ್ಯಾಕ್ಟರ್ ಇದು.
ಇಷ್ಟೆಲ್ಲ ಅನುಕೂಲಕರ ಅಂಶಗಳನ್ನು ಮುಂದಕ್ಕೆ ತೆಗೆದುಕೊಂಡು ಹೋದವರು ಬಿಜೆಪಿಯ ಅತಿರಥಮಹಾರಥರು. ಅಮಿತ್ ಶಾ, ಯೋಗಿ ಆದಿತ್ಯನಾಥ್, ಪ್ರಕಾಶ್ ಜಾವ್ದೇಕರ್, ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡ್ನವೀಸ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಮುಂತಾದವರು ಕಮಲದ ಪ್ರಚಾರಕ್ಕೆ ಬಾಹುಬಲ ತುಂಬಿದರು. ಇವರಿಗೆ, ಸಮರ್ಥವಾಗಿ ಸಾಥ್ ಕೊಟ್ಟವರು ರಾಜ್ಯ ನಾಯಕರಾದ ಕಿಶನ್ ರೆಡ್ಡಿ, ಬಂಡಿ ಸಂಜಯ್, ಕೆ.ಲಕ್ಷ್ಮಣ್ ಇತರರು. ಇವೆಲ್ಲರ ಐಡಿಯಾ, ರೋಡ್ ಶೋಗಳು ಮತ್ತು ರಾಷ್ಟ್ರ ನಾಯಕರ ಭರ್ಜರಿ ಭಾಷಣಗಳು ಬಿಜೆಪಿಯನ್ನು ಆಫ್ ಸೆಂಚುರಿ ಹತ್ತಿರಕ್ಕೆ ತಂದು ನಿಲ್ಲಿದವು ಎನ್ನಲೇಬೇಕು.
ಫೈನಲ್ ರಿಸಲ್ಟ್ ಇಷ್ಟೇ; ಗ್ರೇಟರ್ ಹೈದರಾಬಾದ್‌ನಲ್ಲಿ ನಿಜವಾಗಿಯೂ ಗೆದ್ದಿದ್ದು ಬಿಜೆಪಿಯೇ. ಸೋತಿದ್ದು ಮಾತ್ರ ಟಿಆರ್‌ಎಸ್. ಎಐಎಂಐಎಂ ನಾಯಕರಿಗೆ ಫೀವರ್ ಬಂದಿರಲಿಕ್ಕೂ ಸಾಕು. ಈಗ ಅಧಿಕಾರ ಸಿಗದೇ ಇರಬಹುದು. 2025ರಲ್ಲಿ ನಡೆಯುವ ಗ್ರೇಟರ್ ಚುನಾವಣೆಯಲ್ಲಿ ಕಮಲವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಹಾಗೆಯೇ; 2023ರಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಇದು ಜಸ್ಟ್ ಬಿಗಿನಿಂಗ್ ಮಾತ್ರ.